ಮುನ್ನುಲುಹು
‘ನಾನು ಬರೆದದ್ದು ಕವನಗಳಲ್ಲ. ಪದ್ಯವೂ ಅಲ್ಲ. ಅದು ಛಂದೋಬದ್ಧವಾಗಿಲ್ಲ. ಆದ್ದರಿಂದ ಇವುಗಳನ್ನು ಕವಿತೆಗಳೆಂದು ನಾನು ಸಮರ್ಥಿಸುವುದೂ ಇಲ್ಲ. ನಾನು ಕವಿತೆಗಳೂ ಅಂತ ಬರೆಯುವ ಕಾಲಘಟ್ಟದಲ್ಲಿ ಯಾವ ಕಾವ್ಯಕರ್ಮಸಿದ್ಧಾಂತ ಚಾಲ್ತಿಯಲ್ಲಿತ್ತೋ ಅದರಲ್ಲೇ ಅಷ್ಟಿಷ್ಟು ಗೀಚುತ್ತಿದ್ದವಳು ನಾನು. ಹಾಗೆ ಬರೆಯುವುದೇ ರೂಢಿಯಾಗಿದೆ. ಭಾವಲಹರಿ ಬಂದಾಗ ಬರೆದ ಕೆಲವು ಕೃತಿಪುಷ್ಪಗಳು ಇವು. ಇದರ ಸಂಕಲನಕ್ಕೆ ನೀವು ಮುನ್ನುಡಿ ಬರೆದುಕೊಡಬೇಕು ಅಂತ ನನ್ನ ಅಪೇಕ್ಷೆ. ಕವಿತೆ ಎಂಬುದರ ಸ್ವರೂಪದ ಕುರಿತು ನಿಮಗಿರುವ ಗಚ್ಚುನಿಲುವನ್ನು ತಿಳಿದೂ ಈ ಕೋರಿಕೆಯನ್ನು ಮುಂದಿಡುತ್ತಿದ್ದೇನೆ’. ವೀಣಾ ಫೋನಿನಲ್ಲಿ ಪ್ರತಿವಚನದ ಜರೂರತ್ತಿಲ್ಲವೆಂಬ ಸ್ಪಷ್ಟಧ್ವನಿಯಲ್ಲಿ ಆಗ್ರಹಿಸಿದಾಗ, ಕಾವ್ಯಕ್ಷೇತ್ರದಲ್ಲಿ ನನ್ನ ಮಿತಿಯನ್ನು ಅರಿತೂ ’ಹೂಞ’ ಅಂದೆ.
ಭಾವದ ಅಭಿವ್ಯಕ್ತಿಗೆ ನಮ್ಮ ಪರಂಪರೆ ಹತ್ತಾರು ದಾರಿಗಳನ್ನು ಕಂಡುಕೊಂಡಿದೆ. ಕಲೆ ಮತ್ತು ಸಾಹಿತ್ಯವು ಇದಕ್ಕೆ ಮಾಧ್ಯಮವಾಗಿದೆ. ಸಂಗೀತ ನಾಟ್ಯ ಚಿತ್ರ ಪದ್ಯ ಗದ್ಯ ನಾಟಕ ಪ್ರಬಂಧಾದಿ ಹಲವು ಟಿಸಿಲುಗಳಿದ್ದಾವೆ. ಅವರವರ ಅಭಿರುಚಿ ಅಭಿನಿವೇಶದನುಸಾರ ಅನಿಸಿಕೆಯ ಕವಾಟೋದ್ಘಾಟನ ಮಾಡುತ್ತಾರೆ, ಅವರಿಗೊಪ್ಪುವ ಮಾಧ್ಯಮದಲ್ಲಿ. ಇಂತಹ ಮಾಧ್ಯಮಗಳಲ್ಲಿ ಪರಸ್ಪರ ಸಂಘರ್ಷ ಬರದಿರಲೆಂದು ಒಂದೊಂದರ ರೂಪಾಕೃತಿಗಳಿಗೆ ಲಕ್ಷಣಗಳನ್ನೂ ವಿಧಿಸಿದ್ದಾರೆ ಪೂರ್ವಸೂರಿಗಳು. ಈ ಲಕ್ಷಣಾವಿಧಾನದಿಂದಾಗಿ ಕೃತಿಯು ಯಾವ ವರ್ಗಕ್ಕೆ ಸೇರುತ್ತದೆಂಬುದನ್ನು ಸುಲಭದಲ್ಲಿ ನಿರ್ಧರಿಸಬಹುದಾಗುತ್ತದೆ. ಹಾಗೂ ಅದರ ಆಸ್ವಾದನೆಗೆ ತೊಡಗುವ ಸಹೃದಯನು, ತನ್ನನ್ನು ಆಯಾ ಕೃತಿಲಕ್ಷಣಕ್ಕೊಪ್ಪುವಂತೆ ತನ್ನನ್ನು ಶ್ರುತಿಗೊಳಿಸಿಕೊಳ್ಳಬಹುದಾಗುತ್ತದೆ. ಹಾಗಾಗಿ ’ಇದು ಪದ್ಯ’ ’ಇದು ಗದ್ಯ’ ಅಂತ ಮೊದಲೇ ಪ್ರಕಟಿಸುವುದಾಗುತ್ತದೆ. ಇಂತಹ ವರ್ಗೀಕರಣವನ್ನು ಅಂಗೀಕರಿಸಿದಾಗಲೇ ಹೌದು-ಅಲ್ಲಗಳ ಕೋಲಾಹಲ ಶುರುವಾಗೋದು. ಲಯಬದ್ಧವಾದ ಗತಿಯ ಗೇಯಗುಣವುಳ್ಳ ರಚನೆಗಳು ಕವಿತೆಗಳೆಂಬುದು ಪಾರಂಪರಿಕಮಾರ್ಗ. ಅದಲ್ಲದ್ದು ಗದ್ಯ. ಅದು ಕಾವ್ಯ ಹೌದೋ ಅಲ್ಲವೋ ಎಂಬ ಗೊಂದಲ ಸಂಸ್ಕೃತಸಾಹಿತ್ಯದಲ್ಲಿ ಇಲ್ಲವೇ ಇಲ್ಲ. ಯಾಕೆಂದರೆ, ಸಂಸ್ಕೃತಕ್ಷೇತ್ರದಲ್ಲಿ ಅಕ್ಷರವಾಙ್ಮಯವನ್ನು ’ಕಾವ್ಯ’ ಎಂಬ ಟಂಕನದಿಂದಲೇ ಗುರುತಿಸುತ್ತಾರೆ. ಅದರ ರಚಯಿತರೆಲ್ಲರೂ ಕವಿಗಳೇ. ಗೊಂದಲವೇ ಇಲ್ಲ. ಗದ್ಯಂ ಕವೀನಾಂ ನಿಕಷಂ ವದಂತಿ. ಕಾವ್ಯೇಷು ನಾಟಕಂ ರಮ್ಯಂ. ರಸಾತ್ಮಕಂ ಕಾವ್ಯಂ. ಈ ಹಿನ್ನೆಲೆಯಲ್ಲಿ ವೀಣಾ ಬನ್ನಂಜೆಯವರ ರಚನೆಗಳನ್ನು ಕಾವ್ಯ ಎನ್ನಲು ನನ್ನ ತಕರಾರಿಲ್ಲ. ಛಾಂದಸವಾಗಿಲ್ಲ ಎನ್ನಬಹುದಷ್ಟೇ ಹೊರತು ಕಾವ್ಯವಲ್ಲವೆನ್ನುವಂತಿಲ್ಲ. ಇನ್ನೂ ಸಮರ್ಥನೆ ಬೇಕೆಂದರೆ, ಇದು ಚಂಪೂಕಾವ್ಯ ಎನ್ನೋಣ. ಗದ್ಯಪದ್ಯಾತ್ಮಕವಾದುದು ಚಂಪೂ ತಾನೆ! ಪ್ರಸ್ತುತ ಸಂಕಲನದಲ್ಲಿ ಶುದ್ಧಮಾತ್ರಾಗತಿಯ ಪದ್ಯವೂ ಇದೆಯಾದ್ದರಿಂದ ಇದು ಚಂಪೂಕಾವ್ಯದ ತೆಕ್ಕೆಗೆ ಧಾರಾಳ ಒಗ್ಗುತ್ತದೆ.
ವೀಣಾ ಬನ್ನಂಜೆಯವರ ಲಿವಿಂಗ್ ಟುಗೆದರ್ ಎಂಬ ಈ ಕಾವ್ಯಸಂಕಲನದಲ್ಲಿ ಆದ್ಯಂತವಾಗಿ ಕಾಣುವುದು ಅಂತರ್ಮುಖತೆ. ಹೃದಯಗಹ್ವರದೊಳಗೆ ನಿರಂತರ ನಡೆಯುವ ಸದ್ದಿಲ್ಲದ ಬಡಾಖ್ಯಾಲಿನ ಕಚೇರಿ. ಅವ್ಯಕ್ತದೊಂದಿಗೆ ಮೇಳಗೊಳ್ಳುವ ವ್ಯಕ್ತಮಧ್ಯದ ಹೊಯ್ದಾಟಗಳು. ಬೆನ್ನಿಗಂಟಿದ ಭೂತದ ಸಂವೇದನೆಯಲ್ಲಿ ವರ್ತಮಾನದ ವೇದನೆಯನ್ನು ಪುಟಕ್ಕಿಟ್ಟು ಭಾವ್ಯದ ನಿರ್ವೇದವನ್ನು ಮರ್ಮರಿಸುವ ಪ್ರಪತ್ತಿಶೀಲತೆಯು ಹೆಚ್ಚಿನ ಕಾವ್ಯಶಿಲ್ಪನದಲ್ಲಿ ಚೆಲ್ಲುವರಿದಿದೆ. ಬಳಕೆಯ ಭಾಷೆಯಲ್ಲಿ ಹೇಳುವುದಿದ್ದರೆ ಇದು ಅಪ್ಪಟ ತತ್ತ್ವಕಾವ್ಯ. ಲೋಕದ ಕಾಟಗಳನ್ನು ಅರಗಿಸಿಕೊಳ್ಳುತ್ತಲೇ ಒಳನೆಮ್ಮದಿಯ ಹುಡುಕಾಟದಲ್ಲಿ ಏಗುವ ಬಾಗುವ ನೀಗುವ ಸಾಗುವ ಸಾಧಕಾತ್ಮವೊಂದನ್ನು ಇಲ್ಲಿ ನಾವು ಕಾಣಬಹುದು. ಒಟ್ಟಂದದಲ್ಲಿ ನಮಗೆ ತೋರುವುದು ಕವಯಿತ್ರಿಯ ಅನೂನವಾದ ಆತ್ಮಪ್ರಾಮಾಣ್ಯ, ಪೂರ್ವಗ್ರಹದೂರವಾದ ವಾಸ್ತವಸ್ವೀಕೃತಿಯ ಪ್ರಾಂಜಲತೆ, ಹಾರಿ ಹಾರಿ ನೀಕಿ ನೀಕಿ ಯತ್ನಿಸುತ್ತಿದ್ದರೂ ಕೈಗೆಟುಕದೇ ಒಂದಂಗುಲ ಆಚೆಗೇ ನಿಲ್ಲುವ ಪರಮಾತ್ಮಪದಾರ್ಥದ ಕುರಿತು ಹಿಂಗದ ಸೆಳೆತ, ಇಬ್ಬಗೆಯ ಇಬ್ಬಂದಿತನದ ಲೋಕವರ್ತನೆ ಯತ್ತ ಸಾನುಕಂಪದೃಷ್ಟಿ.
ಲಿವಿಂಗ್ ಟುಗೆದರ್ -ಎಂಬುದೇ ಆಪ್ತಪ್ರತಿಮೆ. ಆತ್ಮೈವ ಹ್ಯಾತ್ಮನೋ ಬಂಧುಃ ಎನ್ನುವುದರ ಅಧುನಾತನಶಬ್ದಕಲ್ಪ. ’ನಾವಿಬ್ಬರೂ ಹುಟ್ಟುತ್ತಲೇ ಕೂಡಿರುವ ಲಿವಿಂಗ್ ಟುಗೆದರ್’(ಲಿವಿಂಗ್ ಟುಗೆದರ್). ನನ್ನೊಳಗಿರುವ ನಾನೇ, ನನಗಿನ್ನೂ ಪುರಸೊತ್ತಿನಲ್ಲಿ ಭೇಟಿಯಾಗಲು ಸಿಕ್ಕಿಲ್ಲ. ನನ್ನನ್ನು ನನ್ನಿಂದ ದೂರ ಮಾಡಿಬಿಡಬೇಕೆಂದಿದ್ದರೂ, ನನಗೆ ನಾನೇ ಸಿಕ್ಕಿಲ್ಲ. ನಾನಾದ ಅವನಾಗಲಿ, ಅವನಾದ ನಾನಾಗಲಿ ಆಯುರ್ಮಾನದುದ್ದಕ್ಕೂ ಅಂಟಂಟಿಕೊಂಡಿದ್ದರೂ ಪರಸ್ಪರ ಪರಿಚಯವಿಲ್ಲದ ದುರ್ಭರದಾಂಪತ್ಯವು ಇನ್ನೂ ಚಾಲ್ತಿಯಲ್ಲಿದೆ. ಆತ್ಮತತ್ತ್ವದ ಸುಂದರ ಸಂಸಾರಚಿತ್ರಣ ’ಲಿವಿಂಗ್ ಟುಗೆದರ್’. ಇಲ್ಲಿ ವೀಣಾ ಯಾವುದೇ ಬೆಡಂಗಿನ ಭಾಷೆಯನ್ನೂ ಬಳಸುವುದಿಲ್ಲ. ಎದುರಾಎದುರು ಕೂತು ಪಟ್ಟಾಂಗ ಹೊಡೆದಷ್ಟು ಸಹಜವಾದ ಮಾತಲ್ಲಿ ಗಹನವಾದ ವಿಚಾರವನ್ನು ಅವಲೀಲೆಯಲ್ಲಿ ವಿಸ್ತರಿಸುತ್ತಾರೆ.
ಒಟ್ಟು ಅರವತ್ತೆರಡು ಕಾವ್ಯಕುಸುಮಗಳು ಈ ಸಂಕಲನದಲ್ಲಿ ಸ್ಥಾನಾಪನ್ನವಾಗಿದ್ದಾವೆ. ಬಹುತೇಕ ಎಲ್ಲವೂ ಅಭಿಧಾವೃತ್ತಿಯ ಸಂರಚನೆಗಳೇ ಆಗಿದ್ದಾವೆ. ಒಗಟಾಗಿ ಹೇಳುವ ಕ್ಲೇಶಪಂಥವಲ್ಲ ವೀಣಾರದ್ದು. ನೇರ ನೇರ ನುಡಿಗಳಲ್ಲಿ ಭಾವವನ್ನು ಬಿಂಬಿಸುವ ಸಂವಹಿಸುವ ಶಬ್ದಕಲೆ ಇವರಲ್ಲಿ ಸಹಜಸಿದ್ಧಿಯಂತೆ ಮೆಯ್ವರಿದಿದೆ. ಹಾಗಾಗಿ ಅಲಂಕಾರಗಳ ಆಹಾರ್ಯಾ ಕರ್ಷಣೆಯ ಅಸಹಜತೆ ಅಟಕಾಯಿಸುವುದಿಲ್ಲ. ಕೆಲವು ರಚನೆಗಳು ಅಂದಂದಿನ ದಿನಮಾನದ ಘಟನೆಗಳ ಪ್ರತಿಕ್ರಿಯಾತ್ಮಕವಾದ ಸಾಭಿಪ್ರಾಯಮಂಡನೆ. ಅದರಲ್ಲೂ ವೀಣಾರವರ ದಿಟ್ಟತನ ಟಾಠಾಡಾಢಾಣತನ ಗಚ್ಚಚ್ಚಾಗಿ ಗುಟುರುತ್ತದೆ. ’ಪರಧರ್ಮಕ್ಕೊಂದು ಕಿವಿಮಾತು’ವಿನಲ್ಲಿರುವುದು ಬರೇ ಕಿವಿಮಾತಲ್ಲ, ಕಿವಿ ಹಿಂಡಿ ಹೇಳಿದ ಕಟೂಕ್ತಿ. ’ಸಂಖ್ಯೆಯಿಂದ ಬಲ ಅಳೆಯಲು ನಾವು ಕೌರವರಲ್ಲ’. ’ನಮಗೆ ಕೊಂದು ಸೇರುವ ಸ್ವರ್ಗ ಬೇಡ. ಸತ್ತು ಸೇರುವ ಸ್ವರ್ಗವೇ ಇರಲಿ’. ’ಬಂದವರು ಅಸುರರಿರಲಿ ಅನ್ಯಧರ್ಮದವರಿರಲಿ ಬೇರೆ ದೇಶದ ಮ್ಲೇಂಛರಿರಲಿ ನಮ್ಮ ಒಳಗೆ ಅವನೊಬ್ಬನೇ ಇರಲಿ’ ಎಂಥ ಕೆಚ್ಚಿನ ಸಿಡಿಗಿಚ್ಚಿನ ಮಾತು! ಕ್ಷಾತ್ರೋದ್ಗಾರ!!
’ಹಿಜಾಬ್’ ಕಾವ್ಯಪಂಕ್ತಿಗಳು ಮನುಷ್ಯತ್ವದ ತಾಯಿಬೇರನ್ನು ಜಗ್ಗಿ ಒಗೆದಂತಿದೆ. ಪುರುಷ ಕ್ರೌರ್ಯದ ಬೀಭತ್ಸವಿವರಣೆ ಮುಖವನ್ನು ಬಿಳಿಚಿಸುವಂತಿದೆ. ಗಂಡುಗೂಳಿ ನರಾಧಮನು ಹೆಣ್ಣಿನ ಎಲ್ಲ ಅಂಗಗಳನ್ನೂ ಮುಚ್ಚಿದ, ಮುಚ್ಚಿದ, ಮುಚ್ಚಿದ. ’ಗುಪ್ತಾಂಗ ಮುಚ್ಚಿದರು ತೊಡೆ ಮೈ ಎದೆ ಹೊಟ್ಟೆ ತೋಳು ಕೊರಳು ಕಿವಿ ತಲೆ ಬಾಯಿ ಮುಚ್ಚಿದರು | ನಾನು ಬಟ್ಟೆಯೊಳಗೆ(ಬಟ್ಟೆ ಎಂದರೆ ದಾರಿಯೂ ಹೌದು) ಮುಚ್ಚಿಹೋದೆ | ಈಗ ಪಿಳಿ ಪಿಳಿ ನೋಡುವ ಎರಡು ಕಣ್ಣು ಮಾತ್ರ ತೆರೆದಿವೆ | ಅದನ್ನೆಂದು ಮುಚ್ಚುತ್ತಾರೋ ಗೊತ್ತಿಲ್ಲ(ಸಾವಿನ ಧ್ವನಿ) | ಮುಚ್ಚಿದ ಬಟ್ಟೆಯೊಳಗೆ ನಾನು ಬೆತ್ತಲೆ ಕನಸು ಕಾಣುತ್ತಾ ಬದುಕುತ್ತೇನೆ |’ ಇಂತಹ ಢಕ್ಕೋಕ್ತಿಗಳನ್ನು ಬರೆಯಬೇಕಿದ್ದರೆ ಹೆಗ್ಗುಂಡಿಗೆಯೇ ಬೇಕು.
ಕವಯಿತ್ರಿಗೆ ಬುದ್ಧ ಕೃಷ್ಣ ಇಬ್ಬರೂ ಪದೇ ಪದೇ ಕಣ್ಣಡ್ಡಾಗಿ ಅಚ್ಚರಿಯಾಗಿ ಗೂಢವಾಗಿ ಕಾಡುತ್ತಾರೆ. ’ಸಿದ್ಧಾರ್ಥ’ ’ಬುದ್ಧ ಸತ್ತು ಹೋಗಿದ್ದಾನೆ’ ’ನಿಜ ಹೇಳು ಬುದ್ಧ’ ಮೂರು ರಚನೆಗಳು ಬುದ್ಧತ್ವದ ಬೆರಗಿಗೆ ಬೆಳಕಾಗಿದ್ದಾವೆ. ’ಸಿದ್ಧಾರ್ಥ ಆ ಬುದ್ಧನ ಪೂರ್ವರೂಪ’ (ಪೂರ್ವರೂಪ ಎಂಬ ಪದದಲ್ಲಿ ಔಪನಿಷದ ಧ್ವನಿ ಇದೆ) ’ನೋಡುವ ಸಿದ್ಧಾರ್ಥ ಹಾಗೇ ಇದ್ದಾನೆ | ಎದ್ದು ನಡೆವ ಬುದ್ಧ ಸತ್ತು ಹೋಗಿದ್ದಾನೆ’ ಎಂದು ಹೇಳಹೇಳುತ್ತಲೇ ’ನಿನಗೆ ಗೊತ್ತಿರಲಿ ನನ್ನೊಳಗಿನ ಬುದ್ಧ ಎದ್ದಿದ್ದಾನೆ’ ಎಂದು ಬೆಚ್ಚಿಸಿದರೂ ’ನಿಜ ಹೇಳು ಬುದ್ಧ, ನಿನ್ನಂತೆ ಆಗಲು ಹೊರಹೋಗಬೇಕಾ | ಒಳಗೇ ಇದ್ದರೆ ಆಗದಾ’ ಎಂಬ ಆತ್ಮಪ್ರಭೆಯನ್ನು ಹೊಳಹಿಸುತ್ತಾರೆ ವೀಣಾ.
ವೀಣಾ ಪರಮನಃಪ್ರವೇಶವನ್ನು ಮಾಡಿ ಆಡಬಲ್ಲರು, ಅನುಭವಿಸಬಲ್ಲರು. ’ಜಲಪಾತ ಹೇಳಿತು’ ಹಾಗೂ ’ಚಂದ್ರಯಾತನೆ’ ಇವೆರಡೂ ತಮ್ಮ ಅಂತರಂಗವನ್ನು ಬಿಚ್ಚಿಕೊಳ್ಳುವ ಬಾಬತ್ತಿನದು. ಜೀವನಗತಿಯನ್ನು ಎಂತಹ ವಿಷಮವಿಪರೀತಸ್ಥಿತಿಯಲ್ಲೂ ಎದುರಿಸುವ ದಾರ್ಢ್ಯವು ಜಲಪಾತಕ್ಕಿದೆ ಎಂದು ಲಕ್ಷಣೀಕರಿಸುತ್ತ ಆರಂಭವಾಗುವ ಸಾಲುಗಳು ಕ್ರಮೇಣ ವಿಷಾದಾಂತಕ್ಕೆ ಹೊರಳುವುದಿದೆಯಲ್ಲ, ಅದು ನಿಜವಾಗಿ ಕವಿಹೃದಯವಷ್ಟೇ ಕಾಂಬ ಒಳಗುದಿ. ’ನಾನು ಬೀಳದಂತೆ ಅಣೆಕಟ್ಟು ಕಟ್ಟಿ ತಡೆದಿರಲ್ಲ | ಅಂದು ವಿಲವಿಲ ಒದ್ದಾಡಿದೆ | ಇನ್ನು ಬದುಕಲೇಬಾರದು ಅನಿಸಿತು | …. ಒಣಗಿ ಆವಿಯಾಗಿ ಅವನನ್ನು ಸೇರಬೇಕು …. ಒಮ್ಮೆ ಬಿದ್ದು ನೋಡಿ ಕೆಳಗೆ| ನಿಮಗಾಗಿ ಅಲ್ಲದಿದ್ದರೂ ಅವನಿಗಾಗಿ |’ ಅಂತರಂಗದ ಅಳಲು ಆಕ್ರಂದನವು ಅವ್ಯಕ್ತಾಲಾಪವಾಗಿ ಮಾರ್ಪಾಡಾಗುತ್ತದೆ. ಮನುಷ್ಯನ ಪ್ರಮತ್ತತೆಯ ಸ್ವಾರ್ಥದ ಮೂದಲಿಕೆಯ ಮೂಲಕ ಪರದತ್ತ ದತ್ತಚಿತ್ತರನ್ನಾಗಿಸಲು ಉಜ್ಜುಗಿಸುತ್ತದೆ.
ಸೌಂದರ್ಯದ ತವನಿಧಿಯೆಂದು ರಸಿಕರಿಂದ ಹೊಗಳಿಸಿಕೊಳ್ಳುತ್ತಲೇ ಇರುವ ಚಂದ್ರನ ಗೋಳು ಗೂಢತೆಯನ್ನು ಕವಯಿತ್ರಿ ಕುತೂಹಲಕರವಾಗಿ ಅಪಾವರಿಸುತ್ತಾರೆ. ’ನಾನು ನನ್ನದೇ ಒಂದು ಏಕಾಂತದ ಜಾಗ ಉಳಿಸಿಕೊಂಡಿದ್ದೇನೆ | ನಿಮಗದು ತೋರದಿರಲಿ ಎಂದು ಕತ್ತಲಲ್ಲಿಟ್ಟಿದ್ದೇನೆ |…. ನಾನು ಸುಟ್ಟುಕೊಂಡು ಕಪ್ಪಾಗಿದ್ದೇನೆ ನಿಮಗೂ ಸುಟ್ಟು ಭಸ್ಮವಾಗುವ ಆಸೆಯೇ |’.
ನೈಸರ್ಗಿಕವಾಗಿ ವಾರ್ಧಕ್ಯಾವಸ್ಥೆಯನ್ನು ಹೊಂದಿದ ’ಬೋಳುಮರ’ದ ಚರಮಭಾಷಣ, ವಿಡಂಬನವಿಭಾವದ ಬೀಸುಚಾಟಿ. ’ನಾನು ಖಾಲಿಯಾದದ್ದೇ(ಬಾಳನ್ನು ನೀಗಿಕೊಂಡದ್ದು) ನಿಮಗಾಗಿ’ ಎಂದು ಕೊನೆಯಾಗುವ ಈ ರಚನೆ, ಬೋಳಾದ ಮರವನ್ನು ಮನುಷ್ಯ ಹೇಗೆಲ್ಲ ಭೋಗಕ್ಕೆ ಬಳಸಿಕೊಳ್ಳಬಹುದೆನ್ನುವ ಸಲಹೆಯ ಮಾರುದ್ದ ಪಟ್ಟಿಯನ್ನೇ ತೆರೆದಿಡುತ್ತದೆ. ಚಟ್ಟಕ್ಕೂ ಪಲ್ಲಕ್ಕಿಗೂ ಸಮಾನವಾಗಿ ಒದಗುವ ಬೋಳುಮರವು ಸಮರ್ಥಸಂಕೇತವಾಗಿ ಸ್ಥಿರೀಕೃತವಾಗಿದೆ.
ಈ ಶತಮಾನದ ಪ್ರಥಮಪಾದದಲ್ಲಿ ಇನ್ನಿಲ್ಲದಂತೆ ಕೌಚಿ ಕಾಡಿದ ಕಾಲಾಂಕುಶವೆಂದರೆ ಕೊರೋನಾ. ಜೀವಸಾಮಾನ್ಯವೂ ಈ ಕೊರೋನದ ಕರಾಳತೆಗೆ ಕಂಗಾಲಾಗಿ ಹೋಗಿದೆ. ಒಂದಿಡೀ ತಲೆಮಾರನ್ನೇ ಅಡಿಮೇಲು ಮಾಡಿದೆ. ಸಾಂಸ್ಕೃತಿಕ ಅಭ್ಯುತ್ಥಾನವನ್ನು ದಶಕಾವಧಿಯಷ್ಟು ಹಿಂಜಗ್ಗಿ ಸೆಳೆದೊಗೆದಿದೆ. ’ಸಂಸ್ಕೃತಿ ಸತ್ತಿತು’ ರಚನೆಯು ಶಕ್ತವಾಗಿ ಈ ವಿಕೃತಚಿತ್ರವನ್ನು ವ್ಯಂಜಿಸಿದೆ. ಸಹಸ್ರಮಾನಗಳಿಂದ ಭಾರತೀಯರ ಉಸಿರುಸಿರಲ್ಲೂ ಏಕೀಭವಿಸಿದ್ದ ಸದಾಚರಣೆಗಳು ಕೊರೋನಾದಿಂದ ನಿರ್ಣಾಮವಾದ ನಿದರ್ಶನಗಳನ್ನು ವೀಣಾ ಸಾಲುಸಾಲಾಗಿ ಕೊಡುತ್ತಾರೆ. ’ಸಾಕಾ ಈ ವಿರಸ | ಬೇಕಾ ಇನ್ನೂ ವೈರಸ’ ಇದು ಅಂತ್ಯೋದ್ಗಾರ. ರಸವು ಹೇಗೆ ಅನುಭವೈಕ ವೇದ್ಯವೋ, ವೈರಸ್ಸೂ ಹಾಗೆಯೇ ಅನುಭವೈಕವೇದ್ಯವೆಂಬ ಕಟುವಾಸ್ತವವನ್ನು ವೀಣಾ ದಾಖಲಿಸುತ್ತಾರೆ. ಕಣ್ಣೆದುರು ಕಾಣುವ ಚಿತ್ರಕ್ಕೂ ಮರೆಯಲ್ಲಿರುವ ಯಾಥಾರ್ಥ್ಯಕ್ಕೂ ಬಹಳ ಅಂತರವಿರುತ್ತದೆಂಬುದನ್ನು ಕೊರೋನಾಪ್ರತಿಮೆಯ ಮೂಲಕವೇ ವೀಣಾ ಪ್ರತಿಪಾದಿಸುತ್ತಾರೆ. ’ಕೊರೋನಾ ಅಣ್ವಸ್ತ’ ’ಇದು ಪ್ರಳಯವಾದರೆ’ ಈ ಎರಡು ರಚನೆಗಳಲ್ಲಿ ಸತ್ಪರಿಣಾಮದ ಹೃದಯಂಗಮ ಚಿತ್ರಣವಿದೆ. ಮನುಷ್ಯನನ್ನು ಪ್ರಕೃತಿಯ ಮುಂಬಾಗಿಲಲ್ಲಿ ತಂದು ನಿಲ್ಲಿಸಿ, ’ಇದು ಪ್ರಳಯವಾದರೆ ಇಂಥದ್ದು ಮತ್ತೆ ಮತ್ತೆ ಆಗಲಿ’ ಎಂದು ಕವಯಿತ್ರಿ ಹೃದಯದಾಳದಿಂದ ಹಾರಯಿಸುತ್ತಾರೆ. ಅಂತರವನ್ನು ಕಾಪಾಡಿಕೊಂಡು ಜೀವವನ್ನು ರಕ್ಷಿಸಿಕೊಳ್ಳುವ ಪೈಪೋಟಿಗೆ ಬಿದ್ದ ಕೊರೋನಾ ತಾಂಡವವನ್ನು ವೀಣಾ ಪ್ರಶಂಸಿಸುವ ಬಗೆಯೇ ರೋಚಕ. ’ಹುಟ್ಟು ಸಾವಿನ ಈ ಹೊತ್ತು ಒಬ್ಬನೇ ಇರಬೇಕು | ಪಕ್ಕಾ ಭಗವಂತನ ಹಾಗೆ | … ಅವನೊಳಗಿಳಿಯಬೇಕಾದ ಹೊತ್ತು | ಪರೀಕ್ಷಿತನಿಗೆ ಏಳು ದಿನದಲಿ ಮರಣ ಎಂಬ ಸುದ್ದಿಗೆ ಅವನು ಭಗವಂತನನ್ನೇ ತಿಳಿದನಲ್ಲ, ಅಂಥ ಸೂಕ್ಷ್ಮದ ಹೊತ್ತು |’ (ಕೊರೋನಾ ಅಣ್ವಸ್ತ್ರ). ಕೊರೋನಾದ ಕದಲಿಕೆಯಲ್ಲಿ ಕೊನರುವಿಕೆಯಲ್ಲಿ ಶ್ರೀಮದ್ಭಾಗವತವನ್ನು ಅನುಸಂಧಾನಿಸುವುದು, ದಿಟಕ್ಕೂ ಕವಿದರ್ಶನ.
ಭಾಷೆಯ ಒಳಪಟ್ಟುಗಳನ್ನೂ ವೀಣಾ ಬಿಂದಾಸಾಗಿ ಹಾಕಬಲ್ಲರು ಎಂಬುದಕ್ಕೆ ’ತಿಳಿವಿರದ ತಿಳಿವಳಿಕೆ’ ಉತ್ತಮೋದಾಹರಣೆ. ತಿಳಿ ಎನ್ನುವ ಶಬ್ದವನ್ನು ಅದರ ನಾನಾವತಾರಗಳಲ್ಲಿ ಪಂಕ್ತೀಕರಿಸಿ ಓದುಗನ ಕಣ್ಣಿಗಷ್ಟೇ ಅಲ್ಲ ಮಿದುಳಿಗೂ ತ್ರಾಸ ಕೊಡುತ್ತಾರೆ ವೀಣಾ. ಕಸ್ಮಿನ್ನು ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತಿ ಎನ್ನುವ ಉಪನಿಷದ್ಘೋಷದ ಸರಳ ಕನ್ನಡ ಆವೃತ್ತಿ ಈ ತಿಳಿವಳಿಕೆ.
ನೈಷೇಧಿಕವಾಗಿ ಸತ್‌ಅನ್ನು ಚಿತ್ರಿಸುವ ಆನುಭಾವಿಕ ಹೃದ್ಯಪಂಕ್ತಿಪ್ರಚಯ ’ಅವನ ದಾರಿ’. ಅದು ಅವನ ದಾರಿಯೇ ಅಲ್ಲ -ಎಂದು ಪ್ರತಿಯೊಂದು ಚರಣಾಂತ್ಯದಲ್ಲೂ ಗಟ್ಟಿಗಚ್ಚಲ್ಲಿ ಸಾರಿ ಹೇಳುವ ಆತ್ಮನಿರ್ಣಯದ ಉಜ್ಜ್ವಲರಚನೆ ಇದು. ಸಾಧನಾಪಥದಲ್ಲಿ ಅಂಬೆಗಾಲಿಡುವ, ತೇಕುವ, ತೆವಳುವ, ಹೊರಳುವ, ತೆರಳುವ ಯತಿಷ್ಠರ ಕಠೋರ ಅನುಭವವೇ ಇದರಲ್ಲಿ ಸಾಂದ್ರವಾಗಿ ರೇಖೀಕೃತವಾಗಿದೆ. ’ತುತ್ತತುದಿಯನ್ನು ಮುಟ್ಟುವ ಹೊತ್ತಿಗೆ | ನನಗಿಂತ ಚಿಕ್ಕವರು ಯಾರೂ ಇಲ್ಲ ಎಂಬ ಭಾವ ಹುಟ್ಟದೇ ಇದ್ದರೆ | ಅದು ಅವನ ದಾರಿಯೇ ಅಲ್ಲ’. ಸಾಧನೆಗೆ ಇಳಿದವನ ಕಠಿನಶ್ರಮದ ವಿವರಣೆ, ಕಣ್ಣಲ್ಲಿ ಬೆವರಿಳಿಸುತ್ತದೆ.
ಮೊಗ್ಗು, ಹೂವು, ಹಣ್ಣುಗಳಂತೆ ಅವಸ್ಥಾತ್ರಯಗಳನ್ನು ಹೊಂದುವ ದೇಹದ ವಿಕಾರವನ್ನು ಹಿನ್ನೋಟದಲ್ಲಿ ಬಣ್ಣಿಸುವ ಕಾವ್ಯ ’ಎಲ್ಲಿದೆ ಹುಡುಕುತ್ತಿದ್ದೇನೆ’. ಬಾಲ್ಯ ಯೌವನ ವೃದ್ಧಾಪ್ಯಗಳು ಕವಯಿತ್ರಿಯ ’ಕಣ್ಣ ಮುಂದೆ ಸತ್ತುಬಿದ್ದಿದೆ’. ಇದು ಕಂಡ ಕಾಣುತ್ತಿರುವ ಜೀವನಚಿತ್ರ. ಆದರೆ ಕಾಣಬೇಕಿರುವುದನ್ನು ಕವಯಿತ್ರಿ ಹುಡುಕುತ್ತಿದ್ದಾರೆ. ಅದು ಯಾವುದು? ’… ಎಂದೂ ಸಾಯದ ಏನೋ ಒಂದು ಉಂಟಂತೆ | .. ಅದು ಎಲ್ಲಿದೆ | ಇಲ್ಲಿಂದ ಹೋಗುವ ಮೊದಲೊಮ್ಮೆ ನೋಡಬೇಕು |’ ನೈನಂ ಛಿಂದಂತಿ ಇತ್ಯಾದಿಯಾಗಿ ಗೀತೆಯು ಅಭಿವರ್ಣಿಸುವುದನ್ನೇ ಅಭಿಧಾವೃತ್ತಿಯಲ್ಲೇ ವೀಣಾ ಇಲ್ಲಿ ಸಾಲುಗೊಳಿಸಿದ್ದಾರೆ. ತನಗೆ ಆತ್ಮಜ್ಞಾನ ಆಗಲೇಬೇಕೆಂಬ ತುಡಿತ ಹಠ ಇಲ್ಲಿದೆ. ಹಾಗಾಗುವುದಿಲ್ಲವಾದರೆ ’ಸಾಯದಂತೆ ಇರುವ ಆ ಅದು ಇರುವುದಾದರೂ ಯಾರಿಗಾಗಿ’ ಎಂದು ಸವಾಲು ಹಾಕುವ ತುಂಟಾಟ ಮೆಚ್ಚಾಗುತ್ತದೆ.
ಪ್ರಕೃತಿಯನ್ನು ಭಂಜಿಸಿ ಮೆರೆವ ನಾಗರಿಕಮಾನವನ ವಿಕೃತಿಯನ್ನು ವಿಡಂಬಿಸುವ ರಚನೆ ’ಸ್ಮಾರ್ಟ್ ಸಿಟಿ’. ನಗರಸುಂದರೀಕರಣದ ಮೂಲಕ ಸಹಜಪ್ರಕೃತಿಗೆ ಸಂಚಕಾರ ತರುವ ನವನವೋನ್ಮತ್ತತೆಯ ಪಿತ್ತವೇರಿಸಿಕೊಂಡ ಪುರಪ್ರಜೆಗಳನ್ನು ಝಾಡಿಸುತ್ತಾರೆ, ಛೇಡಿಸುತ್ತಾರೆ ವೀಣಾ. ’ಕಾಂಕ್ರೀಟಿನ ನೆಲ ಮಾಡಿದ್ದೇವೆ’ ಎಂದು ಬೀಗುವವನ ಸೊಕ್ಕು ’ಅದು ನಮ್ಮ ಫುಟ್ಪಾತ್ | ಕೇಳಲು ನೀನಾರು’ ಎನ್ನುವ ಧಿಮಾಕಿನಲ್ಲಿ ರಮಿಸುತ್ತದೆ. ’ಎಲ್ಲ ತೆಗೆದು ಒಂದನ್ನೂ ಉಳಿಸದೆ ನಾವೇ ನಾವು ಆದಾಗ ನಿಜವಾಗಿಯೂ ಬೆಳವಣಿಗೆ | ಅದಕ್ಕೆ ನಮ್ಮದೀಗ ಸ್ಮಾರ್ಟ್ ಸಿಟಿ |’ ಪ್ರಗತಿಗೆ ವಿಪರೀತ ವ್ಯಾಖ್ಯಾನವನ್ನು ಮಾಡುವ ಮನುಜಾಧಮನ ದರ್ಪೋಕ್ತಿ ಧಮನಿಯನ್ನು ಬಿಸಿ ಮಾಡುತ್ತದೆ.
ಲಿವಿಂಗ್ ಟುಗೆದರ್ನ ಅಂತರಾಶಯವನ್ನೇ ವಿಸ್ತರಿಸುವ ಉಪಬೃಂಹಿಸುವ ರಚನೆಗಳು, ’ಸಾಕಾಗಿ ಹೋಗಿದೆ’ ’ನೀನೇ ನಾನು’ ’ತುಂಟಾಟ’ ’ಪ್ರೀತಿಯಲ್ಲದೆ’ ’ಪ್ರಳಯದ ನಿದ್ರೆ’ ’ಎಲ್ಲದರಾಚೆಗೆ’. ’ನಾನು ನಿನ್ನ ಜೊತೆಗೆ ಬದುಕಲಿಲ್ಲ, ಕನಿಷ್ಠ ನಿನ್ನ ಜೊತೆ ಸಾಯಲಿಕ್ಕಾದರೂ ಅವಕಾಶ ಕೊಡು, ಎಲ್ಲಿದ್ದಿ ಬಾ ಒಮ್ಮೆ ನಿನ್ನನ್ನು ನೋಡುತ್ತೇನೆ’(ಸಾಕಾಗಿ ಹೋಗಿದೆ).
’ನಾನು ನಾನಲ್ಲ ಅದು ನೀನೇ |… ನಾನೇ ನೀನಾಗುವುದನ್ನು ನೋಡುವ ತವಕ ನನಗೆ | … ತೋರಿಸಿಬಿಡು ನಿನ್ನನ್ನು’(ನೀನೇ ನಾನು).
’ನಿನ್ನನ್ನು ಬಿಡಲಿಕ್ಕೆ ನಾನಾರು ಪಡೆಯಲಿಕ್ಕಾದರೂ ನಾನಾರು | ಹಾಳಾಗಿ ಹೋಗಲಿ ಈ ನನ್ನಾಟ | ನಿನ್ನಾಟದಲಿ ಕುಣಿಸಿ ದಣಿಸಿ ಕರೆಸಿಕೋ | ನಿನಗೆ ಸೋತಿದ್ದೇನೆ ಬಾ’(ತುಂಟಾಟ).
’ಎಲ್ಲರೊಳಗೆ ಅಡಗಿಯೂ ನೀನು ನನ್ನೊಳಗಷ್ಟೇ ಕಾಣಿಸುತ್ತಿ |… ನನ್ನೊಳಗಿರುವ ನಿನ್ನನ್ನು ನಿನ್ನೊಳಗಿರುವ ನನ್ನನ್ನು ಯಾರು ಅಗಲಿಸಿಯಾರು | ಪ್ರೀತಿಯಲ್ಲದೆ?’(ಪ್ರೀತಿಯಲ್ಲದೆ).
’ಹೀಗೊಂದು ನಿದ್ದೆ ಮಾಡಬೇಕು |… ನಾನೂ ಇಲ್ಲವಾಗಿ ಆ ಗಾಢಕತ್ತಲಿನ ಜಲರಾಶಿ ಅಳಿದು ಪ್ರಳಯವಾಗಿ ಬಿಡಬೇಕು |… ಎಲೆಯ ಮೇಲೆ ಮಲಗಿರುವ ಶಿಶುವಾಗಿ ಬರುವನಂತೆ | … ಅವನಿಗಾಗಿ ಹಾಗೊಂದು ನಿದ್ದೆ ಮಾಡಬೇಕು’(ಪ್ರಳಯದ ನಿದ್ರೆ).
ಅರವತ್ತೆರಡು ಕಾವ್ಯಕೃತಿಗಳ ಗುಚ್ಛದಲ್ಲಿ ಒಂದೇ ಒಂದು ದೃಷ್ಟಿಬೊಟ್ಟಿನಂತೆ ಸಪ್ತಮಾತ್ರಾಗಣದ (ಮಿಶ್ರಛಾಪು) ಪಕ್ಕಾ ಕಸುಬುದಾರಿಯ ಗೇಯಗೀತವಿದೆ. ಅದೇ ’ಎಲ್ಲದರಾಚೆಗೆ’. ಸಪ್ತಸಾಗರ ದಾಚೆಯೆಲ್ಲೋ … ಸಾಲಿನಿಂದ ಪ್ರೇರಿತವೋ ಎಂಬಂತೆ, ಎಲ್ಲದರಾಚೆಗೆ ಎಂಬ ಶೀರ್ಷಕವನ್ನೂ ಒಳಗೊಂಡಿದೆ’. ’… ನೆಲದ ಆಚೆಗೆ ಬಿಲದ ಆಚೆಗೆ ಎಲ್ಲದಾಚೆಗೆ ಆಚೆಗೆ | … ದಾಂಟಲಿಕ್ಕಿದೆ ಈಂಟಬೇಕಿದೆ ಮೀಂಟಬೇಕಿದೆ ಅವನನು’. ಸ ಭೂಮಿಂ ವೃತ್ವಾ ಅತ್ಯತಿಷ್ಠದ್ದಶಾಂಗುಲಂ ಎಂಬುದರ ದೇಶೀಕರಣವಾಗಿ ಭಾಷೀಕರಣವಾಗಿ ನೆಲದಾಚೆಯ ಅವ್ಯಕ್ತವು ವಿಲಸಿಸಿದೆ.
’ಅಪ್ಪನೆಂಬ ದೇವರು’ ಹಾಗೂ ’ನನ್ನಪ್ಪ ಗೋವಿಂದ’ ಈ ಎರಡು ರಚನೆಗಳು ಪ್ರಕಟವಾಗಿಯೇ ವೀಣಾರವರ ತಂದೆ ಬನ್ನಂಜೆ ಗೋವಿಂದಾಚಾರ್ಯರನ್ನು ಕುರಿತಿಟ್ಟೇ ಅಕ್ಷರಿಸಿದ್ದು. ಗೋವಿಂದಾಚಾರ್ಯರ ವಿಸ್ಮಯ ವ್ಯಕ್ತಿತ್ವವನ್ನು ಹತ್ತಿರವಿದ್ದೂ ದೂರಾಗಿ, ದೂರವಿದ್ದೂ ಹತ್ತಿರವಾಗಿ ವೀಣಾ ಕಂಡ ಅವಾಙ್ಮನೋಗ್ರಾಹ್ಯಚಿತ್ರದ ಭಕ್ತಿದೀನವಾದ ಕೆತ್ತನೆ. ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ಎಂಬುದರ ವಾಗ್ರೂಪ. ’ಸಕಲವೇದಶಾಸ್ತ್ರ ಓದಿದ ನೀನು ನನ್ನನ್ನು ಓದಿಸದೇ ಬೆಳಸಿದೆ ಏಕೆ’(ಅಪ್ಪನೆಂಬ ದೇವರು) ಎಂದು ದಿಟ್ಟತನದಿಂದ ಪ್ರಶ್ನಿಸಿ, ಬೆನ್ನುಲಿಯಲ್ಲೇ ’ನನ್ನ ಜೀವಪುಣ್ಯಕೆ ನಿನ್ನ ದೇವಕಾರುಣ್ಯ ತೋರಿದೆ | ಅಪ್ಪ ನೀ ದೇವನಲ್ಲದೇ ಇನ್ಯಾರು ದೇವರು ನನಗೆ’ ಎಂದು ತೊಡೆಗೂಸಾಗಿ ತಲೆಬಾಗುತ್ತಾರೆ.
ಖುಲ್ಲಂ ಖುಲ್ಲಾ ವಾಚ್ಯವಾಗಿ ಮೆಯ್ಮೂಡಿಸಿಕೊಂಡ ರಚನೆಗಳು ’ಹನುಮನೊಬ್ಬನೇ’ ’ನಿಜಗುರು ನಿಜದೊರೆ’ ’ನೈನಂ ಛಿಂದಂತಿ ಶಸ್ತ್ರಾಣಿ’ ’ಇವಳು ಲಕುಮಿ ಅಲ್ಲವೇ’. ಸ್ವಭಾವೋಕ್ತಿಯೇ ಇಲ್ಲಿನ ಪ್ರಾಣಧಾತು. ಈ ರೀತಿಯ ಕಾವ್ಯಮಯಶೈಲಿಯು ವೀಣಾ ಅವರಿಗೆ ಸ್ವತಃಸ್ಸಿದ್ಧವಾದ ಪ್ರಾಪ್ತಿ. ಅವರು ಭಾಷಣ ಮಾಡಲಿ, ಉಪನ್ಯಾಸವನ್ನೇ ಮಾಡಲಿ, ಅದರ ಓಜಸ್ಸು ಕಾವ್ಯಗಂಧಿ ಯಾದದ್ದೇ ಆಗಿರುತ್ತದೆ. ಹಾಗಾಗಿ ಛಂದೋರಹಿತವಾದ ಕಾವ್ಯೋದ್ಯಮವು ಅವರ ಸಹಜವಾಕ್ಚರ್ಯೆ. ’ಹೇಳದಿದ್ದರೆ ಒಳ್ಳೆಯದು’ ಕೃತಿಯಲ್ಲಿ ವೀಣಾ ಸ್ಪಷ್ಟವಾಗಿ ಸ್ಫುಟವಾಗಿ ತನ್ನ ಕಾವ್ಯನಿರ್ಮಿತಿಯ ಇರಸ್ತಿಗೆಯ ಬಗ್ಗೆ ತಾವೇ ಜರಡಿಹಿಡಿದುಕೊಳ್ಳುತ್ತಾರೆ. ’ಹೀಗೆ ಬರೆದದ್ದು ಕೆಲವೊಮ್ಮೆ ಬಾಲಿಶ | ಹಲವುಬಾರಿ ಅವನ ವಶ | ಹುಟ್ಟಿದ್ದೆಲ್ಲ ಕೂಡಿಟ್ಟರೆ ಸಂಕಲನ | ಕಳೆದರೆ ಸುಲಭ ವ್ಯವಕಲನ’.
ಆತ್ಮಹಾಸ ಅತ್ಯಂತ ಆರೋಗ್ಯಕರ. ಅದು ವೀಣಾಅವರ ಹುಟ್ಟುಹಕ್ಕು.
ವೀಣಾ ಬನ್ನಂಜೆಯವರ ’ಪ್ರೀತಿ ಸಾಯದಿರಲಿ’ ಕೃತಿಯ ಸಾರ್ಥಪಂಕ್ತ್ಯುಲ್ಲೇಖದೊಂದಿಗೇ ನನ್ನ ಹಲುಬಾಟವನ್ನು ಮುಗಿಸುತ್ತೇನೆ.
ಪ್ರೀತಿ ದೇವರು ಅನ್ನುತ್ತಾರಲ್ಲ
ಅವನಂತೆ ಇದ್ದುಬಿಡೋಣ ಯಾರಿಗೂ ಕಾಣದೇ
ಗುರುತಿಲ್ಲದೆ ಕುರುಹಿಲ್ಲದೆ ನಿರಾಕಾರ ಬಯಲಿನ ಹಾಗೆ
ಒಂದು ದಿನ ಗೋಡೆ ಒಡೆದಾಗ ನಾವಿಲ್ಲದಿರಬಹುದು
ಪ್ರೀತಿಯಾದರೂ ಉಳಿಯಲಿ
–ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
ಹೇಳದಿದ್ದರೇ ಒಳ್ಳೆಯದು
ಕವಿತೆ ಬರೆಯುವುದು ಎಂದರೆ ಭಾವವಿರೇಚನ.
ಅನಿಸಿದ್ದನ್ನು ಕಟ್ಟಿಕೊಳ್ಳಲಾಗದ ವಮನ.
ಮೊದ ಮೊದಲು ಇತ್ತು ಕಾಗದ ಪೆನ್ನಿನ ಆಲಂಬನ.
ಈಗ ಅದು ಸುಲಭ ಸಾಧನ.
ಕೈಯೊಳಗೊಂದು ಫೋನು
ಆ ಕ್ಷಣಕ್ಕೆ ತುದಿಯೊತ್ತುವ ಬೆರಳು
ಎರಡಿದ್ದರಾಯಿತು ಹುಟ್ಟಿ ಬಿಡುತ್ತದೆ ಕವನ
ಹೊಳೆದದ್ದು ಹೊಳೆದ ಕ್ಷಣವೇ ಪ್ರತಿಫಲನ
ಇಲ್ಲಿ ಅಲ್ಲಿ ಎಂಬ ಭೇದವಿಲ್ಲ
ಎಲ್ಲೇ ಹುಟ್ಟಿದರೂ ಬಂದು ಬಿಡುತ್ತದೆ ನೆಲಕ್ಕೆ
ಹೀಗೆ ಬರೆದದ್ದು ಕೆಲವೊಮ್ಮೆ ಬಾಲಿಶ
ಹಲವುಬಾರಿ ಅವನ ವಶ
ಹುಟ್ಟಿದ್ದೆಲ್ಲ ಕೂಡಿಟ್ಟರೆ ಸಂಕಲನ
ಕಳೆದರೆ ಸುಲಭ ವ್ಯವಕಲನ
ಅಂಥದೊಂದು ನಿರಾಯಾಸ ಕವನ ಇಲ್ಲಿವೆ.
ಮೊದಲೆಲ್ಲ ಪತ್ರಿಕೆ ಇತ್ತು
ಒಳಿತು ಕೆಡುಕು ತಿಳಿಯುತ್ತಿತ್ತು
ಈಗ ನಮ್ಮದೇ ಸ್ನೇಹವಲಯ
ಎಲ್ಲರೂ ಎತ್ತಿ ಮುದ್ದಿಡುವವರೇ
ಬಿರುನುಡಿ ಹೇಳುವವರು ಕಡಿಮೆ
ಇಂಥ ದೋಷ ದೌರ್ಬಲ್ಯಗಳ ಸಂಕಲನ ಇದು
ಇಲ್ಲಿ ಒಳಿತು ಕೆಡುಕು ಎರಡೂ ಇವೆ
ಬದುಕೆಂದರೆ ಎರಡರ ಸಮ್ಮಿಲನ
ಇದನ್ನೂ ಹಾಗೇ ಸಹಿಸಿಕೊಳ್ಳಿ
ಈ ಪುಸ್ತಕವಾದದ್ದು ಗಣೇಶ ಸವಿತಾರ ಪ್ರೀತಿಯಿಂದ
ಬೇರೆಯವರ ಮಗುವನ್ನು ಎದೆಗಪ್ಪಿಕೊಳ್ಳಲು ದೊಡ್ಡ ತಪಸ್ಸು ಬೇಕು
ಅವರ ಆ ತಪಸ್ಸಿಗೆ ನಮನ
ಈ ಪುಸ್ತಕಕ್ಕೆ ಒಂದು ಸುಂದರ ಅರಿವೆ ತೊಡಿಸಿದವರು
ರಟ್ಟೀಹಳ್ಳಿ ರಾಘವಾಂಕುರರು.
ತನ್ನ ಮಗುವನ್ನೇ ಅಲಂಕರಿಸಿದಂತೆ ಅವರೂ ಆಸ್ಥೆಯಿಂದ
ಈ ಕೆಲಸ ಮಾಡಿದ್ದಾರೆ. ಅವರ ಪ್ರೀತಿಗೆ ನಮನ
ಈ ನನ್ನ ಕವನಗಳನ್ನು ಅದರ ಆಳ ವಿಸ್ತಾರಗಳಿಗೆ ಇಳಿದು
ಬಹಳ ವಿಶೇಷ ಮುನ್ನುಡಿ ಬರೆದ ನನ್ನ ಪ್ರಿಯಬಂಧು
ಶಂಕರ ನಾರಾಯಣ ಉಪಾಧ್ಯಾಯರಿಗೆ ಪೊಡಮಡುವೆ.
ನನ್ನದು ಬರಿಯ ಕವನ ಅವರ ಮಾತು ನಿಜಕಾವ್ಯ.
ಅವರಿಗೆ ಭೂಯೋಭೂಯೋ ನಮಾಮ್ಯಹಮ್
ಹೇಳಲಿಕ್ಕೆ ಏನೂ ಇಲ್ಲ
ಹೇಳದೇ ಇರುವುದು ಬಹಳ ಉಂಟು
ಅದು ಹಾಗೆಯೇ ಇರಲಿ
ಅದಕ್ಕೆ ನೀವು ಅನಿಮಿತ್ತ ಬಂಧುಗಳು
ಹೇಳದೇ ಇರುವುದನ್ನು ಹುಡುಕುತ್ತೀರಿ
ಆ ನಿಮ್ಮ ಪ್ರೀತಿಗೆ ನಮನ
–ವೀಣಾ ಬನ್ನಂಜೆ
Reviews
There are no reviews yet.