ಮುನ್ನುಡಿ
ಮಲ್ಲಿಕಾರ್ಜುನ ಹಿರೇಮಠರು ಈವರೆಗೆ ಪ್ರಕಟಿಸಿದ್ದು ಎರಡು ಕಥಾ ಸಂಕಲನಗಳನ್ನು ಮಾತ್ರ. ಆದರೆ ಈ ಎರಡು ಕೃತಿಗಳ ಮೂಲಕವೇ ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರು ಎಂದು ಮನ್ನಣೆ ಪಡೆದಿದ್ದಾರೆ. ಅವರ ಕತೆಗಳ ಶಕ್ತಿ ಇರುವುದು ಮನುಷ್ಯ ಜೀವಿಗಳ ಬಗ್ಗೆ ಇರುವ ಸಹಾನುಕಂಪ, ಸಮಾಜದ ಅನೇಕ ಲೋಕಗಳ ವಾಸ್ತವವಾದಿ ಗ್ರಹಿಕೆ ಹಾಗೂ ಸಾಮಾನ್ಯ ಬದುಕಿನ ವಿವರಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಸಂವೇದನೆ ಇವುಗಳಲ್ಲಿ.
ಮೊದಲ ಸಂಕಲನವಾದ ಅಮೀನಪುರದ ಸಂತೆಯಲ್ಲಿ ಕೆಲವು ಕತೆಗಳು ಬೆಳೆಯಬಹು ದಾಗಿದ್ದ ಕತೆಗಳ ಟಿಪ್ಪಣಿಗಳಂತೆ ಕಾಣುತ್ತವೆ. ಕತೆಗಾರರ ಆಶಯಗಳು ನಿಚ್ಚಳವಾಗಿ ಕಾಣುತ್ತವೆಯಾದರೂ ಅವು ಸಂಕೀರ್ಣವಾದ ಅನುಭವವನ್ನು ಕೊಡುವುದಿಲ್ಲ. ಪ್ರತಿಭಾವಂತ ಬರಹಗಾರನೊಬ್ಬನ ಸಾಮರ್ಥ್ಯದ ಕಲ್ಪನೆಯನ್ನು ನಮಗೆ ತರುತ್ತವೆಯಾದರೂ ಸಿದ್ಧಿಯ ಉದಾಹರಣೆಗಳಾಗಿ ಕಾಣುವುದಿಲ್ಲ. ಆದರೆ ಇದೇ ಸಂಕಲನದ ಅತ್ಯುತ್ತಮ ಕತೆಗಳು ಅಚ್ಚರಿ ಹುಟ್ಟಿಸುವ ಅನುಭವದ ಸಾಂದ್ರತೆ ಮತ್ತು ಓದುಗರ ಅಂತಃಕರಣವನ್ನು ಆಳವಾಗಿ ತಟ್ಟುವ ಗುಣಗಳಿಂದ ಗಮನ ಸೆಳೆಯುತ್ತವೆ. ಮಾವ’ ಇಂಥ ಕತೆಗಳಲ್ಲಿ ಒಂದು; ಕತೆಯ ಕೇಂದ್ರಪಾತ್ರವಾದ ಮಾವ ಒಬ್ಬ ವಿಶಿಷ್ಟ ವ್ಯಕ್ತಿ. ತನ್ನ ಪೆದ್ದುತನ, ವಿಶಿಷ್ಟವಾದ ಮಾತುಗಾರಿಕೆ, ನಡವಳಿಕೆಯಿಂದಾಗಿ ಎಲ್ಲರಿಗೂ ಬೇಕಾದವ. ನಿರೂಪಕಿಯೂ ಸೇರಿದಂತೆ ಎಲ್ಲರೂ ಅವನನ್ನು ಗೋಳು ಹುಯ್ದುಕೊಳ್ಳುವುದರಲ್ಲಿ ಖುಷಿಪಡುತ್ತಾರೆ. ಆದರೆ ಇದಾವುದರಿಂದಲೂ ವಿಚಲಿತನಾಗದ ಮಾವ ತನ್ನದೇ ರೀತಿಯಲ್ಲಿ ಇತರರಿಗೆ ಸಹಾಯಕನೂ ಆಗಬಲ್ಲ. ಅವನು ಒಂದು ಜೀವನ ಶೈಲಿಯ, ಒಂದು ಬಗೆಯ ಸಾಮುದಾಯಿಕ ಬದುಕಿನ ಅವಿಭಾಜ್ಯ ಅಂಗದಂತಿದ್ದಾನೆ. ಸಮಾಜ, ಕುಟುಂಬಗಳು ಬದಲಾಗುತ್ತಾ ಹೋದಂತೆ ಅವನು ಹಳೆಯ ಕಾಲದ ಪಳೆಯುಳಿಕೆಯಂತೆ ಕಾಣತೊಡಗುತ್ತಾನೆ. ಒಂದು ಕಾಲಕ್ಕೆ ಅವನು ಹೊತ್ತು ತರುತ್ತಿದ್ದ ಖುಷಿಗಾಗಿ ಕಾಯುತ್ತಿದ್ದ ಸಂಬಂಧಿಕರು ಅವನನ್ನು ಈಗ ತಮ್ಮ ಆಧುನಿಕ ಘನತೆಗೆ ಕುಂದು ತರುವವನನ್ನಾಗಿ ನೋಡತೊಡಗಿದ್ದಾರೆ. ಇದುವೇ ಕತೆಯ ಜೀವಾಳವಾಗಿದೆ. ಅಲ್ಲದೇ ಅದು ಹಿರೇಮಠರ ಒಟ್ಟು ಬರಹಗಳ ಮುಖ್ಯ ಕಾಳಜಿಯೂ ಆಗಿದೆ. ಬಹು ಸೂಕ್ಷ್ಮವಾಗಿ ಅವರು ಸಮಾಜದ ಸ್ಥಿತ್ಯಂತರಗಳನ್ನು ಗಮನಿಸುತ್ತಾರೆ. ಒಂದು ಕಡೆಗೆ ಈ ಬದಲಾವಣೆಯು ಅನಿವಾರ್ಯವಾಗಿದೆ ಆದರೆ ಇನ್ನೊಂದು ಕಡೆಗೆ ಮಾವನಂಥ ಅಪ್ಪಟ ಸಹಜ ಮನುಷ್ಯರಿಗೆ ಆಸ್ಪದವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಾವನ ನೆನಪುಗಳು ನಿರೂಪಕಿಯ ಬಾಲ್ಯದ ನೆನಪುಗಳಾಗಿವೆ. ಜನರ ಅಪಹಾಸ್ಯ ಮತ್ತು ಪ್ರೀತಿ ಇವೆರಡಕ್ಕೂ ಪಾತ್ರನಾಗಿದ್ದ ಮಾವ ಈಗ ಮುಜುಗರಕ್ಕೆ ಕಾರಣವಾಗುತ್ತಾನೆ.
ಮಾವ ಸದ್ಯದ ನನ್ನ ಜೀವನ ಸಂದರ್ಭದಾಗಂತೂ ಅಮೂಲ್ಯ ರತ್ನ ಆಗಿರುವ, ನನಗಂತೂ ಅವನ ನೆನಪೆಂದರೆ ಹಳ್ಳಿಯ ಹಸಿರು ಹೊಲವನ್ನು ನೋಡುತ್ತ ನಿಂತ್ಹಾಂಗ
ಬದುಕಿನಲ್ಲಿ ಮಾವನನ್ನು ಅರ್ಥಮಾಡಿಕೊಳ್ಳದ ಮಂದಿ, ನಗು, ತಮಾಷೆ, ಸಹಜತೆ ಒಲ್ಲದ ಈ ಗಂಭೀರ ಭವ್ಯ ಮನೆಯಲ್ಲಿ ನಾನು ಬಂಧಿ.
ಹೀಗೆ ವಿಕ್ಷಿಪ್ತ ವ್ಯಕ್ತಿಯೊಬ್ಬನ ಚಿತ್ರಣವಾಗಿ ಶುರುವಾಗುವ ಕತೆಯು ಹಳ್ಳಿಯಿಂದ ಪ್ಯಾಟಿಗೆ ವಲಸೆ ಬಂದ ಬದುಕಿನ ಮೇಲೆ ವಿಷಾದಪೂರ್ಣ ಟಿಪ್ಪಣಿಯಾಗುತ್ತದೆ. ಜೊತೆಗೆ ಈ ಹೊಸ ಬದುಕು ಜೀವಸ್ಪರ್ಶವನ್ನು ಕಳೆದುಕೊಂಡುದರ ಬಗ್ಗೆ ವಿಮರ್ಶೆಯೂ ಆಗುತ್ತದೆ.
ಇಂಥದೇ ಒಂದು ಎಳೆ ಲಕ್ಕವ್ವನ ಮಂದಿ’ ಕತೆಯಲ್ಲೂ ಇದೆ. ಕತೆಯ ಆರಂಭದಲ್ಲಿಯೇ ಲಕ್ಕವ್ವನ ಗುಡಿಯ ವರ್ಣನೆಯು ರೂಪಕಶಕ್ತಿಯನ್ನು ಪಡೆದುಕೊಳ್ಳುತ್ತದೆ. ಊರ ಹೊರಗೆ, ವಿಶಾಲವಾದ ಜಾಗದಲ್ಲಿರುವ ಈ ಗುಡಿಗೆ ಲಕ್ಕವ್ವನ ಮಂದಿ ಅಂದರೆ ಗುಳೇಕಾರರು, ಊರಿಂದ ಊರಿಗೆ ಕೆಲಸಕ್ಕಾಗಿ ಬರುವ ಕಸುಬುದಾರರು ಇವರೆಲ್ಲರು. ಊರಿನಲ್ಲಿ ಮಾರುತಿ ದೇವರ ಗುಡಿ, ಬಸವಣ್ಣನ ಗುಡಿ ಇವೆಲ್ಲ ಇವೆ. ಆದರೆ ಈ ಮಂದಿಗೆ ಅದು ಆಪ್ತವಾದ ಪರಿಸರವಲ್ಲ. ಏಕೆಂದರೆ ಇಲ್ಲಿ ಎಲ್ಲಾ ಜಾತಿ, ಕಸುಬಿನವರು ಇರುವಷ್ಟು ದಿನ ಒಟ್ಟಿಗೆ ಇರುವವರು. ಊರಿನ ಗುಡಿಗಳೊಳಗೆ ಮೊಳಗುವ ಶ್ಲೋಕಗಳು ಈ ಮಂದಿಗೆ ಲವಲೇಶವೂ ಅರ್ಥವಾಗದು ಎಂದು ನಿರೂಪಕ ಹೇಳುತ್ತಾರೆ. ಸೂಕ್ಷ್ಮವಾಗಿ ಮಿತವ್ಯಯದ ಭಾಷೆಯಲ್ಲಿ ಜಾತಿ ವ್ಯವಸ್ಥೆ, ಅದರ ಹೊರಗೆ ಅಂಚಿನಲ್ಲಿರುವವರ ಭಿನ್ನವಾದ ಜೀವನ ಕ್ರಮದ ಬಗ್ಗೆ ಲಕ್ಕವ್ವನ ಗುಡಿಯು ಒಂದು ರೂಪಕವಾಗುತ್ತದೆ.
ಮುಂದೆ ಕತೆಯಲ್ಲಿ ಲಕ್ಕವ್ವನ ಮಂದಿ ಕಷ್ಟದಲ್ಲಿರುವವರಿಗೆ ಅಂತಃಕರಣ ತೋರಿಸ ಬಲ್ಲರು, ಊರಿನ ಮಂದಿ ಅಲ್ಲ ಎನ್ನುವ ಸೂಚನೆಯೂ ಇದೆ. ಆದ್ದರಿಂದಲೇ ಒಡ್ಡರ ನಾಗವ್ವ ತನ್ನದೇ ಕಷ್ಟಗಳ ನಡುವೆ ಗಂಡ ಬಿಟ್ಟು ಓಡಿ ಹೋದ ಮೇಲೆ ತನ್ನ ಮಕ್ಕಳನ್ನು ಹೊತ್ತುಕೊಂಡು ಕಲಬುರ್ಗಿಗೆ ಹೊರಟ ಅಪರಿಚಿತಳ ಕುಟುಂಬಕ್ಕೆ ಆಸರೆಯಾಗಿ ನಿಲ್ಲುತ್ತಾಳೆ. ಅವಳ ಕಸುಬು ತನ್ನ ವರ್ತನೆಯ ಊರುಗಳಿಗೆ ಹೋಗಿ ಬೀಸೋಕಲ್ಲಿಗೆ ಹೊಳಿ ಹಾಕುವುದು’ ಆಗಿದೆ. ಈ ಸಾರಿ ರಸ್ತೆ ಬದಿಯಲ್ಲಿ ಇದ್ದ ಕುಟುಂಬವನ್ನು ಬಸ್ಸಿನಲ್ಲಿ ಕರೆದುಕೊಂಡು ಲಕ್ಕವ್ವನ ಗುಡಿಗೆ ಕರೆದುಕೊಂಡು ಬರುತ್ತಾಳೆ. ಅವಳ ನಂಬಿಕೆಯೆಂದರೆ ನಮ್ಮವ್ವ ಲಕ್ಕವ್ವ ಅದಾಳ ಎಲ್ಲರ್ನೂ ತನ್ನ ಹೊಟ್ಟ್ಯಾಗ ಹಾಕ್ಕೋಳ್ಳಾಕಿ.. ಅದು ನಿಜವೆನ್ನುವ ಹಾಗೆ ಎಲ್ಲಾ ಜಾತಿಯವರು ಸೇರಿ ಸಹಪಂಕ್ತಿ ಮಾಡುತ್ತಾರೆ. ಹೀಗೆ ಯಾವ ಆಡಂಬರವೂ ಇಲ್ಲದೆ ನಿಮ್ನ ವರ್ಗ ಜಾತಿಗಳ ಮನುಷ್ಯರಲ್ಲಿ ಇರುವ ಸಹಜವಾದ ಅಂತಃಕರಣವನ್ನು ಹಿರೇಮಠರು ಮುನ್ನೆಲೆಗೆ ತರುತ್ತಾರೆ. ಅವರ ಒಟ್ಟು ಬರಹದ ಚಲನೆಯೂ ಇದೇ ಆಗಿದೆ. ಹವನ’ ಕಾದಂಬರಿಯಲ್ಲಿ ಬಂಜಾರ ಸಮುದಾಯದ ನಿರೂಪಣೆಯು ಅಚ್ಚರಿ ಹುಟ್ಟಿಸುವಷ್ಟು authentic ಆಗಿದೆ. ಹಾವಳಿ’ ಕಾದಂಬರಿಯಲ್ಲಿ ಪ್ರಕ್ಷುಬ್ಧ ಕಾಲವೊಂದರ ಹಳ್ಳಿಗಳ ಬದುಕೇ ಮುಖ್ಯ ಪಾತ್ರವಾಗಿದೆ. ಅಲ್ಲಿಯೂ ಸಹಬಾಳ್ವೆ, ಸಾಮುದಾಯಿಕ ಜೀವನ, ಕರುಣೆ ಇವೇ ಮುಖ್ಯವಾಗಿವೆ. ಇವುಗಳಿಂದಾಗಿ ರಜಾಕಾರರ ಹಾವಳಿಯಲ್ಲಿಯೂ ಭಗ್ನಗೊಂಡ, ದುರಂತಗಳನ್ನೇ ಉಂಡ ಊರು ಮತ್ತೆ ತನ್ನನ್ನು ಕಟ್ಟಿಕೊಳ್ಳತೊಡಗುತ್ತದೆ. ಹಿರೇಮಠರಿಗೆ ಈ ಆಶಾವಾದದಲ್ಲಿ ನಂಬಿಕೆಯಿದೆ. ಹೀಗಾಗಿ ಅವರ ಬಹುಪಾಲು ಕತೆಗಳು ಆದರ್ಶಪರವಾದ ಬದುಕಿನ ಪರವಾದ ಮತ್ತು ಶುಭವನ್ನು ಬಯಸುವ ಸೂಚನೆಗಳೊಂದಿಗೆ ಮುಗಿಯುತ್ತವೆ. ಉದಾಹರಣೆಗೆ ತಯಾರಿ’ ಎನ್ನುವ ಕತೆಯಲ್ಲಿ ವಿಧವೆಯಾಗಿದ್ದ ಮಮತಾ ರವಿಯನ್ನು ಪ್ರೀತಿಸಿ, ಅದಕ್ಕಾಗಿ ಜಾತಿ, ಸಮಾಜ, ತನ್ನ ಕುಟುಂಬ ಇವುಗಳನ್ನು ಎದುರಿಸಿ ಹೊಸ ಜೀವನ ಆರಂಭಿಸುತ್ತಾಳೆ. ಆದರೆ ಕುಟುಂಬವೆನ್ನುವ ವ್ಯವಸ್ಥೆಯೊಳಗಿನ ಸ್ವಾರ್ಥ ಹಾಗೂ ಕ್ರೌರ್ಯಗಳಿಂದಾಗಿ ಜರ್ಜರಿತನಾಗಿ ಕುಡಿತಕ್ಕೆ ಶರಣಾಗಿದ್ದ ಗಂಡ ರವಿ ಅಪಘಾತವೊಂದರಲ್ಲಿ ಸಾಯುತ್ತಾನೆ. ರಂಡಿ’ಯನ್ನು ಮದುವೆಯಾಗಿದ್ದರಿಂದ ಈ ಸಾವು ಬಂದಿತು ಎನ್ನುವ ಜನರು ಮತ್ತು ಅವನ ಪಾಲಿಸಿ, ಮನೆ ಇವುಗಳನ್ನು ಅವಳಿಂದ ಕಿತ್ತುಕೊಳ್ಳಲು ಸನ್ನದ್ಧವಾಗಿರುವ ರವಿಯ ಕುಟುಂಬವು ತನ್ನನ್ನು ಬದುಕಲು ಬಿಡುವುದಿಲ್ಲ ಎನ್ನುವ ವಾಸ್ತವದ ಅರಿವು ಅವಳಿಗಿದೆ. ಜೊತೆಗೆ ಮಗುವಿನ ಜವಾಬ್ದಾರಿಯೂ ಇದೆ. ಹೀಗಾಗಿ ಕತೆಯಲ್ಲಿ ಮಮತಾ ತೀವ್ರ ಅಸಹಾಯಕತೆ ಯಿಂದ ತನಗಾಗಿ, ಮಗುವಿಗಾಗಿ ಬದುಕುವ ತಯಾರಿ’ಯ ಸಂಕಲ್ಪದ ಕಡೆಗೆ ಪಯಣಿಸುತ್ತಾಳೆ. ಹೀಗಾಗಿ ಕತೆಯ ಶೀರ್ಷಿಕೆಯು ಹೊಸದಾದ ಅರ್ಥವನ್ನೇ ಪಡೆದುಕೊಳ್ಳುತ್ತದೆ. ಒಂದು ಸಾಮಾನ್ಯ ಭಾವುಕ ಕತೆಯ ಚೌಕಟ್ಟಿರುವ ಈ ಕತೆಯಲ್ಲಿ ಹಿರೇಮಠರು ಅವಳ ಕತೆಯ ಮೂಲಕ ಕುಟುಂಬದ ಸಂಬಂಧಗಳ ಒಳಗೇ ಇರುವ ಕ್ರೌರ್ಯವನ್ನು ಸಾಂಪ್ರದಾಯಿಕತೆಯ ಬಲೆಯಲ್ಲಿ ಹೆಣ್ಣು ಪಡುವ ಕಷ್ಟಗಳನ್ನು ವ್ಯಾಖ್ಯಾನಿಸುತ್ತಾರೆ. ಹೀಗಾಗಿ ಮನಸ್ಸು ನಿರುಮ್ಮಳ ವಾಗಿ ಬೆಳಕು ಹರಿಯುವುದರೊಂದಿಗೆ ಕತೆ ಮುಕ್ತಾಯವಾಗುತ್ತದೆ.
ಅಮೀನಪುರದ ಸಂತೆ’ ಒಂದು ರೀತಿಯಲ್ಲಿ ಪ್ರೇಮಚಂದರ ಕಥಾ ಸಂಪ್ರದಾಯಕ್ಕೆ ಸೇರಿರುವಂತಿದೆ. ಹಳ್ಳಿಗಳ ಬಡತನ, ರೈತನ ಅಸಹಾಯಕತೆ ಇವು ಕತೆಯ ವಸ್ತುಗಳಾಗಿವೆ. ಈ ಮಾದರಿಯ ಇನ್ನೊಂದು ಕತೆ ಮಾತ್ರವಾಗುವ ಬದಲಾಗಿ ಇದು ಸಶಕ್ತವಾದ ಕತೆಯಾಗುವುದಕ್ಕೆ ಕಾರಣವೆಂದರೆ, ನಿರೂಪಣೆಯ ನೇಯ್ಗೆಯಲ್ಲಿರುವ ಗಟ್ಟಿಯಾದ ಪ್ರಾದೇಶಿಕತೆ. ಇದು ಕೇವಲ ಭಾಷೆಯ ಆವರಣಕ್ಕೆ ಸಂಬಂಧಿಸಿದ್ದಲ್ಲ. ಒಂದು ಪ್ರಾದೇಶಿಕ ಸಂಸ್ಕೃತಿ, ಅದರಲ್ಲೂ ಕೃಷಿಕೇಂದ್ರಿತ ಸಂಸ್ಕೃತಿಯ ಭೌತಿಕವಾದ ಸ್ಥಿತಿಗಳಿಂದ ಹುಟ್ಟಿಕೊಂಡ ನಂಬಿಕೆಗಳಿಗೂ ಸಂಬಂಧಿಸಿದೆ. ಇದರ ಭಾಗವಾಗಿರುವ ಒಂದು ಪುರಾಣ ಕತೆಯು ಈ ಕತೆಗೆ ಮುಖ್ಯವಾಗಿದೆ. ಶಿವನ ಗಣಗಳಲ್ಲಿ ಭೋಳೆ ಬಸವ ಭೂಮಿಯ ಭಾರವನ್ನು ಹೊತ್ತುಕೊಳ್ಳಲು ಒಪ್ಪಿ ಮೂಕ ಬಸವನಾಗಿ ಭೂಮಿಗೆ ಬರುತ್ತಾನೆ. ಹೀಗಾಗಿ ಮುದಿಯಾದ ಎತ್ತನ್ನು ಕಟುಕರಿಗೆ ಮಾರಲಾಗದು. ಅಮೀನಪುರದ ಸಂತೆ ನಡೆಯುತ್ತಿರುವುದು ಬರಗಾಲದ ನೆರಳಿನಲ್ಲಿ. ಏನೇ ಆದರೂ ಕಟುಕರಿಗೆ, ಕಸಾಯಿಖಾನೆಗೆ ಎತ್ತನ್ನು ಮಾರುವುದಿಲ್ಲ ಎಂದು ನಿರ್ಧಾರ ಮಾಡಿದ ಬಸಪ್ಪ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗಾಗಿ ಭಾವುಕತೆಯಲ್ಲಿ ಕಳೆದು ಹೋಗಬಹುದಾಗಿದ್ದ ಕತೆಯು ದಟ್ಟವಾದ ಅನುಭವವನ್ನು ಕೊಡುತ್ತದೆ. ಪ್ರೇಮಚಂದರ ಕತೆಯ ಪಾತ್ರವಾದ ಹೋರಿರಾಮನು ಕನ್ನಡದ ಕವಿ ಎಚ್.ಎಸ್.ಶಿವಪ್ರಕಾಶರ ಪದ್ಯದಲ್ಲಿ ಪ್ರತ್ಯಕ್ಷನಾಗಿ ಇಲ್ಲಿ ಹಿರೇಮಠರ ಕತೆಯಲ್ಲಿ ಬಸಪ್ಪನಾಗಿ ಮರುಜನ್ಮ ಪಡೆದಿದ್ದಾನೆ.
ಮೊಲೆವಾಲು ನಂಜಾಗಿ ಸಂಗ್ರಹವು ಕನ್ನಡದ ಕೆಲವು ಅತ್ಯುತ್ತಮ ಕತೆಗಳನ್ನು ಹೊಂದಿದೆ. ಇವುಗಳಲ್ಲಿ ಕೂಡ ಬರಹಗಾರರ ಮುಖ್ಯ ಕಾಳಜಿ ಬದಲಾವಣೆಗಳು ತರುವ ಮನುಷ್ಯ ದುರಂತಗಳೇ ಆಗಿವೆ. ಸಂಗ್ರಹದ ಕತೆಗಳನ್ನು ಒಟ್ಟಿಗೆ ಓದಿದರೆ ಗಂಭೀರವಾದ ಹಿರಿದಾದ ಅರ್ಥದಲ್ಲಿ ನೈತಿಕ ದೃಷ್ಟಿಕೋನದಿಂದ ಒಂದು ಸಮಾಜದ ಬದಲಾವಣೆಗಳ ಪರಿಣಾಮಗಳನ್ನು ಪರೀಕ್ಷಿಸುವ ಕೃತಿಗಳು ಇದಾಗಿದೆ. ಹಾಗಂತ ಮೊದಲಿದ್ದ ಸಮಾಜದ ಬಗೆಗಿನ ಭ್ರಾಮಕ ಕಲ್ಪನೆಗಳು ಇಲ್ಲಿಲ್ಲ. ಮುಖ್ಯವಾಗಿ ಜಮೀನ್ದಾರಿ ವ್ಯವಸ್ಥೆಯೊಳಗೆ ಶೋಷಣೆಯು ಹಲವು ರೂಪಗಳಲ್ಲಿ ನಿರಂತರವಾಗಿಯೇ ಇದ್ದದ್ದು. ಅದರೊಂದಿಗೆ ಜಾತಿ ವ್ಯವಸ್ಥೆ ಹಾಗೂ ಮನುಷ್ಯ ಸ್ವಭಾವಗಳು ಬೆರೆತುಕೊಂಡಾಗ ಮನುಷ್ಯರೇ ಸೃಷ್ಟಿಸುವ ನರಕಗಳು ಹುಟ್ಟಿಕೊಳ್ಳುತ್ತವೆ. ಬದಲಾವಣೆಗೆ ಇನ್ನೂ ಸಿದ್ಧವಾಗಿರದ, ಅದನ್ನು ತಾಳಿಕೊಳ್ಳಲು ಸಮರ್ಥವಾಗಿರದ ಸ್ಥಿತಿಯೊಳಗಿರುವ ವರ್ಗಗಳ ದುರಂತವು ಈ ಕತೆಗಳಲ್ಲಿ ಗಾಢವಾಗಿ ಬಿಂಬಿತವಾಗಿದೆ. ಒಂದು ಎರಡು ಬಾಳೆಲೆ ಹರಡು’ ಕತೆಯಲ್ಲಿ ಲೌಕಿಕ ವ್ಯವಹಾರಗಳಲ್ಲಿ ಮುಗ್ಧರಾಗಿದ್ದ ಮಾಸ್ತರರು ತಮ್ಮ ಅರಿವನ್ನು ಮೀರಿದ ಜಾಲವೊಂದರ ಬಲಿಪಶು ಆಗುತ್ತಾರೆ. ಅವರ ಊರಿನವನೇ ಆದ ಕಿಟ್ಟಪ್ಪ ತನ್ನಲ್ಲಿ ಇಟ್ಟ ದುಡ್ಡನ್ನು ದುಪ್ಪಟ್ಟು ಮಾಡುವ, ಎಲ್ಲರನ್ನೂ ಆಮಿಷಕ್ಕೆ ಎಳೆಯುವ ಕೆಲಸವನ್ನು ಆರಂಭಿಸಿದ್ದಾನೆ. ಈ ವ್ಯವಹಾರದ ವಾಸ್ತವವೇನು? ಅದು ಹೇಗೆ ಸಾಧ್ಯವಾಗುತ್ತದೆ? ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಅದರ ಆಕರ್ಷಣೆಯು ಎಲ್ಲರನ್ನೂ ಸೆಳೆಯುತ್ತದೆ. ಇಂಥ ವ್ಯವಹಾರವೇ ಬೇಡ ಎನ್ನುವ ಸಾಧು ಸ್ವಭಾವದ ಮಾಸ್ತರರೂ ತಮ್ಮ ಹೆಂಡತಿಯ ಉಪದೇಶ ಹಾಗೂ ಇನ್ನೂ ಮುಖ್ಯವಾಗಿ ಆ ಊರನ್ನೇ ಆವರಿಸಿಕೊಂಡ ಸಮೂಹ ಸನ್ನಿಯಿಂದಾಗಿ ದುಡ್ಡನ್ನು ಹೂಡಿ ಮೊದಲ ಪ್ರಯತ್ನದಲ್ಲಿ ದುಪ್ಪಟ್ಟು ಹಣ ಪಡೆದು ಮನೆ ಕಟ್ಟಿಸುವ ಬಗ್ಗೆ ಯೋಚಿಸುತ್ತಾರೆ. ಕತೆಯ ನಿಜವಾದ ಶಕ್ತಿಯಿರುವುದು ಮಧ್ಯಮ ವರ್ಗದ ಸುಸಂಸ್ಕೃತ ವ್ಯಕ್ತಿಗಳು ಕ್ರಮೇಣವಾಗಿ ದುಡ್ಡಿನ ಆಮಿಷಕ್ಕೆ ಬಲಿಯಾಗುವುದರ ಚಿತ್ರಣದಲ್ಲಿದೆ. ಹೀಗಾಗಿ ಕೇವಲ ಹಣದ ದುರ್ವ್ಯವಹಾರಗಳನ್ನು ಟೀಕಿಸುವುದರ ಬದಲಾಗಿ ನೈತಿಕತೆ, ನಂಬಿಕೆ ಇವುಗಳನ್ನು ಕ್ರಮೇಣವಾಗಿ ಕಳೆದುಕೊಂಡು ತಕ್ಷಣದ ಶ್ರೀಮಂತಿಕೆಯ ಮೋಹದಲ್ಲಿ ಬೀಳುವುದೇ ಕತೆಯ ವಸ್ತುವಾಗಿದೆ. ವಿಶೇಷವಾಗಿ ಈ ಹಣದ ಹಪಾಹಪಿಯಾಗಿ ಇಡೀ ಊರಿನ ಮಂದಿ ಸಮೂಹ ಸನ್ನಿಗೆ ಒಳಗಾಗುವುದರ ಚಿತ್ರಣವು ಪ್ರಬಲವಾಗಿ ಬಂದಿದೆ. ಇದರ ಹಿಂದಿನ ಕಾರಣಗಳನ್ನು ಕೆದಕುತ್ತಾ ಹೋದರೆ ಎಂದೂ ಮುಗಿಯದ ಬವಣೆಗಳಿಂದ ದಿಢೀರ್ ಮುಕ್ತಿ ದೊರೆತರೆ ಸಾಕು ಎನ್ನುವ ಮನಸ್ಥಿತಿಗೆ ಸಮಾಜದ ವ್ಯವಸ್ಥೆಯೇ ಕಾರಣವಾಗಿದೆ. ಕಿಟ್ಟಪ್ಪನ ಅನಿರೀಕ್ಷಿತ ಸಾವು ಮಾಸ್ತರರ ಜೀವನದಲ್ಲಿ ಬಿರುಗಾಳಿಯನ್ನು ತರುತ್ತದೆ. ಈ ಮೊದಲು ಅವರು ಪಟ್ಟಿದ್ದ ಹೊಯ್ದಾಟವು ಈಗ ಅವರ ಸಂಶಯವು ನಿಜವಾಗುವುದರೊಂದಿಗೆ ಹೊಸ ತಿರುವನ್ನು ಪಡೆಯುತ್ತದೆ.
ಅಕ್ಷರ ವಿದ್ಯೆಯ ಜೊತೆಗೆ ವಿದ್ಯಾರ್ಥಿಗಳ ಸನ್ನಡತೆಯ ಬಗ್ಗೆ ಕೂಡ ನಿಗಾ ವಹಿಸಿದ್ದರು. ಆದರೆ ಈಗೀಗ ಅವರಿಗೆ ಬೋಧನೆಯಲ್ಲಿ ಮನಸ್ಸೇ ಬರುತ್ತಿರಲಿಲ್ಲ. ಈ ಮಂಗ ದುಡ್ಡು ಬರಬೇಕಾದದ್ದು ಬರದೇ ಹೋದರೆ ಹ್ಯಾಗೆ ಅಂತ ಒಂದು ಕ್ಷಣ ಯೋಚನೆ ಬಂದು ತಬ್ಬಿಬ್ಬಾದರು. ಹಾಗಾಗದಿರಲಿ’ ಅಂತಾನೇ, ಈ ವ್ಯವಹಾರ ಎಷ್ಟು ಸಮಂಜಸ?’ ಅಂತ ಪ್ರಶ್ನಿಸ್ತಾ ಹೋದಂಗ ನಡುಗಿದರು.
ಕತೆಯ ಕೊನೆಯ ವ್ಯಂಗ್ಯವೆಂದರೆ ಮಾಸ್ತರರ ಶಿಷ್ಯ ಹಣದ ಆಮಿಷದಿಂದಾಗಿ ಕಿಟ್ಟಪ್ಪನ ಬಲೆಗೆ ಬಿದ್ದವರಲ್ಲಿ ಒಬ್ಬರಾಗಿರದಿದ್ದ ಮಾಸ್ತರರಿಗೆ ಪ್ರಶಸ್ತಿ ಕೊಡುವ ನಿರ್ಧಾರವಾಗಿದೆ ಎಂದು ತಿಳಿಸಲು ಬಂದಿದ್ದಾನೆ. ತಮ್ಮ ನಿಯತ್ತಿನ ಬದುಕನ್ನು ನಷ್ಟ ಮಾಡಿಕೊಂಡ ಮಾಸ್ತರರು ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದಾರೆ. ಈ ಕತೆಯ ಘಟನೆಗಳನ್ನು ಎಳೆದು, ಹಿಂಜಿ, sensationalize ಮಾಡುವುದು ಸುಲಭವಾಗಿತ್ತು. ಕಿಟ್ಟಪ್ಪ ಮತ್ತು ಅವನ ಮಧ್ಯವರ್ತಿಯಾದ ಪಾಟೀಲರನ್ನು ಖಳನಾಯಕರಾಗಿ ವರ್ಣಿಸುವುದೂ ಸುಲಭವಾಗಿತ್ತು. ಆದರೆ ಹಿರೇಮಠರ ಬರಹದ ಶಕ್ತಿ ಇರುವುದು ಅದರ low tone ಮತ್ತು understatement ಎಂದು ಕರೆಯುವ ಮಿತ ಭಾಷೆಯ ವಾಚಾಳಿಯಲ್ಲದ ಶೈಲಿ ಯಲ್ಲಿದೆ.
ಮೊಲೆವಾಲು ನಂಜಾಗಿ’ ಒಂದು ಕಾದಂಬರಿಯು ಕೊಡಬಹುದಾದ ಸಾಂದ್ರವಾದ, ಸಂಕೀರ್ಣವಾದ ಅನುಭವವನ್ನು ಕತೆಯ ಚೌಕಟ್ಟಿನಲ್ಲಿಯೇ ದೊರಕಿಸಿಕೊಡುತ್ತದೆ. ಆಲಮಟ್ಟಿ ಅಣೆಕಟ್ಟು ಎತ್ತರಿಸಿ, ಬಾಗಿಲುಕೋಟೆಯ ಅರ್ಧಭಾಗವೇ ಮುಳುಗುವುದರಲ್ಲಿದೆ. ಊರಿಗೆ ಜೀವನ ಸೆಲೆಯಾಗಿದ್ದ ಹಿರೀಹೊಳಿ ಈಗ ರಾಕ್ಷಸಿಯಾಗಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಮಣ್ಣ ಒಂದೇ ದಿನದಲ್ಲಿ ಮನೆ ಖಾಲಿ ಮಾಡಿ ದೂರದ ಸಂತ್ರಸ್ತರ ಕ್ಯಾಂಪಿಗೆ ಹೋಗಬೇಕಿದೆ. ಮಗ ಉದ್ಯೋಗ ಹುಡುಕುತ್ತಾ ಬೆಂಗಳೂರಿಗೆ ಹೋಗಬೇಕಾಗಿದೆ. ಇಲ್ಲಿಂದ ಆರಂಭವಾಗುವ ಕತೆಯು ಒಂದು ಪ್ರಾಂತದ ಚರಿತ್ರೆಯೇ ಆಗಿದೆ. ಅಲ್ಲದೆ ಅಭಿವೃದ್ಧಿ ಯೋಜನೆಗಳಿಂದ ಪಲ್ಲಟವಾಗುವ ಸಾಮಾನ್ಯರ ಬದುಕಿನ ದುರಂತಗಳ ಚಿತ್ರಣವೂ ಆಗಿದೆ. ನೆರೆಯವಳಾದ ಮಾಬವ್ವ ಹಾವು ಕಚ್ಚಿ ಸಾಯುತ್ತಾಳೆ. ಅಳಿಯ ರಾಮಣ್ಣನಿಂದ ದುಡ್ಡು ತೆಗೆದುಕೊಂಡವನು ವಾಪಸ್ಸು ಕೊಡುತ್ತಿಲ್ಲ. ಇಷ್ಟೆಲ್ಲ ಆದರೂ ವ್ಯಗ್ರನಾಗದೇ ಸಮಚಿತ್ತದಿಂದ ಚಿಂತಿಸುವ ರಾಮಣ್ಣನೇ ಈ ಕತೆಯ ಕೇಂದ್ರ ಪ್ರಜ್ಞೆ ಆಗಿದ್ದಾನೆ. ಮನೆಯ ಅಳಿದುಳಿದ ಸಾಮಾನುಗಳನ್ನು ಕ್ಯಾಂಪಿಗೆ ಸಾಗಿಸಲು ಟ್ರ್ಯಾಕ್ಟರ್ ಹುಡುಕುತ್ತಾ ಹೊರಟ ರಾಮಣ್ಣನಿಗೆ ಅವನ ಸ್ವಂತದ ಸಂಕಷ್ಟಗಳನ್ನು ಮೀರಿದ, ದೊಡ್ಡ ಭಿತ್ತಿಯ ಬವಣೆಗಳ ಚಿತ್ರಗಳು ತೆರೆದುಕೊಳ್ಳುತ್ತವೆ. ಮುಂಜಾವಿನ ಕನಸಿನಲ್ಲಿ ತೀರಿಹೋದ ಹೆಂಡತಿ ಬಂದು ಅಂಗವಿಕಲತೆಯುಳ್ಳ ಮಗನನ್ನು ಉಳಿಸಿಕೊಳ್ಳಬೇಕಿತ್ತು ಎಂದು ಹೇಳುತ್ತಾಳೆ. ಕತೆಯ ಕೊನೆಯ ಭಾಗವು ಉತ್ಕೃಷ್ಟ ಕಾವ್ಯದಂತಿದೆ. ಅಂಬೆಗಾಲು ಇಡುತ್ತಾ ಬರುವ ಬಾಲಕೃಷ್ಣನ ಕಾಣ್ಕೆಯ ಜೊತೆಗೆ ತನ್ನ ಮಗ ಹೊರಳಿ ಬರಲಿ ಎಂದು ರಾಮಣ್ಣ ಪ್ರಾರ್ಥಿಸುತ್ತಾನೆ.
ಅಣೆಕಟ್ಟು, ಇತರ ಅಭಿವೃದ್ಧಿ ಯೋಜನೆಗಳಿಂದಾಗಿ ನೆಲಕ್ಕೆ, ಪರಿಸರಕ್ಕೆ ಅಂಟಿಕೊಂಡ ಬದುಕು ಮುಳುಗಿಹೋಗುತ್ತಿದೆ. ಭಾರತವು ಈಗ ಇಂತಹ ‘ecological refugee’ ಗಳನ್ನು ಅಪಾರ ಸಂಖ್ಯೆಯಲ್ಲಿ ಹೊಂದಿದೆ. ಅವರಿಗೆ ಪರಿಹಾರ ಸಿಗಬಹುದು, ಆದರೆ ಬದುಕು ಮತ್ತೊಮ್ಮೆ ಸಿಗಲಾರದು. ನಾ.ಡಿಸೋಜಾರವರು ಈ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಕರ್ನಾಟಕವೂ ಸೇರಿದಂತೆ ಆಧುನಿಕ ಭಾರತದ ದುರಂತಮಯ ವಿದ್ಯಮಾನಗಳಲ್ಲಿ ಇದೊಂದು. ಅಭಿವೃದ್ಧಿಯೋ, ಅವಸಾನವೋ’ ಎಂದು ವೈಚಾರಿಕಲೋಕದಲ್ಲಿ ವಿವಾದಗಳು ನಡೆದಿವೆ. ಆದರೆ ಕಥಾನಕಗಳ ಮೂಲಕ ಈ ದುರಂತದ ಆಯಾಮಗಳನ್ನು ಶೋಧಿಸಿದ ಕೃತಿಗಳು ಕಡಿಮೆಯೇ ಎನ್ನಬಹುದು. ಈ ಕತೆಯ ಗಮನವು ಮಾನವೀಯ ದುರಂತಗಳ ಮೇಲಿದೆ. ಹೀಗಾಗಿ ನೇರವಾಗಿ ರಾಜಕೀಯದ ಪ್ರಸ್ತಾಪವು ಬಹು ಸಂಕ್ಷಿಪ್ತವಾಗಿ ಬಂದಿದೆ.
ಅವನತಿ’ ಕತೆಯ ನಾಯಕರಾದ ಪ್ರೊ. ಸುರೇಶ್ ಪಾಟೀಲರು ಹಿರೇಮಠರ ಕತೆಗಳಲ್ಲಿ ಬರುವ ಮುಗ್ಧರಲ್ಲಿ ಒಬ್ಬರಾಗಿದ್ದಾರೆ. ಅವರು ಕೆಲಸ ಮಾಡುತ್ತಿರುವ ಕಾಲೇಜಿನ ಗಂಡಸು ಅಧ್ಯಾಪಕರು ಕೇವಲ ಲೈಂಗಿಕ ಜೋಕ್‌ಗಳು, ಜಾತೀಯತೆ, ಆಡಳಿತ ವರ್ಗದ ಗುಲಾಮಗಿರಿ ಇದರಲ್ಲಿ ಮುಳುಗಿದ್ದಾರೆ. ಉದ್ಯೋಗದ ಖಾತ್ರಿ ಇಲ್ಲದೆ, ಹಲವು ತಿಂಗಳುಗಳಿಗೆ ಒಮ್ಮೆ ಬರುವ ಸಂಬಳದ ಬಗ್ಗೆ ಚಕಾರವೆತ್ತದೇ ಪ್ರಾಚಾರ್ಯರ ಚೇಲಾಗಳಾಗಿದ್ದಾರೆ. ಇವರುಗಳ ನಡುವೆ ಪಾಟೀಲರು ವಿಕ್ಷಿಪ್ತರಾಗಿ ಕಾಣುತ್ತಾರೆ. ಬೋಧನೆ, ಸಂಶೋಧನೆಯಲ್ಲಿ ಆಸಕ್ತಿ ಇದ್ದ ಅವರು ಅನ್ಯಾಯದ ವಿರುದ್ಧ ಪ್ರಾಮಾಣಿಕವಾಗಿ ಸಿಡಿದೇಳುವ ಸ್ವಭಾವದವರು. ಆ ಕಾರಣಕ್ಕಾಗಿ ಕಾಲೇಜಿನ ಪ್ರಾಚಾರ್ಯರು ಅವರ ಮೇಲೆ ಹಗೆ ಸಾಧಿಸುತ್ತಾರೆ. ಅಸಹಾಯಕರಾದ ಅವರು ರಾತ್ರೋರಾತ್ರಿ ಕೆಲಸ, ಊರು ಬಿಟ್ಟು ಹೋಗಬೇಕಾಗುತ್ತದೆ. ಅದು ಅವರ ಅವನತಿಯಲ್ಲ, ಖಾಸಗಿ ಶಿಕ್ಷಣ ಸಂಸ್ಥೆಗಳ ಮತ್ತು ಶಿಕ್ಷಕರ ಅವನತಿಯಾಗಿದೆ. ಅವರ ಸೋಲು ವ್ಯವಸ್ಥೆಯ ಸೋಲಾಗಿದೆ. ಅವರು ಉಗ್ರ ಸ್ವಭಾವದ ಕ್ರಾಂತಿಕಾರಿಯಲ್ಲ. ನ್ಯಾಯದ ಪರವಾಗಿ ನಾವು ನಿಲ್ಲಬೇಕು ಎನ್ನುವ ಸ್ವಭಾವದವರು. ಅಷ್ಟು ಮಾತ್ರವನ್ನೂ ಸಹಿಸದ ವ್ಯವಸ್ಥೆ ಅವರ ಬಲಿಯನ್ನು ತೆಗೆದುಕೊಳ್ಳುತ್ತದೆ. ಹಿರೇಮಠರು ಅವಶ್ಯವಿದ್ದಲ್ಲಿ satirist ಆಗಬಲ್ಲರು ಎನ್ನುವುದಕ್ಕೆ ಈ ಕತೆಯಲ್ಲಿ ಬರುವ ಶಿಕ್ಷಕರ ಫಾಲತೂ ಜೀವನದ ವರ್ಣನೆ ಸಾಕ್ಷಿಯಾಗಿದೆ.
ಒಂದು ಊರಿನ ವೃತ್ತಾಂತ’ ಕೂಡ ಕಾದಂಬರಿಗೆ ಯೋಗ್ಯವಾದ ವಸ್ತುವನ್ನು ಹೊಂದಿದೆ. ಊರಿನ ಇಬ್ಬರ ನಡುವಿನ ವೈಮನಸ್ಸು, ದ್ವೇಷವು ಊರನ್ನೇ ಬಲಿ ತೆಗೆದು ಕೊಳ್ಳುವುದರ ಕತೆ ಇದಾಗಿದೆ. ಶಾಮರಾವ್ ಮತ್ತು ನಿಂಗನಗೌಡ ಇವರ ನಡುವಿನ ದ್ವೇಷ ಮತ್ತು ಹಗೆತನದ ಸ್ಪರ್ಧೆಯ ಕತೆ. ಆದರೆ ಇದು ನಿಜವಾಗಿ ಒಂದು ಊರಿನ ಅವನತಿಯ ಕತೆಯಾಗಿದೆ. ಕನ್ನಡ ಕಾದಂಬರಿ ಪ್ರಪಂಚದಲ್ಲಿ ರಾವ್‌ಬಹದ್ದೂರರ ಗ್ರಾಮಾಯಣ’ವು ನಿರ್ಮಿಸಿದ ಮಾದರಿಯು ಅತ್ಯಂತ ಪ್ರಭಾವಶಾಲಿಯಾಗಿದೆ. ೧೯೫೭ರಲ್ಲಿ ಪ್ರಕಟವಾದ ಈ ಕಾದಂಬರಿ ಕನ್ನಡದ ವಾಸ್ತವವಾದಿ ಮಾರ್ಗದಲ್ಲಿ ಈ ಮೊದಲೇ ಬಂದಿದ್ದ ವಾಸ್ತವವಾದಿ ಕಾದಂಬರಿಗಳಲ್ಲಿ ಇದ್ದ ಮಾದರಿಯೊಂದಕ್ಕೆ ವಿಶೇಷವಾದ ಪ್ರಭೆಯನ್ನು ತಂದುಕೊಟ್ಟಿತು. ವಿಶೇಷವೆಂದರೆ ಈ ಮಾದರಿಯು ಹಳೆಯ ಸ್ಥಿತ ಸಮಾಜವೊಂದರ ವಿಘಟನೆ ಹಾಗೂ ಅವನತಿಯ ಮಾದರಿಯದಾಗಿದೆ. ಗ್ರಾಮಾಯಣ’ದಲ್ಲಿ ಧಾರ್ಮಿಕ ಸಂಸ್ಥೆಗಳು, ಬ್ರಿಟಿಷ್ ಆಡಳಿತ, ಜಮೀನ್ದಾರಿ ವ್ಯವಸ್ಥೆ ಇವುಗಳು ಈ ಅವನತಿಗೆ ಕಾರಣವಾಗಿವೆ. ಒಂದು ಊರಿನ ವೃತ್ತಾಂತ’ ಈ ಮಾದರಿಗೇ ಸೇರಿದೆ.
ಶ್ಯಾಮರಾಯನ ಲೈಂಗಿಕ ತೃಷೆಗೆ ಊರಿನ ಜನರು ಗೌರವಿಸುವ ಆಚಾರ್ಯರ ಹೆಂಡತಿ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಊರು ತೊರೆದ ಆಚಾರ್ಯರು ವರ್ಷಗಳ ನಂತರ ವಾಪಸ್ಸು ಬಂದು ಊರಿಗೆ ಮಾರ್ಗದರ್ಶಕರಾಗುತ್ತಾರೆ. ಶ್ಯಾಮರಾಯನ ಕಪಟಗಳಿಗೆ ಸವಾಲಾಗುತ್ತಾರೆ. ಶ್ಯಾಮರಾಯನಿಂದಾಗಿ ಅವರು ಕೊಲೆಯಾಗುತ್ತಾರೆ. ಕತೆಯ ಕೊನೆಗೆ ನಿರೂಪಕರು ಎತ್ತುವ ಪ್ರಶ್ನೆಗಳು ಮಾರ್ಮಿಕವಾಗಿವೆ. ಗೆಳೆಯನ ಅಜ್ಜ ಹೇಳಿದ ಊರಿನ ಕತೆಯು ಕೇವಲ ಒಂದು ಊರಿನ ವೃತ್ತಾಂತವಾಗಿದೆಯೆ? ಹಾಗಿದ್ದರೆ ನಾಲ್ವತ್ತು ವರ್ಷಗಳ ನಂತರ ಈ ಕತೆಯನ್ನು ಅವರು ಹೇಳುವುದು ಇವರು ಕೇಳುವುದು ಏಕೆ? ಅಥವಾ ಕತೆಯನ್ನು ಹೇಳಿದ ಅಜ್ಜ ಸಮಾರೋಪದ ರೀತಿಯಲ್ಲಿ ಹೇಳುವ ಹಾಗೆ ಶ್ಯಾಮರಾಯನ ನೆರಳೂ, ಆಚಾರ್ಯರ ದಿವ್ಯವಾದ ನೆನಪು ಇವೆರಡೂ ಈ ಊರಿನಲ್ಲಿ ಈಗಲೂ ಇವೆಯಲ್ಲವೆ? ಹಾಗಾಗಿ ಇದು ಎಲ್ಲಾ ಊರುಗಳ ವೃತ್ತಾಂತವೇ ಅಲ್ಲವೆ?
ಈ ಸಂಕಲನದ ಮಾಗಿ’ ಕನ್ನಡದ ಶ್ರೇಷ್ಠ ಕತೆಗಳಲ್ಲಿ ಒಂದಾಗಿದೆ. ನಿವೃತ್ತರಾಗಿ ಕುಟುಂಬದ ಜಂಜಡಗಳಲ್ಲಿ ಕಳೆದುಹೋದ ಇಬ್ಬರು ಅರಣ್ಯ ಅಧಿಕಾರಿಯಾಗಿರುವ ಸ್ನೇಹಿತನ ಅತಿಥಿಗಳಾಗಿ ಉತ್ತರ ಕನ್ನಡದ ಕಾಡಿಗೆ ಬರುತ್ತಾರೆ. ಹರಟೆ, ಡ್ರಿಂಕ್ಸುಗಳಿಂದ ಆರಂಭವಾಗುವ ಈ ಪಯಣದ ಕತೆ ಅತ್ಯಂತ ಸಂಕೀರ್ಣವಾದ ಹತ್ತಾರು ಎಳೆಗಳನ್ನು ಹೊಂದಿದೆ. ನಿಸರ್ಗದ ಸನ್ನಿಧಿಯಲ್ಲಿ ತಮ್ಮ ಅಂತರಂಗದೊಂದಿಗೆ ತಾವೇ ಎದುರಾಗುವ ಅವರ ಒಳಗಿನ ಅನೇಕ ವಿರೋಧಾತ್ಮಕ ಗೊಂದಲಗಳು ಹೊರಬರುತ್ತವೆ. ನೆನಪುಗಳ ಮೂಲಕ ಇಬ್ಬರೂ ಪಾಪ ನಿವೇದನೆಯಲ್ಲಿ (confession) ತೊಡಗುತ್ತಾರೆ. ತಮ್ಮ ಬದುಕಿನ ಖಾನೇಸುಮಾರಿ ಮಾಡಿಕೊಂಡು ಬದುಕಿನ ಅರ್ಥವಾದರೂ ಏನು ಎನ್ನುವ ಪ್ರಶ್ನೆ ಕೇಳಿಕೊಳ್ಳುತ್ತಾರೆ. ಒಂದು ರೀತಿಯಲ್ಲಿ ಪೊರೆ ಕಳಚಿಕೊಂಡು ಹೊಸ ಬದುಕಿಗೆ ಸ್ವಲ್ಪವಾದರೂ ಸಿದ್ಧವಾಗುತ್ತಾರೆ. ಮಾಗಿ’ಯ ಋತು ಮಾಗುವ ಕ್ರಿಯೆಗಳ ಬಗ್ಗೆ ಇದೆ. ಸಹಜವಾಗಿ, ಮರಗಿಡಗಳೊಂದಿಗೆ ಬದುಕುವ ಭಟ್ಟರು ಮತ್ತು ಬಾಬು ಇವರಿಗೆ ತಮ್ಮ ಕೃತ್ರಿಮ ಪೊಳ್ಳು ಜೀವನವನ್ನು ಅರ್ಥಮಾಡಿಕೊಳ್ಳಲು ಬೇಕಾದ ಮಾನದಂಡವಾಗುತ್ತಾರೆ. ಹೀಗೆ ಕ್ರಮೇಣವಾಗಿ ಈ ಕತೆಯು ಬದುಕಿನ ಬಗ್ಗೆ ದೀರ್ಘವಾದ ಗಂಭೀರ ಚಿಂತನೆಯಾಗಿ ಪರಿವರ್ತನೆಯಾಗುತ್ತದೆ. ಆದರೆ ಸಂಕೇತ, ಪ್ರಯೋಗಶೀಲ ನಿರೂಪಣೆ ಇವುಗಳ ಅವಶ್ಯಕತೆ ಇಲ್ಲದಂತೆ ಈ ಗಂಭೀರವಾದ ತಾತ್ವಿಕ ಚಿಂತನೆಯು ಶಕ್ತಿಶಾಲಿ ಕತೆಯಾಗುವುದು ಮುಖ್ಯವಾಗಿದೆ.
ಹಿರೇಮಠರು ಇನ್ನೂ ಹೆಚ್ಚು ಬರೆಯಬೇಕಿತ್ತು ಎನಿಸುತ್ತದೆ. ಬಂಡಾಯದ ವಾಚಾಳಿತನ ಇಲ್ಲದೆ, ನವ್ಯದ ಆತ್ಮಲೋಲುಪತೆ ಇಲ್ಲದೆ ಸಮಾಜದ ವಿವಿಧ ಲೋಕಗಳನ್ನು ಪ್ರವೇಶಿಸಿ ಸೂಕ್ಷ್ಮವಾಗಿ ಬರೆಯುವ ಅವರ ಕತೆಗಳು ಅರ್ಥಪೂರ್ಣವಾದ ಕೊಡುಗೆಗಳಾಗಿವೆ.
–ರಾಜೇಂದ್ರ ಚೆನ್ನಿ
Reviews
There are no reviews yet.