ಮುನ್ನುಡಿ
’ಜಗದಗಲ ಮಿಗಿಲಾದ ನಿಮ್ಮಗಲ’ ಅನ್ನುವ ಹೋಲಿಕೆಯನ್ನು ಸ್ತ್ರೀವಾದಕ್ಕೂ ಅನ್ವಯಿಸಬಹುದೆನಿಸುತ್ತದೆ. ಬ್ರಹ್ಮಾಂಡದ ಯಾವುದೇ ವಿಷಯ ಸ್ತ್ರೀವಾದ ಪರಿಧಿಗೆ ಹರಡಿಕೊಳ್ಳುತ್ತದೆ. ಅಂದರೆ ಒಂದು ವಿಷಯದ ಆಳ ವಿಸ್ತಾರದಲ್ಲಿ ಸ್ತ್ರೀವಾದಿ ಚಿಂತನೆಯ ಸುಳಿವುಗಳನ್ನು ಕಂಡು ಕೊಳ್ಳಬಹುದು. ಬೇರೆ ಮಾತಿನಲ್ಲಿ ಹೇಳುವುದಾದರೆ ಸ್ತ್ರೀವಾದ ಜಗತ್ತಿನ ಯಾವುದೇ ವಿಷಯಕ್ಕೆ ವಿಸ್ತರಿಸಿಕೊಳ್ಳುತ್ತದೆ. ಚಿಂತನೆಯ ಕಿಡಿಯಾಗಿ ಹುಟ್ಟಿಕೊಂಡು ಹೋರಾಟದ ರೆಕ್ಕೆಗಳನ್ನು ಕಟ್ಟಿಕೊಂಡು ಜ್ಞಾನ ಶಾಖೆಯ ಶಿಸ್ತಾಗಿ ಹೊರಹೊಮ್ಮಿರುವ ಸ್ತ್ರೀವಾದ ಇಂದಿನ ಸಮಾಜದ ಮುಖ್ಯವಾಹಿನಿ ಅಲೆಯಾಗಿದೆ.
ಮಾನವ ಸಮಾಜ ಮತ್ತು ಭಾರತೀಯ ಸಮಾಜ ವೈವಿಧ್ಯ ಹಾಗೂ ಬಹುತ್ವದಿಂದ ಕೂಡಿದೆಯೋ ಅಷ್ಟೇ, ಹಾಗೆಯೇ ವೈವಿಧ್ಯತೆಯಿಂದ ಸ್ತ್ರೀವಾದವು ಕೂಡ ರೂಪುಗೊಂಡಿದೆ. ಸಮಾಜದ ಯಾವ ವಿಷಯವನ್ನು ಸ್ತ್ರೀವಾದಿ ಹಿನ್ನೆಲೆಯಲ್ಲಿ ನೋಡಬಹುದು, ಪರಿಶೀಲಿಸಿ ಮತ್ತು ವಿಶ್ಲೇಷಿಸಬಹುದು. ಈ ಪ್ರಯತ್ನವನ್ನು ಡಾ. ಈ. ಯರ್ರಿಸ್ವಾಮಿ ಅವರು ತಮ್ಮ ಪುಸ್ತಕದಲ್ಲಿ ಮಾಡಿದ್ದಾರೆ. ಸ್ತ್ರೀವಾದದ ದೃಷ್ಟಿಕೋನವನ್ನಿಟ್ಟುಕೊಂಡು ಅಭಿವೃದ್ಧಿ, ಜಾತಿ, ವಲಸೆ, ಮಹಿಳಾ ಹಕ್ಕುಗಳು, ಶಿಕ್ಷಣ, ಕೌಟುಂಬಿಕ ಹಿಂಸೆ ಮುಂತಾದ ವಿಷಯಗಳನ್ನು ಚರ್ಚಿಸಿದ್ದಾರೆ.
ಉದಾರವಾದಿ, ತೀವ್ರವಾದ, ಮಾರ್ಕ್ಸ್‌ವಾದ ಹಾಗೂ ಸಮಾಜವಾದದ ಸೈದ್ಧಾಂತಿಕ ಅಂಶ ಗಳನ್ನಿಟ್ಟುಕೊಂಡು ಬೆಳೆದ ಸ್ತ್ರೀವಾದಿ ಸಿದ್ಧಾಂತ ಕ್ರಮೇಣ ವಿಷಯಾಧಾರಿತವಾಗಿ ಮನೋ ವಿಜ್ಞಾನ, ಪರಿಸರ, ಜನಾಂಗೀಯ, ದಲಿತ, ಸಾಂಸ್ಕೃತಿಕ ಸ್ತ್ರೀವಾದಕ್ಕೆ ವಿಸ್ತರಿಸಿಕೊಂಡು ಕೊನೆಗೆ ಎಷ್ಟು ಮಹಿಳೆಯರಿದ್ದಾರೋ ಎಷ್ಟು ಗುಂಪುಗಳ ಮಹಿಳೆಯರಿದ್ದಾರೋ ಅಷ್ಟು ಪ್ರಕಾರದ ಸ್ತ್ರೀವಾದಗಳಿವೆ ಎಂದು ಹೇಳುವವರೆಗೆ ಆಧುನಿಕೋತ್ತರ ಸ್ತ್ರೀವಾದವು ತನ್ನ ರೆಂಬೆಗಳನ್ನು ಬೆಳೆಸುತ್ತದೆ.
ಮಾನವೀಯತೆ, ಎಲ್ಲಾ ಸ್ತರದ ಸಮಾನತೆ, ಪ್ರೀತಿ, ಪರಸ್ಪರ ಗೌರವ ಶಾಂತಿ, ನಿಸ್ವಾರ್ಥದ ಮೌಲ್ಯಗಳಾದ ಸ್ತ್ರೀವಾದವು ಕೂಡಿರಬೇಕೆಂದು ಹೇಳುವ ಅಮೇರಿಕಾದ ಸ್ತ್ರೀವಾದಿ ಬೆಲ್‌ಹುಕ್ಸ್ ಅದಕ್ಕೆ ಆಧ್ಯಾತ್ಮಿಕತೆ ಮತ್ತು ದಾರ್ಶನಿಕತೆಯ ಸ್ಪರ್ಶವನ್ನು ನೀಡಿರುವುದು ಸ್ತ್ರೀವಾದದ ಜಗದಗಲದ ವ್ಯಾಪ್ತಿಯನ್ನು ಸೂಚಿಸುತ್ತದೆ. ಮುಂದೆ ಆಧ್ಯಾತ್ಮಿಕ ಸ್ತ್ರೀವಾದ, ದಾರ್ಶನಿಕ ಸ್ತ್ರೀವಾದ ಶಾಖೆಗಳು ಬೆಳೆಯಬಹುದು. ಸಾಮಾಜಿಕ ಬದಲಾವಣೆಯಾದಂತೆ, ಹೊಸ ಹೊಸ ವಿಷಯ, ಸಮಸ್ಯೆಗಳು ಹುಟ್ಟಿಕೊಂಡಂತೆ ವಿವಿಧ ಪ್ರಕಾರದ ಸ್ತ್ರೀವಾದಗಳು ಹುಟ್ಟಿಕೊಳ್ಳುತ್ತವೆ. ಇಂದು ಸ್ತ್ರೀವಾದ ಚಿಂತನೆ ಹೋರಾಟದ ಜೊತೆಗೆ ಮೌಲ್ಯವಾಗಿ ಬೆಳೆಯುತ್ತಿದೆ. ಅದು ಜನರ ಮನಸ್ಸಿನಲ್ಲಿ ಸಮಾಜದ ರಚನೆಯಲ್ಲಿ ಅಂತರ್ಗತವಾಗಬೇಕಿದೆ. ಆಗಲೇ ಮಾನವೀಯತೆ, ಸಮಾನತೆ, ಶಾಂತಿಯಿಂದ ಕೂಡಿದ ಸಮಾಜವನ್ನು ಕಟ್ಟಲು ಸಾಧ್ಯ. ಸದ್ಯದ ಯುದ್ಧ, ದೌರ್ಜನ್ಯ, ಆರ್ಥಿಕ ಅಸಮಾನತೆ, ಭ್ರಷ್ಟ ರಾಜಕಾರಣ, ಮತಾಂಧತೆ, ಕೋಮುವಾದದಿಂದ ಜರ್ಜರಿತ ವಾಗುತ್ತಿರುವ ಸಮಾಜವನ್ನು ಗಮನಿಸಿದರೆ ಸ್ತ್ರೀವಾದದ ಮೌಲ್ಯವನ್ನು ಹೆಚ್ಚು ಹೆಚ್ಚು ಹರಡಬೇಕಿರುವ ಅವಶ್ಯಕತೆಯಿದೆ.
೧೯೮೦ರ ದಶಕದಿಂದ ಅಭಿವೃದ್ಧಿಯನ್ನು ಲಿಂಗತ್ವಗೊಳಿಸುವ ಪ್ರಕ್ರಿಯೆ ಪ್ರಾರಂಭವಾದರೂ ಅದು ಇನ್ನು ಸಂಪೂರ್ಣವಾಗಿ ಕೈಗೂಡಿಲ್ಲ. ಅನೇಕ ಪರಿಕ್ರಮ ಅಂದರೆ ಕಲ್ಯಾಣ, ಬಡತನ ನಿರ್ಮೂಲನ, ಸಾಮಾಜಿಕ ನ್ಯಾಯ, ಶಿಕ್ಷಣ, ದಕ್ಷತೆ ಹಾಗೂ ಸಶಕ್ತೀಕರಣ ಪರಿಕ್ರಮಗಳ ಮೂಲಕ ಲಿಂಗತ್ವ ಕಾಳಜಿಗಳನ್ನು ಅಭಿವೃದ್ಧಿ ಚಿಂತನೆ, ಕಾರ್ಯನೀತಿ ಯೋಜನೆ ಹಾಗೂ ಕಾರ್ಯಕ್ರಮ ಗಳಲ್ಲಿ ಅಳವಡಿಸಿಕೊಳ್ಳಲಾಯಿತು. ಉದಾರವಾದ, ತೀವ್ರವಾದ ಹಾಗೂ ಸಮಾಜವಾದದ ತಾತ್ವಿಕ ನೆಲೆಯಲ್ಲಿ ಅಭಿವೃದ್ಧಿ ಪ್ರಕ್ರಿಯೆಯೊಳಗೆ ಲಿಂಗತ್ವದ ಘಟಕವನ್ನು ಸೇರಿಸಲಾಯಿತು. ಮಹಿಳೆಯರನ್ನು ಫಲಾನುಭವಿಗಳನ್ನಾಗಿ ನೋಡುತ್ತಿದ್ದ ದೃಷ್ಟಿಕೋನ ಪಾಲುದಾರರನ್ನಾಗಿ, ಸಹಭಾಗಿಗಳನ್ನಾಗಿ ನೋಡಬೇಕೆನ್ನುವುದಕ್ಕೆ ಪಲ್ಲಟವಾಯಿತು. ’ಅಭಿವೃದ್ಧಿಯಲ್ಲಿ ಮಹಿಳೆಯರು’, ’ಮಹಿಳೆಯರು ಮತ್ತು ಅಭಿವೃದ್ಧಿ’, ’ಲಿಂಗತ್ವ ಮತ್ತು ಅಭಿವೃದ್ಧಿ’ ಎಂಬ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಕಾರ್ಯಗಳು ಖಂಡಿತಾ ಮಹಿಳೆಯರ ಅಭಿವೃದ್ಧಿಗೆ ಕಾರಣವಾಗಿವೆ. ಆದರೆ ನಿರೀಕ್ಷೆ ಮಾಡಿದಷ್ಟು, ಆಗಬೇಕಾದಷ್ಟು ಮಹಿಳಾ ಅಭಿವೃದ್ಧಿ ಆಗದಿರುವುದು ನಿಜ. ’ಮಹಿಳೆಯರಿಗಾಗಿ ಅಭಿವೃದ್ಧಿ’ ಅನ್ನುವ ಚಿಂತನಾಲಹರಿ ’ಅಭಿವೃದ್ಧಿಗೆ ಮಹಿಳೆಯರು’ ಎನ್ನುವ ಚಿಂತನೆಗೆ ಬದಲಾಗಿದ್ದು ’ಮಹಿಳಾಭಿವೃದ್ಧಿ’ ಅನ್ನುವುದು ’ಮಹಿಳಾ ಸಶಕ್ತೀಕರಣ’ ಪರಿಕಲ್ಪನೆಯಾಗಿ ಪರಿವರ್ತನೆಗೊಂಡಿತು. ಅಂದರೆ ದೇಶದ ಅಭಿವೃದ್ಧಿಗೋಸ್ಕರ ಮಹಿಳೆಯರನ್ನು ಅಭಿವೃದ್ಧಿಗೊಳಿಸಬೇಕೆಂಬ ಆಲೋಚನಾ ಕ್ರಮವಿತ್ತು. ಈಗಾಗಲೇ ಮಹಿಳೆಯರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಸಲ್ಲಿಸುತ್ತಿದ್ದಾರೆ, ಮಹಿಳೆಯರಿಗೋಸ್ಕರ ಮಹಿಳೆಯರನ್ನು ಅಭಿವೃದ್ಧಿಗೊಳಿಸಿದರೆ ಅವರು ಮತ್ತಷ್ಟು ಸಶಕ್ತರಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವಂತಾಗುತ್ತಾರೆ ಎಂಬ ಚಿಂತನೆ ಮುನ್ನಲೆಗೆ ಬರುತ್ತದೆ. ಇಷ್ಟೆಲ್ಲಾ ಪ್ರಯತ್ನಗಳು ನಡೆಯುತ್ತಿದ್ದರೂ ಲಿಂಗತ್ವ ಅಂತರ ಹೆಚ್ಚಾಗುತ್ತಿರುವುದು, ಮಹಿಳೆಯರ ಮೇಲಿನ ದೌರ್ಜನ್ಯ ಏರುತ್ತಿರುವುದು, ಬಡತನದ ಸ್ತ್ರೀಕರಣ ನಡೆಯುತ್ತಿರುವುದು ಅಭಿವೃದ್ಧಿಯು ಇನ್ನು ಲಿಂಗತ್ವಕರಣಗೊಂಡಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಪರಿಸರವನ್ನು ಸಂರಕ್ಷಿಸಿಕೊಂಡು ಕೈಗೊಳ್ಳುವ ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆ ಜನಪ್ರಿಯ ವಾಗುತ್ತಿದ್ದರೂ ವಾಸ್ತವದಲ್ಲಿ ಪ್ರಕೃತಿಯನ್ನು ಅತಿಯಾಗಿ ದುರುಪಯೋಗ ಮಾಡಿಕೊಂಡು, ಪರಿಸರ ಮಾಲಿನ್ಯ ಮಾಡಿಕೊಂಡು ಸಾಧಿಸುತ್ತಿರುವ ಅಭಿವೃದ್ಧಿಯು ಬಡಜನರ, ಅಂಚಿಗೆ ತಳಲ್ಪಟ್ಟ ಜನರ ಜೀವನವನ್ನು ಮತ್ತಷ್ಟು ದುಸ್ತರಗೊಳಿಸುತ್ತಿರುವುದು ವಿಷಾದನೀಯ. ಬಡಜನರಲ್ಲಿ ಅಂಚಿಗೆ ತಳ್ಳಲ್ಪಟ್ಟವರಲ್ಲಿ ಬಹುಸಂಖ್ಯಾತರು ಮಹಿಳೆಯರೇ ಆಗಿರುವುದರಿಂದ ಮತ್ತಷ್ಟು ಆತಂಕ ಹೆಚ್ಚಾಗುತ್ತದೆ. ಪರಿಸರ ಸ್ನೇಹಿ, ಎಲ್ಲಾ ಗುಂಪಿನ ಜನರನ್ನು ಒಳಗೊಳ್ಳುವ, ಪ್ರಜಾತಂತ್ರ ಮತ್ತು ಸಂವಿಧಾನದ ಆಶಯಗಳನ್ನು ಆಧರಿಸಿ ಅಭಿವೃದ್ಧಿಯನ್ನು ರೂಪಿಸಿದರೆ ಮಾತ್ರ ಮಹಿಳಾ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿ ಸಾಕಾರಗೊಳ್ಳುತ್ತದೆ.
ಭಾರತೀಯ ಸಮಾಜದ ವಿಶಿಷ್ಟ ಲಕ್ಷಣವಾಗಿರುವ ಶ್ರೇಣೀಕೃತ ಜಾತಿ ವ್ಯವಸ್ಥೆಯು ಪುರುಷ ಪ್ರಧಾನತೆ ಮತ್ತು ಬಂಡವಾಳಶಾಹಿಯೊಡಗೂಡಿ ಮಹಿಳೆಯರ ಸ್ಥಾನವನ್ನು ಎರಡನೇ ಸ್ಥಾನದಲ್ಲಿರಿಸುತ್ತದೆ. ಸ್ವತಂತ್ರ ಪೂರ್ವದಲ್ಲಿದ್ದ ಬಾಲ್ಯವಿವಾಹ, ವಿಧವಾ ಪದ್ಧತಿ, ಸತಿ ಸಹಗಮನ ದಂತಹ ಸಾಮಾಜಿಕ ಪಿಡುಗುಗಳು ಮಹಿಳೆಯರ ಜೀವನವನ್ನು ದುಸ್ತರವಾಗಿಸುತ್ತಿದ್ದವು. ಅವುಗಳಿಂದ ಆಚೆ ಬಂದು ಸ್ವಾತಂತ್ರ್ಯಾ ನಂತರ ಸಂವಿಧಾನದ ಆಶಯದಡಿ ಲಿಂಗತ್ವ ಸಮಾನತೆಯೆಡೆಗೆ ನಡೆಯುತ್ತಿದ್ದರೂ ಜಾತಿ ವ್ಯವಸ್ಥೆಯು ಕಬಂಧಬಾಹುವಿನಿಂದ ಬಿಡುಗಡೆಯಾಗದೆ ಜಾತಿ ಆಧರಿಸಿದ ದೌರ್ಜನ್ಯ, ಅನಕ್ಷರತೆ, ಶಿಕ್ಷಣದ ಹಿನ್ನೆಡೆ, ನಿರುದ್ಯೋಗ, ಕೋಮು ವಾತಾವರಣ, ಜಾಗತೀಕರಣದ ಕಾರಣದಿಂದ ಉಂಟಾದ ಅತಂತ್ರ, ಅನಿಶ್ಚಿತ ಆರ್ಥಿಕ ಪರಿಸ್ಥಿತಿ, ಮಾರುಕಟ್ಟೆ ವಿಸ್ತರಣೆಯ ಫಲವಾಗಿ ಬೆಳೆಯುತ್ತಿರುವ ಕೊಳ್ಳುಬಾಕ ಸಂಸ್ಕೃತಿ, ಬಡವರು ಶ್ರೀಮಂತರ ನಡುವೆ ಅಂತರ ಹೆಚ್ಚಾಗುತ್ತಿರುವುದು ಮಧ್ಯಮ ಮತ್ತು ಬಡ ಮಹಿಳೆಯರ ಪರಿಸ್ಥಿತಿಯನ್ನು ದುರ್ಬಲಗೊಳಿಸುತ್ತಿವೆ. ಕೋವಿಡ್ ನಂತರದಲ್ಲಿ ಮಹಿಳಾ ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆ, ಸುರಕ್ಷಿತ ವಾತಾವರಣದ ಕೊರತೆಗಳು ಅವರನ್ನು ಮತ್ತಷ್ಟು ಅಸಹಾಯಕ ಸ್ಥಿತಿಗೆ ತಳ್ಳಿ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅವಲಂಬಿಸಬೇಕಾಗಿರುವ ಪರಿಸ್ಥಿತಿ, ಇನ್ನೂ ಫಲಾನುಭವಿಗಳನ್ನಾಗಿ ನೋಡುವ ದೃಷ್ಟಿ ಮುಂದುವರೆದಿದೆ ಎಂದರೆ ಮುಖ್ಯವಾಹಿನಿ ಅಭಿವೃದ್ಧಿ ಪ್ರಕ್ರಿಯೆಯು ಲಿಂಗತ್ವಗೊಂಡಿಲ್ಲವೆನ್ನುವುದು ಬಿಂಬಿಸುತ್ತಿದೆಯಲ್ಲವೆ?
ಜಾತಿ ವ್ಯವಸ್ಥೆ ಹೆಚ್ಚು ಹೆಚ್ಚು ಸಂಕೀರ್ಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಜಾತಿ ಗಡಿಯನ್ನು ಮೀರಿ ಮಹಿಳೆಯರು ಒಗ್ಗಟಾಗುವುದನ್ನು ನಿರೀಕ್ಷಿಸುವುದು ಹೇಗೆ. ಜಾತಿ ಶ್ರೇಷ್ಟತೆಯ ಮನಸ್ಥಿತಿ ಮಹಿಳೆಯರಲ್ಲೂ ಬೇರೂರಲಾರಂಭಿಸಿದರೆ ಮಹಿಳಾ ಹೋರಾಟದ ಬಂಧ ಸಡಿಲಗೊಳ್ಳುತ್ತದೆ. ಪುರುಷಾಧಿಪತ್ಯ ಹಾಗೂ ಜಾತಿ ಸಮೀಕರಣಗಳು ಮಹಿಳೆಯರ ನಡುವೆ ಕಂಪಾರ್ಟ್‌ಮೆಂಟ್‌ಗಳನ್ನು ಕಟ್ಟುತ್ತವೆ. ಈ ಕಂಪಾರ್ಟ್‌ಮೆಂಟ್‌ಗಳು ಒಡೆದು ಲಿಂಗತ್ವ ನ್ಯಾಯವನ್ನು ಸಾಧಿಸುವುದು ಮಹಿಳಾ ಚಳುವಳಿಯ ಮುಂದಿರುವ ದೊಡ್ಡ ಸವಾಲು.
ಜಾತಿ ವ್ಯವಸ್ಥೆಯನ್ನು ಆಧರಿಸಿ ಮೂಡಿಬಂದ ದಲಿತ ಸ್ತ್ರೀವಾದ ಒಂದು ಕಡೆ ಅಂಚಿಗೆ ತಳ್ಳಲ್ಪಟ್ಟ ಒಂದು ಸಮುದಾಯದ ಅಸ್ತಿತ್ವ ಅನನ್ಯತೆಯನ್ನು ಎತ್ತಿ ಹಿಡಿದರೆ ಮತ್ತೊಂದೆಡೆ ಒಟ್ಟು ಮಹಿಳಾ ಸಮುದಾಯ ಮತ್ತು ಹೋರಾಟದ ಒಡಕಿಗೆ ಕಾರಣವಾಗಬಹುದೆಂಬ ಆತಂಕ ಉಂಟಾಗುತ್ತದೆ. ಆದರೆ ದಲಿತ ಮಹಿಳಾ ಸಮುದಾಯಕ್ಕೆ ಸಂಬಂಧಿಸಿದ ವಿಷಯ ಮತ್ತು ಸಮಸ್ಯೆಗಳಿಗೆ ಮಹಿಳಾ ಚಳುವಳಿ ಸಕಾರಾತ್ಮಕವಾಗಿ ಸ್ಪಂದಿಸುವುದು ಅಷ್ಟೇ ಮುಖ್ಯ. ಜಾತಿ ವ್ಯವಸ್ಥೆಯಲ್ಲಿ ಪುರುಷಪ್ರಧಾನ ವ್ಯವಸ್ಥೆಯನ್ನು ಲಿಂಗತ್ವ ನೆಲೆಯಲ್ಲಿ ಪರಿಶೀಲಿಸುತ್ತಾ ದಲಿತ ಸ್ತ್ರೀವಾದಕ್ಕೆ ವಿಶೇಷ ಕೊಡುಗೆ ಸಲ್ಲಿಸಿರುವ ಶರ್ಮಿಳಾ ರೇಗೆ ಅವರ ಕುರಿತ ಲೇಖನವನ್ನು ಬರೆದಿರುವುದು ಸೂಕ್ತವಾಗಿದೆ. ಮಹಾರಾಷ್ಟ್ರದ ಪ್ರಮುಖ ಚಿಂತಕರು ಹೋರಾಟಗಾರರು ಆದ ಫುಲೆ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಮುಂದುವರೆಸುತ್ತಾ ಅವುಗಳಿಗೆ ಲಿಂಗತ್ವ ಆಯಾಮಗಳನ್ನು ಸೇರಿಸುತ್ತಾ ಸಮಾಜಶಾಸ್ತ್ರ ಹಾಗೂ ಮಹಿಳಾ ಅಧ್ಯಯನದ ಶೈಕ್ಷಣಿಕ ವಲಯದಲ್ಲಿ ಕೋಲ್ಮಿಂಚಿನಂತೆ ಬಂದು ಮರೆಯಾದ ಶರ್ಮಿಳಾ ರೇಗೆ ಖಂಡಿತಾ ಭಾರತದ ಸ್ತ್ರೀವಾದ, ದಲಿತ ಸ್ತ್ರೀವಾದ ಮತ್ತು ಮಹಿಳಾ ಚಳುವಳಿಗೆ ಅವರು ನೀಡಿರುವ ಕೊಡುಗೆ ಅನುಪಮವಾದುದು. ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ, ಬರಹಗಾರರಾಗಿ, ಅತೀ ಚಿಕ್ಕವಯಸ್ಸಿನಲ್ಲಿ ಪ್ರಬುದ್ಧ ಚಿಂತಕರಾಗಿ ಮೂಡಿಬಂದು ಅಷ್ಟೇ ವೇಗವಾಗಿ ಕಣ್ಮರೆಯಾಗಿದ್ದು ಮಹಿಳಾ ಅಧ್ಯಯನ ಮತ್ತು ದಲಿತ ಸ್ತ್ರೀವಾದದ ದುರದೃಷ್ಟ.
ಲಿಂಗತ್ವ ಮತ್ತು ಅಭಿವೃದ್ಧಿ ಪ್ರಕ್ರಿಯೆ ಉಪಉತ್ಪನ್ನವಾಗಿ ಮೂಡಿಬಂದ ಪರಿಕಲ್ಪನೆ ’ವಲಸೆ’. ವಲಸೆಯು ಮಾನವ ಸಹಜ ಪ್ರಕ್ರಿಯೆಯಾಗಿದ್ದರೂ ಕೈಗಾರಿಕೀಕರಣ, ನಾಗರಿಕತೆ, ತಂತ್ರಜ್ಞಾನ, ಬೆಳವಣಿಗೆಗಳ ಕಾರಣದಿಂದ ಉಂಟಾಗುತ್ತಿರುವ ವಿವಿಧ ಪ್ರಕಾರದ ವಲಸೆಗೆ ಲಿಂಗತ್ವದ ಆಯಾಮವಿದೆ. ಭೌಗೋಳಿಕ, ಗಡಿಪ್ರದೇಶ, ಆರ್ಥಿಕ ಹಿನ್ನೆಡೆ, ಸರ್ಕಾರದ ಆರ್ಥಿಕ ಮತ್ತು ಅಭಿವೃದ್ಧಿ ನೀತಿ, ಕೋಮುಗಲಭೆ, ಯುದ್ಧ ಮುಂತಾದವುಗಳು ವಲಸೆಯನ್ನು ತೀವ್ರ ಗೊಳಿಸುತ್ತಿವೆ. ಅದರ ಪ್ರತಿಕೂಲ ಪರಿಣಾಮಗಳಿಗೆ ಹೆಚ್ಚು ತುತ್ತಾಗುವವರು ಮಹಿಳೆಯರು ಮತ್ತು ಮಕ್ಕಳು. ಶ್ರೀಮಂತರು, ನಗರದವರು, ಶಿಕ್ಷಣ ಹೊಂದಿದವರು ಮತ್ತು ಉದ್ಯೋಗಸ್ಥರು ವಲಸೆ ಹೋಗುವುದಕ್ಕು ಉಳಿವಿಗಾಗಿ, ದುಡಿಮೆಗಾಗಿ, ಜೀವ ಸುರಕ್ಷತೆಗಾಗಿ ಬಡಜನರು, ಕೆಳಮಧ್ಯಮ ವರ್ಗದವರು ವಲಸೆ ಹೋಗುವುದಕ್ಕು ಬಹಳ ವ್ಯತ್ಯಾಸವಿದೆ. ದಿನನಿತ್ಯದ ಬದುಕಿಗೆ ಹೋರಾಡುವ ಈ ಬಡಜನರ ಬದುಕು ಸುಧಾರಿಸುತ್ತದೆ ಅನ್ನುವುದರ ಬಗ್ಗೆ ಭರವಸೆ ಕಾಣುತ್ತಿಲ್ಲ. ರಾಜ್ಯ ಮತ್ತು ಜಿಲ್ಲಾ ಗಡಿ ಪ್ರದೇಶಗಳಲ್ಲಿ ನಡೆಯುವ ವಲಸೆಗಳಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸುತ್ತಾರೆ. ದುಡಿಮೆ, ವಲಸೆ ತಯಾರಿ, ನಿರ್ವಹಣೆ, ಮಕ್ಕಳ ಪಾಲನೆ, ಶಿಕ್ಷಣ, ಸಾಲ ತೀರಿಸುವುದು, ಮನೆ ಸದಸ್ಯರ ಆರೋಗ್ಯ ರಕ್ಷಣೆ ಮುಂತಾದ ಎಲ್ಲಾ ಜವಾಬ್ದಾರಿಗಳನ್ನು ಹೊರುವ ವಲಸೆ ಮಹಿಳೆಯರ ಪರಿಸ್ಥಿತಿ ಚಿಂತಾಜನಕವಾಗಿದ್ದು ಇನ್ನು ಅದೃಶ್ಯವಾಗೇ ಉಳಿದಿದೆ. ಮಾಧ್ಯಮಗಳ ಆಡಂಬರದ ಭರಾಟೆ, ಕ್ರಿಕೆಟ್ ಹಾವಳಿ, ಭ್ರಷ್ಟಾಚಾರ, ಧರ್ಮಾಂಧತೆ, ಮೌಢ್ಯತೆಗಳ ನಡುವೆ ವಲಸೆ ಜನರ ಬದುಕು ನಗಣ್ಯವಾಗಿದೆ. ಅನೇಕ ನಿರ್ಮಾಣ ಕೆಲಸ, ಉದ್ದಿಮೆಗಳಿಗೆ ವಲಸೆ ಕಾರ್ಮಿಕರ ದುಡಿಮೆಯೇ ಮೂಲಾಧಾರವಾಗಿದ್ದರೂ ಸರ್ಕಾರ ಶ್ರೀಮಂತರ, ಹಿತವಲಯದ ಜನರ ದೊಂಬರಾಟದಡಿಯಲ್ಲಿ ಮುಚ್ಚಿ ಹೋಗಿದ್ದಾರೆ. ಅವರನ್ನು ಅನ್ಯರಾಗಿಸಿ ನಮ್ಮದೆ ಲೋಕದಲ್ಲಿ ಮುಳುಗಿಕೊಂಡು ಮಾನವೀಯತೆಗೆ ವಿಮುಖರಾಗಿದ್ದೇವೆ. ಅವರೂ ಮುಖ್ಯವಾಹಿನಿ ಅಭಿವೃದ್ಧಿಯ ಭಾಗವಾಗಬೇಕಾಗಿದೆ.
ಜಾಗತೀಕರಣ ಮತ್ತು ಕೋವಿಡ್ ೧೯ರ ನಂತರದಲ್ಲಿ ಹಿನ್ನಡೆ ಮತ್ತು ಮುನ್ನಡೆಗೆ ಒಳಗಾಗಿರುವ ಬಹು ಚರ್ಚಿತ ವಿಷಯವೆಂದರೆ ಮಹಿಳಾ ಶಿಕ್ಷಣ ಮಟ್ಟ ಮತ್ತು ಉದ್ಯೋಗ. ಎರಡೂ ಒಂದಕ್ಕೊಂದು ಬೆಸೆದುಕೊಂಡಿರುವ ವಿಷಯಗಳಾಗಿವೆ. ಹೆಣ್ಣುಮಕ್ಕಳಿಗೆ ಶಿಕ್ಷಣ ದೂರಾಗುತ್ತಿದೆ ಅನ್ನುವ ಹೊತ್ತಿನಲ್ಲಿ ಸಾಕ್ಷರತೆಯ ಪ್ರಮಾಣ, ದಾಖಲಾತಿ, ಶಾಲೆಯಲ್ಲಿ ಉಳಿಯುವಿಕೆ, ಶಾಲೆ ಬಿಡುವಿಕೆ, ವೃತ್ತಿ ಶಿಕ್ಷಣದ ಅಂಕಿ ಅಂಶಗಳನ್ನು ಗಮನಿಸಿದರೆ ಸಾಧನೆ ತೃಪ್ತಿದಾಯಕವಾಗಿಲ್ಲ ಅನ್ನುವುದು ಕಂಡುಬರುತ್ತದೆ. ಶಿಕ್ಷಣದ ಖಾಸಗೀಕರಣ, ಸಂಸ್ಕೃತಿ ಹೆಸರಿನಲ್ಲಿ ಮಹಿಳೆಯರ ಸಾಂಪ್ರದಾಯಿಕ ಪಾತ್ರಗಳನ್ನು ವೈಭವೀಕರಿಸುತ್ತಿರುವ, ಕುಟುಂಬ ಆರ್ಥಿಕ ಸಂಕಷ್ಟದಲ್ಲಿರುವಾಗ ಹುಡುಗಿಯರು ದುಡಿಯುವುದು ಅನಿವಾರ್ಯವಾಗುತ್ತಿರುವ, ನಿರುದ್ಯೋಗ ದೊರಕಬಹುದೆಂಬ ಭರವಸೆಯಿಲ್ಲದಿರುವ ಸಂದರ್ಭದಲ್ಲಿ ಹುಡುಗಿಯರ ಶಿಕ್ಷಣ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಭಾವನೆ ಮೂಡಿಸುತ್ತದೆ. ಉನ್ನತ ಶಿಕ್ಷಣದಲ್ಲಿ ಅವರ ಪ್ರಾತಿನಿಧ್ಯ ಸ್ವಲ್ಪಮಟ್ಟಿಗೆ ಉತ್ತಮಗೊಳ್ಳುತ್ತಿದೆ ಎಂದು ಅಂಕಿ ಅಂಶಗಳು ತೋರಿಸಿದರೂ ಮುಂದೆ ಅವರು ಉದ್ಯೋಗ ಪಡೆಯುವಲ್ಲಿ ಏನಾದರು ಎಂದು ನೋಡಿದರೆ ಅಲ್ಲೂ ನಿರಾಶಾದಾಯಕ ಚಿತ್ರಣ ಕಂಡುಬರುತ್ತದೆ. ಮಹಿಳಾ ದುಡಿಮೆ ಕುರಿತು ವಿರೋಧಾಭಾಸ ಕಂಡುಬರುತ್ತದೆ. ರಾಷ್ಟ್ರಮಟ್ಟದ ಅಂಕಿ ಅಂಶ ಮಹಿಳೆಯರ ದುಡಿಮೆ ದರ ಕಡಿಮೆಯಾಗುತ್ತಿರುವುದನ್ನು ತೋರಿಸಿದರೆ ಸೂಕ್ಷ್ಮ ಮಟ್ಟದಲ್ಲಿ ಹುಡುಗಿಯರು ಶಿಕ್ಷಣವನ್ನು ಮುಂದುವರೆಸದೆ ಕೆಲಸಕ್ಕೆ ಸೇರುತ್ತಿರುವುದು ಕಂಡುಬರುತ್ತದೆ. ಅಂದರೆ ಸರ್ಕಾರದ ಲೆಕ್ಕಾಚಾರದಲ್ಲಿ ದಾಖಲಾಗದ ಅಸಂಘಟಿತ ವಲಯದಲ್ಲಿ ಮಹಿಳಾ ದುಡಿಮೆ ಹೆಚ್ಚಾಗುತ್ತಿದೆ. ಆದರೆ ಸಂಘಟಿತ ವಲಯದಲ್ಲಿ ಅದು ಕುಸಿಯುತ್ತಿರುವುದು ಕಂಡುಬರುತ್ತಿದೆ. ಖಾಸಗೀಕರಣ, ನೇಮಕಾತಿಯಲ್ಲಿ ಕಂಡುಬರುವ ಭ್ರಷ್ಟಾಚಾರ, ಸರ್ಕಾರದ ಕಾರ್ಯನೀತಿ, ಯೋಜನೆಗಳು, ಕೌಟುಂಬಿಕ ನಿರ್ಬಂಧಗಳು ಹುಡುಗಿಯರು ಸಂಘಟಿತ ವಲಯದಲ್ಲಿ ಉದ್ಯೋಗ ಪಡೆಯುವುದು ಕನಸಿನ ಮಾತಾಗುತ್ತಿದೆ. ತಂತ್ರಜ್ಞಾನ ಆಧಾರಿತ ಕಾರ್ಪೋರೇಟ್ ವಲಯಗಳಲ್ಲಿ ವೃತ್ತಿಶಿಕ್ಷಣ ಪಡೆದ ಕೆಲವು ಹೆಣ್ಣುಮಕ್ಕಳು ಉದ್ಯೋಗ ಪಡೆಯುತ್ತಿರಬಹುದು. ಆದರೆ ಅಲ್ಲೂ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಕಡಿಮೆಯಿದೆ. ಪ್ರಸ್ತುತ ವಿದ್ಯಮಾನದಲ್ಲಿ ಹುಡುಗಿಯರ ಶಿಕ್ಷಣ ಮಟ್ಟ ಮತ್ತು ಉದ್ಯೋಗಾವಕಾಶಗಳ ಕುರಿತು ಸೂಕ್ಷ್ಮ ಹಂತಗಳಲ್ಲಿ ಅಧ್ಯಯನ ಕೈಗೊಳ್ಳಬೇಕಿದೆ, ಚರ್ಚೆಯಾಗಬೇಕಿದೆ. ಅಂತಹ ಒಂದು ಚರ್ಚೆಯನ್ನು ಏಳನೇ ಅಧ್ಯಾಯದಲ್ಲಿ ಡಾ. ಈ. ಯರ್ರಿಸ್ವಾಮಿ ಇವರು ಕಟ್ಟಿಕೊಟ್ಟಿದ್ದಾರೆ.
ಸರ್ಕಾರದ ಮಧ್ಯಪ್ರವೇಶದ, ಕಾರ್ಯನೀತಿ ಯೋಜನೆಗಳು ಮಹಿಳಾ ಪರವಾಗಿ ಮೂಡಿ ಬಂದು ಭರವಸೆ ಹುಟ್ಟಿಸಿರುತ್ತವೆ. ಕಾಲಕ್ರಮೇಣ ಬೇರೆ ಬೇರೆ ಕಾರಣಗಳಿಂದ ಅವು ಪ್ರಸ್ತುತತೆ ಅಥವಾ ಮಹತ್ವವನ್ನು ಕಳೆದುಕೊಳ್ಳುತ್ತವೆ ಅನಿಸುತ್ತದೆ.
ಹೀಗೆ ಮಹಿಳೆಯರ ಬಗ್ಗೆ ಮಹಿಳಾ ವಿಷಯಗಳಿಗೆ ಸಂಬಂಧಪಟ್ಟಂತೆ ಎಷ್ಟು ಓದಿದರೂ, ಬರೆದರೂ ಚಿಂತಿಸಿದರೂ, ಅಧ್ಯಯನ, ಸಂಶೋಧನೆ ಕೈಗೊಂಡರು ಸಾಲದು. ಮಹಿಳಾ ವಾಸ್ತವಿಕತೆಯನ್ನು ಬೆಳಕಿಗೆ ತಂದು ಅವರ ಜೀವನದಲ್ಲಿ ಸುಧಾರಣೆ, ಅಭಿವೃದ್ಧಿ ತರುವುದು ಮಹಿಳಾ ಅಧ್ಯಯನದ ಸಮುದಾಯ ಹಾಗೂ ಮಹಿಳಾ ಹೋರಾಟಗಾರರ ಆದ್ಯ ಕರ್ತವ್ಯವಾಗಿದೆ. ಮಹಿಳಾ ಅಧ್ಯಯನದ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿರುವವರ ಜವಾಬ್ದಾರಿ ಹೆಚ್ಚಿದೆ. ಇಂತಹ ಒಂದು ಚಿಂತನೆ, ಓದು, ಬರಹ, ಚರ್ಚೆ ಹಾಗೂ ಸಂಶೋಧನೆಗಳಲ್ಲಿ ತೊಡಗಿರುವ ಡಾ. ಈ. ಯರ್ರಿಸ್ವಾಮಿ ಅವರಿಗೆ ಅಭಿನಂದನೆಗಳು. ಮುಂದೆಯೂ ಅವರು ನಿರಂತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿ ಕರ್ನಾಟಕದಲ್ಲಿ ಮಹಿಳಾ ಅಧ್ಯಯನವನ್ನು ಬೆಳೆಸುವುದಕ್ಕೆ ಕೊಡುಗೆ ಸಲ್ಲಿಸಲಿ ಎಂದು ಆಶಿಸುತ್ತೇನೆ.
–ಡಾ. ಹೇಮಲತ ಎಚ್.ಎಂ., ಪ್ರಾಧ್ಯಾಪಕರು
ಪರಿವಿಡಿ
ಸವಿನುಡಿ / ೫
ಮುನ್ನುಡಿ / ೭
ಓದಿಗೆ ಮೊದಲು / ೧೩
೧. ಸ್ತ್ರೀವಾದ: ವಿಭಿನ್ನ ದೃಷ್ಟಿಕೋನಗಳು / ೧೭
೨. ಮಹಿಳಾ ಅಭಿವೃದ್ಧಿ ದೃಷ್ಟಿಕೋನಗಳು / ೨೯
೩. ಮಾನವ ಹಕ್ಕುಗಳ ಹಿನ್ನೆಲೆಯಲ್ಲಿ ಮಹಿಳಾ ಹಕ್ಕುಗಳು / ೩೭
೪. ಲಿಂಗತಾರತಮ್ಯ, ಜಾತಿಪದ್ಧತಿ ಮತ್ತು ಪಿತೃಪ್ರಧಾನತೆ / ೫೩
೫. ಮಹಿಳಾ ಹೋರಾಟದ ಚಹರೆಗಳು / ೬೫
೬. ಭಾರತದ ಸ್ತ್ರೀವಾದಿ ಶರ್ಮಿಳಾ ರೇಗೆ / ೯೯
೭. ಮಹಿಳಾ ಶಿಕ್ಷಣ: ಹೊರತಳ್ಳುವಿಕೆ ಮತ್ತು ಒಳಗೊಳ್ಳುವಿಕೆಯ ನೆಲೆಗಳು / ೧೨೨
೮. ಲಿಂಗತ್ವ ಮತ್ತು ವಲಸೆ: ಭಾರತೀಯ ಸಂದರ್ಭ / ೧೩೧
೯. ಲಿಂಗವ್ಯವಸ್ಥೆ, ವಲಸೆ ಮತ್ತು ಅಭಿವೃದ್ಧಿ / ೧೩೯
೧೦. ಕೌಟುಂಬಿಕ ಹಿಂಸೆ ವಿರುದ್ಧ ಮಹಿಳೆಯರಿಗೆ ರಕ್ಷಣೆ ಅಧಿನಿಯಮದ ಸ್ವರೂಪ / ೧೪೮
೧೧. ಚಲನಚಿತ್ರಗಳಲ್ಲಿ ಅತ್ಯಾಚಾರದ ಅಭಿವ್ಯಕ್ತಿ ಮಾದರಿಗಳು / ೧೫೯
Reviews
There are no reviews yet.