ಲೇಖಕರ ಮಾತು
ಭಾರತದ ಚರಿತ್ರೆಯಲ್ಲಿ ಆಧುನಿಕ ಮೈಸೂರು ಸಂಸ್ಥಾನದ ಚರಿತ್ರೆಗೆ ವಿಶಿಷ್ಟವಾದ ಸ್ಥಾನವಿದೆ. ಈ ಪ್ರದೇಶ ಭಾರತ ಹಾಗೂ ಪ್ರಪಂಚದ ಭೂಪಟದಲ್ಲಿ ವಿಶಿಷ್ಟ ಸ್ಥಾನಪಡೆದದ್ದು ಟಿಪ್ಪುಸುಲ್ತಾನ್ ಪತನ ನಂತರವೇ ಎಂಬುವುದು ಚಾರಿತ್ರಿಕ ಸತ್ಯ. ೧೭೯೯ರಿಂದ ಮೈಸೂರು ಒಡೆಯರ ವಂಶಸ್ಥರಿಗೆ ಅಧಿಕಾರವನ್ನು ಹಸ್ತಾಂತರಿಸಿ ಅನೇಕ ರಾಜತಾಂತ್ರಿಕ ಕಾರಣಗಳಿಂದಾಗಿ ೧೮೩೦ರಲ್ಲಿ ನೇರವಾಗಿ ಬ್ರಿಟಿಷರ ಅಧಿಪತ್ಯಕ್ಕೆ ಒಳಗೊಂಡು ೧೮೮೧ರವರೆಗೆ ವಸಾಹತುಶಾಹಿ ಆಳ್ವಿಕೆಯ ಪ್ರಕ್ರಿಯೆಗೆ ನೇರ ಭಾಗಿಯಾದ ನಂತರವೇ ಮೈಸೂರಿನ ಆಳ್ವಿಕೆ ಆಧುಟಿiಕ ಸ್ವರೂಪವನ್ನು ಪಡೆದದ್ದು. ಸ್ಪಷ್ಟವಾಗಿ ಹೇಳಬೇಕೆಂದರೆ, ಟಿಪ್ಪುವಿನ ಪತನದ ನಂತರ ೧೭೯೯ರಿಂದ ೧೮೩೩ರವರೆಗೆ ಮೈಸೂರು ಒಡೆಯರು ಆಳ್ವಿಕೆ ಮಾಡಿದ್ದು ತಮ್ಮ ಪಾರಂಪರಿಕ, ಸಾಂಪ್ರದಾಯಿಕ ಪ್ರಭುತ್ವದ ಹಿನ್ನೆಲೆಯಲ್ಲಿ ಎಂಬುದು ಸತ್ಯ. ಟಿಪ್ಪು ಪತನದ ನಂತರ ಇಡೀ ದಕ್ಷಿಣ ಭಾರತವನ್ನೇ ಸಂಪೂರ್ಣವಾಗಿ ಆಕ್ರಮಿಸಬೇಕೆಂಬ ಮಹತ್ವಕಾಂಕ್ಷಿಯನ್ನು ಮೈಗೂಡಿಸಿಕೊಂಡಿದ್ದ ಬ್ರಿಟಿಷರು ಮೈಸೂರಿನಂತಹ ಸಾಂಸ್ಕೃತಿಕ ಶ್ರೀಮಂತಿಕೆಯ ಸಂಸ್ಥಾನವನ್ನು ಸಂಪೂರ್ಣವಾಗಿ ಅದರ ಮೂಲ ವಂಶಸ್ಥರಿಗೆ ಬಿಟ್ಟುಕೊಡಲು ಮನಸ್ಸಿರಲಿಲ್ಲ. ಈ ಹಿನರ್‍ನಲೆಯಿಂದ ೧೮೩೦ರಲ್ಲಿ ಮೈಸೂರು ಸಂಸ್ಥಾನದ ಒಂದು ಭಾಗದಲ್ಲಿ ಎದ್ದ ರೈತರ ದಂಗೆಯನ್ನು ಶಮನ ಮಾಡಲು ಶಕ್ತರಾಗಲಿಲ್ಲ ಎಂಬ ಕ್ಷುಲ್ಲಕ ಕಾರಣವನ್ನು ನೀಡಿ ಮೈಸೂರು ವಂಶಸ್ಥ ಅರಸರನ್ನು ಆಳ್ವಿಕೆ ಮಾಡಲು ಅಸಮರ್ಥರು ಎಂದು ನಿರ್ಧರಿಸಿ, ತಮ್ಮ ಮನದಾಸೆಯಂತೆ ಇವರನ್ನು ಬದಿಗೆ ಸರಿಸಿ ೧೮೩೦ರಿಂದ ೧೮೮೧ರವರೆಗೆ ಮೈಸೂರು ಸಂಸ್ಥಾನವನ್ನು ತಮ್ಮ ವಸಾಹತುವಿನ ಆಳ್ವಿಕೆಗೆ ಒಳಪಡಿಸಿಕೊಂಡು ಹೊಸ ದಿಕ್ಕಿನೆಡೆಯ ಆಳ್ವಿಕೆಯನ್ನು ರೂಪಿಸಿ ಸಂಪ್ರದಾಯಿಕ ಆಳ್ವಿಕೆಯ ಚರಿತ್ರೆಗೆ ಅಂತ್ಯ ಹಾಡಿದರು. ಆಧುನಿಕ ಮೈಸೂರು ಎಂಬ ಕಾಲಘಟ್ಟಕ್ಕೆ ಮುನ್ನುಡಿ ಬರೆದರು.
ಬ್ರಿಟಿಷ್ ಆಳ್ವಿಕೆಯ ಪೂರ್ವದ ಮೈಸೂರು ಸಂಸ್ಥಾನ ಸಾಂಪ್ರದಾಯಿಕ ಆಳ್ವಿಕೆಯು ದೇವಾಲಯ ಕೇಂದ್ರಿತ ಸಂವಿಧಾನವನ್ನು ಆಳ್ವಿಕೆಯ ಮುಖ್ಯ ಅಸ್ತ್ರವನ್ನಾಗಿಸಿಕೊಂಡಿತ್ತು. ರಾಜ ಈ ಧರ್ಮಕೇಂದ್ರಿತ ಸಂವಿಧಾನವನ್ನು ಜಾರಿಗೆ ತರುವುದು ಹಾಗೂ ಪಾಲಿಸುವ ಕರ್ತವ್ಯ ಪಾಲಕನಾಗಿದ್ದನು. ಅಂದರೆ: ಈ ಹಂತದಲ್ಲಿ ಧರ್ಮ ಪ್ರಭುತ್ವವೇ ಮಾತ ನಾಡಿತೇ ಹೊರತು ಜನತೆ ಮಾತನಾಡಲಿಲ್ಲ. ಈ ಹಿನ್ನೆಲೆಯ ಜನತೆಯ ಮೂಕ ವೇದನೆಯನ್ನು ಒಂದಿಷ್ಟು ಶಮನ ಮಾಡಲು ಮುಂದಾದ ಸಂದರ್ಭವೇ ೧೮೩೦ರಿಂದ ೧೮೮೧ ರವರೆಗಿನ ವಸಾಹತುಶಾಹಿಗಳ ನೇರ ಆಳ್ವಿಕೆಯ ಕಾಲಘಟ್ಟ. ಈ ಕಾಲಘಟ್ಟದಲ್ಲಿ ಧಾರ್ಮಿಕ ಅಂಧಕಾರದಿಂದ ಸಾಮಾಜಿಕ ಸಂಕೋಲಗೆ ಸಿಲುಕಿದ್ದವರ ಹೊಸ ಬೌದ್ಧಿಕ ಪ್ರಪಂಚಕ್ಕೆ ತಮ್ಮ ಮನೆಯ ಹಾಗೂ ಮನಸ್ಸನ್ನು ತೆರೆದುಕೊಳ್ಳುವ ಆವೇದನೆಗೆ ಮುಂದಾದರು. ಸಾಂಪ್ರದಾಯಿಕವಾಗಿ ಜಡ್ಡುಗಟ್ಟಿ ಬಿಗಿದುಕೊಂಡಿದ್ದ ಧಾರ್ಮಿಕ ಸರಪಳಿ ಎಂಬ ಜಾತಿಯಿಂದ ಹೊರಬಂದು ಒಂದಷ್ಟು ಜನ ದೇಶಿಯರು ಸಮಾನತೆ ಹಿನ್ನೆಲೆಯಿಂದ ಬೋಧಿಸಿದ ಕ್ರೈಸ್ತ ಧರ್ಮಕ್ಕೆ ಸೇರಿಕೊಂಡರು. ಈ ಸೇರ್ಪಡೆಯಿಂದ ಶತಶತಮಾನಗಳಿಂದ ಶಿಕ್ಷಣ ಎಂಬ ಬಹುದೊಡ್ಡ ಅಸ್ತ್ರವನ್ನು ಮುಟ್ಟುವುದಿರಲಿ ನೋಡುವುದರಲ್ಲೂ ವಂಚಿತರಾಗಿದ್ದವರು ಶಿಕ್ಷಣ ಕಲಿಯಲು ಮುಂದಾದರು. ಇದನ್ನೇ ಚರ್ಚ್ ಶಿಕ್ಷಣವೆನ್ನುವುದು. ಶತಮಾನಗಳಿಂದ ಧರ್ಮರಾಜಕಾರಣದ ಹಿನ್ನೆಲೆಯಲ್ಲಿ ಸಾಮಾಜಿಕ ಸಂಕೋಲೆಗಳಿಗೆ ಸಿಲುಕಿದ್ದ ಈ ನೆಲದ ಮೂಲನಿವಾಸಿಗಳಾದ ಪುರುಷ ಹಾಗೂ ಮಹಿಳಾ ವರ್ಗವು ವಾಸ್ತವದ ವೈಜ್ಞಾನಿಕ ಆಲೋಚನೆಗೆ ತೆರೆದುಕೊಂಡವು. ಈ ಸಂದರ್ಭವನ್ನೇ ಚರಿತ್ರೆಯಲ್ಲಿ ಆಧುನಿಕ ಕಾಲವೆಂದು ಕರೆಯಲಾಗುವುದು.
ಈ ಸಂದರ್ಭವನ್ನು ಆಧುನಿಕ ಕಾಲ ಎಂದು ಕರೆಯಲು ಪ್ರಮುಖ ಕಾರಣ ಭಾರತದ ಧರ್ಮಪ್ರಭುತ್ವ ಕೇಂದ್ರಿತ ವ್ಯವಸ್ಥೆಯಲ್ಲಿ ಚಲಿಸದೇ ನಿಂತಲ್ಲೇ ನಿಂತಿದ್ದ ಕೆರೆಯ ನೀರನ್ನು ಸಾಂಸ್ಕೃತಿಕ ಸ್ಥಿತ್ಯಂತರದ ಮೂಲಕ ಕೋಡಿ ಬೀಳುವಂತೆ ಮಾಡಿದ್ದು. ಆದರೆ, ಯಾವುದೇ ಕಾರಣಕ್ಕೂ ಕೆರೆಯ ಮುಖ್ಯ ತೂಬನ್ನು ತೆರವುಗೊಳಿಸಲು ಸಾಧ್ಯವೇ ಆಗಲಿಲ್ಲ. ಈ ಮಾತು ಇಂದಿಗೂ ಅನ್ವಯವಾಗುತ್ತದೆ ಎಂದು ಹೇಳಿದರೆ ಉತ್ಪ್ರೇಕ್ಷೆಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗಾಗಿ ನಿರ್ಮಿತಗೊಂಡ ಸರ್ಕಾರದಿಂದ ಕೆರೆಯ ನೀರು ಒಂದಷ್ಟು ಕೋಡಿ ಬಿದ್ದ ಕಾರಣಕ್ಕಾಗಿ ಕೆರೆಯ ವಾರಸುದಾರರು(ಮೀಸಲಾತಿ) ಬೊಬ್ಬೆ ಹಾಕುತ್ತಿರುವುದಕ್ಕೆ ಇಂದಿನ ಸಾಂಸ್ಕೃತಿಕ ಸಂದರ್ಭವೇ ನಿದರ್ಶನವಾಗಿದೆ. ಈ ಮಾದರಿಯ ಕೆರೆಯ ನೀರು ಕೋಡಿಬೀಳಲು ಆರಂಭಗೊಂಡ ಸಂದರ್ಭವೇ ವಸಾಹತುಶಾಹಿಗಳು ಮೈಸೂರು ಸಂಸ್ಥಾನವನ್ನು ನೇರ ಆಳ್ವಿಕೆಗೆ ಒಳಪಡಿಸಿಕೊಂಡ ಕಾಲಘಟ್ಟವೇ ಆಗಿತ್ತು. ಕ್ರೈಸ್ತ ಮಿಶನರಿಗಳು ಶತಶತಮಾನಗಳಿಂದ ಭಾರತದ ಮಣ್ಣಿನಲ್ಲಿ ಜೀವಿಸುತ್ತಿದ್ದರೂ ಸಹ ಮಾನವನ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದ ಜನವರ್ಗವನ್ನು ಮಾನವೀಯತೆ ಆಧಾರದ ಮೇಲೆ ಮುಟ್ಟಲು ಮುಂದಾದರು. ಈ ಮುಟ್ಟುವಿಕೆ ಭಾರತದ ಮೂಲ ನಿವಾಸಿಗಳಲ್ಲಿ ಭರವಸೆಯ ಬೆಳಕನ್ನು ತೆರೆದಿಟ್ಟಿತ್ತು.
ಭಾರತ ದೇಶದಲ್ಲಿ ಶಿಕ್ಷಣವೆಂಬುದು ಕೇವಲ ಧರ್ಮಪ್ರಭುತ್ವದ ಮುಖಂಡ ಸಮುದಾಯಕ್ಕೆ ಮಾತ್ರ ಮೀಸಲಾಗಿದುದ್ದನ್ನು ಚರ್ಚ್ ಜನಸಾಮಾನ್ಯರೆಡೆಗೆ ತಲುಪಿಸಲು ಆರಂಭಗೊಳಿಸಿತು. ಸಾಂಪ್ರದಾಯಿಕ ಆಳ್ವಿಕೆ ಪದ್ಧತಿಗಳು, ಜನಕೇಂದ್ರಿತ ಸಂಪ್ರದಾಯಿಕ ರೀತಿ-ರಿವಾಜುಗಳು ವಿಮರ್ಶೆಗೆ ಒಳಪಟ್ಟವು. ಜನತೆ ಮತ್ತು ದೇವಾಲಯಗಳ ನಡುವಿನ ಇಕ್ಕಟ್ಟು-ಬಿಕ್ಕಟ್ಟುಗಳು ಚರ್ಚೆಗೆ ಎಡೆಯಾದವು. ಮಾನವ ಹಕ್ಕುಗಳ ಉಲ್ಲಂಘಿಸುವವರ ವಿರುದ್ಧ ಸ್ವಾಭಿಮಾನದಿಂದ ಪಡೆದುಕೊಳ್ಳುವ ಪ್ರಶ್ನೆಗಳನ್ನು ಮುಂದಿಟ್ಟರು. ಈ ಎಲ್ಲ ಕಾರಣಗಳಿಂದಾಗಿ ೧೮೩೦ ಹಾಗೂ ೧೮೮೧ರ ನಡುವಿನ ವಸಾಹತುಗಳ ನೇರ ಆಳ್ವಿಕೆಯ ಕಾಲಘಟ್ಟದ ಮೈಸೂರು ಸಂಸ್ಥಾನ ಇತರೆ ಪ್ರದೇಶಗಳಿಗಿಂತ ಅನೇಕ ಜನಕೇಂದ್ರಿತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಿರಿತನವನ್ನು ಕಂಡಿತು.
ಹೀಗೆ ಹಿರಿತನವನ್ನು ಕಾಣುತ್ತಿದ್ದ ಜನಕೇಂದ್ರಿತ ಮೈಸೂರು ಸಂಸ್ಥಾನದ ಬೆಳವಣಿಗೆಯ ಸಂದರ್ಭದಲ್ಲಿ ವಸಾಹತು ಸರ್ಕಾರವು ೧೮೮೧ರಿಂದ ಮೈಸೂರು ಮೂಲ ವಂಶಸ್ಥರಿಗೆ ಸಂಸ್ಥಾನದ ಅಧಿಕಾರವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟಿತು. ಈ ಅವಕಾಶ ಮಾಡಿಕೊಡಲು ಅನೇಕ ರಾಜಕೀಯ ಸ್ಥಿತ್ಯಂತರಗಳು ಮೂಲ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಚರ್ಚೆ ಮಾಡಬಹುದು. ಆದರೆ ಈ ವಿಷಯಕ್ಕೆ ಪೂರಕವಾಗಿ ಹೇಳುವುದಾದರೆ ಶತಮಾನಗಳಿಂದ ಶಿಕ್ಷಣದಿಂದ ವಂಚಿತ ರಾಗಿದ್ದವರಿಗೆ ವಸಾಹತು ಕಾಲಘಟ್ಟದಲ್ಲಿ ಚರ್ಚ್ ಮೂಲಕ ಆರಂಭಿಸಲಾಗಿದ್ದ ಶಿಕ್ಷಣ ವ್ಯವಸ್ಥೆಯನ್ನು ೧೮೮೧ರಲ್ಲಿ ಅಧಿಕಾರ ವಹಿಸಿಕೊಂಡ ಮೈಸೂರು ವಂಶಸ್ಥರು ಅವಾರ್ಯವಾಗಿ ಮುನ್ನಡೆಸಬೇಕಾಗಿತ್ತು. ಒಂದು ಕಡೆ ಚರ್ಚ್ ಶಿಕ್ಷಣದ ಮೂಲಕ ಶಿಕ್ಷಣ ಹಾಗೂ ಮೂಲಭೂತ ಹಕ್ಕುಗಳ ಹಿನ್ನೆಲೆಯಲ್ಲಿ ಕ್ರೈಸ್ತಧರ್ಮಕ್ಕೆ ಮತಾಂತರ ವಾಗುವುದನ್ನು ತಪ್ಪಿಸಿ, ಹಿಂದೂ ಧರ್ಮದ ಪರಿಧಿಯಲ್ಲಿ ಉಳಿಸಿಕೊಳ್ಳುವುದು ಹಾಗೂ ಈಗಾಗಲೇ ಅಸ್ಪೃಶ್ಯರ ಶಿಕ್ಷಣಕ್ಕಾಗಿಯೇ ಆರಂಭಗೊಂಡಿದ್ದ ಶಿಕ್ಷಣ ವ್ಯವಸ್ಥೆಯನ್ನು ವಸಾಹತುಗಳು ಆರಂಭಿಸಿದ ಮಾದರಿಯಲ್ಲಿಯೇ, ಪಂಚಮ ಶಾಲೆಗಳನ್ನು ತೆಗೆದು, ಚರ್ಚ್ ಶಿಕ್ಷಣದ ಮಾದರಿಯಲ್ಲಿಯೇ ಶಿಕ್ಷಣವನ್ನು ನೀಡಬೇಕಾದದ್ದು ಇವರ ಕರ್ತವ್ಯವೂ ಆಗಿತ್ತು. ಈ ಹಿನ್ನೆಲೆಯಿಂದ ಆರಂಭಗೊಂಡ ಪಂಚಮ ಶಾಲೆಗಳು ಆಧುನಿಕ ಮೈಸೂರು ಸಂಸ್ಥಾನದಲ್ಲಿ ಅಸ್ಪೃಶ್ಯರಲ್ಲಿ ಶಿಕ್ಷಣದ ಕ್ರಾಂತಿಯನ್ನು ಉಂಟುಮಾಡಿದವು. ೧೮೮೧ರಿಂದ ಆರಂಭಗೊಂಡ ಈ ಬೌದ್ಧಿಕ ಕ್ರಾಂತಿಯ ಫಲಾನುಭವಿಗಳು ಸಾವಿರಾರು ವರ್ಷಗಳಿಂದ ಜ್ಞಾನದ ಫಲವಂತಿಕೆಯನ್ನು ಹೊಂದಿದ್ದರು ಸಹ ಯಾವುದೇ ಫಸಲನ್ನು ಬೆಳೆಯದೇ ಇದ್ದ ಕಾರಣಕ್ಕಾಗಿ, ಶಿಕ್ಷಣವೆಂಬ ಗಿಡ ನೆಟ್ಟ ತಕ್ಷಣವೇ ಅದು ಫಲವತ್ತಾಗಿದ್ದ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯಿತು. ಈ ಬೆಳೆ ಭಾರತ ಮತ್ತು ಭಾರತೀಯತೆಯನ್ನು ನೆಲಮೂಲ ಸಂಸ್ಕೃತಿಯ ಹಿನ್ನೆಲೆಯಿಂದ ಹೊಸ ದಿಗಂತದೆಡೆಗೆ ನೋಡುವಂತೆ ಮಾಡಿತು.
ವಸಾಹತುಗಳ ನೇರ ಆಳ್ವಿಕೆಯ ಕಾಲದಲ್ಲಿಯೇ ಮೈಸೂರು ಸಂಸ್ಥಾನದ ಅರಸೊತ್ತಿಗೆ ತನ್ನ ಸಾಂಪ್ರದಾಯಿಕ ಆಳ್ವಿಕೆಯಿಂದ ಹೊರಬಂದು ಬ್ರಿಟಿಷ್ ಮಾದರಿಯ ಪ್ರಜಾಪ್ರಭುತ್ವ ತೆರೆದುಕೊಳ್ಳುವ ಹಿನ್ನೆಲೆಯಲ್ಲಿ ಇಂಗ್ಲಿಷ್ ಶಿಕ್ಷಣದ ಪ್ರೌಢಿಮೆಯನ್ನು ಪಡೆದು ರಾಜರಾದವರು ೧೦ನೇ ಚಾಮರಾಜ ಒಡೆಯರ್ ಅವರು. ಇವರು ಈ ಎಲ್ಲ ಜನಪರ ಕಾರ್ಯಗಳಿಗೆ ಮುನ್ನುಡಿ ಬರೆದರು. ೧೦ನೇ ಚಾಮರಾಜ ಒಡೆಯರ್ ಅವರು ಈ ಹಂತದಲ್ಲಿ ಪಾರಂಪರಿಕ ಧರ್ಮಕೇಂದ್ರಿತ ಸಂವಿಧಾನವನ್ನು ಒಂದಿಷ್ಟು ಬದಿಗೆ ಸರಿಸಿ, ಪ್ರಜಾಪ್ರಭುತ್ವ ಮಾದರಿಯ ಸಂವಿಧಾನವನ್ನು ಜಾರಿಗೆ ತರಲು ಮುಂದಾದರು. ಈ ಸ್ಥಿತ್ಯಂತರ ಮೇಲೆ ಹೇಳಿದ ಮಾದರಿಯಲ್ಲಿ ಅವರಿಗೆ ಅವಶ್ಯಕವೂ ಆಗಿತ್ತು. ಇಂಗ್ಲಿಷ್ ಶಿಕ್ಷಣವನ್ನು ಪಡೆದಿದ್ದ ಚಾಮರಾಜ ಒಡೆಯರ್‌ರವರು ಭಾರತದ ಅನೇಕ ಸಂಸ್ಥಾನದ ರಾಜರುಗಳನ್ನು ಹಾಗೂ ಸ್ವಾಮಿ ವಿವೇಕಾನಂದರನ್ನು ಒಳಗೊಂಡಂತೆ ಅನೇಕ ದಾರ್ಶನಿಕರನ್ನು, ಬಹುಮುಖ್ಯವಾಗಿ ವಸಾಹತುಶಾಹಿ ಸರ್ಕಾರದ ಆಡಳಿತದ ಮುಖ್ಯಸ್ಥರನ್ನಾಗಿ ಖುದ್ದು ಭೇಟಿ ಮಾಡಿ ಅವರೊಂದಿಗೆ ಮುಕ್ತವಾಗಿ ಚರ್ಚಿಸಿ ಆಡಳಿತವನ್ನು ಜನಮುಖಿಗೊಳಿಸಲು ಮುಂದಾದರು. ಹೀಗೆ ಆರಂಭಗೊಂಡ ಮೈಸೂರು ಸಂಸ್ಥಾನದಲ್ಲಿನ ಅಸ್ಪೃಶ್ಯ ಜನಾಂಗದವರ ಶಿಕ್ಷಣದ ಪರ್ವ ಅತ್ಯುನ್ನತ ಶಿಖರವನ್ನು ಮುಟ್ಟಿತು. ೧೯೦೨ರಿಂದ ೧೯೪೦ರವರೆಗೆ ಆಳ್ವಿಕೆ ಮಾಡಿದ ಜನನಾಯಕ ಸಾಮಾನ್ಯ ಜನರ ಮನೆ ಮನೆ ಭೂಪ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಧುನಿಕ ಮೈಸೂರಿನ ಚರಿತ್ರೆಗೆ ಮುನ್ನುಡಿ, ಅಧ್ಯಾಯಗಳು ಹಾಗೂ ಬೆನ್ನುಡಿ ಎಲ್ಲವೂ ಅವರೇ ಆದರು. ಆಧುನಿಕ ಭಾರತದಲ್ಲಿಯೇ ಇವರ ಆಳ್ವಿಕೆ ಜನಮುಖಿ ಹಿನ್ನೆಲೆಯಿಂದ ಅವಿಸ್ಮರಣೀಯವಾದದ್ದು. ಈವರೆಗೂ ದೇವಾಲಯದ ಮೂಲಕ ಧರ್ಮರಾಜಕಾರಣವೇ ಮಾತನಾಡುತ್ತಿದ್ದ ಸಂದರ್ಭವನ್ನು ಬದಿಗೆ ಸರಿಸಿ, ದೇವಾಲಯೇತರ ಜನ ಕೇಂದ್ರೀತ ರಾಜಕಾರಣ ಮಾತನಾಡಲು ಪ್ರಾರಂಭಿಸಿತು. ಶತಮಾನಗಳಿಂದ ಧಾರ್ಮಿಕ ಹಿನ್ನೆಲೆಯ ಸಾಮಾಜಿಕ ಸಂಕೋಲೆಯಲ್ಲಿ ಸಿಲುಕಿದ್ದ ಅಸ್ಪೃಶ್ಯ ಜನಾಂಗವನ್ನು ಬಿಡಿಸಿ ಮುಕ್ತ ಸಾಂಸ್ಕೃತಿಕ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಈ ಜನಾಂಗದವರಿಗೆ ಶಿಕ್ಷಣದ ಸೌಲಭ್ಯವನ್ನು ಹೆಚ್ಚೆಚ್ಚು ನೀಡುವುದರ ಜೊತೆಗೆ ದೇವಾಲಯಗಳಿಗೆ ಮುಕ್ತ ಪ್ರವೇಶ, ಅಸ್ಪೃಶ್ಯತೆ ಆಚರಣೆ ವಿರುದ್ಧ ಕಠಿಣ ಕ್ರಮ, ದೇವದಾಸಿ ಪದ್ಧತಿಯ ನಿರ್ಮೂಲನೆ, ಮಹಿಳೆಯರಿಗೆ-ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡುವ, ವಿಧವೆಯರಿಗೆ ಪುನರ್ ವಿವಾಹಕ್ಕೆ ಅವಕಾಶ ಮಾಡಿಕೊಡುವ ಇನ್ನಿತರೆ ಅಮಾನವೀಯ ಆಚರಣೆಗಳನ್ನು ದೇವರು, ಧರ್ಮ ಹಾಗೂ ಸಾಮಾಜಿಕ ಶ್ರೇಣೀಕೃತ ಹಿನ್ನೆಲೆಯಿಂದ ಆಚರಣೆ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸುವ ರಾಜಾಜ್ಞೆಯ ಮೂಲಕ ಜಾರಿಗೆ ತಂದರು. ಈ ಸಾಧನೆಗಾಗಿ ಇವರನ್ನು ಜನಸಾಮಾನ್ಯರು ನಾಲ್ವಡಿ ಭೂಪ ಮನೆ ಮನೆ ದೀಪ ಎಂದು ಕರೆಯುವುದು. ಧರ್ಮಕೇಂದ್ರದ ಪ್ರಭುತ್ವದ ಹಿನ್ನೆಲೆಯಿಂದ ಇವರು ರಾಜರ್ಷಿ ಎನಿಸಿಕೊಳ್ಳಬಹುದು. ಈ ರಾಜರ್ಷಿ ಎಂಬುದು ತೀರ್ಥದ ಸಂಕೇತವಾದರೆ, ಜನಪರ ಕಾರ್ಯಗಳ ಸಂಕೇತದಿಂದ ಇವರು ಎಂದೆಂದಿಗೂ ಜನರ ಬಾಯಲ್ಲಿ ಭೂಪನೇ ಆಗಿದ್ದಾರೆ. ಈ ಭೂಪ ಎನ್ನುವುದು ಬೆವರಿನ ಸಂಕೇತವಾಗಿದೆ. ನಾಲ್ವಡಿಯವರಿಗೆ ತನ್ನ ನಾಡಿನಲ್ಲಿ ಶತಶತಮಾನ ಗಳಿಂದ ತೀರ್ಥ ಮತ್ತು ಬೆವರಿಗೆ ಇರುವ ಅಜಗಜಾಂತರ ವ್ಯತ್ಯಾಸದ ಅರಿವಿತ್ತು. ಈ ಅರಿವಿನ ಆಧಾರದ ಮೇಲೆ ಅಸ್ಪೃಶ್ಯ ಜನಾಂಗ ನಾಲ್ವಡಿ ಅವರ ಸಕಲ ಶೈಕ್ಷಣಿಕ ಸೌಲಭ್ಯವನ್ನು ನೀಡಿ, ಮಾದರಿ ಶಾಲೆಯ ರೂಪದಲ್ಲಿ ಸ್ಥಾಪಿಸಿದ ಪಂಚಮ ಶಾಲೆಗಳಲ್ಲಿ ಶಿಕ್ಷಣ ಪಡೆದು ಪ್ರಪ್ರಥಮವಾಗಿ ಪದವಿ ಪಡೆದು ಸ್ವಾತಂತ್ರ್ಯಪೂರ್ವದ ಅಂತಿಮಘಟ್ಟ ಹಾಗೂ ಸ್ವಾತಂತ್ರ್ಯನಂತರದ ಆರಂಭದ ಕಾಲಘಟ್ಟದಲ್ಲಿ ನಾಡು-ನುಡಿ ಸಮಾಜಕ್ಕಾಗಿ ಸೇವೆ ಮಾಡಿದ ಪ್ರಥಮ ತಲೆಮಾರಿನ ದಲಿತ ಶಿಕ್ಷಣವಂತರನ್ನು ಚಾರಿತ್ರಿಕವಾಗಿ ಅನಾವರಣಗೊಳಿಸುವುದೇ ಈ ಕೃತಿಯ ಜೀವಾಳ. ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು ಎಂಬ ಭಾರತದ ಜನ ಚರಿತ್ರೆಯ ವಾರಸುದಾರರಾದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ ಈ ಕೃತಿಯನ್ನು ರಚಿಸಲಾಗಿದೆ.
ಮಾಡಿರುವುದು ಅಲ್ಪ, ಮಾಡಬೇಕಾದದ್ದು ಅಪಾರ ಎಂಬುದು ಜನ ಸಂವಿಧಾನದ ಅನುಭವದ ಮಾತು. ಈ ಹಿನ್ನೆಲೆಯಿಂದ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಮುಕ್ತವಾದ ಅವಕಾಶಗಳು ಇದ್ದೇ ಇದೆ. ಈ ಅವಕಾಶಕ್ಕೆ ಇದೊಂದು ಪ್ರವೇಶಿಕೆ ಎಂದು ಹೇಳಿದರೆ ತಪ್ಪಾಗದು.
ಮೈಸೂರು ಸಂಸ್ಥಾನದಲ್ಲಿ ದಲಿತರ ಶಿಕ್ಷಣ ವ್ಯವಸ್ಥೆಯ ಸಾಧಕ-ಬಾಧಕಗಳನ್ನು ಕುರಿತಂತೆ ಇನ್ನು ಹೆಚ್ಚಿನ ಅಧ್ಯಯನಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರು ಸಂಸ್ಥಾನದಲ್ಲಿ ದಲಿತರು, ಮಿರ್ಜಾ ಇಲ್ಮಾಯಿಲ್ ಕಾಲದ ಮೈಸೂರು ಸಂಸ್ಥಾನ, ಜಯಚಾಮರಾಜೇಂದ್ರ ಒಡೆಯರ್ ಕಾಲದ ಮೈಸೂರು ಸಂಸ್ಥಾನ, ನಾಲ್ವಡಿ ಕೃಷ್ಣನ ಮೈಸೂರು, ವಸಾಹತುಕಾಲಘಟ್ಟದ ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ಸಮಗ್ರ ದಲಿತ ಚರಿತ್ರೆ ಎಂಬ ನನ್ನ ಕೃತಿಗಳಲ್ಲಿ ವಿಸ್ತೃತವಾಗಿ ಚರ್ಚಿಸುವುದನ್ನು ಗಮನಿಸಬಹುದು.
ಈ ಮಾಹಿತಿಯನ್ನು ಸಂಪೂರ್ಣ ಕ್ಷೇತ್ರಕಾರ್ಯದ ಮೂಲಕ ಇಲ್ಲಿ ದಾಖಲಿಸಿರುವ ಸಾಧಕರ ಮಕ್ಕಳು, ಮೊಮ್ಮಕ್ಕಳು ಹಾಗೂ ಅವರ ವಂಶಸ್ಥರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಸಿಕ್ಕಷ್ಟು ಮಾಹಿತಿಯನ್ನೇ ವಸ್ತುನಿಷ್ಠವಾಗಿ ದಾಖಲಿಸಲಾಗಿದೆ.
ಕೃತಜ್ಞತೆಗಳು
ಈ ಮಾದರಿಯ ಮಹತ್ವದ ಕೃತಿಯನ್ನು ಪ್ರಕಟಿಸಲು ಮುಂದಾದ ಹೊಸಪೇಟೆಯ ಯಾಜಿ ಪ್ರಕಾಶನ ಇದರ ಸಂಸ್ಥಾಪಕರಾದ ಶ್ರೀ ಗಣೇಶ ಯಾಜಿ, ಶ್ರೀಮತಿ ಸವಿತಾ ಯಾಜಿ ಅವರಿಗೆ ವಂದನೆಗಳು. ನನ್ನೆಲ್ಲ ಬೌದ್ಧಿಕ ಸಂಕಟಗಳಿಗೆ ಪ್ರತಿ ಹಂತದಲ್ಲೂ ನೆರವಾಗಿ ಸಲಹೆ ನೀಡಿ ಈ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರೇರಣೆಯಾಗಿರುವ ಪ್ರೀತಿಯ ಮಡದಿ ಡಾ. ಬಿ.ವಿ.ನಾಗವೇಣಿ ಸೋಸಲೆ, ಮಕ್ಕಳಾದ ಸ್ಫೂರ್ತಿ ಸಿ.ಸೋಸಲೆ, ಹಾಗೂ ತಾನ್ಯ ಸಿ.ಸೋಸಲೆ ಅವರಿಗೆ ಪ್ರೀತಿಯ ವಂದನೆಗಳು.
ಬಹುಮುಖ್ಯವಾಗಿ ನನ್ನೆಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ನನ್ನ ಸಂಶೋಧನಾ ವಿದ್ಯಾರ್ಥಿಗಳಾಗಿ ಬಹುಹತ್ತಿರದಿಂದ ಗಮನಿಸುತ್ತಾ ಈ ಮಾದರಿಯಲ್ಲಿ ಮುನ್ನಡೆಯಲು ಹಂಬಲಿಸುತ್ತಿರುವ ನನ್ನ ಪ್ರೀತಿಯ ವಿದ್ಯಾರ್ಥಿಗಳಾದ ಮಣಿಕಂಠ ಹಂಗಳ, ನರಸಿಂಹರಾಜು ಎಚ್.ಸಿ. ಇವರಿಗೆ ಅಭಿನಂದನೆಗಳು. ಇವರುಗಳ ಮುಂದಿನ ಭವಿಷ್ಯ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ. ನನ್ನ ಈ ಶೈಕ್ಷಣಿಕ ಕ್ಷೇತ್ರದ ಕೆಲಸಗಳಿಗೆ ಇವರ ಕೊಡುಗೆ ಅಪಾರವಾದದ್ದು. ಈ ಮಾದರಿಯಲ್ಲಿಯೇ ಅವರ ಬದುಕನ್ನು ರೂಪಿಸಿಕೊಳ್ಳಲಿ ಎಂಬುದೇ ನನ್ನ ಆಶಯವೂ ಆಗಿದೆ.
ನಮ್ಮ ನಾಡಿನ ಪ್ರಜ್ಞಾವಂತರ ಈ ಕೃತಿಯನ್ನು ಓದಿ ಇತಿಹಾಸವನ್ನು ಇನ್ನು ಹೆಚ್ಚು ಹೆಚ್ಚು ನಿರ್ಮಿಸಲು ಮುಂದಾದರೆ ವಿಶ್ವಜ್ಞಾನಿ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ಹುಟ್ಟಿ ನಡೆದಾಡಿದ ನೆಲಕ್ಕೆ ನಮ್ಮ ನಡೆಯು ಸೇರಿದಂತೆ ಎಂದು ಹೇಳಲು ಭೀಮ ನಮನಗಳ ಮೂಲಕ ಇಚ್ಚಿಸುತ್ತೇನೆ.
ಪ್ರೊ. ಎನ್.ಚಿನ್ನಸ್ವಾಮಿ ಸೋಸಲೆ
ಪರಿವಿಡಿ
ಸವಿನುಡಿ / ೫
ಲೇಖಕರ ಮಾತು / ೭
ಪ್ರವೇಶ / ೧೫
೧. ಸೋಸಲೆ ಎಸ್. ಸಿದ್ದಪ್ಪ (ದಲಿತ ಜನಾಂಗದ ಮೊದಲ ಕವಿ) / ೧೮
೨. ಸೋಸಲೆ ಬಿ. ರಾಚಪ್ಪ (ಸಂಸ್ಥಾನದಲ್ಲಿ ಬಿ.ಎ. ಪದವಿ ಪಡೆದ ದಲಿತವರ್ಗದ ಮೊದಲಿಗರು) / ೨೦
೩. ಆರ್.ಭರಣಯ್ಯ (ಪ್ರಥಮವಾಗಿ ಐ.ಎ.ಎಸ್. ದರ್ಜೆಗೆ ಪದೋನ್ನತಿ ಪಡೆದ ದಲಿತ ಅಧಿಕಾರಿ) / ೩೧
೪. ಸೋಸಲೆ ಎಸ್.ಎಂ.ಸಿದ್ದಯ್ಯ (ಪ್ರಥಮ ತಲೆಮಾರಿನ ವಕೀಲರು ಹಾಗೂ ಮಾಜಿ ಲೋಕಸಭಾ ಸದಸ್ಯರು) / ೩೩
೫. ಡಿ. ಗೋವಿಂದದಾಸ್ (ದಲಿತ ಜನಾಂಗದ ಮೊದಲ ಕವಿ ಹಾಗೂ ಸಾಹಿತಿ) / ೫೬
೬. ಮಳವಳ್ಳಿ ಎಂ. ಮಾದಯ್ಯ ಅಥವಾ ಮೇಸ್ಟ್ರು ಮಾದಯ್ಯ / ೬೦
೭. ಜಿ.ವೆಂಕಟಯ್ಯ (ದಲಿತ ಜನಾಂಗದ ಮೊದಲ ಕವಿ ಹಾಗೂ ಸಾಹಿತಿ) / ೬೨
೮. ಮಳವಳ್ಳಿ ಎಂ.ಶಂಕರಯ್ಯ (ದಲಿತ ಜನಾಂಗದ ಮೊದಲ ತಲೆಮಾರಿನ ಅಧಿಕಾರಿ) / ೬೪
೯. ಡಾ. ಡಿ. ರುದ್ರಯ್ಯ (ದಲಿತ ಜನಾಂಗದ ಮೊದಲ ಪಶುವೈದ್ಯಾಧಿಕಾರಿ) / ೬೬
೧೦. ಡಾ. ಜಿ.ಗೋಪಾಲ್ (ದಲಿತ ಜನಾಂಗದ ಮೊದಲ ಮಕ್ಕಳ ತಜ್ಞ ವೈದ್ಯಾಧಿಕಾರಿ) / ೬೮
೧೧. ಕೆರೋಹಟ್ಟಿ ಎನ್.ಕೆ. ನಂಜಯ್ಯ (ಪ್ರಥಮ ತಲೆಮಾರಿನ ದಲಿತ ಜನಾಂಗದ ತಹಶೀಲ್ದಾರ್) / ೭೦
೧೨. ಆಲೂರು ಬಿ. ರಾಚಯ್ಯ (ಮಾಜಿ ಮಂತ್ರಿಗಳು ಹಾಗೂ ಕೇರಳದ ರಾಜ್ಯಪಾಲರು) / ೭೨
೧೩. ಡಿ.ಆರ್. ನಂಜಯ್ಯ (ಪ್ರಥಮ ತಲೆಮಾರಿನ ನಿವೃತ್ತ ಆದಾಯ ತೆರಿಗೆ ಕಮಿಷನರ್) / ೭೫
೧೪. ಡಿ. ವೆಂಕಟಯ್ಯ (ದಲಿತ ಜನಾಂಗದ ಮೊದಲ ಕವಿ ಹಾಗೂ ಸಾಹಿತಿ) / ೭೭
೧೫. ಆರ್. ಚನ್ನಿಗರಾಮಯ್ಯ (ದಲಿತ ಜನಾಂಗದ ಮೊದಲ ಮಂತ್ರಿ) / ೭೯
೧೬. ಎಲ್. ಲಿಂಗಯ್ಯ (ಪ್ರಥಮವಾಗಿ ಐ.ಎ.ಎಸ್. ದರ್ಜೆಗೇರಿದ ದಲಿತ ಅಧಿಕಾರಿ) / ೮೩
೧೭. ಶಿಕ್ಷಣತಜ್ಞ ಎಚ್.ಎಂ. ಗಂಗಾಧರಯ್ಯ (ತುಮಕೂರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನಿರ್ಮಾತೃ) / ೮೪
೧೮. ಎಂ. ಆರ್ಯಮೂರ್ತಿ (ದಲಿತಪರ ಸಾಮಾಜಿಕ ಚಿಂತಕರು ಹಾಗೂ ಹೋರಾಟಗಾರ) / ೯೨
೧೯. ಚಿಕ್ಕಹನುಮಂತಯ್ಯ (ಬಾಪೂಜಿ ವಿದ್ಯಾರ್ಥಿ ನಿಲಯದ ಸ್ಥಾಪಕರು) / ೯೭
೨೦. ಟಿ. ಹನುಮಯ್ಯ (ಚಿತ್ರದುರ್ಗದ ದಲಿತ ವಿದ್ಯಾರ್ಥಿ ನಿಲಯದ ಸ್ಥಾಪಕರು) / ೧೦೨
೨೧. ಎಂ. ಗೋವಿಂದರಾಜು (ಬಾಪೂಜಿ ವಿದ್ಯಾರ್ಥಿ ನಿಲಯದ ಪ್ರಥಮ ನಿಲಯ ಪಾಲಕರು) / ೧೦೪
೨೨. ಬಿ.ಜಿ. ಬುದ್ದಣ್ಣ (ಕಸ್ತೂರಿ ಬಾ ಗಾಂಧಿ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸ್ಥಾಪಕರು) / ೧೦೬
೨೩. ದೊಡ್ಡ ಓಬಳಯ್ಯ (ಪ್ರಥಮ ತಲೆಮಾರಿನ ದಲಿತ ಅಧಿಕಾರಿ) / ೧೦೮
೨೪. ಎನ್. ರಾಚಯ್ಯ (ಮಾಜಿ ಮಂತ್ರಿಗಳು) / ೧೧೦
೨೫. ಪೂಜದಾಳಯ್ಯ (ಪ್ರಥಮ ತಲೆಮಾರಿನ ಸಾಮಾಜಿಕ ಹೋರಾಟಗಾರರು) / ೧೧೪
೨೬. ಜಸ್ಟೀಸ್ ಕೊರಟಗೆರೆ ಭೀಮಯ್ಯ (ದಲಿತ ಜನಾಂಗದ ಪ್ರಥಮ ಮುಖ್ಯ ನ್ಯಾಯಾಧೀಶರು) / ೧೧೫
೨೭. ಜಿ. ದುಗ್ಗಪ್ಪ (ಮಾಜಿ ಕೆ.ಪಿ.ಎಸ್.ಸಿ. ಅಧ್ಯಕ್ಷರು ಹಾಗೂ ಶಾಸಕರು) / ೧೧೭
೨೮. ಸಿ. ರಾಚಯ್ಯ (ಆದಿಜಾಂಬವ ಅಭಿವೃದ್ಧಿ ಸಂಘ ಸ್ಥಾಪಕರಲ್ಲೊಬ್ಬರು) / ೧೧೯
೨೯. ಹೆಚ್.ಆರ್. ತಿಪ್ಪಯ್ಯ (ದಲಿತ ಜನಾಂಗದ ಎಂ.ಎ. ಪ್ರಥಮ ಪದವಿ ಪಡೆದವರು) / ೧೨೦
೩೦. ದಲಿತ ರಾಜಕಾರಣದ ಸಾಕ್ಷಿಪ್ರಜ್ಞೆ ಕೋಲಾರದ ಟಿ. ಚೆನ್ನಯ್ಯ (ಪ್ರಥಮ ತಲೆಮಾರಿನ ದಲಿತ ಶಿಕ್ಷಣವಂತರು ಕೇಂದ್ರ, ರಾಜ್ಯದ ಸಚಿವರು ಹಾಗೂ ಅಂಬೇಡ್ಕರ್ ಒಡನಾಡಿಗಳು) / ೧೨೯
೩೧. ಕೆ.ಎಚ್. ರಂಗನಾಥ (ಪ್ರಥಮ ತಲೆಮಾರಿನ ದಲಿತ ರಾಜಕಾರಣಿ ಮತ್ತು ಮಾಜಿ ಮಂತ್ರಿಗಳು) / ೧೨೭
೩೨. ಎಂ.ವೈ. ಮುರುಗೇಶ್ / ೧೩೭
೩೩. ಎಂ. ಚಿಕ್ಕಲಿಂಗಯ್ಯ / ೧೩೮
೩೪. ಜಿ.ಎಸ್. ರಾಮಕೃಷ್ಣಯ್ಯ / ೧೩೯
೩೫. ಜಯಶೀಲನ್ / ೧೪೦
೩೬. ಶ್ರೀಮತಿ ಗೌರಮ್ಮ / ೧೪೧
೩೭. ಮೊದಲ ತಲೆಮಾರಿನ ಶಿಕ್ಷಣವಂತರ ವಿವರ / ೧೪೨
ಪರಾಮರ್ಶನ ಗ್ರಂಥಗಳು / ೧೪೫
Reviews
There are no reviews yet.