ದೀಪದ ಕೆಳಗಿನ ನೆರಳು
ಹಿಂದೂಧರ್ಮದ ಋಷಿಗಳು ಕೇವಲ ಹಿಂದೂಗಳನ್ನು ಮಾತ್ರ ಮನಸ್ಸಿನಲ್ಲಿ ಇಟ್ಟುಕೊಂಡು ಮಂತ್ರಗಳನ್ನು ರಚಿಸಲಿಲ್ಲ. ಅವರ ಮನಸ್ಸಿನಲ್ಲಿ ಸಮಸ್ತ ಮಾನವ ಕುಲವೇ ಇತ್ತು. ಈ ಮಂತ್ರದ್ರಷ್ಟಾರರ ಉದ್ದೇಶ ಎರಡು. ಮೊದಲನೆಯದು ’ಆತ್ಮಜ್ಞಾನ’ ಹಾಗೂ ಎರಡನೆಯದು ’ಲೋಕ ಕಲ್ಯಾಣ’. ’ಏಕಂ ಸತ್ ವಿಪ್ರಾಃ ಬಹುದಾ ವದಂತಿ’ -ಇರುವುದೊಂದೇ ಸತ್ಯ. ಅದನ್ನು ಜ್ಞಾನಿಗಳು ಹಲವು ರೀತಿಯಲ್ಲಿ ವರ್ಣಿಸುತ್ತಾರೆ. ’ಆ ನೋ ಭದ್ರಾಃಕ್ರತವೋಯಂತು ವಿಶ್ವತಃ’ ಜಗತ್ತಿನ ಎಲ್ಲ ಕಡೆಯಿಂದ ಶ್ರೇಷ್ಠವಾದ ವಿಚಾರಗಳು ಬಂದು ನಮ್ಮನ್ನು ಸೇರಲಿ. ’ಸತ್ಯಮೇವ ಯತೆ, ನಾನೃತಮ್’ ಸತ್ಯಕ್ಕೆ ಮಾತ್ರ ಗೆಲುವು. ಸುಳ್ಳಿಗಲ್ಲ. ’ವಸುಧೈವ ಕುಟುಂಬಕಮ್’ ಇಡೀ ಜಗತ್ತೇ ಒಂದು ಕುಟುಂಬ. ಈ ರೀತಿಯಲ್ಲಿ ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿ, ಪಶು, ಪಕ್ಷಿ, ಗಿಡ, ಮರ ಹಾಗೂ ಸಮಸ್ತ ಪ್ರಕೃತಿಯು ಸ್ವಸ್ಥವಾಗಿರಲಿ ಎಂದು ಆಶಿಸಿದರು. ಹಾಗಾಗಿ ಹಿಂದೂಧರ್ಮವನ್ನು ’ವಿಶ್ವಧರ್ಮ’ ಹಾಗೂ ’ಮಾನವಧರ್ಮ’ ಎಂದು ಕರೆದರೆ ಅದು ಅತಿಶಯೋಕ್ತಿಯಾಗಲಾರದು.
* * *
ಹಿಂದೂ ಧರ್ಮದಲ್ಲಿ ಆಯಾ ವರ್ಣ/ಜಾತಿಯವರು ಆಯಾ ವರ್ಣ/ಜಾತಿಯವರನ್ನೇ ಮದುವೆಯಾಗಿದ್ದರೆ ನಾಲ್ಕೇ ವರ್ಣಗಳು/ಜಾತಿಗಳು ರೂಪುಗೊಳ್ಳುತ್ತಿದ್ದವು. ಆದರೆ ಹಾಗಾಗಲಿಲ್ಲ. ಕಾಮವು ಕುರುಡಲ್ಲವೆ! ಹಾಗಾಗಿ ಅಂತರವರ್ಣ/ಜಾತಿ ಲೈಂಗಿಕ ಸಂಪರ್ಕಗಳು ಸಾಮಾನ್ಯವಾದವು. ಅದರ ಫಲವಾಗಿ ಅಂದಿನ ಸಮಾಜದಲ್ಲಿ ’ಅನುಲೋಮ’ ಮತ್ತು ’ಪ್ರತಿಲೋಮ’ ವಿವಾಹಗಳು ಅಸ್ತಿತ್ವಕ್ಕೆ ಬಂದವು.
ಅನುಲೋಮ ವಿವಾಹದಲ್ಲಿ ಮೇಲಿನ ಜಾತಿಯ ಗಂಡಸು, ಕೆಳಗಿನ ಜಾತಿಯ ಹೆಣ್ಣನ್ನು ಮದುವೆಯಾಗುತ್ತಿದ್ದನು. ಇವರಿಗೆ ಹುಟ್ಟಿದ ಮಕ್ಕಳಿಗೆ ತಂದೆ ಅಥವ ತಾಯಿಯ ಜಾತಿಯು ಲಭಿಸುತ್ತಿರಲಿಲ್ಲ. ಅವರು ತಮ್ಮದೇ ಆದ ಜಾತಿಯನ್ನು ನಿರ್ಮಿಸಿಕೊಳ್ಳಬೇಕಾಯಿತು. ಹೀಗೆ ಭಿನ್ನ ವರ್ಣ/ಜಾತಿಯ ಮದುವೆಗಳು ವರ್ಣಸಂಕರಕ್ಕೆ ಅನುವು ಮಾಡಿಕೊಟ್ಟವು. ಈ ರೀತಿಯ ಅನುಲೋಮದ ಮದುವೆಗಳಿಂದ ಹುಟ್ಟಿದ ಮಿಶ್ರಜಾತಿಗಳಿಗೆ ಎಲ್ಲಿಯೋ ಒಂದುಕಡೆ, ವೈಶ್ಯ ಮತ್ತು ಶೂದ್ರರ ನಡುವಿನ ಸ್ಥಾನಮಾನ ದೊರೆಯುತ್ತಿತ್ತು. ಧರ್ಮಶಾಸ್ತ್ರಕಾರರು ಇವರನ್ನು ಸ್ವಲ್ಪಮಟ್ಟಿಗೆ ಸಹಿಸಿಕೊಂಡರು.
ಪ್ರತಿಲೋಮ ವಿವಾಹವೆಂದರೆ ಉನ್ನತಜಾತಿಯ ಹೆಣ್ಣುಮಕ್ಕಳು ಕೆಳಜಾತಿಯ ಗಂಡಸರನ್ನು ಮದುವೆಯಾಗುವುದು. ಈ ರೀತಿಯ ಮದುವೆಗಳನ್ನು ಧರ್ಮಶಾಸ್ತ್ರಕಾರರು ವಿರೋಧಿಸಿದರು. ಈ ಪ್ರತಿಲೋಮ ಸಂಬಂಧಗಳಲ್ಲಿ ಹುಟ್ಟುತ್ತಿದ್ದ ಸಂತಾನಗಳಿಗಾಗಿ ವಿಶೇಷ ಜಾತಿಯನ್ನು ಸೃಜಿಸಿದರು. ಅನುಲೋಮ ಸಂಕರವರ್ಣದವರನ್ನು ವೈಶ್ಯ-ಶೂದ್ರರ ನಡುವೆ ಇಟ್ಟ ಹಾಗೆ, ಪ್ರತಿಲೋಮ ಸಂಕರವರ್ಣದವರನ್ನು, ಜಾತಿ ವ್ಯವಸ್ಥೆಯಲ್ಲಿ ಬದುಕಲು ಅವಕಾಶವನ್ನೇ ಮಾಡಿ ಕೊಡದೇ, ಅವರನ್ನು ಸಮಾಜದಿಂದಲೇ ದೂರವಿಡುವ ಪ್ರಯತ್ನವನ್ನು ಮಾಡಿದರು.
ವರ್ಣಸಂಕರದಿಂದ ಹುಟ್ಟಿದ ಜನರು, ಮತ್ತೆ ಮತ್ತೆ ಇತರ ವರ್ಣ ಸಂಕರದವರನ್ನು ಮದುವೆಯಾದಾಗ ಅಸಂಖ್ಯ ಜಾತಿಗಳು ಹುಟ್ಟಿಕೊಂಡವು. ಇವರೆಲ್ಲರನ್ನು ಚಂಡಾಲರು, ಶ್ವಪಚರು ಎಂದು ಸಮಾಜದಿಂದ ದೂರವೇ ಇಟ್ಟರು. ಬಹುಶಃ ಇವರೇ ಮುಂದಿನ ದಿನಗಳಲ್ಲಿ ’ಪಂಚಮರು’ ಅಥವ ’ಅಂತ್ಯಜರು’ ಎಂದು ಕರೆಸಿಕೊಂಡರು. ಅಸ್ಪೃಶ್ಯರಾದರು. ಅಸ್ಪೃಶ್ಯರಾಗಿ ಸಮಾಜದಿಂದ ಹೊರಗೇ ಜೀವಿಸಿದರು.
ಈ ವರ್ಣಸಂಕರ ಸಂತಾನಗಳ ಜಾತಿ ನಿರ್ಣಯವನ್ನು ಮಾಡುವುದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ರಾಜಕೀಯವನ್ನು ಸ್ಪಷ್ಟವಾಗಿ ಕಾಣಬಹುದು. ಬ್ರಾಹ್ಮಣ ತಂದೆಯು, ಕ್ಷತ್ರಿಯ ತಾಯಿಯಲ್ಲಿ ಪಡೆದ ಮಗುವು ವರ್ಣಸಂಕರದ ಶಿಶು. ಆದರೆ ಆ ಮಗುವನ್ನು ’ಸವರ್ಣೀಯ’ ಎಂದೇ ಸ್ವೀಕರಿಸಿ, ಆ ಮಗುವಿಗೆ ಬ್ರಾಹ್ಮಣನ ಸ್ಥಾನವನ್ನೇ ನೀಡಿದರು. ಹಾಗೆಯೇ ಕ್ಷತ್ರಿಯ ತಂದೆಗೆ, ವೈಶ್ಯತಾಯಿಯಲ್ಲಿ ಹುಟ್ಟಿದ ಸಂಕರ ಸಂತಾನಕ್ಕೆ ’ಸವರ್ಣೀಯ’ ಅಂದರೆ ಕ್ಷತ್ರಿಯನ ಸ್ಥಾನವನ್ನೇ ನೀಡಿದರು.
ಅನುಲೋಮ ಸಂಕರವರ್ಣ ಸಂತಾನಕ್ಕೆ ಆಸ್ತಿಯಲ್ಲಿ ಹಕ್ಕು ಸೀಮಿತ ಪ್ರಮಾಣದಲ್ಲಿತ್ತು. ಆದರೆ ಪ್ರತಿಲೋಮ ವಿವಾಹದಲ್ಲಿ ಹುಟ್ಟಿದ ಮಕ್ಕಳಿಗೆ ಆಸ್ತಿಹಕ್ಕು ಸಿಗುತ್ತಿದ್ದುದು ಕಡಿಮೆ. ಶೂದ್ರತಾಯಿಗೆ ಹುಟ್ಟಿದ ಗಂಡು ಮಗುವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ತಂದೆಯ ಬಳಿ ಆಸ್ತಿಯನ್ನೇ ಕೇಳುವ ಹಾಗಿರಲಿಲ್ಲ. ತಂದೆ ಕೊಟ್ಟಷ್ಟು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಬರಿಗೈಯಲ್ಲಿ ಹೊರ ನಡೆಯಬೇಕಾಗಿತ್ತು.
ಹೀಗೆ ಪುರಾಣಕಾಲದಲ್ಲಿ ಧರ್ಮಸೂತ್ರಕಾರರೇ ಏಕಮೇವಾದ್ವಿತೀಯ ಶಾಸನಕರ್ತರಾಗಿ ತಮಗೆ ಸರಿಹೊಂದುವಂತಹ ಧರ್ಮಸೂತ್ರಗಳನ್ನು ರಚಿಸಿದರು. ಇವರು ನಿಜವಾದ ಪಟ್ಟಭದ್ರ ಹಿತಾಸಕ್ತರು. ಇವರಿಂದಲೇ ೬,೦೦೦ ಜಾತಿಗಳು ಹುಟ್ಟಿಕೊಂಡವು.
* * *
ಭಾರತೀಯ ಸಮಾಜದಲ್ಲಿ ನಡೆದ ಪ್ರತಿಲೋಮ ವಿವಾಹಗಳಿಂದ ಅದುವರೆಗೂ ಯಾರೂ ಕಂಡೂ ಕೇಳರಿಯದ ’ಪಂಚಮ ವರ್ಣ’ವು ಹುಟ್ಟಿಕೊಂಡಿತು. ಇಡೀ ಜಗತ್ತಿನಲ್ಲಿ ಎಲ್ಲಿಯೂ ಇರದಂತಹ ಅಸ್ಪೃಶ್ಯತೆಯ ಅಮಾನವೀಯ ಆಚರಣೆಯು ಆರಂಭವಾಯಿತು. ಪಂಚಮರು ಊರ ಹೊರಗೆ ವಾಸಿಸುತ್ತಿದ್ದರು. ಸಾಮಾನ್ಯವಾಗಿ ಅವರಿಗೆ ಊರಿನೊಳಗೆ ಪ್ರವೇಶವಿರುತ್ತಿರಲಿಲ್ಲ. ಆದರೆ ಯಾರದಾದರೂ ಮನೆಯಲ್ಲಿ ದನಕರುಗಳು ಸತ್ತರೆ, ಅವುಗಳನ್ನು ಕೊಂಡೊಯ್ಯಲು ಪಂಚಮರಿಗೆ ತಾತ್ಕಾಲಿಕ ಅನುಮತಿ ದೊರೆಯುತ್ತಿತ್ತು. ಆಗ ಮಾತ್ರ ಅವರು ಊರಿನೊಳಗೆ ಬರುತ್ತಿದ್ದರು. ಹೀಗೆ ಊರಿನೊಳಗೆ ಬರುವ ಪಂಚಮರು ಮೂರು ನಿಯಮಗಳನ್ನು ಪರಿಪಾಲಿಸಬೇಕಾಗಿತ್ತು.
೧. ಪಂಚಮರು ಮಧ್ಯಾಹ್ನದ ನಡು ಬಿಸಿಲಿನಲ್ಲಿ ಇಲ್ಲವೇ ಮಧ್ಯರಾತ್ರಿಯ ಕತ್ತಲಿನಲ್ಲಿ ಮಾತ್ರ ಊರಿನೊಳಗೆ ಬರಬೇಕಾಗಿತ್ತು.
೨. ಸೊಂಟಕ್ಕೆ ಪೊರಕೆಯನ್ನು ಹಾಗೂ ಕುತ್ತಿಗೆಗೆ ಎಂಜಲ ಗಡಿಗೆಯನ್ನು ಕಟ್ಟಿಕೊಳ್ಳಬೇಕಿತ್ತು.
೩. ಊರಿನೊಳಗೆ ಹೆಜ್ಜೆಯನ್ನು ಇಡುವ ಮೊದಲು ’ಸಂಬೋಳಿ, ಸಂಬೋಳಿ’ ಎಂದು ಉಚ್ಚ ಧ್ವನಿಯಲ್ಲಿ ಕೂಗಿಕೊಳ್ಳುತ್ತಾ, ತಲೆಯನ್ನು ಬಗ್ಗಿಸಿಕೊಂಡು, ಯಾರಿಗೂ ಮುಖವನ್ನು ತೋರಿಸದೇ, ಯಾರ ಮುಖವನ್ನೂ ನೋಡದೆ, ಸತ್ತ ಜಾನುವಾರನ್ನು ಕೊಂಡೊಯ್ಯಬೇಕಾಗಿತ್ತು.
ಈ ಮೂರು ನಿಯಮಗಳನ್ನು ಪರಿಪಾಲಿಸದೇ ಊರಿನೊಳಗೆ ಬರುವ ಪಂಚಮರಿಗೆ ಉಗ್ರ ಶಿಕ್ಷೆಯನ್ನು ವಿಧಿಸುತ್ತಿದ್ದರು. ಮರಣದಂಡನೆಯೂ ಸಾಮಾನ್ಯವಾಗಿತ್ತು. ಈ ಮೂರು ನಿಯಮಗಳ ಅರ್ಥವನ್ನು ತಿಳಿದುಕೊಂಡರೆ ಮಾತ್ರ ಈ ನಿಯಮಗಳ ಹಿಂದೆ ಇರುವ ಅಮಾನವೀಯತೆಯು ಅರ್ಥವಾಗುತ್ತದೆ.
ಪಂಚಮರು ನಡು ಮಧ್ಯಾಹ್ನದಲ್ಲಿ ಊರನ್ನು ಪ್ರವೇಶಿಸುವಾಗ, ಅವರ ನೆರಳು, ಅವರ ಕಾಲಬುಡದಲ್ಲಿ ಮಾತ್ರವಿರುತ್ತದೆ. ಅದುವೇ ಬೆಳಗಿನ ಹೊತ್ತು ಅಥವ ಸಂಜೆಯ ಹೊತ್ತಿನಲ್ಲಿ ಬಂದರೆ, ಅವರ ನೀಳ ನೆರಳು ಮೇಲ್ವರ್ಗದ ಜನರ ಮೇಲೆ, ಅವರ ಅಂಗಳದಲ್ಲಿ ಅಥವ ಮನೆಯ ಬಾಗಿಲ ಮೇಲೆ ಬೀಳುವ ಸಾಧ್ಯತೆಯು ಇರುತ್ತದೆ. ಹಾಗೆ ಬಿದ್ದರೆ, ಅವರು ನೆರಳು ಬಿದ್ದ ಎಲ್ಲವೂ ಮೈಲಿಗೆಯಾಗುತ್ತದೆ. ಮೈಲಿಗೆಯಾದ ಎಲ್ಲವನ್ನು ಗುಡಿಸಿ ಸ್ವಚ್ಛಗೊಳಿಸದೆ ಅವುಗಳನ್ನು ಬಳಸುವಂತಿರಲಿಲ್ಲ. ಉಚ್ಚವರ್ಣದವರು ಈ ಶ್ರಮದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪಂಚಮರು ನಡುಮಧ್ಯಾಹ್ನವೇ ಊರೊಳಗೆ ಬರಬೇಕೆಂದು ಕಾನೂನನ್ನು ಮಾಡಿದರು. ರಾತ್ರಿಯಲ್ಲಿ ಪಂಚಮರ ನೆರಳು ಬೀಳುತ್ತಿರಲಿಲ್ಲವಾದ ಕಾರಣ, ಮೈಲಿಗೆಯ ಸಮಸ್ಯೆಯೇ ಇರುತ್ತಿರಲಿಲ್ಲ.
ಪಂಚಮರು ತಮ್ಮ ಸೊಂಟಕ್ಕೆ ಪೊರಕೆಯನ್ನು ಕಟ್ಟಿಕೊಳ್ಳಬೇಕಾಗಿತ್ತು. ಏಕೆಂದರೆ ಪಂಚಮರ ಹೆಜ್ಜೆಯು ಅಪವಿತ್ರ. ಅವರ ಹೆಜ್ಜೆಯ ಧೂಳು ಇತರರಿಗೆ ತಾಗಿದರೆ, ಅದು ಮೈಲಿಗೆಯನ್ನು ಉಂಟುಮಾಡುತ್ತಿತ್ತು. ಆ ಧೂಳು ಬಿದ್ದು ಅಪವಿತ್ರನಾದವನು ಸ್ನಾನವನ್ನು ಮಾಡಿ, ಪಂಚಗವ್ಯವನ್ನು ತೆಗೆದುಕೊಂಡು ಪರಿಶುದ್ಧನಾಗಬೇಕಾಗಿತ್ತು. ಹಾಗಾಗಿ ಪಂಚಮನು ತನ್ನ ಸೊಂಟಕ್ಕೆ ಪೊರಕೆಯನ್ನು ಕಟ್ಟಿಕೊಂಡು, ತನ್ನ ಹೆಜ್ಜೆಯ ಗುರುತನ್ನು ತಾನೇ ಗುಡಿಸುತ್ತಾ ಮುಂದುವರೆಯಬೇಕಾಗಿತ್ತು. ಊರಿನೊಳಗೆ ಬರುತ್ತಿರುವಾಗ ಅಕಸ್ಮಾತ್ ಕೆಮ್ಮು ಬಂದರೆ, ಪಂಚಮನು ಕಫವನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡಿರುತ್ತಿದ್ದ ಎಂಜಲ ಮಡಿಕೆಯಲ್ಲಿಯೇ ಉಗುಳಬೇಕಾಗಿತ್ತು. ಹೊರಗೆ ಉಗುಳಿದರೆ ಇಡೀ ಊರಿಗೆ ಊರೇ ಮೈಲಿಗೆಯಾಗಿಬಿಡುತ್ತಿತ್ತು.
ಪಂಚಮರು ಊರಿನೊಳಗೆ ಹೆಜ್ಜೆಯನ್ನು ಇಡುವುದಕ್ಕೆ ಮೊದಲೇ ’ಸಂಬೋಳಿ, ಸಂಬೋಳಿ’ ಎಂದು ಕೂಗಿಕೊಳ್ಳಬೇಕಾಗಿತ್ತು. ಸಂಬೋಳಿ ಸಂಬೋಳಿ ಎಂದರೆ ’ಎಚ್ಚರ! ಎಚ್ಚರ!… ಪಂಚಮರು ಊರಿನೊಳಗೆ ಬರುತ್ತಿದ್ದಾರೆ, ಅವರ ಮುಖವನ್ನು ನೀವು ನೋಡಬಾರದು, ಅವರೂ ಸಹ ನಿಮ್ಮ ಮುಖವನ್ನು ನೋಡಬಾರದು, ನೋಡಿದರೆ ನಿಮಗೆ ಮೈಲಿಗೆಯಾಗಿಬಿಡುತ್ತದೆ, ಹಾಗಾಗಿ ನೀವು ನಿಮ್ಮ ನಿಮ್ಮ ಮನೆಗಳ ಕಿಟಕಿ, ಬಾಗಿಲುಗಳನ್ನು ಹಾಕಿಕೊಳ್ಳಿ, ನಾವು ಊರಿನಿಂದ ಹೊರಗೆ ಹೋಗುವವರಿಗೂ, ನಿಮ್ಮ ಮನೆಯ ಒಳಗೇ ಇರಿ’ ಎನ್ನುವ ಸಂದೇಶವನ್ನು ಈ ಸಂಬೋಳಿ, ಸಂಬೋಳಿ ಎನ್ನುವ ಪದದ ಮೂಲಕ ನೀಡುತ್ತಿದ್ದರು. ಬಹುಶಃ ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನನ್ನು ಇಷ್ಟು ಅಮಾನವೀಯವಾಗಿ ನಡೆಸಿಕೊಂಡ ಉದಾಹರಣೆಯು ಮತ್ತೊಂದು ಇರಲಾರದು.
ಹಿಂದೂಧರ್ಮವು ಇಡೀ ಜಗತ್ತಿಗೇ ಬೆಳಕನ್ನು ನೀಡಬಲ್ಲುದು. ನಿಜ. ಆದರೆ ಅದರ ಬುಡದಲ್ಲಿಯೇ ನೆರಳು ಕರಾಳವಾಗಿ ಚಾಚಿಕೊಂಡಿರುವುದನ್ನು ನೋಡಿಯೂ ನೋಡದಂತೆ ಜಾಣಕುರುಡು-ಜಾಣಕಿವುಡನ್ನು ತೋರುತ್ತಿರುವುದು ಖೇದನೀಯ ವಿಚಾರವಾಗಿದೆ.
’ಹಿಂದೂಧರ್ಮ: ಕಪ್ಪು-ಬಿಳುಪು’ ಪುಸ್ತಕವನ್ನು ಪ್ರಕಟಿಸುತ್ತಿರುವ ಹೊಸಪೇಟೆಯ ಯಾಜಿ ಪ್ರಕಾಶನದ ಗಣೇಶ ಯಾಜಿ ಹಾಗೂ ಸವಿತಾ ಯಾಜಿಯವರಿಗೆ ನಾನು ಕೃತಜ್ಞ. ಮುಖಪುಟ ಕಲಾವಿದರಿಗೂ, ಪುಟವಿನ್ಯಾಸಕರಿಗೂ, ಮುದ್ರಕರಿಗೂ ಹಾಗೂ ಕೊಂಡು ಓದುವ ಕನ್ನಡಿಗರಿಗೆ ನಾನು ಆಭಾರಿ.
–ಡಾ. ನಾ.ಸೋಮೇಶ್ವರ
ಪುಟ ತೆರೆದಂತೆ…
ಸವಿನುಡಿ / ೩
ದೀಪದ ಕೆಳಗಿನ ನೆರಳು / ೭
೧. ಗಾಳಿಯನ್ನು ಪಳಗಿಸಿದ ಬಾಲಕ / ೧೩
೨. ನಿಮ್ಮ ಮಗನನ್ನು ಕೊಂದ ಪಾತಕ ನಿಮಗೆ ಸುತ್ತಿಕೊಳ್ಳುತ್ತದೆ! / ೧೮
೩. ಡು ಆರ್ ಡೈ! -ಕ್ಷುದ್ರ ಸ್ಪರ್ಧಾ ಜಗತ್ತು / ೨೪
೪. ಮಿಡತೆಯ ಮಹಾದಂಡಿನ ದಾಳಿ! / ೩೬
೫. ಕಾದಿದೆ ಮಹಾಮನೆ / ೪೧
೬. ಕನ್ನಡಕ್ಕೂ ಭುವನೇಶ್ವರಿಗೂ ಏನು ಸಂಬಂಧ? / ೮೦
೭. ಮಾನವ ಸ್ವಭಾವದ ಕಪ್ಪು-ಬಿಳುಪಿನ ಅನಾವರಣ-ದೀಪಾವಳಿ / ೯೦
೮. ಹೆಣ್ಣು, ಹೊನ್ನು, ಮಣ್ಣುಗಳ ಭೀಕರತೆ -’ತೇಜೋ ಘಿ ತುಂಗಭದ್ರಾ’ / ೧೧೨
೯. ವಚನಗಳಲ್ಲಿ ಮೌಢ್ಯತೆಯ ನಿರಾಕರಣೆ / ೧೩೯
೧೦. ವಚನಗಳಲ್ಲಿ ಆರೋಗ್ಯ ದರ್ಶನ / ೧೬೬
೧೧. ಒಂದು ಲೋಟ ಹಾಲನ್ನು ನೀಡಿ! -ವಿಶ್ವ ಕ್ಷೀರ ದಿನಾಚರಣೆ / ೧೮೫
೧೨. ’ಹಾಟ್‌ಸೀಟ್’ನಲ್ಲಿ ಕುಳಿತಾಗ…! / ೧೯೧
೧೩. ನಮ್ಮ ಶಾಪ ವಿಮೋಚನೆ ಎಂದು? / ೨೦೦
೧೪. ದ್ರಾವಿಡ ಎನ್ನುವುದು ಒಂದು ಭಾಷಾ ಸಂಕುಲ ಮಾತ್ರ! / ೨೨೩
೧೫. ಕಪ್ಪು ಬಿಳುಪಿನ ಹಿಂದೂಧರ್ಮ / ೨೩೬
Reviews
There are no reviews yet.