ಜ್ಞಾನದ ಹೊಸ ಆಯಾಮ ತೋರುವ ಬರಹಗಳು
ಸನ್ಮಿತ್ರ ಶ್ರೀ ನಾರಾಯಣ ಯಾಜಿ ಅವರ ಅಂಕಣ ಬರಹಗಳನ್ನು ಓದುವುದೇ ಒಂದು ಹಿತದ ಅನುಭವ. ಸಂಸ್ಕೃತದ ಕಾವ್ಯ ಪುರಾಣ ಉಪನಿಷತ್ತುಗಳು, ಕನ್ನಡ ಹಾಗೂ ಆಂಗ್ಲ ಸಾಹಿತ್ಯದ ಆಳವಾದ ಓದಿನಿಂದ ಪಡೆದ ಜ್ಞಾನದ ಸಾರ್ಥಕ ಅವತರಣಿಕೆಯಾಗಿ ಈ ಕೃತಿ ಮೂಡಿಬಂದಿದೆ. ಜೊತೆಗೆ ಯಕ್ಷಗಾನ ಅರ್ಥಧಾರಿಯಾಗಿ ಅವರು ಪಡೆದ ಅನುಭವವೂ ಇಲ್ಲಿನ ಬರಹಗಳಲ್ಲಿ ಕೈಗೂಡಿಸಿದೆ.
ಸಾಮಾನ್ಯವಾಗಿ ಅಂಕಣ ಬರಹಗಳು ಆಯಾ ಕ್ಷಣದ ದಾಖಲೆಗಳಾಗಿರುತ್ತವೆ. ಒಂದು ಕಾಲದ ಬಳಿಕ ಅವು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಆದರೆ ಯಾಜಿಯವರು ಅಂಥ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಸಾರ್ವಕಾಲಿಕವಾದ ಕೆಲವು ಸಂಗತಿಗಳನ್ನು ಎತ್ತಿಕೊಂಡು ಬರೆದಿದ್ದಾರೆ. ಇದು ಅವುಗಳನ್ನು ಕ್ಷಣಿಕತೆಯಿಂದ ಪಾರು ಮಾಡಿವೆ. ಆದರೆ ಸಮಕಾಲೀನ ಸ್ಪರ್ಶವೂ ಇವುಗಳಿಗೆ ಇದೆ. ಅವರ ಹೆಚ್ಚಿನ ಬರಹಗಳು ಉಪನಿಷತ್ತುಗಳು, ಪುರಾಣಗಳು, ಆದಿಕಾವ್ಯಗಳ ಆಟದ ಅಂಗಳದಲ್ಲಿ ಕುಣಿದಾಡುತ್ತವೆ. ಅಲ್ಲಿಂದ ಕತೆಗಳನ್ನು ಎತ್ತಿಕೊಂಡು ಬಂದು ನಮ್ಮ ಮುಂದಿಟ್ಟು ಅವುಗಳಲ್ಲಿ ಹೊಸ ವಿಚಾರಗಳನ್ನು ಯಾಜಿ ನಮಗೆ ಕಾಣಿಸುತ್ತಾರೆ. ಆದರೆ ಆಂಗ್ಲ ಸಾಹಿತ್ಯದ ಮಹಾ ಭಿಕ್ಷುಕನೆಂದೇ ಹೆಸರಾದ ವಿಲಿಯಂ ಹೆನ್ರಿ ಡೇವಿಸ್ ಬಗೆಗೂ ಬರೆದು ಅಚ್ಚರಿ ಮೂಡಿಸುತ್ತಾರೆ.
ಯಾಜಿಯವರು ಸರ್ಚ್‌ಲೈಟ್ ಬೀರದ ಸಂಗತಿಗಳು ವಿರಳ. ನಾವೆಲ್ಲ ಮರೆತೇ ಬಿಟ್ಟಿರುವ ವೇದಕಾಲದ ಮಹಾಜ್ಞಾನಿ, ಗಾರ್ಗಿ ವಾಚಕ್ನವಿ ಎಂಬ ಮಹಾಪಂಡಿತೆಯ ಬಗೆಗೂ ಬೆಳಕು ಚೆಲ್ಲುತ್ತಾರೆ. ಗೌತಮ ಬುದ್ಧ ಕರ್ಮಯೋಗವನ್ನು ಪ್ರತಿಪಾದಿಸಿದವನು ಎಂದು ಹೇಳುತ್ತಾ ಬುದ್ಧನೂ ನಮ್ಮ ಪರಂಪರೆಯ ಜತೆಗೆ ಹೊಂದಿರುವ ಸಾಂಗತ್ಯವನ್ನು ಗುರುತಿಸುತ್ತಾರೆ. ಶಂಕರಾಚಾರ್ಯರ ಅದ್ವೈತ ವಿಚಾರದ ವಿಲಾಸವನ್ನು ಬೆರಗಾಗುವಂತೆ ಕಟ್ಟಿಕೊಡುತ್ತಾರೆ. ಹಾಗೆಯೇ ಪುರಾಣದ ಹತಭಾಗ್ಯ ಸ್ತ್ರೀ ಪಾತ್ರಗಳ ಬಗ್ಗೆ ತುಂಬಾ ಮಮತೆಯಿಂದ ಅವರು ಬರೆಯುತ್ತಾರೆ. ಉದಾಹರಣೆಗೆ, ಮಹಾಭಾರತದ ಅಂಬೆ, ಕುಂತಿ, ರಾಮಾಯಣದ ಕೈಕೇಯಿ ಮುಂತಾದವರು. ಹಾಗೇ ಕಿಬ್ಬಚ್ಚಲ ಮಂಜಮ್ಮ ಎಂಬ ಅಜ್ಞಾತ ಅಪರೂಪದ ಯಕ್ಷಗಾನ ಕೃತಿಕಾರ್ತಿಯ ಬಗೆಗೂ ಬೆಳಕು ಚೆಲ್ಲುತ್ತಾರೆ. ರಾಷ್ಟ್ರವೆನ್ನುವುದು ಅಸ್ಮಿತೆಯ ಭಾವನಾತ್ಮಕ ಅನುಬಂಧ ಎನ್ನುವ ಮೂಲಕ ಹೊಸ ಬಗೆಯ ವ್ಯಾಖ್ಯಾನವನ್ನೇ ನೀಡುತ್ತಾರೆ. ಮಹಾಕವಿ ಪಂಪನ ಬಗ್ಗೆ ಬರೆದಂತೆಯೇ ಇತಿಹಾಸದಲ್ಲಿ ಮರೆಯಾದ ಎರಡನೇ ಸಿಪಾಯಿ ಕ್ರಾಂತಿಯ ಬಗ್ಗೆಯೂ ಅಷ್ಟೇ ಅಥೆಂಟಿಕ್ ಆಗಿ ಬರೆಯುತ್ತಾರೆ.
ಇಲ್ಲಿ ಭೂಮಿಯನ್ನು ಮೇಲಿದ್ದುಕೊಂಡು ಕಾಪಾಡುವ, ದ್ಯುಲೋಕ ಕರೆಯಲಾಗುವ ಸ್ವರ್ಗೀಯ ಸಂಗತಿಗಳಿಗೆ ಸಂಬಂಧಪಟ್ಟ, ಹಾಗೇ ಈ ಮಣ್ಣಿಗೂ ಮನುಷ್ಯರ ಭಾವನೆಗಳಿಗೂ ಸಂಬಂಧಿಸಿದ ಬರಹಗಳೂ ಇವೆ. ಹೀಗಾಗಿಯೇ ನೆಲ ಮುಗಿಲು ಎಂಬ ಹೆಸರು ಈ ಕೃತಿಗೆ ಅರ್ಥಪೂರ್ಣವಾಗಿದೆ. ಯಾಜಿಯವರು ಇಲ್ಲಿನ ಬರಹಗಳನ್ನು ಅಂಬರದಿಂದ ಮತ್ತು ಅವನಿಯ ತನಕ ಎಂಬ ಎರಡು ವಿಭಾಗಗಳನ್ನು ಮಾಡಿದ್ದಾರೆ. ಮನುಷ್ಯನ ಬದುಕು ಈ ಭೂಮಿಯ ಸಂಗತಿಗಳಿಗೆ ಹೊಂದಿಕೊಂಡಿರುವಂತೆಯೇ, ಅಮೂರ್ತವಾದ ಅನೇಕ ಸಂಗತಿಗಳಿಗೂ ಕೃತಜ್ಞವಾಗಿದೆ ಎಂಬುದನ್ನು ಇದು ಸಾರುತ್ತದೆ. ಉದಾಹರಣೆಗೆ ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ಅಯತಾತ್ಮಾ ಬ್ರಹ್ಮ ಎಂಬ ಉಪನಿಷತ್ತಿನ ವಾಕ್ಯಗಳಿಗೆ ಇವರು ಮಾಡುವ ವ್ಯಾಖ್ಯಾನಗಳನ್ನೇ ಪರಿಶೀಲಿಸಬಹುದು. ಅಂಥ ಇನ್ನಷ್ಟು ಗಾಢವಾದ ಓದಿಗಾಗಿ ಓದುಗನನ್ನು ಸಜ್ಜುಮಾಡುವ ಬಗೆಯ ಬರಹಗಳು ಇವು.
ಇಲ್ಲಿ ಎರಡು ಮೂರು ಬಾರಿ ಓದಿ ಅರ್ಥಮಾಡಿಕೊಳ್ಳಬೇಕಾದಂಥ ಬರಹಗಳು, ವಾಕ್ಯಗಳು ಇವೆ. ಉದಾಹರಣೆಗೆ, ನಚಿಕೇತನ ಬಗೆಗಿನ ಬರಹದಲ್ಲಿ ಬರುವ ಹುಟ್ಟು ಸಾವುಗಳು ಕೇವಲ ಕರ್ತೃ ಮತ್ತು ಕರ್ಮಗಳಿಲ್ಲದ ಕ್ರಿಯೆ ಆಗಬೇಕು ಎಂಬ ಮಾತು. ಹಾಗೇ ಈಶಾವಾಸ್ಯ ಉಪನಿಷತ್ತಿನ ಬಗ್ಗೆ ಬರೆದ ಬರಹದಲ್ಲಿ ಬರುವ ನಮ್ಮೊಳಗಿನ ಆತನನ್ನು ಅರಿಯಲು ಹೊರಗಡೆ ಕಟ್ಟಿದ ನಮ್ಮದೇ ಆವರಣವನ್ನು ನಾವು ಮುರಿಯಬೇಕು ಎಂಬ ಮಾತು. ಹಾಗೇ ಮಹಾತ್ಮ ಗಾಂಧಿಯವರ ಬಗ್ಗೆ ಹೇಳುವ ಭಯವಿಲ್ಲದ ಅಸ್ತ್ರದಿಂದಲೇ ಭಯ ಹುಟ್ಟಿಸಿದ ಸಂತ ಎಂಬ ಮಾತು. ಇಂಥ ಸಾಲುಗಳನ್ನು ತೀರಾ ಮಗ್ನವಾಗಿ ಓದದೇ ಹೋದ ಹೊರತು ಅರ್ಥ ಮಾಡಿಕೊಳ್ಳಲಾಗದು.
ಹಾಗೇ ಇವೆಲ್ಲವನ್ನೂ ಅವರು ಈ ಕಾಲದ ಜ್ಞಾನದ ಜತೆಗೆ ಸೊಗಸಾಗಿ ತಳುಕು ಹಾಕುತ್ತಾರೆ. ಉದಾಹರಣೆಗೆ, ಕಠೋಪನಿಷತ್ತಿನ ನಚಿಕೇತನ ವಿನಯವನ್ನು ಬಸವಣ್ಣನವರ ಎನಗಿಂತ ಕಿರಿಯರಿಲ್ಲ ಎಂಬ ವಚನದ ಜತೆಗೆ ಹೋಲಿಸಿ ಅವರು ನೀಡುವ ಹೋಲಿಕೆ ಇಡೀ ಬರಹಕ್ಕೇ ಒಂದು ಹೊಸ ಆಯಾಮವನ್ನು ನೀಡುತ್ತದೆ. ಹಾಗೆಯೇ, ಈಶಾವಾಸ್ಯೋಪನಿಷತ್ತಿನ ತೇನ ತ್ಯಕ್ತೇನ ಭುಂಜೀಥಾ(ತ್ಯಾಗದಿಂದಲೇ ಅನುಭವಿಸಬೇಕು) ಎಂಬ ಮಾತನ್ನು ಇವರು ಇಸ್ಲಾಂನ ಕುರಾನ್‌ನ ನಿನ್ನ ನೆರೆಮನೆಯವರು ಉಪವಾಸವಿದ್ದಾಗ ನೀನು ಹಬ್ಬ ಮಾಡಕೂಡದು ಎಂಬ ಮಾತಿಗೆ, ಎಲ್ಲ ಉತ್ತಮ ಉಡುಗೊರೆಗಳೂ ನಮಗೆ ಸ್ವರ್ಗದಿಂದ ಕೊಡಲ್ಪಟ್ಟಿವೆ ಎಂಬ ಬೈಬಲ್‌ಗೆ ಮಾತಿಗೆ ಹೋಲಿಸುತ್ತಾರೆ. ಇದು ಎಷ್ಟು ಸೊಗಸಾಗಿದೆ ಅಲ್ಲವೇ?
ಹೀಗೆ ನಮ್ಮನ್ನು ಪುರಾಣ-ಉಪನಿಷತ್ತು-ಇತಿಹಾಸ-ವರ್ತಮಾನಗಳ ಕೋಣೆ ಕೋಣೆಗಳಲ್ಲಿ ಸುತ್ತಾಡಿಸುವ ಇವರ ಬರಹಗಳು ನನಗಂತೂ ತುಂಬಾ ತಿಳಿವನ್ನೂ ಆನಂದವನ್ನೂ ಕೊಟ್ಟಿವೆ. ನಿಮಗೂ ನೀಡಲಿದೆ ಎಂಬ ದೃಢವಿಶ್ವಾಸ ನನ್ನದು.
–ಹರಿಪ್ರಕಾಶ ಕೋಣೆಮನೆ
ಎದೆಯಾಂತರಂಗವನ್ನು ನಿಮ್ಮೆದುರು ತೆರೆದೊಮ್ಮೆ
ಈ ಕೃತಿಯ ಕುರಿತು ವಿವರಿಸಬೇಕಾದಾಗ ಇದಕ್ಕೆ ಕಾರಣರಾದ ವ್ಯಕ್ತಿಗಳನ್ನು ಮೊದಲು ಹೇಳಲೇಬೇಕಾಗುತ್ತದೆ. ಈಗೊಂದು ಮೂರುವರ್ಷಗಳ ಹಿಂದೆ ಹತ್ತು ಗಂಟೆ ರಾತ್ರಿಯ ಹೊತ್ತು, ಅಂದಿನ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಶ್ರೀ ಹರಿಪ್ರಕಾಶ ಕೋಣೆಮನೆ ಅವರಿಂದ(ಈಗ ವಿಸ್ತಾರ ನ್ಯೂಸ್‌ನ ಸಂಪಾದಕರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ) ಒಂದು ಕರೆ ನನ್ನ ಮೊಬೈಲಿಗೆ ಬಂತು. ಅದೇ ಮೊದಲು ಅವರೊಂದಿಗೆ ಮಾತಾಡಿರುವದು. ಮುಖ ಪರಿಚಯವಂತೂ ಇಲ್ಲವೇ ಇಲ್ಲವಾಗಿತ್ತು. ಆಶ್ಚರ್ಯದಿಂದ ಸ್ವೀಕರಿಸಿದರೆ ಸೌಹಾರ್ದ ಯುತವಾಗಿ ಮಾತಾಡಿ ನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಅಂಕಣ ಬರೆಯುವಂತೆ ಆಹ್ವಾನ ನೀಡಿದರು. ಬ್ಯಾಂಕಿನ ಉನ್ನತ ಹುದ್ದೆಯಲ್ಲಿದ್ದ ನನಗೆ ಬಿಡುವೆಲ್ಲಿ ಎಂದು ಯೋಚಿಸಿ ನಾನು ಹಿಂಜರಿದೆ. ಅವರು ಒತ್ತಾಯಿಸುವದನ್ನು ಬಿಡಲಿಲ್ಲ. ವಾರಕ್ಕೊಂದಾಗದಿದ್ದರೆ ಹದಿನೈದು ದಿನಗಳಿಗೊಂದಾದರೂ ಬರೆಯಿರಿ ಎಂದು ಒಪ್ಪಿಸಿದರು. ವಿಷಯ ಇಂದಿನ ಜನತೆಗೆ ಸನಾತನ ತತ್ತ್ವಗಳ ಮತ್ತು ವ್ಯಕ್ತಿಗಳ ಆಲೋಚನೆ ಮತ್ತು ಬದುಕಿದ ವಿಧಾನ ಸ್ಫೂರ್ತಿ ಕೊಡುವಂತಹ ದಾಗಿರಬೇಕು ಎಂದರು. ಹಾಗೇ ನನ್ನಿಂದ ಬರೆಯಿಸಿ ಓರ್ವ ಅಂಕಣಕಾರನನ್ನಾಗಿಸಿ ಬರೆದ ಲೇಖನಗಳು ಇಲ್ಲಿಯವು. ನೆಲದಲ್ಲಿದ್ದ ನನ್ನನ್ನು ಮುಗಿಲಿಗೆ ನೋಡುವಂತೆ ಪ್ರೋತ್ಸಾಹಿಸಿದ ಅವರಲ್ಲದಿದ್ದರೆ ಖಂಡಿತವಾಗಿ ನಾನು ಬರೆಯುತ್ತಿರಲಿಲ್ಲ.
ಬದುಕು ಮತ್ತು ಜೀವನ ಎರಡೂ ಒಂದೇ ಆದರೂ ವಿಧಾನದಲ್ಲಿ ವ್ಯತ್ಯಾಸಗಳುಂಟು. ಜೀವ ಇರುವ ಎಲ್ಲವೂ ಜೀವಿಸುತ್ತವೆ. ಹುಟ್ಟು ಸಾವು ಈ ಎರಡರ ನಡುವಿನದ್ದು ಜೀವನ. ಆದರೆ ಬದುಕು ಎನ್ನುವುದು ಹಾಗಲ್ಲ; ಜೀವಿಸಿದ ಕಾಲದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಈ ಕಟ್ಟುವ ಕ್ರಿಯೆಯಲ್ಲಿ ಆ ಜೀವಿಯ ವಿಧಾನಗಳು ಲೋಕಪರವೋ ಅಥವಾ ಲೋಕ ವಿರೋಧಿಯೋ ಎನ್ನುವುದು ತಿಳಿಯುತ್ತದೆ. ಅನೇಕ ಸಲ ಹಳೆಯದನ್ನೆಲ್ಲ ಬೀಳಿಸಿ ಹೊಸದನ್ನು ಕಟ್ಟಬೇಕಾಗುತ್ತದೆ. ಗದ್ದೆಯಲ್ಲಿ ಬೆಳೆತೆಗೆದಾದ ಮೇಲೆ ಜಾಗವನ್ನು ಚೊಕ್ಕಗೊಳಿಸಿ ಮತ್ತೆ ಹೊಸ ಬೆಳೆಯನ್ನು ಬೆಳೆಯುವ ಹಾಗೇ. ಇದನ್ನು ವಿಕಾಸವೆಂದೂ ಅನ್ನಬಹುದೇನೋ. ಹೀಗೆ ನಿರಂತರವಾಗಿ ಸಾಗುವ ಕ್ರಿಯೆಯಲ್ಲಿ ನಮ್ಮ ಜೀವನ ವಿಧಾನಗಳಿವೆ. ಇವೆಲ್ಲವೂ ಭೂತಕಾಲವೆಂದು ಸುಮ್ಮನಿರಬಹುದು. ಆದರೆ ಭೂತದ ಅನುಭವದ ಮೇಲೆ ವರ್ತಮಾನದಲ್ಲಿ ಬದುಕನ್ನು ಕಟ್ಟಿಕೊಂಡರೆ ಬರುವ ಭವಿಷ್ಯತ್ಕಾಲ ಹಸನಾದೀತು. ಇಲ್ಲವಾದರೆ ರೂಕ್ಷವಾದ ಲೋಕದಲ್ಲಿ ನಾವು ಇರಬೇಕಾಗಬಹುದು. ಇವೆಲ್ಲವೂ ನನ್ನನ್ನು ಕಾಡಿದ್ದು ಪ್ರಪಂಚದ ತತ್ವಜ್ಞಾನಿಗಳ ವಿಚಾರಗಳನ್ನು ಓದಿಕೊಂಡಾಗ. ಹೀಗೆ ಓದುತ್ತಿರುವಾಗ ಭಾರತೀಯ ಪುರಾಣದಲ್ಲಿ ಬರುವ ಮನು ಎನ್ನುವ ರಾಜನ ಕಥೆಯಲ್ಲಿ ದೇವರು ಮಹಾಪ್ರಳಯದ ವಿಷಯವನ್ನು ಹೇಳಿ ಜಗತ್ತನ್ನು ರಕ್ಷಿಸಲು ಒಂದು ಹಡಗನ್ನು ಆತನಲ್ಲಿಗೆ ಕಳುಹಿಸುತ್ತಾನೆ. ಅದರಲ್ಲಿ ಸಪ್ತರ್ಷಿಗಳು ಮತ್ತು ಮುಂದಿನ ಕಾಲಕ್ಕೆ ಬೇಕಾದ ಎಲ್ಲ ವಸ್ತುಗಳು ಎಲ್ಲವನ್ನೂ ಇಟ್ಟು ಭಗವಂತನೇ ದೊಡ್ಡದೊಂದು ಮೀನಾಗಿ ಮಹಾಪ್ರಳಯ ಮುಗಿಯುವವರೆಗೆ ಆ ದೋಣಿಯನ್ನು ರಕ್ಷಿಸಿ ಮತ್ತೆ ಈ ಭೂಮಿಯ ಮೇಲೆ ಜೀವಜಾಲಗಳು ಬೆಳೆಯುವಂತೆ ನೋಡಿಕೊಳ್ಳುತ್ತಾನೆ. ಸಪ್ತರ್ಷಿಗಳು ಜ್ಞಾನದ ಸಂಕೇತವಾದರೆ; ಇನ್ನಿತರವುಗಳು ಕರ್ಮದ ಅನಿವಾರ್ಯತೆಗಳು. ಕರ್ಮದೊಂದಿಗೆ ಜ್ಞಾನ ಸೇರಿದಾಗ ಮಾತ್ರ ಸಮಷ್ಠಿಗೆ ಒಳಿತಾಗುತ್ತದೆ. ಈ ಕಥೆ ಭಾರತದಲ್ಲಿ ಮಾತ್ರವಲ್ಲ. ಪ್ರಪಂಚದ ಇನ್ನಿತರ ಪ್ರಮುಖ ಮತಗಳಾದ ಮುಖ್ಯವಾಗಿ ಅಬ್ರಾಹಿಮಿಕ್ ಮತಗಳಲ್ಲಿ ಇದೇ ಕಥೆ ನೋಹಾನ್ಸ್ ಬೋಟ್ ಎನ್ನುವ ಹೆಸರಿನಲ್ಲಿ ಇದೆ. ಹಾಗಾದರೆ ಎಲ್ಲವೂ ಜ್ಞಾನದ ಕಡೆಗೆ ನಮ್ಮನ್ನು ಕರೆದೊಯ್ಯುವ ಮಾರ್ಗಗಳು ಎಂದಾಯಿತು. ಈ ಹಿನ್ನೆಲೆಯಲ್ಲಿಯೇ ನಮಗೆ ತತ್ವಜ್ಞಾನ ಮತ್ತು ಮಹಾಪುರುಷರು ಮುಖ್ಯರಾಗುತ್ತಾರೆ. ತತ್ವಜ್ಞಾನವೆಂದರೆ ಇಹವನ್ನು ಮರೆತು ಕಾಣದ ಪರಲೋಕದೆಡೆಗೆ ಮನಸ್ಸನ್ನು ಕೇಂದ್ರೀಕರಿಸುವದಲ್ಲ ಎನ್ನುವದನ್ನು ಉಪನಿಷತ್ತು ಸ್ಪಷ್ಟವಾಗಿ ಹೇಳಿದೆ. ಭೃಗುವಿಗೆ ಆತನ ತಂದೆ ವರುಣ ಹೇಳುವದು ಇದನ್ನೇ. ಅನ್ನವನ್ನು ನಿಂದಿಸಬೇಡ ಎನ್ನುತ್ತಾನೆ. ಅನ್ನವೆನ್ನುವದು ಅಧ್ಯಯನದ ಸಂಕೇತವೂ ಹೌದು. ದೇಹ ಪುಷ್ಟಿಯಾಗಲು ಹೊಟ್ಟೆಗೆ ಬೇಕು. ಬುದ್ಧಿಯ ಪುಷ್ಟಿಗೆ ಚಿಂತನೆಗಳು ಬೇಕು. ಅನ್ನವನ್ನು ಜೀರ್ಣಿಸಿಕೊಳ್ಳುವವ ಮಾತ್ರ ಅನ್ನವನ್ನು ದಕ್ಕಿಸಿಕೊಳ್ಳ ಬಲ್ಲ; ಚಿಂತನೆಗಳನ್ನು ಕಂಡು ಅದನ್ನು ಮೀರಿ ಮುಂದೆ ಆಲೋಚಿಸುವವ ವಿಜ್ಞಾನದ ಕ್ರಿಯೆಯಲ್ಲಿ ಮಾತ್ರ ಆನಂದವನ್ನು ಕಂಡುಕೊಳ್ಳಬಹುದು. ಇಷ್ಟು ಸರಳ ಚಿಂತನೆಗಳಿರುವ; ಆದರೆ ಯೋಚಿಸುತ್ತಲೇ ಹೋದಂತೆ ನಮ್ಮನ್ನು ಸರಳತೆಯಲ್ಲಿಯೇ ನಿಗೂಢತೆಯತ್ತ ಸೆಳೆದೊಯ್ಯುವದೇ ತತ್ವಶಾಸ್ತ್ರ; ಇದು ನೀತಿ ಶಾಸ್ತ್ರವೂ ಹೌದು. ತತ್ವಶಾಸ್ತ್ರಗಳು ನನ್ನಲ್ಲಿ ಓದಿನ ಆಸಕ್ತಿಯನ್ನು ಮೂಡಿಸಿರುವದು ಈ ಮೇಲಿನ ಕಾರಣಕ್ಕಾಗಿಯೇ.
ಉಪನಿಷತ್ತುಗಳು ಮೈಗಳ್ಳರ ಕೂಟವಲ್ಲ. ಹಾಗೇ ನೋಡಿದರೆ ಭೋಗ ಪ್ರಪಂಚಕ್ಕೆ ತಿರುಗಿದ್ದ ಸ್ವರ್ಗಕಾಮಕ್ಕಾಗಿ ಆಶಿಸುವ ಜನಸಮುದಾಯವನ್ನು ಮೋಕ್ಷದ ಕಡೆಗೆ ತಿರುಗಿಸಿರುವದೇ ಉಪನಿಷತ್‌ಕಾರರು. ಇವರೆಲ್ಲರೂ ಕಾವಿತೊಟ್ಟ ಸಂನ್ಯಾಸಿಗಳಲ್ಲ. ಗೃಹಸ್ಥಾಶ್ರಮವೇ ಮನುಷ್ಯನಿಗೆ ಶ್ರೇಷ್ಠವಾದ ವಿಕಲ್ಪ ಎಂದು ಸಾರಿದವರು. ಕಣ್ಣುಮುಚ್ಚಿ ತಪಸ್ಸು ಆಚರಿಸುವದಕ್ಕಿಂತ ಸಂಸಾರದಲ್ಲಿ ಇದ್ದು ಬಂಧನದಿಂದ ಹೊರಗೆ ಬಾ ಎಂದು ಹೇಳಿದವರು. ಪ್ರಪಂಚದಲ್ಲಿ ಮೊತ್ತ ಮೊದಲ ಬಾರಿಗೆ ನಾವು ಬಂದಿರುವದೆಲ್ಲಿಂದ ಮತ್ತು ಈ ಜೀವವೆನ್ನುವದು ಪುನಃ ಹೋಗಿ ಸೇರಬೇಕಾದ ಗುರಿ ಯಾವುದು ಎನ್ನುವದನ್ನು ಸಂಶೋಧಿಸಿದವರು. ಅವರದ್ದು ಊಹಾತ್ಮಕ ಬರಹವಲ್ಲ; ಓರ್ವ ವ್ಯಕ್ತಿಯ ಅಂತಿಮ ನಿರ್ಣಯವೂ ಅಲ್ಲ. ಆ ಕುರಿತು ಪ್ರಾಜ್ಞರೆಲ್ಲ ಸೇರಿ ಚರ್ಚೆಮಾಡಿ ಸತ್ಯದ ಹಾದಿಯನ್ನು ಕಂಡುಹಿಡಿದವರು. ಜನಕನಂತಹ ರಾಜರುಗಳು ಋಷಿಗಳಷ್ಟೇ ಪ್ರತಿಭಾ ಶಾಲಿಗಳು ಎನ್ನುವುದನ್ನು ಉಪನಿಷತ್ತಿನಲ್ಲಿ ಕಾಣಬಹುದಾಗಿದೆ. ತನ್ನ ಮಗನೇ ಆಗಲಿ, ಆತ ಕಲಿತಿರುವದು ಸಾಕಾಗಲಿಲ್ಲವೆಂದರೆ ಅವನನ್ನು ತಿದ್ದಲು ಅವರಲ್ಲಿ ಮೋಹವೆನ್ನುವದು ಅಡ್ಡ ಬರುತ್ತಿರಲಿಲ್ಲ. ಶಿಷ್ಯತ್ವವನ್ನು ಕೇಳಿಬಂದವರ ಸಂದೇಹಗಳಿಗೆ ತನ್ನಲ್ಲಿ ಉತ್ತರವಿಲ್ಲ ಎಂದು ಗೊತ್ತಾದರೆ ಅದನ್ನು ತಿಳಿದವರ ಕಡೆ ಹೋಗಿ ಅವರಲ್ಲಿ ಶಿಷ್ಯವೃತ್ತಿಯನ್ನು ಯಾಚಿಸಿ ತಮ್ಮ ಸಂದೇಹಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದರು. ಉದ್ಧಾಲಕ ಮಧು ವಿದ್ಯೆಯನ್ನು ಪಡೆಯಲು, ದೇವಯಾನ ಮತ್ತು ಪಿತೃಯಾನದ ಕುರಿತು ಅರಿಯಲು ಹೀಗೆ ಕ್ಷತ್ರಿಯನಾದ ರಾಜನಲ್ಲಿ ಶಿಷ್ಯವೃತ್ತಿಯನ್ನು ಯಾಚಿಸಿ ಕಲಿತ. ಇದು ನಮ್ಮ ಬದುಕಿಗೆ ಪ್ರೇರಣೆಯಾಗಬೇಕೆನಿಸಿತು.
ಉಪನಿಷತ್ತಿನಲ್ಲಿ ಬಂದಿರುವದೆಲ್ಲವೂ ವೈಜ್ಞಾನಿಕವಾದ ಸತ್ಯಗಳು ಎಂದು ನಾನೇನೂ ನಂಬಿಲ್ಲ. ಆದರೆ ಸೃಷ್ಟಿಯ ಮೂಲದ ಮತ್ತು ಉಗಮದ ವಿವರಣೆಯನ್ನು ನೋಡುವಾಗ ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ.. ಹೀಗೆ ಸಾಗುತ್ತದೆ. ಸೂರ್ಯನೂ ಒಂದು ಉರಿಯುತ್ತಿರುವ ಅಗ್ನಿಗೋಲ. ಹೀಗಿರುವಾಗ ಈಗ ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಸೂರ್ಯ ಮತ್ತು ತಾರಾಮಂಡಲಗಳ ಕುರಿತು ಕಾವ್ಯಾತ್ಮಕವಾಗಿ ಯೋಚಿಸಿ ಬರೆದಿಟ್ಟಿದ್ದಿರುವ ಸಂಗತಿ ನನ್ನನ್ನು ಕುತೂಹಲ ಮೂಡಿಸುವಂತೆ ಮಾಡಿತು. ಆ ಕಾಲದಲ್ಲಿ ಛಂದಸ್ಸ್ ಶಾಸ್ತ್ರ ಸಂಪೂರ್ಣವಾಗಿ ವಿಕಸಿತವಾಗಿತ್ತು. ಅಂದರೆ ನಿಖರವಾದ ಲೆಕ್ಕಾಚಾರಗಳ ಪ್ರಕಾರ ಕಾವ್ಯದ ರೂಪದಲ್ಲಿ ಬರೆದಿರುವದನ್ನು ಕಂಡಾಗ ಪ್ರಪಂಚದಲ್ಲಿನ ಇನ್ನಿತರ ಭಾಷೆ ಕಣ್ಣು ತೆರೆಯುತ್ತಿರುವ ಸಂದರ್ಭಗಳಲ್ಲಿ ಈ ದೇಶದಲ್ಲಿ ಭಾಷೆಯೆನ್ನುವದು ಪರಿಪೂರ್ಣವಾಗಿ ವಿಕಸನವಾಗಿತ್ತು ಎನ್ನುವದೇ ಬೆರಗು ಹುಟ್ಟಿಸುತ್ತದೆ. ಹಾಗಾಗಿ ಇವುಗಳನ್ನು ನಾನು ಕಾವ್ಯವಾಗಿ ಓದಿ ಆನಂದಪಟ್ಟಿದ್ದೇನೆ. ಈಶಾವಾಸ್ಯದಲ್ಲಿನ ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯ ಸಿದ್ಧನಮ್” ತ್ಯಾಗಮಾಡಿ ಉಳಿದದ್ದರಲ್ಲಿ ಅನುಭವಿಸು, ಯಾರ ಧನವನ್ನೂ ಬಯಸಬೇಡ ಎನ್ನುವವಲ್ಲಿ ಇರುವ ಆದರ್ಶ ಮತ್ತು ಸರಳ ಬದುಕಿನ ಕಲ್ಪನೆ ನನ್ನನ್ನು ಈ ಕುರಿತು ಮತ್ತೆ ಮತ್ತೆ ಆಲೋಚಿಸುವಂತೆ ಮಾಡಿತು. ಉಪನಿಷತ್ತು ಬದುಕಿನ ನಶ್ವರತೆಯನ್ನು ಎಂದೂ ಹೇಳಲಿಲ್ಲ. ಈ ಬದುಕು ಸುಂದರ, ಮಾನವನ ಜೀವನವೇ ಮಹತ್ತ್ವದ್ದು ಅದನ್ನು ವ್ಯರ್ಥ ಮಾಡಿಕೊಳ್ಳಬಾರದು ಎನ್ನುವದನ್ನು ಚೆನ್ನಾಗಿ ವಿವರಿಸುತ್ತದೆ. ವೇದಗಳೂ ಸಹ ಅಷ್ಟೇ. ರುದ್ರನೆನ್ನುವನ ಕ್ರೋಧ ಈ ಪ್ರಪಂಚವನ್ನು ನುಂಗಿ ನೊಣೆಯಲು ಕುಳಿತಿರುವ ಸ್ವಾರ್ಥಿಗಳ ವಿರುದ್ಧ ಎನ್ನುವದನ್ನು ವಿವರಿಸುತ್ತದೆ. ತ್ರಿಪುರ ಸಂಹಾರದ ಕಾಲದಲ್ಲಿ ನಡೆದ ಅಪೂರ್ವ ಘಟನೆಯೇ ಶಂಕರ ರುದ್ರನಾಗಿ ಅವರ ಪಟ್ಟಣವನ್ನು ನಾಶಗೈದಿರುವದು. ತ್ರಿಪುರ ಸಂಹಾರವಾದ ನಂತರವೂ ರುದ್ರನ ಕೋಪ ಇಳಿಯದಾದಾಗ ಲೋಕವೇ ಬೆದರಿ ನಿಂತಿತ್ತು. ಆಗ ರುದ್ರ ಸೂಕ್ತವನ್ನು ಪ್ರಾರ್ಥಿಸುವ ಮೂಲಕ ಋಷಿಗಳು ಅವನನ್ನು ಶಾಂತಗೊಳಿಸಿ ದಶದಿಕ್ಕುಗಳಿಗೂ ವ್ಯಾಪಿಸಿರುವ ಆತನ ಬಿಲ್ಲಿಗೆ ಕಟ್ಟಿದ ದಾರವನ್ನು ಬಿಚ್ಚಿಬಿಟ್ಟ ಘಟನೆಯೇ ಅದ್ಭುತವಾದದ್ದು. ಜ್ಞಾನವಿರುವಲ್ಲಿ ಕ್ರೋಧ ಇರುವದಿಲ್ಲ ಎನ್ನುವದರ ಸಂಕೇತ ಇದು. ಲಯಕರ್ತನೇ ಅಳುತ್ತಿರುವ ಮರುತ್ತರಿಗೆ ಬದುಕು ಕೊಟ್ಟವ. ಸುಖವನ್ನು ಲೋಕಕ್ಕೆ ಕೊಡುವವನೇ ಶಂಕರ ಎನ್ನುವದನ್ನು ಸಾರಿಹೇಳುವ ರುದ್ರಮಂತ್ರದ ಅರ್ಥ ತಿಳಿದರೆ ನಾವು ಅದರ ಕಾವ್ಯಸೌಂದರ್ಯವಷ್ಟೇ ಅಲ್ಲ, ಅಂತಃಕರಣ ಮಿಡಿಯುವ ಮಹಾನ್ ಶಕ್ತಿಯಾಗಿ ಆತ ಕಾಣುತ್ತಾನೆ.
ನೆಲವೆನ್ನುವದು ನಮಗೆ ಆಸರೆಯ ತಾಣ. ನೆಲ ಭದ್ರವಾಗಿರಬೇಕು. ಭದ್ರನೆಲದ ಮೇಲೆ ನಿಂತು ವಿಶ್ವವ್ಯಾಪಕವಾದ ಶಕ್ತಿಯ ಕುರಿತು ಮುಗಿಲಿನತ್ತ ನೋಡಿ ಚಿಂತಿಸಬೇಕು ಎನ್ನುವದು ವೇದೋಪನಿಷತ್ತುಗಳ ಸಾರ. ಇಲ್ಲಿನ ಎರಡನೆಯ ಭಾಗವಾದ ಅವನಿಯ ಕಡೆಗೆ ಎನ್ನುವಲ್ಲಿ ಈ ಲೋಕದಲ್ಲಿ ನಡೆದಿರುವ ಬಾಳಿರುವ ವ್ಯಕ್ತಿಗಳ ಮತ್ತು ಸಂಗತಿಗಳ ವಿಷಯಗಳಿವೆ. ಇವೆಲ್ಲವೂ ಮನುಷ್ಯ ತನ್ನ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಉಪಕರಣಗಳಾಗಿವೆ. ಅವರ ಸಾಧನೆಯ ಬೆಳಕು ನಮಗೆ ಸ್ಫೂರ್ತಿಯಾಗಬಹುದಾಗಿದೆ. ನೆಲವೆನ್ನುವದು ಸಹನೆಗೆ ಮತ್ತೊಂದು ಹೆಸರು. ತನ್ನನ್ನು ಬಗೆದು ಅಗೆದವರಿಗೆ ಗಂಗಾ ಜಲವನ್ನೇ ಕೊಡುವ ಉದಾರಗುಣ ಅದಕ್ಕುಂಟು. ಹಸನು ಮಾಡಿ ಬೀಜ ಬಿತ್ತಿದರೆ ಅದನ್ನು ಜತನದಿಂದ ಪೋಷಿಸಿ ಸುಗ್ಗಿಯನ್ನೇ ಕೊಡುತ್ತದೆ. ತನ್ನೊಡಲು ಬಗೆಯುವದು ಕೇಡೆಂದು ಅದಕ್ಕೆ ಯಾವತ್ತೂ ಅನಿಸಿಲ್ಲ. ನೆಲ ಜಾರಿದರೆ ಮತ್ತೆ ನೆಲೆ ಎಲ್ಲಿಯೂ ಸಿಗಲಾರದು. ಆ ದಿಸೆಯಲ್ಲಿ ಬರೆದ ಲೇಖನಗಳಿವೆ.
ಈ ಕೃತಿಯ ಹಿಂದೆ ಅನೇಕ ನನ್ನ ಮಿತ್ರರ ಮತ್ತು ಹಿತೈಷಿಗಳ ಬೆಂಬಲವಿದೆ. ನೇರವಾಗಿ ಮತ್ತು ಫೋನಿನ ಮೂಲಕ, ಸಾಮಾಜಿಕ ಜಾಲತಾಣಗಳ ಮುಖಾಂತರ ನಿರಂತರವಾಗಿ ಬೆಂಬಲ ಕೊಡುತ್ತಿರುವ ಇವರನ್ನು ಮರೆಯಲಾಗದು. ಮೊದಲನೆಯದಾಗಿ ನನ್ನ ಬರೆಯುವಂತೆ ಪ್ರೇರೇಪಿಸಿ ಈಗಲೂ ಬರೆಯಿಸುತ್ತಿರುವ ಹಾಗೂ ಈ ಕೃತಿಗೆ ಮುನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ ವಿಸ್ತಾರದ ಸಂಪಾದಕರಾದ ಹರಿಪ್ರಕಾಶ ಕೋಣೆಮನೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲೇಬೇಕು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇರುವಾಗ ಮತ್ತು ಈಗ ವಿಸ್ತಾರದಲ್ಲಿ ಇರುವಾಗಲೂ ನಿರಂತರವಾಗಿ ನನ್ನ ಬರಹವನ್ನು ತಿದ್ದಿ, ಸುಂದರವಾದ ತಲೆಬರಹವನ್ನು ಅನೇಕ ಸಾರಿ ಕೊಟ್ಟ ಪತಕರ್ತ ಮಿತ್ರ ಹರೀಶ ಕೇರ, ಮಲ್ಲಿಕಾರ್ಜುನ ತಿಪ್ಪಾರ, ರಮೇಶ ಕುಮಾರ ನಾಯಕ, ಕೃಷ್ಣ ಭಟ್ಟ, ವಿದ್ಯಾರಶ್ಮಿ ಪೆಲತ್ತಡ್ಕ, ಶಶಿಧರ ಹೆಗಡೆ ಇವರನ್ನು ಸ್ಮರಿಸಿಕೊಳ್ಳುವೆ. ಜೊತೆಗೆ ವಿಜಯ ಕರ್ನಾಟಕ ಪತ್ರಿಕೆಯ ಈಗಿನ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಮತ್ತು ಕೀರ್ತಿ ಕೋಲ್ಗಾರ ಹಾಗೂ ಪತ್ರಿಕೆಯ ಎಲ್ಲಾ ಬಳಗದವರಿಗೂ ನನ್ನ ನಮನಗಳು.
ನನ್ನ ಅಂಕಣದ ಮೊದಲ ಓದುಗರಾದ ಹಿರಿಯ ಪತ್ರಕರ್ತ ಮತ್ತು ವಿಮರ್ಶಕ ಅಶೋಕ ಹಾಸ್ಯಗಾರರು ನನ್ನ ನಿಡುಗಾಲದ ಮಿತ್ರರು. ಅವರು ಇಲ್ಲಿನ ಸಮಗ್ರ ಲೇಖನವನ್ನು ಪ್ರಕಟಣ ಪೂರ್ವದಲ್ಲಿಯೇ ಓದಿ ಸೂಕ್ತ ಸಲಹೆಗಳನ್ನು ಕೊಟ್ಟಿದ್ದಾರೆ. ಈ ಕೃತಿಗೆ ಚಂದದ ಬೆನ್ನುಡಿಯನ್ನು ಬರೆದುಕೊಟ್ಟಿದ್ದಾರೆ. ಅವರಿಗೆ ನನ್ನ ನಮನಗಳು. ಭಾರತೀಯ ಪುರಾಣ, ಮಹಾಕಾವ್ಯ ಮತ್ತು ವೇದೋಪನಿಷತ್ತುಗಳಲ್ಲಿ ಅಪಾರಜ್ಞಾನ ಹೊಂದಿರುವ ವೇದಬ್ರಹ್ಮ ಸೂರಾಲು ದೇವಿಪ್ರಸಾದ ತಂತ್ರಿಗಳು ಈ ಕೃತಿಗೆ ಚಂದದ ಹಿನ್ನುಡಿಯನ್ನು ಬರೆದುಕೊಟ್ಟಿದ್ದಾರೆ. ಇವರನ್ನೆಲ್ಲ ಸ್ಮರಿಸಿದಷ್ಟು ಕಡಿಮೆಯೇ. ನನ್ನ ಬಂಧು ಮತ್ತು ಕತೆಗಾರ ಸಚ್ಚಿದಾನಂದ ಹೆಗಡೆ, ನನ್ನ ಬರಹಕ್ಕೆ ಒಂದು ಬೆನ್ನೆಲುಬು. ಅದೇ ರೀತಿ ನಿರಂತರವಾಗಿ ನನ್ನ ಬರವಣಿಗೆಯನ್ನು ಮೆಚ್ಚಿ ಬೆನ್ನು ತಟ್ಟುತ್ತಿರುವ ಹಿರಿಯ ಪತ್ರಕರ್ತರಾದ ಅರುಣಕುಮಾರ ಹಬ್ಬು ಅವರನ್ನು ಮರೆಯಲಾರೆ. ಅವರ ಸಹೋದರ ಉದಯಕುಮಾರ ಹಬ್ಬು, ಪ್ರೊ. ಕೆ.ಇ.ರಾಧಾಕೃಷ್ಣ, ನನ್ನ ಆತ್ಮೀಯ ಮಿತ್ರ ಕವಿ ಮತ್ತು ಕತೆಗಾರ ರಾಜು ಹೆಗಡೆ ಮಾಗೋಡು, ಅನಂತ ವೈದ್ಯ ಯಲ್ಲಾಪುರ, ಲಕ್ಷ್ಮೀನಾರಾಯಣ ಶಾಸ್ತ್ರಿ ಬೆಳಗಾವಿ, ದೂರದ ಜಮಖಂಡಿಯಲ್ಲಿದ್ದರೂ ತನ್ನ ಆಶು ಕವಿತ್ವದ ಮೂಲಕ ಸದಾ ನನ್ನ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿರುವ ನನ್ನ ಸಹೋದರ ಸಮಾನ ನಾರಾಯಣ ಶಾಸ್ತ್ರಿ ಹಾಗೂ ವಿಧಾನ ಸೌಧದಲ್ಲಿ ಉನ್ನತ ಹುದ್ದೆಯಲ್ಲಿರುವ ಮತ್ತು ಸಾಹಿತ್ಯ ಪ್ರೇಮಿ ತುಕಾರಾಮ ಕಲ್ಯಾಣಕರ್ -ಇವರೆಲ್ಲರೂ ನನ್ನ ಸಾಹಿತ್ಯದ ಪೋಷಕರುಗಳು. ಇವರೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ನನ್ನ ಆಯಿ ಶ್ರೀಮತಿ ಶಾರದಾ ಯಾಜಿ ನನಗೆ ಸಾಹಿತ್ಯದ ಗೀಳನ್ನು ಹತ್ತಿಸಿದವರು. ಅದೇ ರೀತಿ ನಿರಂತರವಾಗಿ ನನ್ನನ್ನು ಪ್ರೋತ್ಸಾಹಿಸುತ್ತಿರುವ ನನ್ನ ಸೋದರ ಮಾವಂದಿರಾದ ಎಸ್. ಎಸ್.ಹೆಗಡೆ ನಿವೃತ್ತ ಶಿಕ್ಷಕರು, ಸಪ್ತಕದ ಜಿ.ಎಸ್.ಹೆಗಡೆ, ನನ್ನ ಚಿಕ್ಕಮ್ಮ ಪೂರ್ಣಿಮಾ ಹೆಗಡೆ ಇವರಲ್ಲಿ ಆಶೀರ್ವಾದವನ್ನು ಬೇಡುವೆ. ನನ್ನ ತಮ್ಮಂದಿರಾದ ಮಂಜುನಾಥ ಮತ್ತು ನಾಗರಾಜ, ಮಗಳು ಮೇಧಾ, ಅಳಿಯ ಚಿದಂಬರ, ಮಗ ಮನು ಇವರೆಲ್ಲರೂ ನನ್ನ ಉಸಿರು. ನನ್ನ ಸಾಹಿತ್ಯದ ಮೊದಲ ಓದು ಮತ್ತು ಅಕ್ಷರಗಳನ್ನು ತಿದ್ದುವ ನನ್ನ ಹೆಂಡತಿ ಮಂಗಲಾಳಿಗೆ ನನ್ನದೊಂದು ಒಲವಿನ ನಗು.
ಈ ಕೃತಿಯನ್ನು ಪ್ರಾರಂಭದ ದಿನಗಳಿಂದಲೂ ತಾನೇ ಪ್ರಕಟಿಸುತ್ತೇನೆ ಎಂದು ಒತ್ತಾಯಿಸಿ ಈಗ ಪ್ರಕಟಿಸುತ್ತಿರುವ ಹಾಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಮಹತ್ವದ ಕೃತಿಗಳನ್ನು ಅತ್ಯಂತ ಕಿರಿದು ವರ್ಷಗಳಲ್ಲಿಯೇ ಕೊಟ್ಟ ನನ್ನ ದಾಯಾದಿ ಬಂಧು ಯಾಜಿ ಪ್ರಕಾಶನದ ಗಣೇಶ ಯಾಜಿ ಮತ್ತು ಸವಿತಾ ಯಾಜಿ ದಂಪತಿಗಳಿಗೆ ಧನ್ಯವಾದಗಳು. ಮುಖಪುಟವನ್ನು ಅರ್ಥಪೂರ್ಣ ವಾಗಿ ಚಿತ್ರಿಸಿಕೊಟ್ಟ ಪ್ರಸಿದ್ಧ ಕಲಾವಿದ ಮಿತ್ರ ಸತೀಶ ಯಲ್ಲಾಪುರ ಮತ್ತು ಒಳಪುಟಗಳಲ್ಲಿ ತನ್ನ ವಿಶಿಷ್ಟ ರೇಖೆಗಳ ಮೂಲಕ ಬರಹಗಳಿಗೆ ಜೀವ ತುಂಬಿದ ಖ್ಯಾತ ಚಿತ್ರಕಲಾವಿದ ಈಗ ಇಂಡೋನೇಷ್ಯಾದಲ್ಲಿ ನೆಲೆಸಿದ ಶಂಭು ಶಾಸ್ತ್ರಿ ಅವರಿಗೆ, ಮುದ್ರಣದ ಹೊಣೆಹೊತ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಮುದ್ರಣಾಲಯದ ಶ್ರೀ ನಾಗೇಂದ್ರ ಮತ್ತು ಅವರ ಬಳಗಕ್ಕೆ, ಎಷ್ಟು ನಮನಗಳನ್ನು ಹೇಳಿದರೂ ಕಡಿಮೆಯೇ. ನನ್ನ ಯಶಸ್ಸಿನ ಪಾಲುದಾರರು ಅವರು.
ನನ್ನೆಲ್ಲಾ ಸನ್ಮಿತ್ರರಿಗೆ ಮತ್ತೊಮ್ಮೆ ಕೃತಜ್ಞತಾಪೂರ್ವಕ ನಮನಗಳು.
ನಾರಾಯಣ ಯಾಜಿ
ಪುಟ ತೆರೆದಂತೆ…
ಸವಿನುಡಿ / ೫
ಜ್ಞಾನದ ಹೊಸ ಆಯಾಮ ತೋರುವ ಬರಹಗಳು / ೭
ಎದೆಯಾಂತರಂಗವನ್ನು ನಿಮ್ಮೆದುರು ತೆರೆದೊಮ್ಮೆ / ೯
ಭಾಗ ೧ ಅಂಬರದಿಂದ
೧ ಆತ್ಮಸ್ವರೂಪವೇ ಪ್ರಜ್ಞಾನರೂಪ ಇದನ್ನು ಅರಿಯುವದೇ ಪ್ರಜ್ಞಾನಂ ಬ್ರಹ್ಮ / ೧೯
೨ ತತ್ವಮಸಿ: ನಾನು ಏನೋ ನೀನೂ ಅದೇ ಎನ್ನುವ ಅರಿವಿನ ಮಹಾವಾಕ್ಯ / ೨೯
೩ ಆತ್ಮೋನ್ನತಿಯ ಆತ್ಮಪ್ರಜ್ಞೆಗೊಂದು ಬೆಳಕಿನ ಬೀಜ / ೩೮
೪ ಗಾರ್ಗಿ ವಾಚಕ್ನವಿ ಸಮಸ್ತ ಹೆಣ್ಣುಮಕ್ಕಳಿಗೆ ಸ್ಫೂರ್ತಿ / ೪೩
೫ ವರ್ತಮಾನದ ಕರ್ಮಮಾರ್ಗ ಕಲಿಸಿಕೊಡುವ ಈಶಾವಾಸ್ಯ / ೪೮
೬ ಆನಂದ ಮೀಮಾಂಸೆಯೆಡೆಗೆ ತಲುಪಿಸುವ ಬ್ರಹ್ಮಾನಂದವಲ್ಲಿ / ೫೪
೭ ಅನ್ನದ ಆವರಣದಲ್ಲಿ ಬ್ರಹ್ಮಾಂಡ ನೋಡಿದ ಭೃಗುಮಹರ್ಷಿ / ೬೩
೮ ಉಪನಿಷತ್ ಲೋಕದಲ್ಲೊಂದು ಘಟಿಕೋತ್ಸವ / ೬೮
೯ ಸಾಂಸ್ಕೃತಿಕಲೋಕದ ಮಹಾರಾಯಭಾರಿ / ೭೩
೧೦ ಕರ್ಮಯೋಗ ಪ್ರತಿಪಾದಿಸಿದ ಪರಿವ್ರಾಜಕ ಬುದ್ಧ / ೭೯
೧೧ ಲೋಕಶಂಕರರ ಅದ್ವೈತ ವಿಲಾಸ ವಿಚಾರಧಾರೆ / ೮೫
೧೨ ಅಂಬೆ ಎನ್ನುವ ಜನ್ಮಾಂತರಗಳ ದೀರ್ಘ ನಿಟ್ಟುಸಿರು / ೯೧
೧೩ ಲೋಕೋತ್ತರವಾದ ಕಾವ್ಯವನ್ನು ಲೋಕಪ್ರಿಯಗೊಳಿಸಿದ ಅಭಿಧಾವ್ರತ್ತಿ / ೯೭
೧೪ ಕಾಡಿನಿಂದ ಕಾಡಿಗೆ ಅಲೆದ ಕುಂತೀದೇವಿಯ ಹತಭಾಗ್ಯ ಬದುಕು / ೧೦೩
೧೫ ವಿಷಾದವೇ ಉದ್ಭವಗೊಂಡ ವಾಲ್ಮೀಕಿಯ ಕೈಕೇಯಿ / ೧೦೯
೧೬ ಮೃತ್ಯುವನ್ನು ಮಂಗಲಕರವನ್ನಾಗಿಸುವ ಮಹಾದೇವ / ೧೧೫
ಭಾಗ ೨ ಅವನಿಯ ತನಕ
೧೭ ಭಯವಿಲ್ಲದ ಅಸ್ತ್ರದಿಂದಲೇ ಭಯಹುಟ್ಟಿಸಿದ ಸಂತ / ೧೨೩
೧೮ ವೇದಾಂತದ ಸಾರವನ್ನು ಯಕ್ಷಗಾನದಲ್ಲಿ ಹಿಡಿದಿಟ್ಟ ನಿರಕ್ಷರಿ / ೧೨೮
೧೯ ಇತಿಹಾಸದಲ್ಲಿ ಮರೆಯಾದ ಎರಡನೇಯ ಸಿಪಾಯಿ ಕ್ರಾಂತಿ / ೧೩೪
೨೦ ಭಾಷಾ ಸುಂದರಿ ಕನ್ನಡಾಂಬೆಯ ಸಿರಿಯ ಪರಿಯನದೇನೆಂಬೆ / ೧೪೧
೨೧ ಲೌಕಿಕದಿಂದ ಅಲೌಕಿಕ ಆನಂದದೆಡೆಗೆ ಸಾಗಿಸುವ ಪರ್ವ / ೧೪೭
೨೨ ರಾಷ್ಟ್ರವೆನ್ನುವದು ಅಸ್ಮಿತೆಯ ಭಾವನಾತ್ಮಕ ಸಂಬಂಧ / ೧೫೩
೨೩ ಕ್ಯಾಲೆಂಡರ್: ಸರಿವ ಕಾಲಕ್ಕೆ ತಾಳೆಯಾಗದ ಕಾಲಮಾಪಕ / ೧೫೮
೨೪ ವಿಲಿಯಂ ಹೆನ್ರಿ ಡೇವಿಸ್ ಆಂಗ್ಲ ಸಾಹಿತ್ಯದ ಮಹಾಭಿಕ್ಷುಕ / ೧೬೩
೨೫ ತತ್ವಶಾಸ್ತ್ರದ ಯಥಾರ್ಥ ಹಂಚಿದ ವಿದ್ವನ್ಮಣಿ / ೧೬೯
ಹಿನ್ನೀರಿನ ಹಿನ್ನುಡಿ / ೧೭೫
ಗ್ರಂಥಋಣ / ೧೭೭
Reviews
There are no reviews yet.