ಮುನ್ನುಡಿ
ನಾನು ಕೆಲವು ಕೃತಿಗಳನ್ನು ಮತ್ತೆಮತ್ತೆ ಓದುತ್ತೇನೆ- ಕುವೆಂಪು ಅವರ ‘ಮದುಮಗಳು, ರಾವ್‌ಬಹಾದೂರರ ‘ಗ್ರಾಮಾಯಣ, ಮಿರ್ಜಿಯವರ ‘ನಿಸರ್ಗ, ತೇಜಸ್ವಿಯವರ ‘ಕರ್ವಾಲೊ, ದೇವನೂರರ ‘ಒಡಲಾಳ, ಕಾಫ್ಕಾನ ‘ರೂಪಾಂತರ, ನವರತ್ನ ರಾಮರಾಯರ ‘ಕೆಲವು ನೆನಪುಗಳು, ತಕಳಿಯವರ ‘ಚೆಮ್ಮೀನ್, ಟಾಲ್‌ಸ್ಟಾಯರ ‘ಒಬ್ಬನಿಗೆ ಎಷ್ಟು ನೆಲಬೇಕು? -ಹೀಗೆ. ಪ್ರತಿಸಲ ಓದುವಾಗಲೂ ಇವು ವಿಭಿನ್ನವಾಗಿ ತೋರುತ್ತವೆ; ಹಿಂದಣ ಓದಿನಲ್ಲಿ ಕಾಣಿಸದ ಹೊಸ ಹೊಳಹುಗಳನ್ನು ಕಾಣಿಸುತ್ತವೆ. ಹಿರಿದಾದ ಜೀವನದರ್ಶನ ಮತ್ತು ಕಲೆಯ ಮಾಂತ್ರಿಕತೆಯುಳ್ಳ ಜೀವಂತ ಸಾಹಿತ್ಯದ ಹೊಳಪು ಎಂದೂ ಮಾಸುವುದಿಲ್ಲ. ಕೃತಿಯೇನೂ ಬದಲಾಗಿರುವುದಿಲ್ಲ. ಆದರೆ ಓದುಗರ ವ್ಯಕ್ತಿತ್ವವೂ ಅವರ ಬಾಳಿನ ಸನ್ನಿವೇಶವೂ ಬದಲಾಗಿರುತ್ತದೆ. ಹೀಗೆಂದೇ ಕೃತಿ ನವನವೋನ್ಮೇಷವಾಗಿ ಕಾಣುತ್ತದೆ. ಇದು ಕೃತಿಯಿಂದ ಓದುಗರೂ ಓದುಗರಿಂದ ಕೃತಿಯೂ ಬೆಳೆವ ಬದಲಾಗುವ ಹಾಗೂ ಪರಸ್ಪರ ಮರುಹುಟ್ಟು ಪಡೆಯುವ ಕಲಾಲೋಕದ ಅಪೂರ್ವ ವಿದ್ಯಮಾನ. ವೈಕಂ ಕೃತಿಗಳಿಗೂ ನಮ್ಮನ್ನು ಬಾಳಿನುದ್ದಕ್ಕೂ ಹೀಗೆ ಸೆಳೆಯುವ, ಬೆಳೆಸುವ, ಪರಿವರ್ತಿಸುವ ಗುಣಗಳಿವೆ. ಅವರ ‘ಪಾತುಮ್ಮಳ ಆಡು ‘ಬಾಲ್ಯಕಾಲಸಖಿ ‘ನನ್ನಜ್ಜನಿಗೊಂದು ಆನೆಯಿತ್ತು ಮೊದಲಾದ ಕಾದಂಬರಿಗಳು; ‘ಅಮ್ಮ ‘ಪ್ರೇಮಪತ್ರ ‘ಹೂಬಾಳೆ ಹಣ್ಣು ಐಷುಕುಟ್ಟಿ ‘ಆನೆಬಾಚನೂ ಹೊನ್ನಶಿಲುಬೆಯೂ ಮುಂತಾದ ಕತೆಗಳು ಭಾರತೀಯ ಸಾಹಿತ್ಯದ ಶ್ರೇಷ್ಠ ಬರೆಹಗಳು.
ವೈಕಂ ಓದುತ್ತಿದ್ದರೆ, ಭಾರತದ ಒಂದು ಪ್ರದೇಶದ ಸಜೀವ ಜಗತ್ತು ತನ್ನೆಲ್ಲ ಸೂಕ್ಷ್ಮ ವಿವರಗಳೊಂದಿಗೆ ಕಣ್ಮುಂದೆ ಮೈದಳೆಯುತ್ತಿರುವ ಅನುಭವವಾಗುತ್ತದೆ. ಅದೊಂದು ಕಾಡು-ಹೊಳೆ-ಮಳೆ; ಆನೆ-ಆಡು; ಜನ, ಉಡುಗೆ, ಊಟ; ಕಾಮ-ಪ್ರೇಮ; ಕರುಣೆ-ಮೈತ್ರಿ; ಕಿಲಾಡಿತನ-ಕ್ರೌರ್ಯ; ಸ್ವಾತಂತ್ರ್ಯ ಹೋರಾಟ-ಕಮ್ಯುನಿಸ್ಟ್ ಚಳುವಳಿಗಳ ಸಮೇತ ಅನಾವರಣಗೊಳ್ಳುವ ಸಶಕ್ತವಾದ ಒಂದು ಸಾಂಸ್ಕೃತಿಕ ಜಗತ್ತು. ತರ್ಕಕ್ಕೆ ನಿಲುಕದ ಬದುಕಿನ ಅನೂಹ್ಯ ಪ್ರವೃತ್ತಿಗಳನ್ನು ಶೋಧಿಸುವುದು ವೈಕಂ ಸಾಹಿತ್ಯದ ಉದ್ದೇಶವಾದರೂ, ಅದರ ಭಾಗವಾಗಿ ಪ್ರಾದೇಶಿಕ ಸಂಸ್ಕೃತಿಯ ಪ್ರತಿಬಿಂಬಗಳನ್ನೂ ಅದು ಅಯತ್ನವಾಗಿ ಮೂಡಿಸುತ್ತದೆ. ಲೋಕದ ಎಲ್ಲ ದೊಡ್ಡ ಲೇಖಕರೂ ತಮ್ಮ ನೆಲದ ಸಾಂಸ್ಕೃತಿಕ ಕಥನವನ್ನು ತಮ್ಮ ಸೃಜನಶೀಲ ಹುಡುಕಾಟದ ಭಾಗವಾಗಿ ಹೀಗೇ ಕಟ್ಟಿಕೊಡುತ್ತ ಬಂದಿದ್ದಾರೆ.
ಓದಿನ ಸುಖಕೊಡದೆ ದೊಡ್ಡ ಜೀವನ ಮೌಲ್ಯಗಳನ್ನು ಅನ್ವೇಷಣೆ ಮಾಡಿರುವ ಅನೇಕ ಕೃತಿಗಳಿವೆ; ಚೆನ್ನಾಗಿ ಓದಿಸಿಕೊಂಡು ಹೋಗಿ ದೊಡ್ಡದೇನನ್ನೂ ಕೊಡದ ಹೃದ್ಯ ಬರೆಹಗಳೂ ಇವೆ. ನಿಜವಾದ ಗದ್ಯಬರೆಹ ಸರಸ ಮತ್ತು ಸಲಿಗೆಯಲ್ಲಿ ಓದಿನ ಸುಖವನ್ನು ಕೊಡುತ್ತಲೇ ಓದುಗರ ಅನುಭವವನ್ನು ಸಮೃದ್ಧಗೊಳಿಸುತ್ತದೆ; ಸಂವೇದನೆಯನ್ನು ಸೂಕ್ಷ್ಮಗೊಳಿಸುತ್ತದೆ; ಚಿಂತನೆಯನ್ನು ಹರಿತಗೊಳಿಸುತ್ತದೆ. ಚಾಪ್ಲಿನ್ ಸಿನಿಮಾಗಳ ದಾರ್ಶನಿಕ ವಿನೋದ ಹೀಗೇ ತಾನೇ? ವೈಕಮರ ಯಾವುದೇ ಬರೆಹವನ್ನು ಒಮ್ಮೆ ಆರಂಭಿಸಿದರೆ ಮುಗಿವ ತನಕ ಬಿಡಲಾಗದು. ಈ ಹಿಂದೆ ಓದಿದ ಬರೆಹವನ್ನು ನೆನೆದರೂ ಮನಸ್ಸು ಪ್ರಸನ್ನಗೊಂಡು ತುಟಿಯಲ್ಲಿ ಮಂದಹಾಸ ಸುಳಿಯುತ್ತದೆ. ಅಷ್ಟೊಂದು ಚೇತೋಹಾರಿಯಾದ ಸನ್ನಿವೇಶ, ಪಾತ್ರ ಮತ್ತು ಮಾತುಕತೆಗಳು ಅಲ್ಲಿವೆ. ಅವರ ಕಥನದ ಭಾಷೆಯಲ್ಲೇ ವಿನೋದ ಪ್ರಜ್ಞೆ ಸುಪ್ತವಾಗಿ ಅಡಕವಾಗಿದೆ. ಅವರ ಕಥನವು ಬಾಳಿನ ಅರ್ಥಶೋಧವನ್ನು ತತ್ವಶಾಸ್ತ್ರೀಯವಾದ ಗಾಂಭೀರ್ಯದಲ್ಲಿ ನಡೆಸುವುದಿಲ್ಲ. ಬದಲಿಗೆ ಲೀಲಾವಿನೋದದಲ್ಲಿ ಕಟ್ಟಿಕೊಡುತ್ತವೆ. ನಗಿಸಬಲ್ಲ ವೈಕಂ ಕಣ್ಣಲ್ಲಿ ಕಂಬನಿ ಉಕ್ಕಿಸುವ ಮತ್ತು ಗಾಢವಾದ ವಿಷಾದ ಹೊಮ್ಮಿಸುವಂತೆಯೂ ಬರೆಯಬಲ್ಲರು. ಅವರ ‘ಟೈಗರ್ ‘ಮೂರ್ಖರ ಸ್ವರ್ಗ ‘ಕೈಕೋಳ ಮುಂತಾದ ಕತೆಗಳು; ‘ಬಾಲ್ಯಕಾಲಸಖಿ ‘ಮದಿಲುಗಳು ಮೊದಲಾದ ಕಾದಂಬರಿಗಳು, ವ್ಯವಸ್ಥೆಯ ಕ್ರೌರ್ಯವನ್ನೂ ಬಲಿಪಶುಗಳ ಅಸಹಾಯಕತೆಯನ್ನೂ ಒಟ್ಟಿಗೆ ಹಿಡಿದುಕೊಡುತ್ತವೆ. ಜೀವನ ದರ್ಶನ ವಿಷಯದಲ್ಲಿ ಟಾಲಸ್ಟಾಯನನ್ನು ನೆನಪಿಸುವ ವೈಕಂ ಸಾಹಿತ್ಯವು, ದಾರುಣ ವ್ಯಂಗ್ಯದ ವಿಷಯದಲ್ಲಿ ಸಾದತ್ ಹಸನ್ ಮಂಟೊನನ್ನು ನೆನಪಿಸುತ್ತದೆ. ಇದರ ಉದ್ದೇಶವೇ ಜೀವನ ಪ್ರೀತಿಯನ್ನು ಹೊಮ್ಮಿಸುವುದು. ಬಾಳದರ್ಶನ ವನ್ನು ಅಡಗಿಸಿ ತೋರುವುದು. ಮನುಷ್ಯತ್ವವೇ ನಿಜವಾದ ಧರ್ಮ ಎಂದು ಸಾರುವುದು.
ವೈಕಂ ಕತೆಗಳಲ್ಲಿ ಕೆಲವು ಪಾತ್ರಗಳು ಮತ್ತೆಮತ್ತೆ ಬರುತ್ತವೆ. ಹೀಗಾಗಿ ಅವರ ಕತೆಗಳನ್ನು ಕಾದಂಬರಿಯೊಂದರ ಬಿಡಿಬಿಡಿ ಅಧ್ಯಾಯಗಳಂತೆಯೂ ಓದಬಹುದು. ಅಲ್ಲಿನ ಬಹುತೇಕ ಜನ ಸಾಮಾನ್ಯರು- ಕಾರ್ಮಿಕರ ನಾಯಕ, ಪುಡಿಗಳ್ಳ, ಹೋಟೆಲುಕಾರ್ತಿ, ಕೂಲಿಕಾರ, ಪೊಲೀಸು, ಮಾವುತ ಇತ್ಯಾದಿ. ಇವರಲ್ಲಿ ಕೆಲವರ ಚಟುವಟಿಕೆಗಳು ಕಾನೂನಿನ ಕಣ್ಣಲ್ಲಿ ಗುನ್ಹೆಗಳು. ಆದರೆ ಅವು ಬದುಕುಳಿಯಲು ಮಾಡುವ ಉಪಾಯ ಹಾಗೂ ಅವರ ಜೀವನಪ್ರೀತಿಯ ದ್ಯೋತಕಗಳೂ ಕೂಡ ಆಗಿವೆ. ‘ಏಸುವನ್ನು ಏರಿಸಿದ್ದು ಮರದ ಶಿಲುಬೆಗೆ. ಹೀಗಾಗಿ ಚರ್ಚಿನಲ್ಲೇಕೆ ಹೊನ್ನಿನಶಿಲುಬೆ ಇರಬೇಕು?’ ಎಂಬ ಮೂಲಭೂತ ಪ್ರಶ್ನೆಯನ್ನು ಹಾಕಿಕೊಳ್ಳುವ ತೋಮ, ಅದನ್ನು ಕದಿಯುತ್ತಾನೆ- ತನಗಲ್ಲ, ಜೈಲಿನಲ್ಲಿ ಪಹರೆಕಾಯುವ ಬಡಪಾಯಿ ಪೋಲಿಸನ ಹೆಣ್ಣುಮಕ್ಕಳ ಮದುವೆ ಖರ್ಚಿಗೆ. ಮಾಸ್ತಿಯವರ ‘ಇಲ್ಲಿಯ ನ್ಯಾಯ ಕತೆಯಲ್ಲೂ ಇಂಥದೇ ಪ್ರಸಂಗ ಬರುತ್ತದೆ. ಲೋಕದ ಕಣ್ಣಲ್ಲಿ ಅಪರಾಧಿಗಳಾಗಿರುವ ಜನರ ಕೃತ್ಯಗಳು ಸ್ಥಾಪಿತ ವ್ಯವಸ್ಥೆಯನ್ನೂ ಸಾಂಸ್ಥಿಕ ಧರ್ಮವನ್ನೂ ಪ್ರಶ್ನೆಗೊಳಪಡಿಸುತ್ತವೆ. ವೈಕಂ ಕಾದಂಬರಿ-ಕತೆಗಳು ಸಾಂಪ್ರದಾಯಿಕ ಸಮಾಜದ ಕಠೋರ ಆತ್ಮವಿಮರ್ಶೆಗಳು.
ಸಾಮಾನ್ಯರ ಬದುಕಿನ ಹೋರಾಟವನ್ನು ಕಟ್ಟಿಕೊಡುವ ವೈಕಂ ಕತೆಗಳದ್ದು, ಜಾತ್ಯತೀತ ಲೋಕ. ಈ ಲೋಕದಲ್ಲಿ ಪ್ರಮುಖ ಪಾತ್ರಧಾರಿಗಳು ಮಹಿಳೆಯರೇ. ಇವರಲ್ಲಿ ಪರಿತ್ಯಕ್ತರಾಗಿ ಅನಾಥ ಬದುಕನ್ನು ನಡೆಸುವವರುಂಟು. ಆದರೆ ಹೆಚ್ಚಿನ ಮಹಿಳೆಯರು ಗಂಡಂದಿರ ಗುಲಾಮರಲ್ಲ. ತಮ್ಮ ಜಾಣ್ಮೆ ಸೌಂದರ್ಯ ದುಡಿಮೆಯಿಂದ ಗಂಡಸರನ್ನು ಹಿಡಿತದಲ್ಲಿಟ್ಟು ಆಳಬಲ್ಲ ಗಟ್ಟಿಗಿತ್ತಿಯರು. ಜೀವನ ಪ್ರೀತಿಯುಳ್ಳವರು. ಬದುಕನ್ನು ಕಟ್ಟಿಕೊಳ್ಳಲು ಹೋರಾಡುವವರು. ‘ಪ್ರೇಮಪತ್ರ ಕತೆಯ ಸಾರಾಮ್ಮ, ನದಿಯ ಜಲದಲ್ಲಿ ಮುಳುಗಿಕೊಂಡು ಬಾಳೆಗೊನೆಯನ್ನು ಎಗರಿಸುವ ಸೈನಬಾ ಇಂತಹವರು. ತಮ್ಮ ಮೇಲೆ ಅಪರಿಮಿತ ಆತ್ಮವಿಶ್ವಾಸವುಳ್ಳ ಇಂತಹ ಮಹಿಳೆಯರನ್ನು ಕಾಣಿಸುವುದಕ್ಕೆ, ವೈಕಂ ಮಾತೃಪ್ರಧಾನ ಸಮಾಜದ ಚಹರೆಗಳು ಇನ್ನೂ ಕೆಲಮಟ್ಟಿಗೆ ಉಳಿದಿರುವ ಪರಿಸರದಿಂದ ಬಂದವ ರಾಗಿರುವುದೂ ಒಂದು ಕಾರಣವಿದ್ದೀತು. ಈ ಪಾತ್ರಗಳಲ್ಲಿ ನಿಷ್ಠುರವಾದ ಜೀವನ ಸಂಘರ್ಷದಿಂದಲೇ ದಕ್ಕಿದ ಮತ್ತು ಸಹಜವಾಗಿ ನೆಲೆಸಿರುವ ಸ್ತ್ರೀವಾದವಿದೆ. ವೈಕಮರ ಬಹಳಷ್ಟು ಕತೆಗಳು ಗಂಡುಹೆಣ್ಣಿನ ಪ್ರೇಮವನ್ನು ಕುರಿತವು. ಈ ಪ್ರೇಮವೊ ಹತ್ತಾರು ವಿನ್ಯಾಸಗಳದ್ದು. ಹೆಚ್ಚಿನ ಪ್ರೇಮ ಪ್ರಕರಣಗಳಲ್ಲಿ ಹೆಣ್ಣನ್ನು ಆರಾಧಿಸುವವನು, ಅವಳ ಹಸಾದಕ್ಕಾಗಿ ಹಾತೊರೆವವನು ಮತ್ತು ಸಂಘರ್ಷ ಮಾಡುವವನು ಗಂಡು. ಸೂಫಿದರ್ಶನದ ಮುಖ್ಯ ತತ್ವ ಇಶ್ಕ್ ಅಥವಾ ಪ್ರೇಮ. ಅಲ್ಲಿ ಸಾಧಕರು ಗಂಡುಗಳಾಗಿ ಅವರು ಹುಡುಕುವ ಪರತತ್ವ ಅಥವಾ ‘ದೇವರು ಹೆಣ್ರೂಪದಲ್ಲಿರುತ್ತದೆ. ಈ ಅರ್ಥದಲ್ಲಿ ವೈಕಂ ಕತೆಗಳು ಸೂಫಿಪ್ರೇಮದ ಲೌಕಿಕ ನಿದರ್ಶನಗಳಂತೆಯೂ ತೋರುತ್ತವೆ.
ವೈಕಂ ಒಬ್ಬ ಪ್ರತಿಭಾವಂತ ಸ್ಟೋರಿಟೆಲರ್. ಅವರಿಗೆ ಕತೆ ಹೇಳುವುದಕ್ಕೆ ಘನವಾದ ವಿಷಯವೇ ಆಗಬೇಕಿಲ್ಲ. ಲೋಕದ ‘ಸಣ್ಣ’ ಸಂಗತಿಗಳೂ ಸಾಕು. ಒಬ್ಬ ವ್ಯಕ್ತಿ ದಿನಚರಿಯ ಸಾಮಾನ್ಯ ವರದಿಯನ್ನೂ ಅವರು ಸ್ವಾರಸ್ಯಕರ ಕತೆಯನ್ನಾಗಿ ರೂಪಾಂತರಿಸಬಲ್ಲರು. ಭಗವದ್ಗೀತೆ ಕುರಿತ ಕತೆ ಇಂತಹುದು. ಪಾತ್ರಗಳ ಮಾತುಕತೆಯಲ್ಲೇ ಕತೆಯನ್ನು ಬೆಳೆಸುವ ನಾಟಕೀಯ ಕೌಶಲ್ಯವೂ ಅವರಲ್ಲಿದೆ. ದೊಡ್ಡ ಸಾಹಿತ್ಯಕ ಪ್ರತಿಭೆಯೊಂದು ಕಥನದ ಕ್ಷೇತ್ರದಲ್ಲಿ ಮಾಡಿದ ಹುಚ್ಚು ಪ್ರಯೋಗಗಳಂತೆ ಅವರ ಕೆಲವು ಕತೆಗಳಿವೆ. ಈ ಪ್ರಯೋಗಗಳು ಕೆಲವೊಮ್ಮೆ ಅವಕ್ಕೆ ವಿಲಕ್ಷಣ ರೂಪವನ್ನು ಕೊಟ್ಟಿವೆ. ಸಣ್ಣಕತೆಯ ರೂಪವನ್ನು ಸೃಜನಶೀಲ ಸ್ವೇಚ್ಛೆಯಿಂದ ಹೀಗೆ ಒಡೆದು ಕಟ್ಟಿದ ಲೇಖಕರು ವಿರಳ. ಜಾಳಾದ ಮತ್ತು ವೈನೋದಿಕ ಶೈಲಿಯಿಂದ ಮಾತ್ರ ಬದುಕಿರುವಂತಹ ಕೆಲವು ಕತೆಗಳೂ ಇಲ್ಲದಿಲ್ಲ.
ಗಾಂಧಿ ಹಾಗೂ ಟಾಲ್‌ಸ್ಟಾಯ್ ಅವರಿಗೆ ನೊಬೆಲ್ ಕೊಡದೆ ಹೋದುದಕ್ಕೆ ಈಗಲೂ ಪ್ರಶಸ್ತಿ ಸಮಿತಿ ಪರಿತಪಿಸುತ್ತಿದೆಯಂತೆ. ಲಂಕೇಶ್, ವೈಕಂ, ತೇಜಸ್ವಿ ಮುಂತಾದ ಅನೇಕ ಭಾರತೀಯ ಲೇಖಕರಿಗೂ ಜ್ಞಾನಪೀಠ ಬರಲಿಲ್ಲ. ಆದರೆ ಇವರು ತಮ್ಮ ಉಜ್ವಲವಾದ ಬರೆಹದಿಂದಲೇ ಓದುಗಲೋಕದಲ್ಲಿ ಉಳಿದಿದ್ದಾರೆ. ದೇಶಭಾಷೆಗಳಲ್ಲಿ ಬರೆದ ಕಾರಣದಿಂದಲೇ ದಕ್ಷಿಣ ಭಾರತದ ಎಷ್ಟೊ ದೊಡ್ಡ ಲೇಖಕರು ದೇಶದ ಲೇಖಕರಾಗದೆ ಉಳಿದುಬಿಡುವ ದುರಂತವೂ ಇದೆ. ಈ ತೊಡಕನ್ನೂ ದಾಟಿ ವೈಕಂ ಭಾರತೀಯ ಭಾಷೆಗಳಿಗೆ ಹೋದರು. ಅವರನ್ನು ಕನ್ನಡಕ್ಕೆ ತಂದವರಲ್ಲಿ ವೆಂಕಟರಾಜ ಪುಣಿಂಚತ್ತಾಯ, ಬಿ.ಕೆ.ತಿಮ್ಮಪ್ಪ, ಕೆ.ಎಸ್.ಕರುಣಾಕರನ್, ಕೆ.ಕೆ.ಗಂಗಾಧರ್, ಕೆ.ಕೆ.ನಾಯರ್, ಎಸ್.ಗಂಗಾಧರಯ್ಯ, ಸುನೈಫ್, ಮೋಹನ ಕುಂಟಾರ್ ಮುಖ್ಯರಾಗಿದ್ದಾರೆ.
ಮೂಲತಃ ಕಾಸರಗೋಡು ಸೀಮೆಯವರಾದ ಕುಂಟಾರ್, ಕರ್ನಾಟಕ-ಕೇರಳದ ಗಡಿಸೀಮೆಯೊಳಗೆ ನಿಂತು, ಕನ್ನಡಿಗರಿಗೆ ಕೇರಳ ಸಾಹಿತ್ಯ ಮತ್ತು ಸಂಸ್ಕೃತಿಯ ಹಲವು ಮುಖಗಳನ್ನು ಎರಡು ದಶಕಗಳಿಂದಲೂ ಪರಿಚಯಿಸುತ್ತ ಬಂದವರು. ಪ್ರಸ್ತುತ ಸಂಕಲನದಲ್ಲಿ ಮೊದಲ ಸಲ ಕನ್ನಡಕ್ಕೆ ಬರುತ್ತಿರುವ ವೈಕಂ ಅವರ ಹಲವು ಕತೆಗಳಿವೆ. ಇಲ್ಲಿ ಮಲೆಯಾಳದ ಸಂಸ್ಕೃತಮಯ ವಾಕ್ಯರಚನೆಯನ್ನು ಅವರು ಉದ್ದೇಶಪೂರ್ವಕವಾಗಿ ಉಳಿಸಿಕೊಂಡಂತಿದೆ. ವೈಕಂ ಅವರ ಮೇಲಿನ ಪ್ರೀತಿ ಹಾಗೂ ಕನ್ನಡದ ಮೇಲಿನ ಶ್ರದ್ಧೆಗಳು ಸೇರಿ ರೂಪು ಗೊಂಡಿರುವ ಇಲ್ಲಿನ ಅನುವಾದವು, ಕನ್ನಡದ ಓದುಗರಿಗೆ ಹೊಸಲೋಕವನ್ನು ಕಾಣಿಸುತ್ತಿದೆ. ಹೊಸತಾಗಿ ಕನ್ನಡದಲ್ಲಿ ಕತೆ ಬರೆಯುವವರಿಗೆ ವೈಕಂ ಅವರಿಂದ ಕಸುಬುದಾರಿಕೆ ವಿಷಯದಲ್ಲಿ ಕಲಿಯಬಹುದಾದ ಮಹತ್ವದ ಪಾಠಗಳು ಇಲ್ಲಿವೆ. ಇಂತಹ ಅಪರೂಪದ ಕತೆಗಳನ್ನು ಕನ್ನಡಕ್ಕೆ ತಂದುದಕ್ಕಾಗಿ ಶ್ರೀ ಕುಂಟಾರ್ ಅವರನ್ನು ಕನ್ನಡ ಓದುಗರ ಪರವಾಗಿ ಅಭಿನಂದಿಸುತ್ತೇನೆ.
–ರಹಮತ್ ತರೀಕೆರೆ
ಪ್ರಸ್ತಾವನೆ
ಪ್ರವೇಶ
ನಾನಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ ದಿನಗಳು. ಕತೆಗಳನ್ನು ಓದುವ ಗೀಳಿಗಾಗಿ ಚಂದಮಾಮಗಳನ್ನೇ ಬಹುವಾಗಿ ಅವಲಂಬಿಸಿದ್ದೆ. ವಾರಕ್ಕೊಮ್ಮೆ ಶಾಲೆಯಿಂದ ಒಂದು ಕತೆ ಪುಸ್ತಕವನ್ನು ಕೊಡುತ್ತಿದ್ದರು. ಆಗೆಲ್ಲಾ ರಾಮಾಯಣ, ಮಹಾಭಾರತ ಹೀಗೆ ಪುರಾಣದ ಕತೆಗಳನ್ನೇ ಹುಡುಕಿ ಓದುತ್ತಿದ್ದೆ. ಒಮ್ಮೆ ಓದಿದ ಪುಸ್ತಕವನ್ನು ಖುಷಿಗಾಗಿ ಹಲವು ಬಾರಿ ಓದುತ್ತಿದ್ದೆ. ಆದ್ದರಿಂದ ನನಗೆ ಇನ್ನೂ ನೆನಪಿನಲ್ಲುಳಿದ ಕಾದಂಬರಿಗಳು ನೈಷದ ಚಕ್ರವರ್ತಿ, ಪುರೂರವ, ಸಿದ್ಧರಾಮ, ಸುರಪತಿ, ಇವನ್ನೆಲ್ಲ ಕತೆಗಾಗಿ ಎಷ್ಟು ಬಾರಿ ಓದಿರುವೆನೋ ನೆನಪಿಲ್ಲ. ಕತೆಯೆಂದರೆ ಪುರಾಣದ ಪಾತ್ರಗಳು, ದೇವರು ದೇವೇಂದ್ರ ಎಲ್ಲರೂ ಬರಲೇಬೇಕು. ಇಂತಹವುಗಳನ್ನು ಕುರಿತ ಓದು ಸಂತೋಷ ಕೊಡುತ್ತಿತ್ತು. ಮನೆಯಲ್ಲಿ ಅಮ್ಮ ಬಯಲಾಟಗಳಲ್ಲಿ ನೋಡಿದ ನೆನಪಿನಂತೆ ಲವಕುಶರ ಕತೆ, ರಾಮ ಸೀತೆಯರ ವನವಾಸ, ಶೂರ್ಪನಖಿ, ರಾವಣ, ಕಂಸ, ಕೃಷ್ಣ ಮೊದಲಾದವರ ಕತೆಗಳನ್ನು ನೆನಪಿನಿಂದ ಹೇಳುತ್ತಿದ್ದರು. ಜೊತೆಗೆ ಮೀನಿನ ರೂಪ ಪಡೆದ ರಾಜಕುಮಾರನ ಕತೆ. ಎರಡನೆಯ ಹೆಂಡತಿಯ ಮಾತಿಗೆ ಮಣಿದು ಮಗನನ್ನೇ ಕೊಂದ ಅರಸನ ಕತೆ-ಹೀಗೆ ಹಲವು. ಒಂದು ಊರಿನಲ್ಲಿ ಒಬ್ಬ ಅಜ್ಜಿ ಇದ್ದಳು… ಎಂದು ಆರಂಭವಾಗುವ ಕತೆಗಳಲ್ಲೂ ಅಜ್ಜಿಯ ಮೊಮ್ಮಗ ಕೊನೆಗೆ ರಾಜನಾಗುತ್ತಾನೆ. ಎಲ್ಲರೂ ಸುಖವಾಗಿ ಅಲ್ಲಿ ಕಾಲ ಕಳೆಯುತ್ತಿದ್ದಾರೆ. ನಾವು ಇಲ್ಲಿ ಇದ್ದೇವೆ ಎಂದು ಕೊನೆಯಾಗಬೇಕು. ಆ ದಿನಗಳಲ್ಲಿ ನನ್ನೆಲ್ಲಾ ಯೋಚನೆಗಳಿಗೆ ಹೊಸ ತಿರುವು ಕೊಟ್ಟುದು ನನ್ನಜ್ಜನಿಗೊಂದಾನೆಯಿತ್ತು, ಪಾತುಮ್ಮನ ಆಡು, ಬಾಲ್ಯಕಾಲ ಸಖಿ ಎಂಬ ಪುಸ್ತಕಗಳು. ಅವುಗಳನ್ನು ಓದಿದಾಗ ಅರೆ! ನನ್ನ ಮನೆಯ ಸುತ್ತ ಮುತ್ತಲಿನ ಜನರ ಕತೆಯೇ ಆಗಿದೆಯಲ್ಲ, ಎಂದು ಚಕಿತನಾಗಿದ್ದೆ.
ನೆರಮನೆಯ ಪಾತುಮ್ಮ, ಕುಞಲಿ, ನೆಬಿಸ, ಆಮೀನ, ಬಷೀರ್, ಅಬ್ದುಲ್ಲ ಇವರೆಲ್ಲರ ಜೊತೆ ಬಯಲಲ್ಲಿ ಆಟ ಆಡುತ್ತಿದ್ದ ದಿನಗಳು. ಅವರೆಲ್ಲರೂ ಪುಸ್ತಕದೊಳಗೂ ಸೇರಿಕೊಂಡರಲ್ಲ ಎಂಬುದೇ ನನಗೆ ದಿಗಿಲು ಹುಟ್ಟಿಸಿದ ವಿಷಯ. ನನ್ನ ಓರಗೆಯ ಗೆಳೆಯರ ಜೊತೆ ಆಟವಾಡುತ್ತಿದ್ದ ಆ ದಿನಗಳಲ್ಲೆ ಸಾಕಷ್ಟು ಬಾರಿ ಬಿಡುವಾದಾಗ ನನ್ನಜ್ಜನಿಗೊಂದಾನೆಯಿತ್ತು, ಬಾಲ್ಯಕಾಲಸಖಿ, ಪಾತುಮ್ಮನ ಆಡು ಪುಸ್ತಕಗಳನ್ನು ಓದಿದ್ದೆ.
ಎಳೆಯ ದಿನಗಳು ಕಳೆದುವು. ಕಾಲೇಜು ಸೇರಿ ಸಾಹಿತ್ಯವನ್ನೇ ಪ್ರಮುಖ ವಿಷಯವಾಗಿ ತೆಗೆದುಕೊಂಡು ಓದುವಾಗಲೂ ನನಗೆ ಆ ಪುಸ್ತಕಗಳೇ ಪ್ರಿಯವಾಗಿದ್ದವು. ಸಂಶೋಧನೆ ಯಂತಹ ಉನ್ನತ ವ್ಯಾಸಂಗದ ಸಂದರ್ಭದಲ್ಲೂ ನನಗೆ ಈ ಪುಸ್ತಕಗಳು ನನ್ನ ಭಾವನೆಗಳನ್ನು ತುಂಬಿ ನಿಂತಿದ್ದವು. ಅಂದು ಪುಸ್ತಕದ ಒಳಗಿದ್ದುದು ನನ್ನ ಬದುಕಲ್ಲೂ ಇತ್ತು. ಇಂದು ಅವೆಲ್ಲ ನೆನಪುಗಳು ಮಾತ್ರ. ಏಕೆ ಹೀಗಾಯಿತು ಎಂದು ಪ್ರಶ್ನಿಸಿಕೊಂಡರೆ ಉತ್ತರಗಳಾಗಿ ಈ ಪುಸ್ತಕಗಳು ನನಗೆ ಸಾಂತ್ವನ ನೀಡುತ್ತವೆ. ಅಂದಿನ ಪಾತುಮ್ಮ, ಕುಞಲಿ, ನೆಬಿಸ, ಆಮೀನ, ಉಮ್ಮಾಲಿ ಇವರೆಲ್ಲ ನಿಖಾಹ್ ಮಾಡಿಕೊಂಡು ಗಂಡನ ಮನೆ ಸೇರಿದರು. ಆಗಿನ್ನೂ ಸೊಂಟಕ್ಕೆ ಬಟ್ಟೆ ಸುತ್ತಿಕೊಂಡು ಬರಿಮೈಯಲ್ಲಿ ಓಡಾಡುತ್ತಿದ್ದ ಹುಡುಗಿಯರು ಐದೋ ಆರೋ ವಯಸ್ಸಿನ ಮಕ್ಕಳು. ನನ್ನ ನೆರೆಮನೆಯಲ್ಲಿದ್ದೇ ಅವರನ್ನು ಮತ್ತೆ ಎಂದೂ ನೋಡಲಾಗಲಿಲ್ಲ. ಮಾತನಾಡಲಾಗಲಿಲ್ಲ ಎಂಬ ನೋವು ನನ್ನನ್ನು ನಿರಂತರವೂ ಕಾಡುತ್ತಿದೆ. ಬುರ್ಖಾ ಧರಿಸಿ ನಾಲ್ಕಾರು ಮಕ್ಕಳನ್ನೂ ಕರೆದುಕೊಂಡು ಗಂಡನ ಜೊತೆ ಹೋಗಿ ಬರುವಾಗ ಅವರ ಪತ್ತೆಯೂ ಸಾಧ್ಯವಿಲ್ಲ. ನಮ್ಮೂರಿಗೇ ಮದುವೆ ಮಾಡಿಕೊಟ್ಟ ಉಮ್ಮಾಲಿ ಮಾತ್ರ ಇಂದಿಗೂ ಅವರೆಲ್ಲರ ಪ್ರತಿನಿಧಿಯಾಗಿ ಯೋಗ ಕ್ಷೇಮವನ್ನು ಇಂದಿಗೂ ವಿಚಾರಿಸಿಕೊಳ್ಳುತ್ತಿದ್ದಾಳೆ. ಉಳಿದವರೆಲ್ಲ ಹೀಗೇಕಾದರು? ಅವರನ್ನು ಹೊರಗೆ ಬಾರದಂತೆ ಬಂಧನದಲ್ಲಿರಿಸಿದ ಆದರ್ಶ ಯಾವುದಿದ್ದೀತು? ಎಂಬುದನ್ನು ಹುಡುಕ ಹೊರಟ ನನ್ನ ಮನಸ್ಸಿಗೆ ಉತ್ತರ ಹೇಳುತ್ತವೆ ವೈಕಂ ಮುಹಮ್ಮದ್ ಬಷೀರರ ಕತೆಗಳು.
ಬಷೀರರ ಕತೆಗಳಲ್ಲಿ ವ್ಯಂಗ್ಯವಿದೆ. ವಿಡಂಬನೆಯಿದೆ. ಮುಸಲ್ಮಾನರು ರೂಢಿಸಿಕೊಂಡ ನಂಬಿಕೆಗಳಲ್ಲಿ ಆಚರಣೆಗಳ ಪೊಳ್ಳುತನವನ್ನು ಗೇಲಿ ಮಾಡುವ ಚಾಟಿಯೇಟಿದೆ. ಅನೇಕ ಮುಗ್ಧ ಮಹಿಳೆಯರನ್ನು ಹೊರ ಪ್ರಪಂಚದ ಬೆಳಕನ್ನೂ ತೋರಿಸದೆ ಅಂಧಕಾರದಲ್ಲಿಯೇ ತೊಳಲುವಂತೆ ಮಾಡಿದ ಧರ್ಮದ ಕಟ್ಟುಪಾಡುಗಳ ಬಗ್ಗೆ ವಿರೋಧವಿದೆ. ಕೇರಳದ ಮುಸಲ್ಮಾನರು ರೂಢಿಸಿಕೊಂಡ ಜನಜೀವನವೊಂದರ ಒಳವಿವರಗಳು ಬಷೀರರ ಕತೆಗಳುದ್ದಕ್ಕೂ ತೆರೆದುಕೊಳ್ಳುತ್ತಾ ಸಾಗಿವೆ. ಬಷೀರರ ಕಥಾಲೋಕದ ಮಹಿಳಾ ಪಾತ್ರಗಳ ಮುಗ್ಧತೆಗೂ ನಮ್ಮ ನೆರೆಮನೆಯ ಮುಸಲ್ಮಾನ ಹೆಣ್ಣುಮಕ್ಕಳ ಮುಗ್ಧತೆಗೂ ಸಾಮ್ಯವಿದೆ. ಅದಕ್ಕಾಗಿಯೇ ಬಷೀರ್ ನನ್ನ ಪ್ರೀತಿಯ ಬರೆಹಗಾರ.
ಕೇರಳದ ಜನಸಮುದಾಯ
ಕೇರಳ ರಾಜ್ಯದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಜನ ಸಮುದಾಯವನ್ನು ಸ್ಥೂಲವಾಗಿ ನಾಲ್ಕಾಗಿ ವಿಂಗಡಿಸಬಹುದು. ಒಂದು ಮೇಲು ವರ್ಗದವರೆನಿಸಿದ ಬ್ರಾಹ್ಮಣರು. ಎರಡನೆಯದು ಬ್ರಾಹ್ಮಣೇತರರಾದ ಶೂದ್ರ ಸಮುದಾಯ. ಮೂರನೆಯದು ಕ್ರಿಶ್ಚಿಯನರು. ನಾಲ್ಕನೆಯದು ಮುಸಲ್ಮಾನರು. ಈ ನಾಲ್ಕೂ ಸಮುದಾಯಗಳು ಕೇರಳದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಈ ಸಮುದಾಯಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಆಚರಣೆಗಳಿವೆ, ನಂಬಿಕೆಗಳಿವೆ, ಉಡುಗೆ ತೊಡುಗೆಗಳಿವೆ. ಉಣಿಸು ತಿನಿಸುಗಳಿವೆ. ಈ ಎಲ್ಲಾ ಸಮುದಾಯಗಳ ಜನರು ಶೈಕ್ಷಣಿಕ, ಸಾಮಾಜಿಕ ಆರ್ಥಿಕವಾದ ಸುಸ್ಥಿತಿಗಾಗಿ ದುಡಿಯುತ್ತಾ ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡುವಲ್ಲಿಯೂ, ಈ ಎಲ್ಲಾ ಸಮುದಾಯದ ಮಂದಿ ಹೋರಾಟದ ಮುಂಚೂಣಿಯಲ್ಲಿದ್ದರು. ಆದರೆ ಮುಸಲ್ಮಾನ ಸಮುದಾಯದ ಜನರು ಶೈಕ್ಷಣಿಕವಾದ ಒಂದು ರೀತಿಯ ಅಸಡ್ಡೆಯನ್ನೇ ಮೊದಲಿನಿಂದಲೂ ತೋರಿಸುತ್ತಾ ಬಂದಿದ್ದಾರೆ.
ಬ್ರಿಟಿಷರು ದೇಶವನ್ನು ಆಳುತ್ತಿದ್ದ ಕಾಲದಲ್ಲೂ ಅಲ್ಲಿ ಇಲ್ಲಿ ಕೆಲವರು ಶಿಕ್ಷಣ ಪಡೆದವರಾದರೂ ಅದಕ್ಕಾಗಿಯೇ ತಮ್ಮ ಬದುಕನ್ನು ಸವೆಸಿದವರಲ್ಲ. ಶಿಕ್ಷಣ ಪಡೆದ ಬಡವರಿಗೆ ಓದು, ಬರವಣಿಗೆ ನಿಲುಕದ ವಿಚಾರವಾಗಿತ್ತು. ಅದರಲ್ಲೂ ಮುಸಲ್ಮಾನರು ಗಂಡು ಮಕ್ಕಳನ್ನು ದುಡಿಮೆಗೆ ಹಚ್ಚುತ್ತಿದ್ದರಾದ್ದರಿಂದ ಅವರಲ್ಲಿ ಇಂತಹ ಆಸಕ್ತಿ ಮೂಡಿರಲಿಲ್ಲ. ಹೆಣ್ಣು ಮಕ್ಕಳನ್ನು ಧಾರ್ಮಿಕ ಕಾರಣಗಳಿಗಾಗಿ ಸಾರ್ವಜನಿಕ ಶಿಕ್ಷಣ ಕೊಡಿಸಲಿಲ್ಲ. ಇದರಿಂದಾಗಿ ಮಲಯಾಳಂ ಸಾಹಿತ್ಯವೆಂಬುದು ಈ ಜನರಿಂದ ದೂರವೇ ಉಳಿಯಿತು. ಮುಸಲ್ಮಾನ ಸಮುದಾಯದಿಂದ ಸಾಹಿತ್ಯ ಕ್ಷೇತ್ರಕ್ಕೆ ಮೊತ್ತ ಮೊದಲ ಬಾರಿಗೆ ಪ್ರವೇಶ ಪಡೆದವರು ವೈಕಂ ಮುಹಮ್ಮದ್ ಬಷೀರ್. ಅತಿ ಹೆಚ್ಚು ಸಾಕ್ಷರರಿರುವ ಕೇರಳದಲ್ಲಿ ಈ ಸಮುದಾಯದಿಂದ ಮಲಯಾಳಂ ಮಹಿಳಾ ಬರೆಹಗಾರ್ತಿಯೊಬ್ಬರು ಕಾಣಿಸಿಕೊಳ್ಳಲು ೨೦ನೆಯ ಶತಮಾನದ ಕೊನೆಯ ದಶಕದವರೆಗೆ ಕಾಯಬೇಕಾಯ್ತು. ಶ್ರೀಮತಿ ಸುಹರಾ ಅವರು ಬಲೆ(ಮೊೞ) ಕಾದಂಬರಿಯ ಮೂಲಕ ಮಲಯಾಳಂನ ಮೊದಲ ಮುಸಲ್ಮಾನ ಬರೆಹಗಾರ್ತಿಯೆನಿಸಿದರು.
ಬ್ರಿಟಿಷರ ಅಧಿಕಾರಿಗಳ ವಿರುದ್ಧ ದೇಶೀಯಪ್ರಜ್ಞೆಯನ್ನು ಮೂಡಿಸಲು ಬಷೀರ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಎಳವೆಯಲ್ಲಿಯೇ ಮನೆಬಿಟ್ಟು ದೇಶ ಸಂಚಾರ ಮಾಡಿದ ಬಷೀರ್ ಬದುಕಿನ ಎಲ್ಲಾ ಮಜಲುಗಳನ್ನು ಪ್ರಕಟಿಸಿದರು. ಹಲವರ ಪ್ರೀತಿಯನ್ನು ಸಂಪಾದಿಸಿದರು. ಹಲವರ ಪ್ರೀತಿಯಿಂದ ವಂಚಿತರಾದರು. ಮಾನವೀಯತೆಯ ಧ್ವನಿಯಾಗಿ, ಪ್ರೀತಿಯ ಅನ್ವೇಷಕರಾಗಿ ಬಷೀರ್ ಸಾಹಿತ್ಯದಲ್ಲಿ ಸಜೀವ ಸಮಾಜವನ್ನು ಕಂಡರಿಸಿದರು.
ಬಷೀರ್ ಸಾಹಿತ್ಯ
ಬಷೀರ್ ಬದುಕಿನ ಏಳು ಬೀಳುಗಳಲ್ಲಿ ನಲುಗಿದವರು. ಹಾಗೆ ನಲುಗಿದಾಗಿನ ಭಾವನೆಗಳನ್ನು ತಮ್ಮದೇ ಆದ ದಾಟಿಯಲ್ಲಿ ಭಾಷೆಯ ಮೂಲಕ ಹಿಡಿದಿಟ್ಟಿದ್ದಾರೆ. ಹಾಗೆ ಹಿಡಿದಿಡುವಾಗ ಸಾಹಿತ್ಯ ನಿರ್ಮಾಣದ ಬೃಹತ್ ಉದ್ದೇಶ ಇಲ್ಲವಾಗಿತ್ತು. ಅನುಭವಗಳನ್ನು ಹಂಚಿಕೊಳ್ಳಬೇಕು ಎಂಬ ಕಾತರವಿತ್ತು. ಜೊತೆಗೆ ಬರವಣಿಗೆ ಬದುಕಿನ ಯಾವುದೇ ಒಂದು ಅಗತ್ಯವನ್ನು ಪೂರೈಸಿ ಕೊಡುತ್ತಿತ್ತು. ಹಾಗಾಗಿ ಬದುಕು, ಬರೆವಣಿಗೆ ಎರಡೂ ಒಂದೇ ಎಂಬಂತೆ ಬಷೀರ್ ಸ್ವೀಕರಿಸಿದರು. ಹಾಗೆ ಬಷೀರರ ಬರವಣಿಗೆ ಮಲಯಾಳಂ ಸಾಹಿತ್ಯದಲ್ಲಿ ತನ್ನ ವೈಯಕ್ತಿಕ ಮುದ್ರೆಯನ್ನು ನಿಚ್ಚಳವಾಗಿ ಉಳಿಸಿಕೊಂಡಿತು. ಅದಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನವೂ ದೊರೆಯಿತು.
ಬಷೀರ್ ತನ್ನ ಅನುಭವದ ನೋವು ನಲಿವುಗಳಿಗೆ ಅಕ್ಷರಗಳ ಉಡುಗೆ ತೊಡಿಸಿದರು. ತಾನು ಪಡೆದುದೆಲ್ಲ ನೋವೇ ಆದರೂ ಆ ನೋವಿನಲ್ಲೂ ವಿನೋದದ ಎಳೆಯನ್ನು ಗುರುತಿಸುವ ಸೂಕ್ಷ್ಮ ಒಳನೋಟ ಬಷೀರರಿಗಿದೆ. ಬದುಕಿನ ಕಷ್ಟ ಕೋಟಲೆಗಳನ್ನು ಅನುಭವಿಸುವ ಜೊತೆ ಜೊತೆಗೆ ಅದನ್ನು ವಿನೋದವಾಗಿ ಗ್ರಹಿಸುವ ಮೂಲಕ ಬದುಕಿಗೊಂದು ಅರ್ಥಪೂರ್ಣತೆಯನ್ನು ಕೊಡುವ ಮನೋಧರ್ಮ ಬಷೀರರ ಬರವಣಿಗೆಯ ಹಿಂದಿದೆ. ಹಾಗಾಗಿ ಬದುಕನ್ನು ನಿರಂತರವಾಗಿ ಸುಖಾನುಭವವಾಗಿಸುವ ಮಾನವನ ಪ್ರಯತ್ನದಲ್ಲಿ ಬದುಕಿನ ಜೊತೆಗೆ ಹಾಸುಹೊಕ್ಕಾಗಿರುವ ವಿನೋದವನ್ನು ಕಂಡುಕೊಳ್ಳುವಲ್ಲಿ ವಿಫಲರಾಗುತ್ತೇವೆ. ಸಂಕಟದ ವೇಳೆಯಲ್ಲೂ ಇರಬಹುದಾದ ವಿನೋದವನ್ನು ಗ್ರಹಿಸಿ ಅನುಭವಿಸುವ ಮನಸ್ಸು ಬೇಕು. ಆ ಮನಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ಬರವಣಿಗೆಗೆ ಇಳಿಸಿದವರು ಬಷೀರ್. ಅವರ ಬರವಣಿಗೆಯ ಉದ್ದಕ್ಕೂ ಈ ವಿನೋದವನ್ನು ಗುರುತಿಸಬಹುದು. ವಾಸ್ತವ ಸಂಗತಿಗಳನ್ನು ದಾಖಲಿಸುವುದರ ಜೊತೆಗೆ ಅದನ್ನು ಲಘೀಕರಿಸುವ ವೈನೋದಿಕ ದೃಷ್ಟಿಕೋನವೊಂದು ಇವರಲ್ಲಿದೆ. ಎಂದರೆ ವಿನೋದಕ್ಕಾಗಿಯೇ ಬರವಣಿಗೆಯಿದೆ ಎಂದಲ್ಲ. ಬರವಣಿಗೆಯ ಪ್ರಮುಖ ಆಶಯಗಳಲ್ಲೂ ವಿನೋದದ ಚಾಟಿಯೇಟಿನಿಂದ ವಿಡಂಬನಾತ್ಮಕವಾಗಿ ಮಂಡಿಸುವ ಇಲ್ಲಿನ ವಿಚಾರಗಳು ಸಾಮಾಜಿಕವಾಗಿಯೂ ಹೆಚ್ಚು ಪ್ರಸ್ತುತವಾದುದು. ವಿಡಂಬನೆಯ ಮೂಲಕ ಸಾಮಾಜಿಕ ಕುಂದು ಕೊರತೆಗಳನ್ನು ಬೊಟ್ಟು ಮಾಡುವ ಬರೆವಣಿಗೆಯ ಉದ್ದೇಶ ಸಾಹಿತ್ಯ ರಚನೆಯೂ ಅಲ್ಲ. ವಿನೋದಕ್ಕಾಗಿಯೂ ಅಲ್ಲ. ಅದು ಬದುಕುವುದಕ್ಕಾಗಿ. ಬದುಕಿನ ಲೋಪ ದೋಷಗಳನ್ನು ತಿಳಿಯ ಹೇಳುವುದಕ್ಕಾಗಿ. ಆ ಮೂಲಕ ಸಮುದಾಯವೊಂದರ ಅಂತರಾಳದಲ್ಲಿ ಹುದುಗಿರುವ ನೋವು, ಸಂಕಟಗಳ ಕಾರಣಗಳನ್ನು ಸ್ಪಷ್ಟವಾಗಿ ತಿಳಿಸುವ ಉದ್ದೇಶವನ್ನು ಹೊಂದಿದೆ. ಅದಕ್ಕೆ ಭಾಷೆ, ತಂತ್ರ, ಶೈಲಿಗಳ ಹಂಗಿಲ್ಲ. ಅದು ಬದುಕಿನಿಂದ ಮಿಳಿತವಾದುದು. ಬಷೀರರ ಬದುಕೇ ಕತೆ. ಮಾತೇ ಸಾಹಿತ್ಯ. ಅವುಗಳು ಅಕ್ಷರ ರೂಪದಲ್ಲಿ ದಾಖಲಾದ ಬಗೆ ಇದು.
ಐಡೆಂಟಿಟಿಗಾಗಿ ಹೆಣಗಾಟ
ಎಲ್ಲಿಯಾದರೂ ಹೆಣ್ಣೊಬ್ಬಳು ಗರ್ಭವತಿಯಾದರೆ ಅದು ನಮ್ಮಿಂದ ಎಂದು ಆಗಿನ್ನೂ ಅಟ್ಟೆಕಾಲ ಮಮ್ಮುಞ ಹೇಳಲು ತೊಡಗಿರಲಿಲ್ಲ. ಅಂದು ಅದಕ್ಕೆಲ್ಲಾ ಜವಾಬ್ದಾರಿ ಹೊರುವ ಎದೆಗಾರಿಕೆಯಿದ್ದಿರಲಿಲ್ಲ. ಪ್ರಸಿದ್ಧ ಕಳ್ಳರಾದ ಆನೆಬಾಚ ರಾಮನ್‌ನಾಯರ್, ಹೊನ್ನಶಿಲುಬೆ ತೋಮ ಮೊದಲಾದವರಂತೆ ಒಬ್ಬ ಅನುಭವಿ ಅಟ್ಟೆಕಾಲ ಮಮ್ಮುಞ. ಹೀಗಿದ್ದರೂ ಅವರ ಮಧ್ಯೆ ದೊಡ್ಡ ಸೀಟೊಂದೂ ಅಸಾಮಿಗೆ ಇದ್ದಿರಲಿಲ್ಲ. ಕಿಸೆಗಳ್ಳನಾದ ಬೋಳೆಮುತ್ತಪಾ, ಮೂರೆಲೆ ಆಟಗಾರನಾದ ಒಕ್ಕಣ್ಣಪೋಕ್ಕರ್ ಮೊದಲಾದವರೆಲ್ಲಾ ಅಟ್ಟೆಕಾಲ ಮಮ್ಮುಞಯನ್ನು ಕ್ಯಾರು ಮಾಡುತ್ತಿರಲಿಲ್ಲ.
ತುಂಬಾ ಸಮಯಗಳಿಗೆ ಹಿಂದೆ ಜೇಡನಂತೆ ನಡೆಯುವ ಸಾಮಾನ್ಯರಲ್ಲಿ ವ್ಯತ್ಯಸ್ಥನಾದ ಒಬ್ಬ ಅಟ್ಟೆಕಾಲಿನವನಾಗಿದ್ದ ಎಂದು ಮಮ್ಮುಞಯನ್ನು ನೋಡಿದರೆ ತಿಳಿಯುತ್ತಿತ್ತು. ಆಸಾಮಿಯದು ಚಿಕ್ಕ ತಲೆ ಕುಳ್ಳುದೇಹ. ಒಟ್ಟಿನಲ್ಲಿ ಮಮ್ಮುಞಿಗೆ ಅಭಿಮಾನಪಡುವುದ ಕ್ಕಿರುವುದು ಮೀಸೆ ಮಾತ್ರ. ಅದು ಎರಡೂ ಭಾಗಗಳಿಗೂ ಒಂದೊಂದು ಮೊಳವಿರುವಂತೆ ಬೆಳೆಸಿದ್ದ. ದಾರಿಯಲ್ಲಿ ಹೋಗುವಾಗ ಅಟ್ಟೆಕಾಲ ಮಮ್ಮುಞ ಹೆಂಗುಸರ ದೇಹಕ್ಕೆ ಮೀಸೆ ತಾಗಿಸುತ್ತಾನೆ ಎಂಬ ಒಂದು ಆರೋಪವೂ ಇದೆ. ಅವನ ಕುರಿತ ಇನ್ನೊಂದು ಮಾತು ಆತ ಗಂಡುಸಲ್ಲ ಎಂಬುದು. ಹೆಣ್ಣೂ ಅಲ್ಲ. ನಪುಂಸಕ. ಈ ರಹಸ್ಯ ಊರಿನ ಮಹಿಳೆ ಯರಿಗೆಲ್ಲಾ ಗೊತ್ತಿರುವ ವಿಷಯ. ಇದು ಹೇಗೆ ಅವರಿಗೆ ಗೊತ್ತಾಯಿತು ಎನ್ನುವುದರ ಬಗೆಗೆ ಯಾರಿಗೂ ಸುಳಿವು ಸಿಕ್ಕಿಲ್ಲ(ಅಟ್ಟೆಕಾಲ ಮಮ್ಮುಞ).
ವೈಕಂ ಮುಹಮ್ಮದ್ ಬಷೀರರ ಕತೆಯೊಂದರ ಆರಂಭವಿದು. ಬಷೀರರ ಕತೆಯ ಪ್ರಮುಖ ಲಕ್ಷಣಗಳನ್ನೆಲ್ಲಾ ಈ ಭಾಗದಲ್ಲಿ ಗುರುತಿಸಬಹುದು. ಬಷೀರ್ ಸೃಷ್ಟಿಸುವ ಪಾತ್ರಗಳು ತನ್ನ ಅಸ್ತಿತ್ವಕ್ಕಾಗಿ, ಐಡೆಂಟಿಟಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಹೇಗೆ ಹೆಣಗಾಡುತ್ತವೆ ಎಂಬುದಕ್ಕೆ ಇಲ್ಲಿಯ ಮಮ್ಮುಞ ಪಾತ್ರ ಉತ್ತಮ ಉದಾಹರಣೆಯಾದೀತು. ಅಟ್ಟೆಕಾಲಿಯ ಪಾತ್ರದ ಬೆಳವಣಿಗೆ, ಸಾಮಾಜಿಕರಲ್ಲಿ ಅವನ ಕುರಿತ ತಿಳುವಳಿಕೆ, ಜೇಡನಂತೆ ನಡೆಯುವ ಅವನ ದೈಹಿಕ ಚಿತ್ರ ಎಲ್ಲವೂ ಈ ಭಾಗದಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಓದುಗರಿಗೆ ಹಾಸ್ಯಪಾತ್ರವಾಗಿ ಒದಗುವ ಈ ಪಾತ್ರ ತನ್ನ ಅಸ್ತಿತ್ವಕ್ಕಾಗಿ ನಡೆಸುವ ಪ್ರಾಮಾಣಿಕ ಪ್ರಯತ್ನಗಳ ದಾಖಲೆಯೂ ಆಗಿದೆ.
ಪಾತ್ರಗಳು ಇನ್ನೊಂದು ಕತೆಯಲ್ಲಿ ಮುಖಾಮುಖಿಯಾಗುವುದು ಬಷೀರರ ಕತೆಗಳ ಲಕ್ಷಣಗಳಲ್ಲೊಂದು. ಅನುಭವವನ್ನು ಕತೆಯಾಗಿಸುವ ಬಷೀರರಿಗೆ ಇದು ಒಂದು ಸಹಜ ಪ್ರಕ್ರಿಯೆ. ಒಂದು ಕತೆಯು ತನ್ನ ಮಿತಿಯಲ್ಲಿಯೇ ವ್ಯಾಪಕವಾದ ಆವರಣವನ್ನು ನಿರ್ಮಿಸಿಕೊಡುತ್ತದೆ. ಆನೆಬಾಚ ರಾಮನ್‌ನಾಯರ್ ಮತ್ತು ಹೊನ್ನಶಿಲುಬೆ ತೋಮ ಬಷೀರ್ ಸೃಜಿಸಿದ ಪ್ರಸಿದ್ಧ ಕಳ್ಳರು. ಈ ಹೆಸರುಗಳಿಗ ಅಡಿಟಿಪ್ಪಣಿ ಕೊಟ್ಟು ಇವರ ಇತಿಹಾಸಕ್ಕಾಗಿ ಆನೆಬಾಚ ಮತ್ತು ಹೊನ್ನಶಿಲುಬೆ ಚರಿತ್ರೆಯನ್ನು ಓದಿ ಎಂದು ಸೂಚಿಸಿದ್ದಾರೆ. ಯಾವುದೇ ವ್ಯಕ್ತಿಗಳಲ್ಲಿ ಬಚ್ಚಿಟ್ಟ ಹಣವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆನೆಬಾಚ ರಾಮನ್‌ನಾಯರ್, ಹೊನ್ನಶಿಲುಬೆ ತೋಮ ಅದನ್ನು ಪರಿಶೀಲಿಸಿದ್ದಾರೆ ಎಂದರೆ ವಿಷಯಕ್ಕೆ ಅಧಿಕೃತತೆ ಪ್ರಾಪ್ತವಾದಂತೆ. ಈ ಇಬ್ಬರೂ ವ್ಯಕ್ತಿಗಳ ವಿಶೇಷಣಗಳು ಅವರ ವ್ಯಕ್ತಿತ್ವವನ್ನು, ಪ್ರವೃತ್ತಿಗಳನ್ನು ಸೂಚಿಸುತ್ತವೆ.
ಸಾಹಿತ್ಯಲೋಕದ ಚಿರಂಜೀವಿಗಳು
ರಾಮನ್‌ನಾಯರ್ ಮತ್ತು ತೋಮ ಶ್ರಮಜೀವಿಗಳು. ಊರಿನಲ್ಲಿ ಪುಡಿ ಕಳ್ಳರೆಂದು ಪ್ರಸಿದ್ಧರಾದವರು. ಜಮೀನ್ದಾರನೊಬ್ಬನು ಹೊಳೆದಂಡೆಯಲ್ಲಿ ರಾಶಿ ಹಾಕಿದ್ದ ಗೊಬ್ಬರವನ್ನು ಕದ್ದು ತರಲು ಕಂಟ್ರಾಕ್ಟ್ ಪಡೆದಿದ್ದ ರಾಮನ್‌ನಾಯರ್ ರಾತ್ರಿ ತನ್ನ ತಂಡದೊಂದಿಗೆ ಹೋಗಿದ್ದ. ಗೋಣಿಯೊಳಗೆ ತುಂಬಿಸಲು ಕತ್ತಲೆಯಲ್ಲಿ ಗೊಬ್ಬರವೆಂದು ಭ್ರಮಿಸಿ ಬಾಚಿದ್ದು ಆನೆಯನ್ನು. ಹೆದರಿದ ಆನೆ ಬೊಬ್ಬೆ ಹಾಕಲು ಜನರೆಲ್ಲ ಓಡಿಬಂದರು. ಗೊಬ್ಬರವನ್ನು ಬಾಚಿದಂತೆ ಆನೆಯನ್ನು ಬಾಚಿದ್ದರಿಂದ ರಾಮನ್‌ನಾಯರ್‌ನ ಹೆಸರಿಗೆ ಆನೆಬಾಚ ಎಂಬ ವಿಶೇಷಣ ಅಂದಿನಿಂದ ಸೇರಿಕೊಂಡಿತು. ತೋಮ ಇಗರ್ಜಿಗೆ ನೆಟ್ಟಿದ್ದ ಚಿನ್ನದ ಶಿಲುಬೆಯನ್ನು ಜೈಲು ಕಾವಲುಗಾರನ ಮಗಳ ಮದುವೆ ಮಾಡುವ ಸಲುವಾಗಿ ಕದ್ದಿದ್ದ. ಶಿಲುಬೆ ಕದ್ದುದು ತಾನೇ ಎಂದು ತೋಮ ಹೇಳಿಕೊಂಡ. ಕದ್ದುದು ಏಕೆ? ಎಂಬ ಪ್ರಶ್ನೆಗೆ ಸಾಕ್ಷಾತ್ ಏಸುದೇವ ಏರಿದುದೇ ಮರದ ಶಿಲುಬೆಗಲ್ಲವೇ? ಇಗರ್ಜಿಗೇಕೋ ಹೊನ್ನಿನ ಶಿಲುಬೆ ಎಂದು ಕೇಳಿ ತೋಮ ಇನ್ಸ್‌ಪೆಕ್ಟರನ್ನೇ ದಂಗುಬಡಿಸಿದ. ಅಂದಿನಿಂದ ತೋಮ ಹೊನ್ನಶಿಲುಬೆ ತೋಮನಾದ.
ಅಟ್ಟೆಕಾಲ ಮಮ್ಮುಞ, ಆನೆಬಾಚ ರಾಮನ್‌ನಾಯರ್, ಹೊನ್ನಶಿಲುಬೆ ತೋಮ ಮೊದಲಾದವರೆಲ್ಲ ಮಲಯಾಳಂ ಸಾಹಿತ್ಯ ಲೋಕದ ಚಿರಂಜೀವಿಗಳು. ಬಷೀರ್ ಇವರನ್ನು ಅಪರಾಧಿಗಳನ್ನಾಗಿ ಕಾಣದೆ ವಿಭಿನ್ನ ಜೀವನ ಮಾರ್ಗಗಳನ್ನುಳ್ಳ ವರ್ಣರಂಜಿತ ಮಾನವ ಜೀವಿಗಳನ್ನಾಗಿ ಚಿತ್ರಿಸಿದ್ದಾರೆ. ಈ ಪಾತ್ರಗಳು ನಮಗೆ ದಕ್ಕುವುದು ವೈನೋದಿಕವಾಗಿ. ಆದರೆ ಇವುಗಳ ಮೂಲಕ ಬಷೀರ್ ನೀಡುವ ದರ್ಶನ ಮಾತ್ರ ಅನನ್ಯವಾದುದು.
ರಾಮನ್‌ನಾಯರಲ್ಲಿ ತಾನು ಮಾಡುವ ಕೆಲಸದಲ್ಲಿ ನಿಷ್ಠೆಯನ್ನು ಕಾಣಬಹುದು. ಹೊನ್ನಶಿಲುಬೆ ತೋಮನಲ್ಲಿ ಧಾರ್ಮಿಕ ಢಾಂಬಿಕತೆಯನ್ನೇ ಪ್ರಶ್ನಿಸುವ ಒಬ್ಬ ಸಮಾಜ ಚಿಂತಕನನ್ನು ಕಾಣಬಹುದು. ಷಂಡನೆಂದು ಪ್ರಸಿದ್ಧನಾದ ಅಟ್ಟೆಕಾಲ ಮಮ್ಮುಞ ಹೆಣ್ಣೊಬ್ಬಳ ಗರ್ಭಕ್ಕೆ ಕಾರಣನೆಂದು ಹೇಳಿಕೊಳ್ಳುವಲ್ಲಿ ಬಾಯಿ ಬಡುಕ ರಾಜಕಾರಣಿಗಳ ವಿಡಂಬನೆಯಿದೆ. ಸಮಾಜದ ವ್ಯಕ್ತಿಗಳನ್ನು ಜೀವಂತವಾಗಿ ಕತೆಯೊಳಗೆ ಕಟ್ಟಿಕೊಡುತ್ತಾ ಸಾಮಾಜಿಕವಾದ ಕಾಳಜಿಯೊಂದನ್ನು ಅಷ್ಟೇ ಪ್ರಖರವಾಗಿ ದಾಖಲಿಸುವುದು ಬಷೀರರ ಬರವಣಿಗೆಯ ವೈಶಿಷ್ಟ್ಯ.
ಹ್ಯೂಮರ್
ಸ್ವಾನುಭವಗಳನ್ನು ಕತೆಗಳ ರೂಪದಲ್ಲಿ ಹಿಡಿದಿಟ್ಟ ಬಷೀರ್ ಅನುಭವ ಲೋಕವೊಂದನ್ನು ನಮ್ಮೆದುರು ತೆರೆದಿಡುತ್ತಾರೆ. ಅನುಭವಕ್ಕೂ ಆಚೆಗಿನದನ್ನು ಬಷೀರ್ ಬರೆಯಲಿಲ್ಲವಾಗಿ ತನ್ನ ಕೃತಿಗಳಲ್ಲಿ ತಾನೂ ಒಂದೂ ಪಾತ್ರವಾಗಿದ್ದಾರೆ. ಸಮಕಾಲೀನ ಬರಹಗಾರರಲ್ಲಿಲ್ಲದ ಈ ಪ್ರತ್ಯೇಕತೆಯಿಂದಾಗಿ ಬಷೀರರ ಕೃತಿಗಳಿಗೆ ಮಲಯಾಳಂ ಸಾಹಿತ್ಯದಲ್ಲಿ ಮಹತ್ವದ ಸ್ಥಾನವಿದೆ. ವಿನೂತನವಾದ ವಸ್ತು, ಅಭಿವ್ಯಕ್ತಿಯಲ್ಲಿನ ಪ್ರತ್ಯೇಕತೆ, ಅದಕ್ಕುಪಯೋಗಿಸುವ ವಿಶಿಷ್ಟ ಭಾಷೆ ಅವುಗಳೆಡೆಯಲ್ಲಿ ಪ್ರವಹಿಸುವ ಮೊನಚಾದ ವಿನೋದ(humouಡಿ) ಬಷೀರರ ಬರವಣಿಗೆಗೆ ಹಿರಿಮೆಯನ್ನು ತಂದು ಕೊಟ್ಟಿದೆ. ಸಮಕಾಲೀನರಾದ ಎಸ್.ಕೆ.ಪೊಟ್ಟಕಾಡ್ ಮತ್ತಿತರರಲ್ಲಿಯೂ ವೈನೋದಿಕ ಶೈಲಿ ಇದೆ. ಆದರೆ ನೋವನ್ನೂ ಮಾಧುರ್ಯಗೊಳಿಸುವ ಶೈಲಿ ಬಷೀರರಿಗೇ ಅನನ್ಯವಾದುದು. ತನ್ನನ್ನು ತಾನೇ ಲೇವಡಿ ಮಾಡಿಕೊಳ್ಳುವುದು, ತಾನೇ ಆದರ್ಶದ ಕೇಂದ್ರವಾಗುವುದು ಬಷೀರರನ್ನು ಇತರರಿಂದ ಪ್ರತ್ಯೇಕಿಸುವ ಮುಖ್ಯ ಪಾತಳಿಯಾಗಿದೆ.
ಬಷೀರಿಯನ್ ಕಲೆ
ಗ್ರಾಮೀಣ ಬದುಕಿನ ಬನಿಗೆ ಮಲಯಾಳ ಸಾಹಿತ್ಯ ಲೋಕದೊಳಗೆ ಪ್ರವೇಶ ಕೊಟ್ಟವರು ಬಷೀರ್. ನಗಿಸಿ ಚಿಂತನೆಗೆ ಗುರಿ ಮಾಡುವ ಬಷೀರಿಯನ್ ಕಲೆ ಪರಂಪರಾಗತ ಮೌಲ್ಯಗಳ ಅರ್ಥರಾಹಿತ್ಯವನ್ನು ನಿಷೇಧಿಸುವ, ಆಧುನಿಕತೆಯನ್ನು ಸ್ವಾಗತಿಸುವ ಕೆಲಸವನ್ನು ಮಾಡುತ್ತದೆ. ಬಷೀರ್ ತಾನು ಬರೆದುದೆಲ್ಲವೂ ಕತೆಗಳೆಂದೂ ಅದಕ್ಕೆ ಕತೆಗಳೆಂದೋ, ಕಾದಂಬರಿಗಳೆಂದೋ ಹೆಸರಿಸಿದವರು ಪ್ರಕಾಶಕರೆಂದು ಹೇಳಿದ್ದಾರೆ. ತನಗೆ ತೋರಿದಂತೆ ಬಷೀರ್ ಬರೆದಾಗ ಅದುವರೆಗಿದ್ದ ಕತೆ, ಕಾದಂಬರಿಗಳ ಚೌಕಟ್ಟು ಮುರಿದುಬಿತ್ತು. ಅವುಗಳ ಸ್ವರೂಪವನ್ನು ಕುರಿತು ಪುನರ್ ವ್ಯಾಖ್ಯಾನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು. ಮಡಿ, ಮೈಲಿಗೆಯ ಹಂಗಿಲ್ಲದೆ ಬಷೀರ್ ಭಾಷೆಯನ್ನು ದುಡಿಸಿಕೊಂಡರು. ನಮ್ಮ ಶಿಸ್ತು, ಧೋರಣೆಗಳ ಆಚೆಗೆಲ್ಲಿಯೋ ನಿಂತು ಬಷೀರ್ ಬರೆದ ಕತೆಗಳು ಓದುಗರ ಹೃದಯಾಳದಲ್ಲಿ ನೆಲೆಯೂರಿದುವು.
ನಾನು ಕಥಾ ಪಾತ್ರಗಳಾಗಿ ಬರುವ ಕತೆಗಳನ್ನು ಬರೆದವರು ಮಲಯಾಳದಲ್ಲಿ ಬಷೀರ್ ಮಾತ್ರ. ನನ್ನ ಕತೆಗಳನ್ನು ಹೇಳುವುದರಿಂದಲೇ ಇರಬೇಕು ಬಷೀರ್ ಆತ್ಮೀಯ ಬರೆಹಗಾರರಾಗುವುದು. ಈ ನಾನು ಎಂಬುದನ್ನು ನಾನೆಯೇ ಎಂದು ಪ್ರತಿಯೊಬ್ಬ ಓದುಗನೂ ಪುನರ್‌ಸ್ಮರಣೆಗೆ ತಂದುಕೊಳ್ಳುವುದರಿಂದಲೇ ಇರಬೇಕು ಬಷೀರರ ಬರವಣಿಗೆಯ ಜೊತೆಗೆ ಆತ್ಮೀಯತೆ ಉಂಟಾಗುವುದು. ನಾನು, ನಾನು ಎಂದು ಹೇಳುವುದು ನನ್ನನ್ನು ಕುರಿತಲ್ಲ. ಮಾನವನ ಆರಂಭ ಕಾಲದಿಂದ ನಿಮ್ಮ ತನಕ ಇರುವ ನಾನು ಇದೆಯಲ್ಲ ನಿಮ್ಮ ಕುರಿತಾಗಿ ಎಂದು ನೆನೆದುಕೊಳ್ಳಿ ಎಂದು ಬಷೀರ್ ಹೇಳುತ್ತಾರೆ. ಆಗ ಬಷೀರ್ ಪ್ರಕಟಿಸುವ ಪುಟ್ಟಲೋಕ ನಮ್ಮ ವಿಶಾಲ ಲೋಕವಾಗಿ ಪರಿವರ್ತನೆಗೊಳ್ಳುತ್ತದೆ. ಹಾಗಾಗಿಯೇ ಬಷೀರ್ ಸಾಹಿತ್ಯ ಪರಿಚಯವಾಗುವುದಕ್ಕೆ ಮುನ್ನ ಅನೇಕರಿಗೆ ಬಷೀರರ ಕಥಾ ಪಾತ್ರಗಳು, ಪ್ರಯೋಗಗಳು ಸ್ವಂತದ್ದಾಗುತ್ತವೆ.
ಸಾಮಾಜಿಕ ಬದುಕಿನ ಅನೇಕ ಘಟನೆಗಳನ್ನು, ಸಮಸ್ಯೆಗಳನ್ನು ಬಷೀರ್ ಕತೆ ಯಾಗಿಸಿದ್ದಾರೆ. ಸಮಸ್ಯೆಗಳ ವಿರುದ್ಧ ಘೋಷಣೆ ಕೂಗದೆ ಸಾಹಿತ್ಯದ ಮೂಲಕ ಪ್ರತಿಭಟಿಸಿದರು. ಸಮಾಜದ ಅನೇಕ ಘಟನೆಗಳನ್ನು ಅಚ್ಚುಕಟ್ಟಾಗಿ ಅಳವಡಿಸಿಕೊಂಡುದೇ ಅವರ ಕಲೆ. ಇದರ ಮೂಲಕ ನಾವು ಕಾಣದ ಒಂದು ದೃಷ್ಟಿಕೋನದ, ನಾವು ಕೇಳದ ಅದಕ್ಕೂ ಆಚೆಗಿನ ಜ್ಞಾನದ ಎಳೆ ಬಷೀರರು ಸಾಹಿತ್ಯ ಕೃತಿಗಳಲ್ಲಿ ದೊರಕಿಸಿಕೊಟ್ಟರು.
ನನ್ನಜ್ಜನಿಗೊಂದಾನೆಯಿತ್ತು ಕಾದಂಬರಿಯಲ್ಲಿ ಗತವೈಭವದ ಸ್ಮರಣೆಯಲ್ಲೆ ಸಮಕಾಲೀನ ಬದುಕನ್ನು ನಿರರ್ಥಕಗೊಳಿಸುವುದನ್ನು ವಿಡಂಬಿಸಲಾಗಿದೆ. ನಾವು ಭವ್ಯ ಪರಂಪರೆಯುಳ್ಳವರೆಂದು ಅದನ್ನು ಹೊಗಳುತ್ತೇವೆಯೇ ಹೊರತು ನಮ್ಮ ಬದುಕನ್ನು ಭವ್ಯವಾಗಿಸಲು ಬೇಕಾದುದನ್ನು ಮಾಡಿಕೊಳ್ಳುವುದಿಲ್ಲ. ಹಾಗೆಯೇ ಇಲ್ಲಿನ ಕುಞಿಪಾತುಮ್ಮ ಆನೆಮಕ್ಕಾರನ ಮೊಮ್ಮಗಳಾದ್ದರಿಂದ ತನ್ನ ಘನತೆ ಗೌರವಗಳನ್ನು ಉಳಿಸಿಕೊಂಡೇ ವ್ಯವಹರಿಸಬೇಕೆಂದು ಕುಂಜುತಚ್ಚುಮ್ಮ ಬಯಸುತ್ತಾಳೆ. ಆದರೆ ಅದಕ್ಕೆ ಬೇಕಾದ ಆರ್ಥಿಕ ಸ್ಥಿತಿಗತಿಗಳು ಇಲ್ಲ ಎಂಬುದನ್ನು ಕೂಡಾ ಕುಂಜುತಚ್ಚುಮ್ಮ ಮನಸ್ಸಿಗೆ ತಂದುಕೊಳ್ಳುವುದಿಲ್ಲ. ಕೊನೆಗೆ ಅಜ್ಜನಲ್ಲಿ ಇದ್ದುದು ಆನೆಯಲ್ಲ ಅದು ಕುಯ್ಯಾನೆಯಾಗಿತ್ತು ಎಂದು ಹೇಳುವಲ್ಲಿ ಪರಂಪರೆಯ ಅರ್ಥಶೂನ್ಯತೆಯ ಸಾಂಕೇತಿಕವಾದ ವಿಡಂಬನೆಯಿದೆ.
ಕಾಫರರು
ಇಲ್ಲಿ ಕೇರಳದ ಮುಸಲ್ಮಾನ ಜನಾಂಗದ ರೀತಿ ನೀತಿಗಳು, ನಡಾವಳಿಗಳು ಅನಾವರಣಗೊಳ್ಳುತ್ತವೆ. ಧರ್ಮದ ಕಟ್ಟುಪಾಡುಗಳಲ್ಲಿ ಬೆಳೆಯುವ ಮುಸಲ್ಮಾನ ಹೆಣ್ಣು ಮಕ್ಕಳಂತೂ ಬಾಹ್ಯ ಜಗತ್ತನ್ನು ನೋಡಿದವರಲ್ಲ. ಅಂತಹ ಮುಗ್ಧರ ಪ್ರತಿನಿಧಿಯಾಗಿ ಇಲ್ಲಿನ ಕುಞಿಪಾತುಮ್ಮ ಬಂದಿದ್ದಾಳೆ. ಕುಞಿಪಾತುಮ್ಮ ಧರ್ಮದ ಕಟ್ಟುಪಾಡುಗಳಲ್ಲೇ ಬೆಳೆದ ಮುಗ್ಧ ಸುಂದರಿ. ಆಕೆ ಮುಸಲ್ಮಾನೇತರ ಹೆಂಗಸರನ್ನು ಕಾಫರರೆಂದು ತಿಳಿದಿದ್ದಾಳೆ. ಅವರಂತೆ ನಡೆದುಕೊಳ್ಳುವ, ಬಟ್ಟೆ ಧರಿಸುವ ಹೆಣ್ಣುಮಕ್ಕಳು ಅವಳ ದೃಷ್ಟಿಯಲ್ಲಿ ಕಾಫರರೇ. ಅವರೆಲ್ಲ ಸತ್ತ ಮೇಲೆ ನರಕವನ್ನೇ ಸೇರುತ್ತಾರೆ. ಧರ್ಮದ ಕಟ್ಟುಪಾಡುಗಳಲ್ಲಿ ಬದುಕಿದವರು ಮಾತ್ರ ನರಕಕ್ಕೆ ಹೆದರಬೇಕಾಗಿಲ್ಲ. ಕುಞಿಪಾತುಮ್ಮ ಇತರ ಜಾತಿಯ ಹೆಂಗಸರನ್ನಾಗಲಿ, ಗಂಡಸರನ್ನಾಗಲಿ ನೋಡಿದವಳಲ್ಲ. ತಮ್ಮ ಜಾತಿಯ ಗಂಡಸರನ್ನೂ ಕಂಡಿಲ್ಲ. ಮಾತನಾಡಿಲ್ಲ. ತಮ್ಮ ಜಾತಿಯ ವಿದ್ಯಾವಂತರು, ಹಿಂದೂಗಳಂತೆ ಉಡುಗೆ ತೊಡುಗೆಗಳನ್ನು ತೊಡುವವರೂ ಕಾಫರರೇ. ಇಲ್ಲಿನ ಆಯಿಷಾ ಆಧುನಿಕತೆಯನ್ನು ಸ್ವೀಕರಿಸಿದವಳು. ಅವಳ ಸೋದರ ನಿಸಾರ್ ಅಹಮ್ಮದನೂ ಆಧುನಿಕ ವಿಚಾರಗಳಲ್ಲಿ ಆಸ್ಥೆಯುಳ್ಳವ. ಇಲ್ಲಿನ ಕುಞಿಪಾತುಮ್ಮ ಭಾಷಿಕವಾಗಿ ಮತ್ತು ಸಾಮಾಜಿಕವಾಗಿ ಆಧುನಿಕತೆಯನ್ನು ಪ್ರತಿನಿಧಿಸುವ ಆಯಿಷಾಳೊಂದಿಗೆ ಮುಖಾಮುಖಿಯಾಗುತ್ತಾಳೆ. ಕೊನೆಗೂ ಆಧುನಿಕತೆಯ ಅರ್ಥಪೂರ್ಣ ಅಳವಡಿಕೆಯನ್ನು ಕಾದಂಬರಿ ಎತ್ತಿ ಹಿಡಿದಿದೆ.
ಧರ್ಮದ ಹೆಸರಲ್ಲಿ ನಡೆಯುವ ಮೋಸ, ವಂಚನೆಗಳು, ಸಾಮಾಜಿಕ ವಿಕೃತಿಗಳ ಮುಸಲ್ಮಾನ ಲೋಕವೊಂದರ ಅದ್ಭುತ ಚಿತ್ರಣಗಳನ್ನು ಬಷೀರ್ ನನ್ನಜ್ಜನಿಗೊಂದಾನೆಯಿತ್ತು, ಬಾಲ್ಯಕಾಲಸಖಿ ಕೃತಿಗಳಲ್ಲಿ ಕೊಡುತ್ತಾರೆ. ಮುಸಲ್ಮಾನ ಲೋಕದ ಯಥಾರ್ಥ ಚಿತ್ರಗಳನ್ನು ಸಾಹಿತ್ಯದಲ್ಲಿ ಅನಾವರಣಗೊಳಿಸಿದ ಬಷೀರ್ ಸಂಪ್ರದಾಯಸ್ಥರೆನಿಸಿಕೊಂಡವರಿಂದ ಕಟು ಟೀಕೆಗೊಳಗಾದರು. ದೈನಂದಿನ ಆಡುವ ಭಾಷೆಯನ್ನು ಮಲಯಾಳದ ಸಾಹಿತ್ಯ ಭಾಷೆಯನ್ನಾಗಿ ಬಷೀರ್ ಮಾಡಿದರು. ಭಾವಸ್ಪರ್ಶಿಯನ್ನಾಗಿಸಿದರು. ಅದರ ಆಚೆಗಿನ ಒಂದು ಅಜ್ಞಾತ ತೀರಕ್ಕೆ ಸಹೃದಯರನ್ನು ಕರೆದೊಯ್ದರು. ಕಣ್ಣೀರು ಬರುವ ಸನ್ನಿವೇಶದಲ್ಲೂ ನಾನು ನಕ್ಕುಬಿಡುತ್ತೇನೆ ಎಂದು ಹೇಳುವ ಬಷೀರ್ ಇವೆರಡನ್ನು ಪರಸ್ಪರ ಬೆಸೆಯುವುದರ ಮೂಲಕ ಓದುಗರ ಹೃದಯವನ್ನು ತಟ್ಟುತ್ತಾರೆ. ಸಾಮಾನ್ಯವಾಗಿ ಬಷೀರರ ಕೃತಿಗಳಲ್ಲಿ ಸ್ತ್ರೀ, ಪುರುಷರಿಗೆ ಸಮಾನ ಪ್ರಾಶಸ್ತ್ಯವಿರುತ್ತದೆ. ಆದರೆ ಬಾಲ್ಯಕಾಲಸಖಿ, ನನ್ನಜ್ಜನಿಗೊಂದಾನೆಯಿತ್ತು ಇವು ಸ್ತ್ರೀಯೇ ಹೆಚ್ಚು ಪ್ರಕಟಗೊಳ್ಳುವ ಕೃತಿಗಳು.
ಪ್ರೀತಿ, ಪ್ರೇಮ ಇತ್ಯಾದಿ
ಬಾಲ್ಯಕಾಲಸಖಿಯಲ್ಲಿನ ಮಜೀದ್, ಸುಹ್ರಾರ ಪ್ರೀತಿಯ ಕ್ಷಣಗಳಿಗಿಂತಲೂ ಅದರಲ್ಲಿ ಬದುಕಿನ ಕುರಿತ ಲವಲವಿಕೆ, ಅದಮ್ಯ ಉತ್ಸಾಹ ಆದರ್ಶಪೂರ್ಣವಾದುದು. ತಂದೆಯ ಅಮಾನವೀಯ ವರ್ತನೆಯಿಂದ ರೋಸಿದ ಮಜೀದ್ ಬದುಕಿನ ಅರ್ಥವನ್ನು ಕಂಡುಕೊಳ್ಳಲು ನಡೆಸಿದ ಪ್ರಯತ್ನ, ಎದುರಿಸಿದ ಸಮಸ್ಯೆಗಳು ಓದುಗರನ್ನು ಬದುಕಿನ ಕುರಿತಂತೆ ಚಿಂತನೆಗೆ ಒಳಗುಮಾಡುತ್ತವೆ. ಸಮಾಜ ಸುಧಾರಕರೆಂಬ ಮಂದಿಯ ಸೋಗಲಾಡಿತನವನ್ನು ಬಯಲು ಮಾಡುತ್ತವೆ. ಮಜೀದ್ ವೈಯಕ್ತಿಕವಾಗಿ, ಸಾಮೂಹಿಕವಾಗಿ ತನ್ನತನವನ್ನು ಉಳಿಸಿಕೊಳ್ಳಲು ಮಾನವೀಯತೆಗೆ ಎರವಾದ ಸಮಾಜದಲ್ಲಿ ಪಟ್ಟಪಾಡನ್ನು ದಾಖಲಿಸಿದ ರೀತಿ ಅನನ್ಯವಾಗಿದೆ.
ಪ್ರೀತಿಯ ಬಹುಮುಖ ದರ್ಶನ ಬಷೀರರ ಕೃತಿಗಳಿಂದಾಗುತ್ತದೆ. ಅದು ಒಮ್ಮೆ ಕ್ರೂರಿಯಾಗಿ, ದೀನವಾಗಿ, ಅನಾಥವಾಗಿ, ತ್ಯಾಗಪೂರ್ಣವಾಗಿ ಪರಿವರ್ತನೆ ಹೊಂದಬಹುದು. ಅದಕ್ಕೂ ಮಿಗಿಲಾಗಿ ಕೆಲವೊಮ್ಮೆ ಆವಿಯಾಗುವ ಒಂದು ಹನಿ ಕಣ್ಣೀರ ಹನಿಯಂತೆ, ಶೂನ್ಯದ ಅನುಭವವೂ ಆಗಿ ಪರಿವರ್ತನೆಯಾಗುತ್ತದೆ. ಇವೆಲ್ಲವನ್ನು ಬಷೀರ್ ತನ್ನ ಕೃತಿಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಬಾಲ್ಯಕಾಲಸಖಿಯಲ್ಲಿ ಬಿಟ್ಟ ಪ್ರೀತಿಯ ಹೂ ಎಂತಹ ಬಿಸಿಲಿಗೂ ಬಾಡಲಾರದಂತಹುದು. ಸ್ವಯಂ ಜೀವನಾನುಭವಗಳಿಂದ ಮಾತ್ರ ಇಂತಹ ತೀವ್ರವಾದ ಕಲಾನುಭವ ಪ್ರಕಟಣೆ ಅಥವಾ ಅಭಿವ್ಯಕ್ತಿ ಸಾಧ್ಯ.
ಬಷೀರರ ನನ್ನಜ್ಜನಿಗೊಂದಾನೆಯಿತ್ತು ಕತೆಯ ಪ್ರೀತಿ ಸ್ವ ಅನುಭವವಾಗಿ ಹುಟ್ಟಿ ಇಡೀ ಸಮುದಾಯವೊಂದರ ಪರಿವರ್ತನೆಯ ಹಂತ ತಲುಪುವವರೆಗೂ ವಿಸ್ತಾರಗೊಂಡಿದೆ. ಇಲ್ಲಿ ಪ್ರೀತಿ ಮಾನವ ಸಮುದಾಯದ ಮಧ್ಯೆ ಸ್ವರ್ಗ ನಿರ್ಮಾಣಕ್ಕಾಗಿ ಬಳಕೆಯಾಗಿದೆ. ಭೂತಕಾಲದ ನೆನಪುಗಳೊಂದಿಗೆ ಕಳೆಯುವ ತಲೆಮಾರು ಒಂದು. ಮತ್ತು ಪ್ರಕೃತಿಯಂತೆ ನಿಷ್ಕಳಂಕವಾದ ಪ್ರೀತಿಯನ್ನು ಪ್ರಕಟಿಸುವ ನೂತನ ತಲೆಮಾರು ಇನ್ನೊಂದು. ಇವೆರಡರನ್ನೂ ಇಲ್ಲಿ ಕಾಣಬಹುದು. ಸುಟ್ಟು ಕರಕಲಾದ ಗತ ತಲೆಮಾರಿನ ಇತಿಹಾಸವೊಂದರಿಂದ ಉಜ್ವಲವಾದ ಬದುಕೊಂದನ್ನು ನಿಸಾರ್ ಅಹಮ್ಮದ್ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಮತ್ತು ಕಂಡುಕೊಳ್ಳುತ್ತಾನೆ. ಹೀಗೆ ಪ್ರೀತಿ ಇತಿಹಾಸದ ಚಾಲಕ ಶಕ್ತಿಯಾಗಿ ಈ ಕೃತಿಯಲ್ಲಿ ಪ್ರಕಟವಾಗಿದೆ.
ಬಷೀರ್ ದೊಡ್ಡಣ್ಣನಾಗಿ ಕುಟುಂಬವೊಂದರಲ್ಲಿ ಪ್ರೀತಿ, ಪ್ರೇಮಗಳನ್ನು ನೆಲೆಗೊಳಿಸು ವುದನ್ನು ಪಾತುಮ್ಮನ ಆಡು ಕೃತಿಯಲ್ಲಿ ಕಾಣಬಹುದು. ಬಷೀರ್ ಸೃಜಿಸಿದ ಪಾತ್ರಗಳು ಹಿರಿಯರ ಕಣ್ಣುತಪ್ಪಿಸಿ ಸಂಧಿಸುತ್ತವೆ. ಚುಂಬಿಸುತ್ತವೆ. ವೃತ್ತಿನಿರತ ಬದುಕಿನ ಮಧ್ಯೆ ಪುಟ್ಟ್ (ಒಂದು ಬಗೆಯ ತಿನಿಸು)ನ ಒಳಗೆ ಬೇಯಿಸಿದ ಮೊಟ್ಟೆಯನ್ನಿಟ್ಟು ತನ್ನ ಪ್ರೇಮ ಸಂದೇಶವನ್ನು ಕಳುಹಿಸುತ್ತವೆ. ಬಷೀರ್‌ಗೆ ಪ್ರೀತಿ ಸಾಹಿತ್ಯ ಕೃತಿಗೊಂದು ಅನಿವಾರ್ಯವಾದ ವಸ್ತುವಲ್ಲ. ಅದು ಮಾನವ ಜೀವಿಗಳನ್ನು ಬೆಸೆಯುವ ಅನಿವಾರ್ಯ ಕೊಂಡಿಯಾಗಿದೆ.
ಮಾನವ ಪ್ರೀತಿಗೆ ಎಂದೂ ಜಾತಿಯ ಹಂಗಿರಲಿಲ್ಲ ಎಂದು ಬಷೀರ್ ನಂಬಿದ್ದರು. ನಾನು ಎಲ್ಲಾ ಜಾತಿಯ ಸ್ತ್ರೀಯರ ಎದೆ ಹಾಲು ಕುಡಿದಿದ್ದೇನೆ ಎಂದು ಎಲ್ಲಾ ಜಾತಿಯವರೊಂದಿಗೆ ರಮಿಸಿದ್ದೇನೆ ಎಂದೂ ಬಷೀರ್ ಹೇಳಿಕೊಂಡಿದ್ದಾರೆ. ಆಗೆಲ್ಲಾ ಅಡ್ಡಿಯಾಗದ ಈ ಜಾತಿ ಬದುಕುವುದಕ್ಕೆ ಹೇಗೆ ಅಡ್ಡಿಯಾದೀತು? ಆದರೆ ಇತಿಹಾಸ, ಮಾನವನ ಆಹಾರಗಳಿಗೆ, ದೈಹಿಕ ಸಂಬಂಧಗಳಿಗೆ ಅನೇಕಾರ್ಥಗಳನ್ನು ಕಲ್ಪಿಸಿಕೊಟ್ಟಿದೆ. ಮಾನವ ಸಮುದಾಯಗಳ ಮಧ್ಯೆ ಕಂದರ ಏರ್ಪಡಿಸಿದೆ.
ಹೆಣ್ಣಿನ ಮುಗ್ಧತೆ
ಹೂ ಬಾಳೆ(ಪೂವನ್ ಫಳಂ) ಬಷೀರರ ಮುಖ್ಯ ಕತೆಗಳಲ್ಲೊಂದು. ಜಮೀಲಾಬೀಬಿ ಬಿ.ಎ. ಪಾಸಾಗಿ ತಂದೆಯ ಬೀಡಿ ಕಂಪೆನಿಯಿಂದ ಹಣ ಮೊದಲಾದವು ಗಳನ್ನು ಇಷ್ಟ ಬಂದಂತೆ ತೆಗೆದುಕೊಂಡು ಒಬ್ಬಾಕೆ ದೊಡ್ಡ ಲೇಡಿಯಾಗಿ ನಡೆಯುವ ಕಾಲ. ಊರಿನ ಯುವಕರೆಲ್ಲ ಜಮೀಲಾಬೀಬಿಯಲ್ಲಿ ಅನುರಕ್ತರಾಗಿದ್ದರು. ನಗರದ ರೌಡಿಯೂ ಬೀಡಿ ಕಾರ್ಮಿಕ ಸಂಘಟನೆಯ ಸೆಕ್ರೆಟರಿಯು, ಉತ್ತಮ ಫುಟ್‌ಬಾಲ್ ಪ್ಲೇಯರನೂ, ಸ್ಕೂಲ್ ಫೈನಲ್ ಮಾತ್ರ ಓದಿದ ಅಬ್ದುಲ್‌ಖಾದರ್ ಸಾಹಿಬ್ ಇವರ ಮಧ್ಯೆ ಅವಳನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದ. ಹಾಗೆ ಸಂತೋಷದಲ್ಲಿ ಕಳೆಯುತ್ತಿರುವಾಗ ಜಮೀಲಾಬೀಬಿ ಎರಡೂ ಹೂಬಾಳೆ ಹಣ್ಣುಗಳನ್ನು ತೆಗೆದುಕೊಂಡು ಬರುತ್ತೀರಾ? ಎಂದು ಕೇಳಿದಳು. ಒಂದು ಗೊನೆ ಹೂಬಾಳೆ ಹಣ್ಣುಗಳನ್ನು ತರುತ್ತೇನೆಂದು ಹೇಳಿ ಹೋದ ಅಬ್ದುಲ್‌ಖಾದರ್ ಸಾಹಿಬನಿಗೆ ಸಿಕ್ಕಿದುದು ಓರೆಂಜ್. ಧಾರಾಕಾರವಾದ ಮಳೆಗೆ ಆಯಾಸಗೊಂಡು ನದಿ ದಾಟಲು ದೋಣಿ ಸಿಗದೆ, ಹೊಳೆ ಈಜಿ ದಾಟಿ, ದಾರಿತಪ್ಪಿ ಹೇಗೆ ಹೇಗೋ ಓರೆಂಜ್‌ಗಳನ್ನು ರಕ್ಷಿಸಿಕೊಂಡು ಜಮೀಲಾಬೀಬಿಯ ಹತ್ತಿರ ಬಂದ. ಬೀಬಿಗೆ ಬೇಕಾದುದು ಹೂಬಾಳೆ ಹಣ್ಣು. ಓರೆಂಜಲ್ಲ. ಅಬ್ದುಲ್‌ಖಾದರ್ ದಂಡಿಸಿ ಜಮೀಲಾಬೀಬಿಗೆ ಓರೆಂಜ್ ತಿನ್ನಿಸುತ್ತಾನೆ. ಓರೆಂಜನ್ನೇ ಹೂಬಾಳೆ ಎಂದು ಒಪ್ಪಿಕೊಳ್ಳುವಂತೆ ಮಾಡುತ್ತಾನೆ. ಕೊನೆಗೆ ಇಬ್ಬರು ವಯಸ್ಕರಾಗಿ ಗಂಡ ಹೆಂಡಿರು ಮಕ್ಕಳು ಹಾಗೂ ಮೊಮ್ಮಕ್ಕಳ ಜೊತೆಗೆ ದಿನ ಕಳೆಯುತ್ತಿರಲು ಹಳೆಯ ಹೂಬಾಳೆ ಹಣ್ಣಿನ ಘಟನೆಯನ್ನು ನೆನಪಿಸಿಕೊಳ್ಳುವರು. ಅಬ್ದುಲ್‌ಖಾದರ್ ಸಾಹಿಬ್ ನಗಾಡಿಕೊಂಡು ಜಮೀಲಾಬೀಬಿಯಲ್ಲಿ ಕೇಳುವರು ಮಹಾರಾಣಿ…. ಹಿಂದೆ ನೀನು ಹೂಬಾಳೆ ಹಣ್ಣು ಬೇಕೆಂದು ಕೇಳಿದಾಗ, ರಾತ್ರಿ ಹೊಳೆ ದಾಟಿ ನಾನೇನನ್ನು ತಂದುಕೊಟ್ಟುದು? ಜಮೀಲಾಬೀಬಿ ನಗಾಡಿಕೊಂಡು ಹೇಳುವಳು. ಹೂಬಾಳೆ ಹಣ್ಣು. ಯಜಮಾನರು ಕೇಳುವರು ಅದು ಹೇಗಿತ್ತು? ಯಜಮಾನತಿ ಹೇಳುವಳು ಅದು ಓರೆಂಜ್‌ನಂತೆ ದುಂಡಗೆ ಇತ್ತು.
ಹೆಣ್ಣನ್ನು ಗಂಡು ಬೇಕಾದಂತೆ ಬಳಸಿಕೊಳ್ಳುವ ಮತ್ತು ತುಚ್ಛವಾಗಿ ಈ ಕತೆಯಲ್ಲಿ ಕಾಣಲಾಗಿದೆ ಎಂಬ ಟೀಕೆ ವಿಮರ್ಶಕರಿಂದ ಪ್ರಕಟವಾಗಿದೆ.
ಆದರೆ ಇಲ್ಲಿ ಹೆಣ್ಣಿನ ಮುಗ್ಧತೆಯನ್ನು ಚಿತ್ರಿಸುವುದರ ಜೊತೆಗೆ ಬದುಕಿನಲ್ಲಿ ನಡೆಯುವ ಕ್ರೂರ ಶೋಷಣೆಯೊಂದು ಬದುಕಿನ ರಸ ನಿಮಿಷವಾಗಿ ಪ್ರಕಟಗೊಂಡ ರೀತಿ ವಿಸ್ಮಯಕಾರಿಯಾಗಿದೆ.
ಆತ್ಮವಿಮರ್ಶೆ
ಜೈಲು ಶಿಕ್ಷೆಯ ಅನುಭವಗಳ ಜೊತೆಗೆ ಪ್ರೇಮಗಾಥೆಯೊಂದನ್ನು ದಾಖಲಿಸುವ ಗೋಡೆಗಳು ಕಾದಂಬರಿ ನಾಟಕೀಯವಾಗಿ ಹೃದ್ಯವಾಗಿದೆ. ಹೋದ ಮಗನಿಗಾಗಿ ಕಾಯುತ್ತಿರುವ ತಾಯಿಯ ಯಥಾರ್ಥ ಚಿತ್ರಣ ತಾಯಿ ಕತೆಯಲ್ಲಿದೆ. ಇಲ್ಲಿ ಅನುಭವಗಳು ಭಾವಪೂರ್ಣವಾಗಿ ದಾಖಲಾಗಿವೆ. ಪಾತುಮ್ಮನ ಆಡು, ಚಿನ್ನದುಂಗುರ(ತಂಗಮೋದಿರಂ) ಮೊದಲಾದವುಗಳಲ್ಲಿ ಅನುಭವದ ಜೊತೆಗೆ ಬಷೀರ್ ಒಮ್ಮೊಮ್ಮೆ ತಾನೇ ಆದರ್ಶದ ಕೇಂದ್ರವಾಗುವ ಮತ್ತೊಮ್ಮೆ ಗೇಲಿಗೊಳುಗಾಗುವ ರೀತಿ ಅನನ್ಯವಾದುದು. ಪಾತುಮ್ಮನ ಆಡಿನ ದೊಡ್ಡಣ್ಣ ಬಷೀರ್ ಸಂಸಾರದ ಜಗಳಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾದರೂ ಮದುವೆಯಾಗದ ಅನನುಭವಿ ಎಂದು ಗೇಲಿಗೊಳಗಾಗುತ್ತಾನೆ. ಚಿನ್ನದುಂಗುರದ ಬಷೀರ್ ಹುಟ್ಟುವ ಮಗುವಿನ ಲಿಂಗ ನಿರ್ಧರಿಸಿ ಹೆಂಡತಿ ಹಾಗೂ ಸ್ನೇಹಿತನ ಜೊತೆ ಪಂಥ ಕಟ್ಟಿ ಗೇಲಿಗೊಳಗಾಗುತ್ತಾನೆ. ಹೀಗೆ ಅನುಭವದ ಜೊತೆ ಆತ್ಮವಿಮರ್ಶೆಯನ್ನು ಮಾಡುವುದು ಬಷೀರರ ಸಾಹಿತ್ಯ ಲಕ್ಷಣಗಳಲ್ಲೊಂದು.
ಪ್ರತಿಭಟನೆ
ವ್ಯವಸ್ಥೆಯನ್ನು ಪ್ರಶ್ನಿಸುವುದೇ ಬಷೀರರ ಕೃತಿಗಳ ಮುಖ್ಯ ಮೌಲ್ಯಗಳಲ್ಲೊಂದು. ಒಂದು ಘಟನೆ, ವಸ್ತ್ರಧಾರಣೆ, ಮೀಸೆ ಬೆಳೆಸುವುದರ ಮೂಲಕವೂ ಒಂದು ವ್ಯವಸ್ಥೆಯನ್ನು ವಿರೋಧಿಸುವ ಉದ್ದೇಶದಿಂದಲೇ ಕೃತಿಯಲ್ಲಿ ತರುತ್ತಾರೆ. ಭಗವದ್ಗೀತೆಯ ಗೌರವ ಪ್ರತಿ ಕೊಡಲಿಲ್ಲವೆಂದು ಬಷೀರ್ ಮಂಗಳೋದಯ ಪ್ರಕಾಶನ ಸಂಸ್ಥೆಯ ಮಾಲಿಕನೆದುರು ಕುಳಿತುಕೊಳ್ಳುವುದು(ಒಂದು ಭಗವದ್ಗೀತೆ ಮತ್ತು ಅನೇಕ ಮೊಲೆಗಳು) ಕೂಡಾ ಪ್ರತಿಭಟನೆಯ ಒಂದು ವಿಧಾನವೇ ಸರಿ. ರಾಜಕಾರಣಿಗಳ ಬಾಯಿ ಬಡುಕತನ, ಅಧಿಕಾರಿಗಳ ಕ್ರೌರ್ಯ ಇವೆಲ್ಲ ಬಷೀರರ ಸಾಹಿತ್ಯ ರಚನೆಯ ಸಂವೇದನೆಗಳಾಗಿವೆ.
ಒಮ್ಮೆ ಅನುಭವಗಳನ್ನು ಆತ್ಮ ಕಥನದ ರೀತಿಯಲ್ಲಿ ಮಂಡಿಸುವ ಮತ್ತೊಮ್ಮೆ ಸಮಾಜ ವಿಮರ್ಶೆಯನ್ನೆ ಮುಖ್ಯವಾಗಿಸುವ, ಮಗದೊಮ್ಮೆ ಗಂಭೀರ ವಿಷಯಗಳನ್ನು ವೈನೋದಿಕ ಶೈಲಿಯಿಂದ ಲಾಘವಗೊಳಿಸುವ ಬಷೀರರಿಗೆ ಸಾಹಿತ್ಯ ರಚನೆಯಲ್ಲಿ ಶ್ರದ್ಧೆಯಿದೆ. ಏಕಾಗ್ರತೆಯಿದೆ. ಸಾಹಿತ್ಯ ರಚನೆ ಬಷೀರರಿಗೆ ಜೀವನೋಪಾಯದ ಮಾರ್ಗ ಮಾತ್ರ ಆಗಿತ್ತು.
ಸಾಹಿತ್ಯ ಶ್ರಮಜೀವಿ
ಸಮಾಜಕ್ಕೆ ಬೇಕಾದ ವಸ್ತುಗಳನ್ನು ತಯಾರಿಸಲು ಏಕಾಗ್ರತೆ ಮತ್ತು ಶ್ರದ್ಧೆ ಅಗತ್ಯ. ದುಡಿಮೆಗಾರರು ಇವುಗಳನ್ನು ನಮಗೆ ಒದಗಿಸುತ್ತಾರೆ. ಅವರದಾದ ಕಲಾನೈಪುಣ್ಯ ಪ್ರಕಟಗೊಳ್ಳುವುದು ಸಮಾಜಕ್ಕೆ ಅವರು ಮಾಡುವ ಸೇವೆಯಲ್ಲಿ. ಕವಿತೆ ಬರೆಯಲೂ ಶ್ರದ್ಧೆ ಬೇಕು. ಚಹಾ ತಯಾರಿಗೂ ಬೇಕು. ಅಷ್ಟೇ ಶ್ರದ್ಧೆಯಿಂದ ಸ್ವಾನುಭವವನ್ನು ಕುರಿತು ಬರೆದ ಸಾಹಿತ್ಯ ಮತ್ತೊಮ್ಮೆ ಬದುಕಿನಲ್ಲಿ ಪರಿಶೀಲಿಸಬೇಕಾದ ಅಗತ್ಯವಿಲ್ಲ. ಅದಕ್ಕಾಗಿಯೇ ಪರಿಶೀಲನೆ ಅಗತ್ಯವಿಲ್ಲದ ಸಾಹಿತ್ಯವನ್ನು ನಾನು ಸ್ವೀಕರಿಸಿ ಬರೆದೆ. ಇಲ್ಲವಾದರೆ ನಾನೊಬ್ಬ ಕಾವಲುಗಾರನೋ, ಓದುಗನೋ, ಪತ್ರಕರ್ತನೋ, ಕಿಸೆಗಳ್ಳನೋ, ಮೆಜಿಷಿಯನೋ ಆಗಬಹುದಿತ್ತು. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಷೀರ್ ಒಬ್ಬ ಸಾಹಿತ್ಯ ಶ್ರಮಜೀವಿ. ನೇರ ಅನುಭವದ ಶ್ರಮವೇ ಬಹುತೇಕ ಸಾಹಿತ್ಯ ರಚನೆಯ ಬೀಜ. ಇದು ಸಾಧ್ಯವಾಗುವುದು ಬಷೀರರದಾದ ಭಾಷೆಯ ಮೂಲಕ. ಹಾಗೆಯೇ ಇಸ್ಪೀಟ್ ಆಟಗಾರರಿಗೆ, ಹೋಟೆಲ್ ವ್ಯಾಪಾರಿಗಳಿಗೆ, ವೇಶ್ಯೆಯರಿಗೆ, ಸಂನ್ಯಾಸಿಗಳಿಗೆ, ಪುಸ್ತಕ ಪ್ರಕಾಶಕರಿಗೆ, ರಾಜಕಾರಣಿಗಳಿಗೆ ಅವರವರದಾದ ಭಾಷೆಗಳು, ಕತೆಗಳು ಇವೆ. ಜಾತಿಗಳಿಗೆ, ಮತಗಳಿಗೆ, ಪ್ರದೇಶಗಳಿಗೆ ಅವುಗಳದೇ ಆದ ಜೀವನ ಶೈಲಿಯಿದೆ. ಕರ್ತವ್ಯಗಳಿವೆ. ಅವರು ಒಂಟಿಯಾಗಿ ಅಥವಾ ಸಾಮೂಹಿಕವಾಗಿ ಬದುಕುತ್ತಾರೆ. ಭಾಷೆಯನ್ನು ನಿರ್ಮಿಸುತ್ತಾರೆ. ಹಾಗಾಗಿ ಇವರೆಲ್ಲ ಭಾಷೆಯ, ನೆಲದ, ಅನುಭವಗಳ ಹಕ್ಕುದಾರರು. ಈ ನಿಲುವಿನಿಂದ ಹೊರಡುವ ಬಷೀರರ ಬರವಣಿಗೆಗೆ ಸಾಹಿತ್ಯದ ಸ್ವರೂಪವನ್ನೇ ಬದಲಾಯಿಸುವ ಸಾಮರ್ಥ್ಯವಿದೆ.
ಬದುಕೆಲ್ಲ ಕತೆ, ಮಾತನಾಡುವುದೆಲ್ಲ ಭಾಷೆ
ಬದುಕೆಲ್ಲ ಕತೆ, ಮಾತನಾಡುವುದೆಲ್ಲ ಭಾಷೆ ಎಂಬ ಅರಿವು ಬಷೀರರ ಸಾಹಿತ್ಯಕ್ಕೆ ವ್ಯಾಪಕತೆಯನ್ನು ತಂದುಕೊಟ್ಟಿತು. ನಾನೇ ಕತೆ. ನಾನು ಬರೆಯುವುದೇ ಸಾಹಿತ್ಯ ಎಂದು ತಿಳಿದುಕೊಂಡ ಬಷೀರರ ನಿಲುವು ಅಹಂಕಾರದ್ದೆನಿಸಬಹುದು. ಇದರಲ್ಲಿ ಆತ್ಮಾಭಿಮಾನವಿದೆ. ಸ್ಥೈರ್ಯವಿದೆ. ಇದೇ ಕಾರಣಕ್ಕಾಗಿ ತನಗೆ ಸಿಕ್ಕ ಏಟುಗಳೇ ಸ್ವಾತಂತ್ರ್ಯ ಹೋರಾಟ, ತಾನು ತಿರುಗಿದ ಊರುಗಳೇ ಪ್ರಪಂಚ, ತನ್ನ ಅನುಭವಗಳ ಸಾಕಾರವೇ ತತ್ವ ಎಂಬುದನ್ನು ಕೃತಿಗಳ ರೂಪದಲ್ಲಿ ಮುಂದಿಟ್ಟಿದ್ದಾರೆ. ಒಬ್ಬ ಕಲಾವಿದನ ಆತ್ಮಕತೆಯೇ ಇತಿಹಾಸವಾಗ ಬಹುದು. ಬಷೀರರಂತಹ ಬರೆಹಗಾರರು ಏಕಾಂಗಿಯಾಗಿ ಅವರ ಕಾಲದ ಸಾಮಾಜಿಕ ಬದುಕಿನ ಏರಿಳಿತಗಳನ್ನು ದಾಖಲು ಮಾಡಿದ್ದಾರೆ.
ವ್ಯಾಕರಣ ದೋಷ
ಸಾಹಿತ್ಯ ಶಿಸ್ತನ್ನು ಉಲ್ಲಂಘಿಸಿ ಬರೆದ ಬಷೀರರ ಬಗ್ಗೆ ವಿಮರ್ಶಕರು ಮೂಗು ಮುರಿದರು. ಬಷೀರ್ ಅವುಗಳಿಗೆಲ್ಲ ಸವಾಲೆಂಬಂತೆ ಬರೆದರು. ವಿಮರ್ಶೆಗಳು ಕಾಲದ ಮರೆಗೆ ಸಂದು ಹೋದವು. ಬಷೀರರ ಕತೆಗಳು, ಕಥಾಪಾತ್ರಗಳು ಜನಮನ್ನಣೆ ಪಡೆದವು. ಮಲಯಾಳಂ ಸಾಹಿತ್ಯ ಚರಿತ್ರೆಯಲ್ಲಿ ಬಷೀರರ ಸಾಹಿತ್ಯ ಹೊಸ ಪರಂಪರೆಯನ್ನು ಹುಟ್ಟು ಹಾಕುವಷ್ಟರ ಮಟ್ಟಿಗೆ ಭದ್ರವಾಯಿತು.
ಬಷೀರರ ಪಾತುಮ್ಮನ ಹಾಡು ಕತೆಯ ಸನ್ನಿವೇಶವೊಂದು ಹೀಗಿದೆ: ಬಷೀರ್ ಆಗಾಗಲೇ ಸಾಹಿತಿ ಎಂದು ಹೆಸರು ಗಳಿಸಿದ್ದರು. ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗುತ್ತಿದ್ದವು. ಬರಹಗಳನ್ನು ಓದುವ ಸಲುವಾಗಿ ಸಹೋದರ ಅಬ್ದುಲ್‌ಖಾದರ್‌ಗೆ ಕೊಟ್ಟರೆ ಆತ ಓದಿ ತಾತ್ಸಾರದಿಂದ ಕೇಳಿದ: ಇದರಲ್ಲಿ ಆಖ್ಯಾತ? ಪ್ರತ್ಯಯ ಎಲ್ಲಿ ಎಂದು ಕೇಳಿದ. ನನಗೆ ಅದು ಅರ್ಥವಾಗಲಿಲ್ಲ. ಎಂಥಾ ಆಖ್ಯಾತ? ಅವನು ಒಬ್ಬ ಚಿಕ್ಕ ವಿದ್ಯಾರ್ಥಿಯ ಹತ್ತಿರ ಮಾತನಾಡುತ್ತಿರುವಂತೆ ನನ್ನಲ್ಲಿ ತುಂಬ ಹೇಳಿದ. ಅವನು ಹೇಳಿದ್ದೆಲ್ಲಾ ಆಖ್ಯೆ, ಆಖ್ಯಾತ, ಅನ್ವಯ ಲೊಟ್ಟೆ, ಲೊಸಕು ಮುಂತಾದ ವ್ಯಾಕರಣಕ್ಕೆ ಸಂಬಂಧಿಸಿದ ಚರ್ಚೆಗಳು. ಲೊಟ್ಟೆ, ಲೊಸಕು ಎಂದು ಅವನು ಹೇಳಿದ್ದಲ್ಲ. ಅರ್ಧಗಂಟೆಯ ವರೆಗಿನ ಮಾತುಕತೆಯಲ್ಲಿ ಅವನು ನನ್ನನ್ನು ಒಬ್ಬ ವ್ಯಾಕರಣ ಜ್ಞಾನವಿಲ್ಲದವನು ಎಂದು ಮಾಡಿಬಿಟ್ಟ. ಮತ್ತೆ ಹೇಳಿದ ಅಣ್ಣ ನೀನು ವ್ಯಾಕರಣ ಓದಬೇಕು ಎಂದು, ಅಷ್ಟು ಮಾತ್ರವಲ್ಲ. ಸುಮಾರು ವ್ಯಾಕರಣ ಪುಸ್ತಕಗಳ ಹೆಸರುಗಳನ್ನು ಅವನು ತಿಳಿಸಿದ. ನನಗೆ ಅದನ್ನು ಕೇಳಿ ಸಿಟ್ಟು ಬಂತು. ನಾನು ಹೇಳಿದೆ. ಹೋಗೋ ಎದ್ದು ಇವನದೊಂದು ಆಖ್ಯಾತ …ನೋಡೋ ಇದೆಲ್ಲ ನಾನು ನನಗಾದ ಅನುಭವಗಳನ್ನು ವಿವರಿಸುವ ರೀತಿಯಲ್ಲಿ ಬರೆದಿಟ್ಟಿರುವುದು. ಇದರೊಳಗೆ ನಿನ್ನದೊಂದು ಲೊಟ್‌ಕಾಸ್ ಆಖ್ಯಾತ ಇಲ್ಲದೇ ಇದ್ರೇನು ನಷ್ಟ?
ಅಣ್ಣಾ ಇದರಲ್ಲಿ ವ್ಯಾಕರಣ ದೋಷವಿದೆ ಎಂದು ಹೇಳಿ ನೀನು ವ್ಯಾಕರಣ ಕಲಿತು ಪುಸ್ತಕ ಬರೆ ಎಂದು ನಿರ್ದೇಶಿಸುವ ಅಬ್ದುಲ್‌ಖಾದರನು ಮುಂದೆ ಮುಚ್ಚೀಟು ಕಳಿಕ್ಕಾರನ್ಡೆ ಮಗಳ್(ಮೂರೆಲೆ ಆಟಗಾರನ ಮಗಳು) ಪುಸ್ತಕದ ಒಂಬತ್ತು ಪ್ರತಿಗಳನ್ನು ಅಂಗಡಿಗೆ ಮಾರಿ ಅದರ ಹಣ ನನಗೆ ಬೇಕಣ್ಣಾ ಎಂದು ಹೇಳುತ್ತಾನೆ. ವ್ಯಾಕರಣ ದೋಷವಿದೆಯೆಂದು ಟೀಕಿಸಿದ ಅನೇಕ ವಿಮರ್ಶಕರು ಪ್ರಕಾಶಕರು ಬಷೀರರ ಕೃತಿಗಳನ್ನು ವಿಮರ್ಶಿಸಿ ಪ್ರಕಟಿಸಿ ಲಾಭ ಪಡೆದರು ಎನ್ನುವುದೇ ಇತಿಹಾಸದ ವ್ಯಂಗ್ಯ.
ಅನನ್ಯತೆ
ಬಷೀರ್ ದೀರ್ಘ ಕಾದಂಬರಿಗಳನ್ನು ಬರೆಯುವ ಪ್ರಯತ್ನವನ್ನು ಮಾಡಿಲ್ಲ. ನಿಕೃಷ್ಟವಾದುದನ್ನು ಕೂಡಾ ತದೇಕ ದೃಷ್ಟಿಯಿಂದ ವರ್ಣಿಸುವುದರಲ್ಲಿ ಸುಖಿಸುವಂತೆ ತೋರುತ್ತಾರೆ -ಎಂಬಿತ್ಯಾದಿ ಹೇಳಿಕೆಗಳ ಮೂಲಕ ಬಷೀರರ ಪರಿಮಿತಿಯನ್ನು, ದೋಷವನ್ನು ವಿಮರ್ಶಕರು ಗುರುತಿಸಿದ್ದಾರೆ. ಅವರು ಮಲಯಾಳಂ ಸಾಹಿತ್ಯಕ್ಕೆ ಮುಸ್ಲಿಂ ಸಂಸ್ಕೃತಿಯ ಹಿನ್ನೆಲೆಯನ್ನು ಮುಸ್ಲಿಂ ಧಾರ್ಮಿಕ ಪರಂಪರೆಯ ಪ್ರತಿಮೆಗಳನ್ನು ಹಾಗೂ ಆ ಸಮುದಾಯದ ವಿಶಿಷ್ಟವಾದ ಪರಿಣಾಮಕಾರಿ ನುಡಿಗಟ್ಟು, ಅಭಿವ್ಯಕ್ತಿಗಳನ್ನು ಪ್ರವೇಶಗೊಳಿಸಿದ್ದು ಸಾಮಾಜಿಕವಾದುದಕ್ಕಿಂತ ಹೆಚ್ಚಿನ ಅರ್ಥವನ್ನು ಪಡೆದಿದೆ.
ಬಷೀರರ ಸಣ್ಣ ಕತೆಗಳ ಮತ್ತು ನೀಳ್ಗತೆಗಳ ಅಭ್ಯಾಸಿಗಳು ಅವುಗಳ ವಸ್ತು, ಧೋರಣೆಗಳ ವೈವಿಧ್ಯದಿಂದ ಪ್ರಭಾವಿತರಾಗುತ್ತಾರೆ. ಬಷೀರ್ ಅವುಗಳಲ್ಲಿ ಹಸಿವಿನ ಮತ್ತು ಲೈಂಗಿಕತೆಯ ನೋವಿನಿಂದ ಹಿಡಿದು ಆನುಭಾವಿಕ ಆನಂದದರ್ಶನದ ವರೆಗಿನ ಎಲ್ಲಾ ಬಗೆಯ ಅನುಭವಗಳನ್ನು ಅಡಗಿಸಿದ್ದಾರೆ. ಓದುಗನೊಡನೆ ಅವರು ಸ್ಥಾಪಿಸಿಕೊಳ್ಳುವ ವಿರಳ ರೀತಿಯ ಆಪ್ತತೆ ಬಷೀರರ ಯಶಸ್ಸಿನ ಗುಟ್ಟುಗಳಲ್ಲಿ ಒಂದು. ತನ್ನ ಸ್ವಂತ ಅನುಭವಗಳನ್ನು ಅನಾವರಣ ಮಾಡುತ್ತಿದ್ದಾನೆಂಬ ಅನಿಸಿಕೆಯನ್ನು ಲೇಖಕ ಉಂಟು ಮಾಡುವುದರಿಂದ ಈ ಬಗೆಯ ಸಂಬಂಧ ಉದ್ಭವಿಸುತ್ತದೆ.
ಎಲ್ಲಾ ಬಗೆಯ ದಬ್ಬಾಳಿಕೆ ಕಾಪಟ್ಯ ಮೂಢನಂಬಿಕೆಗಳ ಬಗೆಗಿನ ರಾಜಿರಹಿತ ವಿರೋಧ, ಅವರ ಬರವಣಿಗೆಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಸ್ತು. ಇವುಗಳ ಕುರಿತೆಲ್ಲ ಬರೆದಾಗ ಬಷೀರ್ ಬದುಕನ್ನೊಂದು ದುರಂತ ವೈನೋದಿಕವನ್ನಾಗಿ ನೋಡುತ್ತಾರೆ. ಅವರ ವೈನೋದಿಕ ಪ್ರಜ್ಞೆ ಅವರ ಕತೆಗಳ ಲಕ್ಷಣಗಳಲ್ಲಿ ಒಂದಾಗಿದೆ. ಅವರಲ್ಲಿ ಹಾಸ್ಯದ ನೂತನ ರುಚಿಕರ ಪ್ರಜ್ಞೆಯಿದೆ. ಚತುರೋಕ್ತಿ, ವ್ಯಂಗ್ಯ, ವಿಡಂಬನೆಗಳ ಮೇಲಿನ ಪ್ರಭುತ್ವವಿದೆ.
ಬರವಣಿಗೆಯಲ್ಲಿ ಭಾವನೆಗಳಿಗಿಂತ ಅನುಭವಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವುದು ಬಷೀರಿಯನ್ ಕಲೆ. ಅನುಭವಗಳು ಭಿನ್ನವಾದಂತೆ ಕತೆಗಳಲ್ಲಿ ಕೆಲವೊಮ್ಮೆ ಅನುಭವಗಳು ಕತೆಗಳ ಗುಣಾತ್ಮಕ ಅಂಶವಾಗಿಯೂ ಕೆಲವೊಮ್ಮೆ ಋಣಾತ್ಮಕವಾಗಿಯೂ ಪ್ರಕಟವಾಗುವುದಿದೆ. ಸಾಮಾನ್ಯ ಅನುಭವಗಳನ್ನು ತೆರೆದಿಡುವುದಕ್ಕಾಗಿ ಬಷೀರ್ ಬರೆದರು. ಇತಿಹಾಸದ ಕತ್ತಲಲ್ಲಿ ಹುದುಗಿ ಹೋಗಿರುವ ಕೆಲವು ಪ್ರವೃತ್ತಿಗಳನ್ನು ಸಾಹಿತ್ಯದ ಮೂಲಕ ಬೆಳಕಿಗೆ ತೆರೆದಿಟ್ಟರು.
ಬಷೀರ್ ಎಂದೆಂದೂ ಮಲಯಾಳಂನಲ್ಲಿ ಭದ್ರವಾಗಿ ನೆಲೆಯೂರಬಲ್ಲ ಕೃತಿಗಳನ್ನು ಕೊಟ್ಟಿದ್ದಾರೆ. ಆಡುಮಾತಿನ ಮೂಲಕ ದಟ್ಟ ಅನುಭವವನ್ನು ಸಾಹಿತ್ಯವಾಗಿಸಿದ ಹಿರಿಯ ವ್ಯಕ್ತಿತ್ವ ಬಷೀರ್. ಇವರು ಸೃಷ್ಟಿಸಿದ ಅಟ್ಟೆಕಾಲ ಮಮ್ಮುಞ, ಆನೆಬಾಚ ರಾಮನ್‌ನಾಯರ್, ಹೊನ್ನಶಿಲುಬೆ ತೋಮ, ಕುಂಜುತಚ್ಚುಮ್ಮ, ಪಾತುಮ್ಮ ಇವರೆಲ್ಲ ಮಲಯಾಳಂ ಸಾಹಿತ್ಯ ಲೋಕದಲ್ಲಿ ಅಮರರೆನಿಸಿದ್ದಾರೆ. ಬಷೀರ್ ಬದುಕಿದ್ದಾಗಲೇ ವಿವಾದಾಸ್ಪದವಾದ ಅನೇಕ ಘಟನೆಗಳಲ್ಲಿ ಸಿಲುಕಿಕೊಂಡಿದ್ದರು. ಅವರ ಮಹತ್ವವನ್ನು ಗುರುತಿಸಿ ಅನೇಕ ಸಾಹಿತ್ಯ ವಿಮರ್ಶಕರು ಬರೆಯುತ್ತಿದ್ದರು. ಅವರ ವಿಡಂಬನೆಯ ಚಾಟಿಯೇಟು ವೈನೋದಿಕ ಲಲಿತಶೈಲಿ ಎಂದೆಂದೂ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದವು. ಬಷೀರರ ಕೃತಿಗಳು ದಟ್ಟ ಅನುಭವದ ದಾಖಲೆಗಳು. ಬಷೀರ್ ಯೋಗಿಯಂತೆ ಬದುಕಿದರು. ಆದರೆ ದರ್ಶನ ನೀಡುವ ಸಾಹಿತ್ಯಯೋಗಿಯಾಗಲಿಲ್ಲ. ಬದುಕಿನ ಸೂಕ್ಷ್ಮ ವಿವರಗಳನ್ನು ನೀಡುವ ಮೂಲಕ ದೃಷ್ಟಾರನೂ ಆಗಲಿಲ್ಲ. ಬಷೀರ್ ನಮ್ಮ ನಿಮ್ಮಂತೆ ಬದುಕಿದ ಸಾಮಾನ್ಯರಲ್ಲೊಬ್ಬ ಅಸಾಮಾನ್ಯ.
ಬಷೀರರ ಕೃತಿಗಳು ಓದುಗರ ಮನಸ್ಸನ್ನು ತಟ್ಟುತ್ತವೆ. ಹೃದಯದಾಳದಲ್ಲಿ ಧ್ವನಿಯೆಬ್ಬಿಸುತ್ತವೆ. ಪ್ರೀತಿ, ಸಹಾನುಭೂತಿಗಳೇ ಬಷೀರ್ ಸಾಹಿತ್ಯದ ಮೂಲದ್ರವ್ಯ. ಅದನ್ನು ದಾಖಲು ಮಾಡಲು ಬಷೀರ್ ಬಳಸುತ್ತಿದ್ದುದು ಸುಲಲಿತವಾದ ವಿಡಂಬನ ಶೈಲಿ. ನೋವಾಗಲಿ ದುಃಖವಾಗಲಿ ಅದನ್ನು ಹಾಸ್ಯದ ಆವರಣದಲ್ಲಿಯೇ ಕತೆಯಾಗಿಸುವುದು ಬಷೀರರ ವೈಶಿಷ್ಟ್ಯ. ಅವರ ಕೃತಿಗಳನ್ನು ಮೂಲದಿಂದ ಅನುವಾದಿಸುವಾಗ ಕಳೆದು ಹೋಗುವುದು ಕೃತಿಯ ಅಂತರಾಳದಲ್ಲಿರುವ homouಡಿ. ಅದು ದಾಖಲಾಗದೆ ಹೋದರೆ ಬಷೀರರ ಕೃತಿಗಳ ಶ್ರೇಷ್ಠತೆ ನಮಗೆ ವೇದ್ಯವಾಗಲಾರದು. ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತುಕ್ಕೋಜಿ ಕತೆಗಳ homouಡಿ, ಕರ್ವಾಲೋದ ನಿರೂಪಣೆ, ಬಷೀರರ ಸಾಹಿತ್ಯವನ್ನು ಓದುವಾಗ ನೆನಪಿಗೆ ಬರುತ್ತವೆ. ಆದರೆ ತುಲನೆ ಮಾಡುವುದು ಸಲ್ಲ. ಬಷೀರ್ ಬಷೀರರೇ.
ವೈಕಂ ಮುಹಮ್ಮದ್ ಬಷೀರ್ ಒಬ್ಬ mಥಿsಣiಛಿ ಬರೆಹಗಾರ. ಯಾವುದೇ ಚಾರಿತ್ರಿಕ ಸನ್ನಿವೇಶದ ನೆಲೆಯಿಂದಾಗಲೀ, ವ್ಯವಸ್ಥೆಯ ವಿರುದ್ಧವಾಗಿಯಾಗಲಿ ಪ್ರತಿಭಟನಾ ರೂಪದ ಧ್ವನಿ ಎತ್ತುವುದಿಲ್ಲ. ವಾಸ್ತವವನ್ನು ನಿರ್ಲಿಪ್ತವಾಗಿ ನೋಡುವ ಅಲ್ಲಿನ ಛಿomiಛಿ ಸನ್ನಿವೇಶವನ್ನು ದಾಖಲಿಸುವ ಬಷೀರರ ಬರವಣಿಗೆಗಳು ಕತೆಗಳೆಂದರೆ ಕತೆಗಳು. ಅನುಭವಗಳೆಂದರೆ ಅನುಭವಗಳು. Phiಟosoಠಿhಥಿ ಎಂದರೆ ಠಿhiಟosoಠಿhಥಿ. ಈ ಮಾದರಿಯ ರಚನೆಗಳಾಗಿ ಅವುಗಳು ಗಮನಾರ್ಹವಾಗುತ್ತವೆ. ಕನ್ನಡದ ಸಂದರ್ಭದಲ್ಲಿ ಇಂತಹ ಬರವಣಿಗೆಗಳಿಲ್ಲ. ಬಷೀರರ ಬರವಣಿಗೆಗಳ ಪ್ರಭಾವ ಫಕೀರ್‌ಮಹಮ್ಮದ್ ಕಟ್ಪಾಡಿ, ಬೋಳುವಾರು ಮಹಮ್ಮದ್ ಕುಞಿ ಮೊದಲಾದವರ ಮೇಲಿದೆ. ಆದರೆ ಇವರು ಚರಿತ್ರೆಯ ಘಟನೆಗಳ ಒಪ್ಪಿತ ನೆಲೆಯಿಂದ ಪ್ರತಿಭಟನೆ ವ್ಯಕ್ತಪಡಿಸುವ ಮನೋಧರ್ಮ ಇರುವವರು. ಇವರಿಗೆ ವ್ಯವಸ್ಥೆಯ ವಿರುದ್ಧ ಸಿಟ್ಟಿದೆ. ಅದರ ವಿರುದ್ಧ ಹೋರಾಡುವ ಹಟದ ಮನಸ್ಥಿತಿಯಿದೆ. ಆದರೆ ಬಷೀರ್ ಇವುಗಳನ್ನೆಲ್ಲ ಮೀರಿ ನಿಂತ ಒಬ್ಬ ಅನುಭಾವಿ. ಸಮಾಜವನ್ನು ಯಾವುದೇ ರೀತಿಯಲ್ಲಿ ಪ್ರಚೋದಿಸದೆ ವೈನೋದಿಕವಾಗಿ ಅನಾವರಣಗೊಳಿಸಿ ಆ ಮೂಲಕ ನಿರರ್ಥಕವೆನಿಸಿದ ಬದುಕಿನ ಅನೇಕ ಅಸಂಗತಗಳನ್ನು ತಿಳಿಯಪಡಿಸುವ ಬರವಣಿಗೆಗಳು ಬಷೀರ್‌ರದು.
ಅನುಭವವನ್ನು ಅನುಭವವಾಗಿಯೇ ಅಭಿವ್ಯಕ್ತಿಸುವ ಆಲನಹಳ್ಳಿಯವರಲ್ಲಿ, ಮುಸಲ್ಮಾನರ ಧಾರ್ಮಿಕ ಕಟ್ಟುಪಾಡುಗಳನ್ನು ಭೇದಿಸಿ ಆಧುನಿಕತೆಯನ್ನು ರೂಢಿಸಿಕೊಂಡು ಆರೋಗ್ಯ ಪೂರ್ಣ ಬದುಕನ್ನು ಬದುಕಬೇಕೆಂಬ ನಿಲುವುಳ್ಳ ಫಕೀರ್‌ಮಹಮ್ಮದ್ ಕಟ್ಪಾಡಿಯವರ ಬರೆವಣಿಗೆಗಳಲ್ಲಿ ಬಷೀರರ ಪ್ರಭಾವವನ್ನು ಗುರುತಿಸಬಹುದು. ಬಷೀರರ ಕೃತಿಗಳು ೧೯೭೨-೭೩ರಲ್ಲಿ ಕನ್ನಡಕ್ಕೆ ಅನುವಾದಗೊಂಡ ನಂತರದ ದಿನಗಳಲ್ಲಿಯೇ ಮುಸಲ್ಮಾನರ ಸಾಂಸ್ಕೃತಿಕ ಲೋಕ ಕನ್ನಡ ಸಾಹಿತ್ಯದಲ್ಲಿ ಪ್ರವೇಶ ಪಡೆಯಿತು ಎಂಬುದು ಗಮನಾರ್ಹ.
ತನ್ನ ಧರ್ಮದ ಬಗೆಗೆ ವಿಮರ್ಶಾತ್ಮಕವಾಗಿ ಪ್ರತಿಕ್ರಿಯಿಸುವ ಹಾಗೂ ತನ್ನ ಸಮುದಾಯದ ಬಗೆಗೆ ಪ್ರೀತಿಯಿಂದ ಬರೆಯುವ ರೀತಿಯನ್ನು ಕನ್ನಡದ ಈ ಬರೆಹಗಾರರು ರೂಪಿಸಿಕೊಂಡುದು ಬಷೀರರ ಪ್ರಭಾವ ವಲಯದಲ್ಲಿ ಎಂದೆನಿಸುತ್ತದೆ. ಒಬ್ಬ ದಾರ್ಶನಿಕನಂತೆ ಬರೆಯುವ ಬರೆಹಗಾರ ಬಷೀರ್. ಬಷೀರ್‌ರಿಗೆ ಏಕಪಕ್ಷೀಯವಾದ ನಿಲುವಿನ ಅಗತ್ಯವೇ ಕಂಡುಬರಲಿಲ್ಲ. ತಾನು ಅನುಭವದಲ್ಲಿ ಕಂಡುಕೊಂಡ ಸತ್ಯವನ್ನು ಪೂರ್ವಗ್ರಹಗಳ ಹಂಗಿಲ್ಲದೆ ಮಂಡಿಸುವ ಪ್ರವೃತ್ತಿ ಬಷೀರ್‌ರದು. ಒಬ್ಬ ದಾರ್ಶನಿಕ ಬರೆಹಗಾರನಿಗೆ ಮಾತ್ರವೇ ಸಾಧ್ಯವಾಗಬಹುದಾದ ಸ್ಥಿತಿಯಿದು.
ಭಾರತೀಯ ಭಾಷಾ ಸಾಹಿತ್ಯಗಳಲ್ಲಿಯೇ ಬಷೀರ್‌ರ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನವಿದೆ. ತನ್ನ ಅಗಾಧವಾದ ಅನುಭವಗಳ ಮೂಲಕ ಸಾಂಪ್ರದಾಯಕವಾದ ಬರೆವಣಿಗೆಯನ್ನು ಬಿಟ್ಟು ಹೊಸ ಹಾದಿಯಲ್ಲಿ ನಡೆದ ಬಷೀರ್‌ರದು ಭಾಷೆ, ನಿರೂಪಣೆ, ದೃಷ್ಟಿಕೋನ ಎಲ್ಲವೂ ಸ್ಪಷ್ಟ, ವಿಶಿಷ್ಟ. ಅನ್ಯಾಯದ ವಿರುದ್ಧ ನಿರ್ಭೀತವಾಗಿ ಬರೆಯುವುದು, ಸಂಪ್ರದಾಯಶೀಲತೆಯಿಂದ ಮುಕ್ತವಾಗಿ ಬದುಕನ್ನು ಪ್ರೀತಿಸುವುದು, ಸಹಾನುಭೂತಿಯ ಆರ್ದ್ರ ದೃಷ್ಟಿಯಿಂದ ಪರೀಕ್ಷಿಸುವುದು ಇದು ಬಷೀರ್‌ರ ಸಾಹಿತ್ಯದಲ್ಲಿ ಢಾಳಾಗಿಯೇ ಬಂದಿದೆ. ಬಷೀರ್‌ರ ಕೃತಿಗಳಿಗೆ ಕೆಲವು ಮಿತಿಗಳಿವೆ. ಆ ಮಿತಿಗಳನ್ನು ಮೀರಿನಿಲ್ಲುವ ನಿರ್ವ್ಯಾಜವಾದ ಗುಣಗಳಿಂದಲೇ ಬಷೀರ್‌ರ ಸಾಹಿತ್ಯ ವಿಶಿಷ್ಟವಾಗಿದೆ.
ಸಣ್ಣಕತೆಗಳ ಸುವರ್ಣಯುಗ
೧೯೩೦ರ ನಂತರದ ಸುಮಾರು ಇಪ್ಪತ್ತೈದು ವರ್ಷಗಳ ಕಾಲವನ್ನು ಮಲಯಾಳಂ ಸಾಹಿತ್ಯ ಚರಿತ್ರೆಯಲ್ಲಿ ಸಣ್ಣಕತೆಗಳ ಸುವರ್ಣಯುಗ ಎಂದು ಕರೆಯುವುದಿದೆ. ರೊಮ್ಯಾಂಟಿಕ್ ಸಂಪ್ರದಾಯವನ್ನು ಬಿಟ್ಟುಕೊಟ್ಟು ಸಾಮಾಜಿಕ ಸಮಸ್ಯೆಗಳನ್ನು ಕಥಾ ಮಾಧ್ಯಮದಲ್ಲಿ ಪ್ರಕಟಿಸಿ ಸಮಾಜದ ಜನರನ್ನು ಪ್ರಜ್ಞಾವಂತರನ್ನಾಗಿಸುವ ಪ್ರಕ್ರಿಯೆ ಈ ಕಾಲಘಟ್ಟದಲ್ಲಿ ನಡೆಯಿತು. ಮನರಂಜನೆಯೇ ಉದ್ದೇಶವಾಗಿಟ್ಟುಕೊಂಡು ಸಾಹಿತ್ಯವು ಜ್ಞಾನದ ಉದ್ದೇಶಕ್ಕಾಗಿ ಬಳಕೆಯಾಗುತ್ತಾ ಕಥಾ ಸಾಹಿತ್ಯವು ಹೊಸ ಹೊಸ ಪ್ರಯೋಗಗಳ ಮೂಲಕ ಅತ್ಯಂತ ವೇಗವಾಗಿ ಬೆಳೆಯಿತು. ಇದರ ಬೆಳವಣಿಗೆಯ ಹಿಂದೆ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕಾರಣಗಳೂ ಇದ್ದವು ಎಂಬುದನ್ನು ಮರೆಯುವಂತಿಲ್ಲ.
ಪ್ರೇರಣೆ, ಪ್ರಭಾವ
ಸಮಾಜದ ವ್ಯಕ್ತಿಗಳಿಗೆ ಸಾಂಪ್ರದಾಯಕ ನಂಬಿಕೆಗಳಿವೆ; ಆಚರಣೆಗಳಿವೆ; ಮೌಲ್ಯಗಳಿವೆ; ಶಾಶ್ವತವಾದ ಸಮಸ್ಯೆಗಳಿವೆ. ಸಾಹಿತ್ಯದಲ್ಲಾದ ಪರಿವರ್ತನೆಯ ಪ್ರವಾಹ ಇವೆಲ್ಲವುಗಳತ್ತ ನೇರವಾಗಿ ಹರಿಯಿತು. ಪರಿಣಾಮವಾಗಿ ಇವುಗಳಿಂದ ಪ್ರೇರಣೆ ಪಡೆದ ವ್ಯಕ್ತಿಗಳ ಸಾಹಿತ್ಯ ರಚನೆಗಳಲ್ಲೂ ಇವು ಪ್ರತಿಫಲಿಸಿದವು. ಸಮಾಜದ ಪ್ರವೃತ್ತಿಗಳಲ್ಲೂ ಹೊಸತನದ ಗಾಳಿ ಬೀಸತೊಡಗಿತು. ಗಾಂಧಿಯ ಆದರ್ಶಗಳು ಸಾಹಿತ್ಯದಲ್ಲಿ ಜನಜೀವನದಲ್ಲಿ ನೆಲೆಯೂರ ತೊಡಗಿದವು. ಪರಿಣಾಮವಾಗಿ ಅಹಿಂಸೆ, ಸತ್ಯ, ನಿಷ್ಠೆ, ತ್ಯಾಗ ಬುದ್ಧಿ, ಸೇವಾ ಮನೋಭಾವ, ಸಾರ್ವಲೌಕಿಕ ಮಾನವ ಪ್ರೇಮ, ಗ್ರಾಮೀಣ ಜನರ ಸ್ಥಿತಿಗತಿಗಳು ಸಾಹಿತ್ಯದಲ್ಲೂ ಪ್ರಕಟವಾದವು. ವಿಧಿ ಮತ್ತು ದೈವದ ಹಿಡಿತದಿಂದ ಮಾನವ ಕುಲವನ್ನು ಬಿಡಿಸಿ ಹೊಸ ಬದುಕನ್ನು, ಹೊಸ ಪ್ರಜ್ಞೆಯನ್ನು ಬೆಳೆಸುವುದು ಸಾಹಿತ್ಯದಲ್ಲಿ ಮುಖ್ಯವಾಗತೊಡಗಿತು. ಮಾನವನ ಮನಸ್ಸನ್ನು ತೆರೆದಿಡುವಲ್ಲಿ ಫ್ರಾಯ್ಡ್‌ನ ಚಿಂತನೆಗಳು, ಸಮಾಜದ ಬದಲಾವಣೆಯ ಕುರಿತಾದ ಸಾಹಿತ್ಯ ರಚನೆಗಳಿಗೆ ಮಾರ್ಕ್ಸ್, ಲೆನಿನ್‌ರ ವಿಚಾರಗಳು ಪ್ರೇರಣೆ ನೀಡಿದವು. ದೇಶೀಯ ಚಳುವಳಿಗಳು, ಗಾಂಧಿಯ ಆದರ್ಶಗಳು, ವಿದೇಶಿ ಪ್ರಭಾವಗಳು, ಆಂಗ್ಲಭಾಷೆ ಇವು ಸಮಾಜದ ಜನರನ್ನು ಕನಸಿನ ಲೋಕದಿಂದ ಎಚ್ಚೆತ್ತುಕೊಳ್ಳಲು ಪ್ರಚೋದಿಸಿದವು. ಇವೆಲ್ಲವುಗಳ ಪರಿಣಾಮವಾಗಿ ಬದುಕನ್ನು ಪರಿವೀಕ್ಷಿಸುವ, ಅನುಭವಿಸಿದಂತೆ ಬರೆಯುವ ರೀತಿ ಬಳಕೆಗೆ ಬಂತು. ಸಂಸ್ಕೃತ ಭಾಷೆಯನ್ನು ಆಶ್ರಯಿಸದೆ ಮಲಯಾಳಂ ಭಾಷೆಯಲ್ಲಿ ಪಾಶ್ಚಾತ್ಯ ಚಿಂತನೆಗಳನ್ನು ರೂಢಿಸಿಕೊಳ್ಳಬೇಕಾದ ಅಗತ್ಯವನ್ನು ಮಲಯಾಳಂ ಬರೆಹಗಾರರು ಕಂಡುಕೊಂಡರು.
ಸಮಕಾಲೀನರು
ಈ ದಾರಿಯನ್ನು ತುಳಿದವರಲ್ಲಿ ಪ್ರಮುಖರು ತಗಳಿ ಶಿವಶಂಕರ ಪಿಳ್ಳೆ, ಕೇಶವದೇವ್, ಪೊನ್‌ಕುನ್ನಂ ವರ್ಕಿ, ಎಸ್.ಕೆ.ಪೊಟ್ಟಕ್ಕಾಡ್, ಕಾರೂರು ನೀಲಕಂಠ ಪಿಳ್ಳೆ, ವೈಕಂ ಮುಹಮ್ಮದ್ ಬಷೀರ್. ಇವರೆಲ್ಲ ತಮ್ಮ ಸೃಜನಶೀಲ ಕೃತಿಗಳ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪ್ರಾಮುಖ್ಯತೆ ನೀಡಿ ತಮ್ಮ ನಿಲುವುಗಳನ್ನು ಪ್ರಕಟಿಸಿದರು. ತಮ್ಮದೇ ಆದ ವಿಶಿಷ್ಟ ಬರವಣಿಗೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖರಾದರು. ಈ ಕಾಲಘಟ್ಟದಲ್ಲಿ ಕಥಾ ಸಾಹಿತ್ಯವು ಬದುಕಿಗೆ ನೇರವಾಗಿ ಸ್ಪಂದಿಸತೊಡಗಿತು. ಬದುಕನ್ನು ಕುರಿತ ವ್ಯಾಖ್ಯಾನ ಮತ್ತು ವಿಮರ್ಶೆ ಎಂಬ ನೆಲೆಯಲ್ಲಿಯೂ ಸಣ್ಣಕತೆಯ ಆಶಯ ಮತ್ತು ಆಕಾರಗಳಿಗೂ ಗೌರವ ದೊರೆಯಿತು. ಸಮಕಾಲೀನ ಸಂದರ್ಭದ ವಿವಿಧ ಅನುಭವಗಳೊಡನೆ ಶ್ರೇಣೀಕೃತ ವ್ಯವಸ್ಥೆಯ ವಿವಿಧ ಸಮುದಾಯಗಳೊಡನೆ ಕಥಾಸಾಹಿತ್ಯ ಮುಖಾಮುಖಿಯಾಯಿತು. ದಾರಿದ್ರ್ಯ, ಶೋಷಣೆ, ಲೈಂಗಿಕ ಅತ್ಯಾಚಾರ, ಕಾರ್ಮಿಕರ ಸಮಸ್ಯೆ, ರೈತಾಪಿ ಜನರ ಸಂಕಟಗಳತ್ತ ಕಥಾ ಸಾಹಿತ್ಯ ತನ್ನ ಹಸ್ತವನ್ನು ಚಾಚಿತು. ಆರಂಭದ ಸಣ್ಣಕತೆಗಳಲ್ಲಿ ಕಾಣಿಸಿಕೊಂಡ ಈ ಬೆಳವಣಿಗೆ ೧೯೪೫ರ ನಂತರ ಕಾದಂಬರಿಗಳಲ್ಲೂ ಕಾಣಿಸಿಕೊಂಡಿತು. ಬಷೀರ್ ಈ ಎಲ್ಲವುಗಳಿಗೂ ಸ್ಪಂದಿಸಿದರು. ಮಲಯಾಳಂ ಭಾಷಿಕರಲ್ಲಿ ಬೇಪೂರ್ ಸುಲ್ತಾನ್ ಎಂದೇ ಪರಿಚಿತರಾಗಿರುವ ಬಷೀರ್ ಬದುಕಿದ್ದಾಗಲೇ ದಂತಕತೆಯಾದರು.
ಅನುಭವ ಲೋಕದ ಅಕ್ಷರ ಚಕ್ರವರ್ತಿ
ಬಷೀರ್ ತಮ್ಮ ಅಗಾಧವಾದ ಅನುಭವಗಳನ್ನು ಅಭಿವ್ಯಕ್ತಿಸಿ ಕತೆ, ಕಾದಂಬರಿಗಳನ್ನು ಬರೆದರು. ಪರಂಪರಾಗತ ಮೌಲ್ಯಗಳ ಅರ್ಥ ಶೂನ್ಯತೆಯನ್ನು, ಧಾರ್ಮಿಕ ಅಂಧಶ್ರದ್ಧೆಯನ್ನು ಮೀರಿನಿಂತ ಮಾನವ ಪ್ರೀತಿಯೇ ಬದುಕಿನ ಮೂಲ ತಳಹದಿ ಎಂಬ ಸತ್ಯವನ್ನು ತಮ್ಮ ಕೃತಿಗಳ ಮೂಲಕ ಪ್ರಕಟಿಸಿದರು. ೧೯೪೨-೧೯೯೩ ಅವಧಿಯಲ್ಲಿ ಅವರು ಬರೆದ ಎಪ್ಪತ್ತೈದು ಕತೆಗಳು ಹದಿಮೂರು ಕಾದಂಬರಿಗಳು ಹೊಸ ಸಾಹಿತ್ಯ ಚರಿತ್ರೆಯನ್ನೇ ನಿರ್ಮಿಸಿದವು. ಅನುಭವಗಳನ್ನು ಸಾಹಿತ್ಯದಲ್ಲಿ ದಾಖಲಿಸಿ ಅನುಭವ ಲೋಕದ ಅಕ್ಷರ ಚಕ್ರವರ್ತಿಯಾಗಿ ರೂಪುಗೊಂಡರು. ಅವರ ಸಂವೇದನೆಗಳು ಅಸಂಖ್ಯ ಓದುಗರ ಹೃದಯವನ್ನು ಬಡಿದೆಬ್ಬಿಸಿದವು. ಬಷೀರ್ ಮಲಯಾಳ ಸಾಹಿತ್ಯದಲ್ಲಿ ಜನಪ್ರಿಯರಾದರು.
ಬಷೀರ್ ವ್ಯಕ್ತಿತ್ವ
ಅಗಾಧ ಅನುಭವಗಳಿಂದ ಅಭಿವ್ಯಕ್ತಿಗೆ ಕಾವನ್ನು, ಕಸುವನ್ನು ತಂದುಕೊಂಡ ಬಷೀರ್ ತಲಯೋಲಪ್ಪರಂಬಿನ ಭಾಷೆ ಮತ್ತು ವಿಶ್ವಮಾನವ ಮನಸ್ಸಿನಿಂದ ಬೆಳೆದು ಬಂದರು. ಬಳಿಕ ಅವರು ಸಾಹಿತ್ಯ ಸಾಮ್ರಾಜ್ಯದ ಸುಲ್ತಾನನಾದುದರ ಹಿಂದೆ ಪಟ್ಟಭದ್ರ ಹಿತಾಸಕ್ತರಾದ ವಿಮರ್ಶಕರ ಗುಂಪೋ, ಪ್ರಯತ್ನವೋ ಇರಲಿಲ್ಲ. ಗುಂಪುಗಾರಿಕೆ, ಸಂಘಟನೆಗಳಿಗೆ ಅತೀತನಾಗಿ ನಿಂತು ಸಾಹಿತ್ಯದ ಮೆಟ್ಟಿಲುಗಳನ್ನು ಏರಿದವರು ಬಷೀರ್.
ವೈಕಂ ಸತ್ಯಾಗ್ರಹದ ವೇಳೆ(೧೯೨೪) ಅಲ್ಲಿಗೆ ಬಂದ ಗಾಂಧೀಜಿಯನ್ನು ಸ್ಪರ್ಶಿಸಿದ ಬಷೀರ್ ಶಾಲಾ ವಿದ್ಯಾರ್ಥಿ(ಐದನೆಯ ಇಯತ್ತೆ)ಯಾಗಿದ್ದರು. ಆ ಸ್ಪರ್ಶದ ಲಹರಿಯಲ್ಲಿ ಕೆಲವು ದಿನ ಕಳೆಯುವುದಕ್ಕೆ ಮೊದಲೇ ಪಲಾಯನಗೈದು ಕೋಳಿಕೋಡ್ ತಲುಪಿದರು. ಉಪ್ಪು ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲಿಗೆ ಹೋದ ಅವರು ಮತ್ತೆ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿ ಜೈಲು ಕಂಡರು. ಬಳಿಕ ಶಾಂತಿಯನ್ನರಸಿ ದೇಶಾಟನೆ ಮಾಡಿದರು. ಹಿಂದೂ ಸಂನ್ಯಾಸಿಯಾಗಿ, ಸೂಫಿ ಸಂತನಾಗಿ, ಮುಸ್ಲಿಂ ಸಂತರೊಡನೆ ಹಡಗಿನಲ್ಲಿ, ಹೋಟೆಲಿನಲ್ಲಿ, ಮಿಲ್ಲಿನಲ್ಲಿ ಕಾರ್ಮಿಕನಾಗಿ, ಮೋಟರ್ ವರ್ಕ್‌ಶಾಪ್‌ನ ಗೇಟ್ ಕೀಪರನಾಗಿ, ಮೆಜಿಷಿಯನರ ಸಹಾಯಕನಾಗಿ, ಮನೋರೋಗಿಯಾಗಿ ಬಷೀರ್ ಅಲೆದಾಡಿದ ಊರುಗಳಿಗೆ, ಸೇರಿದ ದಡಗಳಿಗೆ ಲೆಕ್ಕವಿಲ್ಲ. ಈ ಅಂತ್ಯವಿಲ್ಲದ ಅಲೆದಾಟದಿಂದ ಪಡೆದ ಅನುಭವಗಳ ಕುಲುಮೆಯಲ್ಲಿ ಬಷೀರ್ ಬೆಂದು ನೊಂದಿದ್ದರು. ಕಳೆದ ಕಷ್ಟಗಳನ್ನು ನೆನೆ ನೆನೆದು ದುಃಖಿಸುತ್ತಿದ್ದ ಅವರು ಕತೆ ಬರೆಯಲು ಕಾಗದ, ಮಸಿಗಳನ್ನು ಕಡ ತರುತ್ತಿದ್ದರಂತೆ. ಇಂತಹ ದುಃಸ್ಥಿತಿಯಲ್ಲಿ ಅಸ್ತಿತ್ವಕ್ಕಾಗಿ ಬರೆದ ಕತೆಗಳಲ್ಲಿ ಸ್ವಂತ ಅನುಭವಗಳೇ ದಾಖಲಾಗಿವೆ. ಪಟ್ಟತ್ತಿಂಡೆ ಪೇಕ್ಕಿನಾವ್(ಅಧಿಕಾರದ ಸ್ವಪ್ನ ಪಿಶಾಚಿ) ನಾಟಕದಲ್ಲಿ ಸರಕಾರವನ್ನು ಟೀಕಿಸಿದ್ದಕ್ಕಾಗಿ ಸೆರೆಮನೆ ಕಾಣಬೇಕಾಯಿತು. ಅನೇಕ ಬಾರಿ ಜೈಲು ಶಿಕ್ಷೆಯನ್ನು ಅನುಭವಿಸಿದ ಬಷೀರರ ಸಾಹಿತ್ಯದಲ್ಲಿ ಅಲ್ಲಿನ ಅನುಭವಗಳು ಒಂದು ಪ್ರಮುಖ ಆಶಯವಾಗಿಯೇ ಮೂಡಿಬಂದಿವೆ.
ಅನಂತವಾದ ಕರುಣೆಯೇ ಬಷೀರ್ ಎನ್ನುವ ವ್ಯಕ್ತಿಯ ಅಂತರ್ಭಾವ. ಬಷೀರ್ ಸಾಹಿತ್ಯದ ಮುಖ ಮುದ್ರೆಯೂ ಅದೇ. ಮಲಯಾಳಂ ಸಾಹಿತ್ಯದಲ್ಲಿ ಬಷೀರ್ ಸಾಹಿತ್ಯವೆಂದು, ಬಷೀರೇತರ ಸಾಹಿತ್ಯವೆಂದೂ ಪ್ರತ್ಯೇಕಿಸಲಾರಂಭಿಸಿದುದಕ್ಕೆ ಸಾಧ್ಯವಾದುದು ಇದೇ ಕಾರಣದಿಂದ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಮಾಜದ ಸಂಕುಚಿತ ಮನೋ ಭಾವವನ್ನು, ದಯಾರಹಿತವಾದ ಸಮಾಜದಲ್ಲಿ ಮಾನವ ಪ್ರೀತಿ ಮತ್ತು ಕರುಣೆಯನ್ನು ಕುರಿತು ಬಷೀರ್ ಕೊನೆಯವರೆಗೂ ಬರೆದರು.
ಆರಂಭದ ಹೆಚ್ಚಿನ ಬರವಣಿಗೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಮುಖ್ಯವಾಗಿರಿಸಿ ಕೊಂಡ ಬಷೀರ್ ನಂತರದ ಬರೆವಣಿಗೆಗಳಲ್ಲಿ ಮನುಷ್ಯ ಸ್ವಭಾವದ ವೀಕ್ಷಣೆಗಳನ್ನು(ಉದಾ: ಐಷುಕುಟ್ಟಿ, ಪೂವನ್‌ಫಳಂ(ಹೂಬಾಳೆ) ಮುಖ್ಯವಾಗಿರಿಸಿಕೊಂಡಂತೆ ತೋರುತ್ತದೆ. ಉತ್ತರಾರ್ಧದ ಬರೆವಣಿಗೆಗಳಲ್ಲಿ ಮಾನವನ ಲೌಕಿಕ ಬದುಕಿನ ಸಂಬಂಧಗಳಿಗೆ, ಸಾಂಸಾರಿಕ ಚಿತ್ರಣಗಳಿಗೆ ಒತ್ತುಕೊಟ್ಟಂತೆ ತೋರುತ್ತದೆ(ಉದಾ: ಒರು ಭಗವದ್ಗೀತೆಯು ಕುರೇ ಮುಲಗಳೂ(ಒಂದು ಭಗವದ್ಗೀತೆ ಮತ್ತು ಅನೇಕ ಮೊಲೆಗಳು, ವಿಶ್ವ ವಿಖ್ಯಾತಮಾಯ ಮೂಕ್(ಜಗದ್ವಿಖ್ಯಾತ ಮೂಗು); ತಂಗಮೋದಿರಂ(ಚಿನ್ನದುಂಗುರ). ಸ್ತ್ರೀ ಹೃದಯದಿಂದ ಬ್ರಹ್ಮಾಂಡದವರೆಗಿನ ವಿಷಯಗಳನ್ನು ಕುರಿತು ಬಷೀರ್ ಬರೆದಾಗಲೆಲ್ಲ ಪ್ರೀತಿ ಮತ್ತು ಕರುಣೆಯಲ್ಲಿ ಅಚಂಚಲವಾದ ವಿಶ್ವಾಸವಿರಿಸಿದ ಏಕಾಗ್ರತೆಯನ್ನು ಕಾಣುತ್ತೇವೆ.
ಭಾಷೆಯಲ್ಲಿ ಅಗಾಧವಾದ ಪಾಂಡಿತ್ಯವನ್ನು, ವ್ಯಾಕರಣದಲ್ಲಿ ಅದ್ವಿತೀಯವಾದ ವ್ಯುತ್ಪತ್ತಿಯನ್ನು ಬಷೀರ್ ಅಪೇಕ್ಷಿಸಿರಲಿಲ್ಲ. ಭಾಷೆಯ ಕುರಿತಾದ ಪ್ರಜ್ಞೆ ಮಾತ್ರ ಅವರಿಗಿತ್ತು. ಭಾಷೆಯ ಕುರಿತ ದರ್ಶನ ಇದ್ದಿರಲಿಲ್ಲ. ಅದರಿಂದಾಗಿ ಅವರಿಗೆ ವ್ಯಾಕರಣವನ್ನು, ಅಕಾಡೆಮಿಕ್ ಶಿಸ್ತನ್ನು ಲಂಘಿಸುವುದು ಸುಲಭವಾಯಿತು. ಹೀಗೆ ಬರವಣಿಗೆಯಲ್ಲಿ, ಭಾಷೆಯಲ್ಲಿ ಅವರು ಸೃಷ್ಟಿಸಿದ ವಿಚಾರವನ್ನು ಸಾಹಿತ್ಯ ವಿಮರ್ಶಕರು ಗೌರವಯುತವಾಗಿ ಕಂಡಿಲ್ಲವೆನ್ನುವುದು ಸತ್ಯ. ಹಳ್ಳಿಗಳನ್ನು, ಹಳ್ಳಿಗಾಡಿನ ಜನರನ್ನು ಬಷೀರ್ ತಮ್ಮ ಕೃತಿಗಳಲ್ಲಿ ಪುನರ್ ಸೃಷ್ಟಿಸಿದರು. ಗಂಭೀರ ವಿಷಯಗಳನ್ನು ಸರಳವಾಗಿ ಬರೆಯುವುದರ ಮೂಲಕ ಸರಳತೆಯ ಒಂದು ವಿಶ್ವನಿಯಮವನ್ನೇ ಮುಂದಿಟ್ಟರು. ಸಾಹಿತ್ಯದಲ್ಲಿ ಸಾಮಾಜಿಕ ನಿಯಮಗಳನ್ನು ಅನುಸರಿಸಿಕೊಂಡು ಬರೆದಿರುತ್ತಿದ್ದರೆ ಪಾತುಮ್ಮ(ಪಾತುಮ್ಮನ ಆಡು), ಕುಂಜುತಚ್ಚುಮ್ಮ (ನನ್ನಜ್ಜನಿಗೊಂದಾನೆಯಿತ್ತು)ನ ಹಾಗಿರುವ ಕಥಾಪಾತ್ರಗಳು ಬಷೀರರ ಲೇಖನಿಯಿಂದ ಮೂಡಿಬರುತ್ತಿರಲಿಲ್ಲ.
ಅನ್ಯರ ಕ್ಷೇಮಕ್ಕಾಗಿ ಹಾರೈಸುವಲ್ಲಿ, ಹೃದಯ ಬೆಂದು ಕರಗುತ್ತಿದ್ದರೂ ಅನ್ಯರಿಗೆ ನೆರವಾಗುವಲ್ಲಿ, ಅವರು ಎಂದೆಂದೂ ಬತ್ತದಿರುವ ಉತ್ಸಾಹದ ತೊರೆಯಾಗಿದ್ದರು. ಬರೆಹಗಾರ-ಓದುಗ, ವ್ಯಕ್ತಿ-ಸಮಾಜ ಇವುಗಳ ಅಂತರ ಹೆಚ್ಚುತ್ತಿರುವ ಕಾಲದಲ್ಲಿ ಬದುಕಿದ ಬಷೀರರಿಗೆ ಸತ್ಯದ ವಿಭಿನ್ನ ಮುಖಗಳ ಅನುಭವವಾಗಿತ್ತು. ಈ ಅನುಭವಗಳು ಕೊಟ್ಟ ಉಜ್ವಲ ಪ್ರಚೋದನೆಯಲ್ಲಿ ಅವರು ಬರೆದುದೆಲ್ಲವೂ ಆತ್ಯಂತಿಕ ಸತ್ಯದ ಜೀವಂತಿಕೆಯ ತುಡಿತಗಳಾಗಿವೆ. ಎಂದೋ ಬಿಟ್ಟ ಸಂನ್ಯಾಸ ಜೀವನವೇ, ಬದುಕಿನ ಕೊನೆಯವರೆಗೂ ಬಷೀರರ ದರ್ಶನದ ತಳಪಾಯವಾಗಿತ್ತು ಎನ್ನುವುದಕ್ಕೆ ಅವರ ರಚನೆಗಳೇ ಸಾಕ್ಷಿ.
ಬಷೀರ್ ಅನುಭವಿಸಿ ಬರೆಯುತ್ತಾರೆ. ಹಾಗಾಗಿ ಬರಹಗಳಲ್ಲಿ ನಾವು ಅವರನ್ನು ಕಾಣಬಹುದು. ಅವರ ಮೂಲಕವೇ ಮಾನವರ ದುರಂತಗಳನ್ನು, ಬದುಕಿನ ನೋವುಗಳನ್ನು ತನ್ನ ಕೌಶಲ್ಯದಿಂದ ಮಧುರ ಸುಂದರವಾಗಿಸುತ್ತಾರೆ. ಉತ್ಕಟವಾದ ನಿರಾಸೆಯ ಬಿಸಿ ಉಸಿರನ್ನು ನಾವು ಅವರ ಬರಹಗಳಲ್ಲಿ ಕಾಣಲಾರೆವು. ತೀವ್ರವಾದ ಪ್ರತಿಭಟನೆಯ ಆಕ್ರೋಶಗಳೂ ಇಲ್ಲ. ತಲೆ ಬಗ್ಗಿಸಿ ಕುಳಿತ ಅಂತರ್ಮುಖಿಯೊಬ್ಬನ ದರ್ಶನ ಓದುಗರಿ ಗಾಗಬಹುದು.
ಬಷೀರ್ ಒಬ್ಬ ರಮ್ಯ ಕತೆಗಾರರಲ್ಲ. ಯಥಾರ್ಥ ಅನುಭವಗಳಿಗೆ ಕಲಬೆರಕೆ ಮಾಡದೆ ನಿರ್ಭಯವಾಗಿ ಬರೆಯುವ ಕತೆಗಾರ. ನೋವು, ಪ್ರೀತಿ, ಕಣ್ಣೀರು ಘಟನೆಗಳನ್ನು ವಿನೋದವಾಗಿ ಮಾರ್ಪಡಿಸುವ, ಹಾಸ್ಯದ ಲಘು ಆವರಣ ಸೃಷ್ಟಿಸುವ ವಿಶಿಷ್ಟ ಶೈಲಿ ಬಷೀರ್‌ರದು. ಅವರು ಒಬ್ಬ ಹ್ಯೂಮನಿಸ್ಟ್ ಹಾಗೆಯೇ ಹ್ಯೂಮರಿಸ್ಟ್ ಬರೆಹಗಾರ.
ಮರೆಯಲಾಗದ ಅನೇಕ ಕಥಾ ಪಾತ್ರಗಳು, ಹೇಳಿಕೆ, ಕೇಳಿಕೆಗಳಿಲ್ಲದ ಅನೇಕ ಮಾತುಗಳು ಮಾತ್ರವಲ್ಲ ಬಷೀರರ ಸಾಹಿತ್ಯ, ಅದು ಮಾನವ ಬದುಕಿನ ಪೂರ್ಣತೆಯನ್ನು ಕುರಿತಾದ ಅರ್ಥಪೂರ್ಣ ಅನ್ವೇಷಣೆಯಾಗಿದೆ.
–ಮೋಹನ ಕುಂಟಾರ್
ಪರಿವಿಡಿ
ಸವಿನುಡಿ / ೫
ಪ್ರೇಮಪತ್ರ ಓದುವ ಮೊದಲು / ೭
ಮುನ್ನುಡಿ / ೧೧
ಪ್ರಸ್ತಾವನೆ / ೧೫
೧. ಪ್ರೇಮಪತ್ರ / ೧
೨. ಐಷುಕುಟ್ಟಿ / ೩೬
೩. ಟೈಗರ್ / ೪೩
೪. ಅಮ್ಮ / ೪೯
೫. ಸೊಟ್ಟಗಾಲಿ / ೬೨
೬. ಪೊಲೀಸ್ ಪೇದೆಯ ಮಗಳು / ೬೭
೭. ಕೈಕೋಳ / ೮೧
೮. ಅನರ್ಘ್ಯ ನಿಮಿಷ / ೮೯
೯. ಯುದ್ಧ ಕೊನೆಗೊಳ್ಳಬೇಕಾದರೆ / ೯೧
೧೦. ಏಕಾಂತತೆಯ ಮಹಾತೀರ / ೯೫
೧೧. ಮೂರ್ಖರ ಸ್ವರ್ಗ / ೧೦೪
೧೨. ಹೂಬಾಳೆ ಹಣ್ಣು / ೧೧೩
೧೩. ಮೂರೆಲೆ ಆಟಗಾರನ ಮಗಳು / ೧೨೮
೧೪. ಹುಂದ್ರಾಪ್ಪಿಂಬುಸ್ಸಾಟ್ಟೊ! / ೧೪೬
೧೫. ಆನೆಬಾಚನೂ ಹೊನ್ನಶಿಲುಬೆಯೂ / ೧೫೮
೧೬. ಹಳೆಯದೊಂದು ಪುಟ್ಟ ಪ್ರೇಮಕತೆ / ೧೮೦
೧೭. ತಂಗ / ೧೮೭
೧೮. ಹಸಿವು / ೧೯೨
೧೯. ಒಂದು ಭಗವದ್ಗೀತೆ ಮತ್ತು … / ೨೦೫
೨೦. ಚಿನ್ನದುಂಗುರ / ೨೨೨
೨೧. ಅಟ್ಟೆಕಾಲ ಮಮ್ಮುಞ / ೨೩೮
೨೨. ಭರ್‌ರ್‌ರ್!!! / ೨೪೫
೨೩. ಹತ್ತು ಜನ ನೇತಾರರು ಬೇಕಾಗಿದ್ದಾರೆ / ೨೫೩
ಲೇಖಕರ ಪರಿಚಯ / ೨೫೮
ಅನುವಾದಕರ ಪರಿಚಯ / ೨೬೨
Reviews
There are no reviews yet.