ಓದುವ ಮುನ್ನ
ನಾನು ಬಹಳ ಚಿಕ್ಕವನಿರುವಾಗ ನನ್ನ ಸಹೋದರ ರಾಮಣ್ಣನು ಮುಂಡಿಗೇಸರ ಗ್ರಾಮ-ದೇವಸ್ಥಾನದಲ್ಲಿ ಪಂಡಿತರೊಬ್ಬರಿಂದ ದೇವರ ಪೂಜಾಮಂತ್ರ ಪಾಠ ಕಲಿಯುತ್ತಿದ್ದ. ನಾನೂ ಅವನೊಡನೆ ಹೋಗಿ ಕುಳಿತು ಕೇಳುತ್ತಿದ್ದೆ. ಕೆಲ ಮಂತ್ರಗಳು ಅಂದರೆ ಗಣಪತಿ ಉಪನಿಷತ್, ಪುರುಷಸೂಕ್ತ, ಶ್ರೀಸೂಕ್ತ, ದುರ್ಗಾಸೂಕ್ತ, ದೇವೀಸೂಕ್ತ ಹಾಗು ಮಂತ್ರಪುಷ್ಪ, ಇವು ಬಾಯಿಪಾಠವಾಗಿ ಬಂದವು. ರುದ್ರವನ್ನು ಅನುಸರಿಸಿ ಹೇಳಬಲ್ಲವನಾಗಿದ್ದೆ. ಇಂದಿಗೂ ಅವು ನನ್ನ ದಿನ ನಿತ್ಯದ ಪೂಜಾ ಕಾರ್ಯಗಳಿಗೆ ಸಹಾಯಕವಾಗಿ ನಿಂತಿವೆ. ನಂತರ, ನಿತ್ಯಪೂಜೆಗಳಲ್ಲಿ ತೊಡಗಿಕೊಂಡಂತೆ, ಕೆಲ ಮಂತ್ರ ಹಾಗೂ ಪ್ರಯೋಗ-ವಿಧಿಗಳನ್ನು ಕಲಿತುಕೊಂಡೆ. ಆಗ ಅವುಗಳ ತಾತ್ಪರ್ಯವನ್ನು ನಾನು ಅರಿಯದವನಾಗಿದ್ದೆ. ಆದರೆ ಶ್ರದ್ಧಾಪೂರ್ವಕವಾಗಿ ಅವುಗಳನ್ನು ದಿನನಿತ್ಯ ಹೇಳಿ, ಅಭಿಷೇಕ, ಪೂಜಾಕಾರ್ಯ ಮಾಡುತ್ತಿದ್ದೆ. ಪುರುಷಸೂಕ್ತವು ಹೀಗೆ ಕಂಠಪಾಠವಾಗಿ ಇನ್ನೂ ನನ್ನಲ್ಲಿ ಉಳಿದಿದೆ.
ನಾನು ಹೈಸ್ಕೂಲ್ ಕಲಿಯುತ್ತಿದ್ದಾಗ ಸಂಸ್ಕೃತವನ್ನೂ ಆಯ್ಕೆ ಮಾಡಿಕೊಂಡಿದ್ದೆ. ಆಗ ನಮ್ಮೊಂದಿಗೆ ಮನೆಯಲ್ಲಿ ಶ್ರೀ ಗಣಪತಿ ಶಾಸ್ತ್ರಿ ಸ್ವಾದಿ ಎನ್ನುವ ಸಾಧು ಬ್ರಹ್ಮಚಾರಿ ಇದ್ದರು. ಚೆನ್ನಾಗಿ ಸಂಸ್ಕೃತ ಬಲ್ಲವರು. ಅವರು ಹಿಮಾಲಯ, ಬದರಿ, ಕೇದಾರಗಳನ್ನೆಲ್ಲ ಸುತ್ತಿ ಬಂದವರಾಗಿದ್ದರು. ಆಯುರ್ವೇದ ವೈದ್ಯರಾಗಿದ್ದರು. ಅವರೊಬ್ಬ ರ್‍ಯಾಡಿಕಲ್ ಹಾಗು ವಿಚಾರವಾದಿ ಆಗಿದ್ದರು. ಗೊಡ್ಡು ಸಂಪ್ರದಾಯಗಳನ್ನು ತಿರಸ್ಕರಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರು. ಕ್ರಾಂತಿಕಾರಿ ಕಾರ್ಯಕರ್ತರಾಗಿದ್ದರು. ಇವರ ಪ್ರಭಾವ ನನ್ನ ಮೇಲೆ ಬಹಳವಿದ್ದಿತು. ಅವರು ನನಗೆ ಕೆಲವು ಉಪನಿಷತ್ ಪುಸ್ತಕಗಳನ್ನೂ ನೀಡಿದ್ದರು. ಸಂಪ್ರದಾಯ ಹಾಗು ವೈಜ್ಞಾನಿಕತೆ, ವೇದೋಪನಿಷತ್‌ಗಳ ತಾತ್ಪರ್ಯ ಮೊದಲಾದ ಕೆಲವು ವಿಚಾರಗಳ ಕುರಿತಾಗಿ ನನ್ನೊಡನೆ ಚರ್ಚಿಸುತ್ತಲೂ ಇದ್ದರು. ಹೀಗಾಗಿ, ಧಾರ್ಮಿಕ ವಿಷಯದಲ್ಲಿ, ನನ್ನಲ್ಲಿ ಒಂದು ರೀತಿಯ ಭಾವನಾತ್ಮಕ ವೈಚಾರಿಕತೆ ಮನೆಮಾಡಿಕೊಂಡಿತ್ತು. ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಮೊದಲೆರಡು ವರ್ಷ ಸಂಸ್ಕೃತವನ್ನು ಅಧ್ಯಯನ ಮಾಡಿದ್ದೆ. ಉಪನಿಷತ್ ಹಾಗು ಕಾವ್ಯಗಳಲ್ಲಿ ಕೆಲವನ್ನು ಅಭ್ಯಸಿಸಿದ್ದೆ. ಅಲ್ಲಿ ವಿಮರ್ಶಾತ್ಮಕತೆಗೆ ಹೆಚ್ಚಿನ ಒಲವಿತ್ತು.
೨೦೦೫ರಲ್ಲಿ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸ್ವಾಮೀಜಿಯವರ ಗಾಯತ್ರೀ ಪುರಶ್ಚರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಆ ಸಂದರ್ಭದಲ್ಲಿ ಹಾಗೂ ತದನಂತರ, ನಾನು ದಿನ ನಿತ್ಯ ಪೂಜಾ ಸಮಯದಲ್ಲಿ ಪಠಿಸುತ್ತಿರುವ ಮಂತ್ರಗಳ ತಾತ್ಪರ್ಯಗಳ ಕುರಿತಾಗಿ ನನ್ನ ವಿಚಾರಗಳನ್ನು ಹರಿಸತೊಡಗಿದ್ದೆ. ತಾತ್ಪರ್ಯ ತಿಳಿಯದೇ ಮಂತ್ರೋಚ್ಚಾರ ಸಾಧುವಲ್ಲವೆಂದೆನಿಸತೊಡಗಿತ್ತು. ಈ ಕಾರಣಕ್ಕಾಗಿಯೇ ಗಾಯತ್ರಿಯನ್ನು ಅರ್ಥೈಸುವ ಪ್ರಯತ್ನ ಮಾಡಿದೆ. ಅದರಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಅರಸುತ್ತಿದ್ದೆ.
ವಿಶ್ವ ಸೃಷ್ಟಿತತ್ತ್ವಗಳೆಲ್ಲ ವೈಜ್ಞಾನಿಕ ಸೂತ್ರಗಳನ್ನು ಆಧರಿಸಿವೆ ಎನ್ನುವ ವಿಚಾರ ನನ್ನ ಈವರೆಗಿನ ಅಧ್ಯಯನಗಳಿಂದ ದೃಢಪಟ್ಟಿತ್ತು. ಪುರುಷಸೂಕ್ತವು ವಿಶ್ವ ಸೃಷ್ಟಿತತ್ತ್ವವನ್ನು ವರ್ಣಿಸುತ್ತದೆಂದು ನನ್ನ ಆಕಾಶ ವೀಕ್ಷಣೆ ಕಾರ್ಯಕ್ರಮಗಳ ಸಂದರ್ಭದಲ್ಲಿ ಪಾದೋsಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾsಮೃತಂ ದಿವಿ | ತ್ರಿಪಾದೂರ್ಧ್ವ ಉದೈತ್ಪುರುಷಃ ಎನ್ನುವುದೇ ಮೊದಲಾದ ಪುರುಷಸೂಕ್ತದ ಮಂತ್ರೋಕ್ತಿಗಳಿಂದ ಗೋಚರವಾಯಿತು.
ಇತ್ತೀಚೆಗೆ, ಮೂಲದಲ್ಲಿ, ಶ್ರೀ ದಯಾನಂದ ಸರಸ್ವತಿಯವರು ಬರೆದ, ಋಗ್ವೇದಾದಿ ಚತುರ್ವೇದ ಭಾಷ್ಯ ಭೂಮಿಕಾ ಇದರ ಕನ್ನಡ ಆವೃತ್ತಿಯೊಂದು ಓದಲು ದೊರಕಿತು. ಅದರಲ್ಲಿಯ ಪುರುಷಸೂಕ್ತ ಕುರಿತಾದ ಭಾಷ್ಯವು ನನ್ನನ್ನು ಆಕರ್ಷಿಸಿತು. ಅದನ್ನು ಈ ಮೇಲಿನ ದೃಷ್ಟಿಕೋನದಿಂದ ಅಧ್ಯಯನ ಮಾಡಿದೆ. ಪರಿಣಾಮವೇ ಈ ಪ್ರಬಂಧ. ಇದರಲ್ಲಿ ಭಾವನಾತ್ಮಕತೆ, ಸಾಂಪ್ರದಾಯಿಕ ಪೂರ್ವಗ್ರಹಗಳನ್ನು ತ್ಯಜಿಸಿ, ಭಾವನಾತ್ಮಕ ವೈಚಾರಿಕತೆ ಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಿದೆ.
ಆಕರ ಗ್ರಂಥ
ಈ ಮೇಲೆ ತಿಳಿಸಿದಂತೆ, ಮೂಲ ದಯಾನಂದ ಸರಸ್ವತಿಯವರು ಬರೆದ ಋಗ್ವೇದಾದಿ ಚತುರ್ವೇದ ಭಾಷ್ಯ ಭೂಮಿಕಾ, ಇದರ ಕನ್ನಡ ಅನುವಾದದ ಸಂಪುಟ ೧, (ವೇದಭಾಷ್ಯ ಪ್ರಕಾಶನ ಸಮಿತಿ, ಬೆಂಗಳೂರು), ಇದು ಆಕರ ಗ್ರಂಥವಾಗಿರುತ್ತದೆ. ಅದರಲ್ಲಿಯ ಪುರುಷಸೂಕ್ತವು ಯಜುರ್ವೇದದ ಭಾಗವಾಗಿರುತ್ತದೆ. ಯಜುರ್ವೇದದ ೩೧ನೇ ಅಧ್ಯಾಯದಲ್ಲಿಯ ಒಂದರಿಂದ ಇಪ್ಪತ್ತೆರಡರ ವರೆಗಿನ ಒಟ್ಟು ೨೨ ಮಂತ್ರಗಳು, ಇದರಲ್ಲಿ ಸಮಾವೇಶಗೊಳ್ಳುತ್ತವೆ. ತಾತ್ಪರ್ಯ ನಿರೂಪಣೆಗಳಲ್ಲಿ ಆಕರ ಗ್ರಂಥದೊಡನೆ ಅರ್ಥೈಸಲು ಡಿ.ವಿ.ಜಿ., (ಕನ್ನಡ) ಸ್ವಾಮಿ ಚಿನ್ಮಯಾನಂದ (ಇಂಗ್ಲಿಷ್) ಹಾಗೂ ಸ್ವಾಮಿ ತೇಜೋಮಯಾನಂದ (ಇಂಗ್ಲಿಷ್) ಅವರುಗಳ ಪುರುಷಸೂಕ್ತ ಕುರಿತಾದ ಗ್ರಂಥಗಳ ನೆರವನ್ನೂ ಪಡೆಯಲಾಗಿದೆ.
ಪುರುಷಸೂಕ್ತ ಪಠ್ಯ
ಆಕರ ಗ್ರಂಥದಲ್ಲಿ ಉಲ್ಲೇಖಿಸಿರುವ ಈ ಪುರುಷಸೂಕ್ತವು ಯಜುರ್ವೇದದ ಭಾಗವಾಗಿರುತ್ತದೆ. ಮೂಲತಃ ಪುರುಷಸೂಕ್ತವು ಋಗ್ವೇದದ ಭಾಗವಾಗಿರುವುದೆಂದು ತಿಳಿಯಲಾಗುತ್ತದೆ (ಋಗ್ವೇದ-೮ನೇ ಅಷ್ಟಕ, ೪ನೇ ಅಧ್ಯಾಯ, ೧೦ನೇ ಮಂಡಲ, ೪ನೇ ಅನುವಾಕ್). ನಾಲ್ಕೂ ವೇದಗಳಲ್ಲಿ ಪುರುಷಸೂಕ್ತವನ್ನು ನಾವು ಕಾಣಬಹುದಾದರೂ, ಎಲ್ಲ ವೇದಗಳಲ್ಲಿಯ ಪುರುಷಸೂಕ್ತ ಪಠ್ಯ ವಿವರಗಳು ಹಾಗೂ ಮಂತ್ರಗಳಲ್ಲಿಯ ಕ್ರಮಾನುಗತಿಗಳು ಒಂದೇ ರೀತಿಯಲ್ಲಿ ಇರದೆ ಭಿನ್ನ ಭಿನ್ನವಾಗಿವೆ ಎಂದು ಕಂಡುಬರುತ್ತದೆ. ಈ ಮುಂದೆ, ಅಧ್ಯಾಯ ಒಂದರಲ್ಲಿ, ಪುರುಷಸೂಕ್ತ ಪಠ್ಯದ ೧ರಿಂದ ೨೨ರ ವರೆಗಿನ ಮಂತ್ರಗಳನ್ನು ಆಕರ ಗ್ರಂಥದ ಕ್ರಮಾನುಗತಿಯ ಪ್ರಕಾರ ಉಲ್ಲೇಖಿಸಲಾಗಿದೆ.
ಇಲ್ಲಿ ನೀಡಲಾದ ಪಠ್ಯವು ನಮ್ಮ ಜಿಲ್ಲೆಯ ಯಜುರ್ವೇದಿಗಳು ಅಥವಾ ನಾವು ಪಠಿಸುವ ಮಂತ್ರಗಳ ಕ್ರಮಾನುಗತಿಗಿಂತ ಸ್ವಲ್ಪ ಭಿನ್ನವಾಗಿ ಇದೆ. ಪಠ್ಯದಲ್ಲಿಯೂ ಅಲ್ಪ ಸ್ವಲ್ಪ ಬದಲಾವಣೆಗಳು ಕಂಡುಬರುತ್ತವೆ. ಅಲ್ಲದೆ ನಮ್ಮಲ್ಲಿ ಪ್ರಚಲಿತವಿರುವ ತಚ್ಛಂ ಯೋ ರಾವೃಣೀ ಮಹೇ.. ಮಂತ್ರವು ಇದರಲ್ಲಿ ಸೇರಿಲ್ಲ. ಬಹುಶಃ ಅದು ಶಾಂತಿ ಮಂತ್ರವೆಂದು ಪರಿಗಣಿಸಿ ಮುಖ್ಯ ಪಠ್ಯದಿಂದ ಅದನ್ನು ಹೊರಗಿಡಲಾಗಿದೆ ಎಂದು ತೋರುತ್ತದೆ. ನಮ್ಮಲ್ಲಿ ಪ್ರಚಲಿತದಲ್ಲಿರುವ ಪುರುಷಸೂಕ್ತದ ವೇದ ನಾರಾಯಣ ಋಷಿ ವಿಭಾಗದ ಇನ್ನೆರಡು ಮಂತ್ರಗಳೂ ಇದರಲ್ಲಿ ಸೇರಿಲ್ಲ. ಮಂತ್ರ ಪಠ್ಯ ಇಂತಿದೆ:
ವೇದಾಹಮೇತಂ ಪುರುಷಂ ಮಹಾಂತಮ್ |
ಆದಿತ್ಯವರ್ಣಂ ತಮಸಸ್ತು ಪಾರೇ ||
ಸರ್ವಾಣಿ ರೂಪಾಣಿ ವಿಚಿತ್ಯ ಧೀರಃ |
ನಾಮಾನಿ ಕೃತ್ವಾ ಅಭಿವದನ್ಯದಾಸ್ತೇ ||
ಧಾತಾ ಪುರಸ್ತಾದ್ಯಮುದಾಜಹಾರ |
ಶಕ್ರಃ ಪ್ರವಿದ್ವಾನ್ ಪ್ರದಿಶಶ್ಚತಸ್ರಃ ||
ತಮೇವಂ ವಿದ್ವಾನಮೃತ ಇಹ ಭವತಿ |
ನಾನ್ಯಃ ಪಂಥಾ ಅಯನಾಯ ವಿದ್ಯತೇ ||
ಈ ಮಂತ್ರಗಳ ಉಲ್ಲೇಖ ಯಾಕಾಗಿ ಆಗಿಲ್ಲ ಎಂದು ತಿಳಿಯದು. ಆದರೆ, ನನ್ನ ತಾತ್ಪರ್ಯ ನಿರೂಪಣೆಯ ವಿಭಾಗದಲ್ಲಿ ಇವುಗಳನ್ನು ಸೇರಿಸಿ ಅರ್ಥೈಸಲಾಗಿದೆ. ಮಂತ್ರ ಪಠ್ಯಗಳಲ್ಲಿಯೂ ಅಲ್ಲಲ್ಲಿ, ಪ್ರಚಲಿತವಿರುವ ಪಠ್ಯಭಾಗವನ್ನು ಸೂಚ್ಯವಾಗಿ ಆವರಣದಲ್ಲಿ ನೀಡಲಾಗಿದೆ.
ಆಕರ ಗ್ರಂಥದಲ್ಲಿಯ ಪುರುಷಸೂಕ್ತವನ್ನು ೨ ವಿಭಾಗಗಳಲ್ಲಿ ಪರಿಶೀಲಿಸಲಾಗಿದೆ. ೧ನೇ ಮಂತ್ರದಿಂದ ೧೬ನೇ ಮಂತ್ರದವರೆಗೆ ಋಷಿ-ನಾರಾಯಣ: ಹಾಗು ದೇವತಾ-ಪುರುಷಃ ಎಂದು ಉಲ್ಲೇಖಿಸಲಾಗಿದೆ. ಇವುಗಳನ್ನು ಒಂದು ವಿಭಾಗವಾಗಿ ಪರಿಗಣಿಸಲಾಗಿದೆ. ೧೭ನೇ ಮಂತ್ರದಿಂದ ೨೨ನೇ ಮಂತ್ರದವರೆಗೆ ಋಷಿ-ಉತ್ತರ ನಾರಾಯಣ: ಹಾಗು ದೇವತಾ-ಆದಿತ್ಯಃ ಎಂದಿದೆ. ಇವುಗಳನ್ನು ಎರಡನೆಯ ವಿಭಾಗವಾಗಿ ಪರಿಗಣಿಸಲಾಗಿದೆ. ಅಂದರೆ, ಈ ಪುರುಷಸೂಕ್ತದಲ್ಲಿ, ಪುರುಷ ಹಾಗು ಆದಿತ್ಯ ಈ ಎರಡು ದೇವತೆಗಳ ಕುರಿತಾಗಿ ಇಲ್ಲಿ ವರ್ಣನೆ-ವಿವರಗಳಿವೆ ಎಂದು ಪರಿಗಣಿಸಬೇಕಾಗುತ್ತದೆ. ಅದರಂತೆ ದೃಷ್ಟಾರ ಋಷಿಗಳ ಹೆಸರುಗಳು ಪ್ರತ್ಯೇಕವಾಗಿವೆ. ಆದ್ದರಿಂದ ಇಲ್ಲಿ ಈ ಎರಡೂ ವಿಭಾಗಗಳನ್ನು ಪ್ರತ್ಯೇಕವಾಗಿಯೇ ತೋರಿಸಲಾಗಿದೆ. ನಮ್ಮಲ್ಲಿ ಪ್ರಚಲಿತವಿರುವ ಪುರುಷಸೂಕ್ತ ಪಾಠದಲ್ಲಿ ಸಮಗ್ರವಾಗಿ, ಒಟ್ಟೂ ೨೪ ಮಂತ್ರಗಳಿಗೆ, ವೇದ ನಾರಾಯಣ ಋಷಿಃ | ಅಮೃತಾನುಷ್ಠುಪ್ ಛಂದಃ | ವಿರಾಟ ಪುರುಷೋ ದೇವತಾ | ಎಂದು ಮಾತ್ರ ಉಲ್ಲೇಖಿಸಲ್ಪಡುತ್ತದೆ.
ಈ ಪ್ರಬಂಧವನ್ನು ೪ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಮೊದಲು (ಅಧ್ಯಾಯ ೧ರಲ್ಲಿ) ಪುರುಷಸೂಕ್ತ ಇದರ ಸಂಸ್ಕೃತ ಪಠ್ಯ ಭಾಗ ಹಾಗು ಕನ್ನಡದ ಅರ್ಥ ವಿವರಣೆಗಳನ್ನು ಯಥಾವತ್ ಆಕರ ಗ್ರಂಥದಲ್ಲಿ ಉಲ್ಲೇಖಿಸಿದಂತೆ ನೀಡಿದೆ. ನಂತರ ಅಧ್ಯಾಯ ೨ರಲ್ಲಿ ಈ ಸೂಕ್ತದ ಪ್ರತಿಯೊಂದು ಮಂತ್ರದ ತಾತ್ಪರ್ಯ ನಿರೂಪಣೆ ಹಾಗು ವಿಶ್ಲೇಷಣೆ ಮಾಡಲಾಗಿದೆ. ಇದರಲ್ಲಿ ವೇದ ನಾರಾಯಣ ವಿಭಾಗ ಹಾಗೂ ಉತ್ತರ ನಾರಾಯಣ ವಿಭಾಗಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದೆ. ಕೊನೆಯಲ್ಲಿ (ಅಧ್ಯಾಯ ೩ರಲ್ಲಿ) ತಾತ್ಪರ್ಯ ನಿರೂಪಣೆಯ ಅಂತಿಮ ಸಾರಾಂಶವನ್ನು ನೀಡಲಾಗಿದೆ. ಅಧ್ಯಾಯ ೪ರಲ್ಲಿ ಸೂಕ್ತದ ಪ್ರಧಾನ ಅಂಶಗಳನ್ನೊಳಗೊಂಡ ಮಂತ್ರಗಳನ್ನು ಆಯ್ಕೆ ಮಾಡಿ, ಸಂಗ್ರಹಿಸಿ ಸಂಭಾವ್ಯ ಪುರುಷಸೂಕ್ತ ಒಂದನ್ನು ನೀಡಲಾಗಿದೆ.
ನನಗೆ ನನ್ನ ಅಲ್ಪತ್ವದ ಅರಿವಿದೆ. ತಾತ್ಪರ್ಯ ನಿರೂಪಣೆಯಲ್ಲಿ ನೀಡಿರುವ ಎಲ್ಲ ವಿಚಾರಗಳೂ, ವಿವರಗಳೂ ನನ್ನ ಸ್ವಂತ ಅಭಿಪ್ರಾಯಗಳನ್ನು ಮಾತ್ರ ಹೊಂದಿವೆ. ಓದುಗರು ಈ ಎಲ್ಲ ಹಿನ್ನೆಲೆಗಳನ್ನು ಹಾಗೂ ನನ್ನ ಅಲ್ಪತ್ವವನ್ನು ಗ್ರಹಿಸಿ ಈ ಪ್ರಬಂಧವನ್ನು ವೇದಾಹಮೇತಮ್ ಅಂದರೆ ಇದನ್ನು ನಾನು ಹೀಗೆ ತಿಳಿದಿದ್ದೇನೆ ಎಂದು ಸ್ವೀಕರಿಸುವರೆಂದು ಭಾವಿಸುತ್ತೇನೆ.
-ರಘುಪತಿ ಹೆಗಡೆ ಬೆಳ್ಳೆಕೇರಿ, ಶಿರಸಿ
Reviews
There are no reviews yet.