ನೀತಿಬೋಧನೆಯ ಚುರುಗತೆಗಳು
ಗೆಳೆಯ ಸತ್ಯೇಶ್ ಎನ್. ಬೆಳ್ಳೂರ್ ಅವರ ಚಿಂತನೆಗೊಡ್ಡುವ ಚುರುಕತೆಗಳ ಸಂಗ್ರಹ “ಪುಟಪಾಕ” ವಿಶಿಷ್ಟವಾದ ಒಂದು ಪ್ರಯೋಗಶೀಲ ಬರಹ. ನೀಳ್ಗತೆಯಾಗಬಲ್ಲ ವಸ್ತುಗಳನ್ನು ಕಿರಿದಾಗಿಸಿ ಕೆಲವೇ ಸಾಲುಗಳಲ್ಲಿ ಹೇಳುವ ಇಲ್ಲಿನ ಪುಟ್ಟಪುಟ್ಟ ಸವಿಕತೆಗಳು ಕಥನಕ್ಕಿಂತಲೂ ಹೆಚ್ಚು ವಿಚಾರ ಪ್ರಚೋದನೆ ಯಲ್ಲಿ ಆಸಕ್ತಿ ಹೊಂದಿವೆ.
ಕತೆಗಳು ಕಿರಿದಾದಾಗ ಚಮತ್ಕಾರಭರಿತವಾಗಿರುತ್ತವೆ. ನಡುರಾತ್ರಿಯಲ್ಲಿ ಊರ ಹೊರಗಿನ ನಿರ್ಜನ ಬಯಲಿನಲ್ಲಿ ಆಕಸ್ಮಿಕವಾಗಿ ಇಬ್ಬರು ಸಂಧಿಸು ತ್ತಾರೆ. ಒಬ್ಬ ಇನ್ನೊಬ್ಬನಲ್ಲಿ ನಿನಗೆ ಭೂತಪ್ರೇತಗಳಲ್ಲಿ ನಂಬಿಕೆ ಇದೆಯೇ ಎಂದು ಕೇಳಿದ. ಆ ಇನ್ನೊಬ್ಬ ಮಾಯವಾದ. ಇಂಗ್ಲೀಷಿನಲ್ಲಿ ಈ ಕತೆ ಜಗತ್ತಿನ ಕಿರಿದಾದ ಕತೆಯೆಂದು ಒಮ್ಮೆ ವರ್ಣಿಸಲ್ಪಟ್ಟಿದೆ. ಅರ್ಥಪೂರ್ಣವಾದ ಹಲವಾರು ಕಿರುಕತೆಗಳನ್ನು ಎಸ್. ದಿವಾಕರ್ ಕನ್ನಡಕ್ಕೆ ತಂದಿದ್ದಾರೆ. ಆದರೆ ಅಂತಹ ಕತೆಗಳ ಹಿಂದೆ ನೀತಿಬೋಧನೆಯ ಗುಣ ಇಲ್ಲ.
ಕನ್ನಡದಲ್ಲಿ ಹನಿಗವನಗಳು ಇರುವಂತೆ ಹನಿಗತೆಗಳು ಯಾಕೆ ಇರ ಬಾರದು ಎಂದು ಸತ್ಯೇಶ್ ಪ್ರಯತ್ನಿಸುತ್ತಿದ್ದಾರೆ. “ದಿನಕ್ಕೊಂದು ಪ್ರೀತಿ ಮಾತು”, “ತುಂತುರು” ಎಂಬ ಹನಿಗವನಗಳ ಸಂಕಲನಗಳನ್ನು ಈಗಾಗಲೇ ಪ್ರಕಟಿಸಿರುವ ಸತ್ಯೇಶ್ ಹೊಸ ಪ್ರಯೋಗಗಳಿಗೆ ಅಂಜುವವರಲ್ಲ. ಚಿಕ್ಕದಾದ ಸಾಹಿತ್ಯಬರಹಗಳಲ್ಲಿ ಹೆಚ್ಚಿನ ವಿಚಾರ ಹೇಳುವುದು ಹೇಗೆಂಬ ಪ್ರಯತ್ನದ ಭಾಗವಾಗಿ ಈ ಕತೆಗಳು ಹುಟ್ಟಿವೆ. ಇಲ್ಲಿನ ಹೆಚ್ಚಿನ ಕತೆಗಳು ನೀತಿಯೊಂದನ್ನು ಸೂಚಿಸಲು ಪ್ರಯತ್ನಿಸುತ್ತವೆ.
ಧರ್ಮದ ಒಡನಾಟವನ್ನು ಸಾಹಿತ್ಯವು ಕಮ್ಮಿ ಮಾಡುತ್ತ ಹೋದಂತೆ ನೀತಿ ಹೇಳುವ ಜವಾಬ್ಧಾರಿಯನ್ನು ಕೂಡ ಅದು ಬಿಟ್ಟುಕೊಡ ತೊಡಗಿತು. ಆದರೆ ಜನರು ನೀತಿ ಬೋಧೆಗಾಗಿ ಸಾಹಿತ್ಯದತ್ತ ನೋಡುವ ಆಸಕ್ತಿಯನ್ನು ಸಂಪೂರ್ಣ ಬಿಟ್ಟುಕೊಡಲಿಲ್ಲ. ಡಿ.ವಿ.ಜಿ ಅವರ ಪ್ರಸಿದ್ಧವಾದ ಮಂಕುತಿಮ್ಮನ ಕಗ್ಗದ ಜನಪ್ರಿಯತೆ ಜನರ ಈ ಆಸಕ್ತಿಗೊಂದು ಉದಾಹರಣೆ. ಸತ್ಯೇಶ್ ಅವರು “ನವ್ಯಜೀವಿ” ಎಂಬ ಅಂಕಿತದಲ್ಲಿ ಎರಡು ಸಾವಿರಕ್ಕೂ ಹೆಚ್ಚು ನೀತಿಪ್ರಧಾನ ಚೌಪದಿಗಳನ್ನು ರಚಿಸಿರುವವರು ಮತ್ತು ಆ ಚೌಪದಿಗಳು ಸಾಕಷ್ಟು ಜನಮನ್ನಣೆಯನ್ನೂ ಗಳಿಸಿವೆ. ಅವರು ಕಿರುಕವನಗಳಲ್ಲಿ ಸಾಧಿಸಿರುವ ಹ್ರಸ್ವಗೊಳಿಸಿ ಹೇಳುವ ಶಕ್ತಿ ಹಾಗೂ “ನವ್ಯಜೀವಿ” ಅಂಕಿತದಲ್ಲಿ ಸೂಚಿಸಿರುವ ಕೆಲವಾರು ವಿಚಾರಗಳು ಕಿರುಗತೆಗಳ ರೂಪದಲ್ಲಿ ಹೊಸ ಪರೀಕ್ಷೆಗೆ ಒಳಗಾಗಿವೆ.
ಆದರೆ, ಇಲ್ಲಿನ ಕತೆಗಳು ಕೇವಲ ನೀತಿಬೋಧೆಗಾಗಿ ಇರುವ ಸುಭಾಷಿತ ಗಳಲ್ಲ. ಇವು ಬದುಕಿನ ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮ ಅನುಭವದಿಂದ ಏನನ್ನು ಹೇಗೆ ಪಡಕೊಳ್ಳಬಹುದು ಎಂದು ತೋರಿಸಿ ಕೊಡುತ್ತವೆ. ಭಾವಪ್ರಧಾನವಾದ ಬದುಕಿನ ಸಂದರ್ಭಗಳನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ. “ರಹಸ್ಯ” ಕತೆಯಲ್ಲಿ ಕತೆಗಾರನ ಬರವಣಿಗೆ ಗಳನ್ನು ಮೆಚ್ಚುವ ತನ್ನ ಅಭಿಮಾನಿಯಾದ ಗೆಳೆಯನ ಹೆಂಡತಿಗೆ ಅದು ಅವಳದೇ ಕತೆ ಎಂದು ತಿಳಿಹೇಳಲು ಸಾಧ್ಯವಾಗದ ವಾಸ್ತವದ ಚಿತ್ರಣವಿದೆ. “ಹೀಗೇಕೆ” ಕತೆಯಲ್ಲಿ ಗಂಡನ ಮನೆಯಲ್ಲಿರುವ ಪಮ್ಮಿಗೆ ಮುಖಕ್ಕೆ ನೀರು ಹಾಕಿಕೊಳ್ಳುವುದು, ಮುಖದ ಮೇಲೆ ಮಳೆಹನಿ ನೀರು ಬೀಳುವುದು ಕೂಡ ಬಲು ಇಷ್ಟ. ಅದು ಏಕೆಂದರೆ ಆಗ ಅವಳ ಕಣ್ಣೀರು ಜಗತ್ತಿಗೆ ಕಾಣುವುದಿಲ್ಲ! “ಸ್ವಚ್ಛ ಭಾರತ”ದಲ್ಲಿ, ಒಂದು ಮನೆಯಾತ ಮುನಿಸಿಪಾಲಿಟಿ ತೊಟ್ಟಿಗೆ ಕಸ ಹಾಕದೆ ಪಕ್ಕದ ಮನೆ ಕಾಂಪೌಂಡಿಗೆ ಕಸ ಎಸೆಯುತ್ತಾನೆ. ಆದರೆ ಆತನಿಗೆ ತನ್ನ ಮನೆ ಕಾಂಪೌಂಡಿಗೂ ಪಕ್ಕದ ಮನೆಯವ ಕಸ ಎಸೆಯುತ್ತಿರುವುದರ ಅರಿವಾಗುವುದಿಲ್ಲ. “ಮೈಲಿಗೆ” ಕತೆಯಲ್ಲಿ ಹೊಸ ವಸ್ತುಗಳಿಗೆ ಕುಂಕುಮ ಹಚ್ಚಿ ಪೂಜಿಸುವ ಅಪ್ಪನನ್ನು ನೋಡಿ ಅವನ ಪುಟ್ಟ ಮಗ ತನ್ನ ಹೊಸ ಚಪ್ಪಲಿಗೆ ಕುಂಕುಮ ಹಚ್ಚಿ ಪೂಜಿಸುವ ವಿಚಾರದ ಹಿಂದಿನ ಮನೋಭಾವ ಅಪ್ಪನಿಗೆ ತಿಳಿದಾಗ ಮಡಿ ಯಾವುದು? ಮೈಲಿಗೆ ಯಾವುದು? ಎಂಬುದರ ನಿಜ ಅರಿವು ಮೂಡುತ್ತದೆ. ಹೀಗೆಯೇ ಇಲ್ಲಿನ ಎಲ್ಲ ಕತೆಗಳು ಮನುಷ್ಯನ ಭಾವವನ್ನು ಉದ್ದೀಪಿಸಿ, ಚಿಂತನೆಯನ್ನು ಪ್ರೇರೇಪಿಸಿ ವಿಚಾರಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತವೆ.
ಸತ್ಯೇಶ್ ಬೆಳ್ಳೂರ್ ವೃತ್ತಿಯಿಂದ ಎಂಜಿನಿಯರ್. ಎಂ.ಬಿ.ಎ ಓದಿರುವ ಅವರು ಈಗ ತೇಜಸ್ ನೆಟ್‌ವರ್ಕ್ಸ್‌ನ ಹಿರಿಯ ಅಧಿಕಾರಿ. ಕಳೆದ ಮೂವತ್ತು ವರ್ಷಗಳಲ್ಲಿ ಅವರು ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರ ಉದ್ದಿಮೆ ಗಳಿಗಾಗಿ ಓಡಾಡಿದ್ದಾರೆ. ಪ್ರಜಾವಾಣಿಯಲ್ಲಿ “ಬೋರ್ಡ್ ರೂಮಿನ ಸುತ್ತಮುತ್ತ” ಎಂಬ ಅಂಕಣ ಬರೆಯುತ್ತಿದ್ದ ಅವರು ಮ್ಯಾನೇಜ್‌ಮೆಂಟ್ ಬರಹಗಳನ್ನೂ ಪ್ರಕಟಿಸಿದ್ದಾರೆ. ೨೦೦೫ರಿಂದ ಕನ್ನಡ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಅವರು ಅನುವಾದ, ಕವನ ಸಂಗ್ರಹ, ಮಕ್ಕಳ ನಾಟಕ, ಪ್ರವಾಸ ಕಥನ, ಸಂಪಾದಿತ ಕೃತಿ -ಹೀಗೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಕ್ರಿಕೆಟ್ ಕುರಿತಾಗಿ ಅವರು ರಚಿಸಿರುವ ಹಾಡುಗಳ ಧ್ವನಿಸುರುಳಿಯೂ ಜನಪ್ರಿಯವಾಗಿದೆ.
ಮ್ಯಾನೇಜ್‌ಮೆಂಟ್‌ನಲ್ಲಿ ವಿಚಾರಗಳು ಸುಲಭವಾಗಿ ನಮಗೆ ಮನ ದಟ್ಟಾಗಲು ಕತೆಗಳನ್ನು ಹಾಗೂ ಮ್ಯಾನೇಜ್‌ಮೆಂಟ್ ತರಬೇತಿಗಳಿಗೇ ಮೀಸಲಾದ ಆಟಗಳನ್ನು ಬಳಸಿಕೊಳ್ಳುತ್ತಾರೆ. ಸತ್ಯೇಶ್ ಪಳಗಿದ ಆಡಳಿತ ನಿಪುಣರು. ಕತೆಗಳನ್ನು ವಿಚಾರ ಸಂವಹನೆಗೆ ಒಗ್ಗುವಂತೆ ಅದನ್ನೊಂದು ನೀತಿಕತೆ ಆಗದ ರೀತಿಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬ ಯೋಚನೆ ಯಿಂದ ಹುಟ್ಟಿದ ಅವರ ಪ್ರಯೋಗಶೀಲ ಪ್ರಯತ್ನದಂತೆ ಈ ಕಿರುಗತೆಗಳು ಗೋಚರಿಸುತ್ತವೆ. ಓದುಗರು ಇದನ್ನು ಸುಲಭವಾಗಿ ಓದಿ ಅರ್ಥ ಮಾಡಿ ಕೊಳ್ಳಬಹುದು. ಇಲ್ಲಿನ ಬರಹಗಳ ಚಮತ್ಕಾರವನ್ನೂ ಆಸ್ವಾದಿಸಬಹುದು.
ಇಂದು ನಾವು ಮಾಹಿತಿ ಹಾಗೂ ಸಂವಹನ ಯುಗದಲ್ಲಿ ಬದುಕು ತ್ತಿದ್ದೇವೆ. ಹೆಚ್ಚು ಜನರಿಗೆ ತಲುಪಲು ಸಾಹಿತ್ಯವೂ ಸಂವಹನ ತಂತ್ರಗಳನ್ನು ಬಳಸಿಕೊಳ್ಳ ಬಯಸುತ್ತದೆ. ಹೆಚ್ಚು ಜನರಿಗೆ ಪರಿಣಾಮಕಾರಿಯಾಗಿ ತಿಳಿಸಲು ಕಿರುಗತೆಗಳ ಸಂವಹನಕ್ರಮ ಉಪಯೋಗವಾದೀತೂ ಎಂಬ ನಂಬಿಕೆಯಿಂದ ಗೆಳೆಯ ಸತ್ಯೇಶ್ ಈ ಸವಿಯಾದ ಚುರುಕತೆಗಳನ್ನು ಬರೆದಿದ್ದಾರೆ. ಅವರ ಹಿಂದಿನ ಪುಸ್ತಕಗಳನ್ನು ಸ್ವಾಗತಿಸಿದಂತೆ ಕನ್ನಡ ಓದುಗರು ಈ ಕೃತಿಯನ್ನೂ ಸ್ವಾಗತಿಸಿ ಓದಲಿ ಎಂದು ಆಶಿಸುತ್ತೇನೆ.
ಸತ್ಯೇಶ್ ಮತ್ತು ನಾನು ಇಬ್ಬರೂ ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವವರು. ಅವರು ತೇಜಸ್ ನೆಟ್‌ವರ್ಕ್ಸ್‌ನಲ್ಲಿ ಹಾಗೂ ನಾನು ಇಂಟೆಲ್ ಟೆಕ್ನಾಲಜಿಯ ಉದ್ಯೋಗಿಗಳು. ನಮಗಿಬ್ಬರಿಗೂ ನಾವು ಕೆಲಸ ಮಾಡುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೊರಗೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ. ಈ ನಮ್ಮ ಸಾಹಿತ್ಯ ಸ್ನೇಹವೇ ಸತ್ಯೇಶ್ ಅವರನ್ನು ಮುನ್ನುಡಿಯ ನಾಲ್ಕು ಮಾತುಗಳನ್ನು ಬರೆಯುವಂತೆ ನನ್ನಲ್ಲಿ ಕೇಳಲು ಕಾರಣ. ಈ ಪುಸ್ತಕಕ್ಕೆ ಮುನ್ನುಡಿಯ ನಾಲ್ಕು ಮಾತುಗಳನ್ನು ಬರೆಯುವ ನೆಪದಲ್ಲಿ ಅವರ ಇತರ ಕೃತಿಗಳನ್ನೂ ವಿವರವಾಗಿ ಓದುವ ಅವಕಾಶ ವಾಯಿತು. ಅವರ ಮ್ಯಾನೇಜ್‌ಮೆಂಟ್ ಬರಹಗಳಂತೂ ಕನ್ನಡಕ್ಕೆ ಹೊಸ ಮಾಹಿತಿ ನೀಡುವಂತಹವು. ಅದೇ ರೀತಿ ಅವರ ಈ ಸವಿ ಕತೆಗಳ ಬರಹಗಳೂ ಒಂದು ಹೊಸ ಪ್ರಯೋಗ. ಈ ಕತೆಗಳನ್ನು ಕನ್ನಡಿಗರು ಪ್ರೀತಿಯಿಂದ ಓದಿ ಆಸ್ವಾದಿಸುವಂತಾಗಲಿ ಎಂದು ಆಶಿಸುತ್ತೇನೆ. ಈ ಮುನ್ನುಡಿಯ ಮಾತುಗಳನ್ನು ಬರೆಯಲು ನನ್ನನ್ನು ಕೇಳಿದ ಗೆಳೆಯ ಸತ್ಯೇಶ್‌ಗೆ ಸಸ್ನೇಹ ವಂದನೆಗಳು.
ಎಸ್.ಆರ್. ವಿಜಯಶಂಕರ್
’ಚುರು’ಮುರಿ…
ಸುಮಾರು ೨೦೦೯ರಲ್ಲಿ ನೀಳ್ಗತೆಗಳನ್ನು ಬರೆವ ಮನಸ್ಸಾಯಿತು. ನನ್ನ ಬರವಣಿಗೆಯೆಲ್ಲ ಆಗ ನಡೆಯುತ್ತಿದ್ದದ್ದು ವಿಮಾನ ನಿಲ್ದಾಣಗಳಲ್ಲಿ. ಒಂದು ವಿಮಾನದಿಂದ ಇನ್ನೊಂದು ವಿಮಾನದ ಅಂತರದ ಎರಡೋ ಮೂರೋ ತಾಸುಗಳ ಅವಧಿಯಲ್ಲಿ ನನ್ನ ಬರವಣಿಗೆ. ಹೀಗೆಯೇ ಆರೇಳು ನೀಳ್ಗತೆಗಳನ್ನು ಬರೆದೆ. ಆದರೆ, ಆ ಬರವಣಿಗೆಗೆ ಬೇಕಾದ ಸಮಯ ನನಗೆ ಯಾವಾಗಲೂ ಸಿಗುತ್ತಿರಲಿಲ್ಲ. ಹಾಗೊಂದು ದಿನ, ಇನ್ನೂ ನೆನಪಿದೆ- ದಿನಾಂಕ ೧೧.೦೬.೨೦೦೯ರಂದು ಬ್ರೆಜಿಲ್ನಿಂದ ಹಿಂತಿರುಗುತ್ತಿದ್ದೆ. ದುಬೈನ ವಿಮಾನ ನಿಲ್ದಾಣದಲ್ಲಿ ಕಾಫೀ ಹೀರುತ್ತ ಕುಳಿತಿದ್ದಾಗ ಅಲ್ಲಿಯೇ ಮೇಜಿನ ಮೇಲಿದ್ದ ಟಿಷ್ಯೂ ಪೇಪರಿನಲ್ಲಿ ನೀಳ್ಗತೆಗೆಂದು ಯೋಚಿಸಿದ್ದ ವಸ್ತುವೊಂದನ್ನು ಬಳಸಿ ಕತೆ ಬರೆದಿದ್ದೆ. ಆ ಕತೆ ಆ ಪುಟ್ಟ ಟಿಷ್ಯೂ ಪೇಪರಿನಲ್ಲೇ ಮುಕ್ತಾಯ ಗೊಂಡಾಗ ನನ್ನ ಮನಸ್ಸಿನಲ್ಲಿ ಹುಟ್ಟಿದ್ದೇ ಈ ಸಂಕಲನದ ಕಿರುಕತೆಗಳು(ಅದೇ ಟಿಷ್ಯೂ ಪೇಪರಿನ ಕತೆಯ ಭಾಗ ಈ ಪುಸ್ತಕಕ್ಕೆ ಮುಖಪುಟವಾಗಿದೆ!). ಆ ವರ್ಷವೆಲ್ಲ ನಾನು ನೀಳ್ಗತೆಗೆಂದು ಇಟ್ಟುಕೊಂಡಿದ್ದ ಎಲ್ಲ ಕಥಾವಸ್ತುಗಳೂ ಪುಟ್ಟ ಪುಟ್ಟ ಕತೆಗಳಾಗಿ ಮಾರ್ಪಾಟಾದವು. ಇವುಗಳೆಲ್ಲವನ್ನೂ ಹಾಗೆಯೇ ಬರೆದು ಹಾಗೆಯೇ ಒಂದೆಡೆ ಇಟ್ಟು ಮರೆತೂಬಿಟ್ಟೆ. ಇವೆಲ್ಲ ಈಗ ೨೦೧೮ರಲ್ಲಿ ಪುಸ್ತಕದ ರೂಪದಲ್ಲಿ ಪ್ರಕಟಗೊಳ್ಳುತ್ತಿರುವುದು ನನಗೆ ಸಂತಸ ತಂದಿದೆ.
ನೀಳ್ಗತೆಗಳನ್ನು ಬರೆಯುವುದು ಒಂದು ಶಿಸ್ತಿನ ಕೆಲಸ. ಅದಕ್ಕೆ ವಿಧವಿಧ ಸನ್ನಿವೇಶಗಳನ್ನು ಹಾಗೂ ಪಾತ್ರಗಳನ್ನು ಸೃಷ್ಟಿಸಬೇಕಾದ ಅಗಾಧ ಕಲ್ಪನೆ ಅಗತ್ಯ. ಕತೆಯ ಉದ್ದಕ್ಕೂ ಎಲ್ಲೂ ಹಳಿ ತಪ್ಪದ ಕಥನ ವೈಖರಿ ಮುಖ್ಯ. ಆದರೆ, ಕಿರುಕತೆಗಳ ಬರವಣಿಗೆ ಇದಕ್ಕೆ ವಿಭಿನ್ನವಾದುದು. ಏಳೆಂಟು ಪುಟಗಳ ವಸ್ತುವೊಂದನ್ನು ಹಾಗೂ ಅದರ ಎಲ್ಲ ಸನ್ನಿವೇಶ, ಪಾತ್ರಗಳನ್ನು ಒಂದೇ ಒಂದು ಪುಟದಲ್ಲಿ ಭಟ್ಟಿ ಇಳಿಸಿ, ಕತೆಯ ಸಮಗ್ರತೆಯನ್ನು ಸಂಕ್ಷಿಪ್ತವಾಗಿಸಬಲ್ಲ ಕಥನಶೈಲಿ, ಮೇಲ್ನೋಟಕ್ಕೆ ಸುಲಭ ಎನ್ನಿಸಿದರೂ ಅದೊಂದು ಸವಾಲು. ಹಾಗಾಗಿ ಆನಂದದಾಯಕ ಕೂಡ. ಇದು ನನ್ನ ವೈಯಕ್ತಿಕ ಅನುಭವ.
ಇಲ್ಲಿಯ ಕತೆಗಳಲ್ಲಿ ಬಳಸುವ ಪದಗಳು ಕಡಿಮೆ ಇರಬೇಕು. ಆದರೆ, ಅವು ತಮ್ಮ ಧ್ವನಿಯನ್ನೂ ಮೀರಿದ ಅರ್ಥ ತರಬೇಕು. ವಸ್ತು ಸಮಗ್ರ ವಾಗಿರುತ್ತಲೇ ಕತೆ ಒಂದು ಪುಟಕ್ಕೆ ಮೀರಬಾರದು. ಪ್ರತಿಯೊಂದು ಕತೆಯೂ ಕಡೆಯಲ್ಲಿ ಓದುಗನನ್ನು ಸ್ವಲ್ಪವಾದರೂ ಚಿಂತನೆಗೊಡ್ಡಬೇಕು. ಇವೆಲ್ಲವೂ ಈ ಕತೆಗಳನ್ನು ಬರೆಯುವಾಗ ನನಗೆ ನಾನೇ ಹಾಕಿಕೊಂಡ ನಿರ್ಬಂಧನೆಗಳು. ಈ ಚೌಕಟ್ಟಿನಲ್ಲಿ ಬರೆಯುವಾಗ ನನಗಂತೂ ಅತ್ಯಂತ ಸಂತೋಷವಾಗಿದೆ. ಅದೇ ಅನುಭವ ಓದುವ ತಮಗೂ ಉಂಟಾದರೆ, ಬರೆದದ್ದು ಸಾರ್ಥಕ!
ಒಂದು ಪುಟದೊಳಗೆ ಮುಗಿವ ಕತೆಗಳಾದ್ದರಿಂದ ಈ ಪುಸ್ತಕಕ್ಕೆ “ಪುಟಪಾಕ” ಎಂದು ನಾಮಕರಣ ಮಾಡಿದೆ. ಈ ಕತೆಗಳ ವಸ್ತು ಓದುಗನನ್ನು ಒಂದಿಷ್ಟಾದರೂ ಚಿಂತನೆಗೊಡ್ಡಬೇಕು ಎಂಬುದು ನನ್ನ ಆಶಯವಾಗಿತ್ತು. ಈ ಕತೆಗಳನ್ನು ಓದಿದ ಆತ್ಮೀಯ ಸ್ನೇಹಿತೆ ಹಾಗೂ ನನ್ನ ಆಧ್ಯಾತ್ಮ ಚಿಂತನೆಯಲ್ಲಿ ಮಾರ್ಗದರ್ಶಿಯೂ ಆಗಿರುವ ವೀಣಾ ಬನ್ನಂಜೆಯವರು ಇವುಗಳಿಗೆ “ಚುರು”ಕತೆಗಳು ಎಂಬ ಒಂದು ಹೊಸ ಆಯಾಮ ಕಟ್ಟಿ ಕೊಟ್ಟಿದ್ದಾರೆ. ಚುರುಕಾಗಿ ಸಾಗುವ, ಚುರುಕಾಗಿ ಬೀಗುವ ಹಾಗೂ ಚುರುಕಾಗಿ ಮುಗಿಯುವ ಕತೆಗಳಿವು ಎಂಬ ಕಾರಣಕ್ಕೆ ಅವರು ಈ ನವೀನ ಪದ ಪ್ರಯೋಗವನ್ನು ತಿಳಿಸಿದ್ದಾರೆ ಎಂದು ನಂಬಿದ್ದೇನೆ. ಅವರಿಗೆ ನಾನು ಆಭಾರಿಯಾಗಿದ್ದೇನೆ. ಒಟ್ಟಾರೆ ಮೇಲಿನ ಮೂರೂ ಕಾರಣಗಳಿಂದಾಗಿ ಈ ಸಂಕಲನ: “ಪುಟಪಾಕ-ಚಿಂತನೆಗೊಡ್ಡುವ “ಚುರು”ಕತೆಗಳು ಎಂದಾಗಿದೆ.
ಶ್ರೀಯುತರಾದ ಎಸ್.ಆರ್. ವಿಜಯಶಂಕರ್ ಅವರು ಕನ್ನಡನಾಡಿನ ಪ್ರಬುದ್ಧ ಲೇಖಕರು ಹಾಗೂ ವಿಮರ್ಶಕರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದರೂ ಕನ್ನಡ ಭಾಷೆಯನ್ನು ಆಳವಾಗಿ ಪ್ರೀತಿಸಿದವರು. ವಿಸ್ತರದಲ್ಲಿ ಓದಿಕೊಂಡವರು. ಗಹನವಾಗಿ ತಿಳಿದುಕೊಂಡವರು ಹಾಗೂ ಹಿರಿಯರು. ಅವರು ನನ್ನ ಈ “ಚುರು” ಕತೆಗಳನ್ನು ಓದಿ, ಅತ್ಯಂತ ಸ್ನೇಹಭಾವದೊಂದಿಗೆ ಚುರುಕಾದ ಮುನ್ನುಡಿ ಬರೆದುಕೊಟ್ಟಿದ್ದಾರೆ. ನನ್ನ ಬಗ್ಗೆ ಅವರು ಆಡಿರುವ ಸವಿನುಡಿಗಳಿಗೆ ನನ್ನ ಮನದಾಳದ ಕೃತಜ್ಞತೆ ಗಳನ್ನು ಅವರಿಗೆ ಅತ್ಯಂತ ವಿನಮ್ರವಾಗಿ ಅರ್ಪಿಸುತ್ತಿದ್ದೇನೆ.
ಈ ಪುಸ್ತಕವನ್ನು ಅಂದವಾಗಿ ಮುದ್ರಿಸಿ ಹೊರತರುತ್ತಿರುವ ಕಷ್ಟದ ಕೆಲಸವನ್ನು ಚೆಂದದಲ್ಲಿ ಮಾಡಿರುವವರು ಹೊಸಪೇಟೆಯ ಯಾಜಿ ಪ್ರಕಾಶನದ, ನಾ ಕಂಡಿರುವ ಆದರ್ಶ ದಂಪತಿಗಳಲ್ಲಿ ಒಬ್ಬರಾದ, ಗಣೇಶ್ ಯಾಜಿ ಮತ್ತು ಸವಿತಾ ಯಾಜಿ ಅವರು. ಈ ಪುಸ್ತಕದ ಪ್ರಕಾಶನದ ವತಿಯಿಂದ ಪರಸ್ಪರ ಭೇಟಿಯಾದರೂ, ಈಗವರು ನನಗೆ ಅತ್ಯಂತ ಆತ್ಮೀಯರಾದ ಸ್ನೇಹಿತರಾಗಿರುವುದು ನನ್ನ ಸುಕೃತ. ಅವರಿಗೆ ನನ್ನ ಅಂತರಾಳದ ಧನ್ಯವಾದಗಳು.
ಈ ನನ್ನ ಹೊತ್ತಿಗೆಯನ್ನು ನನ್ನ ಪ್ರೀತಿಯ ಅಕ್ಕ, ಉಷಳಿಗೆ, ಅಕ್ಕರೆಯಿಂದ ಅರ್ಪಿಸುತ್ತಿದ್ದೇನೆ. ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲಿ ಕತೆಗಳೆಂದರೆ ಅವಳಿಗೆ ಬಲು ಇಷ್ಟ. ಹಾಗಾಗಿ ಈ ಹೊತ್ತಿನಲ್ಲಿ ಅವಳು ನನಗೆ ವಿಶೇಷವಾಗಿ ನೆನಪಾದದ್ದು ಸೋಜಿಗವೇನೂ ಅಲ್ಲ.
ನನ್ನ ಎಲ್ಲ ಪುಸ್ತಕಗಳನ್ನು ಓದಿ, ನನ್ನ ತಪ್ಪುಗಳನ್ನು ತಿದ್ದುತ್ತಲೇ ಸರಿ ತೋರಿದ್ದನ್ನು ಹೊಗಳಿ ಬೆನ್ನು ತಟ್ಟುವ ಎಲ್ಲ ಓದುಗಮಿತ್ರರಿಗೆ, ಸ್ನೇಹಿತರಿಗೆ, ಸಾಹಿತ್ಯ ಕ್ಷೇತ್ರದ ಹಿರಿಯ ಕಿರಿಯ ಸಹ ಲೇಖಕರಿಗೆ ನನ್ನ ಆದರದ ಪ್ರಣಾಮಗಳು.
ನನ್ನ ಪ್ರತಿ ಪುಸ್ತಕದ ಲೇಖಕರ ಮಾತಿನ ಈ ಮಜಲಿನಲ್ಲಿ, ನಾನು ನನ್ನ ಪ್ರೀತಿಯ ಅಣ್ಣನನ್ನು(ನನ್ನ ತಂದೆಯವರಾದ ದಿ|| ಬಿ.ಎಸ್. ನಾರಾಯಣ ಸ್ವಾಮಿ ಅವರನ್ನು) ಸ್ಮರಿಸುವುದು ವಾಡಿಕೆ…
ಅಣ್ಣ,
ನನ್ನನಗಲಿ
ಇಪ್ಪತ್ತೆಂಟು ವರುಷ…
ನೀನೆಲ್ಲಿರುವೆ? ಯಾರೊಳಗೆ??
ನಾ ಕಾಣೆ
ಎಂದರೆ ತಪ್ಪಾದೀತು.
ನೀನಿಲ್ಲೇ ಇರುವೆ, ನನ್ನೊಳಗೆ
ನನ್ನಾಣೆ
ಎಂದರೆ ಒಪ್ಪಾದೀತು.
ಎಂದಿನಂತೆ ಅವನ ಸವಿಯಾದ “ಚುರು” ನೆನಪಿನಲ್ಲೇ ನಿಮ್ಮನ್ನು ಬೀಳ್ಗೊಡುತ್ತಿದ್ದೇನೆ…
ಇಂತಿ ನಿಮ್ಮವನೇ ಆದ
ಸತ್ಯೇಶ್ ಎನ್. ಬೆಳ್ಳೂರ್
ಪರಿವಿಡಿ
ಸವಿನುಡಿ / ೭
ನೀತಿಬೋಧನೆಯ ಚುರುಕತೆಗಳು / ೧೦
ಚುರುಮುರಿ / ೧೪
೧. ವಿಕ್ಟರಿ! / ೧
೨. ದಕ್ಕಿದ ಸುಖವಾ? ಕಳೆದುಕೊಂಡ ಭಾವವಾ? / ೨
೩. ಅಗೋಚರ! / ೪
೪. ಹೀಗೇಕೆ? / ೫
೫. ಮೂಲ? / ೬
೬. ಸ್ವಚ್ಛ ಭಾರತ! / ೭
೭. ಓಪನ್ ಶೋ / ೮
೮. ಆಶಾಕಿರಣ / ೧೦
೯. ಮೈಲಿಗೆ? / ೧೧
೧೦. ಜಲಿಯನ್ ವಾಲಾಬಾಗ್! / ೧೩
೧೧. ಸೆಕ್ಸ್? / ೧೪
೧೨. ಅರಿವು / ೧೫
೧೩. ಭಿಕ್ಷುಕ / ೧೭
೧೪. ಹೀಗೊಂದು ಸಂವಾದ! / ೧೮
೧೫. ಇದೊಂದಾಗದು ನೋಡು! / ೨೦
೧೬. SಒS- Sಚಿves ಒಥಿ Souಟ! / ೨೨
೧೭. ಮೇಧ! / ೨೩
೧೮. ಅಂತರ! / ೨೪
೧೯. ಧರ್ಮಸಂಸ್ಥಾಪನಾರ್ಥಾಯ.. / ೨೫
೨೦. ಕೇಳುವ ಪರಿ! / ೨೭
೨೧. ಒಂದು ಸರ್ಕಲ್ ಸುತ್ತ! / ೨೯
೨೨. ಬೆಳ್ಳಗಿರುವುದೆಲ್ಲ… / ೩೧
೨೩. ಅನುಭವಾಮೃತ! / ೩೩
೨೪. ರಹಸ್ಯ! / ೩೫
೨೫. ವಿಧಿ / ೩೭
೨೬. ಕೆಟ್ಟ ಚಾಳಿ / ೩೯
೨೭. ಜಾಯಮಾನ! / ೪೧
೨೮. ಭಕ್ತಿ-ಭಯ! / ೪೨
೨೯. ಒಳಗುಟ್ಟು / ೪೩
೩೦. ಇಷ್ಟೇನ? / ೪೫
೩೧. Well Organised! / ೪೬
೩೨. ಸುಖ? / ೪೮
೩೩. ಹೆಸರಿನಲ್ಲೇನಿದೆ? / ೪೯
೩೪. ಖಾನ್ ಸಾಹೇಬ / ೫೧
೩೫. ಎಂಜಲು ಬೇಡ ಅಂದರೆ… / ೫೩
೩೬. (ಮೂಢ)ನಂಬಿಕೆ! / ೫೫
೩೭. ಆದರ್ಶ / ೫೭
೩೮. ಎಲ್ಲರಂತವನಲ್ಲ ನನ ಗಂಡ! / ೫೯
೩೯. ಬವಣೆ / ೬೧
೪೦. ಆ ಸದ್ದು! / ೬೩
೪೧. ಜಾಣ! / ೬೫
೪೨. ಮುಂದೊಂದು ದಿನ… / ೬೭
೪೩. ಸತ್ಯ-ಮಿಥ್ಯ! / ೬೮
೪೪. ನೆಮ್ಮದಿ! / ೬೯
೪೫. ಬದಲಾವಣೆ / ೭೦
೪೬. ದ್ವಂದ್ವ / ೭೨
೪೭. Generation Gap / ೭೪
೪೮. (ಅ)ಪ್ರಾಮಾಣಿಕ / ೭೬
೪೯. ಬೆಂಗಳೂರಿನ ಕಾಡುಪ್ರಾಣಿಗಳು! / ೭೮
೫೦. ಕಾಗೆ? / ೮೦
೫೧. ವಾಸ್ತವ / ೮೧
೫೨. ಗುಂಡಿ / ೮೨
೫೩. ಕಲಸುಮೇಲೋಗರ / ೮೪
೫೪. ಪೂಜೆ? / ೮೫
೫೫. ಕನ್ನಡಕ / ೮೬
೫೬. ಸುವರ್ಣ ಮಹೋತ್ಸವ / ೮೭
೫೭. ಎಲ್ಲರೊಳಗೊಂದಾಗು… / ೮೮
೫೮. What a chap! / ೯೦
Reviews
There are no reviews yet.