ತೇಜೋಮಯ ಸಂದೇಶ
ಜೈ ಭವಾನಿ ಜೈ ಶಿವಾಜಿ |
ಹರಹರ ಮಹಾದೇವ್ ||
ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಒಂದೆರಡು ಮಾತುಗಳಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮ, ಸಾಹಸ ಎಂದೆಂದಿಗೂ ಅಜರಾಮರ. ಶಿವಾಜಿ ಮಹಾರಾಜರ ಸಂಪೂರ್ಣ ಜೀವನ ಕುರಿತಾದ ಕೃತಿಗಳು ಬಹಳ ವಿರಳ, ಅದರಲ್ಲೂ ಕನ್ನಡದಲ್ಲಿ ಬೆರಳೆಣಿಕೆ ಮಾತ್ರ. ಉಡುಪಿಯ ಗುರುಪ್ರಸಾದ ಭಟ್ ಅವರು ಶಿವಾಜಿಯ ವಿಚಾರಧಾರೆಗಳನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ಕಟ್ಟಿಕೊಡುವ ಕಾರ್ಯ ಮಾಡಿದ್ದಾರೆ. ಗುರುಪ್ರಸಾದ ಭಟ್ ಅವರು ಈ ಕೃತಿಯ ಮೂಲಕ ಶಿವಾಜಿ ಮಹಾರಾಜರ ಹೋರಾಟ ಕೇವಲ ಒಂದು ಸಾಮ್ರಾಜ್ಯದ ಹೋರಾಟವಲ್ಲ, ಅದು ಹಿಂದವೀ ಸ್ವರಾಜ್ಯ ಸ್ಥಾಪನೆಯ ಪುನರುತ್ಥಾನದ ಘಳಿಗೆ ಎಂಬುದನ್ನು ಮನದಟ್ಟಾಗುವಂತೆ ವಿವರಿಸುವ ಪ್ರಯತ್ನ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇವರ ಮತ್ತೊಂದು ಕೃತಿ ಛತ್ರಪತಿ- ನಾ ಕಂಡಂತೆ ಶಿವಾಜಿ’ ಎಂಬ ಕೃತಿಯಲ್ಲಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ವಿವರಿಸಿರುವುದು ಗಮನಾರ್ಹ.
ಪ್ರಸ್ತುತ ದಿನಗಳಲ್ಲಿ ಕೆಲವೊಂದು ಸೋಗಲಾಡಿ ಬುದ್ಧಿಜೀವಿಗಳು ರಾಷ್ಟ್ರಾಭಿಮಾನವನ್ನೇ ವಿವಾದವನ್ನಾಗಿಸಿದ್ದಾರೆ. ಪಾಶ್ಚಿಮಾತ್ಯದ ಸೋಜಿಗೆ ಸಿಲುಕಿ, ಅಲ್ಲಿಯ ಸಂಸ್ಕೃತಿ ಸಂಸ್ಕಾರವನ್ನು ಭಾರತದಲ್ಲಿ ಹೇರಿಕೆ ಮಾಡುವ ಕಾರ್ಯದಲ್ಲಿ ನಿರತರಾಗಿರುವುದು ನಿಜಕ್ಕೂ ಶೋಚನೀಯ. ವಿಪರ್ಯಾಸವೆಂದರೇ ಇಂದು ಯಾವ ಪಾಶ್ಚಿಮಾತ್ಯ ರಾಷ್ಟ್ರಗಳ ಒಲವಿಗೆ ಇಂತಹ ಬುದ್ಧಿ ಜೀವಿಗಳು ಹಪಹಪಿಸುತ್ತಿದ್ದಾರೋ ಆ ರಾಷ್ಟ್ರಗಳು ಕಣ್ಣು ಬಿಡುವ ಮೊದಲೇ ಭಾರತದೇಶವು ಸುಸಂಸ್ಕೃತಿಯ ಬೀಡಾಗಿತ್ತು. ಅಲ್ಲಿನ ನಾಗರೀಕತೆಯ ಉಗಮಕ್ಕೂ ಮುನ್ನ ಭಾರತದಲ್ಲಿ ನಳಂದ ಮತ್ತು ತಕ್ಷಶಿಲಾದಂತಹ ಜ್ಞಾನ ಭಂಡಾರಗಳು ಉತ್ತುಂಗದಲ್ಲಿದ್ದವು. ಅಂದಿನಿಂದಲೂ ಭಾರತ ಗುರುತಿಸಿಕೊಂಡಿರುವುದು ಹಿಂದೂಸ್ಥಾನ್ ಎಂಬ ಹೆಸರಿನಿಂದ. ಇಂತಹ ಹಿಂದೂಸ್ಥಾನದ ಮೇಲೆ ನಡೆದ ದಾಳಿಗಳು ಬೇರೆ ಯಾವುದೇ ದೇಶದ ಮೇಲೆ ನಡೆದಿದ್ದರೆ ಇಷ್ಟು ಹೊತ್ತಿಗೆ ಅದು ನಾಮಾವಶೇಷವಾಗಿ ಹೋಗುತ್ತಿತ್ತು. ಪರಕೀಯರ ದಾಳಿಗೆ ಸಿಲುಕಿ ಇಂದು ಅದೆಷ್ಟೋ ಸಂಸ್ಕೃತಿಗಳು ಇತಿಹಾಸ ಪುಟಗಳಲ್ಲಿ ಅವಿತು ಕುಳಿತಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಹಿಂದೂಸ್ಥಾನ ಮಾತ್ರ ಪ್ರತಿ ಬಾರಿಯ ದಾಳಿಯ ಅನಂತರ ಮತ್ತದೇ ಗಾಂಭೀರ್ಯದಿಂದ ಎದ್ದು ತಲೆಯೆತ್ತಿ ನಿಂತಿದೆ. ಅದಕ್ಕೆ ಕಾರಣ ಈ ಮಣ್ಣಿನಲ್ಲಿ ವಿಪುಲವಾಗಿರುವ ಕ್ಷಾತ್ರತ್ವ. ಅದರ ನಿದರ್ಶನ ಎಂಬಂತೆ ಪರದೇಶದ ಆಕ್ರಮಣಕಾರಿಗಳ ದಾಳಿಯಿಂದ ನಲುಗಿಹೋಗಿದ್ದ ಹಿಂದೂಸ್ಥಾನ ವನ್ನು ಒಗ್ಗೂಡಿಸಲು ಅವತಾರ ತಾಳಿದವರೇ ಛತ್ರಪತಿ ಶಿವಾಜಿ ಮಹಾರಾಜ್!
ಛತ್ರಪತಿ ಶಿವಾಜಿ ಮಹಾರಾಜರನ್ನು ವೈಭವೀಕರಿಸುವ ಅವಶ್ಯಕತೆ ಇಲ್ಲ, ಅವರ ಜೀವನವೇ ಒಂದು ವೈಭವ. ಹಾಗಾಗಿಯೇ ಶಿವಾಜಿ ಮಹಾರಾಜರ ಯುಗಾಂತ್ಯವಾಗಿ ಸುಮಾರು ನಾಲ್ಕು ಶತಮಾನಗಳೇ ಕಳೆದರೂ ಅವರ ಕ್ಷಾತ್ರತ್ವ, ಅವರ ಹೆಸರಿಗಿರುವ ತೇಜಸ್ಸು, ಹೊಮ್ಮುವ ಸ್ಫೂರ್ತಿ ಕಿಂಚಿತ್ತೂ ಕ್ಷೀಣಿಸಿಲ್ಲ. ಶಿವಾಜಿ ಮಹಾರಾಜರ ಜೀವನ ಚರಿತ್ರೆ ಕೇವಲ ಒಬ್ಬ ರಾಜನ ಅಥವಾ ಒಂದು ಸಾಮ್ರಾಜ್ಯದ ಕಥೆಯಲ್ಲ, ಅದು ದೇಶಭಕ್ತಿಯ, ಸ್ವಾತಂತ್ರ್ಯದ ಪರಿಕಲ್ಪನೆಯ ಹುಟ್ಟು. ಛತ್ರಪತಿ ಎನ್ನುವ ಹೆಸರು ಕೇಳಿದರೆ ಮೈ ರೋಮಾಂಚನವಾಗಿ ಬಿಡುತ್ತದೆ! ಸ್ವರಾಜ್ಯದ ಕನಸನ್ನು ಸಾವಿರಾರು ಜನ ಕಂಡರು ನಿಜವಾದ ವೀರರು ಮಾತ್ರ ಅದನ್ನು ಸಾಧಿಸುತ್ತಾರೆ ಎಂಬುದಕ್ಕೆ ಶಿವಾಜಿ ಮಹಾರಾಜರೇ ಸಾಕ್ಷಿ.
ದೆಹಲಿಯಲ್ಲಿ ಮೊಘಲರು, ದಕ್ಷಿಣದಲ್ಲಿ ಬಿಜಾಪುರದ ಸುಲ್ತಾನ ಅದಿಲಶಾಹಿಗಳು ಸೇರಿದಂತೆ ಅನೇಕ ಸಣ್ಣಪುಟ್ಟ ಮುಸ್ಲಿಮ್ ದಾಳಿಕೋರರು ಸಂಪೂರ್ಣವಾಗಿ ಹಿಂದೂಸ್ಥಾನವನ್ನೇ ಆಕ್ರಮಿಸಿ ಕೊಂಡಿದ್ದ ಸಂದರ್ಭದಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪನೆ ಇರಲಿ, ಸಾಮಂತ ರಾಜನಾಗಿಯೂ ಆಳ್ವಿಕೆ ನಡೆಸಲೂ ಸಾಧ್ಯವಿರಲಿಲ್ಲ. ಸುತ್ತಲೂ ಶತ್ರುಗಳನ್ನು ಕಟ್ಟಿಕೊಂಡು, ಸಾಕಷ್ಟು ಸೈನ್ಯ ಬಲವೂ ಇಲ್ಲದ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯವನ್ನು ಕಟ್ಟಿ, ಮೊಘಲರೇ ತಲೆ ಬಾಗುವಂತೆ ಮಾಡಿದ್ದು ನೈಜ ಇತಿಹಾಸ. ಪರಕೀಯರ ಆಕ್ರಮಣ ತಡೆಗಟ್ಟಿ ಅಖಂಡ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಶಿವಾಜಿ ಮಹಾರಾಜರು ಹಿಂದೂಗಳ ಪಾಲಿನ ಸ್ವಾಭಿಮಾನದ ಸಂಕೇತ.
ಅಫ್ಜಲ್ ಖಾನ್‌ನ ಕುತಂತ್ರ ತಿಳಿದಿದ್ದರೂ, ಆತನನ್ನು ತಾವು ರಚಿಸಿದ ವ್ಯೂಹದಲ್ಲಿ ಸಿಲುಕಿಸಿ, ತಮ್ಮ ವ್ಯಾಘ್ರನಖದಿಂದ ಸಂಹಾರ ಮಾಡಿದ ಶಿವಾಜಿ ಮಹಾರಾಜರ ಧೈರ್ಯ, ಶಾಹಿಸ್ತಾಖಾನ್‌ನ ಅಂತಃಪುರಕ್ಕೆ ನುಗ್ಗಿ, ಆತನ ಕೈ ಬೆರಳುಗಳನ್ನು ಕತ್ತರಿಸಿ, ಆತನನ್ನು ಅಲ್ಲಿಂದ ಓಡಿಸಿದ ಸಾಹಸ, ಔರಂಗಜೇಬನು ಶಿವಾಜಿಯನ್ನು ಬಂಧನದಲ್ಲಿರಿಸಿದ್ದಾಗ ಕಾರಾಗೃಹದಿಂದ ತಪ್ಪಿಸಿಕೊಂಡು ಬಂದ ಶಿವಾಜಿ ಮಹಾರಾಜರ ಬುದ್ಧಿವಂತಿಕೆ, ಇಂತಹ ನೂರಾರು ಘಟನೆಗಳನ್ನು ಈ ಕೃತಿಯಲ್ಲಿ ಗುರುಪ್ರಸಾದ ಭಟ್ ಅವರು ರಸವತ್ತಾಗಿ ವಿವರಿಸಿದ್ದಾರೆ. ಹಿಂದವೀ ಸ್ವರಾಜ್ಯ ಕೇವಲ ಶಿವಾಜಿಯ ಸಾಮ್ರಾಜ್ಯವಾಗಿರಲಿಲ್ಲ, ಅದು ಒಂದು ಧರ್ಮದ ಯುದ್ಧ, ಒಂದು ಸಂಸ್ಕೃತಿಯ ಅಳಿವು ಉಳಿವಿನ ಹೋರಾಟ. ಅವರ ಖಡ್ಗದಿಂದ ಹರಿಸಿದ ರಕ್ತ ಹಿಂದೂ ಸಾಮ್ರಾಜ್ಯದ ಪುನರುತ್ಥಾನದ ತಿಲಕ. ಇದಕ್ಕೆ ಕವಿ ಪರಮಾನಂದರ ಮಾತುಗಳೇ ಸಾಕ್ಷಿ.
ಶಿವಾಜಿಯ ವ್ಯಕ್ತಿತ್ವಕ್ಕೆ ಮಾರುಹೋಗಿ ದೆಹಲಿ ಬಾದ್‌ಷಾನ ಆಶ್ರಯವನ್ನು ಧಿಕ್ಕರಿಸಿ ದಕ್ಷಿಣಕ್ಕೆ ಬಂದು ಶಿವಾಜಿ ಮಹಾರಾಜರ ಆಶ್ರಯ ಸೇರಿದ ಕವಿ ಪರಮಾನಂದ ಸಂಸ್ಕೃತದಲ್ಲಿ ಶಿವಾಜಿ ಮಹಾರಾಜನ ಜೀವನ ಚರಿತ್ರೆ ಬರೆದಿದ್ದಾರೆ. ಶಿವ ಭಾರತ ಎಂದೇ ಖ್ಯಾತವಾಗಿರುವ ಸಂಸ್ಕೃತ ಕಾವ್ಯ. ಹಾಗೆಯೆ, ಅವಧ ರಾಜ್ಯದಿಂದ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕೆ ಬಂದು ಸೇರಿದ ಪ್ರಖ್ಯಾತ ವೀರರಸ ಕವಿಭೂಷಣನು ಕಾಶಿ ಕೀ ಕಲಾ ಜಾತಿ.. ಮಥುರಾ ಮಸ್ಜೀದ್ ಹೋತಾ.. ಅಗರ್ ಶಿವಾಜಿನಾ ಹೋತೆ ತೋ ಸುನ್ನತ್ ಹೋತಿ ಸಬ್ ಕೀ” ಎಂದು ಪ್ರಸ್ತಾಪಿಸಿದ್ದಾರೆ. ಅಂದರೆ ಶಿವಾಜಿ ಮಹಾರಾಜರು ಇಲ್ಲದಿದ್ದಲ್ಲಿ ಕಾಶಿಯ ಕಲೆ ಹೋಗುತ್ತಿತ್ತು. ಮಥುರೆಯು ಮಸೀದಿ ಆಗುತ್ತಿತ್ತು, ನಮ್ಮ ಮೂಲ ಸಂಸ್ಕೃತಿ ಮರೆತು ಇಸ್ಲಾಮೀಯ ಸಂಸ್ಕಾರ ಅಳವಡಿಕೆಯಾಗುತ್ತಿತ್ತು ಎಂದು ಹೇಳಿದ್ದಾರೆ.
ಇಂತಹ ಶಿವಾಜಿ ಮಹಾರಾಜರಿಲ್ಲದ ಭಾರತದ ಇತಿಹಾಸ ಅಪೂರ್ಣ. ನಿರ್ಭೀತಿಯ ಇನ್ನೊಂದು ಹೆಸರೇ ಶಿವಾಜಿ. ಸಾವನ್ನು ಪ್ರೀತಿಸಿದವನು ಯಾರಿಗೂ ಹೆದರುವುದಿಲ್ಲ’ ಎಂಬಂತೆ ಬದುಕಿದ್ದ ಶಿವಾಜಿ ಮಹಾರಾಜರ ಕಣ ಕಣದಲ್ಲೂ ಕ್ಷಾತ್ರತ್ವವೇ ತುಂಬಿತ್ತು. ಭಾರತದಲ್ಲಿ ಕ್ಷಾತ್ರತ್ವವು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಆದರೆ ಭಾರತ ಒಂದು ಶಾಂತಿಪ್ರಿಯ ದೇಶವೆಂದು ಹೇಳಿ ಕ್ಷಾತ್ರತ್ವವನ್ನು ಕಡೆಗಣನೆ ಮಾಡಲಾಗುತ್ತಿದೆ. ಶಿವಾಜಿ ಮಹಾರಾಜರಂತಹ ವೀರರ ಕಥೆಗಳನ್ನು ಮುಚ್ಚಿಟ್ಟು, ಭಾರತದ ಮೇಲಿನ ದಾಳಿಗಳನ್ನೇ ವೈಭವೀಕರಿಸಿ ಇಂದಿನ ಯುವಜನತೆಯಲ್ಲಿ ಗುಲಾಮಿ ಮನಃಸ್ಥಿತಿಯನ್ನು ತುಂಬಲಾಗುತ್ತಿದೆ. ಸ್ವದೇಶಿ ರಾಜ್ಯ ನಿರ್ಮಾಣ ಕ್ಕಾಗಿ, ಧರ್ಮದ ಉಳಿವಿಗಾಗಿ ಅವತಾರ ಪುರುಷನಂತೆ ಎದ್ದು ಬಂದ ಶಿವಾಜಿಯ ಇತಿಹಾಸ ತಿಳಿಸುವ ಇಂತಹ ಪುಸ್ತಕಗಳು ಸಮಾಜಕ್ಕೆ ಅತ್ಯವಶ್ಯಕ. ಶಿವಾಜಿಯನ್ನು ಸಂಪೂರ್ಣವಾಗಿ ಅರಿತುಕೊಂಡರೆ ನಮ್ಮೊಳಗೂ ಒಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ. ಆ ನಾಯಕ ಶಿವಾಜಿಯಂತೆ ಅಖಂಡ ಭಾರತದ ಕನಸನ್ನ ನನಸಾಗಿಸುವ ಹಿಂದವೀ ಸ್ವರಾಜ್ಯ ಸ್ಥಾಪನೆಗೆ ಅಣಿಯಾಗುತ್ತಾನೆ. ಹೀಗಾಗಿ ಶಿವಾಜಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ನೆರವಾಗುವಂತೆ ಮಾಡಿದ ಗುರುಪ್ರಸಾದ್ ಭಟ್ ಅವರ ಈ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು.
ಎಲ್ಲರಿಗೂ ಶುಭವಾಗಲಿ!
ಶ್ರೀ ತೇಜಸ್ವಿ ಸೂರ್ಯ
ಮಾನ್ಯ ಸಂಸತ್ ಸದಸ್ಯರು
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಡಾ. ರಾಜ್‌ಕುಮಾರ್ ನಟಿಸಿರುವ ಹತ್ತು ಸರ್ವ ಶ್ರೇಷ್ಟ ಚಿತ್ರಗಳಾವುವು? ರಾಹುಲ್ ದ್ರಾವಿಡ್‌ನ ಹತ್ತು ಅತ್ಯುತ್ತಮ ಇನ್ನಿಂಗ್ಸ್ ಯಾವುವು? ಈ ಪರಿಯ ವಿಶ್ಲೇಷಣೆ ಚಲನಚಿತ್ರ ಹಾಗೂ ಕ್ರೀಡಾರಂಗಗಳಲ್ಲಿ ಸರ್ವೇಸಾಮಾನ್ಯ. ಆದರೆ ಇತಿಹಾಸದ ಓದಿನಲ್ಲಿ ಅಂತಹ ಅದ್ಭುತ ಸಂಶೋಧನಾತ್ಮಕ ಕೆಲಸವನ್ನು ನನ್ನ ಆತ್ಮೀಯ ಸ್ನೇಹಿತರಾದ ಗುರುಪ್ರಸಾದ್ ಭಟ್ ಅವರು ಈ ಕೃತಿಯಲ್ಲಿ ಮಾಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ೧೬೪೫ರಿಂದ ೧೬೮೦ರವರೆಗೆ ಕಾದಾಡಿದ ಯುದ್ಧಗಳ ಸಂಖ್ಯೆ, ಸುಮಾರು ೨೩೧. ಅವರ ಕಡೆಯ ಯುದ್ಧದ ಜೊತೆ ಇನ್ನೂ ಹತ್ತು ನಿರ್ಣಾಯಕ ಯುದ್ಧಗಳನ್ನು ಅವುಗಳಲ್ಲಿ ಆರಿಸಿಕೊಂಡು, ಅತ್ಯಂತ ತಾರ್ಕಿಕವಾಗಿ ಹಾಗೂ ಸತ್ಯಾಧಾರಿತ ಮಾಹಿತಿಗಳ ಹಿನ್ನೆಲೆಯಲ್ಲಿ ಭಟ್ ನಮಗಿಲ್ಲಿ ನೀಡಿದ್ದಾರೆ. ಇತಿಹಾಸವನ್ನು ಹೀಗೂ ಅರ್ಥೈಸಿಕೊಂಡರೆ ಎಷ್ಟು ಚೆನ್ನ ಎಂದು ಇದನ್ನೋದುವ ನಿಮಗೆ ಅನ್ನಿಸದೇ ಇರದು! ಭಟ್ ಆರಿಸಿಕೊಂಡಿರುವ ಹತ್ತು ನಿರ್ಣಾಯಕ ಯುದ್ಧಗಳಲ್ಲಿ ಎರಡರಲ್ಲಿ ಶಿವಾಜಿಗೆ ತೀವ್ರ ಸೋಲುಂಟಾಗುತ್ತದೆ. ಗೆಲುವಿನ ಇನ್ನೆಂಟು ಯುದ್ಧಗಳ ಜೊತೆ ಸೋಲಿನ ಇವೆರಡನ್ನೂ ಒಟ್ಟು ಮಾಡಿರುವ ಅಂಶ, ನಿರ್ಣಾಯಕ ಎಂಬ ಪದಕ್ಕೆ ಭಟ್ ನೀಡಿರುವ ಅತ್ಯಂತ ವಸ್ತು ನಿಷ್ಠವಾದ ಹಾಗೂ ಗೌರವದ ಸಂಕೇತ.
ಯುದ್ಧ ನಡೆದದ್ದು ಏಕೆ? ಹೇಗೆ? ಬಳಸಿದ ಯುದ್ಧತಂತ್ರಗಳಾವುವು? ಫಲಾಫಲಗಳೆಂತು? ಗೆಲುವಿನಿಂದ ಗಳಿಸಿದ್ದೇನು? ಸೋಲಿನಿಂದ ಕಲಿತ ದ್ದೇನು? -ಹೀಗೆ ಈ ಕೃತಿ ಕೆಲವೇ ಕೆಲವು ನಿರ್ಣಾಯಕ ಯುದ್ಧಗಳ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಒಟ್ಟು ವ್ಯಕ್ತಿತ್ವವನ್ನೇ ಕಟ್ಟಿಕೊಡುತ್ತದೆ. ಈ ನಿಟ್ಟಿನಲ್ಲಿ ಭಟ್ ಅವರ ಸಂಶೋಧನಾ ಪ್ರವೃತ್ತಿ ಹಾಗೂ ಶಿವಾಜಿಯ ಪರನಾದ ಶ್ರದ್ಧೆ-ಅನುಕರಣೀಯ ಹಾಗೂ ಶ್ಲಾಘನೀಯ. ಭರತಮಾತೆಯನ್ನು ಪೂಜಿಸುವ ಎಲ್ಲ ಸಜ್ಜನಬಂಧು ಗಳಿಗೂ ಶಿವಾಜಿಯ ಈ ಕದನಕಥನ ನಿಜಕ್ಕೂ ಪ್ರೇರಣಾದಾಯಕ…
-ಸತ್ಯೇಶ್ ಬೆಳ್ಳೂರ್
ಕವಿಗಳು, ಚಿಂತಕರು ಹಾಗೂ ಮ್ಯಾನೇಜ್‌ಮೆಂಟ್ ಗುರು
ಪರಿವಿಡಿ
ಶಿವಕಲ್ಯಾಣ ರಾಜ / ೫
ಹೇ ಹಿಂದೂ ನೃಸಿಂಹ ಪ್ರಭೋ ಶಿವಾಜಿ ರಾಜಾ / ೬
ಸವಿನುಡಿ / ೭
ತೇಜೋಮಯ ಸಂದೇಶ / ೯
ಕ್ಷಾತ್ರತ್ವದ ವಿಭಿನ್ನ ವ್ಯಾಖ್ಯಾನ / ೧೨
ಪ್ರಸ್ತಾವನೆ ಮತ್ತು ಲೇಖಕರ ಮಾತು / ೧೮
೧. ತೋರಣಗಡ ಯುದ್ಧ ಅಥವಾ ಹಿಂದವೀ ಸ್ವರಾಜ್ಯ ಸ್ಥಾಪನೆಗೆ ತೋರಣ ಕಟ್ಟಿದ ಪ್ರಥಮ ವಿಜಯ / ೪೩
೨. ಪ್ರತಾಪಗಡ ಯುದ್ಧ ಅಥವಾ ಅಫ್ಜಲ್ ಖಾನನ ವಧೆ / ೬೦
೩. ಕೊಲ್ಹಾಪುರ ಸಮರ ಅಥವಾ ರುಸ್ತುಮ್ ಜಮಾನನ ಪಲಾಯನ / ೮೮
೪. ಪಾವನಕಿಂಡ ಸಮರ ಅಥವಾ ಬಾಜೀಪ್ರಭು ದೇಶಪಾಂಡೆಯ ಬಲಿದಾನ / ೯೭
೫. ಚಾಕಣ ಕದನ ಅಥವಾ ಸಾವು ಒಪ್ಪಿಗೆ ಆದರೆ ಆತ್ಮಗೌರವ ಮಾರಲಾರೆ ಫಿರಂಗೋಜಿ ನರ್ಸಾಲಾನ ಗರ್ಜನೆ / ೧೧೩
೬. ಅಂಬರಕಿಂಡ ಕದನ ಅಥವಾ ಬೆಟ್ಟದ ಇಲಿಯು ಆನೆಗಳ ಹಿಂಡನ್ನೇ ಸೋಲಿಸಿದ ವಿಸ್ಮಯ / ೧೨೨
೭. ಬಸ್ರೂರು ನೌಕಾ ಸಮರ ಅಥವಾ ಮೊತ್ತಮೊದಲ ನೌಕಾಸೇನಾ ಯುದ್ಧ ವಿಜಯ / ೧೩೩
೮. ಪುರಂದರ ಯುದ್ಧ ಅಥವಾ ಮಿರ್ಜಾರಾಜೇ ಜಯಸಿಂಹನ ವಚನಬದ್ಧತೆಯ ಅವಿವೇಕ / ೧೪೭
೯. ಸಿಂಹಗಡ ಯುದ್ಧ ಅಥವಾ ಗಡ ಆಲಾ, ಪಣ್ ಸಿಂಹ ಗೆಲಾ’ ಎಂಬ ಶಿವಾಜಿಯ ಆಕ್ರಂದನ / ೧೭೭
೧೦. ವಾಣಿ ದಿಂಡೋರಿ ಯುದ್ಧ ಅಥವಾ ಮೊತ್ತಮೊದಲ ತೆರೆದ ಮೈದಾನದ ಯುದ್ಧ ವಿಜಯ / ೧೮೭
೧೧. ಸಂಗಮ್ನೇರ್ – ಕಟ್ಟಕಡೆಯ ಯುದ್ಧ ಅಥವಾ ದಾರಿ ತಪ್ಪಿದ ಮಗನ ಮರಳುವಿಕೆಯ ಸಂತಸ / ೨೦೮
ಅನುಬಂಧಗಳು
೧. ಉಪಸಂಹಾರ / ೨೨೯
೨. ಹಿಂದವೀ ಸ್ವರಾಜ್ಯದ ಭೂಪಟಗಳು / ೨೩೮
೩. ಕೃಷ್ಣಾಜಿ ಅನಂತ ಸಭಾಸದರು ದಾಖಲಿಸಿದ ಕರ್ಣಾಟಕ ಪ್ರಾಂತದಲ್ಲಿನ ಶಿವಾಜಿ ಮಹಾರಾಜರ ಕೋಟೆಗಳು / ೨೪೬
೪. ಶಿವಾಜಿ ಮಹಾರಾಜರ ಜೀವಿತಾವಧಿಯಲ್ಲಿ ಹಿಂದವೀ ಸ್ವರಾಜ್ಯಕ್ಕಾಗಿ ಹೋರಾಡಿದ ಯುದ್ಧಗಳು (೧೬೪೫-೧೬೮೦) / ೨೫೬
೫. ಆಧಾರ ಗ್ರಂಥಗಳು / ೨೯೨
Reviews
There are no reviews yet.