ಧೀರೋದಾತ್ತೆ, ಕ್ರಾಂತಿಜ್ವಾಲೆ ಸಾವಿತ್ರಿಬಾಯಿ
ಕನ್ನಡದಲ್ಲಿ ಚಾರಿತ್ರಿಕ ಕಾದಂಬರಿಗಳು ವಿರಳವಾಗುತ್ತಿರುವ ಸಂದರ್ಭದಲ್ಲಿ ಡಾ. ಸರಜೂ ಕಾಟ್ಕರ್ ಅವರ ಸಾವಿತ್ರಿಬಾಯಿ ಪ್ರಕಟಗೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಈ ಸಾವಿತ್ರಿಬಾಯಿ ಬೇರೆ ಯಾರೂ ಅಲ್ಲ, ಮಹಾತ್ಮಾ ಫುಲೆ ಅವರ ಮಡದಿ. ಈ ವರೆಗೆ ಮ. ಫುಲೆಯವರ ಜೀವನ-ಕಾರ್ಯದ ಕುರಿತು ಹಲವಾರು ಗ್ರಂಥಗಳು ಮರಾಠಿಯಲ್ಲಿ, ಕನ್ನಡದಲ್ಲಿ ಬಂದಿವೆ. ಆದರೆ ಅವೆಲ್ಲವು ಜೀವನ ಚರಿತ್ರೆಯಾಗಿ ಬಂದಿವೆ. ಕಾದಂಬರಿಯಂತಹ ಸೃಜನಶೀಲ ರೂಪದಲ್ಲಿ ಬಂದಿರುವುದು ತೀರಾ ಅಪರೂಪ. ಅಂಥದೊಂದು ಪ್ರಯತ್ನವನ್ನು ಗೆಳೆಯ ಸರಜೂ ಮಾಡಿರುವುದು ಗಮನಾರ್ಹವಾದ ವಿಷಯ. ಶ್ರೇಷ್ಠ ವಿಭೂತಿಪುರುಷರ ಬಗ್ಗೆ ಬರೆಯುವಾಗ ಸಾಕಷ್ಟು ಚಾರಿತ್ರಿಕ ಪ್ರಸಂಗಗಳು, ದಾಖಲೆಗಳು ಸಿಗುತ್ತವೆ. ಆದರೆ ಅವರ ಪತ್ನಿಯರ ಬಗೆಗೆ ಮಾತ್ರ ನಗಣ್ಯವೆನಿಸುವಷ್ಟು ಮಾಹಿತಿಗಳು ಸಿಗುತ್ತವೆ. ಅಂಥದೇ ಇಕ್ಕಟ್ಟನ್ನು ಸಾವಿತ್ರಿಬಾಯಿಯ ಬಗೆಗೆ ಬರೆಯುವಾಗ ಎದುರಿಸಬೇಕಾಗುತ್ತದೆ. ಸಾವಿತ್ರಿಬಾಯಿ ಯನ್ನು ಮಹಾತ್ಮಾ ಫುಲೆಯವರ ನೆರಳಾಗಿ, ಹಿಂಬಾಲಕಳಾಗಿ, ಅನುಯಾಯಿಯಾಗಿ ಹಲವು ಚರಿತ್ರೆಕಾರರು ಚಿತ್ರಿಸಿರುವುದನ್ನು ಕಾಣುತ್ತೇವೆ. ಸಾವಿತ್ರಿಬಾಯಿಯ ಬಗೆಗೆ ಬರೆಯಲು ಹೊರಟರೂ ಮತ್ತೆ ಮತ್ತೆ ಮಹಾತ್ಮಾ ಫುಲೆಯವರ ಸಾಧನೆ, ವ್ಯಕ್ತಿತ್ವವನ್ನೇ ಬಳಸಿ ಕೊಳ್ಳಬೇಕಾಗುತ್ತದೆ. ಆಗ ಫುಲೆಯವರ ಪ್ರಭಾವಲಯದ ಎದುರಿಗೆ ಸಾವಿತ್ರಿಬಾಯಿ ಮಸಕಾಗಿ ಬಿಡುವ ಬಿಕ್ಕಟ್ಟನ್ನು ಲೇಖಕ ಎದುರಿಸಬೇಕಾಗುತ್ತದೆ. ಫುಲೆಯವರ ಘನವ್ಯಕ್ತಿತ್ವದಿಂದ ಸಾವಿತ್ರಿಬಾಯಿಯನ್ನು ಬೇರ್ಪಡಿಸಿದಾಗ ಮಾತ್ರ ನಿಜವಾದ ಸಾವಿತ್ರಿಬಾಯಿಯ ವ್ಯಕ್ತಿತ್ವವನ್ನು ಕಟ್ಟಿಕೊಡುವುದು ಸಾಧ್ಯ. ಅಂಥ ಸವಾಲನ್ನು ಕಾಟ್ಕರ್ ಸ್ವೀಕರಿಸಿದ್ದು ಮಹತ್ವದ ಸಂಗತಿ. ಹೀಗಾಗಿ ಈ ಕಾದಂಬರಿಯನ್ನು ಶುದ್ಧ ಚಾರಿತ್ರಿಕ ಸಂದರ್ಭವನ್ನು ಬಳಸಿ ಬರೆಯಲಿಲ್ಲ. ಚರಿತ್ರೆ ಮತ್ತು ಕಲ್ಪನೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಹದವಾದ ಸೃಜಶೀಲದ ಪರಿಪಾಕವನ್ನು ನೀಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.
ಚರಿತ್ರೆಯ ಸಾವಿತ್ರಿಬಾಯಿಗೂ ಸರಜೂ ಕಾಟ್ಕರ್ ರೂಪಿಸಿದ ಸಾವಿತ್ರಿಬಾಯಿಗೂ ಸಾಕಷ್ಟು ವ್ಯತ್ಯಾಸವಿದೆ. ಅದರರ್ಥ ಕಾಟ್ಕರ್ ಅವರು ಚರಿತ್ರೆಯನ್ನು ಹೊರತುಪಡಿಸಿ ಬರೆದಿದ್ದಾರೆಂದು ಭಾವಿಸಬೇಕಿಲ್ಲ. ಚರಿತ್ರೆಗೆ ಸೃಜನಶೀಲತೆಯ ಹೊಸರೂಪ ನೀಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಈ ಕೃತಿಯೊಂದು ಸೃಜನಶೀಲ ಕಲಾಕೃತಿಯಾಗಿ ಹೊರ ಹೊಮ್ಮುವುದು ಸಾಧ್ಯವಾಗಿದೆ. ಅಪ್ಪಟ ಚರಿತ್ರಾತ್ಮಕ ಕೃತಿಗಳು ಎಷ್ಟೋ ಸಲ ಪೇಲವವಾಗಿ ಬಿಡುವ ಅಪಾಯವಿರುತ್ತದೆ. ಅಂಥ ಅಪಾಯದಿಂದ ಕಾಟ್ಕರ್ ಅವರ ಸಾವಿತ್ರಿಬಾಯಿ ಪಾರಾಗಿದ್ದೇ ಇವರ ಶಕ್ತಿಸ್ಥಾನ. ಚರಿತ್ರೆಯಲ್ಲಿರುವ ಸಾವಿತ್ರಿಬಾಯಿಗೆ ಸ್ವಂತ ವ್ಯಕ್ತಿತ್ವವಿಲ್ಲ. ಇಲ್ಲಿ ಅವಳಿಗೆ ಸ್ವಂತ ವ್ಯಕ್ತಿತ್ವವಿದೆ. ಸ್ವಂತ ಅಸ್ಮಿತೆಯೂ ಇದೆ. ಮೂಲದಲ್ಲಿರುವ ಸಾವಿತ್ರಿಬಾಯಿ ಗಂಡ ಫುಲೆ ಹೇಳಿದಂತೆ ಬದುಕುವ, ವರ್ತಿಸುವ ಒಬ್ಬ ಸಂಪ್ರದಾಯಸ್ಥ ಮಡದಿಯಾಗಿದ್ದಾಳೆ. ಆದರೆ ಕಾಟ್ಕರ್ ಅವರ ಸಾವಿತ್ರಿ ದಿಟ್ಟವಾಗಿ, ನೇರವಾದ, ನಿರ್ಭೀಡೆಯಿಂದ ವರ್ತಿಸುವ ಧೀಮಂತ ಪಾತ್ರ. ಒಬ್ಬ ಕಥಾನಾಯಕಿಗೆ ಯಾವ ಯಾವ ಗುಣಗಳು ಬೇಕೋ ಅವನ್ನೆಲ್ಲ ಸರಜೂ ತಾವು ಸೃಷ್ಟಿಸಿದ ಸಾವಿತ್ರಿಬಾಯಿಗೆ ಎರಕ ಹೊಯ್ದಿದ್ದಾರೆ. ಸರಜೂನ ಸಾವಿತ್ರಿ ಸತಿಪದ್ಧತಿಯನ್ನು ವಿರೋಧಿಸುತ್ತಾಳೆ. ಬ್ರಾಹ್ಮಣರ ಮಡಿ ಮೈಲಿಗೆಯನ್ನು ಕೆಡಿಸುತ್ತಾಳೆ. ಬ್ರಾಹ್ಮಣ ವಿಧವೆಯರಿಗೆ ಆಸರೆ ನೀಡುತ್ತಾಳೆ. ಅವರ ಅನಾಥ ಮಕ್ಕಳಿಗೆ ತಾಯಿಯಾಗುತ್ತಾಳೆ.
ಸಾವಿತ್ರಿಬಾಯಿಯನ್ನು ಈ ವರೆಗೆ ಚರಿತ್ರೆಕಾರರು ಬರೀ ಶಿಕ್ಷಕಿಯಾಗಿ ಮಾಡಿ ವೈಭವೀ ಕರಿಸಿದ್ದಾರೆ. ಸರಜೂ ನೀಡಿದ ಆಯಾಮ ಮಾತ್ರ ತೀರಾ ಭಿನ್ನ ಹಾಗೂ ಧೀಮಂತಿಕೆಯಿಂದ ಕೂಡಿರುವುದು ಶ್ಲಾಘನೀಯ. ಒಂದು ಅರ್ಥದಲ್ಲಿ ಸರಜೂ ಕಾಟ್ಕರ್ ಅವರು ಸಾವಿತ್ರಿ ಬಾಯಿಗೆ ಹೊಸ ರೂಪ, ಹೊಸ ರಕ್ತ, ಹೊಸ ನಾಡಿಮಿಡಿತ ಹೊಸ ಸಂವೇದನೆಯನ್ನು ನೀಡಿದ್ದಾರೆ. ನನ್ನ ದೃಷ್ಟಿಯಲ್ಲಿ ಅವಳೊಬ್ಬ ಕ್ರಾಂತಿಕಾರಿ ವನಿತೆಯಾಗಿದ್ದಾಳೆ. ನಮಗೆ ಬೇಕಾಗಿರುವುದು ಚರಿತ್ರೆ ಚಿತ್ರಿಸಿದ ಸಪ್ಪೆಯಾದ, ಜಡವಾದ, ಸ್ವಂತಿಕೆಯೆ ಇಲ್ಲದ, ಸಂವೇದನಾ ರಹಿತ, ಸ್ವಂತ ಅಸ್ಮಿತೆಯೇ ಇಲ್ಲದ ಸಾವಿತ್ರಿಬಾಯಿಯಲ್ಲ; ಪುರೋಹಿತಶಾಹಿಯ ವಿರುದ್ಧ ಸಿಡಿದೆದ್ದ, ಪರಂಪರೆಗೆ ಪ್ರಶ್ನೆಯೊಡ್ಡುವ, ಸಾಮಾಜಿಕ ರೀತಿ ರಿವಾಜುಗಳನ್ನು ಧಿಕ್ಕರಿಸುವ, ಗಂಡುಭೀರಿ ಸಾವಿತ್ರಿ. ಅದನ್ನೆ ಕಾಟ್ಕರ್ ಅವರು ಕಟ್ಟಿಕೊಟ್ಟಿದ್ದಾರೆ. ಕಾಟ್ಕರ್ ಚರಿತ್ರೆಯನ್ನು ಮುರಿದು ಕಟ್ಟಲಿಲ್ಲ, ಚರಿತ್ರೆಯ ಬುನಾದಿಯ ಮೇಲೆ ಧೀರೋದಾತ್ತೆ ಮಹಿಳೆಯನ್ನು ನಿರ್ಮಿಸಿ, ಆಕೆಗೊಂದು ಸಾಮಾಜಿಕ ನ್ಯಾಯ ದೇವತೆಯ ರೂಪ ನೀಡಿದ್ದಾರೆ. ಸರಜೂ ಅವರ ಸಾವಿತ್ರಿಬಾಯಿಯ ಎದುರಿಗೆ ಮಹಾತ್ಮಾ ಫುಲೆಯು ತೀರಾ ನಗಣ್ಯವಾಗಿ ಕಂಡರೆ ಅಚ್ಚರಿಪಡಬೇಕಿಲ್ಲ. ಫುಲೆಯ ಬೆಳಕಿನಲ್ಲಿ ಈ ಸಾವಿತ್ರಿ ಮುಂದಡಿ ಇಡುವುದಿಲ್ಲ. ತನ್ನ ಸ್ವಂತ ಧೀಮಂತಿಕೆಯಿಂದ ಫುಲೆಯವರೇ ಅವಳನ್ನು ಅನುಕರಿಸುವಷ್ಟು ಪ್ರಖರತೆಯನ್ನು ಹೊಂದಿದ್ದಾಳೆ. ಅವಳಲ್ಲಿ ಸೇಂಟ್ ಜೋನ್ನ ಉಜ್ವಲ ಪ್ರಖರತೆಯಿದೆ. ಈ ಉಜ್ವಲ, ಪ್ರಖರ ವ್ಯಕ್ತಿತ್ವಕ್ಕೆ ಸರಿ ಹೊಂದುವ ರೀತಿಯಲ್ಲಿ ಕಾಟ್ಕರ್ ಸಾಕಷ್ಟು ಸ್ವಾತಂತ್ರ್ಯವನ್ನು ಬಳಸಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಈ ಮಾರ್ಪಾಡು-ಈ ಬದಲಾವಣೆ ಸಾವಿತ್ರಿಬಾಯಿಯ ವ್ಯಕ್ತಿತ್ವವನ್ನು, ಅಸ್ಮಿತೆಯನ್ನು ಬೆಳಗಿಸುವಷ್ಟು ಸಾಮರ್ಥ್ಯವನ್ನು ಹೊಂದಿವೆ. ಇಷ್ಟಾದರೂ ಚರಿತ್ರೆಯ ಮೂಲ ಆಶಯಕ್ಕೆ ಎಲ್ಲೂ ಚ್ಯುತಿಬರದ ರೀತಿಯಲ್ಲಿ ಈ ಕೃತಿಯನ್ನು ದಟ್ಟವಾಗಿ, ನಿಬಿಢವಾಗಿ ಹೆಣೆಯಲಾಗಿದೆ.
ಸರಜೂ ಕಾಟ್ಕರ್ ಅವರದ್ದು ಬಂಡಾಯದ ಪಿಂಡ. ಈ ದಿಶೆಯಲ್ಲಿ ಅವರು ಸಾವಿತ್ರಿ ಬಾಯಿಯನ್ನು ಬಂಡಾಯದ ಮನೋಧರ್ಮದಲ್ಲಿ ಚಿತ್ರಿಸಿದ್ದು, ಚರಿತ್ರೆಗೆ ನೀಡಿದ ಹೊಸ ಹೊಳಪು. ಪುರೋಹಿತಶಾಹಿಯ ದೌರ್ಜನ್ಯದ ವಿರುದ್ಧ ಹೋರಾಡಬೇಕಾದರೆ ನಾಯಕಿಗೆ ಇಂಥ ಕೆಚ್ಚೆದೆಯ, ಎಂಟೆದೆಯ ರೂಪ ನೀಡುವುದು ಅನಿವಾರ್ಯವಾಗುತ್ತದೆ. ಇಲ್ಲದೇ ಹೋದರೆ ಸನ್ನಿವೇಶಗಳಿಗೆ ನಾಟಕೀಯ ರೂಪ, ತಿರುವು ತರುವುದು ಕಷ್ಟಸಾಧ್ಯವಾಗುತ್ತದೆ. ಷಠ್ಯಂ ಪ್ರತಿಷಾಠ್ಯಂ ಎಂಬಂತೆ ಮುಳ್ಳಿಗೆ ಮುಳ್ಳಾಗಿ ನಿಂತಾಗಲೇ ಸೃಜನಶೀಲ ಕೃತಿಗೆ ಸಾಮರ್ಥ್ಯ ಲಭಿಸುತ್ತದೆ.
ಸ್ತ್ರೀ ಶಿಕ್ಷಣ ನಿಷೇಧ, ಬಾಲ್ಯವಿವಾಹ, ಸತಿ ಪದ್ಧತಿ, ವಿಧವಾ ಸಮಸ್ಯೆ ಮುಂತಾದ ಸಾಮಾಜಿಕ ಪಿಡುಗಿನ ಚಾರಿತ್ರಿಕ ಸಂದರ್ಭಗಳ ವಿವರಗಳೂ ಇಲ್ಲಿವೆ. ಕ್ರಿಶ್ಚನ್ ಮಿಶನರಿಗಳಿಂದ ಸಿಕ್ಕ ಶೈಕ್ಷಣಿಕ ಬೆಂಬಲದಿಂದಾಗಿ ಫುಲೆ ದಂಪತಿಗಳ ಜೀವನ ಶೈಲಿಯೇ ಬದಲಾಗಿರುವುದನ್ನು ಕಾಣುತ್ತೇವೆ. ಪೇಶ್ವೆಯವರ ದುರಾಡಳಿತ, ಆಂಗ್ಲರ ಸಾಮಾಜಿಕ ಅನುಕಂಪೆಗಳು ಕಾದಂಬರಿಯ ತಾತ್ವಿಕ ಬುನಾದಿಯನ್ನು ಮತ್ತಷ್ಟು ಭದ್ರಗೊಳಿಸಿರುವುದನ್ನು ನಿರ್ಲಕ್ಷಿಸುವಂತಿಲ್ಲ. ಇಲ್ಲಿ ಲೇಖಕ ಕಾಟ್ಕರ್ ಅವರ ಐತಿಹಾಸಿಕ ಪ್ರಜ್ಞೆಯು ತೀರಾ ಚುರುಕಾಗಿ, ಅಷ್ಟೇ ಸೂಕ್ಷ್ಮವಾಗಿ ಕೆಲಸ ಮಾಡಿದ್ದು ಮೆಚ್ಚತಕ್ಕ ಅಂಶ. ರಂಗನಾಥ ಆಚಾರ್ಯರು ಹೇಳಿದ ಧರ್ಮಶಾಸ್ತ್ರ ಮತ್ತು ಮನುಸ್ಮೃತಿಯನ್ನು ತರಾಟೆಗೆ ತೆಗೆದುಕೊಂಡಿರುವುದು ಕಾಟ್ಕರ್ ಮಾಡಿದ ಮತ್ತೊಂದು ಸಾಹಸ. ಈ ತಾತ್ವಿಕ ಚರ್ಚೆ, ತುಂಬ ಕುತೂಹಲ ಕೆರಳಿಸುವುದಲ್ಲದೆ, ಕಾದಂಬರಿಯ ಆಶಯಕ್ಕೆ, ವಸ್ತುವಿಗೆ, ತಂತ್ರಕ್ಕೆ ಭದ್ರಬುನಾದಿಯನ್ನು ನೀಡುತ್ತದೆ. ಸಾವಿತ್ರಿ ಮತ್ತು ಮ. ಫುಲೆಯವರ ಬಗೆಗೆ ಧರ್ಮಮಾರ್ತಾಂಡರು ಅಶ್ಲೀಲವಾಗಿ ಅಪಪ್ರಚಾರ ಆರಂಭಿಸಿದಾಗ ಫುಲೆಯವರು ಬೇಸರಪಡುತ್ತಾರೆ. ಇಂಥ ಸಂದರ್ಭದಲ್ಲಿ ಎದೆಗಾರಿಕೆ ತೋರಿಸಿ, ಧೈರ್ಯ ತುಂಬುವ ಕಾರ್ಯವನ್ನು ಸಾವಿತ್ರಿಬಾಯಿ ಮಾಡುತ್ತಾಳೆ. ಇಂಥ ಹಲವು ಬಿಕ್ಕಟ್ಟಿನ ಪ್ರಸಂಗದಲ್ಲಿ ಸಾವಿತ್ರಿಬಾಯಿ ತೋರುವ ಧೈರ್ಯ, ಧೀಮಂತಿಕೆ, ಸಮಯಾಲೋಚನೆ, ಪ್ರಸಂಗಾವಧಾನ ಕಾದಂಬರಿಯ ಉದ್ದಕ್ಕೂ ಸೂಕ್ತವಾಗಿ ಬಳಸಿಕೊಳ್ಳಲಾಗಿದೆ. ಇಂಥ ಪ್ರಸಂಗಗಳಲ್ಲಿ ಕಾಟ್ಕರ್ ಸಾವಿತ್ರಿಯನ್ನು ದುರ್ಗೆಯಾಗಿ ಕಾಣುತ್ತಾರೆ. ಇದು ಹೊಸ ವಿಜನ್. ಇಲ್ಲಿ ಫಾತಿಮಾ ಮತ್ತು ಸಾವಿತ್ರಿಗೆ ಸೆಗಣಿ ಎರಚುವ ಪ್ರಸಂಗವನ್ನು ಹಿನ್ನೆಲೆಯಾಗಿ ಬಳಸಿಕೊಂಡಿದ್ದಾರೆ.
ಸಾವಿತ್ರಿಬಾಯಿ ಶೈಕ್ಷಣಿಕ ಕಾರ್ಯವನ್ನು ಪುರೋಹಿತಶಾಹಿಗಳು ವಿರೋಧಿಸಿದರೂ ಆಂಗ್ಲರು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದರು. ವಿದೇಶಿ ಆಂಗ್ಲ ಪತ್ರಿಕೆಗಳೂ ಸಾವಿತ್ರಿಯ ಬಗೆಗೆ ಅವಳ ಕಾರ್ಯ ಸಾಧನೆಯ ಬಗೆಗೆ, ಸಾಮಾಜಿಕ ಕಳಕಳಿಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತವೆ. ಗಂಜಪೇಠೆಯ ದುರ್ಗಂಧ ಸನ್ನಿವೇಶ, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವುದು ಈ ಸನ್ನಿವೇಶಗಳೆಲ್ಲ ಆಂಗ್ಲರ ಬಗೆಗೆ ಮೆಚ್ಚುಗೆ ವ್ಯಕ್ತವಾಗುವಂತೆ ಮಾಡುತ್ತವೆ. ಭಾರತದ ಸ್ವಾತಂತ್ರ್ಯದ, ಗುಲಾಮಗಿರಿಯ ಹಿನ್ನೆಲೆಯಲ್ಲಿ ನೋಡಿದಾಗ ಆಂಗ್ಲರನ್ನು ದ್ವೇಷಿಸುವ ನಾವು, ಶೈಕ್ಷಣಿಕ ಧೋರಣೆ, ಸಾಮಾಜಿಕ ಬದ್ಧತೆ, ನ್ಯಾಯಪರತೆ, ಹಿಂದುಳಿದವರ ಮೇಲಿನ ಅವರ ಉದಾರ ಭಾವನೆಯನ್ನು ನಿರ್ಲಕ್ಷಿಸುತ್ತೇವೆ. ಫುಲೆ ಮತ್ತು ಸಾವಿತ್ರಿಬಾಯಿ ಯಂತಹವರ ಕಾರ್ಯ ಸಾಧನೆಗಳು, ಆಂಗ್ಲರಿಂದ ಸಿಕ್ಕ ಬೆಂಬಲ, ಮಾನಸಿಕ ಮನೋ ಬಲವನ್ನು ನಮ್ಮ ಚರಿತ್ರೆ ತೀರಾ ನಿರ್ಲಕ್ಷಿಸುತ್ತವೆಯೋ ಏನೋ ಎಂದೆನಿಸುತ್ತದೆ. ಇಂಥ ಹಲವು ಸನ್ನಿವೇಶಗಳು ಈ ಕಾದಂಬರಿಯಲ್ಲಿ ಬರುತ್ತವೆ. ಇಂಥಲ್ಲಿ ಕಾಟ್ಕರ್ ಅವರ ದೃಷ್ಟಿ ತೀರಾ ವಿಶಾಲವೂ, ಉದಾರಿಯೂ ಆಗಿರುವುದನ್ನು ಅವರ ಬರವಣಿಗೆಯಲ್ಲಿ ಕಾಣಬಹುದು. ಇದು ಚರಿತ್ರೆಗೆ ನೀಡಿದ ಹೊಸ ತಿರುವು. ಇದನ್ನೇ ನಾವು ಸಾಮಾಜಿಕ ಚರಿತ್ರೆ ಎನ್ನಬಹು ದೇನೋ. ಇಂಥ ಸಾಮಾಜಿಕ ಚರಿತ್ರೆಯನ್ನು ಕಟ್ಟಿದಾಗ ಅದು ತಳಸಮುದಾಯದವರ ಸತ್ಯ ಚರಿತ್ರೆಯಾಗುತ್ತದೆ. ಇಲ್ಲದೇ ಹೋದರೆ ನಮ್ಮ ಚರಿತ್ರೆ ಹುಸಿ ಚರಿತ್ರೆ, ಅರೆಬರೆ ಚರಿತ್ರೆ, ಪುರೋಹಿತಶಾಹಿಯ ಚರಿತ್ರೆಯಾಗುವ ಅಪಾಯವಿರುತ್ತದೆ. ಈ ಅಪಾಯವನ್ನು ಕಾಟ್ಕರ್ ಮೀರಿ ಚರಿತ್ರೆ ಕಟ್ಟಿದ್ದು ನಿಜಕ್ಕೂ ಹೆಮ್ಮೆಪಡಬೇಕಾದ ಸಂಗತಿ.
ಜ್ಯೋತಿಬಾ ಫುಲೆಯ ಅಂತಿಮ ಕಾಲದ ದಾರುಣ ಪ್ರಸಂಗ ಎಂಥವರ ಎದೆಯನ್ನೂ ಕಲುಕಿಸುವಷ್ಟು ಸಶಕ್ತವಾಗಿ ಮೂಡಿಬಂದಿದೆ. ಲಕ್ವಾದಿಂದ ಹಾಸಿಗೆ ಹಿಡಿದ ಫುಲೆಯನ್ನು ಆರೈಕೆ ಮಾಡುವಾಗ, ಧೈರ್ಯ ತುಂಬುವಾಗ ಸಾವಿತ್ರಿಬಾಯಿ ತೋರಿದ ಧೈರ್ಯ ನಿಜಕ್ಕೂ ಮೆಚ್ಚುವಂತಹದು. ಅನ್ಯಾಯದ ವಿರುದ್ಧ ಸಿಡಿದೆದ್ದ ಬೆಂಕಿ ತಣ್ಣಗಾಗಿರುವ ಸಂದರ್ಭದಲ್ಲೂ ಅವಳು ಧೈರ್ಯಗುಂದುವುದಿಲ್ಲ. ಫುಲೆಯಿಂದಾಗಿ ತಾನು ಕಲಿತ ಶಿಕ್ಷಣ, ಸನಾತನಿಗಳ ಸೆಗಣಿ ಎರಚುವ ಪ್ರಸಂಗ, ಫುಲೆಯವರನ್ನು ಕೊಲ್ಲುವ ಪ್ರಯತ್ನ, ಶಾಲೆಗಳ ಆರಂಭ, ಕ್ಷೌರಿಕರ ಪ್ರಸಂಗ, ವಿಧವಾ ಹೆರಿಗೆ ಗೃಹ ಇದೆಲ್ಲಕ್ಕೂ ತನಗೆ ಬೆಂಬಲವಾಗಿ ನಿಂತ ಪತಿ ಈಗ ತಣ್ಣಗಾಗಿದ್ದಾನೆ. ಆದರೂ ಅವಳು ಕಿಂಚಿತ್ತೂ ಧೃತಿಗೆಡುವುದಿಲ್ಲ. ಈ ಕಾರಣಕ್ಕಾಗಿ ನಾನು ಸಾವಿತ್ರಿಬಾಯಿಯನ್ನು ಸೆಂಟ್ ಜೋನ್(ಫ್ರಾನ್ಸ್) ಎಂದು ಹೆಸರಿಸಿದ್ದು. ಫುಲೆಯ ಅಂತ್ಯಸಂಸ್ಕಾರದಲ್ಲಿ ದಾಯಾದಿಗಳ ಜಗಳ ವಿಕೋಪ ಹೋಗುವ ಸಂದರ್ಭದಲ್ಲಿ ಅವಳು ತೋರಿದ ಕೆಚ್ಚೆದೆ, ಪ್ರಸಂಗಾವಧಾನ, ಅವಳ ಉಗ್ರರೂಪ, ಕಾಟ್ಕರ್ ಹೇಳಿದಂತೆ ಸಾಕ್ಷಾತ್ ದುರ್ಗೆಯಾಗಿ ಬಿಡುವ ಪರಿ ನಿಜಕ್ಕೂ ಸಮಯೋಚಿತ ಮತ್ತು ನಾಟಕೀಯ ಸನ್ನಿವೇಶವನ್ನು ನಿರ್ಮಿಸುವಷ್ಟು ಸಶಕ್ತವಾಗಿ ಮೂಡಿಬಂದಿದೆ. ದತ್ತಕ ಮಗನಾದ ಯಶವಂತ ನಿಂದಲೇ ಚಿತೆಗೆ ಅಗ್ನಿ ಸಂಸ್ಕಾರ ಮಾಡಿಸುವ ಸಾವಿತ್ರಿಬಾಯಿ ತೋರಿದ ಧೀಮಂತಿಕೆಯು ಸಹೃದಯರ ಮನಸ್ಸನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದೆ. ಫುಲೆಯ ಸಾವಿನ ಬಳಿಕ ಆರ್ಥಿಕವಾಗಿ ಬಳಲುತ್ತಿದ್ದರೂ ಸ್ವಾಭಿಮಾನಿಯಾದ ಸಾವಿತ್ರಿಬಾಯಿ ಯಾರ ಎದುರಿಗೂ ಕೈ ಒಡ್ಡುವುದಿಲ್ಲ. ಸೊಸೆ ಲಕ್ಷ್ಮಿಯ ಬಂಗಾರ ಮಾರಿ ಜೀವನ ನಿರ್ವಹಣೆ, ಹಾಸ್ಟೇಲಿನ ಉಸ್ತುವಾರಿ ಮಾಡಿದ್ದು ಸಾವಿತ್ರಿಯ ಮನೋಬಲದ ಮತ್ತೊಂದು ಜೀವಂತ ಉದಾಹರಣೆ ಯಾಗಿದೆ. ಸಯ್ಯಾಜಿರಾವ್ ಗಾಯಕವಾಡರ ಠೇವಣಿಯಿಂದ ಬರುವ ಬಡ್ಡಿ ಹಣವಷ್ಟೇ ಅವಳಿಗೆ ಸಂದಾಯವಾಗುತ್ತಿತ್ತು. ಸತ್ಯಶೋಧಕ ಸಮಾಜದ ಕಾರ್ಯವನ್ನು ಸಾವಿತ್ರಿ ಮುನ್ನಡೆಸಿಕೊಂಡು ಹೋಗುತ್ತಾಳೆ. ಯಶವಂತ ಸೈನ್ಯ ಸೇರುತ್ತಾನೆ. ಹವಾಮಾನ ವೈಪರೀತ್ಯ ದಿಂದ ಲಕ್ಷ್ಮಿ ಅಸು ನೀಗುತ್ತಾಳೆ. ಈಗ ಸಾವಿತ್ರಿಬಾಯಿ ಏಕಾಂಗಿಯಾಗುತ್ತಾಳೆ. ಯಶವಂತ ಮರಳಿ ಬಂದು ಬಡರೋಗಿಗಳ ಸೇವೆ ಕೈಕೊಂಡಾಗ ಅವಳಿಗೂ ಸಮಾಧಾನವಾಗುತ್ತದೆ. ಇದೇ ಸಂದರ್ಭದಲ್ಲಿ ಪುಣೆಯಲ್ಲಿ ಬರಗಾಲ ಮತ್ತು ಪ್ಲೇಗ್ ಏಕಕಾಲಕ್ಕೆ ಬಂದೆರಗಿದಾಗ ಸಾವಿತ್ರಿಬಾಯಿ ಮಾಡಿದ ಸಾಮಾಜಿಕ ಕಾರ್ಯ ಗಮನ ಸೆಳೆಯುತ್ತದೆ. ಹಗಲು ರಾತ್ರಿ ದಲಿತ ರೋಗಿಗಳ ಸೇವೆ ಮಾಡುತ್ತಾಳೆ. ಕೊನೆಗೆ ಪ್ಲೇಗು ಅವಳನ್ನು ಬಲಿ ತೆಗೆದುಕೊಳ್ಳುತ್ತದೆ. ಕಾದಂಬರಿಯ ಕೊನೆಯ ಕೆಲವು ಪ್ರಸಂಗಗಳು ತುಂಬ ಮಾರ್ಮಿಕವಾಗಿ ಹೃದಯವನ್ನು ಕಲುಕಿಸುವಷ್ಟು ವಾಸ್ತವವಾಗಿ ಮೂಡಿಬಂದಿದೆ. ಸಾವಿತ್ರಿಯ ದಾರುಣ ಸಾವಿನೊಂದಿಗೆ ಕಾದಂಬರಿ ಅಂತ್ಯಗೊಳ್ಳುತ್ತದೆ.
ಸರಜೂ ಕಾಟ್ಕರ್ ಕಾದಂಬರಿಗೆ ಪೂರಕವಾಗಿ ಅಡಿಟಿಪ್ಪಣಿ, ಅನುಬಂಧವನ್ನು ನೀಡಿದ್ದಾರೆ. ಒಟ್ಟು ಎಂಟು ಗ್ರಂಥಗಳನ್ನು ಓದಿ, ಪರಿಶೋಧಿಸಿ, ಚರಿತ್ರೆಯನ್ನು ಮತ್ತೆ ಹೊಸದಾಗಿ ಕಟ್ಟಿಕೊಡುವ ಪ್ರಯತ್ನದಲ್ಲಿ ಸಾಕಷ್ಟು ಶ್ರಮವಹಿಸಿದ್ದು ಗಮನಿಸಬೇಕಾದ ಸಂಗತಿ.
ಕಾದಂಬರಿ ಆರಂಭದಿಂದ ಕೊನೆಯ ವರೆಗೆ ಉಸಿರು ಬಿಗಿ ಹಿಡಿದು ಓದಿಸುವಂತೆ ಮಾಡುತ್ತದೆ. ಕಾಟ್ಕರ್ ಅವರು ಕಥನ ಕಲೆಗೆ ಎಲ್ಲೂ ಕುಂದು ಬರದ ರೀತಿಯಲ್ಲಿ ಕಥಾ ಶಿಲ್ಪವನ್ನು ಹೆಣೆದಿದ್ದಾರೆ. ಕಿಕ್ಕಿರಿದು ತುಂಬಿಕೊಂಡ ಪ್ರಸಂಗಗಳನ್ನು ನಾಟಕೀಯ ಸನ್ನಿವೇಶದ ನಿರ್ಮಾಣಕ್ಕೆ ಪೂರಕವಾಗಿ ದುಡಿಸಿಕೊಳ್ಳಲಾಗಿದೆ. ಬಂಧ ಎಲ್ಲೂ ಸಡಿಲವಾಗಿಲ್ಲ. ಸಂಭಾಷಣೆಯಲ್ಲಿ ಚುರುಕುತನವಿದೆ, ತಾರ್ಕಿಕತೆಯಿದೆ, ನಿರೂಪಣೆಯಲ್ಲಿ ಸಾಮಾಜಿಕ ಕಳಕಳಿಯಿದೆ.
ಅಡಿಟಿಪ್ಪಣಿಯಲ್ಲಿ ನೀಡಿದ ವಾಕಡೆ ಗಂಧ(ಅಡ್ಡನಾಮ), ವಾಕಡೆ ಕಾಸೋಟೆ(ಕಚ್ಚೆ ಧೋತರ ಉಡುವ ಪದ್ಧತಿ) ಇಂಥಲ್ಲಿ ಅವರು ನೀಡಿದ ವಿವರಣೆಯು ತುಂಬ ಕುತೂಹಲ ಕರವಾದ ಚಾರಿತ್ರಿಕ ಸಂಗತಿಗಳನ್ನು, ರೀತಿ ರಿವಾಜುಗಳನ್ನು ಸ್ಪಷ್ಟಪಡಿಸುತ್ತವೆ. ಮುಖ್ಯವಾಗಿ ಪೇಶ್ವೆ ಕಾಲದ ಸಂಪ್ರದಾಯದ ವಿವರಣೆಯನ್ನು ನೀಡಿದ್ದರಿಂದ ಓದಿಗೆ, ಗ್ರಹಿಕೆಗೆ ಎಲ್ಲೂ ತೊಡಕಾಗುವುದಿಲ್ಲ. ಮನುಸ್ಮೃತಿಯ ದಾಖಲೆ ನೀಡಿರುವುದು ಗಮನಾರ್ಹ.
ಅನುಬಂಧದಲ್ಲಿ ಯಶವಂತನ ಸಾವಿನ ಬಳಿಕ ಅವನ ಮಕ್ಕಳು(ಎರಡನೆಯ ಹೆಂಡತಿಯ ಮಕ್ಕಳು) ಉದರ ನಿರ್ವಹಣೆಗಾಗಿ ಮ. ಫುಲೆಯ ಬರಹ, ಸಂಗ್ರಹಿಸಿದ ಪುಸ್ತಕ ಮಾರಾಟ ಮಾಡಿದ್ದನ್ನೂ ಮನೆಯನ್ನು ನೂರು ರೂಪಾಯಿಗೆ ಮಾರಿದ ಕಟುಸತ್ಯವನ್ನೂ ದಾಖಲಿ ಸಿದ್ದಾರೆ.
ಸರಜೂ ಕಾಟ್ಕರ್ ಅವರ ಸಾವಿತ್ರಿಬಾಯಿ ಫುಲೆ ಕಾದಂಬರಿಯನ್ನು ಚಾರಿತ್ರಿಕ ಕಾದಂಬರಿಯೆಂದು ಕರೆದಾಗ, ಇಲ್ಲಿಯ ಕಟುವಾಸ್ತವ ಕಣ್ಣಿಗೆ ಕಾಣುವಷ್ಟು ಉರಿಯುವ ಜ್ವಾಲೆಯಂತಿದೆ. ಮರಾಠಿ ಚರಿತ್ರೆಕಾರರು ಸಾವಿತ್ರಿಬಾಯಿಯನ್ನು ಕ್ರಾಂತಿಜ್ಯೋತಿ ಎಂದು ಕರೆದಿದ್ದಾರೆ. ನನ್ನ ದೃಷ್ಟಿಯಲ್ಲಿ ಸಾವಿತ್ರಿಬಾಯಿ ಕ್ರಾಂತಿಜ್ಯೋತಿಯಲ್ಲ, ಕ್ರಾಂತಿಜ್ವಾಲೆ. ಅಂಥ ಜ್ವಾಲೆಯನ್ನು ಉಡಿಯಲ್ಲಿ ಕಟ್ಟಿಕೊಂಡು ಕೃತಿ ರಚನೆ ಮಾಡುವುದು ಹುಡುಗಾಟದ ಮಾತಲ್ಲ. ಅಂಥ ಹುಡುಕಾಟದ ಕೆಲಸಕ್ಕೆ ಸರಜೂ ಕಾಟ್ಕರ್ ಕೈಹಾಕಿದ್ದು ಶ್ಲಾಘನೀಯ! ಈ ಕ್ರಾಂತಿಜ್ವಾಲೆಯ ಬಿಸಿಶಾಖ ಓದುಗರನ್ನು ತಟ್ಟಿ ಘಾಸಿಗೊಳಿಸದೇ ಬಿಡುವುದಿಲ್ಲ. ಈ ಜ್ವಾಲೆಯಲ್ಲಿ ಬೆಂದು ಹೋದ ನಾನು ನನ್ನ ಯಾತನೆಯನ್ನು ಹೊರಹಾಕಲು ಇಷ್ಟು ಸುದೀರ್ಘವಾದ ಮುನ್ನುಡಿ ಬರೆಯಬೇಕಾಗಿದ್ದು ನನ್ನ ಸುದೈವ.
ಈ ಹಿನ್ನೆಲೆಯನ್ನು ಮನಗಂಡಾಗ ಸರಜೂ ಕಾಟ್ಕರ್ ಈ ಕೃತಿಯನ್ನು ರಚಿಸಲು ಎಷ್ಟು ಪರಿಶ್ರಮ ತೆಗೆದುಕೊಂಡಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಇಂಥದೊಂದು ಅನನ್ಯ ಕೃತಿಯನ್ನು ಕನ್ನಡಕ್ಕೆ ತಂದ ಗೆಳೆಯ ಕಾಟ್ಕರ್‌ರಿಗೆ ಅಭಿನಂದನೆಗಳು.
Hats up ಸರಜೂ!!
–ಚಂದ್ರಕಾಂತ ಪೋಕಳೆ
ಮೂರನೆಯ ಮುದ್ರಣಕ್ಕೆ ಮೂರು ಮಾತು
ಸಾವಿತ್ರಿಬಾಯಿ ಫುಲೆ ಕಾದಂಬರಿಯ ಮೂರನೆಯ ಮುದ್ರಣ ಇದೀಗ ಪ್ರಕಟವಾಗುತ್ತಿದೆ. ಸಹಜವಾಗಿಯೇ ನನಗೆ ಸಂತೋಷವಾಗಿದೆ.
ಕಾದಂಬರಿಯ ಹೊಳಹು, ನನ್ನ ತಲೆಯಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನೆಲೆಯೂರಿತ್ತು. ಸುಮಾರು ೧೭೫ ವರ್ಷಗಳ ಹಿಂದೆ ಹಿಂದುಳಿದ ಸಮಾಜದಿಂದ ಬಂದ ಸಾವಿತ್ರಿಬಾಯಿ ಮತ್ತು ಆಕೆಯ ಗಂಡ ಜ್ಯೋತಿಬಾ -ಇವರಿಬ್ಬರೂ ದಲಿತ ಹಾಗೂ ಹಿಂದುಳಿದ ಸಮಾಜದ ವಿದ್ಯಾಭ್ಯಾಸಕ್ಕಾಗಿ ಪಟ್ಟಶ್ರಮ, ತೆಗೆದುಕೊಂಡ ಆಸಕ್ತಿ ನನ್ನ ಕುತೂಹಲಕ್ಕೆ ಕಾರಣವಾಗಿತ್ತು. ಆಗ ಸಮಾಜದಲ್ಲಿ ರೂಢವಾಗಿದ್ದ ಸನಾತನ ಶಕ್ತಿಗಳು ಅವರ ವಿರುದ್ಧ ಷಡ್ಯಂತ್ರಗಳನ್ನು ರಚಿಸಿ ಅವರನ್ನು ಸೋಲಿಸಲು ಪ್ರಯತ್ನಿಸಿದರು. ಆದರೆ ಸಾವಿತ್ರಿಬಾಯಿ ಹಾಗೂ ಜ್ಯೋತಿಬಾರ ಶ್ರದ್ಧೆಯ ಪ್ರಯತ್ನದೆದುರು ಅವರ ಆಟ ನಡೆಯಲಿಲ್ಲ. ಸಾವಿರಾರು ವರ್ಷಗಳಿಂದ ಬಂಧನದಲ್ಲಿದ್ದ ಅಕ್ಷರಗಳಿಗೆ ಸಾವಿತ್ರಿಬಾಯಿ ಮತ್ತು ಜ್ಯೋತಿಬಾರು ಸ್ವಾತಂತ್ರ್ಯ ಸಿಗುವಂತೆ ನೋಡಿಕೊಂಡರು. ಇದೀಗ ಭಾರತದ ಸ್ತ್ರೀಯು ವಿದ್ಯಾವಂತಳಾಗಿದ್ದಾಳೆಂದರೆ ಅದು ಸಾವಿತ್ರಿಬಾಯಿ ಮತ್ತು ಜ್ಯೋತಿಬಾರು ನೀಡಿದ ಕಾಣಿಕೆಯೇ ಸರಿ.
ನನಗೆ ಅಚ್ಚರಿಯಾಗಿದ್ದೆಂದರೆ, ಇಂತಹ ಸಾವಿತ್ರಿಬಾಯಿ ಬಗ್ಗೆ ಅವಳ ರಾಜ್ಯವಾದ ಮಹಾರಾಷ್ಟ್ರದಲ್ಲಿಯೇ ವಿವರವಾದ ಮಾಹಿತಿ ಇಲ್ಲ. ಹತ್ತಾರು ಪುಟಗಳ ಚಿಕ್ಕ ಚಿಕ್ಕ ಒಂದೆರಡು ಪುಸ್ತಕಗಳು ಮಾತ್ರ ಮರಾಠಿಯಲ್ಲಿ ಪ್ರಕಟವಾಗಿವೆ. ಅವು ಒಂದು ರೀತಿಯಲ್ಲಿ ಜೀವನ ಚರಿತ್ರೆಗಳು.
ನಾನು ಕಾದಂಬರಿ ಬರೆಯಬೇಕೆಂದು ಯೋಚಿಸಿದಾಗ ವಿಷಯ ಸಂಗ್ರಹವಿಲ್ಲದೆಯೇ ತಡಕಾಡಬೇಕಾಯಿತು; ಆದರೂ ಇತಿಹಾಸಕ್ಕೆ ಎಲ್ಲೂ ಏನೂ ಕುಂದುಂಟಾಗದಂತೆ, ಸಾವಿತ್ರಿಬಾಯಿಯ ಮೂಲ ಆಶಯಕ್ಕೆ ಎಲ್ಲೂ ಚ್ಯುತಿಬಾರದಂತೆ, ಕಲ್ಪನೆಯ ಸಹಾಯದಿಂದ ಕಾದಂಬರಿ ಬರೆದು ಮುಗಿಸಿದೆ. ಹೊಸಪೇಟೆಯ ಯಾಜಿ ಪ್ರಕಾಶನದ ಗೆಳೆಯ ಶ್ರೀ ಗಣೇಶ ಯಾಜಿ ಮತ್ತು ಶ್ರೀಮತಿ ಸವಿತಾ ಯಾಜಿ ದಂಪತಿಗಳು ತುಂಬ ಆಸ್ಥೆ ವಹಿಸಿ ಅದನ್ನು ಪ್ರಕಟಿಸಿದರು. ಮುಂದೆ ಕಾದಂಬರಿ ಚಲನಚಿತ್ರವಾಗಿ ಜನರ ಮನೆ ಮನೆಗೆ, ಮನ ಮನಕ್ಕೆ ತಲುಪಿತು. ಕಾದಂಬರಿಯ ಬಗ್ಗೆ ಹಾಗೂ ಚಲನಚಿತ್ರದ ಬಗ್ಗೆ ಮಹಾರಾಷ್ಟ್ರದಲ್ಲಿಯೂ ಚರ್ಚೆಗಳು ನಡೆದವು. ಮರಾಠಿಯ ಅನೇಕ ಟಿವಿ ಚಾನಲ್‌ಗಳು ಕಾದಂಬರಿ ಹಾಗೂ ಚಲನಚಿತ್ರದ ಬಗ್ಗೆ ವಿಶೇಷವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವು. ಚಲನಚಿತ್ರವು ರಾಜ್ಯ ಪ್ರಶಸ್ತಿಯನ್ನೂ ಪಡೆಯಿತು.
ಕಾದಂಬರಿಯನ್ನು ಓದಿದ ಮತ್ತು ಚಲನಚಿತ್ರ ವೀಕ್ಷಿಸಿದ ಆಗಿನ ಶಿಕ್ಷಣ ಸಚಿವರಾಗಿದ್ದ ಶ್ರೀ ಸುರೇಶಕುಮಾರ ಅವರು ಸಾವಿತ್ರಿಬಾಯಿಯ ಹುಟ್ಟಿದ ದಿನಾಂಕವಾಗಿರುವ ಜನೇವರಿ ೩ ಅನ್ನು ಶಿಕ್ಷಕಿಯರ ದಿನಾಚರಣೆ ಎಂದು ಸರ್ಕಾರವು ಪ್ರತಿವರ್ಷ ಆಚರಿಸುತ್ತದೆಂದು ಘೋಷಿಸಿದರು. ಕಾದಂಬರಿಯನ್ನು ಬರೆದ ನನಗೆ ಇದು ನಿಜವಾಗಿಯೂ ಸಂತೋಷದ ವಿಷಯವಾಗಿದೆ. ಅಕ್ಷರಗಳು ಕ್ರಾಂತಿಯನ್ನು ಅಥವಾ ಬದಲಾವಣೆಯನ್ನು ತರುತ್ತವೆಂಬ ನಂಬಿಕೆಗೆ ಇದೊಂದು ಉದಾಹರಣೆಯಾಗಿದೆ.
ಕನ್ನಡದ ನನ್ನ ಓದುಗರಿಗೆ ನಾನು ಕೃತಜ್ಞನಾಗಿದ್ದೇನೆ. ಯಾಜಿ ಪ್ರಕಾಶನದ ಮಿತ್ರ ಗಣೇಶ ಯಾಜಿ ಮತ್ತು ಸವಿತಾ ಯಾಜಿ ಅವರಿಗೂ ಕೃತಜ್ಞನಾಗಿದ್ದೇನೆ.
–ಡಾ. ಸರಜೂ ಕಾಟ್ಕರ್
Reviews
There are no reviews yet.