ಲೇಖಕೀಯ
ದಶಕದ ಕನ್ನಡ ಸಣ್ಣಕತೆಗಳ ಅಧ್ಯಯನ(೧೯೭೦-೮೦) ಎಂಬುದು ತಮಿಳುನಾಡಿನ ಮದುರೈ ಕಾಮರಾಜ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ನನ್ನ ಪಿಎಚ್.ಡಿ. ಮಹಾಪ್ರಬಂಧ ಶೀರ್ಷಿಕೆ. ಇದನ್ನು ಬರೆದುದು ೧೯೯೨ರಲ್ಲಿ. ಅಧ್ಯಯನದ ಆಯ್ದ ಅಧ್ಯಾಯಗಳನ್ನು ಸ್ವಗತ ಮತ್ತು ಸಂವಾದ ಎಂಬ ಶೀರ್ಷಿಕೆಯಲ್ಲಿ ಇಲ್ಲಿ ಜೋಡಿಸಲಾಗಿದೆ. ಅಂದೇ ಪೂರ್ಣಪ್ರಮಾಣದಲ್ಲಿ ಮಹಾಪ್ರಬಂಧವನ್ನು ಪ್ರಕಟಿಸಬೇಕೆಂಬ ಅಭಿಲಾಷೆಯಿತ್ತು. ಆದರೆ ಅದು ಕೈಗೂಡಲಿಲ್ಲ. ಅಂದು ಇದನ್ನು ಪ್ರಕಟಿಸಲೇಬೇಕೆಂದು ಒತ್ತಾಯ ಮಾಡಿದವರು ಹಿರಿಯರಾದ ಪ್ರೊ. ಕಿ.ರಂ.ನಾಗರಾಜ ಅವರು. ಅವರು ಪೂರ್ಣ ಮಹಾಪ್ರಬಂಧವನ್ನು ಓದಿ ಯಥಾವತ್ತಾಗಿ ಪ್ರಕಟ ಮಾಡಿಸಿ ಎಂದು ಹೇಳಿದರು. ಅಂದು ಕನ್ನಡ ಪ್ರಕಾಶಕರನ್ನು ಸಂಪರ್ಕಿಸುವುದು ನನಗೆ ಸುಲಭವಾಗಿರಲಿಲ್ಲ. ಕೊನೆಗೊಂದು ದಿನ ಅವರೇ ಮಹಾಪ್ರಬಂಧವನ್ನು ಪ್ರಕಟಣೆಗೆ ಕೊಡುತ್ತೇನೆಂದು ನನ್ನಿಂದ ಅದರ ಪ್ರತಿಯನ್ನು ಒಯ್ದರು. ಹಾಗೆ ಕೊಂಡೊಯ್ದವರು ಪ್ರಕಾಶಕರೊಬ್ಬರೊಡನೆ ಮಾತನಾಡಿದ್ದೇನೆ ಎಂದು ಹೇಳಿದರು. ಮತ್ತೊಮ್ಮೆ ವಿಚಾರಿಸಿದಾಗ ಪಿಎಚ್.ಡಿ. ಮಾಡುತ್ತಿರುವ ವಿದ್ಯಾರ್ಥಿಯೊಬ್ಬರು ಓದಲು ತೆಗೆದುಕೊಂಡಿದ್ದಾರೆ ಎಂದೂ ಹೇಳಿದರು. ಹಾಗೆ ವರ್ಷಗಳೇ ಉರುಳಿದುವು. ಅವರಲ್ಲಿ ಮಹಾಪ್ರಬಂಧ ಏನಾಯಿತೆಂದು ಮತ್ತೆ ಮತ್ತೆ ವಿಚಾರಿಸುವ ಧೈರ್ಯ ನನಗೆ ಸಾಲದೇ ಹೋಯಿತು. ನಾನು ಮಹಾಪ್ರಬಂಧ ಇನ್ನು ಪ್ರಕಟವಾಗುವುದಿಲ್ಲ ನನ್ನಲ್ಲಿದ್ದ ಏಕೈಕ ಪ್ರತಿಯೂ ಕಳೆದುಹೋಯಿತೆಂದು ಅದರ ಆಸೆಯನ್ನೇ ಕೈಬಿಟ್ಟಿದ್ದೆ.
ಸುಮಾರು ನಾಲ್ಕು ವರ್ಷಗಳ ಬಳಿಕ ಒಂದು ದಿನ ನನ್ನ ಸಹೋದ್ಯೋಗಿ ಮಿತ್ರ ಡಾ. ಕೆ.ಸಿ.ಶಿವಾರೆಡ್ಡಿಯವರು ಮಹಾಪ್ರಬಂಧದ ಪ್ರತಿಯನ್ನು ನನಗೆ ತಂದುಕೊಟ್ಟರು. ಕಾವ್ಯಮಂಡಲದ ಗ್ರಂಥಾಲಯದಲ್ಲಿ ಅದು ದೊರೆಯಿತೆಂದು ಹೇಳಿ ನನಗೆ ಹಸ್ತಾಂತರಿಸಿದರು. ಮತ್ತೊಮ್ಮೆ ನನ್ನ ಹಿರಿಯ ಸಹೋದ್ಯೋಗಿಯಾದ ಡಾ. ಕರೀಗೌಡ ಬೀಚನಹಳ್ಳಿಯವರು ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಶತಮಾನದ ಕನ್ನಡ ಸಣ್ಣಕತೆಗಳ ಸಮೀಕ್ಷೆ ಯೋಜನೆ ರೂಪಿಸುತ್ತಿದ್ದು ಪರಾಮರ್ಶೆಗಾಗಿ ಮಹಾಪ್ರಬಂಧವನ್ನು ಕೊಂಡೊಯ್ದರು. ಅವರು ಯೋಜನೆ ಪೂರ್ಣಗೊಳಿಸಿದ ಬಳಿಕ ಮಹಾಪ್ರಬಂಧವನ್ನು ಓದಿದೆ, ಚೆನ್ನಾಗಿದೆ. ಪ್ರಕಟಿಸಬಹುದು. ಕೆಲವೊಂದು ಸಣ್ಣಪುಟ್ಟ ಲೇಖಕರ ಬಗೆಗಿನ ಭಾಗಗಳನ್ನು ಕೈಬಿಡಬಹುದು ಎಂದೂ ಸಲಹೆ ನೀಡಿದರು. ನನಗೆ ಪ್ರಕಾಶಕರ ಪರಿಚಯವಿಲ್ಲ. ನೀವೇ ಯಾರಲ್ಲಾದರೂ ಪ್ರಯತ್ನಿಸಿ ಎಂಬ ನನ್ನ ನಿವೇದನೆಗೆ ಅವರೂ ಸಮ್ಮತಿಸಿದರು. ಹಾಗಿದ್ದರೂ ಪ್ರಕಟವಾಗದೆ ಹಾಗೆ ಎರಡು ವರ್ಷಗಳ ಬಳಿಕ ಮಹಾಪ್ರಬಂಧದ ಪ್ರತಿಯನ್ನು ಡಾ. ಕೆ.ಸಿ. ಶಿವಾರೆಡ್ಡಿಯವರೇ ನನಗೆ ಪುನಃ ತಂದುಕೊಟ್ಟರು. ಈ ಬಗೆಗೆ ಯಾರಲ್ಲೂ ನಾನು ವಿಚಾರಿಸಲಿಲ್ಲ. ನಾನಂತೂ ಪ್ರಕಟಣೆಯ ಆಸೆಯನ್ನೇ ಕೈಬಿಟ್ಟಿದ್ದೆ. ನನ್ನ ಆರಂಭದ ದಿನಗಳ ಬರೆಹ. ಅಲ್ಲಿನ ವಿಷಯವನ್ನು ಸಮಕಾಲೀನವಾಗಿ ಮತ್ತೆ ಮರುನಿರೂಪಿಸುವ ಅಗತ್ಯವಿದೆ ಎಂದು ಭಾವಿಸಿ ನಾನು ಸುಮ್ಮನಾದೆ. ಮತ್ತೊಮ್ಮೆ ಆ ಆಕರಗಳನ್ನು ಮರುಪರಿಶೀಲನೆ ಮಾಡಿ ಮತ್ತೆ ಮರು ಬರವಣಿಗೆಯನ್ನು ಮಾಡುವುದು ಅಸಾಧ್ಯ ಎಂದು ಭಾವಿಸಿ ಸುಮ್ಮನುಳಿದೆ(ಈ ಒಂದು ದಶಕದ ಅವಧಿಯಲ್ಲಿ ಸುಮಾರು ೨೩೫ ಕಥಾಸಂಕಲನಗಳು ಲಭ್ಯವಾಗಿವೆ. ಅವುಗಳ ಪೂರ್ಣ ಪಟ್ಟಿಯೊಂದು ನನ್ನ ಮಹಾಪ್ರಬಂಧದ ಅನುಬಂಧದಲ್ಲಿದೆ).
ಇತ್ತೀಚೆಗೆ ಕೆಲವು ಸಣ್ಣಕತೆಗಾರರ ಬಗೆಗೆ, ಎಪ್ಪತ್ತರ ದಶಕದ ಸಾಹಿತ್ಯದ ಪ್ರೇರಣೆ ಪ್ರಭಾವದ ಬಗೆಗೆ ಲೇಖನ ಬರೆದುಕೊಡುವಂತೆ ವಿದ್ಯಾರ್ಥಿ ಮಿತ್ರ ಡಾ. ರಾಜಶೇಖರ ಬಿರಾದಾರ ಕೇಳಿದರು. ನಾನಾಗ ಮಹಾಪ್ರಬಂಧದ ಆಯ್ದ ಭಾಗಗಳನ್ನು ಯಥಾವತ್ತಾಗಿ ಸಂಕಲಿಸಿ ಕೊಟ್ಟಿದ್ದೆ. ಯಶವಂತ ಚಿತ್ತಾಲರ ಸಣ್ಣಕತೆಗಳು ಮತ್ತು ಯು.ಆರ್. ಅನಂತಮೂರ್ತಿಯವರ ಸಣ್ಣಕತೆಗಳು ಎಂಬೆರಡು ಲೇಖನಗಳು ಕಲಬುರ್ಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನವು ಪ್ರಕಟಿಸಿದ ನವ್ಯಸಾಹಿತ್ಯ(೨೦೨೨) ಎಂಬ ಸಂಕಲನದಲ್ಲಿ ಪ್ರಕಟವಾಗಿವೆ. ಅವುಗಳನ್ನು ಓದಿದ ಕೆಲವು ಮಿತ್ರರು ಲೇಖನದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಇತರ ಕತೆಗಾರರ ಬಗೆಗೆ ಬರೆಯಬಹುದು ಎಂಬ ಸಲಹೆ ರೂಪದ ಮಾತುಗಳನ್ನು ಹೇಳಿದರು. ಆ ಲೇಖನಗಳನ್ನು ಓದಿದ ಕುತೂಹಲದಿಂದ ಮಹಾಪ್ರಬಂಧವನ್ನು ಓದಬೇಕೆಂಬ ಕುತೂಹಲ ತಾಳಿದವರಲ್ಲಿ ಹಾವೇರಿಯ ಯುವ ಮಿತ್ರ ಶ್ರೀ ವಿಕಾಸ್ ಹೊಸಮನಿ ಅವರೂ ಸಹ ಒಬ್ಬರು. ಮಹಾಪ್ರಬಂಧವನ್ನು ತರಿಸಿಕೊಂಡು ಪೂರ್ಣವಾಗಿ ಓದಿ ಇದನ್ನು ಯಥಾವತ್ತಾಗಿ ಪ್ರಕಟಿಸಲೇಬೇಕೆಂಬ ಪ್ರೀತಿಯ ಒತ್ತಾಯವನ್ನೂ ಮಾಡಿದರು. ಗುರುಗಳಾದ ಡಾ. ಹರಿಕೃಷ್ಣ ಭರಣ್ಯ ಸರ್, ಮೌಲ್ಯಮಾಪಕರಲ್ಲಿ ಒಬ್ಬರಾಗಿದ್ದ ಡಾ. ಅರ್ತಿಕಜೆ ಶ್ರೀಕೃಷ್ಣ ಭಟ್ ಮೊದಲಾದವರು ಮಹಾಪ್ರಬಂಧ ಪ್ರಕಟಿಸುವಂತೆ ಅನೇಕ ಬಾರಿ ಹೇಳಿದ್ದಿದೆ. ಹೀಗೆ ಅನೇಕರ ಓದು, ಮೆಚ್ಚುನುಡಿಗಳ ಪರಿಣಾಮವಾಗಿ ಪ್ರಸ್ತುತ ೧೯೯೨ರಲ್ಲಿ ಬರೆದ ನನ್ನ ಬರವಣಿಗೆಯನ್ನು ಯಥಾವತ್ತಾಗಿ ಆಯ್ದ ಭಾಗಗಳನ್ನು ಪ್ರಕಟಿಸುವ ಧೈರ್ಯ ಮಾಡಿದ್ದೇನೆ. ಅಂದಿನ ಬರವಣಿಗೆಯಲ್ಲಿ ಯಾವುದೇ ವ್ಯತ್ಯಾಸವನ್ನೋ, ಸೇರ್ಪಡೆಯನ್ನೋ ಮಾಡದೇ ಈಗ ನಿಮ್ಮ ಮುಂದಿಡುತ್ತಿದ್ದೇನೆ. ಪ್ರಕಟವಾಗಿದ್ದರೆ ೧೯೯೩-೯೪ರಲ್ಲಿಯೇ ಓದುಗರ ಕೈ ಸೇರಬಹುದಿತ್ತು. ವಿಳಂಬವಾಗಿ ಮೂವತ್ತು ವರ್ಷಗಳ ಬಳಿಕ ಪ್ರಕಟವಾಗಿ ಓದುಗರ ಕೈಸೇರುತ್ತಿದೆ.
ಇಪ್ಪತ್ತನೆಯ ಶತಮಾನದ ಎಪ್ಪತ್ತನೆಯ ದಶಕವು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಗಮನಾರ್ಹವಾಗಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ವಿಭಿನ್ನ ಕಾರಣಗಳಿಗೆ ವಿಶಿಷ್ಟವೆನಿಸಿದೆ. ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯ ಪಂಥಗಳು ಕ್ಷೀಣಿಸಿ ಸಾಹಿತ್ಯ ಹೊಸತನಕ್ಕಾಗಿ ಹಂಬಲಿಸುತ್ತಿದ್ದ ಕಾಲಘಟ್ಟವಿದು. ಇದಕ್ಕೆ ಮುಖ್ಯಕಾರಣ ಅಂದಿನ ರಾಜಕೀಯ ಸ್ಥಿತಿಗತಿಗಳು ಹಾಗೂ ಅದಕ್ಕೆ ಅನುಗುಣವಾಗಿ ಹುಟ್ಟಿಕೊಂಡ ಸಾಮಾಜಿಕ ಜಾಗೃತಿ. ಪರಿಣಾಮವಾಗಿ ಸಾಹಿತ್ಯದಲ್ಲಿ ಆಶಯ, ಆಕೃತಿಗಳಲ್ಲಿ ಹೊಸ ಜಾಡನ್ನು ಕಂಡುಕೊಳ್ಳಲು ಬರಹಗಾರರು ಯತ್ನಿಸುತ್ತಿದ್ದ ಕಾಲ. ಜಾತಿ, ಪಂಥ, ವರ್ಗಗಳ ನೆಲೆಗಳಲ್ಲಿ ವಿಭಿನ್ನವಾಗಿ ಬರಹಗಾರರು ಜನಮುಖಿ ಚಿಂತನೆಯಲ್ಲಿ ತೊಡಗಿದ್ದರು. ಹಿಂದಿನ ಸಾಹಿತ್ಯ, ಬರಹಗಳಿಂದ ಉಂಟಾದ ಗೊಂದಲಗಳು ಒಂದೆಡೆಯಾದರೆ ಹೊಸ ಬಗೆಯ ಸಾಹಿತ್ಯ, ಸಾಮಾಜಿಕ ವ್ಯವಸ್ಥೆಗಳೇ ದಾರಿದೀವಿಗೆಯಾಗಬಲ್ಲವು ಎಂಬ ದೃಢವಾದ ಅರಿವೊಂದು ಮೂಡಿದ ಕಾಲಘಟ್ಟವಿದು. ವ್ಯಷ್ಟಿಯಿಂದ ಸಮಷ್ಟಿಯೆಡೆಗೆ, ಸ್ವಗತದಿಂದ ಸಂವಾದದೆಡೆಗೆ ಸಾಹಿತ್ಯದ ಆಶಯಗಳ ಮೂಲಕ ಬರಹಗಾರರು ಪ್ರಜಾಸತ್ತಾತ್ಮಕವಾಗಿ ಚಿಂತನೆಗೆ ತೊಡಗಿದ ಕಾಲಘಟ್ಟ. ಸಾಹಿತ್ಯ ಕೇವಲ ಆಕೃತಿ, ಆಶಯಗಳ ಮಹತ್ವದಿಂದ ಮುಖ್ಯವಾಗದು. ಅದನ್ನು ಮೀರಿದ ಮಾನವೀಯ ಸಂಬಂಧಗಳನ್ನು ಬೆಸೆಯುವ ಜಾತ್ಯಾತೀತವಾಗಿ ಸಮಾಜದೆಡೆಗೆ ವಿಸ್ತರಿಸುವ ಹಂಬಲವನ್ನು ವ್ಯಕ್ತಪಡಿಸಬೇಕೆಂಬ ಕಾಳಜಿ ಈ ದಶಕದ ಬರಹಗಾರರ ಮುಖ್ಯ ಸಂವೇದನೆಯಾಗಿತ್ತು. ಸಮಾಜದಲ್ಲಿ ಮನೆಮಾಡಿದ್ದ ಅಸ್ಪೃಶ್ಯತೆ, ಜಾತೀಯತೆ, ಶೋಷಣೆ, ಬಡತನ, ಹಸಿವು, ಇತ್ಯಾದಿಗಳು ಸಾಹಿತ್ಯದ ಮುಖ್ಯ ಆಶಯಗಳಾಗಿ ದಾಖಲಾಗಬೇಕಾದ ಅಗತ್ಯವನ್ನು ಅಂದಿನ ಬರಹಗಾರರು ಮನಗಂಡಿದ್ದರು. ಸಾಹಿತ್ಯಕ್ಷೇತ್ರದಲ್ಲಿ ಸಾಮಾಜಿಕ ಸಂವೇದನೆಯ ಬರಹಗಳ ಅಗತ್ಯ, ಅವುಗಳಲ್ಲಿ ಮಾನವರ ಬದುಕನ್ನು ಹಸನಾಗಿಸಬೇಕೆಂಬ ಆಶಯ ಮುಂಚೂಣಿಗೆ ಬರಬೇಕೆಂಬ ಹಂಬಲವಿತ್ತು. ಸಾಹಿತ್ಯ ದೀನ, ದಲಿತರ ನೋವಿನ ಧ್ವನಿಯಾಗಬೇಕೆಂಬ ಕಾತರ ಬರಹಗಾರರಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾದುದು ಈ ದಶಕದಲ್ಲಿಯೇ. ಕನ್ನಡ ಸಾಹಿತ್ಯ ಹಿಂದೆಂದೂ ಕಾಣಿಸಿಕೊಳ್ಳದಷ್ಟು ಸಮಾಜಮುಖಿಯಾಗಿ ಬೆಳೆಯಲು ಆರಂಭವಾದುದು ಸಹ ಇದುವೇ ಅವಧಿಯಲ್ಲಿ. ಮಾನವರ ಬದುಕಿನ ಮುಖ್ಯ ಭಾಗವಾಗಿರುವ ಹೋರಾಟ, ಚಳುವಳಿಗಳು ಸಮಾಜದ ಭಾಗವಾಗಿರುವಂತೆ ಕಲೆ ಸಾಹಿತ್ಯಗಳೂ ಸಮಾಜದ ಬಹುಮುಖ್ಯ ಘಟಕಗಳೇ ಆಗಿವೆ. ಆ ಕಾರಣಕ್ಕಾಗಿಯೇ ಕಲಾವಿದರು, ಸಾಹಿತಿಗಳು ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿ ಕೊಳ್ಳುವಂತಾಯಿತು. ಕಲೆ ಸಾಹಿತ್ಯಗಳ ಹಿಂದಿನ ಮಾನವೀಯ ತುಡಿತ ಸಾಮಾಜಿಕವಾಗಿ ಮನುಷ್ಯ-ಮನುಷ್ಯರ ನಡುವೆ ಸಂಬಂಧಗಳನ್ನು ಬೆಸೆಯುವಂತಾಗಬೇಕು ಎಂಬ ಭಾವ ಅಧಿಕವಾಗಿತ್ತು. ಸಾಹಿತಿಗೂ ಸಮಾಜಕ್ಕೂ ಅಂತರವುಳಿಯದೆ ಪರಸ್ಪರಾವಲಂಬಿತವಾಗಿ ಭಾವಸ್ಫುರಣೆಯಾಗುವಂತೆ ಸೃಜನಶೀಲ ಲೋಕ ತೆರೆದುಕೊಳ್ಳಬೇಕು ಎಂಬ ಆಕಾಂಕ್ಷೆ ಮನೆ ಮಾಡಿತ್ತು.ಇದಕ್ಕೆ ಪೂರಕವಾಗಿ ಸಮಕಾಲೀನ ಸಮಾಜವಾದೀ ಚಿಂತನೆಯೂ ಬಾಹ್ಯವಾಗಿ ಸಾಹಿತಿಗಳನ್ನು ಪ್ರಚೋದಿಸುವ ಅನೇಕ ವಿದ್ಯಮಾನಗಳೂ ಇದೇ ಕಾಲದಲ್ಲಿ ನಡೆದುವು.
ಸಮಾಜ ಸುಧಾರಕರ ಚಿಂತನೆಗಳು ಕನ್ನಡನಾಡಿನ ರಾಜಕೀಯವನ್ನು, ಸಮಾಜವನ್ನು ಹೊಸ ಬಗೆಯಲ್ಲಿ ಪ್ರಚೋದಿಸಿದುವು. ಹಾಗೆಯೇ ಸಾಹಿತ್ಯ ಅಕಾದೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ ಮೊದಲಾದ ಸ್ವಾಯತ್ತ ಸಂಸ್ಥೆಗಳು ಅವುಗಳ ಮೂಲಕ ಪ್ರಕಟಿಸಿದ ಅನ್ಯಭಾಷಾ ಸಾಹಿತ್ಯ ಕೃತಿಗಳೂ ಆ ಕಾಲದ ಬರಹಗಾರರನ್ನು ಹೆಚ್ಚು ಪ್ರಚೋದಿಸಿದುವು. ಕನ್ನಡ ಸಾಹಿತ್ಯವು ನವ್ಯದ ಹೊತ್ತಿಗೆ ಅಕಾಡೆಮಿಕ್ ಜನರ, ಅದರಲ್ಲಿಯೂ ಇಂಗ್ಲಿಷ್ ಪ್ರಾಧ್ಯಾಪಕರ ಸೊತ್ತಾಗಿ ಪರಿವರ್ತನೆಯಾಗಿ ಪಾಶ್ಚಾತ್ಯ ಪ್ರಣೀತ ಸಾಹಿತ್ಯ ಸಿದ್ಧಾಂತಗಳೇ ಸಾಹಿತ್ಯಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದುವು. ಅವುಗಳನ್ನು ಮೀರಿ ಸಾಹಿತ್ಯ ಸಮಕಾಲೀನ ಸಮಾಜದ, ನೆಲದ ಆಗುಹೋಗುಗಳ, ಜನರ ನೋವು ನಲಿವುಗಳ ಭಾಗವಾಗಿ ಜನಮುಖಿಯಾಗಬೇಕೆಂಬ ತುಡಿತ ಬರಹಗಾರರಲ್ಲಿ ಅಗಾಧವಾಗಿತ್ತು. ಇದಕ್ಕೆಲ್ಲ ಪ್ರೇರಣೆರೂಪದಲ್ಲಿ ಸಾಮಾಜಿಕವಾಗಿ ಹಿಂದುಳಿದ ಜನರಿಗೆ ಒದಗಿದ ಶಿಕ್ಷಣ, ರಾಜಕೀಯ, ಆರ್ಥಿಕ ಸವಲತ್ತುಗಳು, ಹೊಸ ಭರವಸೆಯನ್ನು ಮೂಡಿಸಿದುವು. ಅಲ್ಲದೆ ಅವರು ಹೆಚ್ಚು ಆತ್ಮವಿಶ್ವಾಸದಿಂದ ಬದುಕುವಂತೆ ಮಾಡಿದುವು. ಇವೆಲ್ಲವುಗಳನ್ನು ಈ ಕಾಲಘಟ್ಟದಲ್ಲಿನ ಬರಹಗಾರರ ಅಭಿವ್ಯಕ್ತಿಯಲ್ಲಿ ಕಾಣಬಹುದು. ಸಾಹಿತ್ಯ ನಿಂತ ನೀರಾಗದೆ ಒಂದೇ ವರ್ಗದ ಸೊತ್ತಾಗದೆ ಸಮಾಜದ ಎಲ್ಲ ವರ್ಗಗಳ ಸದಾಶಯಗಳನ್ನು ಮುಂದಿಡಬೇಕೆಂಬ ಕಾಳಜಿ ಸ್ಪಷ್ಟವಾಗಿ ದಾಖಲಾಯಿತು. ಇದರಿಂದ ಸಾಹಿತ್ಯ ಲೋಕಕ್ಕೆ ಅನೇಕ ಯುವ ಬರಹಗಾರರು ಬೇರೆ ಬೇರೆ ಹಿನ್ನೆಲೆಯಿಂದ ಬಂದರು. ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಹಿಂದಿಲ್ಲದ ಹೊಸ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸುವುದು ಇದರಿಂದ ಸಾಧ್ಯವಾಯಿತು.
ಎಪ್ಪತ್ತರ ದಶಕದಲ್ಲಿ ಬರಹಗಾರರು ಸಾಮಾಜಿಕವಾಗಿ ಜಾಗೃತಗೊಳ್ಳುತ್ತಿದ್ದ ಮನಸ್ಥಿತಿಯೊಂದು ಸಣ್ಣಕತೆಗಳ ಮೂಲಕವೂ ಅನಾವರಣಗೊಂಡಿದೆ. ಕತೆ ಸಾಂವಿಧಾನಿಕವಾದ ಸಾಹಿತ್ಯ ಪ್ರಕಾರವಾಗಿ ಗಟ್ಟಿಗೊಳ್ಳಬೇಕಾದ ಅಗತ್ಯಕ್ಕಿಂತಲೂ ಹೆಚ್ಚಾಗಿ ತಮ್ಮ ಧೋರಣೆಗಳನ್ನು, ನಿಲುವುಗಳನ್ನು ಪ್ರಕಟಿಸುವುದೇ ಮುಖ್ಯವಾಗಿದೆ. ಸಮಾಜದಲ್ಲಿ ನಡೆಯುವ ಅನ್ಯಾಯ, ಅನಾಚಾರಗಳನ್ನು ಗಟ್ಟಿಧ್ವನಿಯಲ್ಲಿ ಪ್ರತಿಭಟಿಸುವುದು ವಾಸ್ತವವಾಗಿ ಅಸಾಧ್ಯವಾಗಿರಬಹುದು. ಆದರೆ ಅವರೆಲ್ಲರೂ ತಾವು ಬರೆದ ಕತೆಗಳ ಪಾತ್ರಗಳಲ್ಲಿ ಅವರ ನಿಲುವುಗಳನ್ನು ದಾಖಲಿಸಿದರು. ಸಮಾಜದ ಹಿತಕಾಯುವ ಆಶಯಗಳನ್ನು, ಧೋರಣೆಗಳನ್ನು ತಾಳುವ ಕಥಾಪಾತ್ರಗಳ ಘಟನೆಗಳನ್ನು ಕತೆಗಳಲ್ಲಿ ಸೃಷ್ಟಿಸಿದರು. ವಾಸ್ತವದಲ್ಲಿ ಅಸಾಧ್ಯವಾದರೂ ಕತೆಯು ಕಾಲ್ಪನಿಕ ಜಗತ್ತಿನಲ್ಲಿ ತಮ್ಮ ಕನಸುಗಳನ್ನು ಮೂರ್ತಗೊಳಿಸುವುದು ಅಂತಹ ಕತೆಗಾರರಿಗೆ ಸಾಧ್ಯವಾಗಿದೆ. ಸಾಮಾಜಿಕ ಜಾಗೃತಿ ಎನ್ನುವುದು ಸೃಜನಶೀಲ ಬರಹಗಾರರ ಮನಸ್ಸಿನಲ್ಲಿ ಮೂಡಿದಾಗ ಅವುಗಳನ್ನು ಕತೆಗಳ ಮೂಲಕ ಸಾಕಾರಗೊಳಿಸಿರುವುದು ವಿಶೇಷ. ಭೌತಿಕ ಜಗತ್ತಿನಲ್ಲಿ ಅಸಾಧ್ಯವೇ ಆದರೂ ಸಾಹಿತ್ಯಕ್ಷೇತ್ರದಲ್ಲಿ ಆಗುಗೊಳಿಸುವ ಬರಹಗಾರರ ಸಂಕಲ್ಪ, ಸಿದ್ಧಿಗಳು ಮುಂದೆ ಸಾಹಿತ್ಯಕ್ಷೇತ್ರದಲ್ಲಿ ಗಟ್ಟಿಗೊಳ್ಳಬೇಕಾದ ವೈಚಾರಿಕ ನೆಲೆಯೊಂದರ ಹೊಳಹಿನಂತೆ ಭಾಸವಾಗಿದೆ. ಸಮಾಜದ ಅಸಹಾಯಕರ ಧ್ವನಿಯಾಗಿ ಸಾಹಿತ್ಯಕ್ಷೇತ್ರ ಅಂತಹ ಲೇಖಕರಿಗೆ ಇಂಬು ನೀಡಿದೆ. ಅದಕ್ಕೆ ಎಪ್ಪತ್ತರ ದಶಕದ ಕನ್ನಡ ಸಣ್ಣಕತೆಗಾರರೂ ಸಾಕ್ಷಿಯಾಗುತ್ತಾರೆ.
ಇಪ್ಪತ್ತನೆಯ ಶತಮಾನದಲ್ಲಿ ಎಪ್ಪತ್ತರ ದಶಕವು ಸಾಂಸ್ಕೃತಿಕ ತಿರುವನ್ನು ನೀಡಿದ ಕಾಲಘಟ್ಟ. ಈ ದಶಕದಲ್ಲಿ ಲೇಖಕರು ಅದುವರೆಗೆ ಪ್ರಚಲಿತದಲ್ಲಿದ್ದ ಆಧುನಿಕ ಸಾಹಿತ್ಯ ಪ್ರಕಾರಗಳ ವಿಭಿನ್ನ ಆಯಾಮಗಳನ್ನು ಕುರಿತಂತೆ ಪ್ರಜ್ಞೆಯುಳ್ಳವರಾಗಿದ್ದರು. ಸಾಹಿತ್ಯ ಎಂಬುದು ಕೆಲವೇ ವರ್ಗದ ಜನರ ಸ್ವತ್ತಾಗಿದೆ ಎಂಬ ಬಗೆಗೆ ಅಸಮಾಧಾನಗಳೆದ್ದಿದ್ದುವು. ಸಮಾಜದ ಎಲ್ಲಾ ವರ್ಗದವರಿಗೆ ಸಾಹಿತ್ಯ ಸಂಘಟನೆಗಳಲ್ಲಿ, ಸಮ್ಮೇಳನಗಳಲ್ಲಿ ಪ್ರಾತಿನಿಧ್ಯ ಸಿಗಬೇಕೆಂಬ ಕೂಗು ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಂಡಿತ್ತು. ಸಮಾಜದ ಎಲ್ಲಾ ವರ್ಗದವರಿಗೆ ಶಿಕ್ಷಣ ದೊರೆತ ಪರಿಣಾಮದಿಂದ ಎಲ್ಲರೂ ಸಾಮಾಜಿಕವಾಗಿ ಸಬಲರಾಗುತ್ತ ಬಂದಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾನಮಾನಗಳು ದೊರೆತಿರಲಿಲ್ಲ. ಈ ಕಾರಣಕ್ಕಾಗಿ ಸಮಾಜದಲ್ಲಿ ದಲಿತರು, ಮಹಿಳೆಯರು, ತಮ್ಮ ಪ್ರಾತಿನಿಧ್ಯಕ್ಕಾಗಿ ಸಾಹಿತ್ಯ ಕ್ಷೇತ್ರದಲ್ಲಿ ದನಿಯೆತ್ತಿದರು. ಸಮಾಜದಲ್ಲಿ ಮನೆಮಾಡಿದ್ದ ಅಸ್ಪೃಶ್ಯತೆ, ಶೋಷಣೆ, ಹಸಿವು, ಬಡತನ ಇತ್ಯಾದಿ ಸಾಮಾಜಿಕ ಪಿಡುಗುಗಳ ಬಗೆಗೆ ಲೇಖಕ ವರ್ಗ ಸಿಡಿದೆದ್ದು ತಮ್ಮ ಸಿಟ್ಟನ್ನು ಬರಹಗಳ ಮೂಲಕ ಹೊರಹಾಕಿತು. ಸಾಹಿತ್ಯ ಸಮಾಜದ ಎಲ್ಲಾ ವರ್ಗಗಳ ಆಶೋತ್ತರಗಳಿಗೆ ಸ್ಪಂದಿಸಬೇಕೆಂಬ ಉತ್ಕಟ ಅಪೇಕ್ಷೆ ಲೇಖಕರಲ್ಲಿ ಕಾಣಿಸಿಕೊಂಡಿತು. ಪರಿಣಾಮವಾಗಿ ಯುವ ಲೇಖಕರು ತಮ್ಮ ಸಮಾಜದ ನೋವು ನಲಿವುಗಳಿಗೆ ದನಿಯಾದರು. ಮೊದಲ ಬಾರಿಗೆ ಅಕ್ಷರ ಕಲಿತ ಸಮುದಾಯಗಳಿಂದ ಲೇಖಕರು ಕಾಣಿಸಿಕೊಂಡು ತಮ್ಮ ಅನುಭವಗಳನ್ನು ವೈಯಕ್ತಿಕ ಹಿನ್ನೆಲೆಯಿಂದಲೇ ಅಕ್ಷರ ರೂಪಕ್ಕಿಳಿಸಿದರು. ಸಮಾಜದ ಕುರಿತ ತಮ್ಮ ನಿಲುವುಗಳನ್ನು ನಿಖರವಾಗಿ ಕಂಡುಕೊಳ್ಳುವ ಪ್ರಯತ್ನವನ್ನು ಕತೆಗಳ ಮೂಲಕ ಮಾಡಿದರು. ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಬೇಕೆಂಬ ಆಶಾವಾದವನ್ನು ಈ ದಶಕದ ಬರಹಗಾರರು ಹುಟ್ಟುಹಾಕಿದರು. ಈ ದಶಕದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಆದ ಬದಲಾವಣೆಯ ಕಾರಣಕ್ಕೆ ದಲಿತ ಸಮುದಾಯಕ್ಕೂ ಅಕ್ಷರ ಭಾಗ್ಯ ದೊರೆಯಿತು. ಇದರಿಂದ ಶಿಕ್ಷಿತ ದಲಿತ ಯುವಕರು ಸಂಘಟಿತರಾಗಿ ಸಮಾಜದ ಅವ್ಯವಸ್ಥೆಗಳ ಬಗೆಗೆ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವ ಕೆಚ್ಚನ್ನು ಬೆಳೆಸಿಕೊಂಡಂತೆ ಕತೆಗಳಲ್ಲಿ ಅಭಿವ್ಯಕ್ತಿಸಲಾಗಿದೆ. ಆ ಮೂಲಕ ಸಾಮಾಜಿಕವಾಗಿ ಸಂಘಟಿತರಾಗಬೇಕೆಂಬ ಅಪೇಕ್ಷೆ ಯುವಜನರಲ್ಲಿ ಮೂಡಿತು.
ಸಮಾಜದ ಆದರ್ಶ ಮುಖವನ್ನು ಪ್ರತಿಪಾದಿಸುತ್ತಾ ಹಿರಿಯ ತಲೆಮಾರಿನ ಲೇಖಕರೂ ಈ ದಶಕದಲ್ಲಿ ಕತೆಗಳನ್ನು ಬರೆದರು. ಸಾಹಿತ್ಯ ಪ್ರಕಾರವಾಗಿ ಭಾಷೆ ಆಕೃತಿಗಳ ನೆಲೆಯಿಂದ ಪ್ರೌಢ ಸಣ್ಣಕತೆಗಳ ರಚನೆಗಳನ್ನು ಮಾಡಿದ ಲೇಖಕರೂ ಇದ್ದಾರೆ. ಅವರ ನಡುವೆ ಸಮಕಾಲೀನ ಸಮಾಜದ ಆಶೋತ್ತರಗಳನ್ನು ಕತೆಗಳಲ್ಲಿ ಮುಖ್ಯ ಆಶಯಗಳಾಗಿ ಬರೆಯುವ ಯುವ ಲೇಖಕರು ಈ ದಶಕದಲ್ಲಿ ಹೊಸತಾಗಿ ಕಾಣಿಸಿಕೊಂಡಿರುವುದು ವಿಶೇಷ. ಒಟ್ಟಿನಲ್ಲಿ ಎಪ್ಪತ್ತರ ದಶಕವು ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲಿಯೂ ಸಣ್ಣಕಥಾಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಈ ಎಲ್ಲಾ ನೆಲೆಗಳಿಂದ ಪ್ರಸ್ತುತ ಅಧ್ಯಯನಕ್ಕೆ ಸಮಕಾಲೀನ ಪ್ರಸಕ್ತಿ ಇದೆ ಎಂದು ಭಾವಿಸಲಾಗಿದೆ.
* * *
ಸಮಕಾಲೀನವಾಗಿ ಯಾವುದೇ ನಿರ್ದಿಷ್ಟ ಪಂಥವೆಂದು ಖಚಿತವಾಗಿ ಸಾಹಿತ್ಯ ಚರಿತ್ರೆಯಲ್ಲಿ ಗುರುತಿಸಲು ಸಾಧ್ಯವಾಗದೇ ಹೋಗಬಹುದು. ಆದರೆ ಸಮಾಜ ವಿರೋಧಿ ನಿಲುವುಗಳ ಬಗೆಗಿನ ಪ್ರತಿಭಟನೆಯ ಧ್ವನಿ, ದಮನಿತರಪರ ಕಾಳಜಿಯ ಸಂವೇದನಾತ್ಮಕ ಪ್ರತಿಕ್ರಿಯೆ, ಆವೇಶ, ಸಿಟ್ಟು ಇತ್ಯಾದಿಗಳು ನವ್ಯೋತ್ತರ ದಿನಗಳ ದಲಿತ ಬಂಡಾಯ ಪಂಥಗಳ ಕುರುಹು ಗಳಾಗಿಯೇ ಇಂದಿಗೂ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಬಹುದು.
ಸಮಕಾಲೀನ ಕನ್ನಡ ಸಾಹಿತ್ಯ ಕ್ಷೇತ್ರವು ವಿಭಿನ್ನವಾಗಿ ಬಹುತ್ವದ ನೆಲೆಗಳಿಂದ ರೂಪುಗೊಳ್ಳುತ್ತಿದೆ. ಯಾವುದೇ ಒಂದು ನಿರ್ದಿಷ್ಟ ಪಂಥ, ಪ್ರವೃತ್ತಿಗಳಿಗೆ ಸೀಮಿತವಾಗದೆ ಸಮಾಜಮುಖಿಯಾದ ಎಲ್ಲಾ ಬಗೆಯ ಆಶಯಗಳು ಸಾಹಿತ್ಯದ ವಸ್ತುಗಳಾಗಿ ದಾಖಲಾಗುತ್ತಿವೆ. ಹಿಂದೆಂದೂ ಇಲ್ಲದಷ್ಟು ವೈವಿಧ್ಯಮಯವಾದ ಸಾಂಸ್ಕೃತಿಕ ಲೋಕ ಕನ್ನಡ ಸಾಹಿತ್ಯದಲ್ಲಿ ಅನಾವರಣಗೊಳ್ಳುತ್ತಿದೆ. ಕಳೆದ ಸುಮಾರು ಮೂರ್‍ನಾಲ್ಕು ದಶಕಗಳ ಅವಧಿಯಲ್ಲಿ ಪ್ರಕಟವಾದ ಕೃತಿಗಳೇ ಇದಕ್ಕೆ ಮುಖ್ಯ ನಿದರ್ಶನ. ಸಾಮಾಜಿಕ ಸಮಾನತೆಯ ತುಡಿತವೊಂದು ಸಾಹಿತ್ಯದಲ್ಲಿ ಸದಾ ಜಾಗೃತವಾಗಿದೆ. ಲಿಂಗಭೇದ, ಜಾತಿಭೇದ, ವರ್ಗಭೇದವನ್ನು ನಿರಾಕರಿಸುವ ಸಾಮಾಜಿಕ ಅವ್ಯವಸ್ಥೆಗಳ ಬಗೆಗೆ ಪ್ರತಿರೋಧವನ್ನು ದಾಖಲಿಸುವ ಸಾಹಿತ್ಯ ಇಂದಿನ ಬರಹಗಾರರ ಅಭಿವ್ಯಕ್ತಿಗಳಲ್ಲಿ ಪ್ರಮುಖವಾಗಿ ಕಾಣಬಹುದು. ಸಾಹಿತ್ಯವು ಮನರಂಜನೆ, ಸಂತೋಷ ಇತ್ಯಾದಿಗಳ ಕಾರಣಕ್ಕೆ ಮಾತ್ರ ಸೃಷ್ಟಿಯಾಗುವುದಲ್ಲ. ಅದು ಯಾವತ್ತೂ ಮಾನವೀಯ ತಳಹದಿಯಲ್ಲಿ ಸಂಬಂಧಗಳನ್ನು ಬೆಸೆಯಬೇಕೆಂಬ ದೃಢವಾದ ನಿಷ್ಠೆಯೊಂದರ ಮುಖ್ಯ ಧ್ವನಿಯಾಗಿದೆ. ಇದನ್ನು ಸಮಾಜದೊಡನೆ ಸಂವಾದಕ್ಕೆಳಸುವ ಸಾಹಿತ್ಯದ ಮುಖ್ಯ ಚಹರೆಯಾಗಿ ಗುರುತಿಸಬಹುದು. ಈ ದಿಸೆಯಲ್ಲಿ ಅನೇಕ ಅಧ್ಯಯನಗಳೂ ನಡೆದಿವೆ. ಈ ಎಲ್ಲಾ ಹಿನ್ನೆಲೆಗಳಲ್ಲಿ ಎಪ್ಪತ್ತರ ದಶಕದ ಸಣ್ಣಕತೆಗಳನ್ನು ಹೊಸತಾಗಿ ಅಧ್ಯಯನಕ್ಕೆ ಒಳಪಡಿಸುವ ವಿಪುಲ ಅವಕಾಶಗಳೂ ಇವೆ.
–ಮೋಹನ ಕುಂಟಾರ್
ಪ್ರಸ್ತಾವನೆ
ಆಧುನಿಕ ಕನ್ನಡ ಸಣ್ಣಕತೆಗಳು ಕಾಲಾನುಕ್ರಮದಲ್ಲಿ ವಿವಿಧ ಆಶಯಗಳನ್ನೊಳಗೊಂಡು ಪ್ರಕಟವಾಗಿರುವುದು ವ್ಯಕ್ತವಾಗುತ್ತದೆ. ಜೊತೆಗೆ ವಿವಿಧ ಪಂಥಗಳು ಪ್ರಾತಿನಿಧ್ಯ ವಹಿಸಿರುವುದನ್ನೂ ಕಾಣುತ್ತೇವೆ. ಅವಗಣನೆಗೊಳಗಾಗಿದ್ದ ಗದ್ಯ ಸಾಹಿತ್ಯಕ್ಕೆ ಶ್ರೇಷ್ಠತೆಯನ್ನು ತಂದುಕೊಟ್ಟ ಕೀರ್ತಿ ಆಧುನಿಕ ಕನ್ನಡ ಸಣ್ಣಕತೆಗಳಿಗೆ ಸಲ್ಲಬೇಕು. ಕನ್ನಡ ಸಾಹಿತ್ಯದಲ್ಲಿ ದೀರ್ಘ ಅವಧಿಯಲ್ಲಿ ವಿಪುಲವಾದ ಸಣ್ಣಕತೆಗಳ ರಚನೆಗಳಾಗಿವೆ. ವಿಭಿನ್ನ ವಸ್ತುಗಳನ್ನೊಳಗೊಂಡು, ವಿಭಿನ್ನ ಪ್ರಯೋಗಗಳನ್ನು ಕನ್ನಡ ಸಣ್ಣಕತೆ ಕಂಡುಕೊಂಡಿದೆ. ಜಾಗತಿಕ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲಬಲ್ಲ ಶ್ರೇಷ್ಠ ಸಣ್ಣಕತೆಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರ ಸೃಷ್ಟಿಸಿದೆ. ಆದರೆ ಕಾದಂಬರಿ ಕ್ಷೇತ್ರಕ್ಕೆ ಹೋಲಿಸಿದರೆ ಕನ್ನಡ ಸಣ್ಣಕತೆಗಳ ಅಧ್ಯಯನ ಅಷ್ಟಾಗಿ ನಡೆದಿಲ್ಲ. ಬಿಡಿ ಲೇಖನಗಳ ರೂಪದಲ್ಲಿ ಅಲ್ಲಲ್ಲಿ ಕೆಲವು ಕತೆಗಳ ಕುರಿತ ವಿಮರ್ಶಾತ್ಮಕ ಅಧ್ಯಯನ ನಡೆದಿರುವುದನ್ನು ಕಾಣಬಹುದು. ಕೆಲವು ಗೋಷ್ಠಿಗಳಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳ ಕುರಿತು ಚರ್ಚೆಯಾದಂತೆ ಸಣ್ಣ ಕಥಾಪ್ರಕಾರದ ಕುರಿತು ಚರ್ಚೆ ನಡೆಯುತ್ತಿದೆ. ಹಿಂದಿನ ವಿಚಾರ ಸಂಕಿರಣಗಳಲ್ಲಾಗಲಿ, ಗೋಷ್ಠಿ ಗಳಲ್ಲಾಗಲಿ, ಸಾಹಿತ್ಯ ಸಮ್ಮೇಳನಗಳಲ್ಲಾಗಲಿ ಸಣ್ಣ ಕಥಾಪ್ರಕಾರದ ಚರ್ಚೆಗೆ ಅಷ್ಟಾಗಿ ಅವಕಾಶಗಳನ್ನು ನೀಡಿದಂತೆ ಕಾಣುವುದಿಲ್ಲ.
ಕನ್ನಡ ಸಣ್ಣಕತೆಗಳ ಇತಿಹಾಸದಲ್ಲಿ ಎಪ್ಪತ್ತರ ದಶಕವು ಒಂದು ಸಂಕ್ರಮಣ ಕಾಲವೆಂದು ಹೇಳಬಹುದು. ನವೋದಯ, ಪ್ರಗತಿಶೀಲ ಪಂಥಗಳು ದುರ್ಬಲವಾಗಿ ಅರವತ್ತರ ದಶಕದಲ್ಲಿ ನವ್ಯ ಪಂಥ ಉಚ್ಚ್ರಾಯ ಸ್ಥಿತಿಯಲ್ಲಿತ್ತು(ನೋ: ಅನುಬಂಧ ೧.೧). ಜನಪರವಾದ ಆಲೋಚನೆಗಳು ಹುಟ್ಟಿಕೊಂಡಾಗ ನವ್ಯ ಪಂಥದ ಹರಿಕಾರರು, ತರುಣ ಲೇಖಕರು ಕಾಲಕ್ರಮೇಣ ತಮ್ಮ ಬರವಣಿಗೆಯ ಧಾಟಿಯನ್ನೇ ಬದಲಾಯಿಸಿ ಕೊಂಡರು.
ಸಾಹಿತ್ಯ ಜನಸಮೀಪವಾಗಿರಬೇಕೆಂಬ ತೀವ್ರ ಕಾಳಜಿ ಈ ದಶಕದ ಲೇಖಕರ ವೈಶಿಷ್ಟ್ಯವಾಗಿದೆ. ನವೋದಯರ ಆದರ್ಶಪ್ರಿಯತೆಯನ್ನು, ನವ್ಯರ ವೈಯಕ್ತಿಕ ಅಂತರ್ಮುಖತೆಯನ್ನು ಸಾಮಾನ್ಯವಾಗಿ ತಿರಸ್ಕರಿಸಿದ ಈ ದಶಕದ ಲೇಖಕರು ಜನಪರ ನಿಲುವುಗಳನ್ನು, ಸಾಮಾಜಿಕ ಹುಳುಕುಗಳನ್ನು ಸಾಹಿತ್ಯದಲ್ಲಿ ಅಭಿವ್ಯಕ್ತಿಸಿದರು. ಸಮಕಾಲೀನ ಸಮಾಜಕ್ಕೆ ಪ್ರತಿಸ್ಪಂದಿಸಿದ ನವ್ಯ ಲೇಖಕರು ಸಹ ತಮ್ಮ ಬರವಣಿಗೆಯನ್ನು ಸರಳಗೊಳಿಸಿದುದನ್ನು ಈ ದಶಕದ ಆರಂಭದಿಂದಲೇ ಕಾಣಬಹುದು. ನವ್ಯೋತ್ತರದಲ್ಲಿ ದಲಿತ, ಬಂಡಾಯವೆನ್ನುವ ಹೊಸ ರೀತಿಯ ಕತೆಗಳೂ ಹುಟ್ಟಿಕೊಂಡುದು ಗಮನಾರ್ಹವಾಗಿದೆ.
ಹಿಂದುಳಿದ ವರ್ಗಗಳಿಗೆ ಸಾಮಾಜಿಕವಾಗಿ ದೊರೆತ ಪ್ರಚೋದನೆ, ರಾಜಕೀಯವಾಗಿ ದೊರೆತ ಪ್ರೋತ್ಸಾಹ ಇವುಗಳ ಫಲವಾಗಿ ಸಮಾಜದ ತಳವರ್ಗದಿಂದಲೂ ಹೊಸ ಲೇಖಕರು ಹುಟ್ಟಿಕೊಂಡರು. ಅಲ್ಲದೆ ದಲಿತ ಸಾಹಿತ್ಯವೆಂಬ ಹೊಸ ಸಾಹಿತ್ಯ ಪಂಥವೂ ಇದೇ ದಶಕದಲ್ಲಿ ಆರಂಭವಾಯಿತು. ಸಾಹಿತ್ಯ ಪರಿಷತ್‌ನ ನಿಷ್ಕ್ರಿಯತೆ, ಪುರೋಹಿತಶಾಹಿಯ ಹಾಗೂ ಉಳ್ಳವರ ಅಟ್ಟಹಾಸದ ವಿರುದ್ಧ ಬಂಡೆದ್ದ ಲೇಖಕವರ್ಗ ಬಂಡಾಯ ಸಾಹಿತ್ಯವೆಂಬ ಹೊಸ ಸಾಹಿತ್ಯ ಪಂಥವನ್ನೇ ಹುಟ್ಟು ಹಾಕಿತು.
ನವ್ಯ ನವೋದಯ ಪಂಥಗಳನ್ನು ಪ್ರತಿನಿಧಿಸುವ ಕತೆಗಳನ್ನೂ ಎಪ್ಪತ್ತರ ದಶಕದಲ್ಲಿ ಗುರುತಿಸಬಹುದು. ಅಲ್ಲದೆ ಯಾವುದೇ ಪಂಥಗಳಿಗೆ ಸೀಮಿತಗೊಳ್ಳದ ಕತೆಗಳನ್ನೂ ಈ ದಶಕ ಕಂಡುಕೊಂಡಿದೆ.
ಈ ಒಂದು ದಶಕದ ಅಲ್ಪ ಕಾಲಾವಧಿಯಲ್ಲಿ ಕನ್ನಡ ಸಾಹಿತ್ಯ ಮಹತ್ತರವಾದ ಬದಲಾವಣೆ ಯನ್ನು ಕಂಡುಕೊಂಡಿದೆ. ಹೊಸ ನಿಲುವುಗಳನ್ನು ಪಡೆದುಕೊಳ್ಳುವ ಸಲುವಾಗಿ ನಮ್ಮ ಸಾಹಿತ್ಯದ ಇತಿಹಾಸದಲ್ಲಿಯೇ ಈ ಹತ್ತು ವರ್ಷಗಳಲ್ಲಿ ನಡೆದಷ್ಟು ಚಳುವಳಿ, ಚರ್ಚೆ, ವಿವಾದ, ಮಂಥನ, ವಿಚಾರ ವಿಮರ್ಶೆಗಳು ಈ ಹಿಂದೆಂದೂ ನಡೆದಿರಲಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ತಿರುವನ್ನು ನೀಡಿದ ಈ ಕಾಲಘಟ್ಟದ ಸಣ್ಣಕತೆಗಳನ್ನು ಆಕರವಾಗಿರಿಸಿಕೊಂಡು ಪ್ರಸ್ತುತ ಅಧ್ಯಯನವನ್ನು ಮಾಡಲಾಗಿದೆ. ನವ್ಯದ ಸ್ವಗತದ ಆಶಯದಿಂದ ನವ್ಯೋತ್ತರದ ಸಂವಾದದ ಆಶಯದೆಡೆಗೆ ಸಾಹಿತ್ಯ ಕ್ಷೇತ್ರ ತುಡಿಯಲಾರಂಭಿಸಿದ್ದನ್ನು ಗುರುತಿಸುವ ಪ್ರಯತ್ನ ಇಲ್ಲಿಯದು.
ಬರಹಗಾರರು ಸಮಾಜವೊಂದರ, ಸಾಂಸ್ಕೃತಿಕ ಘಟಕವೊಂದರ ಅಂಗವಾಗಿರುತ್ತಾರೆ. ಹಾಗೆಯೇ ಒಂದು ನಿರ್ದಿಷ್ಟ ಕಾಲಘಟ್ಟವೊಂದನ್ನು ಪ್ರತಿನಿಧಿಸಿರುತ್ತಾರೆ. ಆದಕಾರಣ ಯಾವುದೇ ಒಂದು ಕಲಾಕೃತಿಯನ್ನು ಅಭ್ಯಾಸ ಮಾಡುವಾಗ ಅದು ಹುಟ್ಟಿಕೊಂಡ ಕಾಲವೂ, ಸಮಾಜವೂ ಮುಖ್ಯ ವಾಗುತ್ತದೆ. ಬರಹಗಾರರೊಬ್ಬರು ಸಮಕಾಲೀನ ಸ್ಥಿತಿಗತಿಗಳನ್ನು ವಿಚಾರಗಳನ್ನು ಒಪ್ಪಿಕೊಂಡು ಬರೆಯಬಹುದು. ಇವುಗಳನ್ನು ಮೀರಿ ತಮ್ಮತನವನ್ನು ಎತ್ತಿ ಹಿಡಿಯಬಹುದು. ಆದರೆ ಸಮಕಾಲೀನ ವಿಚಾರಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಲೇಖಕರು ಪ್ರತಿಸ್ಪಂದಿಸದೆ ಇರುವುದು ಸಾಧ್ಯವಿಲ್ಲ. ಸಾಹಿತ್ಯ ಕೃತಿಯೊಂದು ಬರಹಗಾರರ ಬದುಕಿನಲ್ಲಿ ಅವರು ಕಂಡುಂಡ ಅನುಭವಗಳ ಹಿನ್ನೆಲೆಯಲ್ಲಿ ಸಂಸ್ಕಾರಗೊಂಡು ರೂಪುಗೊಳ್ಳುತ್ತದೆ. ಆಗ ಲೇಖಕರು ತಾವು ಬದುಕುತ್ತಿರುವ ಕಾಲಕ್ಕೆ ಹಾಗೂ ಒಂದು ನಿಲುವಿಗೆ ಬದ್ಧರಾಗಿರುತ್ತಾರೆ. ಹೀಗೆ ಬದ್ಧರಾಗಿದ್ದೂ ಸಹ ಕೃತಿಯೊಂದು ಅಂತಿಮ ನೆಲೆಯಲ್ಲಿ ಸಾರ್ವತ್ರಿಕವಾಗುವುದು ಸಾಧ್ಯವಿದೆ.
ಬರಹಗಾರರು ಆಯ್ದುಕೊಳ್ಳುವ ವಿಷಯ, ಅವರು ತಳೆಯಬಹುದಾದ ನಿಲುವು ಕಾಲ ಧರ್ಮಕ್ಕನುಗುಣವಾಗಿ ಬದಲಾಗುತ್ತಾ ರೂಪುಗೊಂಡುದೂ ಆಗಿರುತ್ತದೆಂಬುದು ಸತ್ಯ. ಉದಾಹರಣೆಗಾಗಿ ಹಳಗನ್ನಡ ಸಾಹಿತ್ಯವನ್ನು ಗಮನಿಸಬಹುದು. ಪಂಪನ ಕಾಲದಲ್ಲಿ ಶೌರ್ಯ ಸಾಹಸಗಳೇ ಪ್ರಮುಖವಾಗಿದ್ದುವು. ವೀರ ಯುಗದಲ್ಲಿ ಬಾಳಿದ್ದ ಪಂಪ ಶೌರ್ಯ ಸಾಹಸಗಳನ್ನು ಪ್ರಕಟಪಡಿಸುವ ಸಲುವಾಗಿ ಮಹಾಭಾರತದ ಕತೆಯನ್ನಾಯ್ದುಕೊಂಡನು. ಪ್ರೌಢ ಕಾವ್ಯ ಮಾರ್ಗದಲ್ಲಿ ಕೃತಿ ರಚಿಸಿ ಅಂದಿನ ಪಂಡಿತ ವರ್ಗದ ಮೆಚ್ಚುಗೆ ಪಡೆಯುತ್ತಿದ್ದ ೧೦, ೧೧ನೇ ಶತಮಾನದ ಕೃತಿಕಾರರಿಗೆ ವಿರುದ್ಧವಾಗಿ ವಚನಕಾರರು ಸಾಹಿತ್ಯಿಕವಾಗಿ ಚಳುವಳಿಯನ್ನೇ ಹೂಡಿದರು. ಜನಸಾಮಾನ್ಯರಿಗೆ ಅರ್ಥೈಸಲು ಕಷ್ಟವಾಗಿದ್ದ ಕಾವ್ಯಮಾರ್ಗಕ್ಕೆ ಭಿನ್ನವಾಗಿ ಸರಳವಾದ ವಚನಗಳ ಮೂಲಕ ಸಾಹಿತ್ಯವನ್ನು ಜನಸಾಮಾನ್ಯರ ಸಮೀಪಕ್ಕೆ ತಂದರು. ಹಿಂದಿನ ಕವಿಗಳು ಸಾಹಿತ್ಯದಲ್ಲಿ ಬಳಸಿಕೊಳ್ಳುತ್ತಿದ್ದ ಪೌರಾಣಿಕ ವಸ್ತು, ಪಾತ್ರಗಳನ್ನು ಬಿಟ್ಟು ಸಾಮಾಜಿಕ ಕುಂದುಕೊರತೆಗಳನ್ನು ಸಾಹಿತ್ಯದಲ್ಲಿ ಬಳಸಿಕೊಂಡರು. ಪೌರಾಣಿಕ ವಸ್ತುವನ್ನು ಕೈಬಿಟ್ಟ ಪರಿಣಾಮವಾಗಿ ಆಯ್ದುಕೊಂಡ ವಸ್ತುವಿಗನುಗುಣವಾದ ಅಭಿವ್ಯಕ್ತಿಯ ರೂಪ, ಭಾಷೆಗಳೇ ಬದಲಾದವು. ಹಾಗಾಗಿ ಕಾಲಧರ್ಮ, ಉದ್ದೇಶಗಳಿಗನುಗುಣವಾಗಿ ಸಾಹಿತ್ಯದ ವಸ್ತು, ಭಾಷೆ ಬೇರೆಯಾಗುತ್ತದೆಂಬುದನ್ನು ತಿಳಿದುಕೊಳ್ಳ ಬಹುದು. ಆಧುನಿಕ ಕನ್ನಡ ಸಾಹಿತ್ಯದಲ್ಲೂ ಕಾಲಧರ್ಮಕ್ಕನುಗುಣವಾದ ವೈಚಾರಿಕ ಧೋರಣೆಗಳನ್ನು ಕಾಣುತ್ತೇವೆ. ಬ್ರಿಟಿಷರ ಅಧೀನದಲ್ಲಿದ್ದ ದೇಶವನ್ನು ಮುಕ್ತಗೊಳಿಸಲು ಹೋರಾಟ ನಡೆಸುವ ಸಲುವಾಗಿ ರಾಷ್ಟ್ರೀಯ ಮನೋಭಾವನೆಯನ್ನು ಬೆಳೆಸುವುದು ಆರಂಭದ ನವೋದಯ ಲೇಖಕರ ಉದ್ದೇಶವಾಗಿತ್ತು. ಬದುಕಬೇಕಾದ ಅಗತ್ಯ ಆ ಮೂಲಕ ದೇಶಬಾಂಧವರಲ್ಲಿ ಒಗ್ಗಟ್ಟಿನ ಮನೋಭಾವನೆಯನ್ನು ಮೂಡಿಸಬೇಕಾದ ಅನಿವಾರ್ಯತೆ ಕಂಡುಬಂದುದರಿಂದಲೇ ಆದರ್ಶ ಪ್ರಿಯತೆ, ಸ್ನೇಹ, ಪ್ರೀತಿ, ಸೌಹಾರ್ದಗಳೆ ಅಂದಿನ ಲೇಖಕರ ಪ್ರಮುಖ ಆಶಯಗಳಾಗಿದ್ದುವು. ಅಂದರೆ ನವೋದಯದ ಬರಹಗಾರರಿಗೆ ಒಂದಲ್ಲ ಒಂದು ರೀತಿಯಿಂದ ವಸಾಹತೀಕರಣಕ್ಕೆ ಪ್ರತಿಕ್ರಿಯಿಸದೇ ಇರಲಾಗಲಿಲ್ಲ.
ನವೋದಯರ ಜೊತೆ ಜೊತೆಗೆ ಪ್ರಗತಿಶೀಲ ಲೇಖಕರು ನವೋದಯರಿಗಿಂತ ಭಿನ್ನವಾದ ವಿಚಾರಗಳನ್ನು ಕೃತಿಯಲ್ಲಿ ಹೇಳ ಹೊರಟರು. ಹೊಸ ತತ್ವದ ಪ್ರತಿಪಾದನೆಗಾಗಿಯೇ ಪ್ರಗತಿಶೀಲ ಪಂಥ ಜನ್ಮ ತಾಳಿತು. ಮಾರ್ಕ್ಸ್‌ವಾದದಿಂದ ಪ್ರೇರಣೆಗೊಂಡ ತಮ್ಮ ವಿಚಾರಗಳನ್ನು ಹೇಳಲು ಇವರು ಬಡವರ ಕುರಿತ ಕಳಕಳಿ, ಶ್ರೀಮಂತರನ್ನು ಕುರಿತ ಆಕ್ರೋಶ, ಇವೆಲ್ಲವನ್ನು ಸಾಹಿತ್ಯ ಕೃತಿಯಲ್ಲಿ ಬಳಸಿಕೊಂಡರು. ಸಮಸ್ಯೆಗಳಲ್ಲಿ ಸಿಕ್ಕಿ ನರಳುತ್ತಿರುವ ವ್ಯಕ್ತಿಯ ಕುರಿತ ಸಹಾನುಭೂತಿಗೆ ಭಿನ್ನವಾಗಿ ಇವರ ರಚನೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಕುರಿತ ರೋಷ ಪ್ರಕಟವಾದುವು. ಇವೆಲ್ಲವುಗಳಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ೧೦ನೇ ಶತಮಾನದ ಬರಹಗಾರರಿಗೂ, ೧೨ನೇ ಶತಮಾನದ ಬರಹಗಾರರಿಗೂ, ಆಧುನಿಕ ಬರಹಗಾರರಿಗೂ ಚಿಂತನೆಯ ರೀತಿಯಲ್ಲಿಯೇ ವ್ಯತ್ಯಾಸವಿದೆ. ಇದು ತಾವು ಬದುಕಿ ಬಾಳಿದ ಸಮಕಾಲೀನ ಸ್ಥಿತಿಗತಿಗಳನ್ನು ಅವಲಂಬಿಸಿದೆ. ಹಾಗಾಗಿ ವಿಷಯದ ಆಯ್ಕೆ ಮತ್ತು ಅದಕ್ಕೆ ಲೇಖಕರು ಪ್ರತಿಕ್ರಿಯಿಸುವ ರೀತಿ ವ್ಯತ್ಯಾಸವಾಗುತ್ತಾ ಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಹೀಗೆ ವ್ಯತ್ಯಾಸಗೊಂಡು ಕೃತಿಯಲ್ಲಿ ಪ್ರಕಟವಾದಾಗ ದೊರೆಯುವ ಒಂದು ಸತ್ಯ ವಸ್ತು, ಕೃತಿಕಾರ, ಕಾಲ ಇವೆಲ್ಲವುಗಳನ್ನು ಒಳಗೊಂಡ ಒಂದು ಸಾರ್ವಕಾಲಿಕ ಸತ್ಯವೂ ಆಗಿರುತ್ತದೆ. ಇಂತಹ ಶ್ರೇಷ್ಠ ಮೌಲ್ಯವನ್ನೆ ನಾವು ಕೃತಿಯಲ್ಲಿನ ಜೀವನ ದರ್ಶನ ಎನ್ನುತ್ತೇವೆ. ಈ ಜೀವನ ದರ್ಶನದಿಂದಲೇ ಒಂದು ಕೃತಿ ಅನನ್ಯವಾಗುತ್ತದೆ. ಇಂತಹ ಕೃತಿ ಸಾಹಿತ್ಯಕ ಹಿರಿಮೆಯನ್ನಷ್ಟೇ ಅಲ್ಲದೆ, ಚಾರಿತ್ರಿಕ, ಸಾಂಸ್ಕೃತಿಕ ದಾಖಲೆಗಳಾಗಿಯೂ ಉಳಿದುಕೊಳ್ಳುವಷ್ಟು ಪ್ರಬುದ್ಧ ರಚನೆಗಳಾಗುತ್ತವೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳ ಲಾಗಿದೆ(ಉದಾ: ಮಾಸ್ತಿಯವರ ಕತೆಗಳು, ಬೆಸಗರ ಹಳ್ಳಿ ರಾಮಣ್ಣನವರ ಕತೆಗಳು).
ಸಮಕಾಲೀನ ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮಾನವನ ಬದುಕಿನ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡಿವೆ. ಪರಿಣಾಮವಾಗಿ ಉಂಟಾದ ಬಿಕ್ಕಟ್ಟಿನ ಪರಿಸ್ಥಿತಿಗಳು ಕೃತಿಕಾರರ ಜೀವಂತ ಪ್ರತಿಭೆಗಳನ್ನು ಆಹ್ವಾನಿಸಿದುವು. ಈ ಆಹ್ವಾನವನ್ನು ಉತ್ಸಾಹದಿಂದ ಸ್ವೀಕರಿಸಿ ಬರೆಯ ಹೊರಟ ನವ್ಯೋತ್ತರದ ಕೆಲವು ಲೇಖಕರ ಕೃತಿಗಳನ್ನು ವಿಶ್ಲೇಷಿಸುವಲ್ಲಿ ಕೇವಲ ಸಾಹಿತ್ಯಕ ಮಾನದಂಡಗಳನ್ನು ಮಾತ್ರ ಬಳಸದೆ ಈ ಲೇಖಕರು ಸಾಹಿತ್ಯಕ್ಕೆ ಪ್ರವೇಶ ಪಡೆದ ಚಾರಿತ್ರಿಕ ಸಂದರ್ಭವನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.
ಬರವಣಿಗೆಯನ್ನು ಸಮಕಾಲೀನ ಅನಿವಾರ್ಯ ಪ್ರಕ್ರಿಯೆಯ ರೂಪದಲ್ಲಿ ಅಥವಾ ಸಮಕಾಲೀನ ಸನ್ನಿವೇಶದಲ್ಲಿ ಸವಾಲಾಗಿ ಸ್ವೀಕರಿಸಿ ಬರೆಯುವ ಲೇಖಕರು ಆ ಕಾಲದ ಸಾಹಿತ್ಯಿಕ ಬೆಳವಣಿಗೆಯನ್ನು ಗುರುತಿಸುವಲ್ಲಿ ಪ್ರಮುಖರಾಗುತ್ತಾರೆ. ಬರವಣಿಗೆಯನ್ನು ಸವಾಲಾಗಿ ತೆಗೆದುಕೊಂಡು ಸಮಕಾಲೀನ ಸಾಹಿತ್ಯಿಕ, ಸಾಮಾಜಿಕ ನಿಲುವುಗಳನ್ನು ಪ್ರಶ್ನಿಸುವ ಹೊಸ ವಿಚಾರಗಳಿಗೆ ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಆಸ್ಪದವನ್ನು ಮಾಡಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಒಂದು ಕೃತಿ ಸಾಹಿತ್ಯಕವಾಗಿ, ಸಾಮಾಜಿಕವಾಗಿ ಹೊಸ ವಿಚಾರಗಳ, ಹೊಸ ಚಿಂತನೆಗಳ ಹುಟ್ಟಿಗೆ ನಾಂದಿಯಾಗುತ್ತದೆ. ಈ ಹೊಸ ಚಿಂತನೆಗಳಿಂದ ಸ್ಫುಟಗೊಂಡು ಸ್ಪಷ್ಟ ವೈಲಕ್ಷಣವನ್ನು ಪಡೆದಿರುವ ಸಾಹಿತ್ಯ ಕೃತಿ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಪಂಥವೊಂದರ ನಾಂದಿ ಕೃತಿಯೂ ಆಗಬಹುದು. ಇದಕ್ಕೆ ನಿದರ್ಶನ ರೂಪವಾಗಿ ಈ ದಶಕದಲ್ಲಿ ಕೆಲವು ಕೃತಿಗಳು ಜನ್ಮ ತಾಳಿವೆಯೆಂಬುದನ್ನು ಗಮನಿಸ ಬಹುದು(ಉದಾ: ತೇಜಸ್ವಿಯವರ ಕತೆಗಳು).
ಸಾಮಾಜಿಕ ಸಮಸ್ಯೆಗಳ ನೆಪ ಮಾಡಿಕೊಂಡು ಸಮಸ್ಯೆಯ ಆಳಕ್ಕೆ ಹೋಗದೆ ಮನರಂಜನೆಯ ರೀತಿಯಲ್ಲಿ ಬರೆಯುವ ಬರಹಗಾರರೂ ಕೃತಿ ರಚಿಸಿದ್ದಾರೆ. ಸಾಹಿತ್ಯಕ ಬೆಳವಣಿಗೆಗಳಲ್ಲಿ, ಬದಲಾವಣೆಗಳಲ್ಲಿ ಸಿಲುಕಿಕೊಳ್ಳದೆ ಉತ್ತಮ ಕತೆಗಳನ್ನು ಕೂಡಾ ಈ ಅಧ್ಯಯನದಲ್ಲಿ ಚರ್ಚೆಗೆ ಒಳಪಡಿಸಿದೆ.
ಪರಿವಿಡಿ
ಸವಿನುಡಿ / ೩
ಕೃತಜ್ಞತೆಗಳು / ೫
ಲೇಖಕೀಯ / ೭
ಪ್ರಸ್ತಾವನೆ / ೧೫
೧. ಧೋರಣೆಗಳು ಮತ್ತು ಪ್ರವೃತ್ತಿಗಳು / ೧೯
೨. ಪ್ರೇರಣೆಗಳು ಮತ್ತು ಪರಿಣಾಮಗಳು / ೩೫
೩. ಆದರ್ಶವಾದಿ ನಡೆ / ೫೪
೪. ಆಂತರಂಗಿಕ ತುಡಿತ / ೧೦೪
೫. ಜನಪರ ಒಲವು / ೧೫೯
೬. ಸಮಾಜಮುಖಿ ಆಶಯ / ೨೩೫
೭. ಅನುಬಂಧಗಳು / ೨೪೧
ಟಿಪ್ಪಣಿಗಳು
ಪರಾಮರ್ಶನ ಕೃತಿಗಳು
Reviews
There are no reviews yet.