ನನ್ನ ಮಾತು
ಬಳ್ಳಾರಿಯ ಲೋಹಿಯಾ ಪ್ರಕಾಶನದ ಶ್ರೀ ಸಿ.ಚನ್ನಬಸವಣ್ಣನವರು ಮಹಾರಾಷ್ಟ್ರದ ಬಹುದೊಡ್ಡ ಸಂಶೋಧಕರಾದ ಡಾ. ರಾ.ಚಿಂ.ಢೇರೆಯವರ ಕೃತಿಯನ್ನು ಆಧರಿಸಿ ನಾನು ಬರೆದ ಶಿವಾಜಿ ಮೂಲ ಕನ್ನಡ ನೆಲ ಎಂಬ ಸಂಶೋಧನಾತ್ಮಕ ಕೃತಿಯನ್ನು ೨೦೦೬ರಲ್ಲಿ ಪ್ರಕಟಿಸಿದರು. ಈ ಕೃತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವಂಶದ ಮೂಲ ಪುರುಷನು ಕರ್ನಾಟಕದ ಗದಗ ಜಿಲ್ಲೆಯ ಸೊರಟೂರು ಎಂಬ ಗ್ರಾಮದವನಾಗಿದ್ದನೆಂದೂ ಅಲ್ಲಿಂದ ಅವನು ಮತ್ತು ಅವನ ಸಂಗಡಿಗರು ಮಹಾರಾಷ್ಟ್ರಕ್ಕೆ ವಲಸೆ ಹೋದವರೆಂದೂ ಪ್ರತಿಪಾದಿಸಲಾಗಿತ್ತು. ಈ ಕೃತಿಯಲ್ಲಿರುವ ಹೊಸ ಸಂಗತಿಯು ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾಂಸ್ಕೃತಿಕ, ರಾಜಕೀಯ, ಸಾಹಿತ್ಯಕ ಸಂಬಂಧಗಳಿಗೆ ಹೊಸ ವ್ಯಾಖ್ಯೆಯನ್ನು ಬರೆಯಿತು. ಕೃತಿಯ ಏಳು ಆವೃತ್ತಿಗಳು ಪ್ರಕಟವಾಗಿದ್ದು ಕೊಲ್ಲಾಪುರದ ಅಜಬ್ ಪ್ರಕಾಶನವೆಂಬ ಮರಾಠಿ ಪ್ರಕಾಶನ ಸಂಸ್ಥೆಯು ಕೃತಿಯ ಜನಪ್ರಿಯ ಆವೃತ್ತಿಯನ್ನು (Poಠಿuಟಚಿಡಿ ಇಜiಣioಟಿ) ಪ್ರಕಟಿಸಿತು. ಈ ಕೃತಿಯನ್ನು ಬಹುವಾಗಿ ಮೆಚ್ಚಿಕೊಂಡ ಆಗಿನ ಗದಗದ ಶ್ರೀ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಬಂದಲ್ಲಿ ಹೋದಲ್ಲಿ ಕೃತಿಯನ್ನು ಉಲ್ಲೇಖಿಸಿ ಮಾತನಾಡಲಾರಂಭಿಸಿದರು. ಅವರ ಮಾತುಗಳಿಂದ ಕೃತಿಯು ವ್ಯಾಪಕವಾಗಿ ಪ್ರಸರಣಗೊಂಡು ಕೃತಿಗೆ ಇನ್ನಿಲ್ಲದ ಮಹತ್ವವು ಪ್ರಾಪ್ತವಾಯಿತು. ತಮ್ಮ ಮಠಕ್ಕೆ ನನ್ನನ್ನೂ, ಮೂಲ ಲೇಖಕರಾದ ಡಾ. ಢೇರೆಯವರನ್ನೂ ಕರೆಸಿ ಸನ್ಮಾನಿಸಿದರು. ಇತಿಹಾಸದ ಸಂಶೋಧನೆಗಳು ಈ ರೀತಿಯಲ್ಲಿ ನಡೆಯಬೇಕು ಎಂಬ ಮಾತನ್ನೂ ಶ್ರೀಗಳು ಅಂದು ಸಭೆಯಲ್ಲಿ ನುಡಿದಿದ್ದರು.
ಕಿತ್ತೂರಿನ ರಾಜಮನೆತನದ ರಾಜಗುರು ಪೀಠಕ್ಕೆ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ೧೩ನೆಯ ರಾಜಗುರುಗಳಾಗಿ ೨೦೦೫ರಲ್ಲಿಯೇ ನೇಮಿಸಲ್ಪಟ್ಟಿದ್ದರೂ ಅವರ ಪಟ್ಟಬಂಧೋತ್ಸವವು ಡಿಸೆಂಬರ್ ೧೧, ೨೦೦೯ರಂದು ಕಿತ್ತೂರಿನಲ್ಲಿ ಬಹು ವಿಜೃಂಭಣೆ ಯಿಂದ ಜರುಗಿತು. ಅವರಿಗೆ ಕಿತ್ತೂರಿನ ರಾಜಗುರುಗಳೆಂಬ ಅಭಿನಾಮವನ್ನು ನೀಡಿ ಅವರಿಗೆ ಪಟ್ಟಬಂಧೋತ್ಸವವನ್ನು ನೆರವೇರಿಸಿದವರು ಗದಗಿನ ಶ್ರೀ ತೋಂಟದ ಸಿದ್ಧಲಿಂಗ ಸ್ವಾಮಿಗಳೇ ಆಗಿದ್ದರು. ಈ ಕಾರ್ಯಕ್ರಮಕ್ಕೆ ನಾನು ಕಿತ್ತೂರು ರಾಣಿ ಚನ್ನಮ್ಮಳ ಅಭಿಮಾನಿಯಾಗಿ, ಶ್ರೀಮಠದ ಹಿತೈಷಿಯಾಗಿ, ಒಬ್ಬ ಪ್ರೇಕ್ಷಕನಾಗಿ ಹೋಗಿದ್ದೆ. ಅಪಾರವಾಗಿ ಸೇರಿದ್ದ ಜನಸಮೂಹದಲ್ಲಿ ನಾನೊಂದು ಮೂಲೆಯಲ್ಲಿ ಕುಳಿತುಕೊಂಡಿದ್ದೆ. ನಾನು ಅಲ್ಲಿ ಕುಳಿತುಕೊಂಡಿರುವುದನ್ನು ವೇದಿಕೆಯ ಮೇಲಿಂದ ನೋಡಿದ ಶ್ರೀ ತೋಂಟದ ಸಿದ್ಧಲಿಂಗಸ್ವಾಮಿಗಳು ವೇದಿಕೆಗೆ ಬರಲು ನನ್ನನ್ನು ಕರೆದರು. ನಾನು ಅಲ್ಲಿ ಹೋಗಿದ್ದು ಚನ್ನಮ್ಮ ಮತ್ತು ಶ್ರೀಮಠದ ಅಭಿಮಾನದಿಂದ. ಹೀಗಾಗಿ ನಾನು ವೇದಿಕೆಗೆ ಹೋಗಲು ಇಚ್ಛಿಸಲಿಲ್ಲ. ಶ್ರೀಗಳು ಎರಡು ಸಲ ನನ್ನನ್ನು ವೇದಿಕೆಗೆ ಬರಲು ಹೇಳಿದರೂ ನಾನು ನನ್ನ ಜಾಗಬಿಟ್ಟು ಕದಲಲಿಲ್ಲ. ಆಗ ವೇದಿಕೆಯ ಮೇಲಿದ್ದ ನನ್ನ ವಿದ್ಯಾಗುರುಗಳೂ, ನಾಡಿನ ವೈಚಾರಿಕ ಚಿಂತಕರೂ ಆಗಿರುವ ಡಾ. ಎಂ.ಎಂ.ಕಲಬುರ್ಗಿಯವರು ಮೈಕಿಗೆ ಬಂದು ನಾನು ವೇದಿಕೆಗೆ ಬರಬೇಕೆಂದು ಆಜ್ಞಾಪಿಸಿದರು. ಡಾ. ಎಂ.ಎಂ.ಕಲಬುರ್ಗಿಯವರ ಮಾತುಗಳೆಂದರೆ ಅವರ ವಿದ್ಯಾರ್ಥಿಗಳಾದ ನಮಗೆಲ್ಲರಿಗೂ ಆಜ್ಞೆಗಳೇ. ಹೀಗಾಗಿ ನಾನು ವೇದಿಕೆಗೆ ಹೋಗಲೇಬೇಕಾಯಿತು. ಆಗ ಶ್ರೀ ತೋಂಟದ ಸಿದ್ಧಲಿಂಗ ಸ್ವಾಮಿಗಳು ಒಂದು ವಿಷಯದ ಬಗ್ಗೆ ಹೇಳಬೇಕಾಗಿತ್ತು. ಹೀಗಾಗಿ ನಿಮ್ಮನ್ನು ವೇದಿಕೆಗೆ ಕರೆದೆ ಎಂದರು. ನಾನು ಅವರಿಗೆ ನಮಸ್ಕರಿಸಿ ಕಲಬುರ್ಗಿ ಗುರುಗಳ ಪಕ್ಕದಲ್ಲಿ ಕುಳಿತೆ.
ಶ್ರೀಗಳು ತಮ್ಮ ಭಾಷಣದಲ್ಲಿ ನಾಡಿನ ಇತಿಹಾಸ ಹಾಗೂ ಕಿತ್ತೂರು ಚನ್ನಮ್ಮಳ ಅನುಪಮ ಶೌರ್ಯ ಸಾಹಸಗಳ ಬಗ್ಗೆ ಮಾತನಾಡಿ ಕಲ್ಮಠದ ರಾಜಗುರುಗಳು ಆರಂಭದಿಂದಲೂ ಕಿತ್ತೂರಿನ ರಾಜರುಗಳಿಗೆ ಹೇಗೆ ಮಾರ್ಗದರ್ಶನವನ್ನು ಮಾಡುತ್ತಿದ್ದರೆಂದು ಸವಿಸ್ತಾರವಾಗಿ ಹೇಳಿದರು. ಹನ್ನೆರಡನೆಯ ರಾಜಗುರುಗಳಾಗಿದ್ದ ಶ್ರೀ ಶಿವಬಸವ ಸ್ವಾಮಿಗಳ ಅಧಿಕಾರಾವಧಿಯು ೧೯೮೯-೧೯೯೯ರ ವರೆಗೆ ಇದ್ದು, ಅನಂತರ ಪೀಠವು ೨೦೦೫ರ ವರೆಗೆ ಖಾಲಿಯಾಗಿಯೇ ಇತ್ತು. ೨೦೦೫ರಲ್ಲಿ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ರಾಜಗುರುಗಳಾಗಿ ನೇಮಿಸಲ್ಪಟ್ಟರೂ ಅವರ ಪಟ್ಟಾಧಿಕಾರ ಕಾರ್ಯವು ನಾಲ್ಕು ವರ್ಷಗಳ ನಂತರ ಜರುಗುತ್ತಿರುವುದಾಗಿಯೂ ಹೇಳಿದರು. ಅನಂತರ ಶ್ರೀಗಳು ಚನ್ನಮ್ಮಳು ಕರ್ನಾಟಕದ ಅಸ್ಮಿತೆಯಾಗಿದ್ದರೂ ಅವಳ ಹಾಗೂ ಕಿತ್ತೂರಿನ ನೈಜ ಇತಿಹಾಸವು ಇನ್ನೂ ಸ್ಪಷ್ಟವಾಗಿ ದಾಖಲಾಗಿಲ್ಲವೆಂದು ಹೇಳಿ ನನ್ನ ಕಡೆಗೆ ತಿರುಗಿ ಈ ಕೆಲಸವನ್ನು ನೀವು ಮಾಡಬೇಕು. ಕಿತ್ತೂರಿನ ನೈಜವಾದ ಇತಿಹಾಸವನ್ನು ನೀವು ಬರೆಯಬೇಕೆಂದು ಹೇಳಲೆಂದೇ ನಾನು ನಿಮ್ಮನ್ನು ವೇದಿಕೆಗೆ ಕರೆದಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜರ ಮೂಲ ಪುರುಷರ ಬಗೆಗಿನ ಕಥೆಯನ್ನು ಹೇಗೆ ಬರೆದಿರುವಿರೋ ಅದೇ ರೀತಿಯಲ್ಲಿ ಚನ್ನಮ್ಮಳ ಇತಿಹಾಸವನ್ನೂ ನೀವು ಬರೆಯಬೇಕು. ಇದಕ್ಕೆ ಬೇಕಾದ ಸಹಾಯ ಸಹಕಾರಗಳನ್ನು ನಮ್ಮ ಶ್ರೀಮಠವು ನಿಮಗೆ ನೀಡುತ್ತದೆ. ಕಿತ್ತೂರು ಇತಿಹಾಸದ ಹಲಕೆಲ ದಾಖಲೆಗಳು ಇಂಗ್ಲೆಂಡಿನಲ್ಲಿವೆಯೆಂದು ನಾವು ಕೇಳಿದ್ದೇವೆ. ಈ ಸಂಶೋಧನೆಗಾಗಿ ಒಂದು ವೇಳೆ ಇಂಗ್ಲೆಂಡಿಗೆ ಹೋಗುವ ಅವಶ್ಯಕತೆ ಉಂಟಾದರೆ ನಮ್ಮ ಶ್ರೀಮಠವು ಆ ಖರ್ಚನ್ನು ನೀಡಲು ತಯಾರಿದೆ ಎಂದು ಹೇಳಿದರು. ಅನಂತರ ಮಾತನಾಡಿದ ಕಲಬುರ್ಗಿ ಗುರುಗಳೂ ಸಹಿತ ಕಿತ್ತೂರಿನ ಇತಿಹಾಸದ ಬಗ್ಗೆ ನಾನು ಕ್ಷೇತ್ರಕಾರ್ಯವನ್ನು ಆರಂಭಿಸಬೇಕೆಂದು ನುಡಿದರು.
ಕಿತ್ತೂರು ಚನ್ನಮ್ಮಳ ಬಗ್ಗೆ ಅತೀವವಾದ ಅಭಿಮಾನವಿದ್ದರೂ ಕೂಡಲೇ ಈ ಕಾರ್ಯವನ್ನು ಕೈಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ನನ್ನ ಕೆಲಸ ಕಾರ್ಯಗಳಲ್ಲಿ, ಆಫೀಸಿನ ಕೆಲಸಗಳಲ್ಲಿ ಮತ್ತು ಸಾಹಿತ್ಯಕ ಚಟುವಟಿಕೆಗಳಲ್ಲಿ ಈ ಕೆಲಸವು ಮುಂದೆ ಮುಂದೆ ಹೋಗುತ್ತಲಿತ್ತು. ಈ ಮಧ್ಯೆ ಕಿತ್ತೂರು ಸಂಸ್ಥಾನದ ಬಗ್ಗೆ ಮತ್ತು ಚನ್ನಮ್ಮಳ ಜೀವನದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದೆ.
ಚನ್ನಮ್ಮಳ ಕಾಲ ಅಥವಾ ಇತಿಹಾಸವು ಪ್ರಾಚೀನವಾದುದೇನಲ್ಲ; ಅವಳ ಕಾಲಕ್ಕೆ ಇದೀಗ ೨೦೦ ವರ್ಷಗಳು ತುಂಬುತ್ತಲಿವೆ. ಆದರೆ ಈ ಶೂರ ವೀರ ರಾಣಿಯ ಒಂದಾದರೂ ಚಿತ್ರವು ನಮಗೆ ಇನ್ನೂ ದೊರೆತಿಲ್ಲವೆಂಬುದು ವಿಚಿತ್ರವಾದರೂ ಸತ್ಯವಾಗಿದೆ. ಅವಳಿಗಿಂತ ಹಲವು ನೂರು ವರ್ಷಗಳಷ್ಟು ಹಳೆಯವರಾದ ಛತ್ರಪತಿ ಶಿವಾಜಿ, ರಾಣಾ ಪ್ರತಾಪಸಿಂಹ, ಅಕಬರ ಹಾಗೂ ಚನ್ನಮ್ಮಳ ಸಮಕಾಲೀನರಾದ ಪೇಶ್ವೆ, ಟಿಪ್ಪೂ ಸುಲ್ತಾನ, ಹೈದರಾಲಿ ಮುಂತಾದವರು ಹೇಗಿದ್ದರೆಂಬುವುದು ಅವರ ಕಾಲದಲ್ಲಿ ಚಿತ್ರಿತವಾದ ಪೇಂಟಿಂಗ್‌ಗಳಲ್ಲಿ ನಾವು ನೋಡಬಹುದು. ಆದರೆ ಚನ್ನಮ್ಮಳ ಒಂದೇ ಒಂದು ಪೇಂಟಿಂಗ್ ಆಗಲಿ ಅಥವಾ ಚಿತ್ರವಾಗಲಿ ನಮಗೆ ಇನ್ನೂ ಸಿಕ್ಕಿಲ್ಲ. ನನಗೆ ಇದು ತುಂಬ ವಿಚಿತ್ರವೆನ್ನಿಸಿತು. ಚನ್ನಮ್ಮಳ ವಂಶಸ್ಥರೆಂದು ಹೇಳಿಕೊಂಡವರೊಬ್ಬರು ತಮ್ಮಲ್ಲಿ ಚನ್ನಮ್ಮಳ ಫೋಟೋ ಇದೆಯೆಂದು ಹೇಳಿದ್ದರು. ಅದನ್ನು ನೋಡಲೆಂದು ಹೋದಾಗ ಅದು ಈಗಾಗಲೇ ವಾಟ್ಸ್‌ಅಪ್ ಮತ್ತು ಫೇಸ್‌ಬುಕ್‌ದಲ್ಲಿ ಹರಿದಾಡಿದ ಒಂದು ಫೋಟೋ ಆಗಿತ್ತು. ಆ ಚಿತ್ರವು ತಿಲಮಾತ್ರವೂ ಚನ್ನಮ್ಮಳ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಆ ಚಿತ್ರವು ಹಳೆಯ ಕಾಲದ ಒಬ್ಬ ನಟಿಯ ಫೋಟೋದಂತಿತ್ತು. ಪತ್ರಿಕೋದ್ಯಮದಲ್ಲಿಯ ನನ್ನ ಅನುಭವ ಮತ್ತು ಸಂಪರ್ಕಗಳನ್ನು ಉಪಯೋಗಿಸಿ ಆ ಫೋಟೋದ ಬೆನ್ನು ಹತ್ತಿದಾಗ ಅದು ಗುಜರಾತದ ಜುನಾಗಡ ಸಂಸ್ಥಾನದ ಒಬ್ಬ ಮುಸಲ್ಮಾನ ರಾಣಿಯದೆಂದು ಪತ್ತೆಯಾಯಿತು. ಆಕೆ ಭಾರತದ ಕ್ರಿಕೆಟ್ ಟೀಮಿನ ಒಂದಾನೊಂದು ಕಾಲದ ನಾಯಕರಾಗಿದ್ದ ಪಟೌಡಿ ನವಾಬರ ಅಜ್ಜಿಯಾಗಿದ್ದಳು. ಅಂದರೆ ಈಗ ಹಿಂದಿ ಚಲನಚಿತ್ರರಂಗದ ನಟರಾಗಿರುವ ಸೈಫ್ ಅಲಿ ಖಾನರವರ ಮುತ್ತಜ್ಜಿಯಾಗಿದ್ದಳು. ಈ ವಿಷಯವನ್ನು ನಾನು ಚನ್ನಮ್ಮಳ ವಂಶಸ್ಥರೆಂದು ಹೇಳಿಕೊಂಡ ವ್ಯಕ್ತಿಗೆ ತಿಳಿಸಿದೆ. ಆ ಚಿತ್ರದ ಒಟ್ಟು ಸಂರಚನೆಯು ನಮ್ಮ ನಾಡಿನ ಹೆಣ್ಣುಮಕ್ಕಳಿಗೆ ಸ್ವಲ್ಪವೂ ಹೋಲುತ್ತಿಲ್ಲವೆಂದು ಅವರ ಅರಿವಿಗೂ ಬಂದಿತು.
ಬೈಲಹೊಂಗಲದ ಒಂದು ಕಾಲೇಜಿಗೆ ಕಾರ್ಯಕ್ರಮವೊಂದರ ಅತಿಥಿಯಾಗಿ ಹೋಗಿದ್ದೆ. ಅಲ್ಲಿ ಗೋಡೆಯ ಮೇಲೆ ಬೇರೆ ಬೇರೆ ರಾಷ್ಟ್ರ ನಾಯಕರ ಫೋಟೋಗಳನ್ನು ತೂಗು ಹಾಕಿದ್ದರು. ಈ ಸಾಲಿನಲ್ಲಿ ಕಿತ್ತೂರು ಚನ್ನಮ್ಮ ಎಂದು ಬರೆದ ಫೋಟೋವೂ ಇತ್ತು. ಅಸಲಿಗೆ ಅದು ಸಿನೇಮಾ ನಟಿ ಬಿ.ಸರೋಜಾದೇವಿಯವರ ಫೋಟೋ ಆಗಿತ್ತು. ಬಿ. ಸರೋಜಾದೇವಿಯವರು ಕಿತ್ತೂರು ಚನ್ನಮ್ಮ ಸಿನೇಮಾದಲ್ಲಿ ಚನ್ನಮ್ಮಳಾಗಿ ಅಭಿನಯಿಸಿದ್ದರು. ಆ ಫೋಟೋವನ್ನೇ ಇಲ್ಲಿ ಫ್ರೇಮ್ ಹಾಕಿ ಗೋಡೆಗೆ ತೂಗು ಬಿಟ್ಟಿದ್ದರು. ನಾನು ಅಲ್ಲಿಯ ಪ್ರಿನ್ಸಿಪಾಲರಿಗೆ ಈ ಬಗ್ಗೆ ತಕರಾರು ವ್ಯಕ್ತಪಡಿಸಿದೆ. ಮುಂದಿನ ಪೀಳಿಗೆಯವರು ಈ ಫೋಟೋ ನೋಡಿ ಬಿ.ಸರೋಜಾದೇವಿಯವರೇ ಚನ್ನಮ್ಮಳಾಗಿದ್ದಳು ಎಂದು ಭಾವಿಸುವ ಹೆದರಿಕೆ ನನಗಿತ್ತು. ಗೋಡೆಯಿಂದ ಆ ಫೋಟೋವನ್ನು ಇಳಿಸುತ್ತೇನೆಂದು ಪ್ರಿನ್ಸಿಪಾಲರು ನನಗೆ ಸಮಾಧಾನ ಹೇಳಿದರು. ಈಗ ಆ ಫೋಟೋ ಅಲ್ಲಿದೆಯೋ ಅಥವಾ ಅದನ್ನು ಹಟಾಯಿಸಿದ್ದಾರೆಯೋ ನನಗೆ ಗೊತ್ತಿಲ್ಲ.
ಬೆಳಗಾವಿಯ ಚಾರಿತ್ರಿಕ ಕಾದಂಬರಿಕಾರರಾದ ಶ್ರೀ ಯ.ರು.ಪಾಟೀಲರಿಗೆ ಕಿತ್ತೂರು ಚನ್ನಮ್ಮ ಮತ್ತು ಬೆಳವಡಿ ಮಲ್ಲಮ್ಮರ ಬಗ್ಗೆ ವಿಪರೀತವಾದ ಅಭಿಮಾನವಿದೆ. ಅವರು ಕನಸು ಕಂಡರೆ ಚನ್ನಮ್ಮ ಮತ್ತು ಮಲ್ಲಮ್ಮರ ಬಗ್ಗೆಯೇ ಕನಸು ಕಂಡಾರು. ಚನ್ನಮ್ಮಳ ಬಗ್ಗೆ ಅವರು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಕಿತ್ತೂರಿನ ತಹಸೀಲ್ದಾರರಾಗಿ ಸೇವೆ ಸಲ್ಲಿಸಿದ ಅವರು ಒಂದು ದಿನ ಕಿತ್ತೂರಿನ ಗಡಿಗೆ ಹೊಂದಿಕೊಂಡ ಆದರೆ ಧಾರವಾಡ ಜಿಲ್ಲೆಯಲ್ಲಿರುವ ಕಲ್ಲೂರು ಗ್ರಾಮದ ಶತಮಾನೋತ್ಸವ ಸರಕಾರಿ ಪ್ರಾಥಮಿಕ ಕನ್ನಡ ಶಾಲೆಗೆ ಅತಿಥಿಗಳಾಗಿ ಹೋಗಿದ್ದರು. ಶಾಲೆಯ ಗೋಡೆಯ ಮೇಲೆ ಸುಮಾರು ನೂರು ವರ್ಷಗಳಷ್ಟು ಹಳೆಯದಾದ ಒಂದು ಫೋಟೋವನ್ನು ತೂಗು ಬಿಡಲಾಗಿದ್ದು, ಅದೊಂದು ಪೇಂಟಿಂಗ್ ಚಿತ್ರವಾಗಿದ್ದು ಫೋಟೋದ ಕೆಳಗಡೆಗೆ ವೀರರಾಣಿ ಕಿತ್ತೂರು ಚನ್ನಮ್ಮ ಎಂಬ ಅಡಿ ಬರೆಹವಿತ್ತು. ಈ ಬಗ್ಗೆ ಕುತೂಹಲಗೊಂಡ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಧಾರವಾಡ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷರಾಗಿದ್ದ ಶ್ರೀ ದಂಡಿನ ಅವರಿಗೆ ಕೇಳಿದಾಗ ಅವರು ಆ ಫೋಟೋ ಕಿತ್ತೂರು ಚನ್ನಮ್ಮಳದ್ದು ಎಂದು ಹೇಳಿದರು. ಚಿತ್ರದಲ್ಲಿರುವ ಮಹಿಳೆಯು ಗೌರವಾನ್ವಿತ ಕುಟುಂಬಕ್ಕೆ ಸೇರಿದವಳಂತೆ ಕಾಣುತ್ತಿದ್ದು ತಲೆಯ ಮೇಲೆ ಸೆರಗನ್ನು ಹೊದ್ದಿದ್ದಾಳೆ. ಆಕೆ ಧರಿಸಿದ ಆಭರಣಗಳು ಹಳೆಯ ಕಾಲದ ಮಾದರಿಯಲ್ಲಿವೆ. ಶ್ರೀ ದಂಡಿನ ಅವರ ಅಭಿಪ್ರಾಯದಲ್ಲಿ ಅವರ ಅಜ್ಜನ ಕಾಲದಿಂದಲೂ ಈ ಫೊಟೋ ಶಾಲೆಯ ಗೋಡೆಯ ಮೇಲಿದ್ದು ಅವರ ಅಜ್ಜನೂ ಇದು ಚನ್ನಮ್ಮಳ ಫೋಟೋ ಎಂದೇ ಹೇಳಿದ್ದರಂತೆ. ಯ.ರು.ಪಾಟೀಲರು ಈ ಫೋಟೋವನ್ನು ವ್ಯಾಪಕವಾಗಿ ಪ್ರಚಾರಗೊಳ್ಳಿಸಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ನಾನು Iಟಿಜiಚಿಟಿ ಇxಠಿಡಿess ಮತ್ತು ಕನ್ನಡಪ್ರಭ ಪತ್ರಿಕೆಗಳಲ್ಲಿ ಈ ಬಗ್ಗೆ ಲೇಖನ ಬರೆದೆ. ಯ.ರು.ಪಾಟೀಲರ ಅಭಿಪ್ರಾಯದಲ್ಲಿ ಚನ್ನಮ್ಮಳನ್ನು ಊಹಾತ್ಮಕವಾಗಿ ಅಥವಾ ಕಾಲ್ಪನಿಕವಾಗಿ ಊಹಿಸಿಕೊಳ್ಳುವುದಕ್ಕಿಂತ ಈ ಚಿತ್ರದ ಸತ್ಯಾಸತ್ಯತೆಯ ಬಗ್ಗೆ ಸರಕಾರವಾಗಲೀ ಅಥವಾ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವಾಗಲೀ ಅಥವಾ ವಿಶ್ವವಿದ್ಯಾಲಯಗಳಾಗಲಿ ಸಂಶೋಧನೆಯನ್ನು ಕೈಕೊಳ್ಳಬೇಕು ಎಂಬುದಾಗಿತ್ತು. ಆದರೆ ಸರ್ಕಾರ ಅಥವಾ ಮೇಲೆ ಹೇಳಿದ ಯಾವ ಅಥಾರಟಿಗಳೂ ಈ ಫೋಟೋದ ಸತ್ಯಾಸತ್ಯತೆಗಳನ್ನು ಪರೀಕ್ಷಿಸಲು ಮುಂದೆ ಬರಲಿಲ್ಲ. ಒಂದು ವೇಳೆ ಗಂಭೀರವಾಗಿ ಈ ಬಗ್ಗೆ ಅಧ್ಯಯನ ನಡೆಸಿದ್ದರೆ ಚನ್ನಮ್ಮಳ ನಿಜವಾದ ರೂಪ ಸಿಗಬಹುದಾಗಿತ್ತು.
ಕಿತ್ತೂರು ಸಂಸ್ಥಾನದ ಇತಿಹಾಸವು ತೀರ ಹತ್ತಿರವಾಗಿದ್ದರೂ ಅದರ ನಿಗೂಢತೆಯ ಬಗ್ಗೆ ನನಗೆ ಅಚ್ಚರಿಯಾಗುತ್ತಿದೆ. ಕಿತ್ತೂರು ಹೆಸರಿನ ಬಗ್ಗೆ ನಾನು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ವಿದ್ಯಾರ್ಥಿಯಾಗಿದ್ದಾಗ ನಮಗೆ ಪಾಠ ಮಾಡುತ್ತಿದ್ದ ಡಾ. ಎಂ.ಎಂ. ಕಲಬುರ್ಗಿ ಗುರುಗಳು ಮೊದಲು ಸಂಸ್ಥಾನದ ರಾಜಧಾನಿಯು ಸಂಪಗಾಂವವಾಗಿತ್ತು. ಅಲ್ಲಿಂದ ಅದು ಈಗ ಕಿತ್ತೂರೆಂದು ಕರೆಯುವ ಸ್ಥಳಕ್ಕೆ ಕಿತ್ತುಕೊಂಡು ಹೋಯಿತು ಅರ್ಥಾತ್ ಸ್ಥಳಾಂತರಿತವಾಯಿತು. ಹೀಗೆ ಒಂದು ಕಡೆಯಿಂದ ಕಿತ್ತುಕೊಂಡು ಇನ್ನೊಂದು ಕಡೆಗೆ ಪ್ರತಿಷ್ಠಾಪಿತವಾದ ಊರು ಕಿತ್ತೂರು (ಕಿತ್ತಿದ ಊರು=ಕಿತ್ತೂರು) ಆಯಿತು ಎಂದು ಹೇಳಿದ್ದರು. ನಾವಾದರೂ ಅದನ್ನು ನಿಜವೆಂದೇ ನಂಬಿದ್ದೆವು. ಆದರೆ ನನ್ನ ಅಧ್ಯಯನದಲ್ಲಿ ಅದು ೧೮೦೦ ವರ್ಷಗಳ ಹಿಂದೆ ಈ ನಾಡನ್ನು ಆಳಿದ ಮಯೂರವರ್ಮನ ಕೀರ್ತಿಪುರ ಎಂಬ ಹೆಸರಿನಲ್ಲಿ ಅಸ್ತಿತ್ವದಲ್ಲಿತ್ತು. ಮಯೂರವರ್ಮನ ಕೀರ್ತಿಪುರವೇ ಇಂದಿನ ಕಿತ್ತೂರೆಂದು ನಾನು ಸಂಗ್ರಹಿಸಿದ ದಾಖಲೆಗಳು ಹೇಳಿದವು. ಮಯೂರವರ್ಮನ ಇತಿಹಾಸದಲ್ಲಿ ಪಲಸಿಕೆ (ಇಂದಿನ ಖಾನಾಪುರ ತಾಲೂಕಿನಲ್ಲಿರುವ ಹಲಸಿ ಎಂಬ ಗ್ರಾಮ) ಹಾಗೂ ಅದರ ಪಕ್ಕದಲ್ಲಿರುವ ಕೀರ್ತಿಪುರದ ಬಗ್ಗೆ ಹಲವಾರು ಸಲ ಪ್ರಸ್ತಾಪವಾಗುತ್ತದೆ.
ಸಂಸ್ಥಾನದ ದಾಖಲೆಗಳಲ್ಲಿ ಕಿತ್ತೂರು ಅರಸು ಮನೆತನದ ಇತಿಹಾಸವು ೧೫೮೫ರಿಂದ ಆರಂಭವಾಯಿತೆಂದು ಹೇಳಲಾಗಿದೆ. ಮನೆತನದ ಸ್ಥಾಪಕರಾದ ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಎಂಬ ಸಹೋದರರಿಗೆ ವಿಜಾಪುರದ ಆದಿಲಶಹಾನು ಮುಗುಟಖಾನ ಹುಬ್ಬಳ್ಳಿ ಪರಗಣಿಯ ಸರದೇಶಮುಖಿಯನ್ನು ನೀಡಿದ. ಈ ಸರದೇಶಮುಖಿ ಅಧಿಕಾರವೇ ಮುಂದೆ ಕಿತ್ತೂರು ದೇಸಗತಿಯನ್ನು ಸ್ಥಾಪಿಸಲು ಬುನಾದಿ ಹಾಕಿತು. ಇನ್ನೊಂದು ದಾಖಲೆಯಲ್ಲಿ ಮರಾಠಾ ವೀರ ನರಸೋಜಿ ಗಾವಡೆ ಎಂಬುವವನಿಗೆ ಈ ಪ್ರದೇಶವನ್ನು ಆದಿಲಶಹಾನು ೧೫೮೫ಕ್ಕಿಂತ ಮೊದಲು ನೀಡಿದ್ದನು. ಆದಿಲಶಹಾನಿಗೂ ಆತನ ವೈರಿಗಳಿಗೂ ಸೋನಾರಿ ಭೈರವ ಎಂಬ ಪ್ರದೇಶದಲ್ಲಿ ಯುದ್ಧವೊಂದು ನಡೆದಿತ್ತು. ಆ ಯುದ್ಧದಲ್ಲಿ ನರಸೋಜಿ ಗಾವಡೆ ಆದಿಲಶಹಾನ ಪರವಾಗಿ ಹೋರಾಡಿದ್ದ. ಈ ಯುದ್ಧದಲ್ಲಿ ಆದಿಲಶಹಾ ಗೆದ್ದ. ನರಸೋಜಿ ಗಾವಡೆಯ ಪರಾಕ್ರಮವನ್ನು ಯುದ್ಧಭೂಮಿಯಲ್ಲಿ ಕಂಡಿದ್ದ ಆದಿಲಶಹಾ ಈ ಪ್ರದೇಶಗಳನ್ನು (ಆಗ ಇವುಗಳಿಗೆ ಪಂಚಮಹಲ್ ದೇಸಗತಿಯೆಂದು ಕರೆಯುತ್ತಿದ್ದರು) ಅವನಿಗೆ ನೀಡಿದ. ನರಸೋಜಿಯ ನಿಧನದ ನಂತರ ಅವನ ವಂಶದ ಜಾಲೀಬಾಯಿ ಯೆಂಬುವವಳು ಈ ದೇಸಗತಿಯ ದೇಸಾಯಿಣಿಯಾದಳು. ಅವಳು ಹಿರೇಮಲ್ಲಶೆಟ್ಟಿಗೆ ತನ್ನ ದೇಸಗತಿಯಲ್ಲಿ ಬರುವ ಆರು ಊರುಗಳನ್ನು ಇನಾಂ ಹಾಕಿ ಕೊಟ್ಟಳು. ಆಕೆ ಉಂಬಳಿ ಹಾಕಿಕೊಟ್ಟ ಇನಾಂ ಪತ್ರವು ಪುಣೆಯ ಆರ್ಕಿಯಾಲಾಜಿ ಡಿಪಾರ್ಟ್‌ಮೆಂಟಿನಲ್ಲಿದೆ. ಜಾಲೀಬಾಯಿಯು ಆದಿಲಶಹಾನ ಆಡಳಿತದ ವ್ಯಾಪ್ತಿಯಲ್ಲಿದ್ದು ದರಿಂದ ಅವನ ಪರವಾಗಿ ಅಥವಾ ಅವನ ಆಜ್ಞೆಯಂತೆ ಈ ಪ್ರದೇಶಗಳನ್ನು ಹಿರೇಮಲ್ಲಶೆಟ್ಟಿಗೆ ಉಂಬಳಿ ಹಾಕಿ ಕೊಟ್ಟಿರುವ ಸಾಧ್ಯತೆ ಇದೆ. ಇನಾಂ ಪತ್ರದ ಕೆಳಗಡೆ ಮಹಮ್ಮದ ಇಬ್ರಾಹಿಂ ಜಗದ್ಗುರು ಸಂಪಗಾಂವ ಸರ್ಕಾರ ಎಂಬ ಮೊಹರು ಇದೆ. ಆದರೆ ಇತಿಹಾಸದಲ್ಲಿ ನರಸೋಜಿ ಗಾವಡೆಯ ಪುಟಗಳು ಸಿಗುವುದಿಲ್ಲ. ಈ ಗಾವಡೆ ದೇಸಗತಿಯು ಅನಂತರ ಏನಾಯಿತೆಂಬುದರ ಬಗ್ಗೆ ಇತಿಹಾಸ ಮೌನ ತಾಳಿದೆ.
ಕಿತ್ತೂರು ಸಂಸ್ಥಾನದ ಇತಿಹಾಸದ ಬಗ್ಗೆ ಅಧ್ಯಯನ ಮಾಡಲು ನಾನು ಪುಣೆಯಲ್ಲಿರುವ ಆರ್ಕಿಯಾಲಾಜಿ ವಿಭಾಗದ ದಾಖಲೆಗಳು ಹಾಗೂ ಈ ಹಿಂದೆ ಚನ್ನಮ್ಮಳ ಬಗೆಗೆ ಬರೆದ ವಿವಿಧ ಕೃತಿಗಳನ್ನು ಅಭ್ಯಸಿಸಿದೆ. ೧೮೨೪ರ ಅಕ್ಟೋಬರ್ ೨೩ರಲ್ಲಿ ನಡೆದ ಇಂಗ್ಲಿಷ್-ಕಿತ್ತೂರು ಮೊದಲ ಕಾಳಗದಲ್ಲಿ ಥ್ಯಾಕರೆಗೆ ಆಪ್ತರಾಗಿರುವ ಸ್ಟೀವನ್‌ಸನ್ ಮತ್ತು ಇಲಿಯೆಟ್ ಎಂಬ ಇಬ್ಬರು ಅಧಿಕಾರಿಗಳು ಚನ್ನಮ್ಮಳ ಸೈನಿಕರಿಂದ ಬಂಧಿತರಾಗುತ್ತಾರೆ. ಯುದ್ಧದ ಸಮಯದಲ್ಲಿ ಚನ್ನಮ್ಮ ಈ ಇಬ್ಬರೂ ಅಧಿಕಾರಿಗಳನ್ನು ಮುಕ್ತಗೊಳಿಸುತ್ತಾಳೆ. ಯುದ್ಧದ ನಂತರ ಇಲಿಯೆಟ್ ಭಾರತದಲ್ಲಿಯ ತನ್ನ ಸೇವಾವಧಿಯನ್ನು ಮುಗಿಸಿ ಮರಳಿ ಇಂಗ್ಲೆಂಡಿಗೆ ಹೋದ. ಆತ ೧೮೨೪ರ ಅಕ್ಟೋಬರ್ ೨೩ರ ಯುದ್ಧದ ಬಗ್ಗೆ ೩೦-೪೦ ಪುಟಗಳ ನೋಟ್ಸ್‌ನ್ನು ಬರೆದಿದ್ದಾನೆ. ಆತ ಸ್ವತಃ ಯುದ್ಧದಲ್ಲಿ ಭಾಗಿಯಾಗಿದ್ದ ಮತ್ತು ಚನ್ನಮ್ಮಳ ಸೈನಿಕರಿಂದ ಬಂಧಿಸಲ್ಪಟ್ಟಿದ್ದ ಹಾಗೂ ಯುದ್ಧದ ಪ್ರತ್ಯಕ್ಷ ಸಾಕ್ಷಿಯಾಗಿದ್ದ. ಹೀಗಾಗಿ ಅವನು ಮಾಡಿದ ಈ ನೋಟ್ಸ್‌ಗಳು ಐತಿಹಾಸಿಕ ದಾಖಲೆಗಳೆಂದು ಪರಿಗಣಿಸ ಬೇಕಾಗುತ್ತದೆ. ಈ ನನ್ನ ಕೃತಿಗೆ ಅವನು ಮಾಡಿದ ನೋಟ್ಸ್‌ಗಳು ಸಹಕಾರಿಯಾದವು. ಅವುಗಳನ್ನು ಇಲ್ಲಿ ಸಮಯಾನುಸಾರ ಅಳವಡಿಸಿಕೊಂಡಿದ್ದೇನೆ.
ಕಿತ್ತೂರಿನ ಕಾಳಗ ನಡೆದಿದ್ದೇ ದತ್ತಕ ಪ್ರಕರಣಕ್ಕಾಗಿ. ಚನ್ನಮ್ಮಳು ತೆಗೆದುಕೊಂಡ ದತ್ತಕ ಪ್ರಕ್ರಿಯೆಯನ್ನು ಇಂಗ್ಲಿಷ್ ಸರ್ಕಾರ ಒಪ್ಪಲಿಲ್ಲ. ಆ ಕಾರಣಕ್ಕಾಗಿಯೇ ಯುದ್ಧವು ಸಿಡಿಯಿತು. ಚನ್ನಮ್ಮಳ ಬಗ್ಗೆ ಬರೆದ ಎಲ್ಲ ಕೃತಿಗಳಲ್ಲಿಯೂ ಈ ಘಟನೆಯನ್ನು ಪ್ರಸ್ತಾಪಿಸಲಾಗಿದೆ. ನಾನೂ ಅದನ್ನು ಇಲ್ಲಿ ಬರೆದಿರುವೆ. ಚನ್ನಮ್ಮಳು ಮತ್ತು ಕಿತ್ತೂರು ಇತಿಹಾಸದ ಗುಂಗಿನಲ್ಲಿಯೇ ಇದ್ದ ನನಗೆ ಒಂದು ರಾತ್ರಿ ಫಕ್ಕನೇ ಎಚ್ಚರವಾಯಿತು. ಆಗ ರಾತ್ರಿ ೩ ಗಂಟೆಯಾಗಿರಬಹುದು. ಆಗ ಯಾವ ವಿಚಾರ ಬಂತೆಂದರೆ ಚನ್ನಮ್ಮಳು ದತ್ತಕ ತೆಗೆದುಕೊಂಡ ಬಾಲಕ (ದತ್ತಕಕ್ಕಿಂತ ಮೊದಲು ಅವನ ಹೆಸರು ಶಿವಲಿಂಗಪ್ಪ ತಂದೆ ಬಾಳಪ್ಪಗೌಡ, ಊರು ಮಾಸ್ತಮರಡಿ) ಸವಾಯಿ ಮಲ್ಲಸರ್ಜ, ಕಿತ್ತೂರು ಯುದ್ಧದ ನಂತರ ಎಲ್ಲಿ ಹೋದ ಮತ್ತು ಏನಾದನೆಂದು ತಲೆ ತಿನ್ನಹತ್ತಿತು. ಹಲವು ದಾಖಲೆಗಳನ್ನು ಅಭ್ಯಸಿಸಿದಾಗ ಆತ ಯುದ್ಧದ ನಂತರ ಇಂಗ್ಲಿಷರ ವಿರುದ್ಧ ಗೇರಿಲ್ಲಾ ಪದ್ಧತಿಯ ಯುದ್ಧ ಮುಂದುವರೆಸಿದನೆಂಬ ದಾಖಲೆಗಳು ಸಿಕ್ಕವು. ಅವನಿಗೆ ಹೆಣ್ಣು ಕೊಟ್ಟ ಮಾವನೇ ಅವನನ್ನು ಮೋಸದಿಂದ ಹಿಡಿಸಿ ಇಂಗ್ಲಿಷರಿಗೆ ಒಪ್ಪಿಸಿದನೆಂಬ ದಾಖಲೆಯೂ ಸಿಕ್ಕಿತು. ಅನಂತರ ಇಂಗ್ಲಿಷರು ಅವನನ್ನು ಗಲ್ಲಿಗೇರಿಸಿದರೆಂದೂ ಒಂದೆರಡು ಕಡೆ ಬರೆದ ದಾಖಲೆಗಳು ಹೇಳಿದ್ದವು. ನಾನೂ ಆರಂಭದಲ್ಲಿ ಹಾಗೆಂದೇ ಬರೆದೆ.
ಹುಬ್ಬಳ್ಳಿಯ ನನ್ನ ಗೆಳೆಯರಾದ ರವೀಂದ್ರ ದೊಡ್ಡಮೇಟಿಯವರು ಆಗಾಗ ನನ್ನ ಜೊತೆಗೆ ಮಾತನಾಡುತ್ತಿರುತ್ತಾರೆ. ರವೀಂದ್ರರು ಕರ್ನಾಟಕ ರಾಜ್ಯದ ರೂವಾರಿಗಳಲ್ಲಿ ಒಬ್ಬರಾಗಿದ್ದ, ಶ್ರೇಷ್ಠ ರಾಜಕಾರಣಿಗಳೂ, ಮಾಜಿ ಸಚಿವರೂ ಆಗಿದ್ದ ಅಂದಾನೆಪ್ಪ ದೊಡ್ಡಮೇಟಿಯವರ ಮೊಮ್ಮಗ. ರವೀಂದ್ರರಿಗೆ ನನ್ನ ಬರವಣಿಗೆಯ ಬಗ್ಗೆ ಬಲು ಅಭಿಮಾನ. ನಾನು ಅವರಿಗೆ ಕಿತ್ತೂರು ಚನ್ನಮ್ಮಳ ಬಗ್ಗೆ ಪುಸ್ತಕ ಬರೆಯುತ್ತೇನೆಂದು ಹೇಳಿದಾಗ ಅವರು ಸವಾಯಿ ಮಲ್ಲಸರ್ಜನ ಬಗ್ಗೆ ಏನು ಬರೆದಿರುವಿರಿ? ಎಂದು ಕೇಳಿದರು. ಇಂಗ್ಲಿಷರು ಅವನನ್ನು ಬಂಧಿಸಿ ಅನಂತರ ಗಲ್ಲಿಗೇರಿಸಿದರೆಂದು ನಾನು ಹೇಳಿದೆ. ಅದಕ್ಕವರು ಇಲ್ಲ; ಅದು ತಪ್ಪು ಇತಿಹಾಸ. ಆತ ಜೇಲಿನಿಂದ ತಪ್ಪಿಸಿಕೊಂಡು ಓಡಿ ಹೋಗಿ ಹೈದ್ರಾಬಾದ್ ನಿಜಾಮನ ಆಶ್ರಯಕ್ಕೆ ಹೋದ. ಅವನ ನೇರವಾದ ವಂಶಜರು ರೋಣ-ಇಟಗಿ-ಶಾಂತಗಿರಿಯಲ್ಲಿದ್ದಾರೆ ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿ ನಾನು ದಿಗ್ಮೂಢನಾದೆ. ಕಿತ್ತೂರಿನ ನಿಜವಾದ ವಂಶಸ್ಥರು ರೋಣ-ಇಟಗಿ-ಶಾಂತಗಿರಿಯಲ್ಲಿದ್ದಾರೆಂಬ ವಿಷಯವೇ ಕನ್ನಡಿಗರಾದ ನಮಗೆ ಗೊತ್ತಿರಲಿಲ್ಲ. ಸವಾಯಿ ಮಲ್ಲಸರ್ಜನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಈ ಹಿಂದೆ ನಾನು ಮಾಸ್ತಮರಡಿಗೆ ಹೋಗಿದ್ದೆ. ಅಲ್ಲಿ ಕಿತ್ತೂರು ಸಂಸ್ಥಾನಕ್ಕೆ ದತ್ತಕ ಪುತ್ರನನ್ನು ನೀಡಿದ ಊರು ಎಂಬ ಫಲಕವನ್ನು ಹಾಕಿದ್ದಾರೆ. ಸವಾಯಿ ಮಲ್ಲಸರ್ಜನ ಬಗ್ಗೆ ಅಲ್ಲಿಯ ಹಲವಾರು ಗೌಡರ ಮನೆತನದ ಹಿರಿಯರನ್ನು ಕೇಳಿದ್ದೆ. ಯಾರಿಗೂ ಅವನ ಅತಾಪತಾ ಬಗ್ಗೆ ಗೊತ್ತಿರಲಿಲ್ಲ. ಒಂದಿಬ್ಬರು ಇಂಗ್ಲಿಷರು ಅವನನ್ನು ಗಲ್ಲಿಗೆ ಹಾಕಿದರು ಎಂದೇ ಹೇಳಿದ್ದರು. ನಾನೂ ಹಾಗೇ ಭಾವಿಸಿದ್ದೆ ಮತ್ತು ನಂಬಿದ್ದೆ. ಈಗ ರವೀಂದ್ರ ದೊಡ್ಡಮೇಟಿಯವರು ಹೊಸ ಇತಿಹಾಸದ ಪುಟಗಳನ್ನು ನನ್ನೆದುರು ಹರಡಿದ್ದರು. ಸವಾಯಿ ಮಲ್ಲಸರ್ಜನ ನಾಲ್ಕನೆಯ ತಲೆಮಾರಿನ ವಿಜಯಕುಮಾರಸರ್ಜ ದೇಸಾಯಿಯವರು ಶಾಂತಗಿರಿ-ಇಟಗಿಯಲ್ಲಿದ್ದಾರೆ. ನಾನು ಅವರನ್ನು ಸಂಪರ್ಕಿಸಿದೆ. ಸವಾಯಿ ಮಲ್ಲಸರ್ಜನ ಇಡಿಯ ಕಥೆಯನ್ನು ಅವರು ನನ್ನೆದುರು ಬಿಚ್ಚಿಟ್ಟರು. ಈ ಪ್ರಕರಣವೇ ಒಂದೈದು ನೂರು ಪುಟಗಳ ಇತಿಹಾಸದ ಕೃತಿಯಾಗುವಂತಿದೆ. ಸವಾಯಿ ಮಲ್ಲಸರ್ಜನ ಬಗೆಗಿನ ಹಿಂದೆ ನಾನು ಬರೆದ ಬರೆಹವನ್ನು ತೆಗೆದುಹಾಕಿ ಹೊಸದಾದ, ನೈಜವಾದ ಇತಿಹಾಸವನ್ನು ಬರೆದೆ.
ಕಿತ್ತೂರು ಚನ್ನಮ್ಮಳ ಹೆಸರಿನ ಜೊತೆಜೊತೆಗೆಯೇ ಬರುವ ಹೆಸರುಗಳೆಂದರೆ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಸರದಾರ ಗುರುಸಿದ್ದಪ್ಪ ಮುಂತಾದವರು. ಅಮಟೂರು ಬಾಳಪ್ಪನು ಹಿಂದೂವಾಗಿದ್ದನೋ, ಮುಸಲ್ಮಾನನಾಗಿದ್ದನೋ ಎಂಬುದರ ಬಗ್ಗೆ ಇನ್ನೂ ವಾದವಿವಾದಗಳಿವೆ. ಸಂಗೊಳ್ಳಿ ರಾಯಣ್ಣನಿಗೆ ಮದುವೆ ಆಗಿತ್ತೋ ಅಥವಾ ಇಲ್ಲವೋ ಎಂಬುದರ ಬಗ್ಗೆಯೂ ವಾದಗಳಿವೆ. ರಾಯಣ್ಣನನ್ನು ಗಲ್ಲಿಗೇರಿಸಿದ್ದು ಇಂಗ್ಲಿಷರ ದಾಖಲೆಯಲ್ಲಿ ಡಿಸೆಂಬರ್ ೨೮, ೧೮೩೦ ಎಂದಿದ್ದರೂ ಕೆಲವು ದಾಖಲೆಗಳಲ್ಲಿ ಜನವರಿ ೨೬, ೧೮೩೧ ಎಂದಿದೆ. ಚನ್ನಮ್ಮಳ ಗಂಡ ಮಲ್ಲಸರ್ಜ ದೇಸಾಯಿಯ ಸಮಾಧಿಯನ್ನು ಮೂರು ಕಡೆಗಳಲ್ಲಿ (ದುರದುಂಡೇಶ್ವರ ಮಠ ಅರಭಾವಿ, ಕಿತ್ತೂರಿನ ಕೊನೆಯ ಹಳ್ಳಿ ವಣ್ಣೂರು ಮತ್ತು ಕಿತ್ತೂರಿನ ಕಲ್ಮಠದ ಆವರಣ) ತೋರಿಸಲಾಗುತ್ತದೆ. ಸತ್ತ ವ್ಯಕ್ತಿ ಒಬ್ಬನೇ ಆಗಿದ್ದರೂ ಅವನನ್ನು ಮೂರು ಕಡೆಗಳಲ್ಲಿ ಸಮಾಧಿ ಮಾಡಲಾಗಿದೆ! ಈ ಎಲ್ಲ ಅಪಸವ್ಯಗಳು ನಾವು ಇತಿಹಾಸವನ್ನು ಅದೆಷ್ಟು ನಿರ್ಲಕ್ಷಿಸುತ್ತೇವೆಂಬುದರ ಕುರುಹಾಗಿದೆ.
ರಾಣಿ ಚನ್ನಮ್ಮ ನಿಧನಳಾದಾಗ ಅವಳನ್ನು ಬೈಲಹೊಂಗಲದಲ್ಲಿ ಸಮಾಧಿ ಮಾಡಲಾಯಿತು. ಯಾವುದೇ ಆಡಂಬರವಿಲ್ಲದ ಈ ಸಮಾಧಿಯ ಮೇಲೆ ಪೂಜೆಯಲ್ಲಿ ನಿರತಳಾದ ಚನ್ನಮ್ಮಳ ಸಣ್ಣ ಗಾತ್ರದ ಕಪ್ಪು ಕಲ್ಲಿನ ಮೂರ್ತಿಯೊಂದನ್ನು ಇರಿಸಲಾಗಿದೆ. ಫಕ್ಕನೇ ಈ ಮೂರ್ತಿಯನ್ನು ನೋಡಿದರೆ ಯಾವುದೋ ಶಿವಶರಣೆಯು ಪೂಜೆಗೆ ಕುಳಿತ ಮೂರ್ತಿಯಂತೆ ಕಾಣಿಸುತ್ತದೆ. ಚನ್ನಮ್ಮಳೆಂದರೆ ಶೌರ್ಯದ ಪ್ರತೀಕ. ಆಕೆಯ ಕೈಯಲ್ಲಿ ಖಡ್ಗವೇ ಶೋಭಿಸುತ್ತದೆ. ಅಲ್ಲಿ ಚನ್ನಮ್ಮಳ ಅಶ್ವಾರೂಢ ಪ್ರತಿಮೆಯನ್ನು ಸ್ಥಾಪಿಸಿದರೆ ಸಮಾಧಿಗೂ ಒಂದು ಘನತೆ ಬರುತ್ತದೆ.
೧೬೮೦ರಲ್ಲಿ ಮಡಿದ ಛತ್ರಪತಿ ಶಿವಾಜಿ ಮಹಾರಾಜರು ಉಪಯೋಗಿಸುತ್ತಿದ್ದ ಖಡ್ಗವನ್ನು ಆರ್ಕಿಯಾಲಾಜಿ ಡಿಪಾರ್ಟ್‌ಮೆಂಟಿನವರು ಸಂರಕ್ಷಿಸಿ ಇಟ್ಟಿದ್ದಾರೆ. ಟಿಪ್ಪೂ ಸುಲ್ತಾನನ ಖಡ್ಗವನ್ನೂ ಲಂಡನ್‌ನಲ್ಲಿ ಸಂರಕ್ಷಿಸಿ ಇಡಲಾಗಿದೆ. ರಾಣಾ ಪ್ರತಾಪಸಿಂಹನು ಉಪಯೋಗಿಸುತ್ತಿದ್ದ ಭರ್ಚಿ ಅಥವಾ ಭಾಲೆಯನ್ನು ದಿಲ್ಲಿಯ ಇತಿಹಾಸದ ವಿಭಾಗದಲ್ಲಿ ಇಡಲಾಗಿದೆ. ಝಾಂಸಿರಾಣಿ ಲಕ್ಷ್ಮೀಬಾಯಿಯ ಖಡ್ಗವೂ ಪುಣೆಯ ಹಿಸ್ಟಾರಿಕ್ ಸಂಗ್ರಹದಲ್ಲಿ ಇಡಲಾಗಿದೆ. ಆದರೆ ಈ ಭಾಗ್ಯ ಚನ್ನಮ್ಮಳ ಖಡ್ಗಕ್ಕೆ ಬರಲಿಲ್ಲ. ಯಾರೂ ಈ ಬಗ್ಗೆ ಆಸಕ್ತಿಯನ್ನೂ ತೋರಿಸಲಿಲ್ಲ. ಥ್ಯಾಕರೆಯನ್ನು ಕೊಂದ ಅಮಟೂರ ಬಾಳಪ್ಪನ ಬಂದೂಕು ಐತಿಹಾಸಿಕ ಮಹತ್ವದ್ದು ಎಂದು ನಮಗೆ ಅನ್ನಿಸಲೇ ಇಲ್ಲ. ಸಂಗೊಳ್ಳಿ ರಾಯಣ್ಣನು ಉಪಯೋಗಿಸುತ್ತಿದ್ದ ಖಡ್ಗ ಅದೆಲ್ಲಿ ಹೋಯಿತು? ಈ ಪರಿಯ ನಿರ್ಲಕ್ಷ್ಯತೆ ಅದ್ಯಾಕೆ ನಮಗೆ ಆವರಿಸಿತು? ಇತಿಹಾಸದ ಬಗೆಗಿನ ಅಸಡ್ಡೆಯೇ ಇದಕ್ಕೆಲ್ಲ ಕಾರಣವೆಂದು ಸುಪ್ರಸಿದ್ಧ ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳುವೆ.
ಜಾನಪದರು ಕಿತ್ತೂರಿನ ಇತಿಹಾಸದ ಬಗ್ಗೆ ಮತ್ತು ಚನ್ನಮ್ಮಳ ವ್ಯಕ್ತಿತ್ವದ ಬಗ್ಗೆ ಅನೇಕ ಗೀತೆಗಳನ್ನು ಬರೆದಿದ್ದಾರೆ. ಆಸಕ್ತ ಲೇಖಕರು ತಮ್ಮ ಶಕ್ತಿಗೆ ಅನುಗುಣವಾಗಿ ಅವುಗಳನ್ನು ಸಂಗ್ರಹಿಸಿದ್ದಾರೆ. ಈ ಜಾನಪದ ಗೀತೆಗಳು ಅಥವಾ ಲೋಕಗೀತೆಗಳ ಸಮಗ್ರ ಸಂಪುಟಗಳು ಪ್ರಕಟವಾಗಬೇಕಿದೆ. ಈ ಗೀತೆಗಳಲ್ಲಿ ಜಾನಪದ ಕವಿಯು ಸಮಕಾಲೀನ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾನೆ. ಇವುಗಳಲ್ಲಿ ಕೆಲವು ಭ್ರಮಾತ್ಮಕ ಅಥವಾ ಅತಿಶಯೋಕ್ತಿ ಎನ್ನಿಸಬಹುದಾದ ಹಲ ಕೆಲ ಗೀತೆಗಳೂ ಇವೆ. ಈ ಎಲ್ಲ ಜಾನಪದ ಸಾಹಿತ್ಯದ ಮೇಲೆ ಅಧ್ಯಯನ ನಡೆಯುವ ಅವಶ್ಯಕತೆ ಇದೆ.
ಹಲವಾರು ವರ್ಷಗಳ ಹಿಂದೆ ತೆಲುಗಿನ ಸುಪ್ರಸಿದ್ಧ ನಿರ್ದೇಶಕರೂ, ನಟರೂ ಆಗಿದ್ದ ಶ್ರೀ ಬಿ.ಆರ್.ಪಂತುಲುರವರು ಚನ್ನಮ್ಮಳ ಬಗ್ಗೆ ಕಿತ್ತೂರು ಚನ್ನಮ್ಮ ಎಂಬ ಸಿನೇಮಾವನ್ನು ನಿರ್ಮಿಸಿದ್ದರು. ಆ ಚಿತ್ರವು ತುಂಬ ಯಶಸ್ವಿಯಾಗಿತ್ತು ಮತ್ತು ಚನ್ನಮ್ಮಳಾಗಿ ಅಭಿನಯಿಸಿದ್ದ ಬಿ.ಸರೋಜಾದೇವಿಯವರಿಗೆ ಇನ್ನಿಲ್ಲದ ಪ್ರಚಾರವನ್ನು ತಂದುಕೊಟ್ಟಿತ್ತು. ಚಿತ್ರದಲ್ಲಿ ಬರುವ ಕಪ್ಪ ಕೊಡಬೇಕೇ ನಿಮಗೆ ಕಪ್ಪ? ನಿಮಗೇಕೆ ಕೊಡಬೇಕು ಕಪ್ಪ? ನೀವೇನು ನಮ್ಮ ಅಣ್ಣತಮ್ಮಂದಿರೇ? ಬಂಧು ಬಾಂಧವರೇ? ನಿಮಗೇಕೆ ಕೊಡಬೇಕು ಕಪ್ಪ? ಎಂಬ ಸಂಭಾಷಣೆಯು ಆಗ ಎಲ್ಲರ ನಾಲಿಗೆಯ ಮೇಲೆ ಕುಣಿದಾಡುತ್ತಿತ್ತು. ಈಗಲೂ ಈ ಸಂಭಾಷಣೆಯ ಘಮಲು ಹಾಗೆಯೇ ಇದೆ. ಆದರೆ ಆ ಸಿನೇಮಾದ ನಂತರ ಚನ್ನಮ್ಮಳನ್ನು ಕೇಂದ್ರವಾಗಿಟ್ಟುಕೊಂಡ ಒಂದೂ ಚಿತ್ರವು ನಿರ್ಮಾಣಗೊಳ್ಳಲಿಲ್ಲ. ಮರಾಠಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ನೂರಾರು ಚಲನಚಿತ್ರಗಳು ಬಂದಿವೆ. ಶಿವಾಜಿ ಬಗ್ಗೆ ಪ್ರತಿನಿತ್ಯ ಧಾರಾವಾಹಿಗಳು ಮರಾಠಿ ಟಿ.ವ್ಹಿ.ಗಳಲ್ಲಿ ಪ್ರಸಾರವಾಗುತ್ತಿವೆ. ಆದರೆ ಚನ್ನಮ್ಮಳ ಬಗ್ಗೆ ಪಂತುಲುರವರ ಸಿನೇಮಾದ ನಂತರ ಇನ್ನೊಂದು ಸಿನೇಮಾ ಬರಲಿಲ್ಲವೆಂಬುದು ವಿಸ್ಮಯದ ವಿಷಯವಾಗಿದೆ. ಸಿನೇಮಾ ಮಾಧ್ಯಮವು ಅಕ್ಷರ ಮಾಧ್ಯಮಕ್ಕಿಂತ ಬಲು ಪ್ರಭಾವಿಯಾದ ಮಾಧ್ಯಮವಾಗಿದೆ. ಆ ಮಾಧ್ಯಮದಿಂದ ಪ್ರತಿ ಮನೆ ಮನೆಯನ್ನು, ಮನ ಮನವನ್ನು ಸುಲಭದಲ್ಲಿ ಮುಟ್ಟಬಹುದು. ಆದರೆ ಕನ್ನಡ ನಾಡಿನ ನಿರ್ಮಾಪಕರುಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ ಅವರ್‍ಯಾರೂ ಚನ್ನಮ್ಮಳ ಬಗ್ಗೆ ಚಲನಚಿತ್ರವನ್ನು ನಿರ್ಮಿಸಬೇಕೆಂದು ಯೋಚಿಸಲಿಲ್ಲ. ಈಗಂತೂ ಚಲನಚಿತ್ರದ ತಾಂತ್ರಿಕತೆಯಲ್ಲಿ ಹೊಸ ಹೊಸ ಆವಿಷ್ಕಾರಗಳು ಬಂದಿವೆ. ಈ ಆವಿಷ್ಕಾರಗಳ ಸಹಾಯದಿಂದ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಚನ್ನಮ್ಮಳ ಜೀವನ ಚರಿತ್ರೆಯನ್ನು ಚಲನಚಿತ್ರವನ್ನಾಗಿಸುವ ಅವಶ್ಯಕತೆ ಇದೆ ಎಂದು ನನಗೆ ಅನ್ನಿಸುತ್ತದೆ.
ಕರ್ನಾಟಕ ಬಿಟ್ಟು ಹೊರ ರಾಜ್ಯಗಳ ಜನರಿಗೆ ಚನ್ನಮ್ಮಳ ಬಗ್ಗೆ ತಿಲಮಾತ್ರವೂ ಗೊತ್ತಿಲ್ಲ. ನಮಗೆ ಹೊರ ರಾಜ್ಯದವರಾದ ಝಾನ್ಸಿ ಲಕ್ಷ್ಮೀಬಾಯಿ, ಛತ್ರಪತಿ ಶಿವಾಜಿ, ರಾಣಾ ಪ್ರತಾಪಸಿಂಹ, ಮಂಗಲ ಪಾಂಡೆ ಮುಂತಾದವರ ಬಗ್ಗೆ ಗೊತ್ತಿದೆ. ಇದಕ್ಕೆ ಮುಖ್ಯ ಕಾರಣ ಅವರ ಬಗೆಗಿನ ಮಾಹಿತಿಗಳು ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾದುದಕ್ಕೆ. ಆ ಪಠ್ಯಗಳನ್ನು ಓದಿ ನಾವು ಅವರ ಬಗ್ಗೆ ಅರಿತುಕೊಂಡೆವು. ರಾಣಿ ಚನ್ನಮ್ಮಳ ಜೀವನ ಚರಿತ್ರೆಯು ಉತ್ತರ ಭಾರತ ಹಾಗೂ ಹೊರ ರಾಜ್ಯಗಳಲ್ಲಿಯ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾದರೆ ಅಲ್ಲಿಯ ಜನರಿಗೂ ಈ ವೀರ, ಶೂರ ರಾಣಿಯ ಬಗ್ಗೆ ಗೊತ್ತಾಗುತ್ತದೆ. ಈ ಬಗೆಗಿನ ಒತ್ತಡವನ್ನು ಕರ್ನಾಟಕದಿಂದ ಆರಿಸಿ ಹೋಗಿರುವ ಸಂಸತ್ ಸದಸ್ಯರು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಮೇಲೂ, ಬೇರೆ ಬೇರೆ ರಾಜ್ಯ ಸರ್ಕಾರಗಳ ಮೇಲೂ ಹೇರಬೇಕು. ಅವಳ ಚರಿತ್ರೆಯು ಪಠ್ಯ ಪುಸ್ತಕಗಳಲ್ಲಿ ಬಂದರೆ ಅಲ್ಲಿಯ ಜನರಿಗೂ ಚನ್ನಮ್ಮಳ ಬಗ್ಗೆ ಗೊತ್ತಾಗಿ ಆಕೆ ಝಾನ್ಸಿ ಲಕ್ಷ್ಮೀಬಾಯಿಗಿಂತ ೩೩ ವರ್ಷ ಮೊದಲು ಇಂಗ್ಲಿಷರ ವಿರುದ್ಧ ಬಂಡಾಯದ ಧ್ವಜವನ್ನು ಹಾರಿಸಿದ್ದಳೆಂಬುದು ತಿಳಿಯುತ್ತದೆ. ಇಂಗ್ಲಿಷರ ವಿರುದ್ಧ ಯುದ್ಧ ಸಾರಿದ ಲಕ್ಷ್ಮೀಬಾಯಿಯ ಹೋರಾಟವೂ ದೊಡ್ಡದು. ಚನ್ನಮ್ಮ ಮತ್ತು ಲಕ್ಷ್ಮೀಬಾಯಿಯವರು ಇಂಗ್ಲಿಷರ ವಿರುದ್ಧ ತಿರುಗಿ ಬಿದ್ದದ್ದು ಸಮಾನ ಕಾರಣಕ್ಕಾಗಿ. ಇಬ್ಬರೂ ನಮಗೆ ವಂದ್ಯರೇ ಆಗಿದ್ದಾರೆ. ಆದರೆ ಇಂಗ್ಲಿಷರ ವಿರುದ್ಧ ದೇಸಿ ಅಸ್ಮಿತೆಯನ್ನು ಮೊಟ್ಟ ಮೊದಲು ಮೆರೆದವಳು ಕರ್ನಾಟಕದ ಕನ್ನಡ ನೆಲದವಳು ಎಂಬುದು ಇತಿಹಾಸದಲ್ಲಿ ನಮೂದಾಗಬೇಕೆಂಬುದು ನನ್ನ ಮಾತಿನ ಉದ್ದೇಶವಾಗಿದೆ. ಹೊರ ರಾಜ್ಯಗಳ ಪಠ್ಯ ಪುಸ್ತಕಗಳಲ್ಲಿ ಚನ್ನಮ್ಮಳ ಚರಿತ್ರೆಯು ಅಳವಡಿಸಲ್ಪಟ್ಟರೆ ಅವಳು ಭಾರತ ದೇಶದ ಎಲ್ಲರ ಮನೆ ಮನೆಗಳಿಗೆ, ಮನ ಮನಗಳಿಗೆ ತಲುಪುತ್ತಾಳೆಂಬುದು ನನ್ನ ನಂಬುಗೆ.
ಸ್ವಾತಂತ್ರ್ಯಕ್ಕಾಗಿ ರಾಣಿ ಚನ್ನಮ್ಮಳು ಇಂಗ್ಲಿಷರ ವಿರುದ್ಧ ಮೊಟ್ಟ ಮೊದಲು ಯುದ್ಧ ಸಾರಿದ್ದರೂ ೧೮೫೭ರ ಝಾನ್ಸಿ ಲಕ್ಷ್ಮೀಬಾಯಿ ನಡೆಸಿದ ಯುದ್ಧವನ್ನೇ ಮೊಟ್ಟ ಮೊದಲ ಸ್ವಾತಂತ್ರ್ಯ ಯುದ್ಧವೆಂದು ಎಲ್ಲೆಡೆಗೆ ಬಿಂಬಿಸಲಾಗುತ್ತಿದೆ. ಚನ್ನಮ್ಮಳ ಯುದ್ಧವು ಮೊಟ್ಟ ಮೊದಲ ಸ್ವಾತಂತ್ರ್ಯ ಯುದ್ಧವೆಂದು ಪ್ರಚುರಪಡಿಸಲು ನಾವು ವಿಫಲರಾಗಿದ್ದೇವೆ. ೨೦೦೭ರಲ್ಲಿ ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಘಟನೆಯ ೧೫೦ನೆಯ ವರ್ಷದ ನೆನಪಿಗಾಗಿ ಕೇಂದ್ರ ಸರ್ಕಾರವು ಭವ್ಯವಾದ ಮತ್ತು ದಿವ್ಯವಾದ ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಿದ್ದಿತು. ಆ ಸಂದರ್ಭದ ನೆನಪಿಗಾಗಿ ಲೋಕಸಭೆಯಲ್ಲಿ ಒಂದು ಗೊತ್ತುವಳಿಯನ್ನು ಸ್ವೀಕರಿಸಿ ೧೮೫೭ರ ವೀರಯೋಧರಿಗೆ ಗೌರವವನ್ನು ಸಲ್ಲಿಸುವ ಕಾರ್ಯಕ್ರಮವಿದ್ದಿತು. ಲೋಕಸಭೆಯ ಸ್ಪೀಕರರು ಗೊತ್ತುವಳಿಯನ್ನು ಓದುತ್ತಿದ್ದಂತೆಯೇ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ಸಂಸದರು ಎದ್ದು ನಿಂತು ೧೮೫೭ಕ್ಕಿಂತ ಮೊದಲು ಅಂದರೆ ೧೮೪೨ರಲ್ಲಿ ಪಂಜಾಬ್‌ದಲ್ಲಿ ತಾರಾಸಿಂಹನೆಂಬ ವೀರನು ಇಂಗ್ಲಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ್ದನೆಂದೂ, ಗೊತ್ತುವಳಿಯನ್ನು ಸ್ವೀಕರಿಸುವ ಮುಂಚೆ ಲೋಕಸಭೆಯು ಅವನಿಗೆ ಗೌರವ ಸಲ್ಲಿಸಿ ಗೊತ್ತುವಳಿಯನ್ನು ಸ್ವೀಕರಿಸಬಹುದೆಂದು’ ಹೇಳಿ ತಾರಾಸಿಂಹನ ಹೆಸರಿನಿಂದ ಜಯಘೋಷ ಮಾಡಹತ್ತಿದರು. ಈ ಸಂಸದರಲ್ಲಿ ಎಲ್ಲ ಪಕ್ಷದವರು ಅಂದರೆ ಬಿಜೆಪಿ, ಕಾಂಗ್ರೆಸ್, ಅಕಾಲಿದಳ, ಆಲ್ ಇಂಡಿಯಾ ಸಿಖ್ ಫ್ರಂಟ್ ಹಾಗೂ ಪಂಜಾಬ್ ಮತ್ತು ಹರ್ಯಾಣಾ ರಾಜ್ಯದ ಇತರೆ ಬಿಡಿ ಪಕ್ಷಗಳ ಸದಸ್ಯರೂ ಇದ್ದರು. ಅವರೆಲ್ಲ ಪಟ್ಟು ಹಿಡಿದು, ಪಕ್ಷಭೇದ ಮರೆತು ತಾರಾಸಿಂಹನ ಹೆಸರು ೧೮೫೭ರ ವೀರಯೋಧರಿಗೆ ಗೌರವ ಸಲ್ಲಿಸುವುದಕ್ಕಿಂತ ಮುಂಚೆ ದಾಖಲೆಯಲ್ಲಿ ಸೇರಿಸುವಲ್ಲಿ ಯಶಸ್ವಿಯಾದರು. ಅವರ ಮಾತಿನ ಜಾಡನ್ನೇ ಹಿಡಿದು ಕರ್ನಾಟಕದಿಂದ ಆರಿಸಿ ಹೋದ ೨೮ ಸಂಸದರೂ ತಾರಾಸಿಂಹನಿಗಿಂತ ಮೊದಲು ಅಂದರೆ ೧೮೨೪ರಲ್ಲಿ ಕರ್ನಾಟಕದಲ್ಲಿ ಕಿತ್ತೂರಿನ ರಾಣಿ ಚನ್ನಮ್ಮಳು ಇಂಗ್ಲಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ್ದಳು; ಅವಳ ಹೆಸರು ತಾರಾಸಿಂಹನಿಗಿಂತ ಮೊದಲು ದಾಖಲಿಸಬೇಕೆಂದು ಒತ್ತಾಯಿಸಿದ್ದರೆ ಚನ್ನಮ್ಮಳು ಲೋಕಸಭೆಯ ದಾಖಲೆಯಲ್ಲಿ ಅಜರಾಮರಳಾಗುತ್ತಿದ್ದಳು. ದುರ್ದೈವವೆಂದರೆ ಕರ್ನಾಟಕದ ಒಬ್ಬ ಸದಸ್ಯನೂ ಈ ಬಗ್ಗೆ ಬಾಯಿ ತೆರೆಯಲಿಲ್ಲ. ಸಿಕ್ಕಿದ ಒಂದು ಅಪೂರ್ವವಾದ ಅವಕಾಶವನ್ನು ನಮ್ಮ ಸಂಸದರು ಸುಖಾಸುಮ್ಮನೆ ಕಳೆದುಕೊಂಡರು. ನಾನು ಈ ಬಗ್ಗೆ ಬೆಳಗಾವಿಯ ಆಗಿನ ಸಂಸದರಾಗಿದ್ದ ಶ್ರೀ ಸುರೇಶ ಅಂಗಡಿಯವರಿಗೆ ಲೋಕಸಭೆಯಲ್ಲಿ ನೀವು ಬೆಳಗಾವಿಯನ್ನು ಪ್ರತಿನಿಧಿಸುತ್ತೀರಿ. ನೀವಾದರೂ ಎದ್ದು ಈ ಬೇಡಿಕೆಯನ್ನು ಮಂಡಿಸಬಹುದಾಗಿತ್ತಲ್ಲ?’ ಎಂದು ಕೇಳಿದೆ. ಅದಕ್ಕೆ ಅವರು ಲೋಕಸಭೆಯಲ್ಲಿ ಯಾರು ಯಾವಾಗ ಮತ್ತು ಏನು ಮಾತಾಡಬೇಕೆಂಬುದು ನಮಗೆ ಪಕ್ಷದ ಆದೇಶವಿರುತ್ತದೆ. ಪಕ್ಷದ ಆದೇಶವನ್ನು ನಾವು ಮುರಿಯುವ ಹಾಗಿಲ್ಲ’ವೆಂದು ಹೇಳಿದರು. ಪಂಜಾಬ್ ಮತ್ತು ಹರ್ಯಾಣಾದ ನಿಮ್ಮ ಪಕ್ಷದ ಸದಸ್ಯರು ಈ ಬೇಡಿಕೆಯನ್ನು ಬಹಿರಂಗವಾಗಿಯೇ ಸ್ಪೀಕರ್ ಎದುರು ಮಂಡಿಸಿದ್ದರು. ಅವರಿಗೆ ಪಕ್ಷದ ಆದೇಶದ ಬಂಧನ ಇರುವುದಿಲ್ಲವೇ?’ ಎಂದು ಕೇಳಿದೆ. ಅದಕ್ಕೆ ಶ್ರೀ ಅಂಗಡಿಯವರು ಉತ್ತರಿಸಲಿಲ್ಲ. ಕರ್ನಾಟಕದ ಸಂಸದರೆಲ್ಲರೂ ಅಭಿಮಾನಶೂನ್ಯದ ಈ ಮಹಾ ಅಪರಾಧಕ್ಕೆ ಜವಾಬ್ದಾರರೆಂದು ನನಗೆ ಅನ್ನಿಸುತ್ತದೆ.
ಚನ್ನಮ್ಮಳ ಬಗೆಗಿನ ಅಭಿಮಾನವೇ ಇಷ್ಟೆಲ್ಲ ಸಂಗತಿಗಳನ್ನು ನನ್ನಿಂದ ಹೇಳಿಸಿದೆ. ಈ ಕೃತಿಯನ್ನು ಬರೆಯುವಾಗ ನಾನು ಬಹಳಷ್ಟು ಗ್ರಂಥಗಳನ್ನು, ದಾಖಲೆಗಳನ್ನು, ಬರೆಹಗಳನ್ನು ಅಭ್ಯಸಿಸಬೇಕಾಯಿತು. ನನ್ನ ಗೆಳೆಯರನೇಕರು ಅನೇಕಾನೇಕ ದಾಖಲೆಗಳನ್ನು ಒದಗಿಸಿಕೊಟ್ಟರು. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಬೆಳಗಾವಿ ಜಿಲ್ಲೆಯ ನಿಡಸೋಸಿ ಶ್ರೀ ದುರದುಂಡೀಶ್ವರ ಮಠದ ಜಗದ್ಗುರುಗಳಾದ ಡಾ. ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳಿಗೆ ನನ್ನ ಬಗ್ಗೆ ಮತ್ತು ನನ್ನ ಬರವಣಿಗೆಯ ಬಗ್ಗೆ ಅಪಾರವಾದ ಅಭಿಮಾನ ಮತ್ತು ಪ್ರೀತಿ. ಮಹಾಸ್ವಾಮಿಗಳು ತಮ್ಮ ಪೂರ್ವಾಶ್ರಮದಲ್ಲಿ ನನ್ನ ಕಾಲೇಜು ಸ್ನೇಹಿತರಾಗಿದ್ದರು. ನಾವಿಬ್ಬರೂ ಒಟ್ಟಿಗೆ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಬಿಎ ಕೋರ್ಸಿಗಾಗಿ ಓದಿದ್ದೆವು. ನನ್ನ ಸಾಹಿತ್ಯದ ಬಗ್ಗೆ ಅವರು ಬಾಗಲಕೋಟೆಯಲ್ಲಿ ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು. ಕಿತ್ತೂರು ಚನ್ನಮ್ಮ ಕೃತಿಯನ್ನು ನಾನು ಅವರಿಗೆ ಪ್ರೀತಿ, ಅಭಿಮಾನ ಮತ್ತು ಗೌರವದಿಂದ ಅರ್ಪಣೆ ಮಾಡುತ್ತಿದ್ದೇನೆ.
ಸದಾ ನನ್ನ ಹಿತವನ್ನು ಬಯಸುವ ಗೆಳೆಯರಾದ ನಾಡೋಜ ಡಾ. ಮನು ಬಳಿಗಾರ, ಸತೀಶ ಕುಲಕರ್ಣಿ, ಡಾ. ರಾಮಕೃಷ್ಣ ಮರಾಠೆ, ರವಿ ಕೋಟಾರಗಸ್ತಿ, ಡಾ. ಎ.ಬಿ.ಘಾಟಗೆ, ಎಂ.ಕೆ.ಜೈನಾಪುರ, ಯ.ರು.ಪಾಟೀಲ, ಡಾ. ಸಂತೋಷ ಹಾನಗಲ್ಲ, ಕೆ.ಎಚ್.ಚನ್ನೂರ, ಲೋಹಿಯಾ ಸಿ.ಚನ್ನಬಸವಣ್ಣ, ಡಾ. ಮಲ್ಲಿಕಾ ಘಂಟಿ, ವಿದ್ಯಾವತಿ ಭಜಂತ್ರಿ, ಡಾ. ಸಿ.ಕೆ. ನಾವಲಗಿ, ಗಣೇಶ ಕದಂ, ಡಾ. ಮಹಾಂತೇಶ ಚಲುವಾದಿ, ಪ್ರಕಾಶ ಗಿರಿಮಲ್ಲನವರ, ಡಾ. ಸಂತೋಷ ನಾಯಿಕ, ಡಾ. ಗುರುದೇವಿ ಹುಲೆಪ್ಪನವರಮಠ, ರವೀಂದ್ರ ದೊಡ್ಡಮೇಟಿ ಮುಂತಾದವರಿಗೆ ನನ್ನ ಕೃತಜ್ಞತೆಗಳು.
ಕೃತಿಯನ್ನು ತಪ್ಪಿಲ್ಲದಂತೆ ಡಿಟಿಪಿ ಮಾಡಿದ ಶಂಕರ ಭೀ. ಅತ್ತೀಮರದ ಅವರಿಗೆ, ಕೃತಿಯನ್ನು ಪ್ರಕಟಿಸಿದ ಹೊಸಪೇಟೆಯ ಯಾಜಿ ಪ್ರಕಾಶನದ ಸವಿತಾ ಯಾಜಿ ಮತ್ತು ಗಣೇಶ ಯಾಜಿಯವರಿಗೆ ಹಾಗೂ ಮುಖಪುಟದ ಕಲಾವಿದರಾದ ಅಜಿತ್ ಕೌಂಡಿನ್ಯ ಅವರಿಗೆ ನಾನು ಕೃತಜ್ಞನಾಗಿದ್ದೇನೆ.
ಕಿತ್ತೂರಿನ ಇತಿಹಾಸದ ಬಗ್ಗೆ ವಿಭಿನ್ನವಾಗಿ ಯೋಚಿಸಿದ ನನ್ನ ವಿದ್ಯಾಗುರುಗಳಾದ ಡಾ. ಎಂ.ಎಂ.ಕಲಬುರ್ಗಿ, ಸುಪ್ರಸಿದ್ಧ ಲೇಖಕರಾದ ಡಾ. ಎಸ್.ಶೆಟ್ಟರ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಡಾ. ಎಸ್.ಎಂ. ಜಾಮದಾರ ಅವರಿಗೂ ನನ್ನ ನೆನಕೆಗಳು ಸಲ್ಲುತ್ತವೆ.
ನನ್ನ ಪತ್ನಿ ಸುಮಾ, ಮಕ್ಕಳಾದ ಸಂಸ್ಕೃತಿ, ಅಳಿಯ ರಾಕೇಶ ರಾಮಗಡ, ಶ್ರೇಯಸ್, ಅಳಿಯ ಸಂತೋಷ ಪಾಟೀಲ, ಮೊಮ್ಮಕ್ಕಳಾದ ಪ್ರಿಶಾ ಹಾಗೂ ಸಿರಿ ಅವರುಗಳ ಪ್ರೀತಿಗೆ ಕೃತಜ್ಞತೆಗಳು.
–ಡಾ. ಸರಜೂ ಕಾಟ್ಕರ್
ಪುಟ ತೆರೆದಂತೆ…
ಸವಿನುಡಿ / ೫
ಲೇಖಕರ ಮಾತು / ೭
ಮಯೂರವರ್ಮನ ಕೀರ್ತಿಪುರವೇ ಇಂದಿನ ಕಿತ್ತೂರು / ೨೧
ಕಿತ್ತೂರು ಸಂಸ್ಥಾನದ ಹಿರೀಕರು / ೨೬
ಕಿತ್ತೂರು ಅರಸು ಮನೆತನದ ಇತಿಹಾಸ / ೨೮
ಧೋಂಡಿಯಾ ವಾಘ / ೪೨
ದೇಸಿ ರಾಜರನ್ನು ಒಗ್ಗೂಡಿಸಲು ನಿರ್ಧಾರ / ೪೭
ಚನ್ನಮ್ಮ / ೫೧
ಮಲ್ಲಸರ್ಜ-ಚನ್ನಮ್ಮ ವಿವಾಹ ಸಡಗರ / ೬೫
ಮಲ್ಲಸರ್ಜನ ಎರಡು ಕಣ್ಣು: ರುದ್ರಮ್ಮ, ಚನ್ನಮ್ಮ / ೭೬
ಟಿಪ್ಪೂ ಸುಲ್ತಾನನ ಪರಾಜಯ / ೭೯
ಅರಮನೆಯಲ್ಲಿ ಸುಖದ ಕಲರವ / ೮೩
ನಂದಗಡದಲ್ಲಿ ಪ್ರತಾಪಗಡ ಕೋಟೆ ನಿರ್ಮಾಣ / ೮೮
ಪೇಶ್ವೆಯ ಜಾಲದಲ್ಲಿ ಮಲ್ಲಸರ್ಜ / ೯೩
ಪೇಶ್ವೆಯ ಸೆರೆಯಲ್ಲಿ ಮಲ್ಲಸರ್ಜ / ೧೦೫
ಕಿತ್ತೂರಿನಲ್ಲಿ ಪಸರಿಸಿದ ವಿಷಾದ / ೧೧೦
ಕಿತ್ತೂರಿನ ಆಡಳಿತ ಸೂತ್ರ ಕೈಗೆತ್ತಿಕೊಂಡ ಚನ್ನಮ್ಮ / ೧೧೨
ಶಿವಬಸವರಾಜನಿಗೆ ಭೈರವ ಕಂಕಣ / ೧೧೭
ಶಿವಬಸವರಾಜನ ಮರಣ / ೧೨೧
ಮಲ್ಲಸರ್ಜನ ಮರಣ / ೧೨೬
ಶಿವಲಿಂಗರುದ್ರಸರ್ಜನ ಪಟ್ಟಬಂಧೋತ್ಸವ / ೧೩೦
ಇಂಗ್ಲಿಷರ ಆಡಳಿತಕ್ಕೊಳಪಟ್ಟ ಕಿತ್ತೂರು / ೧೩೪
ಶಿವಲಿಂಗರುದ್ರಸರ್ಜನ ಮರಣ ಮಾಸ್ತಮರಡಿಯ ಬಾಲಕನ ದತ್ತಕ / ೧೩೯
ಇಂಗ್ಲಿಷರ ವಿರುದ್ಧ ಯುದ್ಧದ ಕಹಳೆ / ೧೪೬
ಸಂಘರ್ಷ / ೧೬೨
ಥ್ಯಾಕರೆಯ ವಧೆ; ಕಿತ್ತೂರು ವಿಜಯೋತ್ಸವ / ೧೬೮
ಯುದ್ಧದ ವಾತಾವರಣ / ೧೭೩
ಯುದ್ಧದ ತಯಾರಿ / ೧೮೧
ಪತ್ರಗಳ ವಿನಿಮಯ / ೧೮೪
ಯುದ್ಧ / ೧೯೦
ಚನ್ನಮ್ಮ-ರಾಯಣ್ಣ ಭೇಟಿ / ೨೦೬
ನಂದಿದ ಸ್ವಾತಂತ್ರ್ಯ ಜ್ಯೋತಿ / ೨೧೧
ಅನುಬಂಧ ೧ ಸುಪ್ತ ಜ್ವಾಲೆ / ೨೧೪
ಅನುಬಂಧ ೨ ಕಿತ್ತೂರು ರಾಜ್ಯದ ಅರಸರ ವಂಶಾವಳಿ / ೨೧೮
(ಕ್ರಿ.ಶ. ೧೫೮೫-೧೮೨೪)
ಅನುಬಂಧ ೩ ಸ್ಮಾರಕ ಸ್ತಂಭ / ೨೨೦
ಅನುಬಂಧ ೪ ಗ್ರಂಥಋಣ / ೨೨೨
Reviews
There are no reviews yet.