ಪೀಠಿಕೆ
ಯಕ್ಷಗಾನ ಪರಿಸರದಲ್ಲಿ ಹುಟ್ಟಿ ಬೆಳೆದ ನನ್ನ ಚಿಂತನೆಗಳು ಇಲ್ಲಿನ ಲೇಖನಗಳಲ್ಲಿ ವಿಸ್ತರಿಸಿವೆ. ಬಾಲ್ಯದ ದಿನಗಳಲ್ಲಿ ಯಕ್ಷಗಾನ ಪ್ರೇಕ್ಷಕನಾಗಿ ಭಾಗವಹಿಸುತ್ತಿದ್ದ ನಾನು ೧೯೮೦- ೮೭ರ ಅವಧಿಯಲ್ಲಿ ಬಣ್ಣ ಹಚ್ಚಿ ವೇಷತೊಟ್ಟು ರಂಗದಲ್ಲಿ ಕುಣಿದೆ. ಕುಂಟಾರಿನ ಯು.ಕೆ.ಕೆ. ಸ್ಮಾರಕ ಕಲಾ ಸಂಘದಲ್ಲಿ ಮಾಟೆಡ್ಕ ಪುರುಷೋತ್ತಮಣ್ಣನ ಪ್ರೀತಿಯ ಆದೇಶಕ್ಕೆ ಮಣಿದು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದೆ. ಆಗ ಬೆಂಬಲವಾಗಿ ನಿಂತವರು ವಿದ್ಯಾ ಗುರುಗಳಾದ ಡಾ. ಕೆ. ಕಮಲಾಕ್ಷ. ಅವರು ಸದಾ ನನ್ನ ಜೊತೆಗೆ ಕಲಾವಿದರಾಗಿ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ಇದು ನನಗೆ ಮತ್ತಷ್ಟು ಉತ್ತೇಜನ ನೀಡುತ್ತಿತ್ತು. ಅವರು ಒಪ್ಪಿಗೆ ಕೊಟ್ಟರೆ ಯಾವ ಪಾತ್ರವನ್ನಾದರೂ ನಿರ್ವಹಿಸಬಲ್ಲೆ ಎಂಬ ಧೈರ್ಯ ಅಂದು ನನ್ನಲ್ಲಿತ್ತು. ಆ ಧೈರ್ಯವನ್ನೇ ಊರುಗೋಲು ಮಾಡಿಕೊಂಡು ಮುನ್ನಡೆದೆ. ಅಗಲ್ಪಾಡಿ ನಾರಾಯಣ ಮಣಿಯಾಣಿ ಇವರು ಯಕ್ಷಗಾನದ ಪ್ರಸಿದ್ಧ ಪುಂಡು ವೇಷದಾರಿಗಳಾಗಿದ್ದರು. ಕಟೀಲು, ಪುತ್ತೂರು ಮೇಳಗಳಲ್ಲಿ ಅಭಿಮುನ್ಯವೇ ಮೊದಲಾದ ತರುಣ ಪಾತ್ರಗಳಲ್ಲಿ ಮಿಂಚಿದವರು. ಅವರು ಯಕ್ಷಗಾನದ ನಾಟ್ಯಗುರುವಾಗಿ ಮಾರ್ಗದರ್ಶನ ಮಾಡಿ ಕುಣಿಸಿದರು. ಆಗೆಲ್ಲ ಯಕ್ಷಗಾನ ನನ್ನ ಬದುಕಿನ ಮುಖ್ಯ ಭಾಗವೇ ಆಗಿತ್ತು.
ಕಾಲೇಜು ದಿನಗಳಲ್ಲಿ ಕಾಸರಗೋಡಿನ ಸುತ್ತಮುತ್ತಲ ಸಂಘ-ಸಂಸ್ಥೆಗಳ ಅನೇಕ ಯಕ್ಷಗಾನದಲ್ಲಿ ಭಾಗವಹಿಸಿದ್ದೆ. ಶ್ರೀ ಮಲ್ಲ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿಯೂ ಪಾತ್ರ ನಿರ್ವಹಿಸಲು ಅವಕಾಶ ನೀಡಿದರು. ಆಗ ನನ್ನ ಪಾತ್ರವನ್ನು ನೋಡಿದ ಗೆಳೆಯರನೇಕರು ಮೆಚ್ಚುಗೆಯ ನುಡಿಗಳನ್ನಾಡಿ ಹುರಿದುಂಬಿಸುತ್ತಿದ್ದರು. ಸುತ್ತಮುತ್ತಲ ಊರುಗಳಿಂದ ಕಾಲೇಜಿಗೆ ಬರುತ್ತಿದ್ದ ಹುಡುಗರು, ಹುಡುಗಿಯರು ತಮ್ಮ ಊರಿನಲ್ಲಿ ನಡೆದ ಯಕ್ಷಗಾನದಲ್ಲಿ ನನ್ನ ಪಾತ್ರವನ್ನು ನೋಡಿದ್ದಾಗಿ ಹೇಳಿದಾಗ ತುಂಬಾ ಹೆಮ್ಮೆ ಎನ್ನಿಸುತ್ತಿತ್ತು. ಆಗೆಲ್ಲಾ ಸಿಕ್ಕ ಅವಕಾಶವನ್ನು, ಆಹ್ವಾನವನ್ನು ತಪ್ಪಿಸದೆ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದೆ. ರಾತ್ರಿ ವೇಷತೊಟ್ಟರೂ ಮರುದಿನ ತರಗತಿಯ ಪಾಠವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಹೇಗೋ ಎರಡನ್ನೂ ಸರಿದೂಗಿಸಿಕೊಳ್ಳುವುದು ಸಾಧ್ಯವಾಯಿತು. ಹಾಗಾಗಿ ಓದಿಗೆ ಯಕ್ಷಗಾನದಿಂದ ಅನೇಕ ವಿಚಾರಗಳನ್ನು ಪೂರಕವಾಗಿ ಒದಗಿಸಿಕೊಳ್ಳುವುದು, ಹಾಗೆಯೇ ಓದನ್ನು ಯಕ್ಷಗಾನ ಪಾತ್ರ ನಿರ್ವಹಣೆಯಲ್ಲೂ ಪೂರಕವಾಗಿ ಬಳಸಿಕೊಳ್ಳುವುದನ್ನು ಕಲಿತುಕೊಂಡೆ.
೧೯೮೭ರಲ್ಲಿ ಎಂ.ಎ ಮುಗಿಸಿ, ಎಂ.ಫಿಲ್, ಪಿಎಚ್.ಡಿ.ಗೆಂದು ಮದುರೈ ಸೇರಿದಾಗ ಯಕ್ಷಗಾನವನ್ನು ಕಳೆದುಕೊಂಡೆನೆಂಬ ಭಾವ ನನ್ನನ್ನು ಕಾಡಿತ್ತು. ಆದರೆ ಅದು ಅನಿವಾರ್ಯವೇ ಆಗಿತ್ತು. ನಂತರ ಮದುರೈ ಕಾಮರಾಜ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ ತಲ್ಲೀನನಾಗಿ ಯಕ್ಷಗಾನವನ್ನು ಸಂಪೂರ್ಣ ಮರೆತೆ. ಅವರಿವರ ನೆರವು ಪಡೆದು ಒಂದೆರಡು ತಂಡಗಳನ್ನು ಕರೆಸಿ ಮದುರೈಯಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸುವುದು ಮಾತ್ರ ಸಾಧ್ಯವಾಯಿತು.
೧೯೯೨ರಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡಾಗ ಯಕ್ಷಗಾನದ ನನ್ನ ಆಸಕ್ತಿಯನ್ನು ಕೆರಳಿಸಿದವರು ಪ್ರೊ. ಕಿ.ರಂ. ನಾಗರಾಜ ಅವರು. ಮಾತನಾಡುತ್ತ ಯಕ್ಷಗಾನವನ್ನು ಕುರಿತ ಅನೇಕ ವಿವರಗಳನ್ನು ಅವರ ಮುಂದೆ ಮಂಡಿಸಿದೆ. ಹಾಗೆ ಹೇಳಿದ ಮೇಲೆ ಯಕ್ಷಗಾನದ ಕುರಿತು ನಿಮ್ಮ ವಿಚಾರಗಳನ್ನು ಬರೆಯಿರಿ ಎಂದರು. ಹಾಗೆ ಬರೆದ ಮೊದಲ ಲೇಖನವೇ ಯಕ್ಷಗಾನದ ಅರ್ಥನಿರ್ಮಾಣ ಪ್ರಕ್ರಿಯೆ. ನಂತರ ಅರ್ಥಗಾರಿಕೆಯ ಭಾಷಿಕ ನೆಲೆಗಳು ಲೇಖನವನ್ನು ಬರೆದೆ. ಇವೆರಡೂ ಕಿ.ರಂ. ಅವರ ಮುಂದೆ ಮಂಡಿಸಿದ ವಿಚಾರಗಳ ಲೇಖನ ರೂಪವೇ ಆಗಿತ್ತು. ಹೀಗೆ ಲೇಖನಗಳನ್ನು ಬರೆಯುತ್ತ ಹೋದಂತೆ ವಿಶ್ವವಿದ್ಯಾಲಯದ ಇತರರು ಅದನ್ನು ಓದಿ ಚರ್ಚಿಸುತ್ತಿದ್ದರು. ಡಾ. ಪುರುಷೋತ್ತಮ ಬಿಳಿಮಲೆ ಅವರು ಲೇಖನಗಳನ್ನು ಸಂಕುಲ ಪತ್ರಿಕೆಗೆ ಕಳುಹಿಸಲು ಸೂಚಿಸಿದರು. ಹೀಗೆ ಬರೆಯುತ್ತಾ ಹೋದೆ. ಡಾ. ವಿಜಯ ಅವರು ಸಂಕುಲದಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದರು. ಅನೇಕ ವಿದ್ವಾಂಸರು ಲೇಖನದ ಬಗೆಗೆ ಮೆಚ್ಚುಗೆಯನ್ನು ಸೂಚಿಸಿ ವೈಯಕ್ತಿಕವಾಗಿ ಪತ್ರ ಬರೆದರು.
ಲೇಖನಗಳ ಜೊತೆಗೆ ಕಿ.ರಂ. ಅವರ ಸೂಚನೆಯಂತೆ ವಾಚಿಕಾಭಿನಯ, ಯಕ್ಷಗಾನ ಅರ್ಥಗಾರಿಕೆಯನ್ನು ಕುರಿತ ಅಧ್ಯಯನ ಗ್ರಂಥ ವಾಚಿಕಾಧ್ಯಯನ ಬರೆದೆ. ರಂಗತಜ್ಞರಾದ ಸಿ.ಜಿ.ಕೆ. ಅವರು ಯಕ್ಷಗಾನದ ವೇಷಭೂಷಣದ ಕುರಿತು ಅಧ್ಯಯನಗಳು ನಡೆದಿಲ್ಲ ಎಂದು ಮಾತಿನ ವೇಳೆಯಲ್ಲೊಮ್ಮೆ ಹೇಳಿದ್ದರು. ಇದನ್ನು ನೆನಪಿಟ್ಟುಕೊಂಡು ನನ್ನ ಆಲೋಚನೆಗಳು ಅತ್ತ ಹರಿದವು. ಯಕ್ಷಗಾನದ ವೇಷಭೂಷಣಗಳು ಹಾಗೂ ಬಣ್ಣಗಾರಿಕೆಯನ್ನು ಕುರಿತು ಮಾಡಿದ ಚಿಂತನೆಯ ಫಲವೇ ಯಕ್ಷಗಾನ ಆಹಾರ್ಯ. ಈ ಅಧ್ಯಯನ ಗ್ರಂಥವನ್ನು ರೂಪಿಸುವಲ್ಲಿ ಯು.ಜಿ.ಸಿ.ಯ ಆರ್ಥಿಕಾನುದಾನ ದೊರೆತುದು ಇದಕ್ಕೆ ಪೂರಕವಾಯಿತು. ಕೃತಿ ಪ್ರಕಟವಾದ ಮೇಲೆ ಕೆರೆಮನೆ ಶಂಭು ಹೆಗಡೆ ಗ್ರಂಥ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೦೯ನೇ ಸಾಲಿನ ಉತ್ತಮ ಸಂಶೋಧನಾ ಕೃತಿ ಎಂಬ ಪುರಸ್ಕಾರವು ದೊರೆಯಿತು. ಇದನ್ನೆಲ್ಲ ಇಲ್ಲಿ ನೆನಪಿಸಿಕೊಳ್ಳಲು ಸಂತೋಷವೆನಿಸುತ್ತದೆ.
ಡಾ. ವಿಜಯಾ ಅವರು ಪದ್ಮಾಂತರಂಗ ಅಭಿನಂದನ ಗ್ರಂಥಕ್ಕಾಗಿ ಅಭಿನಯದ ಕುರಿತು ಲೇಖನ ಬರೆಯಲು ಸೂಚಿಸಿದರು. ಹಾಗಾಗಿ ಬರೆದೆ. ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ಯಕ್ಷಗಾನ ಬಯಲಾಟಕ್ಕೆ ಸಂಬಂಧಪಟ್ಟಂತೆ ಯಾವ ವಿಷಯವನ್ನಾದರೂ ಮಾತನಾಡಿ ಎಂದು ಸಂಘಟಕರು ಸೂಚಿಸಿದ್ದರು. ಆಗ ಉದ್ದೇಶಿಸಿದ ಶೀರ್ಷಿಕೆಯ ಸುತ್ತ ಮಾತನಾಡಿದೆ. ಹಾಗೆ ಮಾತನಾಡಿದ್ದನ್ನು ಧ್ವನಿ ಮುದ್ರಿಸಿ ಕೊಟ್ಟರು. ನಾನೇ ಅದಕ್ಕೆ ಲೇಖನದ ರೂಪ ಕೊಟ್ಟು ಯಕ್ಷಗಾನ ಬಯಲಾಟ: ಪರಿಕಲ್ಪನೆ, ವಿಕಾಸ ಎಂದು ಶೀರ್ಷಿಕೆ ನೀಡಿದೆ. ಹೀಗೆ ವಿಶೇಷ ಉಪನ್ಯಾಸಗಳು ಸಂಘಟಕರ ಅಪೇಕ್ಷೆ ಮೇರೆಗೆ ವಿಚಾರ ಸಂಕಿರಣದಲ್ಲಿ ಮಂಡಿಸಿದ ವಿಷಯಗಳನ್ನು ಲೇಖನ ರೂಪದಲ್ಲಿ ಬರೆದೆ. ಆಯಾ ಸಂದರ್ಭಗಳಲ್ಲಿ ಬೇರೆ ಬೇರೆ ನಿಯತಕಾಲಿಕ, ಸ್ಮರಣ ಸಂಚಿಕೆ, ಪುಸ್ತಕಗಳ ಸಂಪಾದಕರ ಅಪೇಕ್ಷೆ ಮೇರೆಗೆ ಲೇಖನಗಳನ್ನು ಬರೆಯಬೇಕಾಯಿತು. ಹೀಗೆ ಒತ್ತಾಯ, ಅಪೇಕ್ಷೆಗಳ ಮೇರೆಗೆ ಯಕ್ಷಗಾನವನ್ನು ಕುರಿತು ಲೇಖನಗಳು ರೂಪುಗೊಂಡವು. ಇಲ್ಲಿರುವ ಲೇಖನಗಳು ಒಂದಲ್ಲ ಒಂದೆಡೆ ಪ್ರಕಟವಾದವುಗಳೇ ಆಗಿವೆ. ಅವುಗಳಲ್ಲಿ ಕೆಲವೊಂದು ಒಂದಕ್ಕಿಂತ ಹೆಚ್ಚು ಬಾರಿ ಪ್ರಕಟವಾಗಿವೆ. ಅವುಗಳ ಪೂರ್ಣ ವಿವರಗಳನ್ನು ಇಲ್ಲಿ ಕೊಡಲಾಗದಿದ್ದರೂ ಲಭ್ಯ ವಿವರಗಳನ್ನು ಲೇಖನಗಳ ಕೊನೆಗೆ ಕೊಡಲಾಗಿದೆ. ಇಲ್ಲಿ ಆಯ್ದ ೨೩ ಲೇಖನಗಳನ್ನು ವಿಷಯದ ಆಧಾರದಲ್ಲಿ ಯಕ್ಷಗಾನ ಸ್ಥಿತ್ಯಂತರ ಎಂಬ ಶೀರ್ಷಿಕೆಯಲ್ಲಿ ಜೋಡಿಸಲಾಗಿದೆ. ಕೆಲವೊಂದು ಲೇಖನದ ಅಭಿಪ್ರಾಯಗಳು ಇನ್ನೊಂದರಲ್ಲಿ ವಿರೋಧಾಭಾಸವಾಗುವಂತೆ ದಾಖಲಾದದ್ದಿದೆ. ಬರೆಯುತ್ತಾ ಹೋದಂತೆ ಸಿಕ್ಕಿದ ಮಾಹಿತಿಗಳ ಮೇರೆಗೆ ನನ್ನ ಅಭಿಪ್ರಾಯಗಳು ಬದಲಾಗುತ್ತಲೇ ಸಾಗಿವೆ.
ಇಲ್ಲಿನ ಲೇಖನಗಳು ಬೇರೆ ಬೇರೆ ಉದ್ದೇಶಕ್ಕೆ ಹಾಗೂ ಶೀರ್ಷಿಕೆಯನ್ನು ಇತರರು ಸೂಚಿಸಿದ ಕಾರಣಕ್ಕೆ ಬರೆದದ್ದರಿಂದ ಒಂದು ಲೇಖನದ ಕೆಲವೊಂದು ವಿಚಾರಗಳು ಇನ್ನೊಂದು ಲೇಖನದಲ್ಲೂ ಪುನರಾವರ್ತನೆಯಾಗಿವೆ. ಅಂತಹ ಕೆಲವೊಂದು ಭಾಗಗಳನ್ನು ಇಲ್ಲಿ ಕೈ ಬಿಡಲಾಗಿದೆ. ಆದರೆ ಅವೆಲ್ಲ ಬಿಡಿಯಾಗಿ ಸ್ವತಂತ್ರ ಲೇಖನಗಳು ಎಂಬ ಕಾರಣಕ್ಕೆ ಕೆಲವೊಂದನ್ನು ಅನಿವಾರ್ಯವಾಗಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇಲ್ಲಿನ ಲೇಖನಗಳಲ್ಲಿ ವಿಸ್ತರಿಸಿದ ಚಿಂತನೆಗಳು ನಿರ್ದಿಷ್ಟವಾದ ಒಂದು ಅವಧಿಗೆ ಮಾತ್ರ ಸೀಮಿತವಾಗಿವೆ. ಹಾಗೆಂದು ಅವು ಸಮಗ್ರವೇನೂ ಅಲ್ಲ. ಕೇವಲ ಬಿಡಿ ಚಿಂತನೆಗಳು ಮಾತ್ರ. ಇವೇ ಅಂತಿಮವೇನಲ್ಲ. ಹಾಗಾಗಿ ಇಲ್ಲಿನ ವಿಚಾರಗಳಿಗೆ ಭಿನ್ನಾಭಿಪ್ರಾಯಗಳು, ಹೊಸ ಆಲೋಚನೆಗಳನ್ನು ಸೇರಿಸಿ ವಿಸ್ತರಿಸಲು ಅವಕಾಶವಂತೂ ಮುಕ್ತವಾಗಿದೆ.
ಯಕ್ಷಗಾನ ಪ್ರದರ್ಶನವಿದೆಯೆಂದರೆ ಎಲ್ಲೆಂದರಲ್ಲಿಗೆ ಹೋಗುವುದಕ್ಕೆ ಸದಾ ಸಿದ್ಧನಿರುವ ಗೆಳೆಯ ಯತೀಶಕುಮಾರ್ ಪರಂಗೋಡು. ಅವನೂ ಯಕ್ಷಗಾನದ ಸಹೃದಯ ಪ್ರೇಕ್ಷಕ. ಅವನ ಸಾರಥ್ಯದಲ್ಲಿ ಹೀರೋಹೊಂಡಾ ರಥದಲ್ಲಿ ದೂರದೂರಿನ ಯಕ್ಷಗಾನದಲ್ಲಿ ಭಾಗವಹಿಸುವುದು ಸಾಧ್ಯವಾಗುತ್ತಿತ್ತು. ಪರಿಣಾಮವಾಗಿ ಯಕ್ಷಗಾನದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಹಾಗೂ ಬರೆಯಲು ಅವಕಾಶವಾಯಿತು. ಕಲಾಲೋಕದ ಅನೇಕ ಸಹೃದಯ ಕಲಾವಿದರ ಒಡನಾಟವು ಆ ಮೂಲಕ ದೊರೆಯಿತು. ಇದರಿಂದೆಲ್ಲ ಯಕ್ಷಗಾನದ ಜೊತೆಗಿನ ಸಂಬಂಧ ಗಾಢವಾಯಿತು. ಯಕ್ಷಗಾನದಿಂದ ಹಲವನ್ನು ಕಲಿತೆ- ಹಾಗೆಯೇ ಕಲಾವಿದರಿಂದಲೂ. ಇವರೆಲ್ಲರೂ ಇಲ್ಲಿನ ಬರವಣಿಗೆಯ ಹಿಂದಿನ ಸ್ಫೂರ್ತಿಯ ಸೆಲೆಗಳು. ಹಾಗಾಗಿ ಎಲ್ಲರೂ ಹೃದಯಪೂರ್ವಕವಾದ ಕೃತಜ್ಞತೆಗಳಿಗೆ ಅರ್ಹರು.
ಕೃತಿಗೆ ಮುನ್ನುಡಿಯನ್ನು ಬರೆದ ಹಿತೈಷಿ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಈ ಪುಸ್ತಕವನ್ನು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿ ಸುಂದರವಾಗಿ ಪ್ರಕಟಿಸಿದ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ, ಶ್ರೀ ಗಣೇಶ ಯಾಜಿ ಮತ್ತು ಅವರ ಬಳಗಕ್ಕೆ ಕೃತಜ್ಞತೆಗಳು. ಚಿಕ್ಕಂದಿನಲ್ಲಿಯೇ ಯಕ್ಷಗಾನ ಪ್ರೀತಿಗೆ ಕಾರಣರಾದ ಅಮ್ಮ ರಾಜೀವಿ, ಯಕ್ಷಗಾನದ ಆಸಕ್ತಿಯನ್ನು ಬೆಂಬಲಿಸುತ್ತ, ಪ್ರದರ್ಶನದಲ್ಲಿ ಪ್ರೇಕ್ಷಕರಾಗಿ ಭಾಗವಹಿಸಲು ಸದಾ ಸಿದ್ಧವಿರುವ ಮಡದಿ ಶ್ರೀದೇವಿ, ಮಗ ಅಭಿಮಾನ್, ಮಗಳು ನಿಶಿತಾ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ನನ್ನ ಬರವಣಿಗೆಗೆ ಪ್ರೇರಕ ಶಕ್ತಿಗಳಾಗಿದ್ದಾರೆ. ಅವರಿಗೂ ಕೃತಜ್ಞತೆ ಸಲ್ಲಲೇಬೇಕು. ಗೆಳೆಯ ಸಿ.ವೆಂಕಟೇಶ್ ಹೀಗೆ ಇನ್ನೂ ಹೆಸರು ಹೇಳಲು ಅನೇಕರಿದ್ದರೂ ಅವರೆಲ್ಲರನ್ನು ಹೆಸರಿಸಿದರೆ ಪಟ್ಟಿ ಉದ್ದವಾದೀತು ಎಂಬ ಅರಿವಿನಿಂದ ಅವರೆಲ್ಲರಿಗೂ ಪೀಠಿಕೆಯ ಮೂಲಕ ವಂದಿಸುತ್ತೇನೆ.
ಡಾ. ಮೋಹನ ಕುಂಟಾರ್
ಮುನ್ನುಡಿ
೨೦ನೆಯ ಶತಮಾನದ ಉತ್ತರಾರ್ಧವನ್ನು ಯಕ್ಷಗಾನದ ಸುವರ್ಣಯುಗ ಎಂದು ಕರೆಯಬಹುದು. ಯಕ್ಷಗಾನಕ್ಕೆ ವಿದ್ವತ್ ವಲಯದಲ್ಲಿ ಮತ್ತು ಪ್ರೇಕ್ಷಕರ ಮಟ್ಟದಲ್ಲಿ ಸರ್ವ ಮಾನ್ಯತೆ ದೊರೆತ ಕಾಲಘಟ್ಟವದು. ಈ ಸುವರ್ಣಯುಗದ ಆರಂಭವು ಡಾ. ಶಿವರಾಮ ಕಾರಂತರು ಮಾಡಿದ ಪ್ರಯತ್ನಗಳಿಂದ ಆರಂಭವಾಯಿತು. ಅಸಾಮಾನ್ಯ ಪ್ರತಿಭಾವಂತರಾಗಿದ್ದ ಅವರು ೧೯೫೦ರ ದಶಕದಲ್ಲಿಯೇ ದೆಹಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಯಕ್ಷಗಾನ ಕಮ್ಮಟ ನಡೆಸಿ, ಯಕ್ಷಗಾನಕ್ಕೆ ಮೊದಲ ಬಾರಿಗೆ ರಾಷ್ಟ್ರೀಯ ಆಯಾಮವನ್ನೂ ಅಂತಾರಾಷ್ಟ್ರೀಯ ಮುನ್ನೋಟವನ್ನೂ ತಂದುಕೊಟ್ಟರು. ಮುಂದೆ ಅವರೇ ಯಕ್ಷಗಾನವನ್ನು ಕಡಲಾಚೆಯ ಪ್ರೇಕ್ಷಕರಿಗೆ ಪರಿಚಯಿಸಿದರು. ೧೦೭೦ರ ದಶಕದಲ್ಲಿ ಪುರಾಣ ಪ್ರಸಂಗಗಳ ಪುನರಾವರ್ತಿತ ಪ್ರಯೋಗಗಳಿಂದ ಯಕ್ಷಗಾನವು ಒಂದು ಬಗೆಯ ಜಡಾವಸ್ಥೆಗೆ ತಲುಪುತ್ತಿದ್ದಾಗ ಶ್ರೀಗಳಾದ ಅಮೃತ ಸೋಮೇಶ್ವರ ಅವರು ಹಳೆಯ ಪುರಾಣ ಕತೆಗಳಿಗೆ ಹೊಸ ಅರ್ಥಕೊಡುವ ಪ್ರಸಂಗಗಳನ್ನು ಬರೆದು ಅಭಿನವ ಪಾರ್ತಿಸುಬ್ಬ ಎಂಬ ಪ್ರಶಂಸೆಗೆ ಸಹಜವಾಗಿ ಪಾತ್ರರಾದರು. ಅವರಿವರಿಂದ ವೀಳ್ಯ ಪಡೆದು ಹೇಗೋ ಹೇಗೋ ಪ್ರದರ್ಶನ ನೀಡುತ್ತಿದ್ದ ಯಕ್ಷಗಾನ ಮೇಳಗಳು ಟೆಂಟ್ ಹಾಕಿ, ಟಿಕೆಟ್ ಮೂಲಕ ಹಣ ಸಂಗ್ರಹಿಸಿ ತಮಗೆ ತಾವೇ ಒಂದು ಬಗೆಯ ವೃತ್ತಿಪರತೆಯನ್ನು ತಂದುಕೊಂಡದ್ದು ಕೂಡಾ ಈ ಕಾಲದಲ್ಲಿಯೇ. ಶ್ರೀಧರ್ಮಸ್ಥಳ ಮೇಳ, ಸುರತ್ಕಲ್ ಮೇಳ, ಕರ್ನಾಟಕ ಮೇಳ, ಸಾಲಿಗ್ರಾಮ ಮೇಳ, ಇಡಗುಂಜಿ ಮೇಳ, ಮತ್ತಿತರ ವೃತ್ತಿಪರ ಮೇಳಗಳು ತಿರುಗಾಟ ನಡೆಸಿ, ಯಕ್ಷಗಾನ ಕಲೆಯನ್ನು ಪ್ರಜ್ವಲಗೊಳಿಸಿದವು. ಸರ್ವಶ್ರೀಗಳಾದ ಶೇಣಿ ಗೋಪಾಲಕೃಷ್ಣ ಭಟ್ಟ, ಮಲ್ಪೆ ಶಂಕರನಾರಾಯಣ ಸಾಮಗ, ರಾಮದಾಸ ಸಾಮಗ, ಕೋಳ್ಯೂರು ರಾಮಚಂದ್ರರಾವ್, ಕುಂಬಳೆ ಸುಂದರರಾವ್, ಕೆ.ಗೋವಿಂದ ಭಟ್, ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಮಂಟಪ ಪ್ರಭಾಕರ ಉಪಾಧ್ಯ ಮೊದಲಾದ ಮಹಾನ್ ಪ್ರತಿಭೆಯ ಕಲಾವಿದರು ಯಕ್ಷಗಾನ ಕಲೆಯನ್ನು ಉತ್ತುಂಗಕ್ಕೆ ಏರಿಸಿದರು. ಶ್ರೀ ಪೆರ್ಲ ಕೃಷ್ಣ ಭಟ್, ಎಂ.ಪ್ರಭಾಕರ ಜೋಷಿ, ಉಡುವೆಕೋಡಿ ಸುಬ್ಬಪ್ಪಯ್ಯ, ಮೂಡಂಬೈಲು ಗೋಪಾಲಕೃಷ್ಣ ಭಟ್, ಜಬ್ಬಾರ್ ಸಮೋ ಮೊದಲಾದ ಅರ್ಥಧಾರಿಗಳು ತಾಳಮದ್ದಳೆ ಕೂಟಗಳಲ್ಲಿ ಇನ್ನಿಲ್ಲದಂತೆ ವಿಜೃಂಭಿಸಿದರು. ಶ್ರೀ ದಾಮೋದರ ಮಂಡೆಚ್ಚ, ಕಡತೋಕ ಮಂಜುನಾಥ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ ಗಣಪತಿ ಭಟ್, ನಾರಣಪ್ಪ ಉಪ್ಪೂರ, ಗುಂಡ್ಮಿಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರ, ಬಲಿಪ ನಾರಾಯಣ ಭಾಗವತ ಮೊದಲಾದ ಮಹನೀಯರು ಯಕ್ಷಗಾನ ಭಾಗವತಿಕೆಯ ಆಳ-ವಿಸ್ತಾರಗಳನ್ನು ಹೆಚ್ಚಿಸಿದವರು. ನಿಡ್ಲೆ ನರಸಿಂಹಭಟ್, ದಿವಾಣ ಭೀಮಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ, ಮೊದಲಾದ ಹಿಮ್ಮೇಳದ ಕಲಾವಿದರ ಕೈಚಳಕ ಮೆರೆದದ್ದು ಕೂಡಾ ಈ ಕಾಲದಲ್ಲಿ. ಬಣ್ಣದ ಮಹಾಲಿಂಗ, ಕುಂಬಳೆ ಕುಟ್ಯಪ್ಪು ಮೊದಲಾದವರ ಅದ್ಭುತ ಬಣ್ಣಗಾರಿಕೆಯನ್ನು ನಾವು ಈ ಕಾಲದಲ್ಲಿ ಕಂಡಿದ್ದೇವೆ.ವಿಟ್ಲ ಗೋಪಾಲಕೃಷ್ಣ ಜೋಷಿ, ಮಿಜಾರು ಅಣ್ಣಪ್ಪ, ನಯನ ಕುಮಾರ, ಮೊದಲಾದ ಹಾಸ್ಯಗಾರರು ಲಕ್ಷಾಂತರ ಪ್ರೇಕ್ಷಕರನ್ನು ನಗೆಗಡಲಲ್ಲಿ ಪ್ರತಿನಿತ್ಯ ತೇಲಿಸಿದರು. ಮಂಗಳೂರಿನ ನೆಹರೂ ಮೈದಾನದಲ್ಲಿ ನಳದಮಯಂತಿ ಯಕ್ಷಗಾನವು ವರ್ಷಗಟ್ಲೆ ಪ್ರದರ್ಶಿತವಾಯಿತು. ಅಲ್ಲಲ್ಲಿ ನಡೆಯುತ್ತಿದ್ದ ಜೋಡಾಟಗಳಿಗೆ ಸಾವಿರಾರು ಪ್ರೇಕ್ಷಕರು ಸೇರುತ್ತಿದ್ದರು. ಈ ನಡುವೆ ೮೦ರ ದಶಕದಲ್ಲಿ ಕಾಣಿಸಿಕೊಂಡ ತುಳು ಯಕ್ಷಗಾನಗಳು ಮತ್ತೊಮ್ಮೆ ಯಕ್ಷಗಾನ ರಂಗಭೂಮಿಗೆ ಕಾಯಕಲ್ಪ ನೀಡಿದವು. ಇಂಥ ನೂರಾರು ಅದ್ಭುತ ಘಟನೆಗಳು ರಂಗಭೂಮಿಯಲ್ಲಿ ಅಹರ್ನಿಶಿ ಘಟಿಸುತ್ತಿದ್ದಾಗ ಆ ಕಲೆಯ ಬಗೆಗೆ ಒಳ್ಳೆಯ ಸಂಶೋಧನೆಯಾಗಲೀ ವಿಮರ್ಶೆಯಾಗಲೀ ಬೆಳೆಯಲಿಲ್ಲ. ರಂಗಭೂಮಿಯ ಅತ್ಯದ್ಭುತ ಸೃಜನ ಶಕ್ತಿಯ ಮುಂದೆ ಬರೆಹಗಳು ಪೇಲವವಾದುವು ಅಥವಾ ಯಕ್ಷಗಾನದ ರಂಗಭೂಮಿಯ ಅನಂತ ಸಾಧ್ಯತೆಗಳನ್ನು ಹಿಡಿದಿಡುವಲ್ಲಿ ಅಕ್ಷರ ಮಾಧ್ಯಮ ವಿಫಲವಾಯಿತು.
ಆದರೆ ೨೧ನೇ ಶತಮಾನದಲ್ಲಿ ಕತೆಯೇ ಬೇರೆಯಾಯಿತು. ಯಕ್ಷಗಾನ ರಂಗಭೂಮಿಯ ಉಜ್ವಲ ಅಧ್ಯಾಯವೊಂದು ಕೊನೆಗೊಂಡ ಅನುಭವವಾಗುತ್ತಿದೆ. ಯಕ್ಷಗಾನ ರಂಗಭೂಮಿ ಇದೀಗ ಬೇರೆಯೇ ಹಾದಿ ಹಿಡಿಯುತ್ತಿದೆ. ಮೇಳಗಳು ಇದ್ದರೂ ಅವು ಇಡೀ ರಾತ್ರಿ ಆಟಗಳನ್ನಾಡುತ್ತಿಲ್ಲ. ಟೆಂಟ್ ಮೇಳಗಳು ಮಾಯವಾಗಿಬಿಟ್ಟವು. ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿದೆ. ಹಾಸ್ಯಗಾರರಿಗಿದ್ದ ಸ್ವಾತಂತ್ರ್ಯ ಮಾಯವಾಗಿದೆ. ಹೊಸ ಪ್ರಸಂಗಗಳನ್ನು ಬರೆಯುವವರಿಲ್ಲ. ಜಾಗತೀಕರಣದ ಹೊಡೆತಕ್ಕೆ ಸಿಕ್ಕ ನಮ್ಮ ಸಮಾಜವು ಪಾರಂಪರಿಕ ಕಲೆಗಳತ್ತ ಮುಖಮಾಡುತ್ತಿಲ್ಲ. ಯಕ್ಷಗಾನದ ಈ ಮಹಾನ್ ಪರಿವರ್ತನೆಯ ಕಾಲದಲ್ಲಿ ಅದರ ಹಿಂದಿನ ಅಥವಾ ಕಳೆದು ಹೋದ ಉಜ್ವಲ ಯುಗವೊಂದನ್ನು ಭಾಷೆಯಲ್ಲಿ ಹಿಡಿದಿಡುವ ಕೆಲಸ ಆಗಬೇಕಾದ್ದು ಇಂದಿನ ಅಗತ್ಯಗಳಲ್ಲಿ ಒಂದು. ನನ್ನ ನಿಡುಗಾಲದ ತರುಣ ಸ್ನೇಹಿತರಾದ ಡಾ. ಮೋಹನ ಕುಂಟಾರ್ ಅವರು ಇಂಥ ಅಗತ್ಯವೊಂದನ್ನು ಸಮರ್ಪಕವಾಗಿ ಈಡೇರಿಸುತ್ತಿರುವುದು ವೈಯಕ್ತಿಕವಾಗಿ ನನಗೆ ತುಂಬಾ ಸಂತೋಷ ನೀಡುವ ವಿಚಾರವಾಗಿದೆ. ಬಿಡಿಬಿಡಿಯಾಗಿ ಮಂಡನೆಯಾದ ಅವರ ಚಿಂತನೆಗಳು ಈ ಪುಸ್ತಕದಲ್ಲಿ ಒಂದೆಡೆ ಸೇರಿರುವುದು ಯಕ್ಷಗಾನ ಪ್ರಿಯರಿಗೆ ಬಹುವಾಗಿ ಸಹಕರಿಸಲಿದೆ. ಅನುಭವ, ಅಧ್ಯಯನ, ಕ್ಷೇತ್ರಕಾರ್ಯ ಮತ್ತು ವಿಚಿಕಿತ್ಸಕ ಒಳನೋಟಗಳ ಕುಲುಮೆಯಲ್ಲಿ ಸಿದ್ಧವಾಗಿರುವ ಈ ಕೃತಿಯು ಯಕ್ಷಗಾನದಂಥ ಕಲೆಯೊಂದರ ಸಂಕೀರ್ಣತೆ ಮತ್ತು ವಿಭಿನ್ನ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಒಂದು ಸಮರ್ಥ ಕೈಪಿಡಿ.
ಪ್ರಸ್ತುತ ಕೃತಿಯಲ್ಲಿರುವ ಲೇಖನಗಳು ಯಕ್ಷಗಾನದ ಪ್ರಮುಖ ಅಂಗಗಳ ಬಗೆಗೆ ವಿವರಣಾತ್ಮಕವಾದ ಮಾಹಿತಿಗಳನ್ನು ಹೆಚ್ಚು ಮುತುವರ್ಜಿಯಿಂದ ನೀಡುತ್ತವೆ. ಯಕ್ಷಗಾನದ ಮಾತುಗಾರಿಕೆ ಮತ್ತು ವೇಷಭೂಷಣಗಳ ಬಗೆಗೆ ಡಾ. ಕುಂಟಾರ್ ಅವರು ಈಗಾಗಲೇ ಮಹತ್ವದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆ ಪುಸ್ತಕಗಳಲ್ಲಿನ ಚರ್ಚೆಗಳ ಮುಂದುವರಿಕೆಯಾಗಿಯೂ ಪ್ರಸ್ತುತ ಕೃತಿಯಲ್ಲಿ ಕೆಲವು ಲೇಖನಗಳು ಸೇರಿಕೊಂಡಿವೆ. ಯಕ್ಷಗಾನ ಪ್ರಸಂಗಸಾಹಿತ್ಯ ಆಕರ ವಿಕೇಂದ್ರೀಕರಣ, ಕಲೆಗಳ ಹುಟ್ಟು ಮತ್ತು ಸಮಕಾಲೀನ ಪ್ರಸ್ತುತತೆ, ಅಭಿನಯ, ಯPಗಾನ ಬಯಲಾಟ: ಪರಿಕಲ್ಪನೆ, ವಿಕಾಸ ಮತ್ತು ಸಮಕಾಲೀನ ಪ್ರಸ್ತುತತೆ, ನಾಗಾರಾಧನೆಯಿಂದ ಯPಗಾನದೆಡೆಗೆ ಧಾರ್ಮಿಕ ಸಂಚಲನ, ತೆಂಕುತಿಟ್ಟು ಯಕ್ಷಗಾನ: ಸಾಂಸ್ಕೃತಿಕ ಹಿನ್ನೆಲೆ, ಯPಗಾನದ ಆಹಾರ್ಯ, ಯPಗಾನದಲ್ಲಿ ಅರ್ಥಗಾರಿಕೆ: ಭಾಷಿಕ ನೆಲೆಗಳು, ಯPಗಾನದಲ್ಲಿ ಅರ್ಥ ನಿರ್ಮಾಣ ಪ್ರಕ್ರಿಯೆ, ಯPಗಾನದಲ್ಲಿ ಅರ್ಥಗಾರಿಕೆ: ಪ್ರಯೋಗ ಮತ್ತು ಸ್ವರೂಪ, ಯPಗಾನ ಅರ್ಥಗಾರಿಕೆ ಮತ್ತು ಆಧುನಿಕತೆ, ವಾಚಿಕ ಪ್ರಕ್ರಿಯೆ ಮತ್ತು ಸಾಂಸ್ಕೃತಿಕ ಅನನ್ಯತೆ, ಭಾಷೆ ಮತ್ತು ಸಾಮಾಜಿಕ ಪ್ರಜ್ಞೆ, ಯPಗಾನದ ಇತ್ತೀಚಿನ ಒಲವುಗಳು ಇತ್ಯಾದಿ ಲೇಖನಗಳು ಯಕ್ಷಗಾನದ ಬಗೆಗಣ ನಮ್ಮ ತಿಳುವಳಿಕೆಯನ್ನು ಗಮನಾರ್ಹವಾಗಿ ವಿಸ್ತರಿಸುತ್ತವೆ. ಯಕ್ಷಗಾನ ರಂಗಭೂಮಿಯ ಹುಟ್ಟು ಮತ್ತು ವಿಕಾಸ ಅದರಲ್ಲಾಗುತ್ತಿರುವ ಬದಲಾವಣೆಗಳು, ಅದರಲ್ಲಿನ ಪ್ರಭೇದಗಳು, ವೇಷಭೂಷಣಗಳು, ಮಾತುಗಾರಿಕೆ ಮತ್ತಿತರ ವಿಷಯಗಳು ಕುರಿತು ಈ ವರೆಗೆ ನಡೆದ ಚರ್ಚೆಗಳಿಗಿಂತ ಭಿನ್ನವಾದ ಚರ್ಚೆಗಳನ್ನು ಡಾ. ಕುಂಟಾರ್ ಅವರು ನಡೆಸಿದ್ದಾರೆ ಎಂಬುದರಿಂದಲೂ ಈ ಕೃತಿ ಮುಖ್ಯವಾಗಿದೆ.
ಈ ಕೃತಿಯಲ್ಲಿ ಡಾ. ಕುಂಟಾರ್ ಅವರು ಎತ್ತಿರುವ ಕೆಲವು ವಿಷಯಗಳ ಬಗೆಗೆ ಮತ್ತಷ್ಟು ಚರ್ಚೆ ಸಾಧ್ಯ. ಹಾಗೆ ನೋಡಿದರೆ ಯಕ್ಷಗಾನ ತಾಳಮದ್ದಳೆಗಳಲ್ಲಿ ಹೇಗೆ ಕೊನೆಯಿಲ್ಲದ ಚರ್ಚೆಗಳು ನಡೆಯುತ್ತವೆಯೋ ಯಕ್ಷಗಾನದ ಕೆಲವು ವಿಚಾರಗಳ ಬಗೆಗೂ ಅಂತ್ಯವಿಲ್ಲದ ಚರ್ಚೆಗಳು ನಡೆಯುತ್ತಿವೆ. ಉದಾಹರಣೆಗೆ ಯಕ್ಷಗಾನದ ಉಗಮದ ಚರ್ಚೆಯನ್ನು ಗಮನಿಸಬಹುದು. ಡಾ. ಶಿವರಾಮ ಕಾರಂತರು ಯಕ್ಷಗಾನದ ಉಗಮವನ್ನು ನಾಗಾರಾಧನೆಯಲ್ಲಿ ಗುರುತಿಸಿದರೆ ಡಾ. ಕೆ.ಚಿನ್ನಪ್ಪ ಗೌಡರು ಅದನ್ನು ಭೂತಾರಾಧನೆಯಲ್ಲಿ ಗುರುತಿಸಿದರು. ಡಾ. ಕುಂಟಾರ್ ಅವರು ದಕ್ಷಿಣ ಕನ್ನಡದ ಭೂತಕೋಲ ಹಾಗೂ ಕೇರಳದ ತೆಯ್ಯಂ ಕೂಡಾ ನಾಗಾರಾಧನೆಯುಲ್ಲಿ ವಿಸ್ತೃತಗೊಂಡು ಬೆಳೆದುಬಂದ ಆರಾಧನಾ ಸಂಪ್ರದಾಯವಾಗಿದೆ ಎಂದು ಭಾವಿಸುತ್ತಾರೆ. ಆದರೆ ಈ ಮಾತುಗಳು ಒಟ್ಟಾರೆಯಾಗಿ ದ್ರಾವಿಡ ರಂಗಭೂಮಿಗೆ ಅನ್ವಯವಾಗುವುದೇ ಎಂಬ ಸಂಶಯ ನನಗಿದೆ. ಏಕೆಂದರೆ ಯಕ್ಷಗಾನ ಮತ್ತು ತಮಿಳುನಾಡಿನ ತೆರುಕೂತ್ತುಗಳಲ್ಲಿ ಅನೇಕ ಸಮಾನ ಅಂಶಗಳಿವೆ. ಹಾಗಾಗಿ ಯಕ್ಷಗಾನದ ಉಗಮದ ಬಗೆಗಣ ಮಾತುಗಳನ್ನು ಸ್ವಲ್ಪ ವಿಸ್ತರಿಸಿ ನೋಡಿದಾಗ ಅವು ಇತರ ಕಲೆಗಳಿಗೆ ಅನ್ವಯವಾಗುವುದೇ ಎಂದೂ ಪರಿಶೀಲಿಸಿ ನೋಡಬೇಕಾಗುತ್ತದೆ. ಈ ತೌಲನಿಕ ಪರಿಶೀಲನೆಯು ಯಕ್ಷಗಾನದ ಅನನ್ಯತೆಯನ್ನು ಅಲ್ಲಗಳೆಯುವುದಿಲ್ಲ. ಆದರೆ ಇತರ ದ್ರಾವಿಡ ಕಲೆಗಳೊಡನೆ ಯಕ್ಷಗಾನವನ್ನು ಹೋಲಿಸಿ ನೋಡುವುದರಿಂದ ನಮಗಿಂದು ಯಕ್ಷಗಾನದ ಬಗೆಗೆ ಹೊಸ ಮಾತುಗಳನ್ನು ಹೇಳಲು ಸಾಧ್ಯವಾದೀತು. ಅವರ ಲೇಖನಗಳು ಆ ಕಡೆಗೆ ಹೋಗಲು ನಮ್ಮನ್ನು ಪ್ರಚೋದಿಸುತ್ತವೆ. ಅದೇನೇ ಇರಲಿ, ಡಾ. ಕುಂಟಾರ್ ಅವರಿಗೆ ಮಲಯಾಳಂ ಭಾಷೆ ಚೆನ್ನಾಗಿ ಗೊತ್ತಿರುವುದರಿಂದ ಯಕ್ಷಗಾನದ ಮೂಲದ ಕುರಿತಾದ ಅವರ ಅಧ್ಯಯನಕ್ಕೆ ಹೊಸ ಆಯಾಮವಂತೂ ದೊರಕಿರುವುದು ಸತ್ಯ.
ಯಕ್ಷಗಾನದ ವಿಕಸನದ ಹಂತದಲ್ಲಿ ಅದು ಬೇರೆ ಬೇರೆ ಧರ್ಮಗಳ ಪ್ರಭಾವಕ್ಕೆ ಒಳಗಾಗಿರುವ ಬಗ್ಗೆ ಈ ಕೃತಿಯಲ್ಲಿ ಉಪಯುಕ್ತ ಮಾಹಿತಿಗಳಿವೆ. ಈ ಮಾಹಿತಿಗಳನ್ನು ನೀಡುವಾಗ ಡಾ. ಕುಂಟಾರ್ ಅವರು ಯಕ್ಷಗಾನವು ಒಂದು ಕಲೆಯಾಗಿ ಹೇಗೆ ಧಾರ್ಮಿಕ ಪ್ರಭಾವಗಳನ್ನು ಮೀರಿ ಬೆಳೆಯಿತು ಎಂಬ ಅಂಶವನ್ನು ಅತ್ಯಂತ ಸಮರ್ಥವಾಗಿ ಮತ್ತು ಮಾರ್ಮಿಕವಾಗಿ ಮನಗಾಣಿಸಿದ್ದಾರೆ. ಕಲೆಯ ಬಗೆಗಿನ ಈ ಎಚ್ಚರವು ಅವರ ಲೇಖನಗಳಿಗೆ ಒಂದು ಬಗೆಯ ವಿಶಿಷ್ಟಶಕ್ತಿಯನ್ನು ತಂದುಕೊಟ್ಟಿದೆ. ಯಕ್ಷಗಾನದ ಅರ್ಥಗಾರಿಕೆ ಮತ್ತು ವೇಷಭೂಷಣಗಳ ಬಗೆಗೆ ಅವರು ನೀಡಿರುವ ಮಾಹಿತಿಗಳು ಬಹಳ ಅಧಿಕೃತವಾಗಿರುವಂಥವು. ಬಹುತೇಕವಾಗಿ ತಮ್ಮ ಅನುಭವಗಳನ್ನು ಆಧರಿಸಿ ಅವರು ವಿಶ್ಲೇಷಣೆಯನ್ನು ನಡೆಸುವುದರಿಂದಾಗಿ ಈ ಕುರಿತಾದ ಅವರ ಲೇಖನಗಳು ಚೇತೋಹಾರಿಯಾಗಿವೆ. ಮಾತ್ರವಲ್ಲ ಯಕ್ಷಗಾನದ ಬಗೆಗಣ ನಮ್ಮ ತಿಳುವಳಿಕೆಗಳನ್ನು ವಿಸ್ತರಿಸಬಲ್ಲಂಥವುಗಳಾಗಿವೆ. ಯಕ್ಷಗಾನದಲ್ಲಿ ಹಾಸ್ಯ ಸನ್ನಿವೇಶಗಳು ಲೇಖನ ಇವಕ್ಕೆ ಒಳ್ಳೆಯ ಉದಾಹರಣೆಯಾಗಿದೆ.
ಡಾ. ಮೋಹನ ಕುಂಟಾರ್ ಅವರ ಯಕ್ಷಗಾನ ಪ್ರೇಮ ಅನುಪಮವಾದುದು. ಅವರು ಸ್ವತಃ ಕಲಾವಿದರು. ರಂಗದಲ್ಲಿ ವೇಷ ಕಟ್ಟಿಕುಣಿಯುವುದೆಂದರೆ ಅವರಿಗೆ ಪ್ರಿಯವಾದ ವಿಚಾರ. ಅವಕಾಶ ಸಿಕ್ಕಿದಾಗಲೆಲ್ಲ ಅವರು ತಾಳಮದ್ದಳೆಗಳಲ್ಲೂ ಅರ್ಥ ಹೇಳುತ್ತಾರೆ. ಕಲಾವಿದರನ್ನೆಲ್ಲ ಸೇರಿಸಿ ಯಕ್ಷಗಾನ ಪ್ರದರ್ಶನಗಳನ್ನೇರ್ಪಡಿಸುವ ಸಂಘಟನೆಯ ಕೆಲಸಗಳನ್ನು ಕೂಡಾ ಅವರು ಸಂತೋಷದಿಂದ ಮಾಡುತ್ತಾ ಬಂದಿದ್ದಾರೆ. ಈ ಕಾರಣಗಳಿಂದಾಗಿ ಅವರಿಗೆ ಯಕ್ಷಗಾನದ ಒಳ-ಹೊರಗುಗಳ ಬಗೆಗೆ ಚೆನ್ನಾಗಿ ತಿಳಿದಿದೆ. ಈ ಸ್ವಾನುಭವದ ಚೌಕಟ್ಟಿನಲ್ಲಿ ಅವರು ಯಕ್ಷಗಾನದ ವಾಚಿಕಾಭಿನಯ ಮತ್ತು ಆಹಾರ್ಯಗಳ ಬಗೆಗೆ ಅಧಿಕೃತ ಅನ್ನಬಹುದಾದ ಮಾತುಗಳನ್ನು ಈ ಪುಸ್ತಕದಲ್ಲಿ ಹೇಳಿದ್ದಾರೆ. ಯಕ್ಷಗಾನವು ಪರಿವರ್ತನೆಯ ಘಟ್ಟದಲ್ಲಿರುವಾಗ ಅದರ ಸಾಂಪ್ರದಾಯಕ ಸ್ವರೂಪವನ್ನು ಅಕ್ಷರ ಮಾಧ್ಯಮದಲ್ಲಿ ದಾಖಲಿಸುವ ಡಾ. ಕುಂಟಾರ್ ಅವರ ಪ್ರಯತ್ನವನ್ನು ನಾನು ಎಲ್ಲಾ ಯಕ್ಷಗಾನ ಪ್ರೇಮಿಗಳ ಪರವಾಗಿ ಅಭಿನಂದಿಸುತ್ತೇನೆ.
ಡಾ. ಪುರುಷೋತ್ತಮ ಬಿಳಿಮಲೆ
ಪರಿವಿಡಿ
ಸವಿನುಡಿ / ೭
ಮುನ್ನುಡಿ / ೧೩
೧. ಕಲೆಗಳ ಹುಟ್ಟು ಮತ್ತು ಸಮಕಾಲೀನ ಪ್ರಸ್ತುತತೆ / ೧
೨. ಅಭಿನಯ / ೮
೩. ಯಕ್ಷಗಾನ ಬಯಲಾಟ ಪರಿಕಲ್ಪನೆ, ವಿಕಾಸ ಮತ್ತು ಸಮಕಾಲೀನ ಪ್ರಸ್ತುತತೆ / ೧೭
೪. ನಾಗಾರಾಧನೆಯಿಂದ ಯPಗಾನದೆಡೆಗೆ ಧಾರ್ಮಿಕ ಸಂಚಲನ / ೨೬
೫. ತೆಂಕುತಿಟ್ಟು ಯಕ್ಷಗಾನ: ಸಾಂಸ್ಕೃತಿಕ ಹಿನ್ನೆಲೆ / ೪೫
೬. ಯಕ್ಷಗಾನ ಸ್ಥಿತ್ಯಂತರಗಳು / ೫೬
೭. ರಂಗಭೂಮಿ ಪರಿಕಲ್ಪನೆಯಲ್ಲಿ ಯPಗಾನ / ೯೪
೮. ಕರ್ನಾಟಕದ ಪಾರಂಪರಿಕ ರಂಗಭೂಮಿ ಮತ್ತು ಆಧುನಿಕತೆ / ೯೮
೯. ಯಕ್ಷಗಾನದ ಆಹಾರ್ಯ / ೧೧೧
೧೦. ಯಕ್ಷಗಾನ: ಪರಂಪರೆ ಮತ್ತು ಸಮಕಾಲೀನತೆ / ೧೨೧
೧೧. ಯಕ್ಷಗಾನದಲ್ಲಿ ಅರ್ಥಗಾರಿಕೆ: ಭಾಷಿಕ ನೆಲೆಗಳು / ೧೨೬
೧೨. ಯಕ್ಷಗಾನದಲ್ಲಿ ಅರ್ಥ ನಿರ್ಮಾಣ ಪ್ರಕ್ರಿಯೆ / ೧೩೪
೧೩. ಯಕ್ಷಗಾನದಲ್ಲಿ ಅರ್ಥಗಾರಿಕೆ: ಪ್ರಯೋಗ ಮತ್ತು ಸ್ವರೂಪ / ೧೫೪
೧೪. ಯಕ್ಷಗಾನ, ಅರ್ಥಗಾರಿಕೆ ಮತ್ತು ಆಧುನಿಕತೆ / ೧೬೧
೧೫. ಯಕ್ಷಗಾನದ ಅರ್ಥಗಾರಿಕೆ ಮತ್ತು ಐತಿಹಾಸಿಕ ಪ್ರಸಂಗಗಳು / ೧೬೮
೧೬. ಯಕ್ಷಗಾನದಲ್ಲಿ ಹಾಸ್ಯ ಸನ್ನಿವೇಶಗಳು / ೧೮೧
೧೭. ವಾಚಿಕ ಪ್ರಕ್ರಿಯೆ ಮತ್ತು ಸಾಂಸ್ಕೃತಿಕ ಅನನ್ಯತೆ / ೧೯೭
೧೮. ಭಾಷೆ ಮತ್ತು ಸಾಮಾಜಿಕ ಪ್ರಜ್ಞೆ / ೨೦೫
೧೯. ಪ್ರಯೋಗ ಮತ್ತು ಪ್ರದರ್ಶನ / ೨೧೪
೨೦. ಯಕ್ಷಗಾನದ ಇತ್ತೀಚಿನ ಒಲವುಗಳು / ೨೧೯
೨೧. ಅಪರಿಚಿತ ವಲಯದಲ್ಲಿ ಸರ್ವಜನ ಮಾನ್ಯ ಕಲೆ ಯPಗಾನ / ೨೩೧
೨೨. ಯಕ್ಷಗಾನ ದೃಷ್ಟಿ-ಸೃಷ್ಟಿ / ೨೩೬
೨೩. ಯಕ್ಷಗಾನ ಪ್ರಸಂಗಸಾಹಿತ್ಯ ಆಕರ ವಿಕೇಂದ್ರೀಕರಣ / ೨೪೨
Reviews
There are no reviews yet.