ಸವಿನುಡಿ
ಹೊಸಪೇಟೆಯ ಯಾಜಿ ಪ್ರಕಾಶನವು ಸೀಮಾತೀತ ಸಾಹಿತ್ಯದ ಪರಿಕಲ್ಪನೆ ಯನ್ನಿಟ್ಟುಕೊಂಡು ಪ್ರಾರಂಭವಾದುದು. ದೇಶ-ಕಾಲ-ಮತಗಳಾಚೆ ನಿಂತು ಸತ್ವಯುತ ಹಾಗೂ ಸಾರ್ವಕಾಲಿಕವಾದುದನ್ನು ಕುರಿತು ಸಾಹಿತ್ಯ ಸೃಷ್ಟಿಯಾಗ ಬೇಕು ಎನ್ನುವುದು ನಮ್ಮ ಪ್ರಕಾಶನದ ಕಾಳಜಿ. ಇಲ್ಲಿ ಯಾವಾಗಲೂ ಆದ್ಯತೆ ಇರುವುದು ಆಲೋಚನೆಗೆ. ಇಂಥ ಗುರಿಯನ್ನಿಟ್ಟುಕೊಂಡು ಪ್ರಾರಂಭವಾದ ಪ್ರಕಾಶನ ನಡೆದುಬಂದ ದಾರಿಯೇನೂ ದೀರ್ಘವಾದುದಲ್ಲ. ಆದರೆ ಇರುವಷ್ಟೇ ಅವಧಿಯಲ್ಲಿ ಇಟ್ಟ ಒಂದೊಂದು ಹೆಜ್ಜೆಯೂ ದಿಟ್ಟ ಹಾಗು ದಾಖಲಾರ್ಹ.
2012ರ ಡಿಸೆಂಬರ್ ನಲ್ಲಿ ಆರಂಭವಾದ ಯಾಜಿ ಪ್ರಕಾಶನಕ್ಕೆ ಹದಿಮೂರು ವರ್ಷಗಳೇ ತುಂಬಿತು ಎನ್ನುವುದು ನಿಜವಾಗಿಯೂ ನಮಗೆ ಸಂತೋಷದ ವಿಷಯ. ಈ ಅವಧಿಯಲ್ಲಿ ವಿಷಯ ವೈವಿಧ್ಯಗಳ 135ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟ ಮಾಡುವುದು ಸಾಧ್ಯವಾಗಿದೆ. ಅವುಗಳಲ್ಲಿ ಅನೇಕ ಕೃತಿಗಳು ಒಂದಕ್ಕಿಂತ ಹೆಚ್ಚು ಆವೃತ್ತಿಯನ್ನು ಕಂಡಿವೆ. ಪುಸ್ತಕ ಪ್ರಕಟಣೆಯ ಈ ಹೊಣೆಗಾರಿಕೆಯನ್ನು ಮೇಲ್ನೋಟಕ್ಕೆ ಯಾಜಿ ಪ್ರಕಾಶನವೇ ವಹಿಸಿಕೊಂಡಿರಬಹುದು. ಆದರೆ ಅದರ ಹಿಂದೆ ದುಡಿಯುವ ಅನೇಕರ ಶ್ರಮವಿದೆ ಎಂಬುದನ್ನು ಎಂದೆಂದಿಗೂ ಮರೆಯುವಂತೆಯೇ ಇಲ್ಲ. ಪುಸ್ತಕ ಬರೆದುಕೊಟ್ಟ ಲೇಖಕರು, ಮುಖಪುಟ ರಚಿಸಿದ ಕಲಾವಿದರು, ಮುದ್ರಿಸಿದ ಮುದ್ರಣಾಲಯಗಳ ಸಿಬ್ಬಂದಿಗಳು, ಕೊಂಡು ಓದುವ ಓದುಗರು -ಇವರೆಲ್ಲರ ಸನ್ಮನಸ್ಸಿನ ಸಹಕಾರದಿಂದ ಇಂತಹ ಒಂದು ಪ್ರಕಾಶನ ಸಂಸ್ಥೆಯನ್ನು ನಡೆಸುವುದು ಸಾಧ್ಯವಾಗಿದೆ. ಯಾಜಿ ಪ್ರಕಾಶನದ ಪುಸ್ತಕಗಳು ನಾಡಿನೆಲ್ಲೆಡೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರವರೆಗೂ ತಲುಪಿವೆ. ಅವುಗಳ ಹೂರಣದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ನಮ್ಮ ಜೊತೆಗಿರುವ ಬೌದ್ಧಿಕ ತಂಡ ನಮ್ಮನ್ನು ಸರಿದಾರಿಯಲ್ಲಿ ಕ್ರಮಿಸುವಂತೆ ಮಾಡಿದೆ. ಪುಸ್ತಕಗಳನ್ನು ಸುಂದರವಾಗಿ ಅಕ್ಷರ ದೋಷಗಳಿಲ್ಲದೆ ಪ್ರಕಟಿಸಬೇಕು ಎಂಬುದನ್ನು ಪ್ರಮುಖ ಗುರಿಯಾಗಿಸಿಕೊಂಡು ಈ ಕೆಲಸದಲ್ಲಿ ಯಾಜಿ ಪ್ರಕಾಶನ ಸದಾ ಶ್ರಮಿಸಿದೆ. ಅದರ ಪರಿಣಾಮವಾಗಿ ಪುಸ್ತಕದ ಸುಂದರ ಪ್ರಕಟಣೆಗಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಾಡುವ ಪುಸ್ತಕ ಸೊಗಸು ಪ್ರಶಸ್ತಿಯೂ ಪ್ರಕಾಶನಕ್ಕೆ ಲಭಿಸಿದೆ. ಅಲ್ಲದೆ ಪುಸ್ತಕದ ಮೌಲಿಕತೆಯ ಕಾರಣಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯನ್ನೂ ಒಳಗೊಂಡಂತೆ ರಾಜ್ಯದ ಅನೇಕ ಅಕಾಡೆಮಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಹಾಗೂ ಇತರೆ ಖಾಸಗೀ ಸಂಘ-ಸಂಸ್ಥೆಗಳ 45ಕ್ಕೂ ಹೆಚ್ಚು ಪ್ರಶಸ್ತಿ/ಪುರಸ್ಕಾರಗಳು ಯಾಜಿ ಪ್ರಕಾಶನದ ಪುಸ್ತಕಗಳನ್ನು ಅರಸಿ ಬಂದಿವೆ.
ಪುಸ್ತಕ ಪ್ರಕಟಣೆ ಎಂಬುದು ಸಾಂಸ್ಕೃತಿಕ ಜವಾಬ್ದಾರಿ ಎಂಬ ನೆಲೆಯಲ್ಲಿಯೇ ಪ್ರಕಾಶನವನ್ನು ಆರಂಭಿಸಲಾಗಿತ್ತು. ಈಗಲೂ ಅದೇ ದಾರಿಯಲ್ಲಿ ನಡೆಯುವ ಹುಮ್ಮಸ್ಸು ಪ್ರಕಾಶನಕ್ಕಿದೆ. ಪ್ರಕಟಣೆಯ ಖರ್ಚು-ವೆಚ್ಚಗಳನ್ನು ಪುಸ್ತಕ ಮಾರಾಟದಿಂದ ಸರಿದೂಗಿಸುವುದು ಕಷ್ಟ ಸಾಧ್ಯ ಎಂಬುದು ಅನುಭವಕ್ಕೆ ಬಂದಿದೆ. ಆದರೂ ಅದನ್ನು ಮೀರಿ ಯಾಜಿ ಪ್ರಕಾಶನ ನಾಡಿನೆಲ್ಲೆಡೆ ಹೆಸರು ಮಾಡಿದೆ. ಅನೇಕರ ಪ್ರೀತಿಗೆ ಪಾತ್ರವಾಗಿದೆ ಎಂಬ ಸಂತಸ, ಹಿತೈಷಿಗಳ ಹಾರೈಕೆ ಇವುಗಳಿಂದಲೇ ಪ್ರಕಾಶನ ಹನ್ನೆರಡು ವರ್ಷಗಳನ್ನು ಪೂರೈಸಿದೆ. ಈಗ ಯಾಜಿ ಪ್ರಕಾಶನವು www.yajipublications.com ವೆಬ್‌ಸೈಟ್ ಮೂಲಕ ಜಗದಗಲವಿರುವ ಕನ್ನಡ ಓದುಗರಿಗೆ ಹತ್ತಿರವಾಗಿದೆ.
ಯಾಜಿ ಪ್ರಕಾಶನದ ಮೂಲಕ ಹಲವಾರು ಲೇಖಕರ 130ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ನಮಗೆ ನನ್ನ ಅಮ್ಮನ ಕುರಿತು ಪುಸ್ತಕವೊಂದನ್ನು ಹೊರತರಬೇಕು ಎಂಬ ಮಹದಾಸೆಯೊಂದು ಕಳೆದ 2 ವರುಷಗಳ ಹಿಂದೆ ನನ್ನ ಮನಃಪಟಲದಲ್ಲಿ ಮೂಡಿದಾಗ ಮೊದಲು ನನ್ನವರಾದ ಗಣೇಶ್ ಯಾಜಿಯವರಲ್ಲಿ ಪ್ರಸ್ತಾಪಿಸಿ, ಆಮೇಲೆ ಕಾಕಾಲ್ ಕುಟುಂಬದ ಅಣ್ಣಂದಿರು, ಅತ್ತಿಗೆಯವರು, ಅಕ್ಕ-ಬಾವ, ಮೊಮ್ಮಕ್ಕಳು, ಬಂಧು-ಬಾಂಧವರ ಮುಂದೆ ಚರ್ಚಿಸಿದಾಗ ಎಲ್ಲರೂ ಅತ್ಯಂತ ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದಲ್ಲದೆ ಅಮ್ಮನ ಬಗ್ಗೆ ಇರುವ ತಮ್ಮ ಒಡನಾಟ, ಪ್ರೀತಿಯನ್ನು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಕೆಲವರು ಅನಿವಾರ್ಯ ಕಾರಣದಿಂದ, ಸಮಯಾಭಾವದಿಂದ ಬರೆಯಲು ಸಾಧ್ಯವಾಗದೇ ಇರಬಹುದು. ಆದರೆ ಕೆಲವರು ನಾವು ಕೇಳಿದ ತಕ್ಷಣ ಪ್ರೀತಿ, ವಿಶ್ವಾಸದಿಂದ ಬರೆದು ಜಯಪಥ ಪುಸ್ತಕ ಅದ್ಭುತವಾಗಿ ಮೂಡಿಬರಲು ಕಾರಣವಾಗಿದ್ದಾರೆ. ಎಲ್ಲರ ಹೆಸರನ್ನು ಇಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ. ಹಾಗಾಗಿ ಲೇಖನ ಬರೆದ, ಬರೆಸಿದ, ಲೇಖನ ತರಿಸಿಕೊಟ್ಟ, ಛಾಯಾಚಿತ್ರಗಳನ್ನು ಒದಗಿಸಿದ, ಹಿಂದೆ ನಿಂತು ಬೆನ್ನು ತಟ್ಟಿ ಹಾರೈಸಿದ ಎಲ್ಲರಿಗೂ ಯಾಜಿ ಪ್ರಕಾಶನದ ಅಭಿವಂದನೆಗಳು.
ಯಾಜಿ ಪ್ರಕಾಶನಕ್ಕೆ ಸದಾ ಬೆಂಬಲವಾಗಿ ಪ್ರೋತ್ಸಾಹಿಸುತ್ತಿರುವ ನನ್ನ ಕಾಕಾಲು ಕುಟುಂಬದ ನನ್ನೊಲುಮೆಯ ಅಮ್ಮ, ಅಣ್ಣಂದಿರು, ಅತ್ತಿಗೆಯವರು, ಅಕ್ಕ-ಬಾವ, ಮಕ್ಕಳು ಈ ಎಲ್ಲರ ಪ್ರೀತಿಯನ್ನು ಮರೆಯಲೆಂತು!
ಎಲ್ಲರಿಗೂ ಹೃದಯಾಂತರಾಳದ ವಂದನೆಗಳು.
ಹಾಗೆಯೇ ಮತ್ತೊಬ್ಬರನ್ನು ಮರೆಯುವಂತೆಯೇ ಇಲ್ಲ. ನನ್ನ ಎಲ್ಲಾ ಕೆಲಸಕ್ಕೂ ಸಹಕರಿಸಿ, ಪ್ರೋತ್ಸಾಹಿಸಿ ‘ಜಯಪಥ’ ಪುಸ್ತಕ ಹೊರಬರಲು ನನ್ನಷ್ಟೇ ಶ್ರಮವಹಿಸಿ, ಹಲವರಿಗೆ ಫೋನ್ ಮಾಡಿ ಲೇಖನ ತರಿಸಿದ ನನ್ನವರಾದ ಯಾಜಿಯವರನ್ನು ಮರೆತರೆ ಅಪರಾಧವಾದೀತು! ಅವರಿಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಅವರಿಗೂ ಪ್ರಣಾಮಗಳು.
ಮುದ್ರಣದ ಹೊಣೆಹೊತ್ತ ವಾಗರ್ಥ, ಬೆಂಗಳೂರು ಅವರಿಗೂ ಮತ್ತು ಅವರ ಬಳಗಕ್ಕೆ, ಮುಖಪುಟ ರಚಿಸಿದ ಯು.ಟಿ. ಸುರೇಶ್ ಅವರಿಗೂ, ರೇಖಾಚಿತ್ರವನ್ನು ರೇಖಿಸಿದ ಸತೀಶ್ ಯಲ್ಲಾಪುರ ಮತ್ತು ಅಜಿತ್ ಕೌಂಡಿನ್ಯ ಅವರಿಗೂ ಹಾಗೂ ಹಿತೈಷಿಗಳಿಗೂ ಯಾಜಿ ಪ್ರಕಾಶನದ ಪರವಾಗಿ ಹೃತ್ಪೂರ್ವಕ ವಾದ ಕೃತಜ್ಞತೆಗಳು.
-ಸವಿತಾ ಯಾಜಿ
ಸಂಚಾಲಕರ ಮಾತು
-ಚಂದ್ರಶೇಖರ (ಉಮೇಶ್) ಕಾಕಾಲ್
ಕನಸುಗಳನ್ನು ಸಾಕಾರಗೊಳಿಸುವುದು ಸಾಧಾರಣ ಕಾರ್ಯವಲ್ಲ. ಅದಕ್ಕೆ ಕಾಲ ಕೂಡಿ ಬರಬೇಕು. ಕ್ಷೇತ್ರ ಪಕ್ವವಾಗಿರಬೇಕು. ಯೋಜನೆ ಒಂದು ರೂಪುಗೊಳ್ಳಬೇಕು. ಅದು ಕಾರ್ಯರೂಪಕ್ಕೆ ಇಳಿಯಬೇಕು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ದೈವೇಚ್ಛೆ ಇರಬೇಕು.
ನನ್ನಮ್ಮನ ಬಗ್ಗೆ ಅವಳ ಜೀವಿತಾವಧಿಯಲ್ಲಿಯೇ ಪುಸ್ತಕ ಒಂದನ್ನು ಹೊರತಂದು ಅವಳ ಜೀವ-ಜೀವನ-ಜೀವನ ಪ್ರೀತಿಯನ್ನು ಸೆರೆಹಿಡಿದಿಡಬೇಕೆಂಬ ನನ್ನ ಯೋಚನೆಯನ್ನು ನನ್ನ ಮನಸ್ಸಿನಿಂದಲೇ ಕಿತ್ತುಕೊಂಡು ವಾಚ್ಯವಾಗಿಸಿದಂತೆ ಒಂದು ದಿನ ತಂಗಿ ಸವಿತಾ ಹೊಸಪೇಟೆಯಿಂದ ದೂರವಾಣಿ ಕರೆಯಲ್ಲಿ ತಿಳಿಸಿದಳು. ಅಂತವುದೇ ಒಂದೆರಡು ಜೀವನ ಚರಿತ್ರೆಗಳನ್ನು ಪುಸ್ತಕ ರೂಪಕ್ಕಿಳಿಸುತ್ತಿರುವಾಗ ಅವಳಿಗೂ ಆ ಯೋಚನೆ ಬಂದಿರಬೇಕು. ನಾನು ತಕ್ಷಣ ಆ ಯೋಚನೆಗೆ ಸ್ಪಂದಿಸಿ ಕನಸಿಗೊಂದು ಚಾಲನೆ ಕೊಡುವ ಸಂಕಲ್ಪ ಮಾಡಿ, ಮುಂದುವರೆಯೋಣ ಎಂದು ತಿಳಿಸಿದೆ. ನಮ್ಮೆಲ್ಲ ಕುಟುಂಬದವರಿಗೆ ಹಾಗೂ ಬಂಧು ಮಿತ್ರರಿಗೆ ಈ ಯೋಜನೆಯ ರೂಪುರೇಷೆಗಳನ್ನು ತಿಳಿಸಿ, ಎಲ್ಲರಿಗೂ ಅವರವರ ಒಡನಾಟಗಳನ್ನಾಧರಿಸಿ ನಮ್ಮ ಅಮ್ಮ ಜಯಲಕ್ಷ್ಮಿಯ ಬಗ್ಗೆ ನೆನಪುಗಳನ್ನು ಸೆರೆಹಿಡಿದು ಕಳುಹಿಸಲು ತಿಳಿಸಿದೆವು. ಇದು ನಡೆದದ್ದು ಜನವರಿ 2025ರಲ್ಲಿ. ತಕ್ಷಣವೇ ಹಲವಾರು ಲೇಖನಗಳು, ನೆನಪುಗಳು ಬಂದು ಸೇರಿದವು. ಆದರೆ ಕಾರಣಾಂತರಗಳಿಂದ ಇನ್ನೂ ಹಲವರಿಂದ ಲೇಖನಗಳು ಬಾರದೆ ಇದ್ದುದರಿಂದ ಮತ್ತು ನಮ್ಮ ನಮ್ಮದೇ ಕಾರ್ಯಗಳ ಒತ್ತಡ ಹಾಗೂ ಪ್ರವಾಸಗಳಿಂದಾಗಿ ಪುಸ್ತಕ ರೂಪಕ್ಕಿಳಿಸುವ ಕಾರ್ಯ ಹಿನ್ನೆಡೆಗೆ ಸರಿಯಿತು. ಎರಡು ತಿಂಗಳ ಹಿಂದೆ ಮತ್ತೆ ನಾವೆಲ್ಲ ಸೇರಿದಾಗ ದಿನಾಂಕ ಒಂದನ್ನು ನಿಗದಿಪಡಿಸಿ ಫೆಬ್ರವರಿ 2026ರಲ್ಲಿ ಖಂಡಿತವಾಗಿಯೂ ಈ ಪುಸ್ತಕವನ್ನು ಪ್ರಕಟಿಸಬೇಕು ಎಂದು ತೀರ್ಮಾನಿಸಿ ಮತ್ತೆ ನಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿದೆವು. ಈ ನಡುವೆ ಪುಸ್ತಕದ ಯೋಜನೆಯ ಬಗ್ಗೆ ತಿಳಿದ ಹಲವರು ನಾವು ‘ಜಯಕ್ಕ’ನ ಬಗ್ಗೆ ಬರೆದುಕೊಡುತ್ತೇವೆ ಎಂದು ಮುಂದೆ ಬಂದರು.
ನೆನಪುಗಳನ್ನು ಲೇಖನವಾಗಿಸಿಕೊಟ್ಟ ಎಲ್ಲರ ಹೆಸರನ್ನು ಇಲ್ಲಿ ಉಲ್ಲೇಖಿಸ ಲಾಗಿಲ್ಲ. ಅವರ ಹೆಸರುಗಳು ಲೇಖನದ ಜೊತೆಗೆ ಪ್ರಕಟವಾಗಿವೆ. ಲೇಖನ ಬರೆದುಕೊಟ್ಟ ಎಲ್ಲರಿಗೂ ಧನ್ಯವಾದಗಳು. ಪುಸ್ತಕಕ್ಕೆ ಮುನ್ನುಡಿಯಂತೆ ಒಂದು ಲೇಖನ ಬರೆದುಕೊಡುವಂತೆ ಗೆಳೆಯ ಮತ್ತು ನಮ್ಮ ಕುಟುಂಬದ ಒಡನಾಡಿ ಅಕ್ಷರನಿಗೆ ಭಿನ್ನವಿಸಿದೆ. ಕಾಕಾಲು ಸುಬ್ರಾಯರ ನೆನಪಿನಿಂದ ಆರಂಭಿಸಿ ಕೆಲವು ಪ್ರಮುಖ ಘಟನೆಗಳೊಂದಿಗೆ ಸೂಕ್ತವಾದ ಚಿಕ್ಕ-ಚೊಕ್ಕದಾದ ಪ್ರಸ್ತಾವನೆಯನ್ನು ಬರೆದುಕೊಟ್ಟ ಅಕ್ಷರನಿಗೆ ಧನ್ಯವಾದಗಳು. ಅಮ್ಮ ಜಯಲಕ್ಷ್ಮಿಯ ತವರಿಗೆ ಹತ್ತಿರದವರಾದ ರಾಧಾಕೃಷ್ಣ ಬಂಧಗದ್ದೆ ಅವರಿಗೆ ಆಗಿನ ಕಾಲದ ಸಮಕಾಲೀನ ಮಹಿಳೆಯರ ಬದುಕಿನ ಪ್ರತೀಕವಾಗಿ ಮಹಾಲಕ್ಷ್ಮಿ ಜಯಲಕ್ಷ್ಮಿಯಾದ ಬಗ್ಗೆ ಬರೆದುಕೊಡಲು ವಿನಂತಿಸಿದ್ದೆವು. ನಮ್ಮ ಬೇಡಿಕೆಗೆ ಸ್ಪಂದಿಸಿದ ಅವರಿಗೂ ಧನ್ಯವಾದಗಳು. ಪುಸ್ತಕದಲ್ಲಿ ಅಲ್ಲಲ್ಲಿ ರೇಖಾಚಿತ್ರಗಳಿದ್ದರೆ ಸೊಗಸಾಗಿ ಮೂಡಿ ಬರುವುದೆಂಬ ಸಲಹೆಯನ್ನು ಸಾಕಾರಗೊಳಿಸಿಕೊಟ್ಟ ಸತೀಶ್ ಯಲ್ಲಾಪುರ ಅವರಿಗೆ ನಮ್ಮ ಕೃತಜ್ಞತೆಗಳು. ಸೊಗಸಾದ ಮುಖಪುಟವನ್ನು ರಚಿಸಿಕೊಟ್ಟ ಯು.ಟಿ. ಸುರೇಶ್ ಮತ್ತು ಅಂದವಾಗಿ ಮುದ್ರಿಸಿಕೊಟ್ಟ ವಾಗರ್ಥ, ಬೆಂಗಳೂರು ಅವರಿಗೂ ನಮ್ಮ ಧನ್ಯವಾದಗಳು.
ಲೇಖನ ಮತ್ತು ಚಿತ್ರಗಳನ್ನೆಲ್ಲ ಕಲೆಹಾಕಿ ತಿದ್ದಿ ತೀಡಿ, ಸಂಪಾದಕಿ ಮತ್ತು ಪ್ರಕಾಶಕಿಯಾಗಿ ಎರಡೂ ಕೆಲಸಗಳನ್ನು ಅವಳಿಗಿರುವ ಅಪರಿಮಿತ ಒತ್ತಡದ ನಡುವೆಯೂ ಅಕ್ಷರ ರೂಪಕ್ಕಿಳಿಸಿದ ನನ್ನ ತಂಗಿ ಸವಿತಾಳನ್ನು ಮರೆಯುವುದೆಂತು?! ಅವಳಿಗೂ ಹಾಗೂ ಎಲ್ಲಾ ಕೆಲಸಗಳಲ್ಲಿಯೂ ನೆರವಾದ ಸವಿತಾಳ ಪತಿ ಗಣೇಶ್ ಯಾಜಿಗೂ ಮನದಾಳದಿಂದ ಕೃತಜ್ಞತೆಗಳು.
* * *
ಕಾಕಾಲು ಕುಟುಂಬದ ಜಯಲಕ್ಷ್ಮಿ
-ಅಕ್ಷರ ಕೆ.ವಿ.
ಕುಂಟಗೋಡಿನಿಂದ ಬಂದು ಮುಂಡಿಗೇಸರ ಗ್ರಾಮದಲ್ಲಿ ನೆಲೆಸಿದ್ದ ನಮ್ಮ ಕುಟುಂಬವೂ ಮತ್ತು ಕಾಕಾಲು ಗ್ರಾಮದಿಂದ ಬಂದು ಮುಂಡಿಗೇಸರ ಗ್ರಾಮದಲ್ಲಿ ನೆಲೆಸಿದ್ದ ಕಾಕಾಲು ಕುಟುಂಬವೂ ಆರೇಳು ದಶಕಗಳ ಹಿಂದೆ ನೆರೆಹೊರೆಯವರಾಗಿದ್ದೆವು. ಆಮೇಲೆ ನಾವು ಅಲ್ಲೇ ತುಸು ದೂರಕ್ಕೆ ಬಂದು ಹೊಸ ಮನೆ ಕಟ್ಟಿಸಿದೆವು. ಹಲವು ವರ್ಷಗಳ ಬಳಿಕ ಕಾಕಾಲು ಕುಟುಂಬವು ಹಲವಾರು ಶಾಖೆಗಳಾಗಿ ನಾನಾ ಊರುಗಳಲ್ಲಿ ಹರಡಿಕೊಂಡಿತು. ಹಾಗಿದ್ದರೂ ನನ್ನ ಮನಸ್ಸಿನಲ್ಲಿ ಈಗಲೂ ಕಾಕಾಲು ಕುಟುಂಬದವರು ನೆರೆಮನೆಯವರೆಂಬ ಭಾವನೆಯೇ ಉಳಿದುಕೊಂಡಿದೆ. ಮಾತ್ರವಲ್ಲ, ಮನೆಯಲ್ಲಿ ಒಬ್ಬನೇ ಮಗನಾಗಿದ್ದ ನಾನು ಬಾಲ್ಯಕಾಲದ ನನ್ನ ಗಣನೀಯ ಕಾಲವನ್ನು ಮಕ್ಕಳಿಂದ ತುಂಬಿದ ಅವರ ಮನೆಯಲ್ಲೇ ಕಳೆದೆನಾದ್ದರಿಂದ ಅವರ ಕುಟುಂಬದ ಸದಸ್ಯರೆಲ್ಲರ ಕುರಿತೂ ನೆನಪಿನ ಗುಚ್ಛಗಳು ನನ್ನೊಳಗಿವೆ. ಅಂಥ ಹಳೆಯ ನೆನಪುಗಳ ಮಂದಬೆಳಕಿನಲ್ಲಿ ಕಾಕಾಲು ಕುಟುಂಬದ ಶ್ರೀಮತಿ ಜಯಲಕ್ಷ್ಮೀ ಲಕ್ಷ್ಮೀನಾರಾಯಣರಾವ್ ಅವರ ಕಿರುಚಿತ್ರವನ್ನು ನಾನಿಲ್ಲಿ ಕಟ್ಟಿಕೊಳ್ಳುತ್ತಿದ್ದೇನೆ.
ನಾನು ಸಣ್ಣವನಿದ್ದಾಗ ಕಾಕಾಲು ಕುಟುಂಬವು ಹತ್ತಾರು ಜನಗಳಿದ್ದ ಕೂಡು ಮನೆಯಾಗಿತ್ತು. ಮಾತ್ರವಲ್ಲ, ಆ ಮನೆಯ ಜನಗಳಲ್ಲಿ ಹಲವು ಸ್ವಭಾವದ ವ್ಯಕ್ತಿತ್ವಗಳಿದ್ದುದರಿಂದ ಅವರ ಮನೆಯೇ ಅನೇಕ ವೈವಿಧ್ಯಗಳನ್ನೊಳಗೊಂಡ ಒಂದು ಜಗತ್ತಿನ ಹಾಗೆ ನನಗೆ ತೋರುತ್ತಿತ್ತು. ಆ ಮನೆಯ ಹಿರಿಯರಾಗಿದ್ದ ಕಾಕಾಲು ಸುಬ್ರಾಯರು ಸದಾ ನಗುಮುಖದಿಂದ ದಾರಿಯಲ್ಲಿ ಹೋಗುವ ಮಕ್ಕಳನ್ನೆಲ್ಲ ಕರೆದು ಮಾತಾಡಿಸುವವರಾಗಿದ್ದರೆ, ಆ ಮನೆಯ ಅಜ್ಜಿ ಗೌರಮ್ಮ ನವರು ಮಕ್ಕಳನ್ನು ಅಡಿಗೆ ಮನೆಯಲ್ಲಿ ಕೂರಿಸಿ ತಿನ್ನಲು ಕೊಡುತ್ತಿದ್ದರು. ಆ ಮನೆಯ ಹಿರಿಯ ಮಗ ಲಕ್ಷ್ಮೀನಾರಾಯಣರಾಯರು ಮಾತ್ರ ನಾವೆಲ್ಲ ಕಾಕಾಲಜ್ಜ ಎಂದು ಕರೆಯುತ್ತಿದ್ದ ಸುಬ್ರಾಯರಿಗಿಂತ ತುಂಬ ಬೇರೆಯ ಚಹರೆಯವರು. ಗಣಪತಿ ವಿಗ್ರಹ ಮಾಡುವುದು, ವಾಚು ರಿಪೇರಿ, ಎಲೆಕ್ಟ್ರಿಕ್ ವೈರಿಂಗ್ ಮೊದಲಾದ ಹಲವು ಅಪರೂಪದ ಕೆಲಸಗಳಲ್ಲಿ ತೊಡಗಿರುತ್ತಿದ್ದ ಅವರ ಸ್ವಭಾವದಲ್ಲೂ ಇನ್ನೊಂದು ವಿಶೇಷವಿತ್ತು; ಯಾವ ಕ್ಷಣದಲ್ಲಿಯೂ ಸ್ಫೋಟಿಸಬಹುದಾದ ಮುಂಗೋಪ ಅವರ ಮೂಗಿನ ತುದಿಯಲ್ಲಿ ಕೂತಿರುತ್ತಿತ್ತು. ಹಾಗಂತ ಅವರಿಗೆ ಯಾರ ಮೇಲೂ ದ್ವೇಷ ಇಲ್ಲದಿದ್ದ ಕಾರಣ, ಆ ಸ್ವಭಾವವನ್ನು ಅರಿತಿದ್ದ ಊರಿನ ಎಲ್ಲರಿಗೂ ಅದು ಲಘುಹಾಸ್ಯದ ಸಂಗತಿಯಾಗಿತ್ತೆ ಹೊರತು ಸಮಸ್ಯೆಯಾಗಿ ಕಂಡಿದ್ದಿಲ್ಲ. ಅದೇ ಕಾರಣದಿಂದಲೇ ನನ್ನಂಥ ಹಲವು ಮಕ್ಕಳಿಗೆ ಆಗೆಲ್ಲ ಅವರ ಬಗ್ಗೆ ತುಸು ಭಯವೇ ಇರುತ್ತಿತ್ತು. ಒಮ್ಮೆಯಂತೂ ಕರೆಂಟು ಹೋಗಿದ್ದು ಮೂರು ದಿನಗಳಾದರೂ ಬರದೆ ಊರವರೆಲ್ಲ ವ್ಯಗ್ರರಾಗಿದ್ದ ವೇಳೆ, ಊರಿಗೆ ಬಂದಿದ್ದ ಇಲಾಖೆಯ ಅಧಿಕಾರಿಗಳ ಬಳಿ ಹಲವು ಹಿರಿಯರು ಮಾತಾಡುತ್ತಿರುವಾಗ, ಇದ್ದಕ್ಕಿದ್ದ ಹಾಗೆ ಮೈಮೇಲೆ ದೈವ ಬಂದಂತೆ ಲಕ್ಷ್ಮೀನಾರಾಯಣರಾಯರು ಸಿಟ್ಟಾಗಿ ಕೂಗಾಡಿದ್ದು, ಊರವರೆಲ್ಲ ಕರೆಂಟಿನ ವಿಚಾರವನ್ನೇ ಮರೆತು ಇವರನ್ನು ನಿಯಂತ್ರಿಸಲು ಹೆಣಗಾಡಿದ್ದು – ಆ ಒಂದು ಘಟನೆ, ನಿನ್ನೆ ನೋಡಿದ ಹಾಗೆ ನನ್ನ ಮನಸ್ಸಿನಲ್ಲಿ ಉಳಿದಿದೆ.
ಇರಲಿ. ಜಯಲಕ್ಷ್ಮಿಯವರ ಬಗ್ಗೆ ಬರೆಯಲು ಹೊರಟು ಲಕ್ಷ್ಮೀ ನಾರಾಯಣರ ಬಗ್ಗೆ ಇಷ್ಟೆಲ್ಲ ನೆನಪಿಸಿಕೊಂಡಿದ್ದಕ್ಕೂ ಒಂದು ವಿಶೇಷ ಕಾರಣವಿದೆ. ಲಕ್ಷ್ಮೀನಾರಾಯಣರು ಎಷ್ಟು ಶೀಘ್ರಕೋಪಿಯಾಗಿದ್ದರೋ ಅವರ ಮಡದಿ ಜಯಲಕ್ಷ್ಮಿಯವರು ಅಷ್ಟೇ ತಾಳ್ಮೆಯುಳ್ಳವರಾಗಿದ್ದರು ಎಂಬ ಕಾರಣಕ್ಕಾಗಿ ನಾನು ಈ ನೆನಪುಗಳನ್ನು ಮಾಡಿಕೊಂಡೆ. ಈ ದೃಷ್ಟಿಯಿಂದ ಅದೊಂದು ಆದರ್ಶ ದಾಂಪತ್ಯವೇ ಆಗಿತ್ತು ಎನ್ನಬೇಕು. ಬರೀ ಸಿಟ್ಟು-ತಾಳ್ಮೆಯಲ್ಲಿ ಮಾತ್ರವಲ್ಲ, ಇನ್ನೂ ಅನೇಕ ಸ್ವಭಾವಗಳಲ್ಲಿ ಈ ಗಂಡಹೆಂಡಿರು ವಿರುದ್ಧ ಸ್ವಭಾವಗಳ ಪೂರಕ ಸಂಗಮವಾಗಿದ್ದರೆಂದೂ ಈಗ ನನಗೆ ನೆನಪಾಗುತ್ತದೆ. ಉದಾಹರಣೆಗೆ, ಲಕ್ಷ್ಮೀನಾರಾಯಣರು ಅಡಕೆಯ ಫಸಲುಗುತ್ತಿಗೆ ಮೊದಲಾದ ಅಪಾಯದ ವ್ಯಾಪಾರಕ್ಕೆ ಮುನ್ನುಗ್ಗಿ ಕೈಹಾಕುವ ಅತ್ಯುತ್ಸಾಹಿಯಾಗಿದ್ದರೆ, ಜಯಲಕ್ಷ್ಮಿಯವರು ತಣ್ಣೀರನ್ನೂ ತಣಿಸಿ ಕುಡಿಯುವ ಸಾವಧಾನಿ. ಲಕ್ಷ್ಮೀನಾರಾಯಣರು ಮಾತಾಡುವುದು ಕಡಿಮೆಯಾದರೆ, ಜಯಲಕ್ಷ್ಮಿಯವರು ಎಲ್ಲರನ್ನೂ ಮಾತಿಗೆಳೆಯುವವರು –ಹೀಗೆ ಅನೇಕ ದ್ವಂದ್ವಗಳ ಜೋಡಿ ಅವರಿಬ್ಬರ ನಡುವೆ ಇತ್ತು. 1990ರ ದಶಕದವರೆಗೂ ಸಾಕಷ್ಟು ಕಷ್ಟದಲ್ಲೇ ಸಾಗಿದ್ದ ಅವರ ಕುಟುಂಬವು ಮುಂದೆ ಯಶಸ್ಸಿನ ಹಾದಿ ಹಿಡಿಯುವುದಕ್ಕೆ ಈ ಬಗೆಯ ವೈರುದ್ಧ್ಯಗಳ ಸಹಯೋಗವೂ ಕಾರಣವಾಗಿರಬಹುದು ಎಂದು ನಾನು ಊಹಿಸುತ್ತೇನೆ.
ಈ ದಂಪತಿಗಳು ಕೂಡಿ ನಡೆಸಿದ ಇನ್ನೊಂದು ಉದ್ಯೋಗಕ್ಕೆ ನಾನು ತುಂಬ ಹತ್ತಿರದ ಸಾಕ್ಷೀದಾರನಾಗಿದ್ದೇನೆ. ಅದು ಹೆಗ್ಗೋಡಿನಲ್ಲಿ ಅವರು ನಡೆಸುತ್ತಿದ್ದ ಭೋಜನಗೃಹ. 1980ರ ವರ್ಷ ನಮ್ಮ ನೀನಾಸಮ್ ಸಂಸ್ಥೆಯು ರಂಗಶಿಕ್ಷಣ ಕೇಂದ್ರವೊಂದನ್ನು ಆರಂಭಿಸಿತು. ಆಗ, ಕರ್ನಾಟಕದ ಎಲ್ಲ ಕಡೆಗಳಿಂದಲೂ ಬಂದು ಇಲ್ಲಿ ಹತ್ತು ತಿಂಗಳು ಉಳಿಯುವ ವಿದ್ಯಾರ್ಥಿಗಳಿಗೆ ಊಟೋಪಚಾರದ ವ್ಯವಸ್ಥೆಯೊಂದು ಬೇಕಾಗಿತ್ತು. ಅದಕ್ಕೆ ತುಂಬ ಅನುಕೂಲಕರವಾಗಿ ಒದಗಿ ಬಂದವರು ಲಕ್ಷ್ಮೀನಾರಾಯಣ-ಜಯಲಕ್ಷ್ಮಿ ದಂಪತಿಗಳು. ಈ ಕೇಂದ್ರ ಆರಂಭವಾಗಲಿಕ್ಕೆ ಕೆಲವು ವರ್ಷಗಳ ಮೊದಲಿನಿಂದಲೇ ಈ ದಂಪತಿಗಳು ನೀನಾಸಮ್ ಪಕ್ಕದ ಹೈಸ್ಕೂಲಿನ ಹಾಸ್ಟೆಲ್ಲೊಂದನ್ನು ನಿರ್ವಹಿಸುತ್ತಿದ್ದರು. ಅಲ್ಲಿ ಊಟಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತಾದ್ದರಿಂದ, ಅವರೀಗ ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೂ ಊಟೋಪಚಾರ ನೀಡಲು ಒಪ್ಪಿದರು. ಇದಾಗಿ ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ನೀನಾಸಮ್ ಮತ್ತು ಈ ಹಾಸ್ಟೆಲ್ಲಿನ ಸಂಬಂಧ ವೃದ್ಧಿಸುತ್ತಲೇ ಹೋಯಿತು. ಕೆಲವೇ ವರ್ಷಗಳಲ್ಲಿ ಚಲನಚಿತ್ರ ಶಿಬಿರಗಳು ನಡೆಯತೊಡಗಿದವು, ಬಳಿಕ ನೀನಾಸಮ್ ತಿರುಗಾಟ ಆರಂಭವಾಯಿತು, ಆಮೇಲೆ ಸಂಸ್ಕೃತಿ ಶಿಬಿರ -ಹೀಗೆ ವರ್ಷಾದ್ಯಂತ ಕಾರ್ಯಕ್ರಮಗಳು ನಡೆಯುತ್ತ ನೀನಾಸಮ್‌ಗೆ ಬರುವ ಶಿಬಿರಾರ್ಥಿಗಳು ಮತ್ತು ಅತಿಥಿಗಳ ಸಂಖ್ಯೆ ಏರುತ್ತಲೇ ಹೋಯಿತು, ಮತ್ತು ಈ ದಂಪತಿಗಳು ಅವರೆಲ್ಲರ ಊಟೋಪಚಾರದ ಜವಾಬ್ದಾರಿಯನ್ನು ತುಂಬ ಸಮರ್ಥವಾಗಿ ನಿರ್ವಹಿಸುತ್ತ ನೀನಾಸಮ್ ಜತೆಗೆ ಗಟ್ಟಿಯಾದ ಬಂಧವನ್ನು ಬೆಳೆಸಿಕೊಂಡರು.
1980ರಿಂದ 1997ರ ನಡುವಿನ ಈ ಕಾಲವು ನೀನಾಸಮ್ ಸಂಸ್ಥೆಗಾಗಲೀ ಲಕ್ಷ್ಮೀನಾರಾಯಣ-ಜಯಲಕ್ಷ್ಮಿ ದಂಪತಿಗಳಿಗಾಗಲೀ ಸಲೀಸಾದ್ದೇನೂ ಆಗಿರಲಿಲ್ಲ ಎಂಬುದನ್ನೂ ನಾನಿಲ್ಲಿ ನೆನಪಿಸಿಕೊಳ್ಳಬೇಕು. ಆ ಕಾಲದಲ್ಲಿ ನೀನಾಸಮ್ ತನ್ನ ಹಳೆಗಾಲದ ಹಳ್ಳಿಯ ನಾಟಕ ತಂಡದ ಸ್ವರೂಪದಿಂದ ನಿಧಾನವಾಗಿ ಹೊರಬಂದು, ರಂಗಶಿಕ್ಷಣವೇ ಮೊದಲಾದ ಕಾರ್ಯಕ್ರಮಗಳನ್ನು ನಡೆಸುವ ರಾಜ್ಯ-ರಾಷ್ಟ್ರ ವ್ಯಾಪ್ತಿಯ ಸಂಘಟನೆಯಾಗಿ ಪಲ್ಲಟಗೊಳ್ಳುತ್ತಿದ್ದರೂ ಅದರ ಆರ್ಥಿಕ ಬಲ ಮಾತ್ರ ತುಂಬ ಸೀಮಿತವಾಗಿತ್ತು. ಸರ್ಕಾರದ ಸಹಾಯ ಕೆಲವೇ ಸಾವಿರ ರೂಪಾಯಿಗಳಿಗೆ ಸೀಮಿತವಾಗಿದ್ದರೆ, ಯಾರಿಗೂ ಬೇಕಿರದ ನಾಟಕ ಕಲಿಯಲು ಬರುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಒಂದು ರೂಪಾಯಿ ಶುಲ್ಕ ಕೊಡಲೂ ಸಾಧ್ಯವಿಲ್ಲದ ಸ್ಥಿತಿಯಿತ್ತು. ಹಾಗಾಗಿ ನಾಟಕ ತಯಾರಿಯಿಂದ ಊಟ ವಸತಿಯವರೆಗೆ ಎಲ್ಲ ಖರ್ಚುಗಳನ್ನೂ ತೀರಾ ಕಡಿಮೆ ಹಣದಲ್ಲಿ ನಿರ್ವಹಿಸಲೇಬೇಕಾದ ಒತ್ತಡ ನೀನಾಸಮ್ ಸಂಸ್ಥೆಯ ಮೇಲಿತ್ತು. ಉದಾಹರಣೆಗೆ, 1980ರಲ್ಲಿ ರಂಗಶಿಕ್ಷಣ ಕಲಿಯಲಿಕ್ಕೆ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಊಟೋಪಚಾರಕ್ಕಾಗಿ ಹಾಸ್ಟೆಲ್ಲಿಗೆ ಕೊಡುತ್ತಿದ್ದ ಹಣ ಎರಡು ಊಟ ಮತ್ತು ಎರಡು ಉಪಾಹಾರ ಸೇರಿ ಪ್ರತಿದಿನಕ್ಕೆ ಮೂರೂವರೆ ರೂಪಾಯಿಗೂ ಕಡಿಮೆ! (ಹೋಲಿಕೆಗಾಗಿ ಹೇಳುತ್ತೇನೆ –ಈ ಲೇಖನ ಬರೆಯುತ್ತಿರುವ 2026ರಲ್ಲಿ ಇದೇ ಉದ್ದೇಶಕ್ಕೆ ವಿದ್ಯಾರ್ಥಿಯೊಬ್ಬರು ಕೊಡುತ್ತಿರುವ ಹಣ ದಿನಕ್ಕೆ 185/- ರೂಪಾಯಿ!) ಇವತ್ತು ಹೇಳಿದರೆ ನಂಬಲಿಕ್ಕೇ ಕಷ್ಟವೆನ್ನಿಸಬಹುದಾದ ಈ ಮೊತ್ತವು 80ರ ದಶಕದ ಆರ್ಥಿಕ ಸಂದರ್ಭದಲ್ಲೂ ತೀರಾ ಕಡಿಮೆಯೇ ಆಗಿತ್ತು. ಅಲ್ಲಿಂದ ಮುಂದೆ ಪ್ರತಿವರ್ಷಕ್ಕೆ ಹತ್ತಿಪ್ಪತ್ತು ರೂಪಾಯಿಗಳಂತೆ ಏರುತ್ತ ಈ ಮೊತ್ತವು 1990ರ ದಶಕದ ನಡುವಿನ ವೇಳೆಗೆ ಸುಮಾರು 750/- ರೂಪಾಯಿಗೆ ತಲುಪಿತ್ತು ಎಂದು ನನ್ನ ನೆನಪು. ಹಾಗಾಗಿ ಕಾಕಾಲು ದಂಪತಿಗಳು ಈ ಹಾಸ್ಟೆಲ್ಲು ನಡೆಸುವ ಅವಧಿಯುದ್ದಕ್ಕೂ ನೀನಾಸಮ್ ಸಂಸ್ಥೆ ಮತ್ತು ಅವರ ನಡುವೆ ಪ್ರತಿವರ್ಷವೂ ಈ ಊಟೋಪಚಾರದ ದರ ನಿಗದಿಗೆ ಜಗ್ಗಾಟ ನಡೆಸುತ್ತಿದ್ದ ಸಂಗತಿ ನನಗೆ ಚೆನ್ನಾಗಿ ನೆನಪಿದೆ. ಒಂದು ಕಡೆಗೆ ಆಗ ನೀನಾಸಮ್ ಮುಖ್ಯಸ್ಥರಾಗಿದ್ದ ನನ್ನ ತಂದೆ ಕೆ.ವಿ. ಸುಬ್ಬಣ್ಣನವರು ಮತ್ತು ಆಡಳಿತ ಮಂಡಳಿಯ ಒಬ್ಬಿಬ್ಬರು, ಮತ್ತು ಇನ್ನೊಂದು ಕಡೆಗೆ ಲಕ್ಷ್ಮೀನಾರಾಯಣರು ಕೂತು ಈ ವ್ಯವಹಾರ ಮಾತಾಡುತ್ತಿದ್ದರೆ, ತನಗೆ ಇದ್ಯಾವುದೂ ಸಂಬಂಧವೇ ಇಲ್ಲವೆಂಬಂತೆ ಅಡಿಗೆ ಮನೆಯಲ್ಲಿ ರಾತ್ರಿಯ ಊಟಕ್ಕೆ ತಯಾರು ಮಾಡುತ್ತಿದ್ದ ಜಯಲಕ್ಷ್ಮೀಯವರ ಚಿತ್ರ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ.
ಆದರೆ, ಇಂಥ ಇಕ್ಕಟ್ಟಿನ ಸ್ಥಿತಿಯಲ್ಲೂ ಅವರು ಈ ಊಟೋಪಚಾರದಲ್ಲಿ ಯಾವ ವ್ಯತ್ಯಯವೂ ಆಗದಂತೆ ಒಂದೂವರೆ ದಶಕ ನಡೆಸಿಕೊಟ್ಟಿದ್ದರ ಹಿಂದೆ ಒಂದೆಡೆ ಲಕ್ಷ್ಮೀನಾರಾಯಣರ ವ್ಯವಹಾರಜ್ಞಾನವಿರುವಂತೆ, ಜಯಲಕ್ಷ್ಮೀಯವರ ಸತತ ದುಡಿಮೆಯೂ ಇತ್ತು. ಯಾರ ಕಣ್ಣಿಗೂ ಬೀಳದೆ ಜಯಲಕ್ಷ್ಮೀಯವರು ಇಡೀ ದಿನ ಅಡಿಗೆ ಮನೆಯಲ್ಲಿ ದುಡಿದು ಯಾವ ಕೊರತೆಯೂ ಕಾಣದ ಹಾಗೆ ನಿಭಾಯಿಸಿ, ಈ ಸಾಧನೆಗೆ ಪ್ರಮುಖ ಕಾರಣರಾದರು ಎಂಬುದನ್ನೂ ನೀನಾಸಮ್‌ನ ಎಲ್ಲರೂ ಬಲ್ಲರು. ಆ ಕಾಲದಲ್ಲಿ ಓದಿದ ವಿದ್ಯಾರ್ಥಿಗಳಿಗಂತೂ ಅಪರೂಪಕ್ಕೂ ಮಾತಾಡದ ಯಜಮಾನರಿಗಿಂತ ನಗುತ್ತ ಊಟಹಾಕುವ ಯಜಮಾನಿತಿಯೇ ಹೆಚ್ಚು ಪ್ರಿಯವಾಗಿದ್ದು ಸಹಜವೇ ಆಗಿತ್ತು. ಇವತ್ತಿಗೂ ಈ ದಂಪತಿಗಳನ್ನು ಹಲವು ಹಳೆ ವಿದ್ಯಾರ್ಥಿಗಳು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ, ಮಾತ್ರವಲ್ಲ ನಗುಮುಖದಿಂದ ಹೊಟ್ಟೆತುಂಬ ಬಡಿಸಿದ ಜಯಲಕ್ಷ್ಮಿಯವರನ್ನು ‘ಹಾಸ್ಟೆಲ್ ಅಕ್ಕ’ ಎಂಬ ಪ್ರೀತಿಯ ಹೆಸರಿನಲ್ಲಿ ಗುರುತಿಸುತ್ತಾರೆ.
ಒಂದು ರೀತಿಯಿಂದ ನೋಡಿದರೆ ಇದು ಜಯಲಕ್ಷ್ಮಿ ಅವರೊಬ್ಬರ ಕಥೆಯೇನೂ ಅಲ್ಲ. ಆ ಕಾಲದ ಮಲೆನಾಡಿನ ಹಳ್ಳಿಗಳ ಯಾವುದೇ ಸಂಸಾರವನ್ನು ಅಥವಾ ಗ್ರಾಮಾಂತರ ಪ್ರದೇಶದ ಯಾವುದೇ ಉದ್ಯೋಗ ವನ್ನು ಸೂಕ್ಷ್ಮವಾಗಿ ನೋಡಿದರೆ, ಆಯಾ ಕೆಲಸದ ಏಳುಬೀಳುಗಳ ಹಿಂದೆ ಆ ಮನೆಯ ಯಜಮಾನನಿಗಿಂತ ಯಜಮಾನತಿಯ ಪಾಲೇ ಹೆಚ್ಚಿರುವುದು ನಿಚ್ಚಳವಾಗಿಯೇ ಕಾಣುತ್ತದೆ. ಇವತ್ತಿನ ಕಾಲದ ಕಣ್ಣಿನಿಂದ ಇದು ಹೆಂಗಸರ ಮೇಲಿನ ದಬ್ಬಾಳಿಕೆಯೆಂದೂ ಸ್ತ್ರೀಶೋಷಣೆಯೆಂದೂ ಕಂಡರೆ ಅಚ್ಚರಿಯಿಲ್ಲ. ಆದರೆ, ಈ ‘ಮರೆಮಾಚಿದ ದುಡಿಮೆ’ಯಿಂದಾಗಿ ಹಲವಾರು ಕುಟುಂಬಗಳು ತೀರಾ ಬಡತನದಿಂದ ಸಾಮಾನ್ಯ ಸ್ಥಿತಿಗೂ ಕೆಲವು ಕುಟುಂಬಗಳು ತುಂಬ ಅನುಕೂಲದ ಮಟ್ಟಕ್ಕೂ ತಲುಪಿದ್ದಂತೂ ಸುಳ್ಳಲ್ಲ.
ಅದೇನೇ ಇರಲಿ, ಇಷ್ಟೆಲ್ಲ ಇಕ್ಕಟ್ಟಿನ ದಾರಿಗಳಲ್ಲಿ ಸಾಗಿಯೂ ಬದುಕಿನ ಬಹುಪಾಲು ಕಷ್ಟದ ದುಡಿಮೆಯನ್ನು ಸಹಿಸಿಯೂ ಜಯಲಕ್ಷ್ಮಿಯವರು ತಮ್ಮ ಸ್ಥಿತಪ್ರಜ್ಞತೆಯನ್ನೂ ಜೀವನಪ್ರೀತಿಯನ್ನೂ ಯಾವತ್ತೂ ಕಳೆದುಕೊಳ್ಳಲಿಲ್ಲ ಎಂಬುದು ಅವರ ವ್ಯಕ್ತಿತ್ವವನ್ನು ಬಲ್ಲವರಿಗೆಲ್ಲರಿಗೂ ಬಹಳ ಚೆನ್ನಾಗಿ ಗೊತ್ತಿದೆ. ನನ್ನ ಬಾಲ್ಯದಿಂದ ಇವತ್ತಿನವರೆಗಿನ ಆರೂವರೆ ದಶಕಗಳ ಕಾಲದಲ್ಲಿ ಜಯಲಕ್ಷ್ಮೀ ಅವರ ಮುಖದ ಮೇಲಿರುವ ಪ್ರೀತಿಯ ನಗೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂಬ ನನ್ನ ಸ್ವಂತದ ಅನುಭವವೇ ಇದಕ್ಕೆ ಬಹು ದೊಡ್ಡ ಸಾಕ್ಷ್ಯ. ಮಾತ್ರವಲ್ಲ, 1990ರ ದಶಕದ ಅಂತ್ಯದ ಬಳಿಕ ಕಾಕಾಲು ಕುಟುಂಬದ ಆರ್ಥಿಕ ಸ್ಥಿತಿ ಒಮ್ಮೆಲೇ ಮೇಲಕ್ಕೇರಿದರೂ ಅದು ಜಯಲಕ್ಷ್ಮೀ ಅವರ ನಡಾವಳಿಯಲ್ಲಿ ಯಾವ ಏರಿಳಿತವನ್ನೂ ತರಲಿಲ್ಲ. ಇವತ್ತಿನ ಎಂಬತ್ತರ ಹರದಲ್ಲಿಯೂ ಅಷ್ಟೇ-ವಯಸ್ಸಾದರೂ ಅದು ತೋರದಂತೆ, ಅನಾರೋಗ್ಯವಿದ್ದರೂ ಅದನ್ನು ತೋರಿಸಿ ಕೊಳ್ಳದಂತೆ, ನಗೆಯ ಆವರಣದಲ್ಲಿ ಬದುಕುವ ಅವರನ್ನು ನೋಡಿದಾಗಲೆಲ್ಲ ನನಗೆ ಜಯಲಕ್ಷ್ಮಿ ಎಂಬ ಅವರ ಹೆಸರು ಕೇವಲ ಅಂಕಿತ ನಾಮವಲ್ಲ ಅನ್ವರ್ಥಕವೂ ಹೌದೆಂದು ಅನ್ನಿಸುತ್ತದೆ.
* * *
Our Books

Reviews
There are no reviews yet.