ಜಾತ್ರಿಯ ತರುವಾಯ
ಸಂಪಾದಕರ ಮಾತು
ಡಾ. ಬಸು ಬೇವಿನಗಿಡದ ಹಾಗೂ ಚನ್ನಪ್ಪ ಅಂಗಡಿ
ಧರಣೇಂದ್ರ ಕುರಕುರಿ ಅವರ ‘ಜಾತ್ರಿ’ ಕಾದಂಬರಿ ಗ್ರಾಮ್ಯ ಜೀವನದ ಸ್ಥಿತ್ಯಂತರಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವಂತಹ ಒಂದು ಕಾದಂಬರಿ ಎನ್ನಬಹುದು. ಗ್ರಾಮಭಾರತದ ಸ್ಥಿತಿ-ಗತಿ ಮತ್ತು ಅಲ್ಲಿಯ ರಾಜಕೀಯ, ಸಾಮಾಜಿಕ ಏಳು-ಬೀಳುಗಳನ್ನು ‘ಜಾತ್ರಿ’ ಕೃತಿ ಸೋದಾಹರಣವಾಗಿ ವಿಶ್ಲೇಷಿಸುತ್ತದೆ. ಇಂತಹ ವಸ್ತುವುಳ್ಳ ಕಥೆ-ಕಾದಂಬರಿಗಳಿಗೆ ಕನ್ನಡದಲ್ಲಿ ಒಂದು ಪರಂಪರೆಯೆ ಇದೆಯೆಂದು ಹಿರಿಯ ವಿಮರ್ಶಕ ರಾದ ಡಾ. ರಾಜೇಂದ್ರ ಚೆನ್ನಿಯವರು ತುಂಬ ಸಕಾರಣವಾಗಿ ಗುರುತಿಸಿದ್ದಾರೆ. ಜೊತೆಗೆ ಕುರಕುರಿಯವರ ವಿಶಿಷ್ಟತೆ ಏನೆಂದು ತಿಳಿಸಿದ್ದಾರೆ. ಈ ಕಾದಂಬರಿಯನ್ನು ಸಹೃದಯರು, ಸಹಲೇಖಕರು ಹಾಗೂ ಹಲವು ವಿಮರ್ಶಕರು ತಮ್ಮ ಕಣ್ಣೋಟದಿಂದ ಕಂಡ ಬಗೆಗಳನ್ನು ಒಂದು ಕಡೆ ದಾಖಲಿಸುವ ಯತ್ನವಾಗಿ ‘ಜಾತ್ರಿ’ ಕಾದಂಬರಿಯ ಬಗೆಗಿನ ಲೇಖನಗಳ ಸಂಕಲನ ಇದು.
ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’ಯಿಂದ ಈ ಕಾಲದವರೆಗಿನ ಕನ್ನಡ ಕಾದಂಬರಿ ಲೋಕ ಸಮೃದ್ಧವಾಗಿ ಬೆಳೆದಿದೆ. ಅಧೋಮುಖಿಯಾಗಿರುವ ಸಾಮಾಜಿಕ ಜೀವನವನ್ನು ಸಚಿತ್ರವಾಗಿ ಹಿಡಿದಿಡಲು ಸೂಕ್ತ ಪ್ರಾಕಾರವಾಗಿ ಕಾದಂಬರಿ ತನಗೆ ಶಕ್ತವಾದ ಎಲ್ಲ ಸಾಧ್ಯತೆಗಳನ್ನು ಶೋಧಿಸಿಕೊಂಡಿದೆ. ಕೇವಲ ಬಹಿರಂಗ ಚಿತ್ರಣವನ್ನಷ್ಟೇ ಅಲ್ಲದೆ ಅಂತರಂಗದ ಸಂಘರ್ಷವನ್ನು ಸಶಕ್ತವಾಗಿ ಹಾಗೂ ಯೋಜಿತವಾಗಿ ಅಭಿವ್ಯಕ್ತಗೊಳಿಸಲು ಕಾದಂಬರಿ ಪ್ರಕಾರದಲ್ಲಿ ಹೆಚ್ಚಿನ ಅವಕಾಶಗಳಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಂದೇ ಕನ್ನಡದಲ್ಲಿ ವಸ್ತು ಮತ್ತು ವಿನ್ಯಾಸಗಳಲ್ಲಿ ಸಿದ್ಧ ಮಾದರಿಗಳನ್ನು ಮೀರಿದ ಅನೇಕ ಕಾದಂಬರಿಗಳು ನೋಡಸಿಗುತ್ತವೆ. ‘ಗಂಗವ್ವ ಗಂಗಾಮಾಯಿ’, ‘ನಟನಾರಾಯಣಿ’ ಹಾಗೂ ‘ಅವಧೇಶ್ವರಿ’ ಮುಂತಾದ ಕೃತಿಗಳನ್ನು ಬರೆದವರು ಶಂಕರ ಮೊಕಾಶಿ ಪುಣೇಕರ ಅವರು. ಒಬ್ಬರೇ ಆ ಕೃತಿಗಳನ್ನು ಬರೆದಿದ್ದರೂ ಇಲ್ಲಿ ಹೆಸರಿಸಲಾಗಿರುವ ಮೂರೂ ಕಾದಂಬರಿಗಳ ವಸ್ತು ಮತ್ತು ಶೈಲಿಗಳು ಒಂದರಿಂದ ಮತ್ತೊಂದಕ್ಕೆ ಅದೆಷ್ಟು ವಿಭಿನ್ನ, ಅದೆಷ್ಟು ವೈವಿಧ್ಯಮಯ! ಒಬ್ಬರೆ ಇವುಗಳನ್ನು ಬರೆದಿರಲಿಕ್ಕೆ ಸಾಧ್ಯವಿಲ್ಲವೆನ್ನುವಷ್ಟು ಅವುಗಳ ನಿರ್ವಹಣೆ ಇದೆ! ಒಬ್ಬ ಲೇಖಕ ಅಥವಾ ಲೇಖಕಿ ಇಂತಹ ಪ್ರಯೋಗಗಳನ್ನು ಮಾಡಲಿಕ್ಕೆ ಸಾಧ್ಯವಿರುವಾಗ ಇನ್ನು ಹಲವು ಲೇಖಕರ ಹಲವು ಕೃತಿಗಳು ಎಷ್ಟೊಂದು ಭಿನ್ನವಿಭಿನ್ನ ಆಗಿರಲಿಕ್ಕಿಲ್ಲ. ಹಾಗಾಗಿ ಕನ್ನಡ ಕಾದಂಬರಿ ಪರಂಪರೆಯ ಹಾದಿಯನ್ನು ತುಳಿಯುತ್ತಲೆ ತಮಗೆ ಸಾಧ್ಯವಾಗಿರುವ ಹೊಸ ಮಾರ್ಗವೊಂದನ್ನು ಕಂಡುಕೊಳ್ಳುವ, ಅನ್ವೇಷಿಸುವ ಕಾದಂಬರಿ ಬರವಣಿಗೆಯನ್ನು ಬಹುಶಃ ಎಲ್ಲ ಕಡೆಯೂ ನೋಡಬಹುದು. ಕನ್ನಡದಲ್ಲಿ ಅಂತಹ ಅನೇಕ ನಿದರ್ಶನಗಳು ನಮಗೆ ಗೋಚರವಾಗುತ್ತವೆ. ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕೃತಿಯ ನಿರ್ವಹಣೆ ಒಂದು ರೀತಿಯದ್ದಾಗಿದ್ದರೆ ಅವರ ‘ಬೆಟ್ಟದ ಜೀವ’ದ ನಿರ್ವಹಣೆ ಇನ್ನೊಂದು ಬಗೆಯದು. ಬಸವರಾಜ ಕಟ್ಟೀಮನಿ ಅವರ ‘ಮಾಡಿ ಮಡಿದವರು’ ಕೃತಿಯ ಓದು ಒಂದು ಬಗೆಯದಾಗಿದ್ದರೆ, ಅವರ ‘ಖಾನಾವಳಿಯ ನೀಲಾ’ ಅಥವಾ ‘ಜರತಾರಿ ಜಗದ್ಗುರು’ ಕಾದಂಬರಿಗಳು ಕಟ್ಟಿಕೊಡುವ ದರ್ಶನ ಬೇರೆ ರೀತಿಯದು. ಅಂದರೆ ಕಾಲ ಮತ್ತು ಮನೋಧರ್ಮವನ್ನು ಕಟ್ಟಿಕೊಡುವಲ್ಲಿ ಒಬ್ಬ ಲೇಖಕನ ಒಂದು ಕೃತಿ ಅದೇ ಲೇಖಕನ ಮತ್ತೊಂದು ಕೃತಿಗಿಂತ ಮೇಲ್ನೋಟಕ್ಕಾದರೂ ಭಿನ್ನವಾಗಿರುತ್ತದೆ. ಒಬ್ಬ ಲೇಖಕ ಅಥವಾ ಲೇಖಕಿಯ ಸಾಮಾಜಿಕ ಹಾಗೂ ಮಾನವೀಯ ದೃಷ್ಟಿಕೋನ ಒಟ್ಟಾರೆ ಒಂದೇ ಅನಿಸುವಂತಿದ್ದರೂ ಪ್ರತಿ ಕೃತಿಗೂ ತನ್ನದೆ ಒಂದು ವಿಶಿಷ್ಟತೆಯಿರುತ್ತದೆ. ಕತೆ, ಕವಿತೆ, ಕಾದಂಬರಿ, ಪ್ರಬಂಧ ಹೀಗೆ ವಿವಿಧ ಪ್ರಕಾರಗಳಿಗೂ ಅದನ್ನು ಅನ್ವಯಿಸಬಹುದು. ಈ ಮಾತನ್ನು ಇಲ್ಲಿ ಹೇಳುವ ಉದ್ದೇಶವೇನೆಂದರೆ ಲೇಖಕ ಧರಣೇಂದ್ರ ಕುರಕುರಿ ಅವರ ಕಾವ್ಯ ಹಾಗೂ ಅನುವಾದ ಕೃತಿಗಳು ಕಟ್ಟಿಕೊಡುವ ಸಾಮಾಜಿಕ ಒಳನೋಟಗಳು ಈ ‘ಜಾತ್ರಿ’ ಕಾದಂಬರಿಯಲ್ಲಿ ಮುಂದುವರೆದಿವೆ ಎನಿಸುವುದಾದರೂ ಲೇಖಕರ ಆಶಯಗಳಿಗೆ ಈ ಕಾದಂಬರಿಯಲ್ಲಿ ವಿಪುಲ ಅವಕಾಶಗಳು ದೊರಕಿವೆ ಎನಿಸುತ್ತದೆ.
ಐರಿಷ್ ಕತೆಗಾರ ಹಾಗೂ ಕಾದಂಬರಿಕಾರ ಫ್ರ್ಯಾಂಕ್ ಓ’ಕಾನರ್ ಹೇಳುವಂತೆ ಕಾದಂಬರಿ ಪ್ರಕಾರ ಒಂದು ಅನ್ವಯಿಕ ಕಥನಕಲೆ. ಕನ್ನಡವೂ ಸೇರಿದಂತೆ ಜಗತ್ತಿನ ಕಾದಂಬರಿ ಲೋಕ ಬಹು ಆಯಾಮಗಳಲ್ಲಿ ಬೆಳೆದುನಿಂತಿದೆ. ಕಾದಂಬರಿ ಪ್ರಕಾರ ಚಾಲ್ತಿಗೆ ಬಂದಾಗಿನಿAದ ಅದು ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೆ ಸಾಗಿದೆ. ಒಂದು ಕಾಲಕ್ಕೆ ಮತ್ತು ಸ್ವಲ್ಪಮಟ್ಟಿಗೆ ಈಗಲೂ ಅದು ಮಧ್ಯಮ ವರ್ಗದವರ ಪಾಲಿಗೆ ಶುದ್ಧ ಮನರಂಜನಾ ಕಲೆ. ವಿದ್ಯುನ್ಮಾನ ಸೌಲಭ್ಯಗಳು ಲಭ್ಯವಾಗುವ ಮೊದಲು ಜನಸಾಮಾನ್ಯರು ಚಲನಚಿತ್ರ ಹಾಗೂ ಕಾದಂಬರಿಗಳಲ್ಲಿ ಹೆಚ್ಚಿನ ವ್ಯತ್ಯಾಸಗಳನ್ನು ಮಾಡುತ್ತಿರಲಿಲ್ಲ. ಅವು ಭಿನ್ನ ಸಂಗತಿಗಳೆಂದು ಜನ ಭಾವಿಸುತ್ತಿರಲಿಲ್ಲ. ಇದೇ ಕಾರಣಕ್ಕೆ ಭಾರತೀಯ ಸಾಹಿತ್ಯ ಲೋಕದಲ್ಲಿ ಮಧ್ಯಮವರ್ಗದ ಮತ್ತು ಮಹಿಳೆಯರ ನಿರೀಕ್ಷೆಗೆ ತಕ್ಕಂತೆ ಕಾದಂಬರಿ ರಚಿಸುವ ಬರಹಗಾರರು ಹುಟ್ಟಿಕೊಂಡರು. ಜೀವನ ಅಥವಾ ಸಮಾಜದಲ್ಲಿ ತಾವು ಹೇಗಿರಬೇಕೆಂಬ ಅಭಿಲಾಷೆಯನ್ನು ಜನ ಕಾದಂಬರಿಯ ಪಾತ್ರಗಳಲ್ಲಿ ಇಟ್ಟುಕೊಂಡು ನೋಡಿ ತೃಪ್ತಿಪಡುತ್ತಿದ್ದರು. ಇದು ಕಾದಂಬರಿಗಳು ಪ್ರತಿಪಾದಿಸುವ ಸತ್ಯದ ಒಂದು ಮಗ್ಗುಲಾದರೆ ವಿಶಾಲವಾದ ಲೋಕದರ್ಶನ, ಸಮಗ್ರ ಜೀವನದರ್ಶನ ನೀಡುವ ಮತ್ತೊಂದು ಮುಖ್ಯ ಮಗ್ಗುಲು ಕಾದಂಬರಿಗೆ ಯಾವಾಗಲೂ ಇದ್ದೇ ಇದೆ.
ಧರಣೇಂದ್ರ ಕುರಕುರಿಯವರ ‘ಜಾತ್ರಿ’ ಈ ಪರಂಪರೆಯಲ್ಲಿ ಬಂದಿರುವ ವಿಶಿಷ್ಟ ಕೃತಿಯೆಂದು ಈಗಾಗಲೆ ಹಲವರಿಂದ ಚರ್ಚೆಗೆ ಒಳಗಾಗಿದೆ. ನಮ್ಮಲ್ಲಿ ಕಾದಂಬರಿಯನ್ನೆ ಮುಖ್ಯ ಪ್ರಕಾರವನ್ನಾಗಿ ಆಯ್ದುಕೊಂಡು ಬರೆದ ಬೆರಳೆಣಿಕೆಯ ಸಾಹಿತಿಗಳಿದ್ದರೆ ಕಾದಂಬರಿ ಬರವಣಿಗೆಯಲ್ಲಿ ತಮ್ಮನ್ನೇಕೆ ಒಡ್ಡಿಕೊಳ್ಳಬಾರದೆಂದು ಆ ಸಾಹಸಕ್ಕೆ ಕೈಹಾಕುವ ಸಾಹಿತಿಗಳೂ ಇದ್ದಾರೆ. ಕುರಕುರಿಯವರು ಅಂತಹ ಪ್ರಯೋಗಶೀಲತೆಯ ಪಂಥಕ್ಕೆ ಸೇರಿದವರು. ತಮ್ಮ ಶ್ರದ್ಧೆ, ಶಿಸ್ತುಬದ್ಧತೆ, ಉತ್ಸಾಹ ಹಾಗೂ ಕ್ರಿಯಾಶೀಲತೆಗಳಿಂದ ಸಾಕಷ್ಟು ಯಶಸ್ಸನ್ನೂ ಗಳಿಸಿದವರು. ವಾಸ್ತವಿಕತೆ ಮತ್ತು ವೈಚಾರಿಕತೆಗೆ ಸಾಕಷ್ಟು ಸ್ಥಳಾವಕಾಶವಿದ್ದರೂ ಹೊಸ ಲೋಕವೊಂದನ್ನು ಕಟ್ಟುವ ಕಲ್ಪಕತೆಗೆ ‘ಜಾತ್ರಿ’ ಕಾದಂಬರಿಯಲ್ಲಿ ಕೊರತೆಯಿಲ್ಲ. ದಟ್ಟವಾದ ಸಾಮಾಜಿಕ ಬದುಕಿನ ಚಿತ್ರಣವನ್ನು ನೀಡುವಾಗಲೂ ಕಾಲ್ಪನಿಕ ಲೋಕದ ಜೀವಂತಿಕೆಯನ್ನು ಕಾಯ್ದುಕೊಳ್ಳುವಲ್ಲಿ ಲೇಖಕರು ಹಿಂದೆ ಬಿದ್ದಿಲ್ಲ. ಈ ಕಾದಂಬರಿಯನ್ನು ಅವಲೋಕಿಸುವಾಗ ಕಥಾ ತಿರುಳು, ಘಟನೆ, ಪಾತ್ರ, ಸನ್ನಿವೇಶ ಮತ್ತು ಇನ್ನಿತರ ವಿವರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕ್ರಮವಿದೆ. ಇದರೊಂದಿಗೆ ಲೇಖಕರ ಅನುಭವ ಹಾಗೂ ಅವರ ದೃಷ್ಟಿಕೋನಗಳನ್ನು ಚರ್ಚಿಸುವ ಮತ್ತೊಂದು ಸಾಧ್ಯತೆಯೂ ಇದೆ. ಈ ಎರಡೂ ವಿಧಾನಗಳಿಂದ ಧರಣೇಂದ್ರ ಕುರಕುರಿ ಅವರ ‘ಜಾತ್ರಿ’ ನಮ್ಮ ಗಮನ ಸೆಳೆಯುತ್ತದೆ.
ಹೀಗೆ ಅನೇಕ ನೆಲೆಗಳಿಂದ ‘ಜಾತ್ರಿ’ ಕಾದಂಬರಿಯನ್ನು ಓದಿದ, ಅವಲೋಕಿಸಿದ, ವಿಶ್ಲೇಷಿಸಿದ ಮತ್ತು ವಿಮರ್ಶಿಸಿದ ಲೇಖನಗಳು ‘ಜಾತ್ರಿಯ ತರುವಾಯ’ ಎನ್ನುವ ಈ ಅವಲೋಕನ ಕೃತಿಯಲ್ಲಿ ಸಮಾವೇಶಗೊಂಡಿವೆ. ವಿವಿಧ ಸಂಸ್ಕೃತಿ ಹಿನ್ನೆಲೆಯ, ವಿವಿಧ ವಯೋಮಾನದ, ಅಷ್ಟೇ ಅಲ್ಲ, ವಿವಿಧ ಮನೋಧರ್ಮದ ಲೇಖಕರು ನೀಡಿರುವ ಲೇಖನಗಳು ಕಾದಂಬರಿಯ ಮಹತ್ವವನ್ನು ಹೇಳುತ್ತವೆ. ಕಾದಂಬರಿ ಒದಗಿಸುವ ನೈತಿಕ ಅರಿವಿನ ಗಡಿಯನ್ನು ಹಿಗ್ಗಿಸುವ ಕೆಲಸವನ್ನು ಇಲ್ಲಿಯ ಲೇಖನಗಳು ಮಾಡುತ್ತವೆಯೆಂದು ನಾವು ಭಾವಿಸಿದ್ದೇವೆ. ತಂತಮ್ಮ ಆಸಕ್ತಿ ಮತ್ತು ಆದ್ಯತೆಯ ಅನುಸಾರ ಲೇಖಕರು ತಾವು ಕಂಡ ಆಶಯವನ್ನು ಹೇಳಿದ್ದಾರೆ.
ಪ್ರೊ. ರಾಜೇಂದ್ರ ಚೆನ್ನಿ ಅವರು ಸ್ಥಿತಗೊಂಡ ವ್ಯವಸ್ಥೆಯೊಂದು ಅವನತಿಯ ಕಡೆ ಸಾಗುವ ಅವಸ್ಥೆಗಳನ್ನು ಗುರುತಿಸಿದ್ದಾರೆ. ಅಲ್ಲದೆ ‘ಗ್ರಾಮಾಯಣ’ ಮಾದರಿಯಲ್ಲಿ ಬಂದಿರುವ ಅನೇಕ ಕಾದಂಬರಿಗಳನ್ನು ಗುರುತಿಸುತ್ತ ಇತ್ತೀಚಿನ ಅನುಪಮಾ ಪ್ರಸಾದ ಅವರ ‘ಪಿಕ್ಕಿಹಳ್ಳದ ಗುಂಟ’ ಮತ್ತು ಜ.ನಾ.ತೇಜಶ್ರೀ ಅವರ ‘ಜೀವರತಿ’ ಕಾದಂಬರಿಗಳನ್ನು ಉಲ್ಲೇಖಿಸಿರುವುದು ತುಂಬ ಅರ್ಥಪೂರ್ಣವಾಗಿದೆ. ಸುನಂದಾ ಕಡಮೆ ಅವರು ಕಥಾನಾಯಕ ಪಾಂಡುರಂಗನಲ್ಲಿ ಉಂಟಾಗುವ ಬದಲಾವಣೆ ಕಾಲದ ಸ್ವರೂಪಕ್ಕೆ ಸಂಬಂಧಿಸಿದ್ದೆಂದು ಗುರುತಿಸುತ್ತಾರೆ. ಆತನೊಂದಿಗೆ ಸ್ನೇಹ ಬೆಳೆಸಿರುವ ಚೆಲುವಿ ಇಲ್ಲಿ ಶೋಷಣೆಯ ಒಂದು ಸರಕು ಎಂಬುದನ್ನು ಸುನಂದಾ ತುಂಬ ಅರ್ಥಪೂರ್ಣವಾಗಿ ವಿಶ್ಲೇಷಣೆ ಮಾಡಿದ್ದಾರೆ. ತುಂಬು ಹರೆಯದಲ್ಲೆ ವಿಧವೆಯಾಗಿರುವ ಹಿಂದುಳಿದ ಜಾತಿಯ ಚೆಲುವಿ ಮೇಲ್ಜಾತಿಯ ಪಾಂಡುರಂಗನಿಗಾಗಿ ತನ್ನ ಸರ್ವಸ್ವವನ್ನೆ ಧಾರೆ ಎರೆದಿದ್ದಾಳೆ. ಅವನ ಪದತಲದಲ್ಲಿ ಬಿದ್ದಿರುವ ಹೂವೆಂದು ತನ್ನನ್ನು ಪರಿಗಣಿಸಿಕೊಂಡು ಆಕೆ ಅವನ ಉದ್ಧಾರಕ್ಕೆ ದುಡಿಯುವ ಪರಿಯನ್ನು ಅವರು ಪರೀಕ್ಷೆಗೆ ಒಡ್ಡುತ್ತಾರೆ. ಸಾಂಪ್ರದಾಯಿಕ ಕುರುಡು ನಂಬಿಕೆಗಳು ಹೆಣ್ಣಿನ ಶೋಷಣೆಯನ್ನು ಅವಿರತವಾಗಿ ಮಾಡಿವೆಯೆಂದು ಅವರು ಅಭಿಪ್ರಾಯಪಡುತ್ತಾರೆ. ಚೆಲುವಿಯಂತಹ ಮಹಿಳೆಯ ದುರಂತವನ್ನು ಸುನಂದಾ ಸ್ಪಷ್ಟವಾಗಿ ಗುರುತಿಸಿದ್ದಾರೆ. ಇಂತಹುದೆ ಅನಿಸಿಕೆಯನ್ನು ಶ್ರೀದೇವಿ ಕೆರೆಮನೆ ಅವರೂ ದಾಖಲು ಮಾಡಿದ್ದಾರೆ. ‘ಹೆಂಡತಿ’ ಹಾಗೂ ‘ಇಟ್ಟುಕೊಂಡವಳು’ ಎಂದು ಹೆಣ್ಣಿನ ಮೇಲೆ ಪುರುಷಲೋಕ ಎಸಗುತ್ತ ಬಂದಿರುವ ಅಪರಾಧಗಳನ್ನು ಪ್ರೀತಿ-ಪ್ರೇಮ ಇತ್ಯಾದಿಗಳ ಮುಸುಕಿನಲ್ಲಿ ಮುಚ್ಚಿಡಲಾಗಿದೆ ಯೆಂದು ಅವರು ಹೇಳುತ್ತಾರೆ.
ಇಲ್ಲಿನ ಕಥಾವಸ್ತು ತುಂಬ ಸ್ವಾರಸ್ಯಕರವೆಂದು ಬಣ್ಣಿಸುವ ಎಂ.ವಿ.ಶರ್ಮಾ ತದ್ದಲಸೆ ಅವರು ‘ಜಾತ್ರಿ’ಯಲ್ಲಿ ಬಯಲಸೀಮೆಯ ಭಾಷೆ ಮತ್ತು ಮಲೆನಾಡಿನ ನಯನ ಮನೋಹರ ಚಿತ್ರಗಳು ಕೈಹಿಡಿದು ನಡೆಯುವ ಪರಿ ವಿಶಿಷ್ಟವಾದದ್ದೆಂದು ಹೇಳುತ್ತಾರೆ. ಪ್ರಕೃತಿ ವಿಕೋಪಗಳು ಹೇಗೆ ಜನರ ಸಂಕಷ್ಟಕ್ಕೆ ಕಾರಣವಾಗುತ್ತವೆ ಎಂಬುದನ್ನೂ, ಊರ ಜಾತ್ರೆ ಆ ಸಂಕಟಗಳಿಂದ ಬಿಡುಗಡೆ ಪಡೆಯುವ ಮಾರ್ಗವಾಗುವುದನ್ನೂ ಅವರು ಬರೆದಿದ್ದಾರೆ. ಶ್ರೀನಿವಾಸ ವಾಡಪ್ಪಿ ಅವರು ಫ್ರೆಂಚ್ ಕಾದಂಬರಿಕಾರ ಬಾಲ್ಜಾಕ್‌ನನ್ನು ಉಲ್ಲೇಖಿಸಿರುವುದು ತುಂಬ ಸ್ವಾರಸ್ಯಕರ ವಾಗಿದೆ. ‘ಪ್ರತಿಯೊಂದು ದೊಡ್ಡ ಸಂಪತ್ತಿನ ಹಿಂದೆ ಒಂದಲ್ಲ ಒಂದು ಅಪರಾಧವಿರುತ್ತದೆ’ ಎನ್ನುವ ಬಾಲ್ಜಾಕ್‌ನ ಮಾತು ‘ಜಾತ್ರಿ’ ಕಾದಂಬರಿಯ ಪಾಂಡುರಂಗರಾಯನಿಗೆ ಸಂಪೂರ್ಣ ಅನ್ವಯವಾಗುತ್ತದೆ!
ಡಾ. ವಿಜಯನಳಿನಿ ರಮೇಶ ಅವರ ಪ್ರಕಾರ ಇದೊಂದು ನಾಯಕ-ನಾಯಕಿಯರಿಲ್ಲದ ಗ್ರಾಮ್ಯಬದುಕೇ ಕೇಂದ್ರವಾದ ಕಥಾನಕ. ಸ್ತ್ರೀ ಪಾತ್ರಗಳ ತ್ಯಾಗ, ಸಹನೆ, ಸಹಕಾರಕ್ಕೆ ಇಲ್ಲಿ ಸೂಕ್ತ ಮನ್ನಣೆ ಸಿಕ್ಕಂತಿಲ್ಲ ಎಂದು ವಿಜಯನಳಿನಿ ಅವರು ಅಭಿಪ್ರಾಯಪಡುತ್ತಾರೆ. ಇತರೆ ಅನೇಕ ಲೇಖಕರಂತೆ ಅವರಿಗೂ ರಾವ್ ಬಹಾದ್ದೂರರ ‘ಗ್ರಾಮಾಯಣ’ ಕಾದಂಬರಿಯ ನೆರಳು ಇಲ್ಲಿ ಕಂಡಿದೆ. ಡಾ. ಪ್ರಜ್ಞಾ ಮತ್ತೀಹಳ್ಳಿ ಅವರು ಹೇಳುವುದೇನೆಂದರೆ ಕಾದಂಬರಿಕಾರರು ಕೊಡುವ ವಿವರಗಳು ಓದುಗರ ಕಣ್ಣ ಮುಂದೆ ಕಟ್ಟಿದ ದೃಶ್ಯಗಳಾಗಿವೆ. ಅಷ್ಟೊಂದು ಚಿತ್ರಕ ಶಕ್ತಿ ಇಲ್ಲಿಯ ಭಾಷೆಗಿದೆ. ಬದುಕಿನ ಏಕತಾನತೆಯನ್ನು ಮೀರಿ ವೈವಿಧ್ಯಮಯ ಜನಸಮುದಾಯ ಏಕತ್ರವಾಗುವ ಪರಿಷೆಯೆ ಜಾತ್ರೆ ಎಂದು ಪ್ರಜ್ಞಾ ಅಭಿಪ್ರಾಯಪಡುತ್ತಾರೆ. ಚಾಮರಸನ ‘ಪ್ರಭುಲಿಂಗಲೀಲೆ’ಯನ್ನು ಉಲ್ಲೇಖಿಸಿರುವ ಸುಬ್ರಾಯ ಮತ್ತೀಹಳ್ಳಿ ಅವರು ಹೇಳಿರುವುದು ವಿಶಿಷ್ಟವಾಗಿದೆ. ಯಾವಾಗ್ಯಾವಾಗ ಭಾರತೀಯ ಕಾದಂಬರಿಗಳು ಗ್ರಾಮೀಣ ಸಂವೇದನೆಯನ್ನು ಕಥಾವಸ್ತುವನ್ನಾಗಿಸಿಕೊಂಡಿವೆಯೋ ಆವಾಗಲೆಲ್ಲ ಯಶಸ್ಸಿನ ಪ್ರಮಾಣ ಹೆಚ್ಚಾಗಿದೆಯೆಂದು ಸುಬ್ರಾಯ ಮತ್ತೀಹಳ್ಳಿ ಹೇಳುತ್ತಾರೆ. ವಿದೇಶಿ ಶೈಲಿಯನ್ನು ಅನುಕರಿಸುತ್ತಿರುವ ವರ್ತಮಾನದ ಬದುಕಿನ ಶಿಥಿಲತೆಗೆ ಪರಿಹಾರ ಕಂಡುಕೊಳ್ಳುವುದು ಇಂತಹ ಬದುಕಿನಲ್ಲಿಯೆ ಇದೆಯೆಂದು ಅವರು ಹೇಳುತ್ತಾರೆ. ಆಧುನಿಕತೆ ತಂದಿರುವ ಆಡಂಬರ ಹಾಗೂ ಕೃತ್ರಿಮತೆ ಸೃಷ್ಟಿಸಿರುವ ಅಯೋಮಯ ಸ್ಥಿತಿಗೆ ನಮ್ಮ ಪಾರಂಪರಿಕ ಬದುಕಿನ ದೇಸಿ ತಾತ್ವಿಕತೆ ಒಂದು ಒಳ್ಳೆಯ ಪರಿಹಾರವಾಗಬಲ್ಲುದೆಂದು ‘ಜಾತ್ರಿ’ ಕಾದಂಬರಿ ಹೇಳುತ್ತದೆಯೆಂದು ಸುಬ್ರಾಯ ಮತ್ತಿಹಳ್ಳಿ ಅಭಿಪ್ರಾಯಪಟ್ಟಿದ್ದಾರೆ. ಗ್ರಾಮ್ಯ ಬದುಕನ್ನು ಹಲವು ಕೋನಗಳಲ್ಲಿ ಕಂಡ ಬಗೆಯನ್ನು ಧರಣೇಂದ್ರ ಕುರಕುರಿ ಅವರು ಸಮರ್ಥವಾಗಿ ಚಿತ್ರಿಸಿದ್ದಾರೆಂದು ಆರ್.ಜಿ.ಹಳ್ಳಿ ನಾಗರಾಜ್ ಹೇಳಿರುವುದು ತುಂಬ ಸರಿಯಾದ ಮಾತು. ದ್ವೇಷ, ಮೋಸ, ವಂಚನೆಗಳು ಇಲ್ಲಿ ಆಸ್ಪದ ಪಡೆದಂತೆ ಪ್ರೀತಿ, ವಾತ್ಸಲ್ಯ, ಜಾತ್ಯಾತೀತ ಭಾವಗಳೂ ಮೈದಾಳಿವೆಯೆಂದು ಅವರು ಹೇಳುತ್ತಾರೆ.
ಪ್ರಸ್ತುತ ಕಾದಂಬರಿ ಪ್ರತಿನಿಧಿಸುವ ಜೀವನಕ್ರಮದಲ್ಲಿ ಕಾಲಾತೀತ ಮೌಲ್ಯಗಳಿವೆ ಎಂಬುದನ್ನು ಶೋಭಾ ಹೆಗಡೆಯವರಿಗೆ ಹೇಳಬೇಕಾಗಿದೆ. ಅದಕ್ಕಾಗಿ ಅವರು ಶಂಕರಪ್ಪ, ಪಾಂಡುರಂಗರಾಯ, ಬಲವಂತ ಮುಂತಾದ ಪಾತ್ರಗಳ ಉದಾಹರಣೆಗಳನ್ನು ನೀಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕಾದಂಬರಿಯಲ್ಲಿ ಮಣ್ಣಿನ ವಾಸನೆಯ ಉಸಿರಾಟವೊಂದು ನಮಗೆ ಕೇಳಿಸುತ್ತದೆಯೆಂದು ಅವರು ಹೇಳುತ್ತಾರೆ. ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ‘ಜಾತ್ರಿ’ ಕೇವಲ ಮರ‍್ನಾಲ್ಕು ಊರುಗಳ ಕಥೆಯಾಗಿರದೆ ಇಡೀ ಗ್ರಾಮಭಾರತದ ಕಥೆಯೆಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜೀವನದಲ್ಲಿ ಒಳಿತು ಕೆಡುಕುಗಳು ಮಿಶ್ರಣಗೊಂಡಿದ್ದು ಇದು ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆಯೆಂದು ಹೇಳುತ್ತ ಇಲ್ಲಿಯ ಮೂರು ಕಾಲಘಟ್ಟಗಳನ್ನು ಉದಾಹರಿಸುತ್ತಾರೆ. ಸತೀಶ ಕುಲಕರ್ಣಿ ಅವರು ‘ಜಾತ್ರಿ’ಯನ್ನು ಕಾಲಾಂತರದ ‘ಜೀವಜಾತ್ರಿ’ಯನ್ನಾಗಿ ಪರಿಭಾವಿಸುವ ಪರಿ ವಿಶಿಷ್ಟವಾದುದು. ತಾನು ಆರಂಭಗೊಂಡ ನೆಲೆಯಿಂದ ಕೊನೆಗೊಳ್ಳದ ಕಾದಂಬರಿ ಹತ್ತಾರು ಆಯಾಮಗಳನ್ನು ಪಡೆದಿದೆಯೆನ್ನುತ್ತಾರೆ. ಕಾದಂಬರಿಕಾರರು ಹೆಣೆದ ಕಥಾಸಂವಿಧಾನವನ್ನು ಮೀರಿ ಹತ್ತು-ಹಲವು ದಿಕ್ಕಿನಲ್ಲಿ ವ್ಯಾಪಿಸಿಕೊಂಡಿದ್ದನ್ನು ಅವರು ಸರಿಯಾಗಿಯೆ ಗುರುತಿಸಿದ್ದಾರೆ. ನಾಗ ಎಚ್. ಹುಬ್ಳಿಯವರು ಇಲ್ಲಿನ ಎರಡು ಜಾತ್ರೆಗಳನ್ನು ಸಾಮಾಜಿಕ ಸಂಘಟನೆ ಮತ್ತು ವಿಘಟನೆಗಳನ್ನು ಸಂಕೇತಿಸುವ ಪ್ರತಿಮೆಗಳನ್ನಾಗಿ ಗುರುತಿಸಿರುವುದು ಅತ್ಯಂತ ಸೂಕ್ತವಾಗಿದೆ. ಡಾ. ಬ್ರಹ್ಮದೇವ ಹದಳಗಿ ಅವರು ಕುರಕುರಿಯವರನ್ನು ಪ್ರಯೋಗಶೀಲ ಲೇಖಕರೆಂದು ಕರೆಯುತ್ತಾರೆ. ತಮ್ಮ ವಿಶ್ಲೇಷಣೆಯಲ್ಲಿ ಬ್ರಿಟಿಷ್ ಕಾಲದ ಜಮೀನ್ದಾರಿ ವ್ಯವಸ್ಥೆ, ಭೂಮಿ ಒಡೆತನದ ಪ್ರಶ್ನೆ ಮತ್ತು ಸಂಘರ್ಷ, ಲೈಂಗಿಕ ಸಂಬಂಧ ಮತ್ತು ವಾಡೆಯ ವಾರಸುದಾರಿಕೆಯ ಪ್ರಶ್ನೆ, ವಸಾಹತುಶಾಹಿ ಪ್ರಭಾವ ಮತ್ತು ಶೈಕ್ಷಣಿಕ ಪ್ರಜ್ಞೆ, ಕಾದಂಬರಿಯ ಬಂಧ, ಶೈಲಿ, ನಿರೂಪಣೆ ಮುಂತಾದವುಗಳ ಅವಲೋಕನ ಮಾಡುತ್ತ ಅವುಗಳನ್ನು ಉಪಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಿದ್ದಾರೆ.
ನಾಗೇಶ ಜೆ. ನಾಯಕ ಅವರು ಗ್ರಾಮೀಣ ಸೊಗಡಿನ ಕಾದಂಬರಿ ಎಂದಿರುವುದು ಒಪ್ಪುವಂತಹುದು. ಮಾಲತಿ ಗೋರೆಬೈಲ್ ಇದನ್ನು ದೇಸಿ ಹಾಗೂ ಜವಾರಿ ಕಾದಂಬರಿಯೆಂದು ಕರೆದಿರುವುದು ಅತ್ಯಂತ ಸೂಕ್ತವಾಗಿದೆ. ಶಿರೀಷ ಜೋಶಿ ಅವರ ಲೇಖನದಲ್ಲಿ ಮನುಷ್ಯನ ಮನೋರಂಗದಲ್ಲಿ ನಡೆಯುವ ಭಾವನಾಜಾತ್ರೆಯ ಉಲ್ಲೇಖವಿದೆ. ಈ ಕೃತಿಯ ಕಥಾವಸ್ತು ಹಳೆಯದಿರಬಹುದು. ಆದರೆ ಅದರ ಓದು ವರ್ತಮಾನದ್ದು ಎಂದು ದಿವಾಕರ ಹೆಗಡೆ ಅಭಿಪ್ರಾಯಪಡುತ್ತಾರೆ. ನೈತಿಕ ಮತ್ತು ಧಾರ್ಮಿಕ ಶ್ರದ್ಧೆಗಳನ್ನು ಇದು ಬಣ್ಣಿಸುತ್ತದೆ ಎಂದಿದ್ದಾರೆ. ಎಲ್.ಎಸ್.ಶಾಸ್ತ್ರಿ ಅವರು ಈ ಕಾದಂಬರಿಯಲ್ಲಿ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಭಾರತದ ಆಗು-ಹೋಗುಗಳು ಚಿತ್ರಿಸಲ್ಪಟ್ಟಿವೆ ಎಂದಿದ್ದಾರೆ. ಡಾ. ಪಿ.ಜಿ.ಕೆಂಪಣ್ಣವರ, ಡಾ. ಶ್ಯಾಮಸುಂದರ ಬಿದರಕುಂದಿ, ಡಾ. ಎಸ್.ಪಿ.ಪದ್ಮಪ್ರಸಾದ, ತಾರಾ ಹೆಗಡೆ, ಡಿ.ಎಸ್.ನಾಯ್ಕ್ ಮುಂತಾದ ಲೇಖಕರು ಈ ಕಾದಂಬರಿಯ ಬಗ್ಗೆ ಹೇಳಿರುವುದು ವಿಶಿಷ್ಟವಾಗಿದೆ. ವಿಜಯಕಾಂತ ಪಾಟೀಲ ಅವರು ‘ಜಾತ್ರಿ’ ಮತ್ತು ಧರಣೇಂದ್ರ ಕುರಕುರಿ ಅವರ ವ್ಯಕ್ತಿತ್ವವನ್ನು ಒಂದು ಕವಿತೆಯಲ್ಲಿ ಕಟ್ಟಿಕೊಟ್ಟಿರುವುದು ತುಂಬ ಸೊಗಸಾಗಿದೆ. ಸಂಪಾದಕರಾಗಿರುವ ನಮ್ಮ ಲೇಖನಗಳೂ ಇಲ್ಲಿ ಇವೆ. ಈ ಎಲ್ಲ ಲೇಖನಗಳ ಸಂಪಾದನೆ ಮಾಡುವ ಜವಾಬ್ದಾರಿ ನಮ್ಮದೆಂದು ಪ್ರಕಾಶಕರು ಹೇಳುವ ಮೊದಲು ಅವು ಬರೆದಂಥವು! ಇಲ್ಲಿಯ ಲೇಖನಗಳು ತಮ್ಮಷ್ಟಕ್ಕೆ ತಾವು ಒಂದು ಬಂಧವನ್ನು ರೂಪಿಸಿಕೊಂಡು ಕೃತಿಯ ಹೆಣಿಕೆಯಲ್ಲಿ ಅಡಕಗೊಂಡಿವೆಯೆಂದು ನಾವು ಭಾವಿಸುತ್ತೇವೆ. ಉತ್ತರ ಕರ್ನಾಟಕದ ಆಡುಭಾಷೆ, ದೇಸಿ ನುಡಿಗಟ್ಟು, ಪಡೆನುಡಿ, ನಾಣ್ಣುಡಿ ಮುಂತಾದವು ಕಾದಂಬರಿಯ ಶಿಲ್ಪಕ್ಕೆ ಮೆರುಗು ಕೊಟ್ಟಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ಬಹುತೇಕ ಎಲ್ಲ ಲೇಖಕರು ಹೇಳಿಯೆ ಹೇಳಿದ್ದಾರೆ. ಈ ಕೃತಿಗಾಗಿ ಬಂದಿರುವ ಎಲ್ಲ ಲೇಖನಗಳನ್ನು ಓದಿ ಪ್ರಸ್ತಾವನೆಯ ರೂಪದಲ್ಲಿ ಒಂದಷ್ಟು ಮಾತುಗಳನ್ನಾಡಲು ಸಾಧ್ಯವಾಗಿರುವುದಕ್ಕೆ ಎಲ್ಲರಿಗೂ ನಮ್ಮ ಕೃತಜ್ಞತೆಗಳು.
ಸವಿನುಡಿ / 3
ಸಂಪಾದಕರ ಮಾತು / 5
- ಸ್ಥಿತಗೊಂಡ ವ್ಯವಸ್ಥೆಯ ಚಿತ್ರಣ -ಡಾ. ರಾಜೇಂದ್ರ ಚೆನ್ನಿ / 13
- ಗ್ರಾಮಭಾರತದ ಚಿತ್ರ: ‘ಜಾತ್ರಿ’ -ಸುನಂದಾ ಕಡಮೆ / 15
- ಸುಪ್ತವಾಗಿರುವ ಹೆಣ್ಣೊಳದನಿ -ಶ್ರೀದೇವಿ ಕೆರೆಮನೆ / 22
- ಸ್ವಾರಸ್ಯಕರ ವಸ್ತು: ‘ಜಾತ್ರಿ’ -ಎಂ.ವಿ.ಶರ್ಮಾ / 25
- ಬದುಕೆಂಬ ‘ಜಾತ್ರಿ’ಯಲ್ಲಿ -ಶ್ರೀನಿವಾಸ ವಾಡಪ್ಪಿ / 27
- ಧರಣೇಂದ್ರ ಕುರಕುರಿಯವರ ‘ಜಾತ್ರಿ’ -ಡಾ. ವಿಜಯನಳಿನಿ ರಮೇಶ / 32
- ಗ್ರಾಮೀಣ ಸಂವೇದನೆಯ ‘ಜಾತ್ರಿ’ -ಡಾ. ಪ್ರಜ್ಞಾ ಮತ್ತಿಹಳ್ಳಿ / 35
- ರಸ ತುಂಬಿದ ಪಾತ್ರೆ: ‘ಜಾತ್ರಿ’ -ಸುಬ್ರಾಯ ಮತ್ತೀಹಳ್ಳಿ / 38
- ಜಾತ್ರಿ: ಜೀವಜಾತ್ರೆಯ ಕಥೆ -ಡಾ. ಶೋಭಾ ಹೆಗಡೆ / 43
- ಇತಿಹಾಸದ ಪಲ್ಲಟಗಳನ್ನು ಶೋಧಿಸುವ ಜಾತ್ರಿ -ಮಲ್ಲಿಕಾರ್ಜುನ ಶೆಲ್ಲಿಕೇರಿ / 46
- ಕಾಲಾಂತರದ ‘ಜೀವ ಜಾತ್ರಿ’ -ಸತೀಶ ಕುಲಕರ್ಣಿ / 52
- ವಿನೂತನ ಮಾದರಿಯ ಕಾದಂಬರಿ ‘ಜಾತ್ರಿ’ -ಪ್ರೊ. ನಾಗ ಎಚ್. ಹುಬ್ಳಿ / 55
- ಜವಾರಿ ಕಾದಂಬರಿ: ಜಾತ್ರಿ -ಮಾಲತಿ ಗೋರೆಬೈಲ್ / 62
- ‘ಜಾತ್ರಿ’ ಕಾದಂಬರಿಯ ಕುರಿತು ಒಂದಿಷ್ಟು -ಶಿರೀಷ ಜೋಶಿ / 64
- ಹಳೆಯ ಕೊಂಡಿಗೆ ಹೊಸ ಹೊಳಪು ‘ಜಾತ್ರಿ’ -ದಿವಾಕರ ಹೆಗಡೆ / 70
- ಧರಣೇಂದ್ರ ಕುರಕುರಿಯವರ ‘ಜಾತ್ರಿ’ -ಎಲ್.ಎಸ್.ಶಾಸ್ತ್ರಿ / 76
- ‘ಜಾತ್ರಿ’: ಒಂದು ಅನಿಸಿಕೆ -ತಾರಾ ಹೆಗಡೆ / 79
- ಆಡುನುಡಿಯ ಸೊಗಡಿನ ಕಾದಂಬರಿ ‘ಜಾತ್ರಿ’ -ಡಿ.ಎಸ್.ನಾಯ್ಕ / 83
- ಜಾತ್ರಿ: ಬದುಕಿನ ಭಾಷೆ -ಚನ್ನಪ್ಪ ಅಂಗಡಿ / 86
- ಸಾಮುದಾಯಿಕ ಬದುಕಿನ ಅನನ್ಯ ಚಿತ್ರಣವಾಗಿ ‘ಜಾತ್ರಿ’ -ಡಾ. ಬಸು ಬೇವಿನಗಿಡದ / 97
- ಪ್ರಯೋಗಶೀಲ ಕಾದಂಬರಿ: ‘ಜಾತ್ರಿ’ -ಡಾ. ಬ್ರಹ್ಮದೇವ ಹದಳಗಿ / 105
- ಗ್ರಾಮೀಣ ಬದುಕಿನ ಚಿತ್ರಣ: ‘ಜಾತ್ರಿ’ -ನಾಗೇಶ್ ಜೆ. ನಾಯಕ / 114
- ಗ್ರಾಮ್ಯ ಜೀವನದ ‘ಜಾತ್ರಿ’ -ಡಾ. ಪಿ.ಜಿ.ಕೆಂಪಣ್ಣವರ / 118
- ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರದ ನೆಲೆಯ ಹುಡುಕಾಟದ ‘ಜಾತ್ರಿ’ -ಆರ್.ಜಿ.ಹಳ್ಳಿ ನಾಗರಾಜ / 122
- ಗ್ರಾಮೀಣ ಬದುಕಿನ ಅಪರೂಪದ ಕಾದಂಬರಿ ‘ಜಾತ್ರಿ’ -ಮಹಾಲಿಂಗೇಶ್ವರ ಸೂರ್ಯಂಬೈಲ್ / 128
- ಒಂದು ಅನಿಸಿಕೆ -ಡಾ. ಶ್ಯಾಮಸುಂದರ ಬಿದರಕುಂದಿ / 129
- ಸ್ಪಂದನೆ -ಡಾ. ಎಸ್.ಪಿ.ಪದ್ಮಪ್ರಸಾದ / 130
- ಪತ್ರಿಕೆಗಳ ದೃಷ್ಟಿಯಲ್ಲಿ ‘ಜಾತ್ರಿ’ / 131
- ಬದುಕೇ ಒಂದು ಜಾತ್ರಿ! (ಕವಿತೆ) -ವಿಜಯಕಾಂತ ಪಾಟೀಲ / 133
ಛಾಯಾಚಿತ್ರಗಳು / 135
ಪ್ರೊ. ಧರಣೇಂದ್ರ ಕುರಕುರಿಯವರ ಪರಿಚಯ / 137
ಲೇಖಕರ ವಿಳಾಸ / 142
Our Books

Reviews
There are no reviews yet.