ವ್ಯಾಖ್ಯಾನವಾಗುವ ಕಥನ
(ಮೂಲ ಕೃತಿಗೆ ಬರೆದ ಮುನ್ನುಡಿ)
ಹೊಸ ತಲೆಮಾರಿನ ಮಂದಿಯ ನಡವಳಿಕೆಯ ಮಾದರಿಗಳಲ್ಲಿ ಸಂಚಾರ ನಡೆಸುತ್ತಿರುವುದು ಬದುಕು ಒಂದು ಬೃಹತ್ ಸಂಕಥನವೆಂಬ ನಂಬಿಕೆಯಿರಬಹುದೇ ಎಂಬ ಸಂದೇಹವು ಸಹಜವಾಗಿ ಹುಟ್ಟಿಕೊಳ್ಳುವುದಿದೆ. ಜೀವಿಸಬೇಕಾದದ್ದು ಹೀಗೆಯೇ ಎಂಬ ಅಂತಿಮ ತೀರ್ಪಿನ ಆದೇಶ ಪತ್ರಕ್ಕೆ ಇವತ್ತು ಅರ್ಥವಿಲ್ಲದಾಗಿದೆ. ಇಷ್ಟಾನಿಷ್ಟಗಳು ಮಾತ್ರವಲ್ಲ, ವೈಯಕ್ತಿಕ ಅನುಭವ ಗಳಿಂದಲೂ ನೇರವಾಗಿ ಸಿಗುವ ಪಾಠಗಳೂ ಸ್ವಂತ ಅನ್ವೇಷಣೆಗಳೂ ಬದುಕಿನ ಗತಿಯನ್ನು ನಿರ್ಧರಿಸುವ ಕಾಲವಿದು. ಆದ್ದರಿಂದಲೇ ಹೊಸ ತಲೆಮಾರು ಹಳಬರಿಗೆ ಹಿಡಿಸದ ವಿಚಾರಗಳು ಹಾಗೂ ಪ್ರವೃತ್ತಿಗಳ ಮೂಲಕ ಸಂಭ್ರಮದಿಂದ ಮುಂದೆ ಸಾಗುತ್ತಿದೆ. ಅದನ್ನು ಅರಾಜಕತೆಯೆಂದು ಹೇಳಿದರೆ ಅದು ಆಧುನಿಕತೆಯ ಜತೆಗೆ ಅಸ್ತಮಿಸಿಲ್ಲವೇ ಎಂದು ಅವರು ಪ್ರಶ್ನಿಸುತ್ತಾರೆ. ಯಾಕೆಂದರೆ ಯಾವ ಪ್ರಜೆಗೆ ಬೇಕಾದರೂ ರಾಜನಾಗುವ ಸಾಧ್ಯತೆಯು ಖಚಿತವಾಗಿರುವ ಜಾಗದಲ್ಲಿ ಅರಾಜಕತೆಯೆಂಬ ಕಲ್ಪನೆಗೆ ಏನರ್ಥ? ಏಳುತ್ತಿರುವ ವ್ಯಕ್ತಿಪ್ರಜ್ಞೆ ಮತ್ತು ಸ್ವಾತಂತ್ರ್ಯದ ಬಯಕೆಗಳು ಕೇಂದ್ರ ವ್ಯವಸ್ಥೆಗಳಿಂದ ವ್ಯವಹಾರಗಳನ್ನೆಲ್ಲ ಸ್ವತಂತ್ರವಾಗಿಸುವ ಕಾಲವಿದು. ನೂರಾರು ಅವಕಾಶಗಳು ಸೃಷ್ಟಿಸಲ್ಪಟ್ಟು ಅವುಗಳನ್ನು ಉಪಯೋಗಿಸಿಕೊಂಡು ಯಶಸ್ಸು ಪಡೆಯುವವರು ಮಾತ್ರವೇ ಸಮರ್ಥರೆನ್ನಿಸಿಕೊಳ್ಳುವ ಕಾಲವನ್ನು ಆಧುನಿಕೋತ್ತರ ಕಾಲಘಟ್ಟವು ಇಂದು ಪರಿಚಯಿಸುತ್ತಿದೆ. ಈ ಪೈಪೋಟಿಯಲ್ಲಿ ಸಂದೇಹ ಮತ್ತು ವಿಚಾರಗಳ ಕಾಲವಿಳಂಬಕ್ಕೆ ಸ್ವಲ್ಪವೂ ಸಾಧ್ಯತೆ ಇಲ್ಲದಿರಬಹುದು. ಸಮಾಜದ ಸಂಘಟನೆಯಲ್ಲಿ ಇದು ಉಂಟು ಮಾಡುವ ಸಂಚಲನಗಳು ಗುಣಾತ್ಮಕವಾಗಿವೆಯೇ ಎಂಬುದನ್ನು ಕಾಲವೇ ಸ್ಪಷ್ಟಪಡಿಸಬೇಕಾಗಿದೆ. ಯಾಕೆಂದರೆ ಹಿಂದೆಂದೂ ಇಲ್ಲದ ರೀತಿಯಲ್ಲಿ ಸಮಾಜವು ಸಂದೇಹದ ಬೃಹತ್ ಕಾರಂಜಿಯಲ್ಲಿ ಸಿಲುಕಿ ಉಸಿರಾಡಲು ಪಡಬಾರದ ಕಷ್ಟ ಪಡುತ್ತಿದೆ. ರಾಜಕೀಯ, ಧರ್ಮ ಮೊದಲಾದ ಜನಸಾಮಾನ್ಯರು ನಂಬುವ ಬೃಹದಾಖ್ಯಾನಗಳೆಲ್ಲವೂ ಅವಿಶ್ವಾಸದ ನೆರಳಿನಲ್ಲಿವೆ. ಇಂಥ ಒಂದು ಪರಿಸ್ಥಿತಿಯನ್ನು ಹಿಂದಿನ ಯಾವುದಾದರೂ ತಲೆಮಾರು ಅನುಭವಿಸಿದೆಯೇ ಎಂಬುದು ಸಂದೇಹಾಸ್ಪದ. ಹೀಗೆ ಆತ್ಮಸಂಘರ್ಷದ ಸುಳಿಯೊಳಗೆ ಸಿಲುಕಿ ಹೆಣಗಾಡುತ್ತಿರುವ ತಲೆಮಾರುಗಳ ಬಗ್ಗೆ ಚಿಂತಿಸುತ್ತಿರುವ ಹೊತ್ತಿನಲ್ಲಿ ಈ ಕಾದಂಬರಿ “ಅಪರ್ಣಾಳ ಸೆರೆಮನೆಗಳು (ಅಶ್ವತಿಯದ್ದೂ)” ಕೈ ಸೇರಿತು.
ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ ಮಹಾವ್ಯಕ್ತಿ ತಿಳಿಯದೆಯೇ ಒಪ್ಪಿದ ವಾಸ್ತವವಾಗಿದೆ ಬದುಕು ಒಂದು ಸಂಕಥನ ಅನ್ನುವುದು. ಬದುಕು ಮತ್ತು ಕಥನಗಳ ಎಳೆಗಳನ್ನು ಜೋಡಿಸಿ ಅವುಗಳು ಭಿನ್ನವಲ್ಲವೆಂದೂ ಸಾಮಾನ್ಯ ಸ್ಥಳಗಳ ಸಂಗಮವೆಂದೂ ಸ್ಥಾಪಿಸುವ ಕಾದಂಬರಿಯಾಗಿದೆ ಚಂದ್ರಮತಿಯವರ “ಅಪರ್ಣಾಳ ಸೆರೆಮನೆಗಳು (ಅಶ್ವತಿಯದ್ದೂ)”. ಅಪರ್ಣಾ ಮತ್ತು ಅಶ್ವತಿಯರ ಬದುಕಿನ ಪರಿಸ್ಥಿತಿ ಮತ್ತು ಸಾಧ್ಯತೆಗಳನ್ನು ಹೋಲಿಕೆ ಗೊಳಪಡಿಸುವ ಈ ಕಾದಂಬರಿಯು ಹೊಸ ಕಾಲಘಟ್ಟದ ಹೊಸ ತಲೆಮಾರು ಜೀವನಮೌಲ್ಯಗಳನ್ನು ದರ್ಶಿಸುವುದು ಹೇಗೆಂದೂ, ಹಳೆಯ ತಲೆಮಾರು ಅದಕ್ಕೆ ಯಾವ ತಂತ್ರಗಳನ್ನುಪಯೋಗಿಸಿ ಹೊಂದಿಕೊಂಡು ಹೋಗಬಹುದೆಂಬುದನ್ನೂ ಸ್ಪಷ್ಟಪಡಿಸುತ್ತದೆ. ಈ ಕಾದಂಬರಿಯು ವರ್ತಮಾನ ಬದುಕಿನ ವ್ಯಾಪಾರಗಳ ಸಂಘರ್ಷಗಳೆಲ್ಲವನ್ನೂ ಚೆನ್ನಾಗಿ ಸಂಬೋಧಿಸಿ ಚರ್ಚೆಗೊಳಪಡಿಸುತ್ತದೆ. ಹಿಂದೆಲ್ಲ ಒಂದು ಕೃತಿ ತೆರೆದಿಟ್ಟ ಬರಹವೆಂದು ಹೇಳಿದರೆ ಅದರಲ್ಲಿ ಅಸ್ತಿತ್ವ ದಲ್ಲಿರುವ ನಂಬಿಕೆಗಳನ್ನು ಬುಡಮೇಲು ಮಾಡುವುದರ ಬಗ್ಗೆ ಸೂಚನೆ ಗಳಿರುತ್ತಿದ್ದವು. ಆದರೆ ಅಡಗಿಸಿಡಲು ಏನೂ ಇಲ್ಲವೆಂದು ನಂಬುವ ಹೊಸ ತಲೆಮಾರಿನ ವ್ಯಾಪಾರ ವಲಯದಿಂದ ನಿಂತು ನೋಡುವಾಗ ಈ ಕಾದಂಬರಿ ಒಂದು ತೆರೆದ ಬರಹವೆಂದು ಹೇಳಲಾಗದು. ಬದಲಿಗೆ, ಅವರ ಭುಜದ ಮೇಲೆ ಕೈಯಿಟ್ಟುಕೊಂಡು ಮಾಡುವ ಸ್ನೇಹ ಸಂಭಾಷಣೆಯೆಂದೇ ನಿಸ್ಸಂಶಯವಾಗಿ ಹೇಳಬಹುದು. ಆದ್ದರಿಂದಲೇ ಚಂದ್ರಮತಿಯವರ ಈ ಕೃತಿ ಕಾಲವನ್ನು ಸಮರ್ಥಿಸುತ್ತದೆ.
ಕಥನ ಮತ್ತು ಓದುಗಳು ಪರಸ್ಪರ ಬೇರೆಯಾಗುವ ಅಥವಾ ಒಪ್ಪಿಕೊಳ್ಳುವ ಜೀವನಕ್ಷೇತ್ರಗಳಿವೆ. ಒಪ್ಪಿಕೊಳ್ಳುವ ಎಡೆಗಳಲ್ಲಿ ಕೃತಿಯು ಸಾಮಾನ್ಯವಾಗಿ ಗೆಲ್ಲುತ್ತದೆ ಕೂಡಾ. ಕಥನದ ಗುರಿಯನ್ನು ಹೊಡೆದು ಬದಿಗಿಟ್ಟು ಓದಿನ ಇಚ್ಛೆಗನುಸಾರವಾಗಿ ಪಠ್ಯವನ್ನು ಬದಲಾಯಿಸಲು ಸಾಧ್ಯವಾಗುವುದು ಕೃತಿಯಲ್ಲಿ ತೋರಿಕೆಯ ಪ್ರದರ್ಶನಗಳು ತುಂಬಿದಾಗ. ಕಥನದ ಇಂಥ ತೋರಿಕೆಗಳನ್ನು ಬಿಟ್ಟು ವರ್ತಮಾನ ಸಮಾಜದ ಸುತ್ತುಮುತ್ತ ಹೊಸ ತಲೆಮಾರಿನ ವಿಚಾರಧಾರೆಯನ್ನು ಪ್ರಾಮಾಣಿಕವಾಗಿ ಚಿತ್ರಿಸುವ ಪ್ರಯತ್ನವನ್ನು ಚಂದ್ರಮತಿಯವರು ಇಲ್ಲಿ ಮಾಡಿದ್ದಾರೆ. ಅದಕ್ಕಾಗಿ ಕಥನವನ್ನು ಅವರು ಎರಡು ಸ್ತರಗಳಲ್ಲಿ ಬೇರೆ ಬೇರೆಯಾಗಿ ಇರಿಸುತ್ತಾರೆ. ಅಶ್ವತಿ ಕಾದಂಬರಿಯನ್ನು ಓದಲು ಆರಂಭಿಸುತ್ತಾಳೆಂದೂ ಅದು ಚಂದ್ರಮತಿ ಬರೆದ “ಅಪರ್ಣಾಳ ಸೆರೆಮನೆಗಳು” ಎಂಬ ಕೃತಿಯೆಂದೂ ಹೇಳುವ ಮೂಲಕ ಕಥನದ ಕಾಲ-ದೇಶಗಳ ಎರಡು ಸಾಧ್ಯತೆಗಳು ಸೃಷ್ಟಿಸಲ್ಪಡುತ್ತವೆ. ಒಂದು ಅಶ್ವತಿಯ ಜೀವನಕ್ಕೆ ಸಂಬಂಧಿಸಿದ್ದು ಮತ್ತು ಇನ್ನೊಂದು ಅಪರ್ಣಾಳ ಬದುಕಿಗೆ ಸಂಬಂಧಪಟ್ಟದ್ದು. ಆ ಮೂಲಕ ಅಶ್ವತಿಯದ್ದು ವಾಸ್ತವವೆಂದೂ ಅಪರ್ಣಾಳದ್ದು ಕಾಲ್ಪನಿಕವೆಂದೂ ಇರುವ ನಿರ್ಧಾರವನ್ನು ತಲುಪಲು ಕಾದಂಬರಿಯ ಈ ಅಂಶವು ಓದುಗರನ್ನು ಪ್ರೇರೇಪಿಸುತ್ತದೆ. ಕಲ್ಪನೆ ಮತ್ತು ವಾಸ್ತವಗಳು ಸಂಗಮಿಸುವ ವರ್ಚುವಲ್ ವಾತಾವರಣದಲ್ಲಿ ಕಳೆಯಬೇಕಾಗಿ ಬರುವ ತಲೆಮಾರಿನ ಅಸ್ವಸ್ಥತೆಗಳನ್ನೂ ವೈಯಕ್ತಿಕ ಬಂಧಗಳ ಸಮಸ್ಯೆಗಳನ್ನೂ ಗುರುತಿಸಲು ಮತ್ತು ತಿಳಿಸಲು ಲೇಖಕಿ ನಡೆಸುವ ಪ್ರಯತ್ನವಾಗಿ ಇದನ್ನು ಕಾಣಬೇಕಾಗಿದೆ. ಅಪರ್ಣಾ ಮತ್ತು ಅಶ್ವತಿಯರ ಜೀವನಶೈಲಿಗಳಲ್ಲಾಗಲಿ, ಆ ಬಗ್ಗೆ ಸಮಾಜದ ಪ್ರತಿಕ್ರಿಯೆಗಳಲ್ಲಾಗಲಿ ಹೆಚ್ಚು ವ್ಯತ್ಯಾಸವೇನೂ ಇಲ್ಲ. ವಾಸ್ತವ ಪ್ರಪಂಚ ಮತ್ತು ಸೃಷ್ಟಿಸಲ್ಪಡುವ ಪ್ರಪಂಚದ ದೃಷ್ಟಿಯೊಳಗೆ ಸೇರಿ ಕಳೆಯಬೇಕಾಗಿ ಬರುವ ಹೊಸ ತಲೆಮಾರು ಸಂಬೋಧಿಸುವ ಕೆಲವು ಸಮಸ್ಯೆಗಳಿವೆ. ವರ್ಚುವಲ್ ಬದುಕು ತೆರೆದಿಡುವ ಸ್ವಾತಂತ್ರ್ಯದ ಪ್ರವೃತ್ತಿ ಸಾಧ್ಯತೆಗಳ ಮತ್ತು ಅಂತರಿಕ್ಷದಲ್ಲಿ ಕಳೆಯಬೇಕಾಗಿ ಬರುವಾಗಲೇ ಅಸ್ತಿತ್ವದಲ್ಲಿ ಮಾಪನ ಮಾಡಿಟ್ಟಿರುವ ಮೌಲ್ಯಪ್ರಜ್ಞೆಗಳನ್ನು ಮತ್ತು ಕ್ರಮಗಳನ್ನು ತೃಪ್ತಿಪಡಿಸಬೇಕಾಗಿ ಬರುತ್ತದೆ. ಇದೊಂದು ಆತ್ಮ ಸಂಘರ್ಷ. ಅಸ್ತಿತ್ವದಲ್ಲಿರುವ ಸಾಂಸ್ಥೀಕರಣಗಳನ್ನೆಲ್ಲ ಎದುರಿಸುವ ಮೂಲಕ ಅವರು ಅದರಿಂದ ರಕ್ಷಿಸಿಕೊಳ್ಳುತ್ತಾರೆ. ಸ್ತ್ರೀ-ಪುರುಷ ಸಂಬಂಧಗಳಲ್ಲೂ ಜೀವನ ದೃಷ್ಟಿ ಕೋನಗಳಲ್ಲೂ ಸ್ಥಾಪಿತ ಕ್ರಮಗಳನ್ನೂ ಧೋರಣೆಗಳನ್ನೂ ತಿದ್ದುವಂತೆ ಕಾಣುವ ಕಾದಂಬರಿಯಲ್ಲಿನ ಸೂಚನೆಗಳು ಸ್ಪಷ್ಟಪಡಿಸುವುದು ಅದನ್ನೇ. ಅಪರ್ಣಾಳ ಹತ್ತಿರ ನಾರಂಗ್ ಹೇಳುವ ಈ ವಾಕ್ಯಗಳಲ್ಲಿ ಸ್ಥಾಪಿತ ದೃಷ್ಟಿಕೋನದ ಸೂಚನೆ ಆಳಕ್ಕೆ ಹೊಕ್ಕು ನಿಲ್ಲುವುದನ್ನು ಗಮನಿಸಬಹುದು.
“ನಿಮ್ಮ ಐದು ಮಂದಿಯ ಸಂಘದ ಕುರಿತು ನಾನು ಆಲೋಚಿಸಿದ್ದೇನೆ. ನಾರಂಗ್ ಹೇಳಿದರು. ಈ ಐದು ಅನ್ನುವ ಸಂಖ್ಯೆಯೇ ತೊಂದರೆ. ನಾಲ್ಕಾಗಿದ್ದರೆ ಯಾರು ಯಾರ ಜತೆಗೆಂದು ಸರಿಯಾಗಿ ಹೇಳಬಹುದು. ಮೂವರು ಹೆಣ್ಣು ಮಕ್ಕಳೂ ಇಬ್ಬರು ಗಂಡುಮಕ್ಕಳೂ ಒಂಥರಾ ಅರ್ಥವಾಗದ ಒಗಟು” (ಪು. 52).
ನಾರಂಗ್‌ರ ತಲೆಮಾರಿನವರಿಗೆ ಮಾತ್ರ ಇದೊಂದು ಒಗಟಾಗಿ ತೋರುತ್ತದೆ. ಅದನ್ನು ಬಿಡಿಸಬೇಕಾದ ಹೊಣೆ ಅವರದ್ದು ಮಾತ್ರ. ಯಾಕೆಂದರೆ ಅವರು ಗಂಡು-ಹೆಣ್ಣುಗಳ ನಡುವೆ ಸ್ನೇಹವೆಂದರೆ ಅದರಲ್ಲಿ ಲೈಂಗಿಕ ಸಂಬಂಧದ ಎಳೆಯಷ್ಟೇ ಬಿಗಿಯಾಗಿರುತ್ತದೆಂದು ನಂಬುವ ತಲೆಮಾರಿನ ಪ್ರತಿನಿಧಿಯಾಗಿದ್ದಾರೆ. ಸ್ವಂತ ಬದುಕಿನ ಆಗು-ಹೋಗುಗಳೆಲ್ಲವನ್ನೂ ಹಿಡಿತದಲ್ಲಿಟ್ಟುಕೊಳ್ಳುವ ಸಾಮರ್ಥ್ಯ ವಿದೆಯೆಂದು ನಂಬುವ ತಲೆಮಾರಿಗೆ ಬಂಧಗಳ ನಿಯಂತ್ರಣದ ಬಗ್ಗೆ ಹೇಳಿ ಕೊಡಬೇಕಾದ ಅಗತ್ಯವಿಲ್ಲ. ಯಾವುದೇ ಕ್ಷೇತ್ರದಲ್ಲಾದರೂ ಕಾಣುವ ದೋಷಗಳು ಇದರಲ್ಲೂ ಇರಬಹುದು. ಆದರೆ ಹೊಸ ಕಾಲಘಟ್ಟದ ಸಂಬಂಧಗಳೆಲ್ಲವೂ ಅದೇ ಎಂದು ನಂಬುವ ವಿಚಾರದಲ್ಲೇ ಇರುವುದು ತೊಂದರೆ.
ಕಾದಂಬರಿಯ ಒಂದು ಅಂಶವಾಗಿ ಬರುವ ಕಾಡುಭೂಪನ ಅರಾಜಕೀಯ ವಾಗಿ ಕಾಣುವ ಲೈಂಗಿಕ ಬದುಕಿನ ಕುರಿತಾಗಿ ಕಾಣುವ ಉಲ್ಲೇಖಗಳು ಸಮಸ್ಯಾ ಕ್ಷೇತ್ರವಾಗಿ ಬಿಡುವುದು ಈ ಕಾಲಘಟ್ಟದಲ್ಲಿ. ಕೌಟುಂಬಿಕ ಬಂಧಗಳ ಮತ್ತು ಸ್ನೇಹ-ಸಂಬಂಧಗಳ ಲೈಂಗಿಕ ಪ್ರಜ್ಞೆಗಳಲ್ಲಿ ಗಂಭೀರವಾದ ವ್ಯತ್ಯಾಸಗಳಿವೆ. ಮುಖ್ಯವಾಗಿ ಪರಂಪರಾಗತ ಚಿಂತನೆಗಳಲ್ಲಿ. ಆದ್ದರಿಂದಲೇ ನಾರಂಗರಿಗೆ ಬರೇ ಸ್ನೇಹವೆಂಬ ಕಲ್ಪನೆಯ ಸ್ತರಕ್ಕೆ ಗಂಡು-ಹೆಣ್ಣುಗಳ ನಡುವಣ ಸಂಬಂಧವನ್ನು ಮಿತಿಗೊಳಿಸಲು ಸಾಧ್ಯವಾಗುವುದಿಲ್ಲ. ಲೈಂಗಿಕ ಸಂಬಂಧಗಳ ಈ ರೀತಿಯ ಸಮಸ್ಯೆಗಳೆಲ್ಲವನ್ನೂ ಒಂದೇ ಏಟಿಗೆ ಇಲ್ಲವಾಗಿಸಿಬಿಡುವ ಕಾಡುಭೂಪನ ಜೀವನಶೈಲಿ ಸಮಾಜದ ಲೈಂಗಿಕ ಪ್ರಜ್ಞೆಯನ್ನು ಸಮಸ್ಯಾತ್ಮಕವಾಗಿಸುತ್ತದೆ. ಸ್ಥಾಪಿತ ಲೈಂಗಿಕ ಪ್ರಜ್ಞೆಯನ್ನು ತಿರಸ್ಕರಿಸುವ ಕಾಡುಭೂಪ ಈ ದೃಷ್ಟಿಯಿಂದ ಕಾದಂಬರಿಯ ಪಠ್ಯದಲ್ಲಿ ಪ್ರಸ್ತುತನಾಗುತ್ತಾನೆ. ಅವನು ಎರಡು ತಲೆಮಾರುಗಳ ಮಧ್ಯದಲ್ಲಿ ನಿಂತಿದ್ದಾನೆ. ಗಂಡು-ಹೆಣ್ಣುಗಳ ನಡುವಿನ ಸಂಬಂಧವೆಂದರೆ ಆತನ ದೃಷ್ಟಿಯಲ್ಲಿ ಲೈಂಗಿಕತೆಯಿಂದ ಕೂಡಿದ್ದು ಮಾತ್ರ. ಪರಂಪರೆಯು ಆ ವಿಚಾರದಲ್ಲಿ ವಿಧಿಸುವ ಕಟ್ಟುಪಾಡುಗಳು ಅವನನ್ನು ಬಾಧಿಸುವುದಿಲ್ಲ. ಹೊಸ ತಲೆಮಾರಿನವರನ್ನು ಗಾಬರಿಗೊಳಿಸುವ ಒಂದು ವ್ಯವಸ್ಥೆಯಿದು. ನಾರಂಗರ ತಲೆಮಾರಂತೂ ಈ ರೀತಿಯ ಬಾಧ್ಯತೆಗಳನ್ನು ಎಲ್ಲಾ ಕಡೆಗಳಿಂದಲೂ ನಿರೀಕ್ಷಿಸುತ್ತದೆ. ಹಳೆಯ ತಲೆಮಾರು ಮತ್ತು ಹೊಸ ತಲೆಮಾರುಗಳ ನಡುವಣ ವ್ಯಕ್ತಿ ಸಂಬಂಧಗಳಿಗೆ ಸಂಬಂಧಿಸಿದ ಧೋರಣೆಗಳಲ್ಲಿನ ಟೊಳ್ಳುತನಗಳೇನೆಂಬ ಹುಡುಕಾಟವೇ ಕಾದಂಬರಿಯಲ್ಲಿ ಈ ರೀತಿಯ ಒಂದು ವಾತಾವರಣದ ಸೃಷ್ಟಿಗೆ ಚಂದ್ರಮತಿಯವರನ್ನು ಪ್ರೇರೇಪಿಸಿದೆ. ಮಾತಿನ ಮಧ್ಯೆ ಅಪರ್ಣಾಳ ಮೇಲೆ ನಾರಂಗ್ ಮಾಡಿದ ಆಕ್ರಮಣವನ್ನು ತಡೆಯಲು ಸಾಧ್ಯವಾಗದ್ದಕ್ಕೆ ಕಾರಣ ಲೈಂಗಿಕತೆಯ ಮೌಲ್ಯಪ್ರಜ್ಞೆಯೊಳಗಿನ ಟೊಳ್ಳುಗಳಾಗಿರಬಹುದು. ನಾರಂಗ್ ಎಲ್ಲಾ ಸಂದರ್ಭಗಳಲ್ಲೂ ಅದನ್ನು ನಿರೀಕ್ಷಿಸುತ್ತಾರೆ. ಅಪರ್ಣಾಳಂತೂ ಅಂಥ ಸಾಧ್ಯತೆಗಳ ಬಳಿ ಸುಳಿಯುವುದೂ ಇಲ್ಲ. ಸರಿ-ತಪ್ಪುಗಳ ನಡುವಣ ಗಡಿರೇಖೆಯನ್ನು ನಿರ್ಣಯಿಸಲು ಪರ್ಯಾಪ್ತವಾದ ರೀತಿಯಲ್ಲಿ ಈ ಯಾವುದೇ ವಿಚಾರಗಳಿಗೆ ಸರಿಯಾದ ಮುಂದುವರಿಕೆಯಿರುವುದಿಲ್ಲವೆನ್ನುವುದು ಈ ಹಂತ ದಲ್ಲಿ ಸಂಘರ್ಷ ಹುಟ್ಟಿಸುತ್ತದೆ.
ಕಥೆಗಾರ್ತಿ ಎಂಬ ನೆಲೆಯಲ್ಲಿ ಚಂದ್ರಮತಿಯವರ ಗುರಿಯೇನೆಂಬುದನ್ನು ಸರಿಯಾಗಿ ಗುರುತಿಸುವ ಕಥನ ಕ್ಷಣಗಳಿವು. ಲೈಂಗಿಕ ಸಂಬಂಧಗಳ ಸಾಧ್ಯತೆ ಗಳೆಲ್ಲವನ್ನೂ ಬೇಕೆಂದರೆ ವ್ಯಾಖ್ಯಾನಿಸುವ ಸಂದರ್ಭಗಳ ಮೂಲಕ ಲೇಖಕಿಯ ಕಥನ ಯಾತ್ರೆ ನಡೆಯುತ್ತದೆ. ಒಬ್ಬ ಸಾಮಾನ್ಯ ಕಾದಂಬರಿಕಾರ್ತಿಗೆ ಅಥವಾ ಓದುಗರಿಗೆ ಕಾಣುವ ಆ ರೀತಿಯ ಪ್ರಲೋಭನೆಗಳನ್ನು ಚಂದ್ರಮತಿಯವರು ಅವಗಣಿಸುತ್ತಾರೆ. ಯಾಕೆಂದರೆ ಕಾದಂಬರಿಕಾರ್ತಿಯ ಉದ್ದೇಶ ಅದಲ್ಲ. ವ್ಯಕ್ತಿಯ ಅಸ್ಮಿತೆಗೆ ಸಂಬಂಧಿಸಿ ಜೀವನದ ಸಂದರ್ಭಗಳಲ್ಲಿ ವ್ಯಕ್ತಿಪ್ರಜ್ಞೆಯನ್ನು ನಿಯಂತ್ರಿಸುವ ವ್ಯವಸ್ಥೆಗಳ ಬಗೆಗೂ ಹೇಳುವುದು ಅವರ ಗುರಿ.
ವ್ಯಕ್ತಿಯ ಅಸ್ಮಿತೆಯನ್ನು ನಿರ್ವಚಿಸುವುದು ಇತರರೊಂದಿಗಿನ ಆತನ ಸಂಬಂಧಗಳಿಂದಲೋ ಅಥವಾ ಆತನ ಪ್ರವೃತ್ತಿ–ರೀತಿ-ನೀತಿಗಳ ಮೂಲಕವೋ ಎಂಬ ಪ್ರಶ್ನೆಯನ್ನು ಕಾದಂಬರಿ ಮುಖ್ಯವಾಗಿ ಎತ್ತುತ್ತದೆ. “ತುಂತುರು ಮಳೆ” ಎಂಬ ಅಧ್ಯಾಯದ ಮೊದಲ ಭಾಗವನ್ನು ಉದ್ಧರಿಸುವುದು ಈ ಹಂತದಲ್ಲಿ ಅಗತ್ಯವೆಂದು ತೋರುತ್ತದೆ: “ಕಶ್ಯಪ್, ಇವತ್ತು ಆರರಿಂದ ಎಂಟರವರೆಗೆ ನಾನು ಫ್ರೀ ಇದ್ದೇನೆ…” (ಪು. 80).
ಕಶ್ಯಪ್ ಮತ್ತು ಅಪರ್ಣಾರ ನಡುವೆ ನಡೆಯುವ ಈ ಸಂಭಾಷಣೆಯು ಹೊಸ ತಲೆಮಾರಿನ ವ್ಯಕ್ತಿ ಅಸ್ಮಿತೆಯ ಕುರಿತಾದ ಮೌಲ್ಯಮಾಪನವಾಗಿ ಕಾಣುತ್ತದೆ. ನೇರ ದೃಶ್ಯಗಳಾಗಲಿ, ಪೂರ್ವ ವಿಶ್ವಾಸಗಳಾಗಲಿ ನಿರ್ಧಾರಗಳನ್ನು ಸಮರ್ಥಿಸ ಬೇಕೆಂದಿಲ್ಲ. ಅವು ಸರಿಯಾಗಿರಬೇಕೆಂದೂ ಇಲ್ಲ. ಕಪಟ ಗುಣಗಳನ್ನೂ ಕೃತ್ರಿಮತೆಯನ್ನೂ ಅಡಿಪಾಯವಾಗಿಸಿಕೊಂಡು ಬದುಕುವ ಒಂದು ವರ್ಗದ ಸಾಮೀಪ್ಯವು ಎಲ್ಲಾ ಕಾಲದಲ್ಲೂ ಇರುವುದಾದರೂ ಈ ಕಾಲವು ಆ ವಿಚಾರದಲ್ಲಿ ಹೆಚ್ಚು ಸಂಪನ್ನವಾಗಿದೆ. ದೃಶ್ಯ ಸಂಸ್ಕೃತಿಯು ಎಲ್ಲವನ್ನೂ ಬೆರಳತುದಿಯಲ್ಲೇ ಪ್ರಕಟಪಡಿಸುತ್ತಿರುವಾಗ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಓಡಾಡುವ ಪ್ರಜ್ಞಾವಂತರು ನಟನೆಯ ಮೂಲಕ ಮಾತ್ರವೇ ಅಸ್ಮಿತೆಯ ಸಂರಕ್ಷಣೆ ಮಾಡುವ ಕಾಲಘಟ್ಟವಿದು. ಆದ್ದರಿಂದಲೇ ಹೊಸ ತಲೆಮಾರು ಹಲವು ವಿಚಾರಗಳಲ್ಲಿ ತಪ್ಪುಗ್ರಹಿಕೆಗಳ ಹಿಂದೆ ಹೋಗುವುದಿದೆ. ಅಪರ್ಣಾ-ಕಶ್ಯಪರ ನಡುವಣ ಸಂಭಾಷಣೆಯಲ್ಲಿ ಇದು ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಅವರು ಎಲ್ಲಾ ವಿಚಾರಗಳಲ್ಲೂ ಹೆಚ್ಚು ಎಚ್ಚರವಾಗಿದ್ದು ಸಾಧ್ಯವಾದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಅಂತರವನ್ನು ಕಾಯ್ದುಕೊಂಡು ಸ್ವಂತವಾದ ಖಾಸಗಿ ಜಗತ್ತಿನಲ್ಲಿ ಜಯಗಳಿಸಲು ಪ್ರಯತ್ನಿಸುತ್ತಾರೆ ಕೂಡಾ. ಕಾದಂಬರಿಯ ಒಂದು ಸ್ತರವು ಇಂಥ ಖಾಸಗಿ ಅವಕಾಶಗಳು ಯಥೇಚ್ಛವಾಗಿರುವುದರ ಕುರಿತು ಮತ್ತು ಸ್ವಭಾವಗಳ ಕುರಿತು ನೆನಪಿಸುವುದು ಈ ಕಾರಣದಿಂದಾಗಿ.
ಅಶ್ವತಿಯು “ಅಪರ್ಣಾಳ ಸೆರೆಮನೆಗಳು” ಎಂಬ ಕೃತಿಯನ್ನೂ, ಅಪರ್ಣಾ “ಮುಸುಕಿನ ನಿವೇದನೆಗಳು” ಎಂಬ ಕೃತಿಯನ್ನೂ ಓದುತ್ತ ಎರಡೂ ಕಥನಗಳು ಆರಂಭವಾಗುತ್ತವೆ. ವಿಪರೀತ ಗಲಾಟೆ-ಗದ್ದಲಗಳು ತುಂಬಿರುವ ಜಾಗಗಳಲ್ಲೂ ಸ್ವಂತವಾದ ಅವಕಾಶದೊಳಗೆ ಮುದುರಿ ಕುಳಿತುಕೊಳ್ಳುವ ಸಾಧ್ಯತೆ ಓದಿಗೆ ಇರುತ್ತದೆ. ಅಲ್ಲದೆ ಎರಡೂ ವ್ಯಾಪಾರಗಳು ಆರಂಭವಾಗುವುದು ಟ್ರೇನಿನ ಒಳಗೆ. ತುಂಬಾ ಮಂದಿ ಇದ್ದರೂ, ಎಲ್ಲರೂ ಎದುರು-ಬದುರು ಕುಳಿತುಕೊಂಡರೂ ಪ್ರಯಾಣಿಕರು ತಮ್ಮ ಖಾಸಗಿ ಅಗತ್ಯಗಳೊಂದಿಗೆ ಸಮಯ ಕಳೆಯಲು ರೈಲು ಪ್ರಯಾಣವು ಅನುವು ಮಾಡಿ ಕೊಡುತ್ತದೆ. ಅಲ್ಲದೆ ಸಹಪ್ರಯಾಣಿಕರನ್ನು ಶತ್ರುಗಳಾಗಿಯೋ ಡಕಾಯಿತರಂತೆಯೋ ಅಪರಿಚಿತರಾಗಿಯೇ ಕಾಣಲು ರೈಲುಯಾತ್ರೆ ಪ್ರೇರೇಪಿಸುತ್ತದೆ. ಹೊಸ ತಲೆಮಾರು ಈ ರೀತಿಯ ರೈಲುಯಾತ್ರೆ ಯಲ್ಲಿದೆಯೇ ಎಂದು ಸಂದೇಹ ಪಡಬೇಕಾಗುತ್ತದೆ. ಅವರು ಯಾವಾಗಲೂ ತಾವೇ ಸೃಷ್ಟಿಸಿದ ಸ್ನೇಹಸಂಬಂಧಗಳ ಲೋಕದಲ್ಲಿ ಕಳೆಯಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮೊದಲಾದ ವಸ್ತುಗಳ ಸಹಾಯ ತೆಗೆದುಕೊಳ್ಳುತ್ತಾರೆ. ಜನರ ಗುಂಪಿನಿಂದಾಗುವ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಬಳಸುವ ಸುಲಭ ಸಾಧನಗಳಿವು. ಮಕ್ಕಳು ಹಾಗೂ ಕುಟುಂಬಗಳಿಗೆ ಸಂಬಂಧಿಸಿದಂತೆ ಕಾದಂಬರಿಯಲ್ಲಿ ಬರುವ ಉಲ್ಲೇಖಗಳು ತಮಗೆ ಅಪರಿಚಿತವಾದ ಸ್ಥಳಗಳು ಮತ್ತು ಸಂಬಂಧಗಳತ್ತ ಅವರು ಹೇಗೆ ವಿಮುಖರಾಗುತ್ತಾರೆಂಬುದನ್ನು ತೋರಿಸುತ್ತದೆ. ಅಶ್ವತಿಯ ರೈಲು ಪ್ರಯಾಣದ ಒಂದು ಸಂದರ್ಭವನ್ನು ನೋಡಿ: “ಹೆಚ್ಚು ಮಾತನಾಡುವ ಆಸಕ್ತಿ ತನಗಿಲ್ಲವೆಂದು… ಸೆಲ್‌ಫಿಶ್ ಜೀನ್ ತೆರೆದಳು” (ಪು. 3).
ಹತ್ತಿರ ಕುಳಿತುಕೊಂಡವರಲ್ಲಿ ಹುಟ್ಟಿಕೊಳ್ಳಬಹುದಾದ ಸ್ನೇಹವನ್ನಿಲ್ಲಿ ಎಷ್ಟು ಬೇಗ ಹೊಸಕಿ ಹಾಕಲಾಗುತ್ತಿದೆಯೆಂಬುದನ್ನು ನೋಡಿ. ಯಾವಾಗಲೂ ವರ್ತಮಾನದ ಅನುಭವಗಳನ್ನು ದೂರವಿಟ್ಟು ವರ್ಚುವಲ್ ಜೀವನದ ಸಾನ್ನಿಧ್ಯವನ್ನು ಖಚಿತ ಪಡಿಸಿಕೊಳ್ಳುವುದರಲ್ಲಿಯೇ ಸಮಾಧಾನ ಕಾಣುವ ಬದುಕಿನ ಪರಿಸ್ಥಿತಿಗಳಿಂದ ಉಂಟಾಗುವ ಮೌಲ್ಯಪ್ರಜ್ಞೆಯ ಕುರಿತು ಚಂದ್ರಮತಿಯವರು ಬರೆಯುತ್ತಾರೆ. ಖಾಲಿಯಿರುವ ಕಂಪಾರ್ಟ್ಮೆಂಟಿಗೆ ಮೊದಲನೆಯವಳಾಗಿ ಪ್ರವೇಶಿಸುವ ಅಶ್ವತಿ ಲೋವರ್ ಬರ್ತ್ನ ಕಿಟಿಕಿ ಬದಿಯ ಸೀಟಿನಲ್ಲಿ ಕಾಲು ಮೇಲೆತ್ತಿ ಇಟ್ಟು ಕುಳಿತು ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಸ್ಥಿತಿಯನ್ನು ಲೇಖಕಿ ಪ್ರಸ್ತುತ ಪಡಿಸುವುದು ಹೀಗೆ: “ಯಾರಿರಬಹುದು ಉಳಿದ ಮೂವರು ಪ್ರಯಾಣಿಕರು?…. ನಾಲ್ಕು ಮಂದಿ ಸದಸ್ಯರ ಸಂಘವು ತೆಗೆದುಕೊಂಡದ್ದಾಗಿತ್ತು” (ಪು. 25).
ಸಮಾಜವು ಯಾವಾಗಲೂ ವೈವಿಧ್ಯಮಯ ಸ್ವಭಾವ ವೈಶಿಷ್ಟ್ಯಗಳಿಂದ ಕೂಡಿರುತ್ತದೆ. ಸಾಮಾಜಿಕ ಬದುಕು ಈ ರೀತಿಯ ವೈಶಿಷ್ಟ್ಯಗಳಿಗೂ ವೈವಿಧ್ಯ ಗಳಿಗೂ ಮುಖಾಮುಖಿಯಾಗುತ್ತಲೇ ಮುನ್ನಡೆಯುತ್ತದೆ. ಆದರೆ ಈ ರೀತಿಯ ಪರಿಸ್ಥಿತಿಗಳನ್ನು ಮತ್ತು ಸಾಧ್ಯತೆಗಳನ್ನು ನಿರಾಕರಿಸಿ, ಇಷ್ಟಪಟ್ಟ ಏಕರೀತಿ ಯಲ್ಲಿ ಸುಖಪಡಲು ಹೊಸ ತಲೆಮಾರು ಬಯಸುತ್ತದೆ ಎಂಬ ಸೂಚನೆ ಚಂದ್ರಮತಿಯವರ ಕಥನದಲ್ಲಿ ಎದ್ದು ಕಾಣುತ್ತದೆ. ಅಪರ್ಣಾಳ ಭಾವನೆಗಳು ಅದಕ್ಕಿಂತ ಭಿನ್ನವಲ್ಲ: “ಅಪರ್ಣಾ ಪುನಃ ಪುಸ್ತಕದತ್ತ ತಿರುಗಿದಳು… ಕೈಯಲ್ಲಿ ಮಕ್ಕಳು” (ಪು. 5).
ಉಡುಗೆ-ತೊಡುಗೆ-ವರ್ತನೆಗಳು ಒಬ್ಬ ವ್ಯಕ್ತಿಯ ಸ್ವಭಾವವನ್ನು ನಿರ್ಧರಿಸುತ್ತವೆ ಎಂಬ ಪ್ರಾಥಮಿಕ ದೃಷ್ಟಿಯ ಮೂಲಕ ಅಪರ್ಣಾ ಈ ತೀರ್ಮಾನಕ್ಕೆ ಬರುತ್ತಾಳೆ. ತಮ್ಮ ಲೋಕ ರೀತಿಯೇ ಸರಿಯೆಂದೂ, ಉಳಿದೆಲ್ಲದರಿಂದ ಸಾಧ್ಯವಾದಷ್ಟು ದೂರವಿರಬೇಕೆಂದೂ ನಂಬುವ ವರ್ಗದ ಮಾನಸಿಕ ಸ್ಥಿತಿಯನ್ನು ಅಪರ್ಣಾ ಇಲ್ಲಿ ಹಂಚಿಕೊಳ್ಳುತ್ತಾಳೆ. ಗುರಿ ಮಾತ್ರವೇ ಮುಖ್ಯವಾದಾಗ ದಾರಿಯಲ್ಲಿ ಕಾಣುವ ಇತರ ವಿಷಯಗಳ ಬಗ್ಗೆ ಅಜ್ಞರಾಗುವ ಅಥವಾ ಪ್ರಜ್ಞಾಪೂರ್ವಕ ಅವಗಣಿಸುವ ಕ್ರಮವನ್ನು ನಾವಿಂದು ಕಾಣುತ್ತಿದ್ದೇವೆ. ಆದ್ದರಿಂದಲೇ ಸಾಮಾಜಿಕ ಜೀವನದ ವರ್ತಮಾನ ಕ್ರಮಗಳ ಬಗ್ಗೆ ಅವಜ್ಞೆ ತೋರಿಸುವುದನ್ನು ಈ ಥರದ ಜನರು ರೂಢಿಸಿಕೊಂಡಿದ್ದಾರೆ. ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಹಿಂದಿನ ತಲೆಮಾರಿ ನವರು ತೋರಿಸುತ್ತಿದ್ದ ಪ್ರಾಮಾಣಿಕ ಕಾಳಜಿ ಇವತ್ತು ಇಲ್ಲವಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ: “ಟ್ರೈನ್ ಎಲ್ಲಿಗೆ ತಲುಪಿತು ಎಂದೇ? ನನಗೆ ಗೊತ್ತಿಲ್ಲ. ಡಸ್ ಇಟ್ ಮ್ಯಾಟರ್?” ಎಂಬ ಲ್ಯಾಪ್‌ಟಾಪಿನವನ ಔದಾಸೀನ್ಯ ಭಾವಕ್ಕೆ ಬೇರೇನೂ ಕಾರಣವಿಲ್ಲ.
ಸಮಾಜ-ಕುಟುಂಬ ಎಂಬೀ ಸಂಸ್ಥೆಗಳ ಬಗ್ಗೆ ಸ್ಥಾಪಿತ ಸಮಾಜವು ಬೆಳೆಸಿಕೊಳ್ಳುವ ನಂಬಿಕೆಗಳ ಬಗೆಗಾಗಲಿ, ದೃಷ್ಟಿಕೋನಗಳ ಬಗೆಗಾಗಲಿ ಸಮರ್ಥನೆ ಮಾಡಿಕೊಳ್ಳಲು ಹೊಸ ತಲೆಮಾರು ಸಿದ್ಧವಿಲ್ಲ ಅನ್ನುವುದು ಅಡಗಿಸಿಡಬೇಕಾದ ಸತ್ಯವಲ್ಲ. ಸ್ವಂತ ಅಸ್ತಿತ್ವವನ್ನೂ ಭವಿಷ್ಯವನ್ನೂ ಖಚಿತ ಪಡಿಸಿಕೊಳ್ಳುವ ಕಾಲಮಾಪನವಾಗಿ ಬದುಕಿನ ಕಾಂತಿಯುಕ್ತವಾದ ಕಾಲ ಘಟ್ಟವನ್ನು ಅವರು ಪರಿಗಣಿಸುತ್ತಾರೆ. ತಮ್ಮ ಹಿಂದಿನಿಂದ ಬರುವವರು ತಮ್ಮ ನಿಲುವನ್ನು ಪ್ರಶ್ನಿಸುವುದಕ್ಕೆ ಮೊದಲೇ ಅಗತ್ಯವಿರುವುದನ್ನು ಪಡೆಯುವುದು ಎಂಬುದನ್ನಷ್ಟೇ ಗುರಿಯಾಗಿಸುವಾಗ ಸ್ಥಾಪಿತ ಚಿಂತನಾಕ್ರಮಕ್ಕೆ ವಿರಾಮ ಕೊಡಬೇಕಾಗಿ ಬರುತ್ತದೆ. ಹೊಸ ತಲೆಮಾರು ಎದುರಿಸುವ ಈ ಸಂಘರ್ಷವನ್ನು ನೋಡಿಲ್ಲವೆಂದು ನಟಿಸಲಾಗದು. ಸಾಮರ್ಥ್ಯದ ಸ್ಥಾಯೀಭಾವವನ್ನೇ ಪ್ರಶ್ನಿಸುವ ಉದ್ಯೋಗ ಸಾಧ್ಯತೆಗಳು ಮತ್ತು ಜ್ಞಾನ ವ್ಯವಸ್ಥೆಗಳು ಬರುತ್ತಿರುವಾಗ ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದಿಸುವುದು ಎಂಬ ಆಲೋಚನೆ ಬಲವಾಗುತ್ತದೆ. ಅಲ್ಲಿ ಪರಂಪರಾಗತ ರೀತಿ-ನೀತಿಗಳು ಬಲಹೀನವಾಗುತ್ತವೆ. ವಿಧಿಯಲ್ಲಿ ನಂಬಿಕೆಯಿಡದೆ, ಅದು ಇಲ್ಲದಿರುವ ಗೋಡೆಯೆಂದೂ ಅದಕ್ಕೆ ಒರಗಿ ನಿಲ್ಲಲು ಸಾಧ್ಯವಿಲ್ಲವೆಂದೂ ಹೊಸ ತಲೆಮಾರು ತೀರ್ಪು ಕೊಡುವುದು ಆ ಕಾರಣದಿಂದಾಗಿ. ಹೊಸ ತಲೆಮಾರಿಗೆ ಸಾಮಾಜಿಕ ಪ್ರಜ್ಞೆಯಿಲ್ಲವೆಂದೂ ಅವರು ಸಾಮಾಜಿಕ ಜವಾಬ್ದಾರಿಗಳಿಂದ ಪಲಾಯನ ಮಾಡುವವರೆಂದೂ ಹೇಳುವಾಗ ಅದರ ಹಿಂದಿನ ಕಾರಣಗಳನ್ನು ನಾವು ಹುಡುಕಬೇಕಾಗಿದೆ. ಕೌಟುಂಬಿಕ ಸಂಬಂಧಗಳ ಕುರಿತು ಹೊಸ ತಲೆಮಾರಿನ ನಿಲುವುಗಳನ್ನು ಲೇಖಕಿ ಪರಿಶೋಧನೆಗೊಳಪಡಿಸುವುದನ್ನು ಆ ರೀತಿ ಓದಬೇಕು. ವೈವಾಹಿಕ ಬಂಧನದ ಕಟ್ಟುಪಾಡುಗಳಿಂದ ರಕ್ಷಿಸಿಕೊಳ್ಳುವ ಪ್ರಯತ್ನವನ್ನು ಸ್ವತಂತ್ರವೆಂದು ತಾವು ನಂಬುವ ಜೀವನಶೈಲಿಯನ್ನು ಸ್ವೀಕರಿಸಲಿರುವ ಹೊಸ ತಲೆಮಾರಿನ ಕೆಲವು ಆಲೋಚನೆಗಳನ್ನೂ ಕಾದಂಬರಿಯು ಪರಿಶೋಧನೆಗೊಳಪಡಿಸುವುದೆಂದು ಸಾಮಾನ್ಯ ಅರ್ಥದ ಒಂದು ತೀರ್ಮಾನಕ್ಕೆ ಬರಬಹುದು. ಆದರೆ ಆ ರೀತಿಯ ಸರಳೀಕೃತ ಓದನ್ನು ಬದಿಗಿಟ್ಟು ಆತ್ಮ ವಿಮರ್ಶಾತ್ಮಕವಾಗಿ ವರ್ತಮಾನ ಸಮಾಜದ ರೀತಿ-ನೀತಿಗಳನ್ನು ಪರಿಶೋಧಿಸುವ ಒಬ್ಬನಿಗೆ ಕಾದಂಬರಿಯು ಜೀವನ ಕಥನವಾಗಿ ಬದಲಾಗುವುದನ್ನು ಕಾಣಲು ಸಾಧ್ಯವಿದೆ. ರೈಲುಗಾಡಿ, ಕ್ಯಾಂಪಸ್, ಕುಟುಂಬ-ಎಂಬೀ ಮೂರು ಭಾಗಗಳು ಕಾದಂಬರಿಯಲ್ಲಿವೆ. ಜನಸಮೂಹಗಳೂ ವ್ಯಕ್ತಿ-ವೈರುಧ್ಯಗಳೂ ಧಾರಾಳವಾಗಿರುವ ಎಡೆಗಳಿಂದ ಕುಟುಂಬಕ್ಕೆ ಬರುವ ಅಶ್ವತಿಗೂ ಅಪರ್ಣಾಳಿಗೂ ಉಳಿಯುವುದೇನು ಎಂಬ ಪ್ರಶ್ನೆಯನ್ನು ಮುಂದಿಟ್ಟು ಕಾದಂಬರಿ ಕೊನೆಗೊಳ್ಳುತ್ತದೆ:
“ಆತನ ಮಾತುಗಳನ್ನು ಕೇಳಿ ನೊಂದುಕೊಳ್ಳುವುದಕ್ಕೆ ಬದಲಾಗಿ ಇನ್ನಷ್ಟು ಹೆಚ್ಚು ಉಲ್ಲಾಸದಿಂದ ಆ ಮಹಿಳೆ ಇದ್ದಾಳೆಂದು ಅಶ್ವತಿ ಗಮನಿಸಿದಳು. ಇಬ್ಬರನ್ನೂ ಸಹಾನುಭೂತಿಯಿಂದ ನೋಡುತ್ತ ಅಶ್ವತಿ ವೇಗವಾಗಿ ನಡೆದು ಹೋದಳು” (ಪು. 102) ಎಂಬ ಕೊನೆಯ ವಾಕ್ಯದಲ್ಲಿ ಕಾದಂಬರಿ ವಿರಮಿಸುವುದಾದರೂ ವಿಷಯಗಳು ಅಲ್ಲಿಗೆ ಮುಗಿಯುವುದಿಲ್ಲ. ಈ ರೀತಿಯ ಒಂದು ಲೋಕರೂಢಿಗೆ ಹೊಸ ತಲೆಮಾರನ್ನು ದೂಡಿಬಿಟ್ಟ ಹಳೆಯ ತಲೆಮಾರಿನ ಪ್ರವೃತ್ತಿಗಳನ್ನೆಣಿಸಿ ನಾಚಿಕೆಯಾಗುತ್ತಿದೆ. ಕಾದಂಬರಿಯನ್ನು ಓದಿ ಮುಗಿಸಿದಾಗ ಒಂದೇ ಒಂದು ಪ್ರಾರ್ಥನೆ ಉಳಿಯುತ್ತದೆ. ಮಕ್ಕಳು ನಮಗೆ ಹೊಂದಿಕೊಳ್ಳುವಂತೆ ಅವರನ್ನು ನಾವು ಬೆಳೆಸಬೇಕು. ಅವರು ಗಟ್ಟಿಯಾಗಿ ಆತುಕೊಳ್ಳಲು ನಂಬಿಕೆಯ ಒಂದು ಹುಲ್ಲುಕಡ್ಡಿಯನ್ನು ಕೂಡಾ ಬಾಕಿ ಉಳಿಸದ ನಮಗೆ ಹೇಳಲು ಇನ್ನೇನಿದೆ?
–ಡಾ. ಸಿ.ಆರ್. ಪ್ರಸಾದ್
ಅನುವಾದಕರ ಮಾತು
‘ಅಪರ್ಣಾಳ ಸೆರೆಮನೆಗಳು’ ಹಲವು ವೈಶಿಷ್ಟ್ಯಗಳುಳ್ಳ ಒಂದು ಕಾದಂಬರಿ. ವಸ್ತು ಮತ್ತು ತಂತ್ರಗಳ ದೃಷ್ಟಿಯಿಂದ ಹೊಸತನವನ್ನು ಮೈಗೂಡಿಸಿ ಕೊಂಡಿರುವ ಒಂದು ಚಿಕ್ಕ ಕಾದಂಬರಿ. ಆಧುನಿಕೋತ್ತರ ಭಾರತದ ಪ್ರಸ್ತುತ ಸಮಾಜದ ಬದುಕಿನ ಪುಟಗಳನ್ನು ತೆರೆದಿಡುವ ಈ ಕಾದಂಬರಿಯಲ್ಲಿ ಹಿರಿಯ ತಲೆಮಾರು ಮತ್ತು ಯುವ ತಲೆಮಾರುಗಳ ನಡುವಣ ಮುಖಾಮುಖಿ ಇದೆ. ಯಂತ್ರ ಯುಗದ ಬಳಕೆಗೆ ಇನ್ನೂ ಸರಿಯಾಗಿ ಹೊಂದಿಕೊಳ್ಳದ ಹಿರಿಯ ತಲೆಮಾರು ತನ್ನ ಸಾಂಪ್ರದಾಯಿಕ ನಂಬಿಕೆಗಳಿಗೆ ಇನ್ನೂ ಆತುಕೊಂಡಿದೆಯಾದರೆ ಅದರ ಇಂಚಿಂಚು ಬಳಕೆಯನ್ನೂ ಕರತಲಾಮಲಕವಾಗಿಸಿಕೊಂಡಿರುವ ಯುವ ತಲೆಮಾರು ಇನ್ನೊಂದು ಅಂಚಿನಲ್ಲಿದೆ. ಹಿರಿಯರ ನಂಬಿಕೆ, ಸಂಪ್ರದಾಯ, ರೀತಿನೀತಿಗಳನ್ನು ಒಪ್ಪಿಕೊಳ್ಳಲಾರದ ಯುವ ತಲೆಮಾರು ವ್ಯವಸ್ಥೆಯು ಈಗಾಗಲೇ ಹುಟ್ಟುಹಾಕಿದ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಲಾರದೆ ದ್ವಂದ್ವಗಳ ಸೆರೆಮನೆಯಲ್ಲಿ ಸಿಲುಕಿದ್ದಾರೆ. ಕವಲು ದಾರಿಯಲ್ಲಿರುವ ಯುವ ಸಮಾಜದ ಈ ಸಂಘರ್ಷದ ಶೋಧನೆಯನ್ನು ನಡೆಸುವುದು ಈ ಕಾದಂಬರಿಯ ಗುರಿಯಾಗಿದೆ.
ಕಾದಂಬರಿಯ ಕಥನ ಎರಡು ಸ್ತರಗಳಲ್ಲಿ ನಡೆಯುತ್ತದೆ- ಅಶ್ವತಿಯ ಅನುಭವಗಳು ವಾಸ್ತವದ ನೆಲೆಯಲ್ಲಾದರೆ ಅವಳು ಓದುತ್ತಿರುವ ಒಂದು ಕಾದಂಬರಿಯ ನಾಯಕಿ ಅಪರ್ಣಾಳ ಅನುಭವಗಳು ಕಾಲ್ಪನಿಕ ನೆಲೆಯಲ್ಲಿವೆ. ಇಬ್ಬರ ಜೀವನ ಶೈಲಿ, ಸ್ವಭಾವ, ನಂಬಿಕೆಗಳು, ಸುತ್ತಿ ಬಳಸುವುದನ್ನು ಇಷ್ಟ ಪಡದ ನೇರ ಚಿಂತನೆಗಳು- ಎಲ್ಲದರಲ್ಲೂ ಸಾಮ್ಯವಿದೆ. ಮದುವೆ, ಗಂಡು-ಹೆಣ್ಣುಗಳ ನಡುವಣ ಸಂಬಂಧ, ಸಮಾಜದಲ್ಲಿ ಇತರರೊಂದಿಗೆ ವರ್ತಿಸುವ ರೀತಿ, ಸಾಮಾಜಿಕ ಬದುಕಿಗೆ ಹೊಂದಿಕೊಂಡು ಹೋಗುವ ರೀತಿ -ಎಲ್ಲವಕ್ಕೂ ಹಿರಿಯರು ಮಾಡಿದ ವ್ಯವಸ್ಥೆಯನ್ನು ಅವರ ಮನಸ್ಸು ಒಪ್ಪುವುದಿಲ್ಲ. ಆದರೆ ಅವುಗಳಿಂದ ಬಿಡಿಸಿಕೊಳ್ಳುವ ದಾರಿಯೂ ಅವರಿಗೆ ಸಿಕ್ಕುವುದಿಲ್ಲ. ಈ ಇಬ್ಬಂದಿತನವೇ ಅವರ ಪಾಲಿಗೆ ಸೆರೆಮನೆಯಾಗುತ್ತದೆ.
ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ವಯಸ್ಸಿಗೆ ಬಂದ ನಂತರ ಪರಸ್ಪರ ಬೆರೆಯುವುದು ಸರಿಯಲ್ಲ ಎಂಬ ನಂಬಿಕೆ ವ್ಯವಸ್ಥೆಯಲ್ಲಿ ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ. ಮದುವೆಯ ವಿಷಯದಲ್ಲಿ ಹಿರಿಯರು ನಿಶ್ಚಯಿಸಿದ ಗಂಡು ಹೆಣ್ಣುಗಳೇ ಜೋಡಿಯಾಗಬೇಕು. ಆದರೆ ಅಪರ್ಣಾ ಆಗಲಿ ಅಶ್ವತಿಯಾಗಲಿ ತಮ್ಮ ಕಾಲೇಜು ದಿನಗಳಲ್ಲಿ ಅದಕ್ಕೆ ತದ್ವಿರುದ್ಧವಾದ ವಾತಾವರಣದಲ್ಲಿ ಕಳೆಯುತ್ತಾರೆ. ಗಂಡು-ಹೆಣ್ಣುಗಳು ಯುನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ಜೊತೆ ಜೊತೆಯಾಗಿ ವಾಸಿಸುತ್ತಾರೆ. ಅವರದ್ದೇ ಆದ ಸ್ಪೇಸ್ ಸೃಷ್ಟಿಸಿಕೊಳ್ಳಲು ಅವರಿಗೆ ಅವಕಾಶ ಸಿಗುತ್ತದೆ. ಆದರೆ ಅಪರ್ಣಾಳ ಪ್ರೊಫೆಸರ್ ಆಗಿದ್ದ ನಾರಂಗ್ ಅವರ ದೃಷ್ಟಿಯಲ್ಲಿ ಹೆಣ್ಣು-ಗಂಡು ಸ್ನೇಹಿತರಾಗಿ ಜೊತೆಯಲ್ಲಿದ್ದರೆ ಅವರ ನಡುವೆ ಲೈಂಗಿಕ ಸಂಬಂಧ ಇದ್ದೇ ಇರುತ್ತದೆ. ಆದರೆ ಗಂಡು ಹೆಣ್ಣುಗಳು ಜೊತೆಯಾಗಿರುವ ಐದು ಮಂದಿ ಸಮಾನ ಮನಸ್ಕರ ಗುಂಪಿನಲ್ಲಿ ಒಬ್ಬಳಾದ ಅಪರ್ಣಾಳಿಗೆ ಲೈಂಗಿಕ ಅನುಭವ ಇರಲೇ ಇಲ್ಲ ಅನ್ನುವುದು ಆಧುನಿಕರು ಹೇಗೆ ಭಿನ್ನರಾಗಿದ್ದಾರೆ ಅನ್ನುವುದನ್ನು ಸೂಚಿಸುತ್ತದೆ. ಅಲ್ಲದೆ ಒಂದು ವೇಳೆ ಲೈಂಗಿಕ ಸಂಬಂಧ ಮಾಡಿದರೂ ಅದು ಆಧುನಿಕರ ಪಾಲಿಗೆ ಕೆಟ್ಟ ಕುತೂಹಲ ಹುಟ್ಟಿಸುವ ವಿಷಯವಾಗಿರುವುದಿಲ್ಲ ಮತ್ತು ಅದು ಹಸಿವೆ-ನೀರಡಿಕೆಗಳಂತೆ ಒಂದು ತೀರಾ ಸಹಜವಾದ ವಿಚಾರವಾಗಿರುತ್ತದೆ ಅನ್ನುವುದು ಅಶ್ವತಿಯ ಮತ್ತು ಅವಳ ಸೀನಿಯರ್ ನಡುವೆ ನಡೆದ ಸಂಗತಿಯಿಂದ ಸ್ಪಷ್ಟವಾಗುತ್ತದೆ. ಕ್ಯಾಂಪಸ್ಸಿನಲ್ಲಿ ಗರ್ಭನಿರೋಧಕ ಚೀಲವನ್ನು ಹೊರಗೆ ಹಾಕುವ ಯಂತ್ರವಿರುವುದೂ ವಿದ್ಯಾರ್ಥಿಗಳ ನಡುವೆ ಅದು ಅಷ್ಟೇನೂ ದೊಡ್ಡ ವಿಚಾರವಲ್ಲ ಎಂಬ ವಾತಾವರಣಕ್ಕೆ ಸಾಕ್ಷಿ. ಅಪರ್ಣಾಳಲ್ಲಿ ಗೊಂದಲ ಹುಟ್ಟಿಸುವ ಇನ್ನೊಂದು ವಿಚಾರವೆಂದರೆ ಅವಳು ತನ್ನ ಸ್ನೇಹಿತರೊಂದಿಗೆ ಪ್ರಾಜೆಕ್ಟ್ ಕೆಲಸದ ವಿಚಾರವಾಗಿ ಭೇಟಿಯಾಗಲು ಹೋದ ಟ್ರೈಬಲ್ ಲೀಡರ್‌ನ (ಕಾಡು ಭೂಪ) ವರ್ತನೆ. ಅವನು ತನ್ನ ಜನಾಂಗದಲ್ಲಿ ಹುಟ್ಟಿದ ಪ್ರತಿಯೊಬ್ಬ ಹೆಣ್ಣು ಮಗಳನ್ನು ಲೈಂಗಿಕವಾಗಿ ಮೊದಲು ಭೋಗಿಸುವ ಅಧಿಕಾರವನ್ನು ಇಟ್ಟುಕೊಂಡಿದ್ದ. ಅವನ ಸ್ವಭಾವದಲ್ಲಿ ಕಾಣುವ ಕೃತ್ರಿಮತೆ ಇಲ್ಲದ, ಕಪಟವಿಲ್ಲದ ಸಹಜತೆ ಅವಳ ಗಮನ ಸೆಳೆಯುತ್ತದೆ.
ಇಂಥ ವಾತಾವರಣದಲ್ಲಿ ಕಳೆದ ಅಪರ್ಣಾಳ ಮೇಲೆ ಪ್ರೊಫೆಸರ್ ನಾರಂಗ್ ಲೈಂಗಿಕ ಆಕ್ರಮಣ ಮಾಡುತ್ತಾರೆ. ನಗರದಲ್ಲಿ ಹೆಣ್ಣಿನ ಮೇಲೆ ಲೈಂಗಿಕ ಅತ್ಯಾಚಾರ ನಡೆದಾಗಲೆಲ್ಲ ಅದನ್ನು ಪ್ರತಿಭಟಿಸಿ ಉದ್ದುದ್ದ ಭಾಷಣ ಬಿಗಿಯುವ ಮತ್ತು ತಮ್ಮ ಸಂಶೋಧನಾ ವಿದ್ಯಾರ್ಥಿಗಳನ್ನು ಸೇರಿಸಿ ಗಂಟೆಗಟ್ಟಲೆ ಚರ್ಚಿಸುವ ನಾರಂಗ್ ರಂತಹ ಆಷಾಢಭೂತಿಗಳು ಸಾಮಾಜಿಕ ವ್ಯವಸ್ಥೆಯನ್ನು ಸ್ವಲ್ಪವೂ ವಿರೋಧಿಸದೆ ಎಲ್ಲದಕ್ಕೂ ‘ಅಡ್ಜಸ್ಟ್’ ಆಗುತ್ತ ‘ಒಳಗೊಂದು-ಹೊರಗೊಂದು’ ಬದುಕನ್ನು ನಡೆಸುವ ಹಿರಿಯ ತಲೆಮಾರನ್ನು ಪ್ರತಿನಿಧಿಸುತ್ತಾರೆ.
ಅಪರ್ಣಾಳ ಕಥೆಯನ್ನು ಓದುವ ಅಶ್ವತಿ ಸ್ವಲ್ಪ ನಂತರದ ತಲೆಮಾರಿನವಳು. ಆದ್ದರಿಂದಲೇ ನಾರಂಗ್ ಅಪರ್ಣಾಳ ಮೇಲೆ ಅತ್ಯಾಚಾರ ಮಾಡಿದ ನಂತರ ಮುಟ್ಟಾಗುವುದು ತಡವಾದಾಗ ಅಪರ್ಣಾ ಅಲವತ್ತುಗೊಳ್ಳುವುದನ್ನು ನೋಡಿ ಅವಳು ನಗುತ್ತಾಳೆ. ‘ಮಾತ್ರೆ ತೆಗೆದುಕೊಂಡರೆ ಆಗುತ್ತಿರಲಿಲ್ಲ?’ ಅಂದುಕೊಳ್ಳುತ್ತಾಳೆ. ಕಾಲಚಕ್ರ ಮುಂದೋಡಿದಂತೆ ಸಂಬಂಧಗಳು ಹೆಚ್ಚು ಯಾಂತ್ರಿಕವಾಗುತ್ತ ಹೋಗುವ ವಿಚಿತ್ರ ವಿದ್ಯಮಾನಗಳನ್ನು ನಾವು ಮದುವೆ-ದಾಂಪತ್ಯ-ಮಕ್ಕಳ ಬಗ್ಗೆ ಆಸಕ್ತಿ ಇಲ್ಲದ ಗುಂಪಿಗೆ ಸೇರಿದ ಅಪರ್ಣಾ ಹಿರಿಯರ ಒತ್ತಾಯಕ್ಕೆ ಕಟ್ಟುಬಿದ್ದು ಕೊನೆಗೆ ಹುಡುಗ ತಾನು ಹಿಂದೊಮ್ಮೆ ರೈಲುಯಾತ್ರೆಯಲ್ಲಿ ಭೇಟಿಯಾಗಿ ಸಭ್ಯನಂತೆ ಕಂಡವನೇ ಎಂದು ತಿಳಿದು ಒಪ್ಪಿ ಮದುವೆಯಾಗುತ್ತಾಳೆ. ಆದರೆ ಕ್ರಮೇಣ ಅವನನ್ನು ಅವಳ ಮನಸ್ಸು ತಿರಸ್ಕರಿಸುತ್ತದೆ. ಆತ ಸಣ್ಣ ಮಟ್ಟಿನ ಕವಿಯಾದರೂ ಬರೇ ಹೆಸರು-ಕೀರ್ತಿಗಳ ಹಿಂದೆ ಹೋಗುವುದನ್ನು ನೋಡಿದಾಗ ಅವಳಿಗೆ ನಿರಾಸೆಯಾಗುತ್ತದೆ. ಕೊನೆಗೆ ತಾಯ್ತನದ ಖುಷಿಯನ್ನಾದರೂ ಅನುಭವಿಸೋಣ ಅಂದರೆ ಅವಳು ಗರ್ಭಿಣಿಯಾಗಿದ್ದು ತಿಳಿದಂದಿನಿಂದ ಮಗುವನ್ನು ಜತನದಿಂದ ಕಾಪಾಡಿಕೊಂಡು ಬರಬೇಕೆಂದು ಅವಳನ್ನು ಕ್ಷಣ ಕ್ಷಣಕ್ಕೂ ಪೀಡಿಸಿ ಅವಳ ಎಲ್ಲ ಸ್ವಾತಂತ್ರ್ಯವನ್ನೂ ಆಸೆ ಆಕಾಂಕ್ಷೆಗಳನ್ನೂ ಹಿಸುಕುವ ಅವನ ಮನಸ್ಥಿತಿ ಅವಳನ್ನು ಅಸಹಾಯಕ ಸ್ಥಿತಿಗೆ ದೂಡುತ್ತದೆ. ಅವಳಿಗೆ ತಾನು ತನ್ನ ಸಹಪಾಠಿ ಕಶ್ಯಪ್ ನನ್ನು ಮದುವೆಯಾಗ ಬೇಕಿತ್ತು ಅನ್ನಿಸುತ್ತದೆ. ಆತನ ಬೌದ್ಧಿಕ ಸಾಹಚರ್ಯದಲ್ಲಿ ತಾನು ಸುಖಿಯಾಗಿರುತ್ತಿದ್ದೆ ಅನ್ನಿಸುತ್ತದೆ. ಆಕೆ ಕದ್ದುಮುಚ್ಚಿ ಆತನಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿ ತನ್ನ ದುಃಖವನ್ನು ಹಂಚಿಕೊಳ್ಳುತ್ತಾಳೆ. ಇದು ಅವಳ ದ್ವಂದ್ವ ಮನಸ್ಥಿತಿಯನ್ನು ತೋರಿಸುತ್ತದೆ. ಗರ್ಭಿಣಿಯಾದ ಅವಳಿಗೆ ಪರಿಸ್ಥಿತಿಗೆ ಹೊಂದಿಕೊಳ್ಳದೆ ಬೇರೆ ದಾರಿಯಿಲ್ಲ. ಅಪರ್ಣಾಳ ಕಥೆಯನ್ನು ಓದುವ ಅಶ್ವತಿಗೂ ಮನೆಯಿಂದ ಮದುವೆಯಾಗಬೇಕು ಎಂಬ ಒತ್ತಾಯ ಬಂದಿದೆ. ಆದ್ದರಿಂದ ಅವಳ ಪರಿಸ್ಥಿತಿಯೂ ಭಿನ್ನವಲ್ಲ ಎಂಬ ಸೂಚನೆ ಕಾದಂಬರಿಯಲ್ಲಿದೆ.
ಕಥನ ತಂತ್ರದಲ್ಲಿ ಅಶ್ವತಿ ಮತ್ತು ಅಪರ್ಣಾರ ಕಥೆಗಳು ಸಮಾಂತರವಾಗಿ ಸಾಗುತ್ತವೆ. ಒಂದು ಅಧ್ಯಾಯದಲ್ಲಿ ಅಶ್ವತಿಯ ಕಥೆಯಾದರೆ ಇನ್ನೊಂದರಲ್ಲಿ ಅಪರ್ಣಾಳ ಕಥೆಯಿದೆ. ಕೊನೆಯ ಪುಟದಲ್ಲಿ ಸ್ವಲ್ಪ ಮ್ಯಾಜಿಕ್ ರಿಯಲಿಸಂನ ಸ್ಪರ್ಶವಿದೆ.
ಈ ಕೃತಿಯ ಲೇಖಕಿ ಚಂದ್ರಿಕಾ ಬಾಲನ್ (ಚಂದ್ರಮತಿ ಅವರ ಕಾವ್ಯ ನಾಮ) ಅವರದು ಮಲೆಯಾಳ ಸಾಹಿತ್ಯದಲ್ಲಿ ಬಹಳ ದೊಡ್ಡ ಹೆಸರು. ಅವರ ಒಂದು ಸಣ್ಣ ಕಥೆ ನಾನು 2004ರಲ್ಲಿ ಅನುವಾದಿಸಿದ ‘ಮಲೆಯಾಳದ ಹತ್ತು ಕಥೆಗಾರ್ತಿಯರು’ ಎಂಬ ಪುಸ್ತಕದಲ್ಲಿದೆ. ಆಗಲೇ ನನಗೆ ಅವರ ಪರಿಚಯವಾಗಿತ್ತು. ಎರಡು ವರ್ಷಗಳ ಹಿಂದೆ ಅವರು ಪ್ರಕಟಿಸಿದ ಈ ಕಾದಂಬರಿಯನ್ನು ಓದಿದಾಗ ಇದು ಕನ್ನಡಕ್ಕೆ ಬರಬೇಕಾದ ಕೃತಿಯೆಂದು ನನಗನ್ನಿಸಿತು. ಇದನ್ನು ಪ್ರಕಟಿಸಲು ಮುಂದೆ ಬಂದ ಮೌಲ್ಯಯುತ ಕೃತಿಗಳ ಪ್ರಕಟಣೆಗೆ ಹೆಸರಾಗಿರುವ ‘ಯಾಜಿ ಪ್ರಕಾಶನ’ದ ಶ್ರೀಮತಿ ಸವಿತಾ ಯಾಜಿ ಮತ್ತು ಶ್ರೀ ಗಣೇಶ್ ಯಾಜಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಅನುವಾದಿಸಲು ಸಂತೋಷದಿಂದ ಒಪ್ಪಿಗೆಯಿತ್ತ ಚಂದ್ರಿಕಾ ಬಾಲನ್ ಅವರಿಗೂ ವಂದನೆಗಳು. ಕನ್ನಡದ ಓದುಗರು ಇದನ್ನು ಪ್ರೀತಿಯಿಂದ ಸ್ವಾಗತಿಸುವರೆಂದು ಆಶಿಸುತ್ತೇನೆ.
ಕುಂದಾಪುರ -ಪಾರ್ವತಿ ಜಿ. ಐತಾಳ್
15.11.2025
Our Books

Reviews
There are no reviews yet.