ಕೆಳದಿ ಸಾಮ್ರಾಜ್ಯದ ಕೀರ್ತಿರಥ ಎಳೆದ ಬಿದನೂರು ರಾಣಿ ಚನ್ನಮ್ಮಾಜಿ
ಶಿವಮೊಗ್ಗ ಜಿಲ್ಲೆಯ ಈಗಿನ ಸಾಗರದ ಹತ್ತಿರವಿರುವ ಒಂದು ಹಳ್ಳಿ ಪಳ್ಳಿಬೈಲು. ಅಲ್ಲಿದ್ದ ರೈತನೊಬ್ಬನ ಮಗ ಚೌಡಪ್ಪನಾಯಕ. ಈತ ತನ್ನ ಕುಶಾಗ್ರಮತಿಯಿಂದ ಕ್ರಿ.ಶ. 1500ರಲ್ಲಿ ವಿಜಯನಗರ ಸಾಮ್ರಾಜ್ಯದಡಿಯಲ್ಲಿ ನಾಯಕನಾಗಿ ಕೆಳದಿ ರಾಜ್ಯವನ್ನು ಸ್ಥಾಪಿಸಿದ. ಕ್ರಿ.ಶ. 1565ರಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾದ ಮೇಲೆ ಕೆಳದಿಯ ಹಿರಿಯ ವೆಂಕಟಪ್ಪ ನಾಯಕನ ಕಾಲದಲ್ಲಿ (ಕ್ರಿ.ಶ. 1583-1629) ಕೆಳದಿಯು ಸ್ವತಂತ್ರ ರಾಜ್ಯವಾಗಿ ಘೋಷಿಸಿಕೊಳ್ಳಲ್ಪಡುತ್ತದೆ. ಮೊದಲು ಕೆಳದಿ, ನಂತರ ಇಕ್ಕೇರಿ, ಆ ನಂತರ ಬಿದನೂರು ಈ ರಾಜ್ಯದ ರಾಜಧಾನಿಗಳಾಗಿ ಮೆರೆಯುತ್ತವೆ. ಕೆಳದಿಯ ರಾಜರುಗಳಲ್ಲಿ ಅತ್ಯಂತ ಪ್ರಸಿದ್ಧ ಅರಸು ‘ಶಿಸ್ತಿನ’ ಶಿವಪ್ಪ ನಾಯಕ. ಆತನ ಸೊಸೆಯೇ ಕೆಳದಿಯ ರಾಣಿ ಚನ್ನಮ್ಮ! ಇವಳು ತನ್ನ ಪತಿ, ಹಿರಿಯ ಸೋಮಶೇಖರ ನಾಯಕನ ನಂತರ ಸುಮಾರು 26 ವರ್ಷಗಳವರೆಗೆ ಯಶಸ್ವೀ ರಾಜ್ಯಭಾರ ಮಾಡಿ ಕೆಳದಿ ರಾಜ್ಯವನ್ನು ಸುಖೀ ರಾಜ್ಯವನ್ನಾಗಿ ಮಾಡುತ್ತಾಳೆ. ಮಲೆನಾಡಿನ ಕೋಟಿಪುರದ ಸಾಮಾನ್ಯ ಶೆಟ್ಟಿಯ ಮಗಳೊಬ್ಬಳು ಪಶ್ಚಿಮ ಸಮುದ್ರದವರೆಗೆ ವ್ಯಾಪಿಸಿದ ಸಾಮ್ರಾಜ್ಯಕ್ಕೆ ಅಧಿಪತಿಯಾಗುವುದು ಒಂದು ಸಾಮಾನ್ಯ ಸಂಗತಿಯಲ್ಲ. ಆ ಅದ್ಭುತ ಕುಲನಾರಿಯ ಚರಿತ್ರೆಯನ್ನು ಬಹು ನಿಷ್ಠೆಯಿಂದ ಕಟ್ಟಿಕೊಟ್ಟಿದ್ದಾರೆ ನನ್ನ ಆತ್ಮೀಯ ಮಿತ್ರ ಶ್ರೀ ಉದಯಕುಮಾರ ಹಬ್ಬು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೈಯಾಡಿಸಿ ‘ಸೈ’ ಎನಿಸಿಕೊಂಡವರು. ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಈಗಾಗಲೇ ಪ್ರಕಟಿಸಿದ ಪ್ರಸಿದ್ಧ ಲೇಖಕರು. ಇಂತಹ ಮಹಾನ್ ಲೇಖಕರು “ವೀರರಾಣಿ ಕೆಳದಿ ಚನ್ನಮ್ಮ” ಕೃತಿಯ ಕರಡುಪ್ರತಿಯನ್ನು ಕಳುಹಿಸಿ ನೀವೇ ಮುನ್ನುಡಿಯನ್ನು ಬರೆಯಬೇಕೆಂದಾಗ ಒಮ್ಮೆ ಹಿಂದು ಮುಂದು ಯೋಚಿಸ ಬೇಕಾಯಿತು. ನಾನೋ ಸಾಮಾನ್ಯರಲ್ಲಿ ಸಾಮಾನ್ಯ ಲೇಖಕ. ನನ್ನಿಂದ ಇದು ಸಾಧ್ಯವೇ? ಎಂದು ನಿರಾಕರಿಸಿದೆ. ಬಿಡಬೇಕಲ್ಲ. ಆತ್ಮೀಯ ಒತ್ತಾಯ! ಖ್ಯಾತ ಬರೆಹಗಾರರ ಹೃದಯ ವೈಶಾಲ್ಯಕ್ಕೆ ನನ್ನ ಎದೆ ತುಂಬಿತ್ತು.
ಭಾರತದ ಇತಿಹಾಸದಲ್ಲಿ ಕೆಚ್ಚೆದೆಗೆ, ಸಾಹಸ-ಶೌರ್ಯಕ್ಕೆ ಹೆಸರಾದ ರಾಣಿಮಣಿಗಳು ಹಲವರಿದ್ದಾರೆ. ಅವರಲ್ಲಿ ಒಂದು ಸಾಮ್ರಾಜ್ಯಕ್ಕೇ ರಾಣಿಯಾದವರು ಬೆರಳೆಣಿಕೆಯಷ್ಟು. ಆ ಬೆರಳೆಣಿಕೆಯಲ್ಲಿ ಸುಖೀ ರಾಜ್ಯದ ನಿರ್ಮಿತಿಯ ಕನಸು ಹೊತ್ತವರು ಅತ್ಯಲ್ಪ. ಅಂತಹ ಅತ್ಯಲ್ಪರಲ್ಲಿ ತಟ್ಟನೇ ಕಣ್ಣಿಗೆ ಕಾಣುವವರಲ್ಲಿ ನಮ್ಮ ಕೆಳದಿಯ ರಾಣಿ ಚನ್ನಮ್ಮ ಅಗ್ರಗಣ್ಯಗಳು.
ವಿಜಯನಗರ ಪರಂಪರೆಯ ಧಾರ್ಮಿಕ ಹಿನ್ನಲೆಯ ಪ್ರಧಾನ ಲಕ್ಷಣಗಳೆಂದರೆ; ಧರ್ಮ ರಕ್ಷಣೆ, ಪರಮತ ಸಹಿಷ್ಣುತೆ, ಕಷ್ಟದಲ್ಲಿರುವವರಿಗೆ ಆಶ್ರಯ ಹಾಗೂ ಪರಕೀಯರಿಂದ ದೇಶೀಯ ಸಂಸ್ಕೃತಿಯ ರಕ್ಷಣೆ. ಈ ಪರಂಪರೆಯನ್ನೇ ಕೆಳದಿಯ ಅರಸರೆಲ್ಲರೂ ಪಾಲಿಸುತ್ತಲೇ ಬಂದಿದ್ದಾರೆ. ಅಂತೆಯೇ ಚನ್ನಮ್ಮನೂ ಅದೇ ನೆರಳಿನಲ್ಲಿ ಸಾಗಿರುವುದನ್ನು ಇತಿಹಾಸ ಗುರುತಿಸಿದೆ. ಇದನ್ನು ಕೃತಿಕಾರರು ಚನ್ನಾಗಿಯೇ ಗುರುತಿಸಿದ್ದಾರೆ.
‘ಕೆಳದಿಯ ಚನ್ನಮ್ಮ’ ಆಗುವ ಪೂರ್ವದಲ್ಲಿ ‘ಕೋಟಿಪುರದ ಚನ್ನಮ್ಮ’ಳಾಗಿದ್ದಳು. ಈಕೆ ಕೋಟಿಪುರದ ವ್ಯಾಪಾರಿ ಸಿದ್ಧಪ್ಪ ಶೆಟ್ಟರ ಮಗಳು. ಕೊಲ್ಲೂರು ಮೂಕಾಂಬಿಕೆಯ ಅಂಶಸಂಭೂತಳೂ, ಲೋಕೋತ್ತರ ಸುಂದರಿಯೂ, ಮಂಗಳಾಂಗಿಯೂ, ಭೃಂಗಕುಂತಳೆಯೂ ಆದ ಇವಳು ಶಿವಪ್ಪ ನಾಯಕನ ಐದು ಜನ ರಾಣಿಯರಲ್ಲಿ ಕೊನೆಯ ರಾಣಿ ಬಸವಲಿಂಗಮ್ಮಾಜಿಯ ಪುತ್ರ ಸೋಮಶೇಖರ ನಾಯಕನ ಮನ ಗೆದ್ದವರಲ್ಲಿ ವಿಶೇಷವೇನೂ ಇಲ್ಲ.
ಸೋಮಶೇಖರ ನಾಯಕ ಚಲುವನೂ ಹೌದು, ಮಹಾ ಪರಾಕ್ರಮಿಯೂ ಹೌದು. ಆದರೆ ದುಷ್ಟ ಕಾರಸ್ಥಾನದಲ್ಲಿ ಸಿಲುಕಿ ಕಿರು ವಯಸ್ಸಿನಲ್ಲೇ ಕೊಲೆಯಾಗಿ ಹೋಗುತ್ತಾನೆ. ಬಾಳ ಬುತ್ತಿಯ ಗಂಟು ಬಿಚ್ಚುವ ಮೊದಲೇ ತನ್ನ ಪತಿಯನ್ನು ಕಳೆದುಕೊಂಡು ವಿಧವೆಯಾಗುವ ಚನ್ನಮ್ಮ; ಬಂಜೆ ಎಂಬುವ ಪಟ್ಟವನ್ನು ಬೆನ್ನಿಗಂಟಿಸಿಕೊಂಡೇ, ಪರಂಪರೆಯ ತಾಳಕ್ಕೆ ಕುಣಿಯದೆ, ಸಹಗಮನ ವಿರೋಧಿಸಿ, ಅಂದಿನ ಪುರುಷ ಪ್ರಭುತ್ವಕ್ಕೇ ಸವಾಲು ಹಾಕಿದ ಧಿಟ್ಟ ಮಹಿಳೆ! ಸಾಂಪ್ರದಾಯಕ ‘ಮನೆಯ ಹರೆಯದ ವಿತಂತುಗಳು, ಬಾಲವಿಧವೆಯರು ಬಾಗಿಲಿನ ಅಲಂಕಾರಕ್ಕೆ ಬಳಿದಿದ್ದ ಕೆಂಪು ಮಣ್ಣಿನ ಮೇಲೆ ಎಂಜಲು ಹಚ್ಚಿ ನಡು ಬೆರಳಿಗೆ ಅಂಟು ಮಾಡಿಕೊಂಡು, ಗುಪ್ತವಾಗಿ ಕನ್ನಡಿಯನ್ನು ನೋಡಿಕೊಂಡು ಹಣೆಗೆ ಹಚ್ಚಿಕೊಂಡು ಕೆಲವು ಹೊತ್ತು ಸಂಭ್ರಮಿಸಿ ಮನೆಯ ಹಿರಿಯರು ನೋಡಿಯಾರೆಂದು ಆತಂಕಗೊಂಡು ಕೂಡಲೇ ಸೆರಗಿನಿಂದ ಹಣೆಯನ್ನೂ, ತುಂಬಿಹರಿವ ಕಂಬನಿಯನ್ನೂ ಒರೆಸಿಕೊಳ್ಳುವ ಕಾಲವದು. ಬಿಸಿಲುಗಾಣದೆ ಮನೆಯೆಂಬ ಸೆರೆಮನೆಯ ನಾಲ್ಕು ಗೋಡೆಗಳ ನಾಚಿಕೆಯ ಮುಸುಕುಹೊದ್ದು ಅನ್ಯರಿಗೆ ಕಾಣದಂತೆ ಮೊಣಕಾಲ ಸಂಧಿಯಲಿ ಮುಖ ಹುದುಗಿಸಿಕೊಂಡು ಬಿಕ್ಕಳಿಕೆಯ ಬಿಕ್ಕನ್ನೂ ಗಂಟಲಲ್ಲಿ ನುಂಗುತ್ತಾ ಬಾಳ ನೂಕುವ ವಿಧವೆಯರ ಕರಾಳ ದಿನಗಳವು.
‘ಮಕ್ಕಳನ್ನು ಹಡೆಯದ ಬಂಜೆ, ಗಂಡನಿಲ್ಲದ ವಿಧವೆ, ಇವಳಿಗೇಕೆ ಕೆಳದಿಯ ರಾಜ್ಯಪಟ್ಟ?’ ಎನ್ನುವ ಕುಹಕರ ನಾಲಿಗೆಯನ್ನು ಮೆಟ್ಟಿ, ಕರಾಳ ಕಗ್ಗತ್ತಲೆಯ ಗರ್ಭವನ್ನು ಸೀಳಿ ಹೊರಬಂದ ಧೀರೋದ್ಧಾತ ಮಹಿಳೆ ಕೆಳದಿ ಚನ್ನಮ್ಮ!!
ಗಂಡನ ದುರಂತ ಮರಣದಿಂದ ರಾಜ್ಯದಲ್ಲಿ ಎಲ್ಲೆಲ್ಲೂ ಕ್ಷೋಭೆಯ ವಾತಾವರಣ ಸೃಷ್ಟಿಯಾಗುತ್ತದೆ. ಉತ್ತರಾಧಿಕಾರಕ್ಕಾಗಿ ಸೆಣಸಾಟಗಳು ಆರಂಭವಾಗುತ್ತವೆ. ವಿರೋಧಿಗಳು ಚನ್ನಮ್ಮನನ್ನು ನಿರ್ಲಕ್ಷಿಸಿ ಕ್ಷುಲ್ಲಕನೊಬ್ಬನನ್ನು ಉತ್ತರಾಧಿಕಾರಿಯೆಂದು ಪರಿಗಣಿಸಿ ಅವನನ್ನೇ ಸಿಂಹಾಸನದ ಮೇಲೆ ಕುಳ್ಳಿರಿಸಿ ಮೆರೆಯುತ್ತಾರೆ. ಮೂರು ತಿಂಗಳವರೆಗೆ ಮೌನದ ಬಾಣಲೆಯೊಳಗೆ ಕುದಿದು ಕುದಿದು ಇನ್ನೇನು ಮುಗಿದೇಹೋಯಿತು ಎನ್ನುವಾಗ ಬೆಳಕೊಂದು ಇಣುಕಿತ್ತು. ತನ್ನ ಸಂಬಂಧಿಕರ ಹಾಗೂ ಕೆಲವು ನಿಷ್ಠಾವಂತ ಕೆಳದಿಯ ಅಧಿಕಾರಿಗಳ ನೆರವಿನ ಹಸ್ತ ಮುಂದೆ ಬಂದಿತ್ತು. ಮನೋಸ್ಥೈರ್ಯ ಗೂಡುಕಟ್ಟಿತ್ತು. ಸುತ್ತುಮುತ್ತು ಸುತ್ತಿಕೊಂಡಿದ್ದ ಶತ್ರುಪಕ್ಷದವರನ್ನು ಸದೆಬಡಿದು ಚನ್ನಮ್ಮಾಜಿಯು ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರ್ಷ 1594ನೆಯ ವಿರೋಧಿಕೃತ ಸಂವತ್ಸರದ ಫಾಲ್ಗುಣ ಬಹುಳ 10ರಲ್ಲಿ (ಕ್ರಿ.ಶ. 1672) ಭುವನಗಿರಿ ದುರ್ಗದ ಅರಮನೆಯಲ್ಲಿ ಪಟ್ಟಾಭಿಷಕ್ತಳಾದಳು.
ಪಟ್ಟಾಭಿಷೇಕಗೊಂಡ ಚನ್ನಮ್ಮ ತನ್ನ ಅಸಾಧಾರಣ ಮನೋಬಲದಿಂದ ಕೆಳದಿ ರಾಜ್ಯದ ಆಂತರಿಕ ಬಾಹ್ಯ ಶತ್ರುಗಳನ್ನು ನಿವಾರಿಸಿಕೊಂಡು ಶಾಂತಿ ಸುವ್ಯವಸ್ಥೆ ನೆಲೆಗೊಳ್ಳುವಂತೆ ಕ್ರಮಕೈಗೊಂಡಳು. ಅಸಹಾಯಕ ಪರಿಸ್ಥಿತಿಯಲ್ಲಿ ಕೈಬಿಟ್ಟು ಹೋದ ಅನೇಕ ಪ್ರಾಂತಗಳನ್ನು ಗೆದ್ದು ತನ್ನ ರಾಜ್ಯದ ಗಡಿಯನ್ನು ವಿಸ್ತರಿಸಿದಳು.
ಅಬಲೆ ಹೆಣ್ಣೊಬ್ಬಳು ಕೆಳದಿ ರಾಜ್ಯದ ಆಡಳಿತವನ್ನು ವಹಿಸಿಕೊಂಡಿದ್ದಾಳೆಂದು ಅತ್ಯಂತ ತಿರಸ್ಕಾರದಿಂದ ಅಹಂಕಾರಯುತರಾಗಿ ಬಿದನೂರ ಮೇಲೆ ದಂಡೆತ್ತಿ ಬಂದ ಸೋದೆ, ಬೀಳಗಿ, ಬನವಾಸಿ ಮುಂತಾದ ವೈರಿ ಅರಸರ ಅಪಾರ ಗಜತುರಗ ಮತ್ತು ದ್ರವ್ಯಗಳನ್ನು ವಶಪಡಿಸಿಕೊಂಡು ಅವರ ಗರ್ವಭಂಗ ಮಾಡಿ ಓಡಿಸಿದಳು. ಹೊನ್ನಾಳಿ ಮಿಡಿಜಿಕೋಟೆ, ಹುಲಿಕೆರೆ ಕೋಟೆಗಳನ್ನು ಗೆದ್ದು ಹುಲಿಕೆರೆಯನ್ನು ತನ್ನ ಹೆಸರಿನಿಂದ ‘ಚನ್ನಗಿರಿ’ ಎಂದು ನಾಮಕರಣ ಮಾಡಿ ಬಂಡೆದ್ದು ಬಂದ ತುಳು ರಾಜ್ಯದ ಸಂಸ್ಥಾನಿಕರನ್ನು ಅಡಗಿಸಿ ಅವರು ಕಪ್ಪಕಾಣಿಕೆ ಸಲ್ಲಿಸುವಂತೆ ಮಾಡಿ, ಮೈಸೂರು ಪ್ರಾಂತಕ್ಕೆ ಸೇರಿದ ಬಾಣಾವರ, ಹಾಸನ ಬೇಲೂರುಗಳನ್ನು ವಶಪಡಿಸಿಕೊಂಡಳು. ಮೈಸೂರಿನ ದಳವಾಯಿ ಕುಮಾರಯ್ಯನನ್ನು ಸೋಲಿಸಿ ಓಡಿಸಿದಳು. ಈ ಎಲ್ಲ ಹೋರಾಟದ ಮುಂಚೂಣಿಯಲ್ಲಿದ್ದವರು ಸುಬುನೀಸ ಕೃಷ್ಣಪ್ಪಯ್ಯ, ಕಾಸರಗೋಡು ತಿಮ್ಮಣ್ಣ.
ಮರಾಠ ದೊರೆ ಶಿವಾಜಿಯ ಮಗ ರಾಜಾರಾಮನು ಮೊಗಲ್ ಚಕ್ರವರ್ತಿ ಔರಂಗಜೇಬನ ಕ್ರೌರ್ಯದಿಂದ ಕಂಗೆಟ್ಟು ಜಂಗಮ ವೇಷಧಾರಿಯಾಗಿ ಬಿದನೂರಿಗೆ ಬಂದಾಗ (25.03.1689) ಚನ್ನಮ್ಮ ಆತನಿಗೆ ಆಶ್ರಯದಾತೆಯಾದುದು ಇತಿಹಾಸ ಎಂದೂ ಮರೆಯಲಾರದು. ಕೇವಲ ಹತ್ತೊಂಬತ್ತರ ಹರೆಯದ ಅಸಹಾಯಕ ರಾಜಕುಮಾರ ರಾಜಾರಾಮನು ಕೆಳದಿ ರಾಣಿ ಚನ್ನಮ್ಮಾಜಿಯಲ್ಲಿ ರಕ್ಷಣೆಗಾಗಿ ಮೊರೆಹೊಕ್ಕಾಗ ಮಂತ್ರಿಮಂಡಲ ಅದನ್ನು ವಿರೋಧಿಸಿತು.
ರಾಜ್ಯಕ್ಕೆ ಬಹು ದೊಡ್ಡ ವಿಪತ್ತು ಒದಗಬಹುದೆಂದು ಎಚ್ಚರಿಸಿತು. ಆದರೆ ‘ಪೊರೆ ಪೊರ್ದಿದವರಂ’ ಎಂಬ ನಿಜಗುಣ ಶಿವಯೋಗಿಯವರ ತತ್ವದಂತೆ ‘ಎಲ್ಲ ರೀತಿಯ ದಾನಗಳಿಗಿಂತ ಆಶ್ರಯದಾನ, ಪ್ರಾಣದಾನ ಶ್ರೇಷ್ಠವಾದುದು’ ಎಂದು ಹೇಳಿ ಅವರನ್ನು ಒಪ್ಪಿಸುತ್ತಾಳೆ. ರಾಜಾರಾಮನಿಗೆ ಆ ಹೊತ್ತು ದ್ವಿಭಾಹು ದುರ್ಗೆಯಾಗಿಯೂ, ಉಸಿರಾಡುವ ದೇವಶಿಲ್ಪದಂತೆಯೂ, ಸಾಕ್ಷಾತ್ ತಾಯಿ ಅಂಬಾಭವಾನಿಯಂತೆ ತೋರುತ್ತಾಳೆ. ತನ್ನ ವೈರಿಯ ಮಗನಿಗೆ ಆಶ್ರಯ ನೀಡಿದ್ದಕ್ಕಾಗಿ ಔರಂಗಜೇಬನೊಂದಿಗೆ ಅನಿವಾರ್ಯವಾಗಿ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಊಹಿಸಿದಂತೆಯೇ ಕೆಲವೇ ದಿನಗಳಲ್ಲಿ (ಶಾಲಿವಾಹನ ಶಕ ವರ್ಷ 1611ರ ಶುಕ್ಲ ಸಂವತ್ಸರದ ವೈಶಾಖ ಮಾಸದ ಬಹುಳ ಅಂದರೆ 05.05.1668೦ರಿಂದ 19.05.1989 ಮಧ್ಯ ಭಾಗದಲ್ಲಿ) ಔರಂಗಜೇಬನ ಮಗ ಮೊಹ್ಮದ್ ಅಜಮ್ ಶಾಹ, ದಂಡಾಧಿಕಾರಿಗಳಾದ ಅಬ್ದುಲ್ ಖಾನ್ ಹಾಗೂ ನಿಸಾರ್ ಖಾನ್ ಅವರನ್ನೊಳಗೊಂಡ ಬಹು ದೊಡ್ಡ ಮೊಗಲ ಸೈನ್ಯವು ಬಿದನೂರನ್ನು ಮುತ್ತಿಗೆ ಹಾಕುತ್ತದೆ. ಈ ಐತಿಹಾಸಿಕ ಧರ್ಮಯುದ್ಧದಲ್ಲಿ ಸ್ವತಃ ಚನ್ನಮ್ಮಾಜಿ ಸೈನ್ಯದ ನೇತೃತ್ವವನ್ನು ವಹಿಸುತ್ತಾಳೆ. ರಣಚಂಡಿಯ ಹೊಡೆತಕ್ಕೆ ಮೊಗಲ ಸೈನ್ಯ ಧೂಳಿಪಟ ವಾಗುತ್ತದೆ. ರಾಜಾರಾಮ ಬಿದನೂರಿನ ಅರಮನೆಯಲ್ಲಿ ಸುಮಾರು ಆರು ತಿಂಗಳ ಕಾಲವಿದ್ದು, ಮಾತೃಸ್ವರೂಪಿ ತಾಯಿ ಚನ್ನಮ್ಮನ ವಾತ್ಸಲ್ಯದ ಸವಿಯನ್ನುಂಡು ರಕ್ಷಣೆಯೊಂದಿಗೆ ಜಿಂಜಿಗೆ ಪ್ರಯಾಣಿಸುತ್ತಾನೆ.
ಚನ್ನಮ್ಮಾಜಿಯು ದತ್ತಿದಾನಗಳನ್ನು ಕೊಟ್ಟದ್ದನ್ನು ಬರೆಯುತ್ತಾ ಹೋದರೆ ಅದೇ ಒಂದು ದೊಡ್ಡ ಪ್ರಬಂಧವಾದೀತು. ಸಂಕ್ಷಿಪ್ತದಲ್ಲಿ ಹೇಳುವುದಾದರೆ- ಶೃಂಗೇರಿ ಮಠಕ್ಕೆ ರಾಜಾಶ್ರಯವನ್ನು ಮುಂದುವರಿಸಿದುದು, ಕೊಲ್ಲೂರು ಮೂಕಾಂಬಿಕಾ ದೇವಿಗೆ ಪಚ್ಚೆಯ ಪದಕವನ್ನು ಕೊಟ್ಟು ಅಲ್ಲಿಯ ಪೂಜಾ ಕಾರ್ಯಗಳನ್ನು ಸಾಂಗವಾಗಿ ನೆರವೇರುವಂತೆ ಭೂದಾನ ಮಾಡಿದುದು, ಜಂಗಮ ಮಠಗಳಿಗೆ, ವಿರಕ್ತ ಮಠಗಳಿಗೆ ಉಂಬಳಿ ಉತ್ತಾರ ಬಿಟ್ಟುದು, ಬಾಬಾ ಬುಡನಗಿರಿಯ ದೇಗುಲವನ್ನು ಕಟ್ಟಿಸಿದುದು, ಬಿದನೂರು ನೀಲಕಂಠೇಶ್ವರ ದೇವರ ರಥೋತ್ಸವ ವ್ಯವಸ್ಥಿತವಾಗಿ ನಡೆಯುವಂತೆ ಮಾಡಿದುದು, ಕಾಶಿ, ರಾಮೇಶ್ವರ, ಶ್ರೀಶೈಲ, ತಿರುಪತಿ ಮುಂತಾದ ಪುಣ್ಯಕ್ಷೇತ್ರಗಳಲ್ಲಿ ವರ್ಷಾಶನದ ಕಟ್ಟಳೆಗಳನ್ನು ನಿರ್ಮಿಸಿದುದು, ಕೆಳದಿಯ ವೀರಭದ್ರ ದೇವಾಲಯದ ಶಿಖರ, ಭೋಗಮಂಟಪ, ಧ್ವಜಸ್ತಂಭ, ಸ್ಥಾಪಿಸಿದುದು, ಬಿಳಕಿ ಗ್ರಾಮದ ವೀರಭದ್ರ ದೇವರ ಅಮೃತಪಡಿ ನಂದಾದೀವಿಗೆಗೆ ದತ್ತಿ, ಸಿದ್ಧಗಿರಿಮಠದ ಸೇವೆಗೆ ತಲಕಟ್ಟೆ ಗ್ರಾಮದ ಕೆಲವು ಭೂಮಿದಾನ ಮಾಡಿದುದು. ಅನಾಥ ಮಕ್ಕಳಿಗೆ ಹಾಲು ಬೆಣ್ಣೆಗೆಂದೇ ಕೆಲವು ಗ್ರಾಮಗಳ ಉತ್ಪತ್ತಿಯನ್ನೇ ಮೀಸಲಾಗಿಟ್ಟು ದುದು ಮುಂತಾದವುಗಳನ್ನು ಹೆಸರಿಸುತ್ತಾ ಹೋಗಬಹುದು. ಎಷ್ಟೇ ಹೆಸರಿಸಿದರೂ ಕಮ್ಮಿಯೇ! ಒಟ್ಟಾರೆ ಹೇಳುವುದಾದರೆ ಚನ್ನಮ್ಮಾಜಿಯ ಆಡಳಿತಕ್ಕೊಳಪಟ್ಟ ಪ್ರದೇಶಗಳಲ್ಲಿ ದಾನ ದತ್ತಿಗಳನ್ನು ಪಡೆಯದೇ ಉಳಿದಿರುವ ಅಗ್ರಹಾರಗಳಿಲ್ಲ, ಮಠ-ಮಂದಿರಗಳಿಲ್ಲ, ಮಸೀದಿ-ಚರ್ಚುಗಳಿಲ್ಲ. ಈ ಕುರಿತಂತೆ ಕೃತಿಕಾರ ಉದಯಕುಮಾರ ಹಬ್ಬು ಬೆಳಕು ಬೀರಿದ್ದಾರೆ.
ಚನ್ನಮ್ಮಾಜಿಯು ರಾಜ್ಯಾಡಳಿತಕ್ಕೆ ಹೆಚ್ಚಿನ ಗಮನವನ್ನು ಹರಿಸಿದ್ದಳು. ವಿಶೇಷವಾಗಿ ಘಟ್ಟದ ಕೆಳಗಿನ ಪ್ರದೇಶದ ರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದಳು. ರಾಜಪ್ರತಿನಿಧಿಗಳು ಇಲ್ಲಿನ ಪ್ರಾಂತಾಧಿಕಾರಿಗಳಾಗಿ ಕೆಲಸ ನಿರ್ವಹಿಸುವಂತೆ ವ್ಯವಸ್ಥೆ ಮಾಡಿದಳು. ತನ್ನ ವಶದಲ್ಲಿರುವ ಅರಸರಿಂದ ಪ್ರತಿ ವರ್ಷ ಕರಾರಿನ ಪ್ರಕಾರ ಕಪ್ಪ ಕಾಣಿಕೆಗಳು ತಪ್ಪದೇ ರಾಜಧಾನಿಗೆ ಬರುವಂತೆ ಎಚ್ಚರಿಕೆ ವಹಿಸಿದಳು. ಚನ್ನಮ್ಮಾಜಿಯ ರಾಜ್ಯದಲ್ಲಿ ಕಳ್ಳಕಾಕರಿಗೆ, ದುಷ್ಟ ಶಕ್ತಿಗಳಿಗೆ ಕಠಿಣ ಶಿಕ್ಷೆ ಇತ್ತು. ಸಜ್ಜನರಿಗೆ ಪುರಸ್ಕಾರವೂ ಇತ್ತು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಲಕ್ಷ್ಯವಹಿಸಿದ ಚನ್ನಮ್ಮನ ಆಡಳಿತದಲ್ಲಿ ರಾಜ್ಯ ಅತ್ಯಂತ ಸುಭಿಕ್ಷವಾಗಿತ್ತು. ಶಾಂತಿ, ನೆಮ್ಮದಿಯಿಂದ ಕೂಡಿತ್ತು.
ಚಿಕ್ಕವಯಸ್ಸಿನಲ್ಲಿಯೇ ವಿಧವೆಯಾಗಿ ಸಂತಾನಹೀನಳೆನಿಸಿದ ಚನ್ನಮ್ಮ ತನ್ನ ಸ್ಥಾನಕ್ಕೆ ಉತ್ತರಾಧಿಕಾರಿಯನ್ನಾಗಿ ಮರಿಯಪ್ಪಶೆಟ್ಟರ ಮಗ ಬಸಪ್ಪ ನಾಯಕನನ್ನು ಸರ್ವಾನು ಮತದಿಂದ ದತ್ತಕ ಪಡೆದು, ಅವನಿಗೆ ಯೋಗ್ಯ ಶಿಕ್ಷಣ ಕೊಡಿಸಿದಳು. ಚನ್ನಮ್ಮ ಲಿಂಗೈಕ್ಯಳಾಗುವ ಮುನ್ನಾದಿನ ತನ್ನ ದತ್ತು ಪುತ್ರ ಬಸವಪ್ಪ ನಾಯಕನನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡು ಮಾರ್ಗದರ್ಶನ ಮಾಡುತ್ತಾ ಮೌಲ್ಯಯುತವಾದ ಉಪದೇಶ ಮಾಡಿದುದು ಪ್ರಸಿದ್ಧ. ಇದನ್ನು ಇತಿಹಾಸ ದಾಖಲಿಸಿದೆ. ಈ ಕುರಿತಂತೆ ಗಮನಿಸಿರುವ ಕೃತಿಕಾರರು ಆ ಬಗ್ಗೆ ಸವಿವರಣೆ ನೀಡಲು ಮರೆತಿಲ್ಲ.
ಚನ್ನಮ್ಮಾಜಿಯು ಬಿದನೂರನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದಳು. ಈ ಬಿದನೂರು ಎಂಬುದು ಈಗಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಬರುವ ಈಗಿನ ಒಂದು ಪುಟ್ಟ ಗ್ರಾಮ. ಆದರೆ ಚನ್ನಮ್ಮಾಜಿಯ ಕಾಲಕ್ಕಾಗಲೇ ಒಂದು ಲಕ್ಷ ಮನೆಗಳಿಂದ ಕೂಡಿತ್ತು.
ಬಿದನೂರು ಸುಪ್ರಸಿದ್ಧ ವಾಣಿಜ್ಯ ಕೇಂದ್ರವಾಗಿತ್ತು. ಅರಬ್ಬಿ ಕಡಲಿನ ತೀರದಲ್ಲಿ ವ್ಯಾಪಾರದ ಕೋಠಿಗಳನ್ನು ಕಟ್ಟಿಕೊಳ್ಳಲು ಪೋರ್ಚುಗೀಸರಿಗೆ, ಡಚ್ಚರಿಗೆ ಮತ್ತು ಇಂಗ್ಲೀಷರಿಗೆ ಅನುಮತಿ ನೀಡಿದ್ದಳು. ಇದರಿಂದ ವಿದೇಶೀಯ ವ್ಯಾಪಾರವು ತುಂಬಾ ಅಭಿವೃದ್ಧಿಯಾಯಿತು. ರಾಣಿ ಚನ್ನಮ್ಮಾಜಿಯ ಕಾಲದಲ್ಲಿ ಇಲ್ಲಿಂದ ಹಡಗಿನ ಮೂಲಕ ಅರೇಬಿಯಾಕ್ಕೆ ಅಕ್ಕಿ ರಫ್ತಾಗುತ್ತಿತ್ತು. ‘ಈಶ್ವರೀ ಮಹಾಮ್ಮಾಯಿ’ ಎಂಬ ದೊಡ್ಡ ವ್ಯಾಪಾರಿ ಹಡಗನ್ನು ವಿದೇಶೀಯ ವ್ಯಾಪಾರಕ್ಕಾಗಿ ಬಳಸಲಾಗುತ್ತಿತ್ತು. ಸರಫನ್ ಮಲಕ್ ಎಂಬುವವನು ಚನ್ನಮ್ಮಾಜಿಯ ಆಸ್ಥಾನದಲ್ಲಿ ವಿದೇಶಿ ರಾಯಭಾರಿಯಾಗಿದ್ದನು. ಆತ ಚನ್ನಮ್ಮಾಜಿಯ ದಕ್ಷ ಆಡಳಿತದ ಬಗ್ಗೆ ಪ್ರಶಂಸಿಸಿದ್ದಾನೆ. ಡಾ. ಜಾನ್ ಪ್ರಾಯರ್ ಎಂಬ ಇಂಗ್ಲೀಷ್ ಪ್ರವಾಸಿಯು ಚನ್ನಮ್ಮಾಜಿಯ ಕಾಲಕ್ಕೆ (ಕ್ರಿ.ಶ. 1672ರಲ್ಲಿ) ರಾಜಧಾನಿ ಬಿದನೂರಿಗೆ ಭೇಟಿ ನೀಡಿ ಇಲ್ಲಿಯ ಸುಖ ಸಮೃದ್ಧತೆಯ ಬಗ್ಗೆ ದಾಖಲಿಸಿದ್ದಾನೆ. ಮಾತ್ರವಲ್ಲ ರಾಣಿ ಚನ್ನಮ್ಮಾಜಿಯ ರಾಜ್ಯದುದ್ದಕ್ಕೂ ಕ್ರೈಸ್ತರು ತಮ್ಮ ಧರ್ಮವನ್ನು ಪಾಲಿಸುತ್ತಾ ಸಂತೋಷವಾಗಿದ್ದಾರೆ ಎಂದು ತಿಳಿಸಿದ್ದಾನೆ. ಪೋರ್ಚುಗೀಸರ ಪ್ರಭುತ್ವದ ಧಾರ್ಮಿಕ ಕಿರುಕುಳದಿಂದಾಗಿ (ಇಂಕ್ವಿಜಿಶನ್) ಗೋವೆಯನ್ನು ತೊರೆದು ಬಂದ ಸಾವಿರಾರು ಜನ ಕೊಂಕಣಿ ಕ್ರೈಸ್ತರಿಗೆ ಕರಾವಳಿ ಹಾಗೂ ಮಲೆನಾಡ ಪ್ರದೇಶದಲ್ಲಿ ಆಶ್ರಯ ಕೊಟ್ಟಿದ್ದಳು ಚನ್ನಮ್ಮಾಜಿ. ಫ್ರಾನ್ಸಿಸ್ ಬುಖಾನನ್ ಪ್ರಕಾರ ರಾಣಿ ಚನ್ನಮ್ಮಾಜಿ ಸೇರಿದಂತೆ ಕೆಳದಿ ನಾಯಕರ ಕಾಲದಲ್ಲಿ ಸುಮಾರು 80,000 ಕೊಂಕಣಿ ಕ್ರೈಸ್ತರು ಗೋವಾದಿಂದ ಕರಾವಳಿ ಪ್ರದೇಶಗಳಿಗೆ ವಲಸೆ ಬಂದಾಗ ಅವರಿಗೆ ಆಶ್ರಯ ಕೊಟ್ಟಿದ್ದರು. ಮಾತ್ರವಲ್ಲ ತಮ್ಮದೇ ಆದ ಭಾಷೆ (ಕೊಂಕಣಿ), ಉಡುಪು, ನಡವಳಿಕೆಗಳಿಗನುಗುಣವಾಗಿ ನಡೆದುಕೊಳ್ಳಲು ಕೆಳದಿಯ ನಾಯಕರು ಯಾವ ಅಡ್ಡಿ ಆತಂಕಗಳನ್ನು ಒಡ್ಡಿರಲಿಲ್ಲ. ಹಾಗೆ ಮುಂದುವರಿಯುತ್ತಾ ಈ ಪ್ರದೇಶದ ಕೊಂಕಣಿ ಕ್ರೈಸ್ತರು ಉಡುಪು, ಭಾಷೆ ಮತ್ತು ನಡವಳಿಕೆಗಳಲ್ಲಿ ಅಚ್ಚ ದೇಶೀಯರೇ ಆಗಿದ್ದರು ಎಂದು ತಿಳಿಸುತ್ತಾನೆ. ಕೆಳದಿಯ ರಾಜ್ಯದಲ್ಲಿ ಚನ್ನಮ್ಮಾಜಿಯ ಕಾಲಕ್ಕೆ ಇಪ್ಪತ್ತೇಳು ಇಗರ್ಜಿಗಳಿದ್ದವು. ಮಂಗಳೂರಿನಲ್ಲಿ ಮಿಲಾಗ್ರಿಸ್ ಇಗರ್ಜಿಯನ್ನು ಕಟ್ಟಲು ಕ್ರೈಸ್ತ ಅಧಿಕಾರಿಗಳಾಗಿದ್ದ ಬಿಷಪ್ ತೋಮಸ್ ಡಿ’ಕ್ರಾಸ್ಟೊ ಅವರಿಗೆ ಸೂಕ್ತವಾದ ಸ್ಥಳವನ್ನು, ನೆರವನ್ನೂ ಚನ್ನಮ್ಮ ನೀಡಿದ್ದಳು. ಇದಲ್ಲದೆ ಉಡುಪಿಯ ಬಳಿ ಕಲ್ಯಾಣಪುರದಲ್ಲಿರುವ ದೇಶೀಯ ಕ್ರೈಸ್ತರು ಇಗರ್ಜಿಯನ್ನು ಕಟ್ಟಿಕೊಳ್ಳಲು ಎಲ್ಲ ರೀತಿಯಲ್ಲೂ ನೆರವಾದಳು ಎಂಬುದನ್ನು ಬುಖಾನನ್ ದಾಖಲಿಸುತ್ತಾ ಆಕೆಯ ಧಾರ್ಮಿಕ ಸಹಿಷ್ಣುತೆಯನ್ನು ಕೊಂಡಾಡುತ್ತಾನೆ.
ಚನ್ನಮ್ಮಾಜಿಯ ರಾಣಿಯಾಗುವ ಪೂರ್ವದಲ್ಲಿಯೇ (ಕ್ರಿ.ಶ. 1672-98) ಕೆಳದಿ ರಾಜ್ಯ; ಉತ್ತರದ ಇಂದಿನ ಮಿರ್ಜಾನ್, ಈಶಾನ್ಯದಲ್ಲಿ ಮಾಸೂರು, ಹೊಳಲ್ಕೆರೆ, ಪೂರ್ವದಲ್ಲಿ ಚಿಕ್ಕನಾಯಕನಹಳ್ಳಿ, ದಕ್ಷಿಣದಲ್ಲಿ ಮಲ್ಲಿಪಟ್ಟಣ ಮತ್ತು ಪಶ್ಚಿಮದಲ್ಲಿ ಅರಬ್ಬಿ ಸಮುದ್ರದ ವರೆಗೆ ವ್ಯಾಪಿಸಿತ್ತು.
ಶಿಸ್ತಿನ ಶಿವಪ್ಪ ನಾಯಕನ ಮಗ ಹಿರಿಯ ಸೋಮಶೇಖರ ನಾಯಕ ಕೆಳದಿ ಸಾಮ್ರಾಜ್ಯದ ಕೀರ್ತಿಯ ರಾಜ್ಯರಥವನ್ನು ಎಳೆಯಲಿಲ್ಲ. ಆದರೆ ಆತನ ಸಹಧರ್ಮಿಣಿಯಾದ ಚನ್ನಮ್ಮಾಜಿ ಬಹು ಅಚ್ಚುಕಟ್ಟಾಗಿಯೇ ನಿರ್ವಹಿಸಿದಳು.
ದತ್ತು ಮಗನನ್ನು ಕಟ್ಟಿಕೊಂಡು ಅವನನ್ನು ಸಾರ್ಥಕ ಮಗನನ್ನಾಗಿ ಈ ನಾಡಿಗೆ ಕೊಟ್ಟು ಬಾಳಿ ಬೆಳದಿಂಗಳಾದಳು. ಜಂಗಮಪ್ರೇಮಿ ಚನ್ನಮ್ಮ ಕೇವಲ ಅಹಿಂಸಾ ಪ್ರತಿಪಾದಕ ಶರಣೆಯಲ್ಲ. ಅವಳ ಬೆನ್ನಿಗೆ ಹಿಂಸೆಯ ಜಗತ್ತೂ ತಾಗಿಕೊಂಡಿತ್ತು. ಅದನ್ನು ಶಸ್ತ್ರ ಹಿಡಿದು ಎದುರಿಸುತ್ತಲೇ ಅಹಿಂಸೆಯಲ್ಲಿ ನೆಲೆಗೊಳ್ಳಲು ಪ್ರಯತ್ನಿಸಿದ ಸಾಹಸಿ ಹಾಗೂ ಕೊನೆ ಉಸಿರು ಇರುವವರೆಗೆ ಕನ್ನಡ ನೆಲವನ್ನು ಧರ್ಮಭೂಮಿಯಾಗಿ ಪರಿವರ್ತಿಸಲು ಹೆಣಗಿದ ಕ್ಷಾತ್ರ ತೇಜಸ್ವಿ!
ಉನ್ನತಶುಭಗುಣಗಣ ಸಂ
ಪನ್ನತೆಯಿಂ ಕ್ಷಾತ್ರದಾನಧರ್ಮಾದಿಗಳಿಂ
ಚನ್ನಮ್ಮಾಜಿಗೆ ಸರಿಯಹ
ಮನ್ನೆಯರಿಲ್ಲೆನಿಸಿ ರಾಜ್ಯಮಂ ರಕ್ಷಿಸಿದಳ್
ಎಂದು ಕೆಳದಿಯ ರಾಣಿ ಚನ್ನಮ್ಮಾಜಿಯನ್ನು ಕೊಂಡಾಡುತ್ತಾ ‘ಈ ಚನ್ನಮ್ಮಾಜಿಯವರ್ ಭುವನಗಿರಿಯ ದುರ್ಗದೊಳ್ ತಮಗೆ ಪಟ್ಟಮಾದ ಶಾಲಿವಾಹನ ಶಕವರ್ಷ 1594ನೆಯ ವಿರೋಧಿಕೃತ ಸಂವತ್ಸರದ ಫಾಲ್ಗುಣ ಶುದ್ಧ 10 ಆರಭ್ಯ ಈಶ್ವರನಾಮ ಸಂವತ್ಸರದ ಶ್ರಾವಣ ಶುದ್ಧ 14ರವರೆಗೆ ವರ್ಷ 25, ತಿಂಗಳು 4, ದಿನ 20 ಪರ್ಯಂತಂ ಸದ್ಧರ್ಮದಿಂ ರಾಜ್ಯಂಗೆಯ್ದು ಶಿವಸಾಯುಜ್ಯಮಂ ಪಡೆದರ್’ ಎಂದು ಹೇಳಿ ಚನ್ನಮ್ಮಾಜಿಯ ವೃತ್ತಾಂತಕ್ಕೆ ಮಂಗಳ ಹಾಡುತ್ತದೆ; ಲಿಂಗಣ್ಣ ಕವಿ ವಿರಚಿತ ‘ಕೆಳದಿನೃಪವಿಜಯಂ’ ಕೃತಿ. ಇಂತಹ ಶ್ರೇಷ್ಠ ಹೆಣ್ಣುಮಗಳೊಬ್ಬಳು ಮಲೆನಾಡಿನ ಈಗಿನ ಬಿದನೂರು ನಗರದಲ್ಲಿ ಆಳಿ ಅಮರಳಾಗಿ ಹೋಗಿದ್ದಾಳೆ (ಕ್ರಿ.ಶ. 1697 ಆಗಷ್ಟ್ 1ರಂದು) ಎಂಬುದೇ ನಮಗೆ ಹೆಮ್ಮೆ ತರುವ ವಿಷಯ. ಇಂತಹ ಅಪರೂಪದ ರಾಜಕನ್ಯೆಯ ಕುರಿತು ಬಹು ವಿಸ್ತಾರವಾಗಿ, ಬಹು ಸೊಗಸಾಗಿ ಇತಿಹಾಸಕ್ಕೆ ಅಪಚಾರವಾಗದಂತೆ ಚಾರಿತ್ರಿಕ ಕಾದಂಬರಿ ಬರೆದಿದ್ದಾರೆ ಮಿತ್ರ ಉದಯಕುಮಾರ ಹಬ್ಬು ಅವರು.
“ವೀರರಾಣಿ ಕೆಳದಿ ಚನ್ನಮ್ಮ” ಕೃತಿಯನ್ನು ಬರೆಯುವ ಮೊದಲು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಒಂದು ಚರಿತ್ರೆಯನ್ನು ಕಾದಂಬರಿಯನ್ನಾಗಿಸುವಲ್ಲಿ ತೆಗೆದುಕೊಳ್ಳುವ ಎಲ್ಲ ಎಚ್ಚರಿಕೆಯನ್ನೂ ಪರಿಪಾಲಿಸಿದ್ದಾರೆ. ಚನ್ನಮ್ಮಾಜಿಯ ಕಾದಂಬರಿಯು ಹೇಗಿರಬೇಕೆಂದು ವೈಯಕ್ತಿಕವಾಗಿ ನಾನು ಹೇಗೆ ಬಯಸಿದ್ದೆನೋ ಅಂತೆಯೇ ಮೂಡಿಬಂದಿದೆ ಎಂದು ಹೇಳಲು ಸಂತೋಷವಾಗುತ್ತದೆ. ಶ್ರೀ ಉದಯಕುಮಾರ ಹಬ್ಬು ಅವರು ಇನ್ನೂ ಹೆಚ್ಚಿನ ಕೃತಿಗಳನ್ನು ಬರೆಯಲಿ, ಕನ್ನಡ ಸಾರಸ್ವತಲೋಕ ಶ್ರೀಮಂತಗೊಳ್ಳಲಿ ಎಂದು ಹಾರೈಸುತ್ತೇನೆ. ಶುಭವಾಗಲಿ- ಮಂಗಳವಾಗಲಿ.
24.09.2025 -ಅಂಬ್ರಯ್ಯ ಮಠ, ಬಿದನೂರು ನಗರ
Our Books

Reviews
There are no reviews yet.