ನಿಜೇತಿಹಾಸ ಪ್ರಸ್ತುತಿಯೇಸವಾಲಿನ ಸಂಗತಿ
ಇತಿಹಾಸವೆಂಬ ಜ್ಞಾನಶಾಖೆಯೇ ರಾಹುಗ್ರಸ್ತ. ಶಾಲಾ ಕಾಲೇಜುಗಳಲ್ಲಿ ಇತಿಹಾಸ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವವರು, ವಿಜ್ಞಾನ-ವಾಣಿಜ್ಯ ಇತ್ಯಾದಿ ಶಾಖೆಗಳಿಗೆ ಲಗ್ಗೆ ಹಾಕಲು ಸಾಧ್ಯವಾಗದವರು, ಎನ್ನುವ ಮಾತಿದೆ. ವಿಚಿತ್ರವೆಂದರೆ ಇತಿಹಾಸ- ಇತಿಹಾಸ ವಿಭಾಗಗಳ ಪ್ರಾಮುಖ್ಯವೇ ನಮಗೆ ಗೊತ್ತಿಲ್ಲ. ಇತಿಹಾಸದ ವಿಷಯವೆಂದರೆ, ಸಾಮಾನ್ಯರನೇಕರೇ ಮೂಗು ಮುರಿಯುತ್ತಾರೆ. ಯಾವುದೋ ಕಾಲದ ಕಗ್ಗ ಕಟ್ಟಿಕೊಂಡು ಈಗ ಏನಾಗಬೇಕಿದೆ, ಎಂಬ ಅನುಚಿತ ಔದಾಸೀನ್ಯ ಎಲ್ಲೆಡೆ ರಾರಾಜಿಸುತ್ತಿದೆ. ಆದರೆ, ಇಸ್ಲಾಮಿನ ಹೆಸರಿನಲ್ಲಿ ದೇಶ ವಿಭಜನೆಯಾದ ನಂತರವೂ, ಪಾಕಿಸ್ತಾನ-ಭಾರತ-ಬಾಂಗ್ಲಾದೇಶಗಳಲ್ಲಿ ಈಗಲೂ ಹಿಂದೂಗಳ ಹತ್ಯಾಕಾಂಡ ಏಕೆ ಆಗುತ್ತಿದೆ; ಭಾರತದಲ್ಲಿ ಹಿಂದೂ ದೇವರುಗಳ ಉತ್ಸವ-ರಥೋತ್ಸವ-ಆಚರಣೆಗಳು ಮಾತ್ರವೇ ಏಕೆ ಹಿಂಸೆಗೆ-ಗಲಭೆಗಳಿಗೆ-ಕಲ್ಲೆಸೆತಗಳಿಗೆ ಗುರಿಯಾಗುತ್ತಿವೆ; ಇಡೀ ಜಗತ್ತೇ ಏಕೆ ವಿವಿಧ ಜಿಹಾದ್ ಗಳ ಆಕ್ರಮಣಗಳಿಗೆ ಆಡುಂಬೊಲವಾಗಿದೆ; ಇಸ್ರೇಲ್-ಪ್ಯಾಲಸ್ತೀನ್ ಸಂಘರ್ಷ ಎಂದಿಗಾದರೂ ಮುಗಿದೀತೇ; ಯೂರೋಪಿನ ಜನಸಂಖ್ಯಾ ಸಮತೋಲನವೇ (Demographic Balance) ಬದಲಾಗುತ್ತಿದ್ದು, ಅನೇಕ ದೇಶಗಳು ಏಕೆ ತತ್ತರಿಸುತ್ತಿವೆ, ಎಂಬ ಪ್ರಶ್ನೆಗಳಿಗೆ ಉತ್ತರ ನೀಡಲು, ಸಮಸ್ಯಾಮೂಲ ವಿಶ್ಲೇಷಿಸಲು, ಈ ಟೀಕಾಕಾರರು ವಿಫಲರಾಗುತ್ತಾರೆ.
ಇಷ್ಟೇ ಅಲ್ಲ. ಇತಿಹಾಸದ ಬಗೆಗೆ ಆಸಕ್ತಿಯೇ ಇಲ್ಲದವರೂ, ನಿಜೇತಿಹಾಸದ ಅಂಶಗಳ ಪ್ರಸ್ತುತಿ ಪ್ರಾರಂಭವಾದ ತಕ್ಷಣ “ಇದಕ್ಕೆ ಆಧಾರವೇ ಇಲ್ಲವಲ್ಲ” ಎಂದು ಬಿಡುತ್ತಾರೆ. ಬೈಬಲ್, ಖುರಾನ್, ಹದೀಸುಗಳನ್ನೇನಾದರೂ ಓದಿದ್ದೀರಾ, ಇಸ್ಲಾಂ ಮತ್ತು ಕ್ರೈಸ್ತ ರಿಲಿಜನ್ನುಗಳ ಮತೀಯ-ಸಾಮ್ರಾಜ್ಯಶಾಹಿ ಆಕ್ರಮಣಗಳ ಇತಿಹಾಸ ಓದಿರುವಿರಾ, ಎಂಬ ಪ್ರಶ್ನೆಗಳೇ ನಮ್ಮ ಜನರಿಗೆ ಅವರ್ಜ್ಯ, ಅನಪೇಕ್ಷಣೀಯ.
“ಶಿಕ್ಷಣ ಪಠ್ಯದ ಜಿಹಾದ್” ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ, ನಮ್ಮ ಕನ್ನಡ ಚಳವಳಿಗಾರರು ಟಿಪ್ಪು ಅಭಿಮಾನಿಗಳಾಗಿದ್ದಾರೆ ಮತ್ತು ಅವರ ಪ್ರಕಾರ ಶಿವಾಜಿ ಮತ್ತು ಮರಾಠರು ಕನ್ನಡ ಮತ್ತು ಕರ್ನಾಟಕಗಳ ಶತ್ರುಗಳಾಗಿಬಿಟ್ಟಿದ್ದಾರೆ. ಸಾವಿರ ಸಾವಿರ ವರ್ಷಗಳ ಕನ್ನಡ ಭಾಷೆಯ ಬದಲಿಗೆ ಪರ್ಷಿಯನ್ ಭಾಷೆಯನ್ನು ಜಾರಿಗೆ ತಂದ ಟಿಪ್ಪು “ಕನ್ನಡದ ಹುಲಿ”ಯಾಗಿ ಬಿಟ್ಟಿದ್ದಾನೆ. “ಮೈಸೂರು” ರಾಜರನ್ನು ಬಂಧಿಸಿದ್ದ -ಕೊಂದುಹಾಕಿದ- ಕಿರುಕುಳ ನೀಡಿದ ದ್ರೋಹಿಗಳು ಹೀಗೆ “ಮೈಸೂರು ಹುಲಿ” ಆಗುವುದು ಕೇವಲ ಭಾರತದಂತಹ “ಮುಗ್ಧ”ರ ದೇಶದಲ್ಲಿ ಮಾತ್ರ ಸಾಧ್ಯ! ಟಿಪ್ಪು ನಡೆಸಿದ ಹಿಂದೂ ಹತ್ಯಾಕಾಂಡ, ಅತ್ಯಾಚಾರ, ಮತಾಂತರಗಳ ವಿಷಯ ಪ್ರಸ್ತಾಪಿಸಿದ ಮರುಕ್ಷಣ, ಎಚ್ಚೆತ್ತುಕೊಳ್ಳುವ ನಮ್ಮ ಈ ಉತ್ಸಾಹೀ ಬಂಧುಗಳು, ಟಿಪ್ಪು ಶೃಂಗೇರಿ ಮಠಕ್ಕೆ ಧನಸಹಾಯ ಮಾಡಿದ, ಬೆಂಬಲ ನೀಡಿದ; ಅದೇ ಶಿವಾಜಿ ಶೃಂಗೇರಿಯನ್ನು ಸ್ವತಃ ಲೂಟಿ ಮಾಡಿದ ಎಂದು ವಿಜೃಂಭಿಸುತ್ತಾರೆ. ಶಿವಾಜಿ ಮಹಾರಾಜರ ಮತ್ತು ಟಿಪ್ಪು ಕಾಲಗಳೇ ಬೇರೆಬೇರೆ ಶತಮಾನಗಳಿಗೆ ಸೇರಿದ್ದು ಎಂದರೂ ನಮ್ಮ ಜನರು ಶಾಂತರಾಗುವುದಿಲ್ಲ.
ಇಂತಹ ಸಂಕೀರ್ಣ ಪರಿಪ್ರೇಕ್ಷ್ಯದಲ್ಲಿ, ಲೇಖಕ ಗುರುಪ್ರಸಾದ ಭಟ್ಟರು ಮಹತ್ತ್ವದ ಇತಿಹಾಸಾಕರಗಳನ್ನು ಅನ್ವೇಷಿಸುತ್ತಾರೆ, ವಿಶ್ಲೇಷಿಸುತ್ತಾರೆ, ಒಂದನ್ನೊಂದು ತಾಳೆ ನೋಡಿ ಸಾಣೆ ಹಿಡಿಯುತ್ತಾರೆ, ಎಂಬುದು ಮುಖ್ಯವಾಗುತ್ತದೆ.
“ಶೃಂಗೇರಿ ಮಠವನ್ನು ಕೊಳ್ಳೆಹೊಡೆದಿದ್ದು ಅಲೆಮಾರಿ ಪಿಂಡಾರಿಗಳು, ಶಿವಾಜಿಯ ಯೋಧರಲ್ಲ” ಅನ್ನುವ ಅಧ್ಯಾಯವು ಇತಿಹಾಸಾಸಕ್ತರ ತುಂಬ ಪ್ರಶ್ನೆಗಳಿಗೆ ಆಧಾರಸಹಿತವಾದ ಉತ್ತರಗಳನ್ನು ನೀಡುತ್ತದೆ. ಮಿಥ್ಯಾ ಇತಿಹಾಸ- ಅಸತ್ಯದ ಇತಿಹಾಸ ಅದೆಷ್ಟು ಪ್ರಮಾಣದಲ್ಲಿದೆ, ಎಂದರೆ ಒಂದೊಂದು ಸಿಕ್ಕು ಬಿಡಿಸುವುದೂ ಕಷ್ಟವೇ.
“……..ಪಿಂಡಾರಿಗಳು ಮರಾಠರ ಮಿತ್ರಪಕ್ಷವಲ್ಲ. ಮರಾಠಾ ಸೇನೆಯನ್ನು ಪರೋಕ್ಷವಾಗಿ ಅನುಸರಿಸುತ್ತಿದ್ದ ಲಾಮಾಣರು ಮತ್ತು ಪಿಂಡಾರಿಗಳು ಹಾಗೂ ಟಿಪ್ಪುವಿನ ಸೈನ್ಯದಲ್ಲಿದ್ದ ಬಾಯೇದ್ ತುರುಕರ ಬಾಡಿಗೆ ಸೈನಿಕರು ಆಗಿನ ಕಾಲದ ಅನಿಯಮಿತ, ಅನಿಯಂತ್ರಿತ ದಾಳಿಕೋರ ಪಡೆಗಳು. ಈ ಪಡೆಗಳು ಯುದ್ಧದ ಸ್ವಲ್ಪ ಮೊದಲು ಅಥವಾ ನಂತರ ಸೇನಾ ನಾಯಕತ್ವದ ಅನುಮತಿಯಿಲ್ಲದೇ ಲೂಟಿಯಂತಹ ಹೇಯ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರು. ಸಂಗ್ರಹಿಸಿದ ಲೂಟಿಯಿಂದ ಅವರು ಜೀವನ ನಡೆಸುತ್ತಿದ್ದರು. ಯಾವುದೇ ರಾಜಶಕ್ತಿ ಅವರನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗದಷ್ಟು ಬಲಿಷ್ಠರಾಗಿ, ಇಪ್ಪತ್ತು-ಮೂವತ್ತು ಸಾವಿರ ಅಶ್ವಸೈನ್ಯವುಳ್ಳ ಸೇನೆಯಾಗಿ ಬೆಳೆದಿದ್ದರು…..”
“….ಅನೇಕ ಇತಿಹಾಸಕಾರರ ಗ್ರಂಥಗಳನ್ನು ಅವಲೋಕಿಸಿದಾಗ ಒಬ್ಬರಾದರೂ ಪಿಂಡಾರಿಗಳನ್ನು ಮರಾಠಾ ಮೂಲದವರೆಂದು ಗುರುತಿಸದೇ ಇರುವುದು; ಹಲವಾರು ತಜ್ಞರು ಪಿಂಡಾರಿ ಶಬ್ದದ ವ್ಯುತ್ಪತ್ತಿ ಉರ್ದು-ಹಿಂದೂಸ್ತಾನಿ ಎಂದು ಹೇಳಿರುವುದು ಮತ್ತು ಇನ್ನೂ ಕೆಲವರು ಪಿಂಡಾರಿಗಳು ಕರ್ನಾಟಕದಿಂದ ಬಂದ ಬಾಡಿಗೆ ಸೇವಕರು, ಎಂದು ನೂರೈವತ್ತು-ಇನ್ನೂರು ವರ್ಷಗಳ ಹಿಂದೆಯೇ ಬರೆದಿರುವುದು ವಿಶೇಷ ಗಮನ ಸೆಳೆಯುತ್ತದೆ…….”
ಹೀಗೆ, ಈ ಅಧ್ಯಾಯವೇ ಅನೇಕ ಸಂದೇಹಗಳನ್ನು ನಿವಾರಿಸಿಬಿಡುತ್ತದೆ. ಟಿಪ್ಪು-ಶೃಂಗೇರಿ-ಮರಾಠರ ಬಗೆಗಿನ ಹತ್ತಾರು ಪ್ರಶ್ನೆಗಳಿಗೆ ಇಲ್ಲಿ, ಲೇಖಕರ ಪುರಾವೆಗಳ ಮತ್ತು ಸಾಕ್ಷ್ಯಾಧಾರಗಳ ವಿಶ್ಲೇಷಣೆ ಆಧಾರದ ಸಮಾಧಾನಗಳು ಸಿಕ್ಕುತ್ತವೆ.
“ಔರಂಗಜೇಬನು ನಿಲ್ಲಿಸಿದ್ದ ಪುರಿ ಶ್ರೀಜಗನ್ನಾಥ ರಥಯಾತ್ರೆಯನ್ನು ಮರಾಠರು ಪುನರಾರಂಭಿಸಿದರು” ಎಂಬ ಎರಡನೆಯ ಅಧ್ಯಾಯದಲ್ಲಿ, ಲೇಖಕರು ಕನ್ನಡದ ಓದುಗರಿಗೆ ಹೆಚ್ಚು ಪರಿಚಯವಿಲ್ಲದ ಇನ್ನೊಂದು ಮಹತ್ತ್ವದ ಸಂಗತಿಯನ್ನು ನಿರ್ವಹಿಸಿದ್ದಾರೆ. ಪ್ರಚಲಿತ ಸುಳ್ಳು-ಇತಿಹಾಸದ ಶಕ್ತಿ ಅಚ್ಚರಿ ಉಂಟುಮಾಡುತ್ತದೆ. ಕರ್ನಾಟಕದಂತೆಯೇ, ಒಡಿಶಾದಲ್ಲಿಯೂ ಯಾವ ಆಧಾರಗಳೂ ಇಲ್ಲದಿದ್ದರೂ “ಮರಾಠರು ಪುರಿ ಶ್ರೀಜಗನ್ನಾಥ ಮಂದಿರದ ಮೇಲೆ ದಾಳಿ ಮಾಡಿ ಕೊಳ್ಳೆಹೊಡೆದಿದ್ದರು” ಎಂಬ ಸುಳ್ಳು ಪ್ರಚಾರದಲ್ಲಿದೆ. ಮತ್ತೆ ಮತ್ತೆ ಅದನ್ನೇ ಪುನರುಚ್ಚರಿಸುತ್ತಿರುವುದರಿಂದ ಅದೇ ಸತ್ಯ ಎಂಬಂತಾಗಿದೆ.
“…1681ರಲ್ಲಿ ಔರಂಗಜೇಬನು ಬಲವಂತವಾಗಿ ನಿಲ್ಲಿಸಿದ್ದ ಪುರಿ ಶ್ರೀಜಗನ್ನಾಥ ಯಾತ್ರೆಯನ್ನು, ಏಳು ದಶಕಗಳ ಬಳಿಕ 1751ರಲ್ಲಿ, ನಾಗಪುರದ ರಘುಜಿ ಭೋಸ್ಲೆ ರಾಜವಂಶದವರು ಪುನಃ ಪ್ರಾರಂಭಿಸಿದರು……”
“… ನಾಗಪುರದ ಮರಾಠರು, ಅದರಲ್ಲೂ ವಿಶೇಷವಾಗಿ 1751ರ ರಘುಜಿ ಭೋಸ್ಲೆ ರಾಜವಂಶದವರು, ಒಡಿಶಾದ ಪುರಿ ಶ್ರೀಜಗನ್ನಾಥ ದೇವಾಲಯದ ಪುನರ್ನಿರ್ಮಾಣಕ್ಕಾಗಿ ಹೇರಳವಾಗಿ ಧನ ಸಹಾಯ ಮಾಡಿದ್ದಾರೆ, ನಂತರ ರಾಜಾಶ್ರಯ ನೀಡಿದ್ದಾರೆ; ರಥಯಾತ್ರೆಯ ವೈಭವವನ್ನು ಪುನರುಜ್ಜೀವನ ಗೊಳಿಸುವಷ್ಟು ಮಹತ್ತ್ವದ ಪಾತ್ರವನ್ನು ಅವರು ವಹಿಸಿದ್ದರು….” ಎಂಬ ಮಾಹಿತಿಯೇ ಜನರಿಗೆ ಗೊತ್ತಿಲ್ಲ. ಈ ಸತ್ಯಕಥೆಯ ವಿವರಗಳು ನಾವೆಲ್ಲ ಗಮನಿಸಲೇಬೇಕಾದಂತಹವು.
ಬಂಗಾಳದ ಕಥೆ ಇನ್ನಷ್ಟು ವಿಷಾದ ತರುತ್ತದೆ. ಬಂಗಾಳದಲ್ಲಿ ಮರಾಠರನ್ನು ಬೋರ್ಗಿ ಎಂದು ಅವಹೇಳನದಿಂದ ಕರೆಯುತ್ತಾರೆ. “…1742ರಲ್ಲಿ ಮರಾಠರು ನಾಲ್ಕು ಲಕ್ಷ ಹಿಂದೂಗಳ ನರಸಂಹಾರ ಮಾಡಿದ್ದರು. ಹೆಣ್ಣುಮಕ್ಕಳನ್ನು ಅಪಮಾನಿಸಿದ್ದರು. ಹಿಂದೂ ಮಂದಿರಗಳನ್ನು ದೋಚಿದ್ದರು, ಮಾಂಸಕ್ಕಾಗಿ ಹಸು-ಕರುಗಳನ್ನು ಕತ್ತರಿಸಿದ್ದರು…” ಎಂದೆಲ್ಲಾ ಸುಳ್ಳುಗಳನ್ನು ಹಬ್ಬಿಸಿದ್ದಾರೆ, ಎಂದರೆ ಸುಳ್ಳು-ಇತಿಹಾಸಕಾರರ ಶಕ್ತಿ ಎಷ್ಟು ಎಂಬುದನ್ನು ಅರಿಯಬಹುದು. ಕಾಪಾಡಿದವರನ್ನೇ ಆಕ್ರಮಣಕಾರಿಗಳೆಂದು ಚಿತ್ರಿಸಿಬಿಡುವುದು ಇಂತಹ ಮಾಫಿಯಾ ಇತಿಹಾಸಕಾರರ ಒಂದು ಕಾರ್ಯವಿಧಾನ!
ಅಂದರೆ, ವರ್ತಮಾನದ ಜಗತ್ತನ್ನು ಉಳಿಸಲು ಹಿಂದೆಂದಿಗಿಂತ ಈಗ ಇತಿಹಾಸ ಅಧ್ಯಯನವು ಅತ್ಯಾವಶ್ಯಕವಾಗಿದೆ, ಅನಿವಾರ್ಯವಾಗಿದೆ.
ಶಿವಾಜಿ, ಶೃಂಗೇರಿ, ಪುರಿ ಶ್ರೀಜಗನ್ನಾಥ, ಮರಾಠಾ ಬೋರ್ಗಿ, ಹೀಗೆ ಅನೇಕ ಇತಿಹಾಸಾಧ್ಯಾಯಗಳ ಬಗೆಗೆ ಸಾಕ್ಷ್ಯಾಧಾರ ಸಹಿತವಾದ ನಿಜ-ಇತಿಹಾಸ ರಚನೆ ಮಾಡಿರುವ ಗುರುಪ್ರಸಾದ ಭಟ್ಟರ ಕೃತಿ ಸರಣಿ ಮೌಲಿಕ, ಅತ್ಯಪೇಕ್ಷಣೀಯ. ಭಾರತೀಯರ ಅಂಧಕಾರ-ಸುಷುಪ್ತಿಗಳ ನಿವಾರಣೆಯ ಮಾರ್ಗದಲ್ಲಿ ಈ ಗ್ರಂಥಗಳು ನಿಜಕ್ಕೂ ಬೆಳಕು ಚೆಲ್ಲುತ್ತವೆ.
‘ಸತ್ಯಮೇವೋದ್ಧರಾಮ್ಯಹಂ’ ಎಂಬ ನುಡಿ ಇದೆ. ಅಂದರೆ, ಅದರ ಅರ್ಥ ನಾನು ಯಾವಾಗಲೂ ಸತ್ಯವನ್ನೇ ಎತ್ತಿ ಹಿಡಿಯುತ್ತೇನೆ ಎಂದು. ಈ ದಿವ್ಯಪಥದಲ್ಲಿ ನಾವೆಲ್ಲಾ ಒಟ್ಟಿಗೇ ಹೆಜ್ಜೆ ಹಾಕೋಣ.
ಎಲ್ಲರಿಗೂ ಒಳಿತಾಗಲಿ.
-ಮಂಜುನಾಥ ಅಜ್ಜಂಪುರ
ಗೌರವ ಸಂಪಾದಕರು
ವಾಯ್ಸ್ ಆಫ್ ಇಂಡಿಯಾ ಕನ್ನಡ ಸರಣಿ
ಅಕ್ಟೋಬರ್ 02, 2025, ಬೆಂಗಳೂರು
Our Books

Reviews
There are no reviews yet.