ಮುನ್ನುಡಿ
‘ಮಕ್ಕಳಿಗಾಗಿ ಶಿವಾಜಿ’ ಕಿರುನಾಟಕಗಳು’ ಮತ್ತು ಚುಟುಕುಗಳ ಕಥಾವಸ್ತುವಿನ ಒಂದು ಹೊತ್ತಿಗೆಗೆ ಮುನ್ನುಡಿ ಅಪೇಕ್ಷಿಸಿ ನಮ್ಮ ಆತ್ಮೀಯರು ಹಾಗೂ ಹಿತೈಷಿ ಗಳಾದ ಉಡುಪಿಯ ಗುರುಪ್ರಸಾದ ಭಟ್‌ರವರು ನನ್ನನ್ನು ನೆನೆದದ್ದನ್ನು ತುಂಬಾ ಆಪ್ತವಾಗಿ ಸ್ವೀಕರಿಸಿ, ಅವರ ಆಶಯವನ್ನು ಅನುಮೋದಿಸಲು ಅವರು ಇಲ್ಲಿ ಪ್ರಸ್ತಾಪಿಸಿರುವ ಎರಡು ವಿಷಯಗಳು, ಇತಿಹಾಸ ಮತ್ತು ನಾಟಕ, ಕಾರಣವಾದವು. ಈ ಎರಡೂ ಕ್ಷೇತ್ರಗಳು ನನಗೆ ಬಹಳ ಪ್ರಿಯವಾದದ್ದು, ಜೊತೆಗೆ ಇಂದಿಗೂ, ಎಂದಿಗೂ ಪ್ರಸ್ತುತ ಮತ್ತು ಅತ್ಯಗತ್ಯವಾದವು ಎಂಬುದನ್ನು ಬಹಳವಾಗಿ ನಂಬಿರುವವನು ನಾನು. ಅಷ್ಟೇ ಅಲ್ಲದೇ ಈ ಎರಡರ ಅಗತ್ಯತೆ, ಮಹತ್ವವನ್ನು ನಾನು ನನ್ನ ಬಾಲ್ಯದಿಂದಲೂ ಕಂಡು ಅರಿತಿರುವೆ ಎಂಬುದು ಸತ್ಯವೂ ಹೌದು.
ಪುರಾಣ, ಇತಿಹಾಸ, ಜನಪದ, ಸಾಮಾಜಿಕ ವಿಷಯಗಳಿಗೆ ತನ್ನದೇ ಆದ ವೈಶಿಷ್ಟ್ಯತೆ ಮತ್ತು ವಿಶೇಷತೆಗಳು ಇದೆ. ಜ್ಞಾನದ ಸಕಲ ಸಾರವನ್ನು ಕಪೋಲಕಲ್ಪಿತ ಕಥೆಗಳ ಮೂಲಕ ಜಗತ್ತಿಗೆ ನೀಡುವುದು ಪುರಾಣದ ವೈಶಿಷ್ಟ್ಯವಾಗಿದ್ದು, ನಂಬಿಕೆ ಮತ್ತು ಭಕ್ತಿ ಇದರ ವಿಶೇಷತೆಯಾಗುತ್ತದೆ. ಜನಪದದ ವೈಶಿಷ್ಟ್ಯವೂ ಇದೇ ಪುರಾಣದ ವಿಚಾರಗಳನ್ನು ಅನುಭಾವದ ಮೂಸೆಯಲ್ಲಿ ಜೊತೆಗೂಡಿಸುವುದು ಆಗಿದ್ದು, ಸರಳವಾಗಿ ವಿಚಾರಧಾರೆಯನ್ನು ಜನ ಸಾಮಾನ್ಯರಿಗೆ ಉಣಬಡಿಸುವುದು ಅದರ ವಿಶೇಷತೆಯಾಗಿ ಗೆಲ್ಲುತ್ತದೆ. ಈ ಎರಡೂ ವಿಷಯಗಳ ಅರಿವು ಇದ್ದು ಅದನ್ನು ಇಂದಿನ ಪ್ರಸ್ತುತತೆ, ನಮ್ಮ ಸುತ್ತಮುತ್ತಲಿನ ಸಮಾಜ, ಸಂಸಾರ, ಸರ್ಕಾರ, ದಿನನಿತ್ಯದ ಬದುಕು-ಜಂಜಾಟ, ಅದರಲ್ಲಿನ ಹೋರಾಟ, ಅದರೊಟ್ಟಿಗಿನ ನಮ್ಮ ಸೋಲು-ಗೆಲುವು ಅನುಭವಗಳ ನಡುವೆ ಹೊಂದಿಸಿಕೊಳ್ಳುವ ಸಾಮಾಜಿಕ ವೈಶಿಷ್ಟ್ಯ, ಪ್ರತಿ ವ್ಯಕ್ತಿಯ ವಿಚಾರಧಾರೆ, ಅವರ ದೃಷ್ಟಿಕೋನ, ಚಿಂತನಾಶಕ್ತಿ, ಅವರವರ ಗ್ರಹಿಕೆ ಎಲ್ಲವೂ ಇದರ ವಿಶೇಷತೆಯಾಗಿ ಬದಲಾವಣೆಗೆ ಬದ್ಧವಾಗಿರುತ್ತದೆ.
ಈಗ ಇತಿಹಾಸದ ವೈಶಿಷ್ಟ್ಯತೆ ಏನು? ಅದು ಇಂದಿಗೆ ಪ್ರಸ್ತುತವೋ ಅಪ್ರಸ್ತುತವೋ? ಅದರ ಅಗತ್ಯತೆ ಎಷ್ಟು, ಆ ಅಗತ್ಯತೆಯ ಸಾಂದ್ರತೆ, ಗಾತ್ರವೆಷ್ಟು? ಈ ಇತಿಹಾಸದ ಬಗ್ಗೆ ಸಿಕ್ಕಿರುವ ಮತ್ತು ಸಿಗಬಹುದಾದ ಮಾಹಿತಿ ಎಷ್ಟರ ಮಟ್ಟಿಗೆ ನೇರವಾಗಿ, ಇದ್ದದ್ದು ಇದ್ದಂತೆ, ಜಾತಿ, ಮತ, ಭಾಷೆ, ಧರ್ಮಗಳ ಸೊಂಕಿಲ್ಲದೇ, ಮಲೀನವಾಗದೇ, ಸತ್ಯದ ಅಪಭ್ರಂಶತೆಗಳನ್ನು ಧಾರಣ ಮಾಡಿ ಕೊಳ್ಳದೆ, ಸಾಕ್ಷ್ಯಾಧಾರದೊಂದಿಗೆ ಲಭ್ಯವಿದೆ? ಈ ಎಲ್ಲ ಪ್ರಶ್ನೆಗಳನ್ನು ಕೇಳಿ, ಉತ್ತರವನ್ನು ಕೆದಕಿದ ನಂತರವೇ ಅದನ್ನ ಒಪ್ಪಲು ಸಾಧ್ಯವೆನ್ನುವಷ್ಟರ ಮಟ್ಟಿಗೆ ಅದು ಇಂದು ಗೋಜಲಾಗಿದೆ. ಈ ಎಲ್ಲಾ ಅನ್ವೇಷಣೆಯ ಅಗತ್ಯತೆಗೆ ಕಾರಣ ಇತಿಹಾಸವೆಂಬುದು ಯಾರೊಬ್ಬರ ಕಲ್ಪನೆಯ ಕೂಸಲ್ಲ. ನಡೆದಿರುವ ಸತ್ಯವನ್ನು ನಮ್ಮ ಗ್ರಹಿಕೆ, ಭಾಷೆ, ಪದಗಳ ಸೌಂದರ್ಯದಿಂದ ಶೃಂಗರಿಸಿ ನೀಡುವ ಸ್ವಾತಂತ್ರ್ಯ ಮಾತ್ರ ನಮಗಿದೆಯೇ ಪರಂತು ಅದನ್ನು ವಿಕೃತಗೊಳಿಸುವ, ನಮ್ಮ ವೈಯಕ್ತಿಕ ವಿಚಾರಧಾರೆಗಳನ್ನು, ನಮ್ಮ ಕಲ್ಪನೆಗಳನ್ನು, ನಮ್ಮ ಇಷ್ಟಾನಿಷ್ಟಗಳನ್ನು ಇತಿಹಾಸದ ವಿಷಯಗಳಲ್ಲಿ ಅಥವ ಇತಿಹಾಸದ ಕಥಾ ಸಾರಾಂಶದಲ್ಲಿ, ಅದರ ನಿರ್ಮಾತೃಗಳ ಬದುಕು, ಬವಣೆಗಳ ಮುಖಾಂತರ ನೀಡುವ ಸ್ವಾತಂತ್ರ್ಯ ನಮಗಿಲ್ಲ. ಇದಕ್ಕೆ ಮತ್ತೊಂದು ಬಹು ಮುಖ್ಯ ಕಾರಣವೆಂದರೆ ಇತಿಹಾಸ ಕೆಲವೇ ವರ್ಷಗಳ, ದಶಕಗಳ ಅಥವ ಶತಮಾನದ ಹಿಂದಷ್ಟೇ ನಡೆದಿರುವ ಸತ್ಯ ಸಂಗತಿಗಳು. ಹಿಂದೆ ಎಂದೋ ನಡೆದಿದ್ದು ನಮಗಿಂದು ಇತಿಹಾಸ. ಹಾಗೆಯೇ, ನಮ್ಮ ಇಂದಿನ ಜೀವನ, ಸಾಮಾಜಿಕ ವ್ಯವಸ್ಥೆಗಳೆಲ್ಲವೂ ನಮ್ಮ ನಾಳಿನವರಿಗೆ ಇತಿಹಾಸವಾಗುತ್ತದೆ ಎಂಬುದು ಅಷ್ಟೇ ಸತ್ಯವಲ್ಲವೇ?
‘ಕಾಲ ಕೆಟ್ಟಿದೆ’, ‘ನಮ್ಮ ಕಾಲ ಎಷ್ಟು ಚೆನ್ನಾಗಿತ್ತು’, ‘ಆವತ್ತು ಇದ್ದ ಹಾಗೆ ಇವತ್ತು ಇಲ್ಲ, ಎಲ್ಲ ಹಾಳಾಗಿದೆ’, ಇಂಥ ಅನೇಕ ಮಾತುಗಳನ್ನು ಸಹಜವಾಗಿ ಪ್ರತಿ ತಲೆಮಾರಿನವರೂ ಆಡುವುದನ್ನು ನಾವೆಲ್ಲರೂ ಕೇಳಿರುವ ಮಾತೇ. ನಮ್ಮ ಅಪ್ಪನ ಕಾಲದ ಜನಜೀವನದ ಕ್ರಮ ಕಂಡ ಅವರ ಹಿಂದಿನ ತಲೆಮಾರಿನವರು ತಾವು ನಡೆದು ಬಂದ ಹಾದಿಯನ್ನು ನೆನೆದು ನಮ್ಮ ಅಪ್ಪನ ಕಾಲದ ಬಗ್ಗೆ ಹೇಗೆ ನುಡಿದಿರಬಹುದು. ನಮ್ಮ ಅಪ್ಪ ನಮ್ಮನ್ನು, ನಮ್ಮ ಇಂದಿನ ಕಾಲದ ಬದುಕನ್ನು ಕಂಡು ಅವರೂ ಕೂಡ ಇದೇ ಮಾತುಗಳನ್ನೇ ಆಡಿದ್ದು ನಮಗೆ ನೆನಪಿದೆ. ನಾವೂ ನಮ್ಮ ಮಕ್ಕಳಿಗೆ ಇದನ್ನೇ ಹೇಳುತ್ತಲೇ ಬಂದಿದ್ದೇವೆ! ಹೀಗೆ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಲೇ ಇರುತ್ತದೆ. ಪ್ರಾಯಶಃ ನಮ್ಮ ಮಕ್ಕಳು ಅವರ ಮುಂದಿನ ಪೀಳಿಗೆಯವರಿಗೂ ಕೂಡ ಇದನ್ನೇ ಹೇಳುತ್ತಾರೆ ಅನ್ನುವುದು ಶತಃಸಿದ್ಧ. ಇವೆಲ್ಲ ಮಾತುಗಳ ಅರ್ಥವೇನು? ಇದು ಸತ್ಯವೆ? ಅದು ಸತ್ಯವೇ ಆದರೂ ಪೂರ್ಣ ಸತ್ಯವಲ್ಲ. ಸಂಸ್ಕೃತಿ, ಸಮಾಜ, ಜನ, ಆಚಾರ, ವಿಚಾರ, ನಡೆ ನುಡಿ ಎಲ್ಲವೂ ಬದಲಾಗಿದೆ ಎಂಬುದು ಸತ್ಯ. ಆದರೆ ಹಾಳಾಗಿದೆ ಎಂದಲ್ಲ. ಇದು ಒಂದು ಕ್ಷೇತ್ರದ ಕುರಿತಾದ ವಿಚಾರವಷ್ಟೇ ಅಲ್ಲ. ಪ್ರತಿ ಕ್ಷೇತ್ರದಲ್ಲೂ ಆಗಿರುವ, ಆಗುತ್ತಲಿರುವ ಬದಲಾವಣೆ. ಹಿಂದಿನ ಪೀಳಿಗೆಯವರಿಗೆ ಬದಲಾವಣೆಗಳಿಗೆ ಒಗ್ಗಿಕೊಳ್ಳಲು ತುಸು ಸಮಯಬೇಕಾದರೆ ಇಂದಿನವರು ಅದನ್ನು ಬೇಗನೆ ಅಪ್ಪಿಕೊಳ್ಳುತ್ತಾರೆ. ಕಾರಣ- ಹಿಂದಿನದ್ದು ಇವರಿಗೆ ಬರೀ ಶ್ರಾವ್ಯವಷ್ಟೇ ಅಲ್ಲವೇ? ಪ್ರತ್ಯಕ್ಷ ಕಂಡಿದ್ದಲ್ಲ.
ಅಲ್ಲದೆ ಬದಲಾವಣೆ ಕಾಲದಿಂದ ಕಾಲಕ್ಕೆ ಆಗುತ್ತಲೇ ಇರುತ್ತದೆ, ಇರಲೇಬೇಕು ಕೂಡ. ಅದು ಜನ, ಸಮಾಜ, ಸಂಸ್ಕೃತಿ ಎಲ್ಲವೂ ಜೀವಂತವಾಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿ. ಅದು ಹೊಸತನದ ಸಂಕೇತ. ಬದಲಾವಣೆ ಆಗದೆ, ಅದನ್ನು ಸ್ವೀಕರಿಸದೆ ಹೋದಲ್ಲಿ ಯಾವುದೇ ಕ್ಷೇತ್ರವಾಗಲಿ ನಿಂತ ನೀರಂತಾಗಿ ಕೊಳೆತು ನಾರಿ, ಕೊನೆಗೆ ಅವಸಾನವಾಗುವುದು ಖಚಿತ. ಮತ್ತು ಮುಖ್ಯ ಸಂಗತಿಯೆಂದರೆ ಆ ಕ್ಷೇತ್ರವಷ್ಟೇ ಅವಸಾನವಾಗದೆ ಅದರ ಪ್ರಭಾವವೂ ಅದರ ಸುತ್ತಲಿನ ಉಳಿದ ಅನೇಕ ಕ್ಷೇತ್ರಗಳ ಮೇಲೂ ಆಗುತ್ತದೆ ಎಂಬುದು ಅಷ್ಟೇ ಸತ್ಯ. ಇದಕ್ಕೆ ಇತಿಹಾಸದಲ್ಲಿ ಅನೇಕ ಸಾಕ್ಷಿಗಳ ಪ್ರಮಾಣವಿದೆ. ಅನೇಕ ನಾಗರಿಕತೆಗಳು, ಸಾಮ್ರಾಜ್ಯಗಳು, ರಾಜ ಮಹಾರಾಜರುಗಳು, ಸಾರ್ವಭೌಮ ಸಮ್ರಾಟರು, ಅವರುಗಳು ಆಳಿದ ನೆಲ ಮತ್ತು ಅವರ ಸಾಹಸಗಾಥೆಗಳು ಬದಲಾವಣೆಯ ಕಾರಣಗಳಿಂದಲೇ ಇತಿಹಾಸದ ಪುಟಗಳನ್ನು ಸೇರಿವೆ. ಇವೆಲ್ಲವೂ ಇಂದು ಇತಿಹಾಸವೆನ್ನುವುದು ಅಷ್ಟೇ ಸತ್ಯ. ಆದರೆ ಇವೆಲ್ಲವೂ ಇತ್ತು, ಇವೆಲ್ಲವೂ ನಡೆದುಹೋದ ಸಂಗತಿಗಳು ಎಂಬ ಸತ್ಯವನ್ನು ಅಲ್ಲಗಳೆಯಲು ಸಾಧ್ಯವೇ? ಈ ಎಲ್ಲ ಸಾಂಗತ್ಯಗಳಿಗೆ ಅದರದ್ದೇ ಆದ ಮಹತ್ವವಿದೆ, ಅದರದ್ದೇ ಆದ ವಿಶೇಷತೆಗಳಿವೆ. ನಾವು ಇವೆಲ್ಲದರ ಬಗ್ಗೆ ಅರಿತಿಲ್ಲ ಅಥವಾ ಆ ವಿಷಯವನ್ನು ನಾವು ನಿರ್ಲಕ್ಷಿಸಿದ್ದೇವೆ ಎಂದು ಒಪ್ಪಬಹುದು. ಈ ನಮ್ಮ ಅಜ್ಞಾನ, ನಿರ್ಲಕ್ಷ್ಯೆಗೆ ಕಾರಣವೇನು? ಇದರಿಂದ ನಾವೇನನ್ನು ಕಳೆದುಕೊಂಡಿದ್ದೇವೆ? ಸಾಮಾನ್ಯವಾಗಿ ನಮ್ಮ ನಾಡು, ಭಾಷೆ, ಸಂಸ್ಕೃತಿಯ ಈ ಏರುಪೇರಿಗೆ ಅನೇಕ ಕಾರಣಗಳಿದ್ದು, ಅದರಲ್ಲಿ ಪ್ರಮುಖವಾಗಿ ನಮ್ಮ ಸಂಸಾರ, ಸಮಾಜ ಹಾಗೂ ಸರ್ಕಾರ ಈ ಮೂರೂ ಆಯತನಗಳು ನೇರ ಹೊಣೆ ಎಂಬುದು ವಿಷಾದನೀಯ ಸಂಗತಿ.
ಆಧುನಿಕತೆಯ ಸೋಗು, ಬದುಕಿನ ಜಂಜಾಟದಲ್ಲಿ ಸಮಯದ ಅಭಾವವೆಂಬ ಸಬೂಬು, ಅದು ಕೇವಲ ಗುರುಗಳ-ಶಾಲೆಯ ಜವಾಬ್ದಾರಿಯೆಂಬ ಪಲಾಯನ ವಾದ, ಇತ್ಯಾದಿ ವಿಭಜಿತ ಕೌಟುಂಬಿಕ ವ್ಯವಸ್ಥೆಯು ಇಂದು ನಮ್ಮ ದೇಶದ ಭವಿಷ್ಯದ ರೂವಾರಿಗಳನ್ನು, ಅವರ ನೆನ್ನೆಯಗಳನ್ನು, ಇಂದಿನ ಅವರ ಭವ್ಯ ಬದುಕಿಗೆ ಆ ನೆನ್ನೆಯ ನಾಯಕರ ತ್ಯಾಗ ಬಲಿದಾನದ ಋಣದ ಅರಿವಿನಿಂದ ವಂಚಿತಗೊಳಿಸುತ್ತ ನಮ್ಮ ಸಂಸಾರಗಳು ಬಹು ದೊಡ್ಡ ಅಪರಾಧವನ್ನೇ ಎಸಗಿದೆ ಎಂಬುದು ಸುಸ್ಪಷ್ಟವಾಗಿ ಕಾಣುತ್ತೇವೆ. ಇದು ಕಠಿಣವಾದ ಸತ್ಯವೂ ಹೌದು.
ವಿಭಜಿತ ರಾಷ್ಟ್ರದಲ್ಲಿ ಭಾಷೆ, ಜಾತಿ, ಧರ್ಮ, ಮತ, ಪಕ್ಷಗಳ ನಡುವಿನ ವಾದ-ವಿವಾದ ಘರ್ಷಣೆಗಳು ಸಮಾಜಕಷ್ಟೇ ಸೀಮಿತವಾಗದೇ ನಮ್ಮ ಇತಿಹಾಸ, ರಾಷ್ಟ್ರ ಕಂಡ ಐತಿಹಾಸಿಕ ಮಹನೀಯರು, ಅವರ ತ್ಯಾಗ-ಬಲಿದಾನಗಳಿಗೂ ಈ ಎಲ್ಲ ಅನಿಷ್ಠಗಳ ಕವಚವನ್ನು ತೊಡಿಸಿ, ನಮ್ಮ ಸಮಾಜ ಅವರನ್ನು ವಕ್ರವಾಗೇ ಬಿಂಬಿಸುತ್ತಲೇ ಬಂದಿದೆ. ಮತ್ತು ವಿಷಾದದ ಸಂಗತಿ ಎಂದರೆ ನಮ್ಮ ಇಂದಿನ ಸಮಾಜ ಜೀವಿಗಳು ಈ ಅಸತ್ಯಗಳನ್ನು ಸತ್ಯವೆಂದು ಬಿಂಬಿಸುತ್ತಾ ಜನರ ನಡುವೆ ದ್ವೇಷ ಅಸೂಯೆಗಳನ್ನು ಬಿತ್ತುವಲ್ಲಿ ಯಶಸ್ವಿಯೂ ಆಗಿದ್ದಾರೆ.
ತನ್ನ ಉಳಿವಿಗಾಗಿ, ಅಧಿಕಾರಕ್ಕಾಗಿ, ಮತಗಳಿಗಾಗಿ ರಾಷ್ಟ್ರದ ಐತಿಹಾಸಿಕ ಪುರುಷರನ್ನು ಬಳಸಿಕೊಂಡು ಅವರ ಬದುಕಿನ, ತ್ಯಾಗಗಳ ಸತ್ಯ ಸಂಗತಿಗಳನ್ನು ಮರೆಮಾಚಿ ಅಸತ್ಯಗಳನ್ನು ವೈಭವೀಕರಿಸುತ್ತ ನಮ್ಮ ಸರ್ಕಾರ, ನಮ್ಮ ರಾಜಕೀಯ ನಾಯಕರುಗಳು ಮತ್ತು ಅಧಿಕಾರಿಶಾಹಿಗಳು ಈ ಒಂದು ವಿಚಾರದಲ್ಲಿ ಬಹು ದೊಡ್ಡ ಅಪರಾಧವನ್ನು ಎಸಗಿರುವುದು ಕ್ಷಮಿಸಲಾಗದ ಅಪರಾದ ಮತ್ತು ಕಠೋರವಾದ ಸತ್ಯದ ಸಂಗತಿಯೇ ಸರಿ.
ಈ ಎಲ್ಲಾ ಬದಲಾವಣೆಗೆ ಯಾವ ಕ್ಷೇತ್ರವೂ ಹೊರತಾಗಿಲ್ಲವೆಂದಾದಾಗ, ಸಿನಿಮಾ-ರಂಗಭೂಮಿಗಳಂತಹ ಪ್ರದರ್ಶನ ಕ್ಷೇತ್ರ ಭಿನ್ನವಾಗಿರಲು ಹೇಗೆ ತಾನೇ ಸಾಧ್ಯ? ಅಲ್ಲದೇ, ವಿಪರ್ಯಾಸವೆಂದರೆ ಎಲ್ಲಾ ಒಳ್ಳೆಯ ಅಥವಾ ಕೆಟ್ಟ ಬದಲಾವಣೆಗಳು ಅತೀ ವೇಗವಾಗಿ ಚಲಿಸಲು, ಮತ್ತು ಬೇರೆ ಬೇರೆ ಕ್ಷೇತ್ರಕ್ಕೆ ಅದು ಹರಡುವಲ್ಲಿ ಸಹಾಯ ಮಾಡುವ ಮುಖ್ಯವಾಹಿನಿಯೇ ಪ್ರದರ್ಶನ ಕಲೆಯ ಕ್ಷೇತ್ರ ಎಂದರೆ ತಪ್ಪಾಗಲಾರದು. ಈ ಪ್ರದರ್ಶನ ಕಲೆಯ ಅಷ್ಟವಿಧಿಗಳಲ್ಲಿ ರಂಗಭೂಮಿ ಪ್ರಾಚೀನವಾದದ್ದು ಮತ್ತು ಪ್ರಮುಖವಾದದ್ದು. ನೃತ್ಯ, ಸಂಗೀತ, ಚಿತ್ರಕಲೆ, ಸಾಹಿತ್ಯ, ಶಿಲ್ಪ ಮತ್ತೆಲ್ಲವನ್ನೂ ಒಳಗೊಂಡಿದ್ದು, ಮನೋರಂಜನೆಯ ಜೊತೆಜೊತೆಗೆ ಮನೋವಿಕಾಸವನ್ನು ಏಕಕಾಲಕ್ಕೆ ನೀಡಬಲ್ಲ ಚೈತನ್ಯಪೂರ್ಣವಾದ ಪ್ರಕಾರವೇ ರಂಗಭೂಮಿ. ಅಂತೆಯೇ ‘ಕಾವ್ಯೇಷು ನಾಟಕಂ ರಮ್ಯಂ’ (ಅರ್ಥಾತ್, ‘ಎಲ್ಲಾ ಕಾವ್ಯಗಳಲ್ಲಿ ನಾಟಕವೇ ಅತ್ಯಂತ ರಮಣೀಯ’) ಎಂದು ಮಹಾಕವಿ ಕಾಳಿದಾಸ ಅಂದೆಯೇ ಉದ್ಗರಿಸಿದ್ದಾನೆ! ಭರತಮುನಿಯೂ ಸಹ ತನ್ನ ‘ನಾಟ್ಯಶಾಸ್ತ್ರ’ದಲ್ಲಿ ಮನುಕುಲಕ್ಕೆ ರಂಗಭೂಮಿಯ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ಸುಸ್ಪಷ್ಟ ವಾಗಿ ಆರಂಭದಲ್ಲೇ ತಿಳಿಸಿದ್ದಾನೆ.
ಆರಂಭದ ಕಾಲದಲ್ಲಿ ಪೌರಾಣಿಕ ವಸ್ತು ವಿಶೇಷವಾಗಿದ್ದ ರಂಗಕಲೆ ನಂತರದಲ್ಲಿ ಬದಲಾಗಿ ಸಮಾಜದ ಆಶೋತ್ತರಗಳಿಗೆ ಮಣಿದು, ವ್ಯವಸ್ಥೆಗೆ ಅನುಗುಣವಾಗಿ ಜನಪದ ಮತ್ತು ಐತಿಹಾಸಿಕ ವಸ್ತುಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡು ಬೆಳೆಯಿತು. ಇತ್ತೀಚಿಗೆ ಸಾಮಾಜಿಕ, ರಾಜಕೀಯ, ಹಾಸ್ಯಪ್ರಧಾನ ವಸ್ತುಗಳು ರಂಗಭೂಮಿಯ ಮೇಲೆ ರಾರಾಜಿಸುತ್ತಿರುವುದು ಸರ್ವೇಸಾಮಾನ್ಯ. ಮುಖ್ಯ ಕಾರಣ, ಸಾಹಿತ್ಯ, ಸಂಗೀತಗಳು ನೀಡಬಹುದಾದ ಮನೋವಿಕಾಸವನ್ನು, ತೋರಬಹುದಾದ ವಸ್ತುನಿಷ್ಠೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲವಾದರೂ, ಅವೆಲ್ಲವೂ ಅಕ್ಷರಸ್ಥರ ಸೀಮೆಗೆ ಮುಡಿಪಾಗಿರುವುದು ಸತ್ಯ. ಜೊತೆಗೆ ಅದರ ಅಧ್ಯಯನಕ್ಕೆ ಸಮಯವನ್ನು ನೀಡುವುದು ಅನಿವಾರ್ಯ ಆಗುತ್ತದೆ. ಅಂದರೆ ಅನಕ್ಷರಸ್ಥರಿಗೆ, ಬದುಕಿನ ಜಂಜಾಟಗಳ ನಡುವೆ ಇವೆಲ್ಲಕ್ಕೆ ಹೆಚ್ಚು ಸಮಯವನ್ನು ನೀಡಲು ಅಸಾಧ್ಯವಾದವರಿಗೆ, ವಿಚಾರವನ್ನು ತಲುಪಿಸುವುದು, ಅದನ್ನು ಮನೋರಂಜನೆಯ ಮೂಲಕ ಹೆಚ್ಚು ಪರಿಣಾಮಕಾರಿಯಾಗಿಸಬಲ್ಲ ಚೈತನ್ಯಪೂರಿತವಾದ ಕ್ಷೇತ್ರವೇ ರಂಗಭೂಮಿ.
ಇತಿಹಾಸ ಮತ್ತು ರಂಗಭೂಮಿ ಪ್ರತ್ಯೇಕವಲ್ಲ. ಇವೆರಡು ಒಂದಕ್ಕೊಂದು ಪ್ರತಿಕೂಲವಾದವು ಮತ್ತು ಪೂರಕವಾದವು ಎಂಬ ಸೂಕ್ಷ್ಮ ವಿಚಾರವನ್ನು ಗ್ರಹಿಸಿ, ಇತಿಹಾಸವನ್ನು ಮತ್ತೆ ರಂಗಚೈತನ್ಯವನ್ನು ಒಟ್ಟುಗೂಡಿಸಿರುವುದು ನಮ್ಮ ಗುರುಪ್ರಸಾದ ಭಟ್ಟರ ಸಾಧನೆಯೇ ಸರಿ. ಅಷ್ಟೇ ಅಲ್ಲದೆ, ಇತಿಹಾಸವನ್ನು ಸಂಶೋಧನಾತ್ಮಕ ವಸ್ತುವನ್ನಾಗಿಸಿಕೊಂಡು ಅದಕ್ಕೆ ಮನೋರಂಜನೆಯ ಲೇಪನದೊಂದಿಗೆ ಸರಳೀಕೃತಗೊಳಿಸಿದ್ದಾರೆ. ಶಾಲಾಕಾಲೇಜಿನ ಮಕ್ಕಳು ಇದನ್ನು ಅಭಿನಯಿಸಬಲ್ಲ, ಅರ್ಥಮಾಡಿಕೊಳ್ಳಬಲ್ಲ ಸುಲಭ ಕೃತಿಯಾಗಿ ನೀಡಿದ್ದಾರೆ. ಇಂದಿನ ಕಾಲಕ್ಕೆ ಅತೀ ಹೆಚ್ಚು ಸೂಕ್ತವಾಗಿದೆ. ಜೊತೆಗೆ, ಮುಂದಿನ ಜನಾಂಗವನ್ನು ದೂರುವುದನ್ನು ಬಿಟ್ಟು ಅದನ್ನು ಅವರ ನೋಟಕ್ಕೆ, ಓಟಕ್ಕೆ ಸೂಕ್ತವಾಗುವಂತೆ ವಿಷಯವನ್ನು ನೀಡಿರುವ ಹೆಗ್ಗಳಿಕೆ ನಮ್ಮ ಗುರುಪ್ರಸಾದ ಭಟ್ ಅವರಿಗೆ ಸಲ್ಲುತ್ತದೆ.
ಛತ್ರಪತಿ ಶಿವಾಜಿ ರಾಯರ ಬಾಲ್ಯ, ತಾಯಿ ಜೀಜಾಬಾಯಿಯವರು ಅವರಿಗೆ ನೀಡಿದ ಸಂಸ್ಕಾರ, ಶಸ್ತ್ರ-ಶಾಸ್ತ್ರಗಳ ಪಾಠ, ಅವರಿಗೆ ಹಾಡಿದ ಲಾಲೀ ಪದಗಳು, ಶಿವಾಜಿಯ ನಂಬಿಕೆಯ ಬಂಟರು, ರಾಷ್ಟ್ರದ ರಕ್ಷಣೆಗಾಗಿ, ಆತ್ಮಗೌರವಕ್ಕಾಗಿ ಎಂತಹ ಬಲಿದಾನಕ್ಕೂ ಸಿದ್ಧರಾದ ಅವರು ಕಟ್ಟಿದ ಸೇನೆ, ಅಫ್ಜಲ್ ಖಾನ್ ನೊಂದಿಗಿನ ಅವರ ನೈಪುಣ್ಯತೆಯ ಯುದ್ಧದ ವೈಖರಿ, ಇವೆಲ್ಲವೂ ಇಂದಿನ ಪೀಳಿಗೆ ಅರಿಯಲೇಬೇಕಾದ ವಿಚಾರಗಳು. ಇದು ಇಂದಿನ ವಿದ್ಯಮಾನಗಳಿಗೆ ಅತ್ಯಗತ್ಯವಾದ ಪಾಠ ಹೌದು. ಕಾರಣ, ಇವೆಲ್ಲದರ ಬಗ್ಗೆ ಅನೇಕ ಕಪೋಲಕಲ್ಪಿತ ಕತೆಗಳು ಬಹುಕಾಲದಿಂದ ಹರಿದಾಡುತ್ತಿದ್ದು, ಅವುಗಳೇ ಸತ್ಯವೇನೋ ಎನ್ನುವಷ್ಟು ಅದರ ಪ್ರಭಾವವೂ ಜನಮಾನಸದಲ್ಲಿ ಬೇರೂರಿವೆ. ಇದರ ಬಗ್ಗೆ ಸತ್ಯದ ಸಾಂಗತ್ಯಗಳನ್ನೆಲ್ಲ ದಾಖಲಿಸಿರುವುದಷ್ಟೇ ಅಲ್ಲದೆ, ಅವುಗಳ ಬಗ್ಗೆ ಸೂಕ್ತ ಸಮಕಾಲೀನ ಸಾಕ್ಷಿಗಳನ್ನು ಅವರು ಒದಗಿಸಿದ್ದಾರೆ. ಇವೆಲ್ಲವೂ ಅವರ ಸಂಶೋಧನಾತ್ಮಕ ಬದ್ಧತೆ ಮತ್ತು ಅನೇಕ ದಶಕಗಳ ಸಂಗ್ರಹಣಾ ಶ್ರಮಕ್ಕೆ ಸಾಕ್ಷಿಯಾಗಿವೆ. ಶಿವಾಜಿ ಮಹಾರಾಜರ ಬದುಕಿನ ರೋಚಕ, ಮನಕಲುಕುವ ಅನೇಕ ಪ್ರಸಂಗಗಳನ್ನು ಸಹ ಅವರು ಅನಗತ್ಯವಾಗಿ ವೈಭವೀಕರಿಸದೆ ಮಕ್ಕಳ ಮೃದು ಮನಸ್ಸಿಗೆ ನಾಟುವಂತೆ ಪ್ರಸಂಗಗಳ ಮೂಲಕ ನಾಟಕವನ್ನು ಕಟ್ಟಿ ಕೊಟ್ಟಿದ್ದಾರೆ.
ಇನ್ನು ಈ ನಾಟಕಗಳಿಗೆ ಸೂಕ್ತವೆನಿಸುವ ಹಾಡುಗಳನ್ನು ಮತ್ತು ಮುಕ್ತಕ ಗಳನ್ನು ಸುಲಭದಲ್ಲಿ ಮಕ್ಕಳೇ ಹಾಡಬಲ್ಲಂತೆ ಸತ್ಯೇಶ್ ಎನ್. ಬೆಳ್ಳೂರ್ ಅವರು ನೀಡಿದ್ದಾರೆ. ರಂಗಗೀತೆಗಳಿಗೆ ತಮ್ಮದೇ ಆದ ಆಯಾಮವಿದೆ. ಅದರಲ್ಲೂ ಐತಿಹಾಸಿಕ ನಾಟಕಗಳ ವಸ್ತುವಿನ ಭಾವನಾತ್ಮಕ ದೃಷ್ಟಿಯಲ್ಲಿ ಹಾಡುಗಳು, ಮುಕ್ತಕಗಳು, ದೃಶ್ಯಕಾವ್ಯಗಳು ಮತ್ತು ಕಂದಪದ್ಯಗಳಿಗೆ ಒಂದು ವಿಶೇಷವಾದ ಸ್ಥಾನವಿದ್ದು, ಅದನ್ನು ಸುಂದರವಾಗಿ ಅವರು ಕಟ್ಟಿಕೊಟ್ಟಿದ್ದಾರೆ. ಇವುಗಳು ಮನೋರಂಜನೆಗಷ್ಟೇ ಮೀಸಲಾಗಿರದೆ ಮೂಲ ಕೃತಿಯ ಸೌಂದರ್ಯವನ್ನು ಹೆಚ್ಚಿಸಿದೆ ಎಂಬುದು ಶ್ಲಾಘನೀಯ ವಿಚಾರ. ಇದು ನಾಟಕಕ್ಕೆ ಅತ್ಯಗತ್ಯವಾದವುಗಳು; ಆದರೆ, ಇಂದು ಅಪರೂಪವಾಗಿರುವ ಸಂಗತಿಗಳು. ಅವರ ಪ್ರಯತ್ನ ಮತ್ತು ಶ್ರಮವು ಕೂಡ ಪ್ರೇರಣಾದಾಯಕವಾಗಿದೆ. ಈ ಎಲ್ಲ ಹಾಡು ಮತ್ತು ಮುಕ್ತಕಗಳನ್ನು ನಾಟಕದಲ್ಲಿ ಮಾತ್ರವಲ್ಲದೇ, ಆ ಆಯಾಮದ ಹೊರತಾಗಿಯೂ ರಾಷ್ಟ್ರಪ್ರೇಮದ ಗೀತೆಗಳಾಗಿಯೂ ಬಳಸಲು ಯೋಗ್ಯವಾಗಿದೆ ಎಂಬುದು ಗಮನಾರ್ಹ ಸಂಗತಿ.
ಒಟ್ಟಾರೆ, ಈ ಈರ್ವರ ಸಂಗಮದ ಫಲವಾಗಿ ಹೊರಹೊಮ್ಮಿರುವ ‘ಮಕ್ಕಳಿಗಾಗಿ ಶಿವಾಜಿ-ಕಿರು ನಾಟಕಗಳು’ ಕೃತಿಯ ಮೂಲಕ ಇತಿಹಾಸವನ್ನು, ಇತಿಹಾಸ ನಿರ್ಮಾತೃರ ಚರಿತ್ರೆಯನ್ನು ಯಥಾವತ್ತಾಗಿ ನೀಡಿ ಅವರ ಪಾಲಿನ ಕರ್ತವ್ಯವನ್ನು ಚಾಚು ತಪ್ಪದೆ ಅವರು ನಿರ್ವಹಿಸಿದ್ದಾರೆ ಎಂಬ ವಿಷಯದಲ್ಲಿ ಎಳ್ಳಷ್ಟೂ ಅನುಮಾನವೇ ಇಲ್ಲ.
ಇನ್ನು ನಮ್ಮ ನಿಮ್ಮೆಲ್ಲರ ಮುಂದಿರುವ ದೊಡ್ಡ ಕೈಂಕರ್ಯವೆಂದರೆ ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವುದು. ಅವರಿಗೆ ಆ ವಸ್ತುವಿನ ವಿಷಯವನ್ನು ಮನದಟ್ಟು ಮಾಡುವುದು. ಗುರುಪ್ರಸಾದ ಭಟ್ ಅವರು ಅದಕ್ಕೆ ಸೂಕ್ತ ಮಾರ್ಗವನ್ನು ತಮ್ಮ ಕೃತಿಯಲ್ಲಿ ಸೂಕ್ಷ್ಮವಾಗಿ ಸೂಚಿಸಿದ್ದಾರೆ. ಅದುವೇ, ರಂಗಪ್ರಯೋಗದ ಅಸ್ತ್ರ. ಮಕ್ಕಳಿಗಾಗಿ ಅಂದ ಮೇಲೆ, ಅದನ್ನು ಮಕ್ಕಳಿಂದಲೇ ಆದಾಗ ಅದು ಅರ್ಥಪೂರ್ಣ ಆಗುತ್ತದೆ. ಹಾಗಾಗಿ ಇದರ ಪ್ರಯೋಗಗಳು ಹೆಚ್ಚು ಹೆಚ್ಚು ಆಗುತ್ತಾ, ನಮ್ಮ ಹಿಂದಿನವರ ವಿಚಾರಧಾರೆ, ಅವರ ರಾಷ್ಟ್ರಪ್ರೇಮ, ತ್ಯಾಗ ಬಲಿದಾನಗಳು ನಮಗೆ ನಮ್ಮ ಮುಂದಿನ ಪೀಳಿಗೆಯವರಿಗೆ ಪ್ರೇರಣೆ ಯಾಗಲೆಂದು ಆಶಿಸುತ್ತೇನೆ.
ಗುರುಪ್ರಸಾದ ಭಟ್ ಅವರ ಈ ಕೃತಿ ಛತ್ರಪತಿ ಶಿವಾಜಿ ಮಹಾರಾಜರಿಗಷ್ಟೇ ಸೀಮಿತವಾಗದೆ, ನಮ್ಮ ರಾಷ್ಟ್ರ ಕಂಡಿರುವ, ನಮ್ಮ ಪ್ರಾತಃಸ್ಮರಣೀಯರಾದ ಅನೇಕಾನೇಕ ಇತಿಹಾಸ ಪುರುಷರ ಜೀವನ, ನಡೆದು ಬಂದ ಹಾದಿ, ಅವರ ತ್ಯಾಗ ಬಲಿದಾನ ಮತ್ತು ರಾಷ್ಟ್ರಪ್ರೇಮಗಳ ಬಗ್ಗೆ ಸೂಕ್ತ ಮಾಹಿತಿಗಳನ್ನು ರಂಗರೂಪವಾಗಿ ನೀಡಲಿ; ಅವರ ಮುಂದಿನ ಎಲ್ಲಾ ಇಂತಹ ಸಾಹಸಕ್ಕೆ, ಶ್ರಮದ ಸಾರ್ಥಕ್ಯಕ್ಕೆ ತಾಯಿ ಶ್ರೀ ಶಾರದೆಯ ಕೃಪಾಕಟಾಕ್ಷವು ಸದಾ ಅವರ ಬೆನ್ನಾಗಿರಲೆಂದು ಆಶಿಸುತ್ತೇನೆ.
ವಿಶ್ವಾಸ ವೃದ್ಧಿಸಲಿ!
ಡಿಸೆಂಬರ್ 09, 2025 ಡಾ. ಬಾಬು ಹಿರಣ್ಣಯ್ಯ ನಟ/ನಿರ್ದೇಶಕ, ಬೆಂಗಳೂರು
ಪ್ರಸ್ತಾವನೆ
“ಶಿವಾಜಿ– ಮಕ್ಕಳ ಹೃದಯದಲ್ಲಿ ಪ್ರೇರಣೆಯ ನಂದಾದೀಪ”
ಸಂಘಪ್ರೇರಿತ ಹಾಗೂ ರಾಷ್ಟ್ರಪ್ರೇಮದ ಸುಗಂಧವಿರುವ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿದರೆ, ಇತ್ತೀಚಿನ ಕಾಲದಲ್ಲಿ ಅನೇಕ ಶಾಲಾ–ಕಾಲೇಜುಗಳಲ್ಲಿ ಚಿಂತಾಜನಕವಾದ ಒಂದು ಪ್ರವೃತ್ತಿ ಹೆಚ್ಚುತ್ತಿದೆ. ಸನಾತನ ಧರ್ಮವನ್ನು ಹೀಯಾಳಿಸುವ ನಾಟಕಗಳು, ಅಸಭ್ಯ ನೃತ್ಯಗಳು ಮತ್ತು ಅಸಂಸ್ಕೃತ ಸಂಭಾಷಣೆಗಳು ಕೇವಲ ಮನೋರಂಜನೆಗಾಗಿ “ಶಾಲಾ ವಾರ್ಷಿಕೋತ್ಸವ” ಎಂಬ ಹೆಸರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವುದು ನೋವಿನ ಸಂಗತಿ.
ಶಾಲೆ–ಕಾಲೇಜುಗಳು ಬಾಲ್ಯದಿಂದಲೇ ಧರ್ಮ, ಸಂಸ್ಕೃತಿ, ನ್ಯಾಯ ಮತ್ತು ರಾಷ್ಟ್ರಪ್ರೇಮದ ಶ್ರದ್ಧಾಭಕ್ತಿಯನ್ನು ಬಿತ್ತಿದರೆ, ಆ ಮಕ್ಕಳು ಮುಂದೆ ಪ್ರಖರ ದೇಶಭಕ್ತರಾಗಿ, ಸಮಾಜಮುಖಿಯರಾಗಿ, ನಾಡಿನ ಸಮೃದ್ಧಿಗಾಗಿ ಅಹರ್ನಿಶಿ ಶ್ರಮಿಸುವ ತರುಣರಾಗಿ ಬೆಳೆದು ಬರುತ್ತಾರೆ. ಅಂತಹ ಭಾವನೆಗಳನ್ನು ಬೆಳೆಸಲು ಶಾಲಾ ವಾತಾವರಣದಲ್ಲೇ ಆಧ್ಯಾತ್ಮಿಕ ಮತ್ತು ದೇಶಭಕ್ತಿಯ ಸಾರವಿರುವ ನೃತ್ಯ–ನಾಟಕಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಅತ್ಯಾವಶ್ಯಕ.
ನಮ್ಮ ನಾಡಿನಲ್ಲಿ ಅನೇಕ ಮಹನೀಯರು ಜನಿಸಿ ತಮ್ಮ ಸೇವೆಯಿಂದ ದೇಶವನ್ನು ಬೆಳಗಿಸಿದ್ದಾರೆ. ಅವರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಗ್ರಗಣ್ಯರು- ಸ್ಫೂರ್ತಿ, ತ್ಯಾಗ ಮತ್ತು ಶೌರ್ಯದ ಜೀವಂತ ಸಂಕೇತ. ಅವರ ಜೀವನವೇ ಒಂದು ಪಾಠಪುಸ್ತಕ; “ಶಿವಾಜಿ” ಎಂಬ ಒಂದು ಉಚ್ಚಾರವೇ ಮನಸ್ಸಿಗೆ ಧೈರ್ಯ ತುಂಬುವ ಶಕ್ತಿ. ಅವರ ಜೀವನವನ್ನು ಆಧಾರವನ್ನಾಗಿಸಿಕೊಂಡು ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತುವ ಉದ್ದೇಶದಿಂದ “ಮಕ್ಕಳಿಗಾಗಿ ಶಿವಾಜಿ–22 ಕಿರು ನಾಟಕಗಳು” ಎಂಬ ಕೃತಿಯನ್ನು ರಚಿಸಿದೆನು. ಈ ನಾಟಕಗಳು ಶಿವಾಜಿ ಮಹಾರಾಜರ ಬಾಲ್ಯದಿಂದ ಸ್ವರ್ಗಸ್ಥರಾಗುವ ಮುಂಚಿನ ಅನೇಕ ರೋಚಕ ಘಟನೆಗಳಿಂದ ಸ್ಫೂರ್ತಿ ಪಡೆದು ಮೈತಾಳಿವೆ. ಇವುಗಳು ರಾಜ್ಯದಾದ್ಯಂತ ಎಲ್ಲ ಶಾಲಾ–ಕಾಲೇಜುಗಳಲ್ಲಿ ಪ್ರದರ್ಶನಗೊಂಡರೆ, ಶಿವಾಜಿ ಮಹಾರಾಜರ ಭವ್ಯ ವ್ಯಕ್ತಿತ್ವದ ಕಿರುನೋಟ ಎಲ್ಲರಿಗೂ ದೊರೆತು, ದೇಶಭಕ್ತಿಯ ನೂತನ ಜ್ಯೋತಿ ಬೆಳಗುವುದು ನಿಶ್ಚಯ. ವಿದ್ಯೆಯೆಂದರೆ ಅದು ಶಾಲೆಯಲ್ಲಿ ಕೇವಲ ಪಠ್ಯಪುಸ್ತಕಗಳನ್ನು ಕಲಿಸುವುದಕ್ಕೆ ಮಾತ್ರ ಸೀಮಿತವಲ್ಲ, ಅದು ಮಕ್ಕಳ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣ ಮತ್ತು ಚಾರಿತ್ರ್ಯ ರೂಪಿಸುವ ಪವಿತ್ರ ವೇದಿಕೆಯೂ ಹೌದು. ರಾಷ್ಟ್ರಭಕ್ತಿಯ ನಾಟಕಗಳು ಕೇವಲ ನಟನಾ ಕೌಶಲ್ಯ ತೋರ್ಪಡಿಸುವ ಕಲಾ ಅಭ್ಯಾಸವಲ್ಲ, ಅವುಗಳು ಸಂಸ್ಕೃತಿಯ ಪುನರುಜ್ಜೀವನ.
ಶಿವಾಜಿ ಉತ್ಸವ
ಪ್ರತಿವರ್ಷ ಫೆಬ್ರವರಿ 19ರಂದು, ನಮ್ಮೂರಿನ ಎಲ್ಲ ಶಾಲೆಗಳ ಮಕ್ಕಳನ್ನು ಒಂದೆಡೆಗೂಡಿಸಿ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸ್ಮರಣೀಯ ಹಾಗೂ ಪ್ರೇರಣಾದಾಯಕವಾಗಿ ಆಚರಿಸುವ ಉದ್ದೇಶದಿಂದ ಒಂದು ಭವ್ಯ “ಶಿವಾಜಿ ಉತ್ಸವ”ವನ್ನು ಆಯೋಜಿಸಬೇಕೆಂದು ನನ್ನ ಕನಸು. ಈ ಉತ್ಸವದ ಮುಖ್ಯ ಆಕರ್ಷಣೆಯಾಗಿ ಶಾಲಾ ಮಕ್ಕಳಿಂದಲೇ “ಶಿವಾಜಿ ಮಹಾರಾಜರ ನಾಟಕ ಸ್ಪರ್ಧೆ” ನಡೆಯಬೇಕು. ಈ ಮೂಲಕ ಮಕ್ಕಳಿಗೆ ಮಾತ್ರವಲ್ಲ, ಅವರ ಪೋಷಕರಿಗೂ ಹಾಗೂ ಊರಿನ ಎಲ್ಲ ಜನರಿಗೂ ಮಹಾರಾಜರ ಧೈರ್ಯ, ಧರ್ಮ-ನ್ಯಾಯ ಬದ್ಧತೆ, ಶಿಸ್ತು ಮತ್ತು ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ನಿಸ್ವಾರ್ಥ ಭಾವನೆಯ ಮಹತ್ವ ತಿಳಿಯಲಿದೆ.
ಶಿವಾಜಿ ಮಹಾರಾಜರು ತಮ್ಮ ಬದುಕಿನಲ್ಲಿ ಬಾಳಿ ತೋರಿಸಿದ ಅಪ್ರತಿಮ ದೇಶಭಕ್ತಿ, ಶಕ್ತಿಯುತ ನಾಯಕತ್ವ ಮತ್ತು ಸಾರ್ವಜನಿಕ ಹಿತದ ಸಂಕಲ್ಪವು ಇಂದಿನ ಮಕ್ಕಳಿಗೆ ದಿಕ್ಕು ತೋರಿಸಬಹುದಾದ ದೀಪಸ್ತಂಭವಾಗಿವೆ. ಈ ಉತ್ಸವದ ಮೂಲಕ ಮಹಾರಾಜರ ಅಮೂಲ್ಯ ಕೊಡುಗೆ ಜನಮನದಲ್ಲಿ ಜಾಗೃತವಾಗುವುದಲ್ಲದೆ, ಮಕ್ಕಳ ಮನಸ್ಸಿನಲ್ಲಿ ಧನ್ಯತೆಯ ಭಾವನೆ, ಐತಿಹಾಸಿಕ ಗರಿಮೆ ಮತ್ತು ದೇಶಾಭಿಮಾನ ಇನ್ನಷ್ಟು ಪ್ರಖರಗೊಳ್ಳುವುದು ಎಂಬುದೇ ಇದರ ನಿಜವಾದ ಉದ್ದೇಶ.
ಇಂತಹ ಕೃತಿಯೊಂದನ್ನು ರಚಿಸುವಂತೆ ಸಲಹೆ ನೀಡಿ ಪ್ರೇರೇಪಿಸಿದ ನನ್ನಣ್ಣ
ಶ್ರೀ ರಾಘವೇಂದ್ರ ಭಟ್ಟ (ಕಳಸ ಪ್ರಬೋಧಿನಿ ವಿದ್ಯಾಕೇಂದ್ರದ ಗೌರವ ಕಾರ್ಯದರ್ಶಿ) ಮತ್ತು ಅತ್ತಿಗೆ ಶ್ರೀಮತಿ ವೀಣಾ ರಾಘವೇಂದ್ರ ಭಟ್ಟ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಭಾರತೀಯ ಸಂಸ್ಕೃತಿಗೆ ಪೂರಕವಾದ ಶಿಕ್ಷಣದ ಮೂಲಕ ಶ್ರೇಷ್ಠ ವ್ಯಕ್ತಿತ್ವದ ನಿರ್ಮಾಣಕ್ಕೆ ಒತ್ತು ನೀಡಿ ಅವರು ಕಳೆದ ಮೂರು ದಶಕಗಳಿಂದ ತನು-ಮನ-ಧನ ಸಂಪೂರ್ಣ ಸಮರ್ಪಣೆಯ ಭಾವದಿಂದ ಪ್ರಬೋಧಿನಿ ಶಾಲೆಯನ್ನು ನಡೆಸುತ್ತಿರುವ ರೀತಿ ನಿಜಕ್ಕೂ ಶ್ಲಾಘನೀಯ ಹಾಗೂ ಅನುಕರಣೀಯ.
“ನಮ್ಮ ಶಾಲೆಯ ಅರುಣ ವರ್ಗ, ಉದಯ ವರ್ಗ ಹಾಗೂ ಪ್ರಾಥಮಿಕ ತರಗತಿಯ ಮಕ್ಕಳು ಅಪಾರ ಪ್ರತಿಭಾವಂತರು. ಒಮ್ಮೆ ಹೇಳಿಕೊಟ್ಟರೆ ಸಾಕು, ಅವರು ಅದನ್ನು ಸರಿಯಾಗಿ ಗ್ರಹಿಸಿ, ಮನೋಜ್ಞವಾಗಿ ಅಭಿನಯಿಸಿ ಪ್ರದರ್ಶಿಸಬಲ್ಲರು. ಅವರಲ್ಲಿ ಈ ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸಬೇಕು, ಅದು ಶಿವಾಜಿ ಕೇಂದ್ರಿತವಾಗಿದ್ದರೆ ಇನ್ನಷ್ಟು ಮೆರಗು, ಎಂಬ ಆಶಯ ನಮ್ಮದು. ನಮ್ಮ ಶಾಲೆಯ ಮಕ್ಕಳಿಗೆ ಶೈಕ್ಷಣಿಕವಾಗಿ ಸಹಾಯವಾಗುವ ರೀತಿಯಲ್ಲಿ, ಹತ್ತು-ಹದಿನೈದು ನಿಮಿಷಗಳೊಳಗೆ ಮುಗಿಯುವ ಕಿರುನಾಟಕಗಳು ಹಾಗೂ ಊರಿನ ಶಕ್ತಿ ಗಣಪತಿ ಪೂಜಾ ಸಂಭ್ರಮದಲ್ಲಿ ನಡೆಸುವ ವೇಷಭೂಷಣ ಸ್ಪರ್ಧೆಗಾಗಿ ಎರಡು-ಮೂರು ನಿಮಿಷಗಳಲ್ಲಿ ಮುಕ್ತಾಯವಾಗಬಹುದಾದ ಚುಟುಕು-ನಾಟಕಗಳನ್ನು ಆಯೋಜಿಸುವ ಯೋಜನೆ ನಮ್ಮ ಮುಂದಿದೆ. ಇಂತಹ ಸಣ್ಣ ನಾಟಕಗಳ ಮೂಲಕ ಪುಟಾಣಿ ಮಕ್ಕಳು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳು, ಧೈರ್ಯ, ಶಿಸ್ತು, ತ್ಯಾಗ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಜೀವಂತವಾಗಿ ಅಭಿನಯಿಸಬಹುದಾಗಿದೆ. ನಮ್ಮ ಶಾಲೆಯ ಮಕ್ಕಳಿಂದಲೇ ಈ ನಾಟಕಗಳನ್ನು ಮಾಡಿಸುತ್ತೇವೆ” ಎಂಬ ಉತ್ಸಾಹದ ಮಾತುಗಳೊಂದಿಗೆ ನನ್ನೊಂದಿಗೆ ನಾಟಕಗಳ ರೂಪುರೇಷೆಗಳನ್ನು ಚರ್ಚಿಸಿ, ಮಾರ್ಗದರ್ಶನ ನೀಡಿದ ಈರ್ವರು ಪ್ರೇರಕ ವ್ಯಕ್ತಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಅವರ ಈ ಬೆಂಬಲ ನಮ್ಮ ಪ್ರಯತ್ನಕ್ಕೆ ಗಟ್ಟಿ ನೆಲೆಯಾಗಿದೆ. ಅವರ ಆಶಯದಂತೆ ಆದಷ್ಟು ಬೇಗ ಇದನ್ನು ಇಂಗ್ಲಿಷಿಗೂ ಅನುವಾದ ಮಾಡಬೇಕು.
ಕಿರುನಾಟಕಗಳ ಪ್ರಾರಂಭದಲ್ಲಿ ‘ಐತಿಹಾಸಿಕ ಹಿನ್ನೆಲೆ’ಗೆ ಸೂಕ್ತವಾದ ನಾಲ್ಕು ಸಾಲುಗಳ ಪುಟ್ಟಪುಟ್ಟ ಮುಕ್ತಕಗಳನ್ನು ರಚಿಸಿ ಕೊಟ್ಟ ಶ್ರೇಯ ನನ್ನ ಮಿತ್ರ ಸತ್ಯೇಶ್ ಎನ್. ಬೆಳ್ಳೂರ್ ಅವರಿಗೆ ಸಲ್ಲುತ್ತದೆ. ಸನ್ಮಾನ್ಯ ಡಿ.ವಿ.ಜಿ. ಅವರು ‘ಕವಿತೆ ನೆನಪಿಗೆ ಸುಲಭ’ ಎಂದು ಹೇಳಿದಂತೆ, ಮಂಕುತಿಮ್ಮನ ಕಗ್ಗದ ಧಾಟಿಯಲ್ಲಿಯೇ ‘ನವ್ಯಜೀವಿ’ ಮುಕ್ತಕಗಳನ್ನು ಹಾಡಲು ಮಕ್ಕಳಿಗೆ ಬಹು ಉಪಯುಕ್ತ.
ಈ ಕೃತಿಯನ್ನು ಅಚ್ಚುಕಟ್ಟಾಗಿ ಮುದ್ರಿಸಿ ಪ್ರಕಾಶಿಸಿದ ಹೊಸಪೇಟೆಯ ‘ಯಾಜಿ ಪ್ರಕಾಶನ’ ಸಂಸ್ಥೆಯ ಶ್ರೀಮತಿ ಸವಿತಾ ಯಾಜಿ ಮತ್ತು ಗೆಳೆಯರಾದ
ಶ್ರೀ ಗಣೇಶ್ ಯಾಜಿ ಅವರಿಗೆ, ಆಕರ್ಷಕ ಮುಖಪುಟವನ್ನು ವಿನ್ಯಾಸಗೊಳಿಸಿದ ಶ್ರೀ ಯು.ಟಿ.ಸುರೇಶ್ ಹಾಗೆಯೇ ಒಳಪುಟ ರೇಖಾಚಿತ್ರವನ್ನು ಅಲ್ಪ ಸಮಯದಲ್ಲಿ ರಚಿಸಿಕೊಟ್ಟ ಶ್ರೀ ಸತೀಶ್ ಯಲ್ಲಾಪುರ ಅವರಿಗೂ ಧನ್ಯವಾದಗಳು. ಕೇಳಿದಾಕ್ಷಣ ಪ್ರೀತಿಯಿಂದ ಬೆನ್ನುತಟ್ಟಿ ಸ್ಫೂರ್ತಿದಾಯಕ ಮುನ್ನುಡಿಯನ್ನು ಬರೆದುಕೊಟ್ಟ ರಂಗಭೂಮಿಯ ಶ್ರೇಷ್ಠವ್ಯಕ್ತಿಗಳಾದ ಡಾ. ಬಾಬು ಹಿರಣ್ಣಯ್ಯ ಅವರಿಗೆ ಅನಂತ ಧನ್ಯವಾದಗಳು ಹಾಗೂ ಕೃತಜ್ಞತೆಗಳು. ಎಂದಿನಂತೆ, ಕರಡುಪ್ರತಿಯನ್ನು ತಿದ್ದಿ, ಕೆಲವೊಂದು ಸೂಕ್ಷ್ಮ ವಿಷಯಗಳನ್ನು ಸೇರಿಸಲು ಸಲಹೆ ನೀಡಿ, ಬರವಣಿಗೆಯನ್ನು ಸುಧಾರಿಸಿ ಉತ್ತಮಗೊಳಿಸಲು ಸಲಹೆ ನೀಡಿದ ಗೆಳೆಯ ಸತ್ಯೇಶ್ ಎನ್. ಬೆಳ್ಳೂರ್ ಅವರಿಗೆ ಅನಂತ ಧನ್ಯವಾದಗಳು.
ಛತ್ರಪತಿ ಶಿವಾಜಿ ಮಹಾರಾಜ್ ಕೀ, ಜೈ!
ಜೈ ಹಿಂದ್!
ಎಲ್ಲರಿಗೂ ಶುಭವಾಗಲಿ!
ಗುರುಪ್ರಸಾದ ಭಟ್, ಸತ್ಯೇಶ್ ಎನ್. ಬೆಳ್ಳೂರ್
ಉಡುಪಿ ಬೆಂಗಳೂರು
ಪರಿವಿಡಿ
i. ಸವಿನುಡಿ / v
ii. ಲೇಖಕದ್ವಯರ ಕಿರುಪರಿಚಯ / vii
iii. ಮುನ್ನುಡಿ / x
iv. ಪ್ರಸ್ತಾವನೆ / xii
v. ಪಾತ್ರವರ್ಗ ಮತ್ತು ವೇಷಭೂಷಣ / xxi
vi. ಸೂಚನೆ / xxix
ಭಾಗ-1
ಕಿರು ನಾಟಕಗಳು
1. ರಾಜಮಾತೆ ಜೀಜಾಬಾಯಿಯವರ ಜೋಗುಳ / 1
2. ಬ್ರಹ್ಮಾಸ್ತ್ರದ ರಹಸ್ಯ / 8
3. ಆದಿಲಶಾಹಿಗೆ ಸೆಡ್ಡು ಹೊಡೆದ ಬಾಲಕ ಶಿವಾಜಿ / 15
4. ರಾಯಿರೇಶ್ವರ ಬೆಟ್ಟದ ಮೇಲೆ ಧೀರ ಪ್ರತಿಜ್ಞೆ / 24
5. ಶಿವಾಜಿಯ ಗುರು ದಾದೋಜಿಯ ಆದರ್ಶ / 30
6. ಪರಸ್ತ್ರೀಯರೆಲ್ಲರೂ ನನಗೆ ಮಾತೆಯರಂತೆ / 38
7. ಭವಾನಿ ಖಡ್ಗ ವರಪ್ರದಾನ / 44
8. ಸ್ವಾಮಿ ಶ್ರೀ ಸಮರ್ಥ ರಾಮದಾಸರ ನಿಗೂಢಾರ್ಥ ಕೂಟ ಕವನ ಪತ್ರಗಳು / 49
9. ನಿನ್ನಂತೆ ನನ್ನ ತಾಯಿಯೂ ಸುಂದರಳಾಗಿದ್ದರೆ! / 60
10. ಮಿರ್ಜಾರಾಜೇ ಜಯಸಿಂಹ ತೆತ್ತ ಕರ್ಮಫಲ / 66
11. ಜೀಜಾಬಾಯಿ- ಎಂದೂ ಧೃತಿಗೆಡದ ರಾಜಮಾತೆ / 83
12. ಶಿವಾಜಿ ಮಹಾರಾಜ ಮತ್ತು ಕವಿ ಭೂಷಣರ ಮೊದಲ ಭೇಟಿ / 93
13. ಶಿವಾಜಿಯನ್ನೇ ಎದುರಿಸಿದ ದ್ವಾರಪಾಲಕ ಸಾವಳ್ಯ / 102
14. ಸ್ವಾಮಿ ಶ್ರೀ ಸಮರ್ಥ ರಾಮದಾಸರ ಶಿವಕಲ್ಯಾಣರಾಜ ಗೀತೆ / 113
15. ಶಿವಗರ್ಜನೆ / 120
16. ಸಮರ್ಥರಿಗೆ ಸಾಮ್ರಾಜ್ಯವನ್ನು ದಾನ ಮಾಡಿದ ಶಿವಾಜಿ / 124
17. ಬಾಲ್ಯದ ಗೆಳೆಯ ನೇತಾಜಿಯ ‘ಘರ್ ವಾಪಸಿ’ / 135
18. ರಾಯಗಡ ದುರ್ಗಮ ಕೋಟೆಯನ್ನು ಮಣಿಸಿದ ಹೀರಕಣಿ ಬಾಯಿ / 143
19. ದಾಸ ವಿಕ್ರಯ (ಗುಲಾಮ ಮಾರಾಟ) ನಿಷೇಧ ರೂವಾರಿ ಶಿವಾಜಿ / 155
20. ಸೋತರೂ ಗೆದ್ದ ಬೆಳವಡಿ ಮಲ್ಲಮ್ಮ / 167
ಭಾಗ-2
ಚುಟುಕು ನಾಟಕಗಳು
Reviews
There are no reviews yet.