‘ಸವಿಯೋಲೆ’ಗೆ ಮುನ್ನುಡಿ
ತುಂಬು ಅಚ್ಚರಿ ಮತ್ತು ಆನಂದದ ‘ಸವಿಯೋಲೆಗೆ‘ ಮುನ್ನುಡಿ ಬರೆಯುತ್ತಿದ್ದೇನೆ. ನಮ್ಮ ಸುತ್ತಲಿನ ಸಮಾಜ, ಘಟನೆಗಳು, ಮಕ್ಕಳು ಇದನ್ನೆಲ್ಲ ಗಮನಿಸುತ್ತಿರುವಾಗ ಕಳವಳ-ಹತಾಶೆ ನನ್ನನ್ನು ಆವರಿಸಿತ್ತು. ಈಗಿನ ವಿದ್ಯಾರ್ಥಿಗಳು ಟಿವಿ, ಮಾದಕ ವಸ್ತು, ಸಿನಿಮಾ, ಮೊಬೈಲ್, ಫೇಸ್ಬುಕ್ ಮುಂತಾದ ಭ್ರಮಾಲೋಕದಲ್ಲಿ ಕಳೆದು ಹೋಗುತ್ತಿದ್ದಾರೆ ಎಂದು ಭಾವಿಸಿದ್ದೆ. ಆದರೆ ಪೋದಾರ್ ಶಾಲೆಯ ಮಾನ್ಯ ಶ್ರೀಧರ್ ಭಟ್ ಮತ್ತು
ಶ್ರೀ ಶ್ರೀಪತಿಯವರು ತಮ್ಮ ವಿದ್ಯಾರ್ಥಿಗಳು ಬರೆದ ‘ಸವಿಯೋಲೆ’ ಪತ್ರಲೇಖನ ಗಳ ಹಸ್ತಪ್ರತಿಯನ್ನು ಕೊಟ್ಟಾಗ, ಅದನ್ನು ಓದಿದ ನಂತರ ಆಶ್ಚರ್ಯ, ಆನಂದವಾಗಿದೆ. ಯುವಜನರ ಬಗ್ಗೆ ಹೊಸ ಭರವಸೆ ಮೂಡಿಸಿದೆ.
ಪತ್ರ ಸಂಸ್ಕೃತಿಯನ್ನು ಬೆಳೆಸುತ್ತ, ಹೊಸ ವಿಷಯಗಳತ್ತ ತಮ್ಮ ಶಿಷ್ಯರನ್ನು ಸೆಳೆಯುತ್ತಾ ಸಾಹಿತ್ಯ ಸೃಷ್ಟಿಗೆ ಹೊಸ ನೀರು ಬರುವಂತೆ ಮಾಡಿದ ಗುರುವೃಂದವನ್ನು ಅಭಿನಂದಿಸಲೇಬೇಕು. ಬಹುಶಃ ಅವರ ಮಾರ್ಗದರ್ಶನ ವಿಲ್ಲದೆ ಇಷ್ಟು ಅರ್ಥಪೂರ್ಣ ಲೇಖನಗಳು ಬರಲು ಸಾಧ್ಯವಾಗುತ್ತಿರಲಿಲ್ಲ. ವಿಷಯ ವೈವಿಧ್ಯತೆ ಬೆರಗು ಮೂಡಿಸುವಂತಿದೆ. ಮಾಮೂಲಾಗಿ ತಂದೆ-ತಾಯಿ-ಗೆಳತಿಗೆ ಪತ್ರ ಬರೆಯುವುದು ಸಾಮಾನ್ಯ. ಆದರೆ ಕುತೂಹಲ ಮೂಡಿಸಿದ ವಿಷಯಗಳೆಂದರೆ ನಕ್ಷತ್ರ, ಭೂದೇವಿ, ಜಗನ್ಮಾತೆ, ನಂದಿ ಮುಂತಾದವುಗಳ ಬಗ್ಗೆ ಪತ್ರ ಬರೆದಿರುವುದು.
ವೈದ್ಯರ ಕುರಿತು, ಶಿಕ್ಷಕರ ಕುರಿತು ಸದಭಿಪ್ರಾಯ ಮೂಡಿಸುವ ಪತ್ರಗಳು ಮನನ ಯೋಗ್ಯವಾಗಿದೆ. ತಮ್ಮ ಅಂತರಂಗಕ್ಕೆ ಪತ್ರ ಬರೆದುಕೊಂಡ ಸತ್ಯ ಸುಳ್ಳುಗಳ ತುಲನೆ ಮಾಡಿ ನಿಜ ಸತ್ಯದರ್ಶನ ಮಾಡಿದ ರಚನೆಗಳು ವಿಶಿಷ್ಟವಾಗಿದೆ. ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ಬೆಳೆಸಿಕೊಳ್ಳುವ ಈ ಸಾಹಿತ್ಯದ ಹವ್ಯಾಸ ಅವರ ಜೀವಮಾನ ಪೂರ್ತಿ ಅವರನ್ನು ಕೈಹಿಡಿದು ನಡೆಸಲಿ.
-ವಿಜಯಾ ಶ್ರೀಧರ್
ಕೃತಜ್ಞತೆ ಎನ್ನುವುದು ಹೃದಯದ ಸ್ಮರಣೆ
Gratitude is the memory of the heart
ಸವಿಯೋಲೆ ಹೆಸರಿನಲ್ಲೇ ಸವಿ ಇದೆ, ಒಲವು ಇದೆ, ಆತ್ಮೀಯತೆ ಇದೆ. ಪ್ರೀತಿಯಿಂದ ಬರೆದ ಒಂದು ಓಲೆಯಂತೆ, ಮನದಾಳದ ಭಾವನೆಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಪ್ರಯತ್ನವೇ “ಸವಿಯೋಲೆ”.
ಮಾನವ ಜೀವನದಲ್ಲಿ ನಾವು ಪಡೆಯುವುದೇ ಹೆಚ್ಚು; ಕೊಡುವುದು ಕಡಿಮೆ. ತಾಯಿಯ ಮಮತೆ, ತಂದೆಯ ತ್ಯಾಗ, ಶಿಕ್ಷಕರ ಮಾರ್ಗದರ್ಶನ, ಸ್ನೇಹಿತರ ಸಹಕಾರ, ಪ್ರಕೃತಿಯ ಅನುಗ್ರಹ, ಸಸ್ಯಸಂಕುಲ ಮತ್ತು ಪ್ರಾಣಿ ಸಂಕುಲದ ಸಹಜ ಕೊಡುಗೆ -ಇವೆಲ್ಲವೂ ನಮ್ಮ ಬದುಕನ್ನು ಸಮೃದ್ಧ ಗೊಳಿಸುತ್ತವೆ. ಇಂತಹ ಅಮೂಲ್ಯ ಕೊಡುಗೆಗಳನ್ನು ನೆನೆಯುತ್ತಾ, ಕೃತಜ್ಞತೆಯ ಭಾವವನ್ನು ವ್ಯಕ್ತಪಡಿಸುವುದು ನಮ್ಮ ಸಂಸ್ಕೃತಿಯ ಶ್ರೇಷ್ಠ ಗುಣ.
ಈ ”ಸವಿಯೋಲೆ”ಯಲ್ಲಿ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್, ವಿದ್ಯಾನಗರ, ಶಿವಮೊಗ್ಗದ ವಿದ್ಯಾರ್ಥಿಗಳು ತಮ್ಮ ಹೃದಯದ ಭಾವನೆಗಳನ್ನು ಅಕ್ಷರಗಳಲ್ಲಿ ಅರಳಿಸಿದ್ದಾರೆ. ಇಲ್ಲಿ ಪ್ರತಿಯೊಂದು ಲೇಖನವೂ ಕೇವಲ ಬರಹವಲ್ಲ; ಅದು ಪ್ರೀತಿ, ಗೌರವ, ವಿನಯ ಮತ್ತು ಕೃತಜ್ಞತೆಯಿಂದ ತುಂಬಿದ ಮನಸ್ಸಿನ ನುಡಿಯಾಗಿದೆ. ತಂದೆ-ತಾಯಿಗೆ, ಶಿಕ್ಷಕರಿಗೆ, ಕುಟುಂಬಕ್ಕೆ, ಸ್ನೇಹಿತರಿಗೆ, ಪ್ರಕೃತಿಗೆ, ಮರ-ಗಿಡಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಮತ್ತು ಸಮಾಜಕ್ಕೆ ಸಲ್ಲಿಸಿದ ಧನ್ಯತೆಯ ನಮನವೇ ಈ ಸಂಕಲನದ ಜೀವಾಳ.
“ಕೃತಜ್ಞತೆ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ; ವಿನಯ ಅದಕ್ಕೆ ಸೌಂದರ್ಯವನ್ನು ನೀಡುತ್ತದೆ.” ಈ ಮೌಲ್ಯವನ್ನು ಬಾಲ್ಯದಲ್ಲಿಯೇ ವಿದ್ಯಾರ್ಥಿ ಗಳಲ್ಲಿ ಬೆಳೆಸುವ ಉದ್ದೇಶದಿಂದ ರೂಪುಗೊಂಡಿರುವ ಈ ಕೃತಿ, ಸಾಹಿತ್ಯದ ಜೊತೆಗೆ ಜೀವನ ಮೌಲ್ಯಗಳನ್ನೂ ಸಾರುತ್ತದೆ.
ಈ ಸಂಕಲನದಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ, ಅವರಿಗೆ ಸ್ಫೂರ್ತಿ ನೀಡಿದ ಪೋಷಕರಿಗೆ, ಶಿಕ್ಷಕರಿಗೆ, ಸಾಹಿತ್ಯಾಭಿರುಚಿಯನ್ನು ಬೆಳೆಸಿದ ಶ್ರೀ ಶ್ರೀಧರ ಭಟ್ ಅವರಿಗೆ ಹಾಗೂ ಈ ಕೃತಿಯನ್ನು ಸುಂದರವಾಗಿ ಪ್ರಕಟಿಸಿರುವ ಹೊಸಪೇಟೆಯ ಯಾಜಿ ಪ್ರಕಾಶನಕ್ಕೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು.
“ಸವಿಯೋಲೆ” ಪ್ರತಿಯೊಬ್ಬ ಓದುಗರ ಮನವನ್ನು ಸ್ಪರ್ಶಿಸಿ, ಕೃತಜ್ಞತೆಯ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರೇರಣೆಯಾಗಲಿ. ಈ ಸವಿಯೋಲೆಯ ಸವಿ, ಓದುಗರ ಹೃದಯದಲ್ಲಿ ಸದಾ ಉಳಿಯಲಿ ಎಂಬುದು ನಮ್ಮ ಹಾರೈಕೆ.
-ಸುಕೇಶ ಸೇರಿಗಾರ
ಪ್ರಾಂಶುಪಾಲರು,
ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್, ಶಿವಮೊಗ್ಗ.
ಬೆನ್ನುಡಿ
ಮಲೆನಾಡ ಹೆಬ್ಬಾಗಿಲು ಸಹ್ಯಾದ್ರಿಯ ಮಡಿಲಿನ ಶಿವಶರಣರ ನಾಡಿನ ಜ್ಞಾನಪೀಠ ಪ್ರಶಸ್ತಿಗಳು
ಲಭಿಸಿದ ಪೀಠದ ಜಿಲ್ಲೆ ನಮ್ಮ ಶಿವಮೊಗ್ಗ. ಕನ್ನಡದ ಮೊದಲ ವಚನಗಳು, ನಿತ್ಯಹರಿದ್ವರಣ ಕಾಡುಗಳ ಸ್ಥಳ
ನಮ್ಮ ಮಲೆನಾಡು. ಸ್ವಾತಂತ್ರ್ಯ ಹೋರಾಟದ ಕಹಳೆ, ರೈತ ಚಳುವಳಿ, ಸಮಾಜವಾದದ
ಸಮಸಮಾನತೆಯ ಹೋರಾಟ, ಶಿಸ್ತಿನ ಶಿವಪ್ಪನಾಯಕನ ಆಳ್ವಿಕೆ, ಮಹಿಳೆಯ ಹೋರಾಟಕ್ಕೆ ಪ್ರತೀಕವಾದ
ಕೆಳದಿ ಚೆನ್ನಮ್ಮ, ಸಂಸ್ಕೃತ ಗ್ರಾಮ, ಪುರಂದರದಾಸರು ಹುಟ್ಟಿದ ಬೀಡು ನಮ್ಮ ಸಿಹಿಮೊಗೆ. ನದಿ, ಕಾಡು,
ಹಸಿರು ಕಾನನ ರುದ್ರರಮಣೀಯ, ಗಿರಿಕಂದರಗಳ ಸದ್ದಿಲ್ಲದ ಸೂಯ್ಗುಟ್ಟುವ ಗಾಳಿಯ ವಾತಾವರಣದಲ್ಲಿ
ಒಂದು ಶಾಲೆ ಮಾಡುತ್ತಿರುವ ಮಹತ್ವದ ಋಜುತ್ವದ ಕಾರ್ಯಕ್ಕೆ ಮೊದಲ ಸಲಾಂ…..
ಮುಂದಿನ ಭವಿಷ್ಯದ ನಾಗರೀಕರನ್ನು ಬೆಳೆಯುವ ಸುಂದರ ಮಣ್ ತೋಟಗಳು ನಮ್ಮ ಶಾಲೆಗಳು.
ದೇಶ ಬೆಳೆಯಬೇಕಾದರೆ ಇಲ್ಲಿಯ ಜನರ ಬದುಕು ನೆಮ್ಮದಿಯಿಂದ ಇರಬೇಕಾದರೆ ಶಾಲೆಗಳು ಬದುಕುವ
ಬಾಳ್ವೆಯನ್ನು ಕಲಿಸುವ ಕ್ಷೇತ್ರಗಳಾಗಬೇಕು. ಕಳೆದು ಹೋಗುತ್ತಿದ್ದೇವೆ ಎನ್ನುವ ಕಾಲಕ್ಕೆ ಅದ್ಭುತವಾದ
ಪ್ರಯತ್ನ ಪೋದಾರ್ ಶಾಲೆಯ ಮಕ್ಕಳು ಶಿಕ್ಷಕರ ಪ್ರೇರಣೆಯಿಂದ ಅಕ್ಷರಗಳ ಅಂಗಳಕ್ಕೆ ಅಂತರ್ಮುಖಿಗಳಾಗಿ
ದುಮುಕಿ ತಮ್ಮ ಭಾವನೆಗಳನ್ನು ಅವ್ಯಕ್ತತೆಯಿಂದ ವ್ಯಕ್ತತೆಯ ಕಡೆಗೆ ಹೊರಹೊಮ್ಮಿಸಿದ ಕಿರಣಗಳು ಪ್ರತಿ
ಬರಹಗಳು. ಒಳಗಣ್ಣ ತೆರೆಸಿದ ದೇವರು ಹೊತ್ತಿಗೆಯ ಅನಾವರಣಕ್ಕೆ ಚಾಲನೆ ನೀಡಿದಂತಿದೆ. ಪ್ರತಿ
ಬರಹಗಳು ಸೂರ್ಯನ ಕಿರಣಗಳಂತೆ, ಸದ್ದಲ್ಲಿದ ನದಿಯ ಕಲರವದಂತೆ, ಕಾಡುಮಲ್ಲಿಗೆ ಅರಳಿದಂತೆ
ಬಿತ್ತರಗೊಂಡಿವೆ. ಭಾವಗಳೇ ಬದುಕಿನ ಸಾಧ್ಯತೆಗಳು. ಇಂದಿನ ಮಕ್ಕಳೆ ಮುಂದಿನ ಭವಿಷ್ಯ, ಗಿಡವಾಗಿ
ಬಗ್ಗದ್ದು, ಮರವಾಗಿ ಬಗ್ಗೀತೆ ಎನ್ನುವ ಹಲವು ನಾಳ್ಣುಡಿಗಳ ಮೂಸೆಯೊಳಗೆ ಹೊಕ್ಕು ನೋಡಿದರೆ ನಾವು
ಅವಕಾಶ ಕೊಟ್ಟರೆ ಮಕ್ಕಳು ಏನನ್ನು ಬೇಕಾದರೂ ಸಾಧಿಸಿಬಿಡುತ್ತಾರೆ ಎನ್ನುವ ನಂಬಿಕೆ “ಸವಿಯೋಲೆ”
ಓದಿದ ಮೇಲೆ ಗಾಢವಾಗಿ ಅನ್ನಿಸತೊಡಗಿದೆ. ನೂರೆಂಟು ಸುಳ್ಳು, ಕೈತುತ್ತು, ತೀರ್ಥರೂಪರಿಗೆ ಆಂಬ್ಯುಲೆನ್ಸ್
ಹಾಗೂ ಗುರುವಿನ ಕರುಣೆ ಲೇಖನಗಳು ನನ್ನನ್ನು ಹೆಚ್ಚು ಭಾವುಕನಾಗುವಂತೆ ಮಾಡಿದೆ. ಇದು ಕೇವಲ
ಅಕ್ಷರಗಳ ಮಾಲಿಕೆಯಲ್ಲ. ಅನುಭವ ಮತ್ತು ಮಕ್ಕಳ ಅನುಭವಕ್ಕೆ ಬಂದ ವಿಷಯಗಳನ್ನು ಯಥಾವತ್ತಾಗಿ
ಮುದ್ರಿಸಿದ ಅವನೋಕನದ ಹಾರ. ಈ ಪುಸ್ತಕ ಶ್ರೀಧರ್ ಭಟ್ ರವರ ಆಲೋಚನೆಗೆ ಮತ್ತು ಅವರ
ಭಾವಪೂರ್ಣಕ್ಕೆ ಸಿಕ್ಕ ಪಾರಿತೋಷಕ. ಅವರ ಆಲೋಚನೆಗಳಿಗೆ ಬೆಂಬಲವಾಗಿ ನಿಂತು ಪುಸ್ತಕ ಅಧಿಷ್ಠಾನಕ್ಕೆ
ಮತ್ತು ಅನುಷ್ಠಾನಕ್ಕೆ ಹೆಗಲುಕೊಟ್ಟ ಶಾಲೆಯ ಪ್ರಾಂಶುಪಾಲರು, ಶಿಕ್ಷಕರುಗಳು, ಪೋಷಕರು ಹಾಗೂ ಯಾಜಿ
ಪ್ರಕಾಶನಕ್ಕೆ ಅಭಿವಂದನೆಗಳು.
ಪ್ರತಿ ಲೇಖನವನ್ನು ತಮ್ಮ ಆಲೋಚನೆಗಳ ಅನುಭವದಾಚೆ ಅಕ್ಷರ ರೂಪದಲ್ಲಿ ಛಾಪಿಸಿದ ಪ್ರತೀ
ಲೇಖಕರಿಗೆ ಹೃದಯಸ್ಪರ್ಶಿ ಗೌರವ.
ಸಮನ್ವಯ ಕಾಶಿ
ಸಾಮಾಜಿಕ ಕಾರ್ಯಕರ್ತರು
ಶಿವಮೊಗ್ಗ, ಕರ್ನಾಟಕ
ನಿರೂಪಕನ ಮಾತು
ಏಪ್ರಿಲ್-ಮೇ ರಜೆ ಮುಗಿಸಿ, ಆ ತಿಂಗಳ ಕೊನೆಯ ವಾರದಲ್ಲಿ ಶಾಲೆ ಪ್ರಾರಂಭವಾಯಿತು. ವಿದ್ಯಾರ್ಥಿಗಳೆಲ್ಲ ಹೊಸ ಶೈಕ್ಷಣಿಕ ವರ್ಷದ ಪ್ರಾರಂಭದ ದಿನ ಉತ್ಸಾಹದಿಂದಲೇ ಬಂದಿದ್ದರು. ರಜೆಯಲ್ಲಿ ಕಳೆದ ದಿನಗಳ ಬಗ್ಗೆ ಮಕ್ಕಳೊಂದಿಗೆ ಒಂದಿಷ್ಟು ಮಾತನಾಡುತ್ತಾ ಅವರ ಅನುಭವಗಳನ್ನು ಕೇಳುತ್ತ ಅವಧಿಯ ಕೊನೆಯಲ್ಲಿ ಮಕ್ಕಳ ಮನಸ್ಸಿನಲ್ಲೊಂದು ಆಸೆಯನ್ನು ಬಿತ್ತಿ ಬಂದೆ. “ಕಳೆದ ವರ್ಷ ನಿಮ್ಮ ಹಿರಿಯ ಸಹಪಾಟಿಗಳು ‘ಬುಗುರಿ’ ಪುಸ್ತಕಕ್ಕೆ ಲೇಖನ ಬರೆದಿದ್ದಾರೆ. ನಿಮ್ಮಿಂದಲೂ ಅಂತಹದ್ದೇ ಆಲೋಚನೆ ಇದೆ ಮಕ್ಕಳೇ” ಎಂದು ಹೇಳಿ ತರಗತಿ ಮುಗಿಸಿ ಬಂದೆ. ಮನಸ್ಸಿನಲ್ಲಿದ್ದ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂದು ಯೋಚಿಸುತ್ತಿದ್ದೆ. ಮಕ್ಕಳು ಪ್ರೀತಿಯಿಂದ ಬರಿಬೇಕು. ಜೊತೆಗೆ ಕಲಿಕೆಯಾಗಬೇಕು. ಅದರ ಜೊತೆಗೆ ಮಕ್ಕಳು ತಮ್ಮ ಅನುಭವವನ್ನು ಅನುಭವಿಸಿ ಬರೆಯಬೇಕು. ಬರವಣಿಗೆಯು ಸುಲಭವಾಗಿರಬೇಕು. ಹೀಗೆಲ್ಲ ಯೋಚನೆ ಮಾಡುತ್ತಾ ಜೂನ್-ಜುಲೈ ತಿಂಗಳುಗಳೇ ಮುಗಿಯಿತು. ಕೊನೆಗೊಂದು ದಿವಸ ಇಂಟರ್ನಲ್ ಅಸೆಸ್ಮೆಂಟ್ ಕೊಡಬೇಕಿತ್ತು. “ಪತ್ರವನ್ನು ಬರೆದುಕೊಂಡು ಬನ್ನಿ ಮಕ್ಕಳೇ” ಎಂದೇ. “ಯಾರಿಗೆ ಬರೆಯಬೇಕು?” ಎಂದು ಕೇಳಿದರು. ಯಾರಿಗಾದರೂ ಬರೆದು ತನ್ನಿ ಎಂದೆ. ಮಕ್ಕಳೆಲ್ಲರೂ “ಅದರೊಳಗೆ ಏನು ವಿಶೇಷತೆ ಇದೆ? ನಾವು ಯಾಕೆ ಥ್ಯಾಂಕ್ಸ್ ಹೇಳಬೇಕು? ಇದರಿಂದ ಏನು ಪ್ರಯೋಜನ? ಹೀಗೆ ಒಂದರ ಹಿಂದೆ ಒಂದರಂತೆ ಹಲವಾರು ಪ್ರಶ್ನೆಗಳು ತೂರಿ ಬಂದವು. ಮಕ್ಕಳಿಗೆ ಇದರ ಮಹತ್ವವನ್ನು ತಿಳಿಸಲು ಧನ್ಯವಾದದ ಬಗ್ಗೆ ನಾನು ತಿಳಿದಿದ್ದನ್ನು, ಓದಿದ್ದನ್ನು ಅನುಭವಿಸಿದ್ದನ್ನು ಹೇಳುತ್ತಾ ಹೋದೆ. ಧನ್ಯವಾದದ ಮಹತ್ವದ ಬಗ್ಗೆ ಕಥೆಗಳನ್ನು ಹೇಳಿದೆ. ಸರ್ವಜ್ಞನ ವಚನ, ಮಂಕುತಿಮ್ಮನ ಕಗ್ಗ, ಸಂಸ್ಕೃತ ಸಾಹಿತ್ಯದಲ್ಲಿ ತಿಳಿಸಿದ್ದನ್ನು ಈ ರೀತಿಯಾಗಿ ವಿವರಿಸಿದೆ.
ಉಪಕಾರ ಎಂದರೆ ಕಷ್ಟದಲ್ಲಿರುವವರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ ಮಾಡುವುದು. ಇದು ಮಾನವೀಯತೆಯ ಅತ್ಯುನ್ನತ ಗುಣವಾಗಿದ್ದು, ಸಮಾಜದಲ್ಲಿ ಪ್ರೀತಿ ಮತ್ತು ನಂಬಿಕೆಯನ್ನು ಬೆಳೆಸುತ್ತದೆ. ಮಾಡಿದ ಉಪಕಾರವನ್ನು ಎಂದಿಗೂ ಮರೆಯಬಾರದು ಹಾಗೂ ಇತರರಿಗೆ ಕೈಲಾದ ಮಟ್ಟಿಗೆ ನೆರವಾಗಬೇಕು. ಯಾವುದೇ ಪ್ರತಿಫಲವಿಲ್ಲದೆ ಮರಗಳು ಹಣ್ಣು ನೀಡುತ್ತವೆ. ಹಸು ಹಾಲು, ನದಿ ನೀರು ಕೊಡುತ್ತವೆ. ಭಗವಂತ ಈ ಶರೀರ ನೀಡಿರುವುದು ಉಪಕಾರ ಮಾಡಲಿಕ್ಕಾಗಿ. ಪಡೆದ ಉಪಕಾರವನ್ನು ಸ್ಮರಿಸಿಕೊಳ್ಳಲಿಕ್ಕಾಗಿ. ಇದನ್ನೇ ಕೃತಜ್ಞತೆ ಎಂದು ಕರೆಯುತ್ತೇವೆ. ರಾಮಾಯಣ ಮಹಾಭಾರತ ಮೊದಲಾದ ಗ್ರಂಥಗಳಲ್ಲಿ ಕೃತಜ್ಞತೆಯೇ ಮೊದಲ ಧರ್ಮ ಎಂದು ಹೇಳಿದೆ.
ಉಪಕಾರವನ್ನು ಸ್ಮರಿಸುವವನನ್ನು ‘ಕೃತಜ್ಞ’ನೆಂದೂ, ಬೇರೆಯವರಿಂದ ಪಡೆದ ಉಪಕಾರ ಮರೆಯುವವನನ್ನು ‘ಕೃತಘ್ನ’ (ಮಹಾ ಪಾಪಿ) ಎಂದೂ ಕರೆಯಲಾಗುತ್ತದೆ. “ಉಪಕಾರೇಣ ಸಾದೃಶ್ಯಂ ನ ಪಶ್ಯಾಮಿ ಜಗತ್ತ್ರಯೇ” -ಮಾಡಿದ ಉಪಕಾರಕ್ಕೆ ಸಮಾನವಾದುದು ಈ ಮೂರು ಲೋಕದಲ್ಲಿ ಬೇರೆ ಯಾವುದು ಇಲ್ಲ ಎಂದು ಹೇಳಿದೆ.
ಸರ್ವಜ್ಞ ತನ್ನ ತ್ರಿಪದಿಯಲ್ಲಿ ಕೃತಜ್ಞತೆಯ ಬಗ್ಗೆ ಈ ರೀತಿಯಾಗಿ ವಿವರಿ ಸಿದ್ದಾರೆ.
ಉಪಕಾರಿಯನು ಕರಂ ನೆನೆವುದೆನ್ನಯ ಮನವು l
ಅಪಕಾರಿಯನು ಮರೆವುದೆನ್ನಯ ಮನವು l ಜಗದೊಳಗೆ
ಉಪಕಾರ ಮರೆತವನ ಬಾಳು ಹಂದಿಗಿಂತ ಕಡೆ -ಸರ್ವಜ್ಞ
ನಮಗೆ ಒಳ್ಳೆಯದನ್ನುಂಟು ಮಾಡಿದವರನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಕೇಡು ಮಾಡಿದವರನ್ನು ಕ್ಷಮಿಸಿ ಮರೆತುಬಿಡಬೇಕು. ಆದರೆ, ಮಾಡಿದ ಉಪಕಾರವನ್ನು ಮರೆತು ದ್ರೋಹ ಬಗೆಯುವವನ ಬದುಕು ಹಂದಿಗಿಂತಲೂ ಕೀಳಾದುದು ಎಂದು ಸರ್ವಜ್ಞನು ವಿವರಿಸುತ್ತಾರೆ.
ಇಹದ ಸೌಖ್ಯಗಳೆಲ್ಲವನುಂಡು ಧನ್ಯನಾಗು |
ಗ್ರಹಿಸು ಜಗದೀ ಲೀಲೆಯನು ಕೃತಜ್ಞತೆಯಲಿ ||
ರಹಸ್ಯವನು ಬೇಡದೀ ಸೃಷ್ಟಿಕರ್ತನನು |
ವಿಹರಿಸು ಕೃತಾರ್ಥತೆಯೊಳು -ಮಂಕುತಿಮ್ಮ ||
ಡಿವಿಜಿ ಅವರಂತೂ ತಮ್ಮ ಕಗ್ಗದಲ್ಲಿ ಕೃತಜ್ಞತೆಯ ಬಗ್ಗೆ ಸ್ಪಷ್ಟವಾದ ಚಿತ್ರಣ ವನ್ನು ನೀಡಿದ್ದಾರೆ.
ಈ ಪ್ರಪಂಚದಲ್ಲಿ ಸಿಗುವ ಸುಖ-ಸಂತೋಷಗಳನ್ನು ಅನುಭವಿಸಿ ಧನ್ಯನಾಗು. ಅವೆಲ್ಲವೂ ನಿನಗೆ ಸಿಕ್ಕ ಕೊಡುಗೆಗಳು ಎಂಬುದನ್ನು ಮರೆಯದೆ, ಪ್ರಕೃತಿ ಮತ್ತು ಭಗವಂತನಿಗೆ ಕೃತಜ್ಞನಾಗಿರು.
ಸೃಷ್ಟಿಯ ರಹಸ್ಯವೇನು? ದೇವರು ಇದನ್ನು ಏಕೆ ಮಾಡಿದ? ಎಂದು ಅನಗತ್ಯವಾಗಿ ತರ್ಕಿಸಬೇಡ. ಸಿಕ್ಕ ಜೀವನವನ್ನು ಕೃತಾರ್ಥ ಭಾವದಿಂದ (Satisfied & Grateful) ಸಂತೋಷವಾಗಿ ಬಾಳು.
ಬದುಕಿನಲ್ಲಿ ನಮಗೆ ಸಿಕ್ಕಿರುವ ಉಸಿರು, ಅನ್ನ, ಆಶ್ರಯ ಹಾಗೂ ಪ್ರೀತಿಯನ್ನು ದೈವದ ಪ್ರಸಾದವೆಂದು ಭಾವಿಸಿ, ಅಹಂಕಾರವನ್ನು ತೊರೆದು ಕೃತಜ್ಞತೆಯಿಂದ ಬಾಳುವುದೇ ಬದುಕಿನ ದೊಡ್ಡ ಪಾಠವಲ್ಲವೇ.
ಹೀಗೆ ಹಲವಾರು ವಿವರಣೆ ನೀಡಿದ ನಂತರ, ಮಕ್ಕಳೆಲ್ಲರೂ ‘ಆಯ್ತು ಸರ್ ಖಂಡಿತವಾಗಿ ನಾವು ಪತ್ರವನ್ನು ಬರೆದು ತರುತ್ತೇವೆ’ ಎಂದರು. ಅವುಗಳನ್ನು ಓದುತ್ತ ಹೊರಟಾಗ ಪತ್ರಗಳು ಸರಳವಾಗಿದ್ದವು. ಆದರೆ ಮಕ್ಕಳೊಳಗೆ ಇರುವ ಭಾವನೆ ಆ ಪದಗಳಲ್ಲಿ ಕಾಣುತ್ತಿತ್ತು. ಹೀಗಾಗಿ ಪತ್ರದ ಎರಡನೇ ಹಂತ ಹೇಗಿರಬೇಕೆಂಬ ಮಾಹಿತಿಯನ್ನು ಕೊಟ್ಟೆ. ಪುನಃ ಬರೆದು ತಂದರು. ಮತ್ತೊಂದಿಷ್ಟು ಹೊಸ ಬದಲಾವಣೆಗಳನ್ನು ಮಕ್ಕಳಿಗೆ ತಿಳಿಸಿದೆ. ಜನಪದ ತ್ರಿಪದಿ, ವಚನ, ಡಿವಿಜಿಯವರ ಮಂಕುತಿಮ್ಮನ ಕಗ್ಗ ಹೀಗೆ ಹೊಸ ಹೊಸ ವಿಷಯಗಳನ್ನು ಸೇರಿಸಿ ಪತ್ರವನ್ನು ಬರೆದು ತಂದರು. ಮಕ್ಕಳ ಆಲೋಚನೆಗಳಲ್ಲಿ ಹೊಸ ಬದಲಾವಣೆ ತಂದಿತು. ಧನ್ಯವಾದಗಳನ್ನು ತಿಳಿಸಲು ಮಕ್ಕಳು ಬೇರೆ ಬೇರೆ ಕ್ಷೇತ್ರಗಳನ್ನು ಹುಡುಕಿದರು. ವಿಷಯಗಳ ಆಯ್ಕೆಯೂ ಸಹ ವೈವಿಧ್ಯತೆಯಿಂದ ಕೂಡಿತ್ತು. ಕುಟುಂಬ, ಶಿಕ್ಷಕರು, ಪರಿಸರ, ಪೌರಕಾರ್ಮಿಕರು, ವೈದ್ಯರು, ಪತ್ರಿಕೋದ್ಯಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಕ್ಕಳು ತಮ್ಮ ದೃಷ್ಟಿಕೋನ ಬೀರಿ, ಅವರಿಂದ ಪಡೆದ ಉಪಕಾರವನ್ನು ಸ್ಮರಿಸಲು ಧನ್ಯತೆಯಿಂದ ಕೂಡಿದ ಧನ್ಯತಾಪತ್ರವನ್ನು ಬರೆದು ತಂದರು. ಎಲ್ಲವನ್ನು ನೋಡಿ ಅಂತಿಮಗೊಳಿಸುವ ಹಂತಕ್ಕೆ ‘ಸವಿಯೋಲೆ’ ಎಂಬ ಹೆಸರನ್ನು ಪಡೆದು ಗ್ರಂಥವು ಲೋಕಾರ್ಪಣೆಗೆ ಸಿದ್ಧವಾಯಿತು.
ಈ ಪುಸ್ತಕವನ್ನು ಲೋಕಾರ್ಪಣೆ ಮಾಡುವಲ್ಲಿ ನನ್ನ ಜೊತೆಗೆ ನಿಂತವರು 58 ಜನ ವಿದ್ಯಾರ್ಥಿಗಳು. ಅವರಿಗೂ ಅವರ ಪೋಷಕರಿಗೂ ಕೃತಜ್ಞನಾಗಿದ್ದೇನೆ.
ಸೂಕ್ತ ಸಲಹೆ-ಮಾರ್ಗದರ್ಶನ ನೀಡಿದ ನಮ್ಮ ಶಾಲೆ ಕನ್ನಡ ವಿಭಾಗದ ಶಿಕ್ಷಕರುಗಳಾದ ಶ್ರೀಪತಿ ಕೆ.ಎನ್., ಶಫಿ ಉಲ್ಲಾಖಾನ್, ಶ್ರೀಮತಿಯರಾದ ಅಕ್ಷತಾ ಜಿ., ಮಂಜುಳಾ ಬಿ.ಕೆ., ಯಶಸ್ವಿನಿ, ರೂಪಾ ಸಿ., ರೂಪಾ ಬಿ.ಎಲ್.ಅಶ್ವಿನಿ ವಿ.ಆರ್., ಸ್ಮಿತ ಗೋಸಾವಿ, ಅನಿತಾ ಬಸವರಾಜ್ ಇವರೆಲ್ಲರಿಗೂ ಹೃದಯಪೂರ್ವಕವಾದ ಅಭಿನಂದನೆಗಳು.
ಸದಾ ಉತ್ಸಾಹಿಗಳು, ನಿಗರ್ವಿಗಳು ಆದ ನಮ್ಮ ಶಾಲೆ ಪ್ರಾಂಶುಪಾಲರಾದ ಸುಕೇಶ ಸೇರಿಗಾರ ಅವರಿಗೆ ನಾನೆಷ್ಟು ಆಭಾರಿಯಾಗಿದ್ದರು ಕೊರತೆಯೇ.
ಉಪಪ್ರಾಂಶುಪಾಲರಾದ ಉಮಾಮಹೇಸ್ವರಿ, ಪ್ರೈಮರಿ ವಿಭಾಗದ ಕೋ-ಆರ್ಡಿನೇಟರ್ ಆದ ಶೀಲಮ್ಮ ಇವರಿಗೂ, ಮಾಧ್ಯಮಿಕ ಶಾಲೆಯ ಕೋ-ಆರ್ಡಿನೇಟರ್ ಆದ ಡಯಾನ ಕುಂದರ್, ಪ್ರೌಢ ಶಾಲಾ ವಿಭಾಗದ ಕೋ-ಆರ್ಡಿನೇಟರ್ ಅನುರಾಧ ಸಿ.ಪಿ, ಶಾಲೆಯ ಎಲ್ಲ ಡಿಜಿಟಲ್ ವಿಭಾಗದ ಮುಖ್ಯಸ್ಥರಾದ ಹೇಮಂತ್ ಕುಮಾರ್ ಎಸ್. ಇವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಶಾಲೆಯ ಆಡಳಿತ ಸಿಬ್ಬಂದಿಗೂ, ಶಿಕ್ಷಕೇತರ ಸಿಬ್ಬಂದಿಗಳಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನಗೆ ಆಶ್ರಯ ನೀಡಿ ಬದುಕನ್ನು ಕೊಟ್ಟಿರುವ ಪೋದಾರ್ ಶಾಲೆಯ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೂ ಚಿರಋಣಿಯಾಗಿದ್ದೇನೆ. ಗ್ರಂಥದ ಮುನ್ನುಡಿ ಬರೆದ ಶ್ರೀಮತಿ ವಿಜಯಾ ಶ್ರೀಧರ್ ಹಾಗೂ ಬೆನ್ನುಡಿ ಬರೆದ ಶ್ರೀ ಸಮನ್ವಯ ಕಾಶಿಯವರಿಗೂ, ಪುಸ್ತಕದ ಪ್ರಕಾಶಕರಾದ ಹೊಸಪೇಟೆ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಹಾಗೂ ಅವರ ಮನೆಯವರಾದ ಶ್ರೀ ಗಣೇಶ್ ಯಾಜಿಯವರಿಗೂ ಅಂದವಾದ ಮುಖಪುಟ ರಚಿಸಿಕೊಟ್ಟ ನಮ್ಮ ಊರಿನವರೇ ಆದ ಶ್ರೀ ಯು.ಟಿ.ಸುರೇಶ್ ಅವರಿಗೂ ಕೃತಜ್ಞನಾಗಿದ್ದೇನೆ.
ಸವಿಯೋಲೆ ಹೊತ್ತಿಗೆಯನ್ನು ನನ್ನ ಆರಾಧ್ಯದೈವವಾದ ರವೀಂದ್ರನಗರದ ಪ್ರಸನ್ನ ಗಣಪತಿಯ ಪಾದಕಮಲಕ್ಕೆ ಅರ್ಪಿಸುತ್ತೇನೆ.
-ಶ್ರೀಧರ ಭಟ್ಟ, ನಿಟ್ಟೂರು
ಪುಟ ಸರಿದಂತೆ…
ಸವಿನುಡಿ / iii
‘ಸವಿಯೋಲೆ’ಗೆ ಮುನ್ನುಡಿ / v
ಕೃತಜ್ಞತೆ ಎನ್ನುವುದು ಹೃದಯದ ಸ್ಮರಣೆ / vi
ನಿರೂಪಕನ ಮಾತು / viii
1 ಒಳಗಣ್ಣ ತೆರೆಸಿದ ದೇವರು -ಪೃಥ್ವಿ ಆರ್.ಎಸ್. / 1
2 ಮರೆಯದ ಮಾಣಿಕ್ಯ -ಲಕ್ಷಿತಾ ಎಸ್. / 3
3 ಒಲವಿನಂತರಂಗ -ಕೀರ್ತಿ ಎಂ.ಆರ್. / 5
4 ಮಮತೆಯೊಂದೇ ಸಾಲದೆ -ಗಾನವಿ ಎಸ್. ನಾಯ್ಕ್ / 8
5 ಪಾಠ ಮಾಡ್ಲೋ!? / ಕಲಿಸ್ಲೊ!? -ಶುಭಶ್ರೀ ಸಿ.ಎಚ್. ನಾಯ್ಕ್ / 10
6 ಮಹಾತ್ಮ ಅಪ್ಪು -ಸಮನ್ಯು ಜಿ.ಎಸ್. / 13
7 ಋಣವ ತೀರದ ಲೆಕ್ಕ -ತೃಪ್ತಿ ಪಿ.ವೈ. / 16
8 ನಡೆದಾಡುವ ದೇವರು -ರುಷಾಲಿ ಎಸ್. / 18
9 ಬೆನ್ನು ತಟ್ಟಿದವರು -ವೇದಿಕ್ ರಾಜ್ ಎಂ. / 20
10 ಅನ್ನದಾತ -ಧೃತಿ ಆರ್. / 22
11 ಬೆಳದಿಂಗಳು -ಸಿಂಧು ಎಸ್. / 24
12 ಪ್ರಿಯ ಸಿರಿ -ಯು.ಎಸ್. ಶಾರ್ವರಿ ಹೊಳ್ಳ / 26
13 ಮೊದಲ ಗುರು -ಮಾನಸ ಡಿ.ಆರ್. / 28
14 ರಕ್ಷಣೆಯ ಆರಕ್ಷಕರು -ಶುಭನ್ ನಾಗರಾಜ ಕಬ್ಬಿಣದ / 30
15 ಮಿನುಗು ಮಿನುಗಲೇ ನಕ್ಷತ್ರ -ಸಿ.ಆರ್. ಮನಸ್ವಿನಿ / 32
16 ಜೀವದಾತರು -ಚರಣಶ್ರೀ ಸಾಯಿ ಎಂ. / 34
17 ಚಾಕಲೇಟ್ ಹೀರೋ -ಅಶ್ಮಿತಾ ಜಿ.ಆರ್. / 36
18 ನೆನಪಿನ ದೋಣಿ -ಶ್ರಾವ್ಯಾ ಎಸ್.ಜಿ. / 38
19 ಪೊರೆದೆನ್ನ ತಾಯಿ -ಲಿಷಿತಾ ರಾವ್ ಎಲ್. ಕಾಳೆ / 40
20 ಪರೋಪಕಾರಿ -ಸಮೃದ್ಧ ಎಸ್. / 42
21 ಕೈತುತ್ತನಿತ್ತವರು -ಪ್ರಾರ್ಥನಾ ಕೆ.ಪಿ. / 44
22 ಮರೆತೇ ಬಿಟ್ಟಿದ್ದೆ… -ಸ್ಮಯ ಡಿ. / 46
23 ಎಲ್ಲವನು ಬಲ್ಲ ಪಂಡಿತ -ಅಶ್ಮಿತ್ ಎಸ್. ರಾಠೋಡ್ / 49
24 ವೈದ್ಯೋನಾರಾಯಣೋ ಹರಿಃ -ವಿಸ್ಮಿತಾ ಪಿ. ಭಾಂಡೋಲ್ಕರ್ / 51
25 ಅಮ್ಮ ನಿನ್ನ ಎದೆಯಾಳದಲ್ಲಿ… -ಶ್ರೇಯಾ ಹೆಚ್.ಡಿ. / 53
26 ನಾಟ್ಯಾರಾಧನೆ -ಅನ್ವಿ ಇ.ಜೆ. / 55
27 ನಂಬಿಗೆಯ ಜೀವಿ -ನಿಥಿ ಸಿ.ಎಸ್. / 57
28 ಸುಖೇ ದುಃಖೇ ಸಮೇ ಕೃತ್ವಾ -ಸಾನ್ವಿ ಉಮೇಶ್ / 59
29 ಆಂಬ್ಯುನೆಲ್ಸ್ -ಲಕ್ಷ್ಮಿ ಡಿ. / 61
30 ಕೀರ್ತಿಕರ -ಅರಾನಿ ಗೌಡ ಹೆಚ್.ಎನ್. / 64
31 ಹೊತ್ತವಳು -ದೇವುಪ್ರಸಾದ್ ಎಂ. / 66
32 ಡಿಫೆನ್ಸ್ ಮಿನಿಸ್ಟರ್ -ಸುಚೇತಾ ಡಿ.ವಿ. / 68
33 ನಿಃಸ್ವಾರ್ಥಿ -ವೈಭವಿ ಜೆ.ಎಂ. / 70
34 ಹೇಳಲೇ ಕಾರಣ -ನಿಶಾಂತ್ ಎನ್. ರಾಯ್ಕರ್ / 72
35 ಕರೋನಾ ಮಾಯೆ -ಸೈಯದ್ ಜುವೇರಿಯಾ / 74
36 ಬಾಂಧವ್ಯ -ಐಶ್ವರ್ಯಾ ಎಸ್. / 77
37 ಟಿಕ್ ಟಿಕ್ ಗೆಳೆಯ -ಅರ್ಫಾ ಶೇಖ್ / 79
38 ಸುಳ್ಳೇ ಮನೆದೇವ್ರು -ಸನೀಹ ಎಸ್. / 81
39 ಗಣಿತ ಮಾಂತ್ರಿಕ -ಧ್ರುವ ಹೆಗ್ಗಡೆ / 83
40 ಬಿಳಿಯಂಗಿ -ಶರಧಿ ಡಿ.ಟಿ. / 85
41 ಕೋಟಿಗೊಬ್ಬ -ಆಶ್ರಿಯಾ ಎಸ್.ಹೆಚ್. / 87
42 ತಾಯಿಯೇ ವಿಶ್ವ -ಸಾನ್ವಿ ಎಸ್. / 89
43 ಕರ್ಮಯೋಗಿಗಳು -ಯಶಸ್ವಿ ಎಸ್. ಶೆಟ್ಟಿ / 91
44 ಅಕ್ಕ -ಶೋಭಿತ್ ಹೆಚ್. ಮೆನನ್ / 93
45 ಕನಸು ಮಾರುವವರು -ಕೃತಿಕಾ ಹೆಚ್. / 95
46 ಶಾಲೆಯೆಂದರೆ… -ದಕ್ಷ ಎಸ್. / 97
47 ಕ್ರಿಕೆಟ್ ಜ್ವರ -ನಿರಂಜನ್ ಎಸ್. ನಾಯ್ಕ್ / 99
48 ನಂದಿ -ತನ್ಮಯಿ ಆರ್.ಎ. / 101
49 ಗೌರಿಶಂಕರ ಪರ್ವತ -ಕರಣ್ ಎಂ. / 103
50 ಗುರುವೆಂದರೆ ಕರುಣೆ -ಗೌರೀಶ್ ಎಸ್. ಕೋಡಿಹಳ್ಳಿ / 105
51 ದೇವರು ವರವನು ಕೊಟ್ರೆ -ಮನ್ಮಿತಾ ವಿ. / 107
52 ಕನಸುಗಾರರು -ಅಮೂಲ್ಯಶ್ರೀ ಹೆಗಡೆ ಹೆಚ್.ಎನ್. / 109
53 ನಿನ್ನ ಹ್ಯಾಂಗ್ ಮರೆಯಲಿ ಅಕ್ಕ -ಶ್ರಿಯಾ ಗಣೇಶ್ / 111
54 ನಿನ್ನಂಥ ಅಪ್ಪಾ ಇಲ್ಲಾ… -ಪ್ರಣವ್ ಹೆಚ್.ಬಿ. / 113
55 ಸೌಮ್ಯವೇ ಗುರು -ಪ್ರಣವ್ ಎಸ್. / 115
56 ದೂರದ ಊರಿಂದ ಹಮ್ಮೀರ ಬಂದ -ದರ್ಶಿತ್ ಎಲ್.ಹೆಚ್. / 117
57 ನೂರೆಂಟು ಸುಳ್ಳು -ಸುನಿಧಿ ಜಿ.ಡಿ. / 119
58 ಜೇನಿನಗೂಡು ನಾವೆಲ್ಲ -ಪ್ರತೀಕ್ಷಾ ಯು. / 121
Our Books

Reviews
There are no reviews yet.