ಮುನ್ನುಡಿಯೆಂಬ ಮುಕುರ
ನನ್ನ ಆತ್ಮೀಯರೂ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿ ಯಾಗಿ ನಿವೃತ್ತಿ ಹೊಂದಿದ ಬಳಿಕ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಶ್ರೀ ವಿವೇಕ ಹೆಗಡೆಯವರು ಕನ್ನಡ ಸಾಹಿತ್ಯ ವಲಯದಲ್ಲಿ ಸೃಜನಶೀಲ ಲೇಖಕರಾಗಿಯೂ ಜನರಿಗೆ ಪರಿಚಿತರು. ಅವರ “ತನ್ನದಲ್ಲದ ತಪ್ಪಿಗೆ” ಕೃತಿಗೆ ಮುನ್ನುಡಿ ಬರೆದು ಕೊಡಬೇಕೆಂದು ನನ್ನನ್ನು ಕೇಳಿಕೊಂಡಾಗ ಸಂತೋಷದಿಂದಲೇ ಒಪ್ಪಿಕೊಂಡಿ ದ್ದೇನೆ.
ಇಂದಿನ ಕಥನ ಪ್ರಪಂಚವು ಡಿಜಿಟಲ್ ತಂತ್ರಜ್ಞಾನದ ಅನೇಕ ವಿಷಯ ಗಳಲ್ಲಿ ಒಂದು ಆಕರ್ಷಕ ಸಂಗತಿಯೆನಿಸಿದೆ. ಅದು ಅಕ್ಷರ ಮಾಧ್ಯಮದಿಂದ ಸಾಫ್ಟವೇರ್ ಮಾಧ್ಯಮದ ಭಾಗವಾಗಿ ಪಲ್ಲಟಗೊಂಡು ಹಲವು ಸೌಲಭ್ಯ ಗಳೊಂದಿಗೆ ಹೊಸತನವನ್ನು ಸಹ ಅಳವಡಿಸಿಕೊಂಡಿದೆ. ಕತೆಯೊಳಗಿನ ಭಾವನಾತ್ಮಕ ಸನ್ನಿವೇಶಗಳಿಗೆ ಹಿನ್ನೆಲೆ ಸಂಗೀತವನ್ನೋ, ಬೇರೊಬ್ಬರು ಕತೆ ಹೇಳು ವಂಥಾದ್ದನ್ನೋ, ದೃಶ್ಯೀಕರಣವನ್ನೋ ಅನ್ವಯಿಸಿಕೊಳ್ಳುತ್ತಿರುವುದು ಒಂದೆಡೆ ಯಾದರೆ ಅಕ್ಷರೀಕರಣಗೊಳಿಸುವುದಕ್ಕಾಗಿ ಕತೆ ಹೇಳುತ್ತಿದ್ದಂತೆ ಮೊಬೈಲೋ, ಟ್ಯಾಬೋದೊಳಗೋ ಅಕ್ಷರವಾಗಿ ಮೂಡಿ ಮುದ್ರಣಕ್ಕೆ ಸಿದ್ಧವಾಗುವುದು ಇನ್ನೊಂದೆಡೆಯಾಗಿದೆ. ಆದ್ದರಿಂದ ಕತೆಗಾರನ ಮಸ್ತಿಷ್ಕದಲ್ಲಿ ಮೂಡಿದ ಸನ್ನಿವೇಶವು ಕತೆಯಾಗುವುದು ಈಗ ಕಲೆಗಾರಿಕೆಯಲ್ಲ, ಸೃಜನಶೀಲತೆಯೂ ಅಲ್ಲ, ಮಾತ್ರವಲ್ಲ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದರೆ ಕೃತ್ರಿಮ ಬುದ್ಧಿಮತ್ತೆಯು ಕತೆಗಾರನ ಸೂಚನೆಯನ್ನಾಧರಿಸಿ ಕತೆಯೊಂದನ್ನು ಕ್ಷಣಾರ್ಧದಲ್ಲಿ ಬರೆದು ಕೊಡುವಷ್ಟು ಅತ್ಯಾಧುನಿಕತೆಯ ಈ ಸೃಜನೇತರ ಕಾಲಘಟ್ಟದಲ್ಲಿ ಶ್ರೀ ವಿವೇಕ ಹೆಗಡೆಯವರ ಕಥಾ ಸಂಕಲನವು ಮುದ್ರಣಗೊಂಡು ಓದುಗರ ಕೈ ಸೇರುತ್ತಿದೆ.
“ಸಾಹಿತ್ಯದ ಸದಾಕಾಲದ ವಿಷಯ ಮನುಷ್ಯ” ಎಂಬ ಹಿರಿಯ ಪ್ರಸಿದ್ಧ ಕತೆಗಾರ ಯಶವಂತ ಚಿತ್ತಾಲರ ನಂಬುಗೆಯನ್ನು ಶ್ರೀ ವಿವೇಕ ಹೆಗಡೆಯವರು ಸಾಕ್ಷೀಕರಿಸಿದಂತೆ ಈ ಸಂಕಲನದಲ್ಲಿನ ಹದಿನಾರೂ ಕತೆಗಳಲ್ಲಿ ಮನುಷ್ಯನ ಸದ್ಗುಣ, ದುರ್ಗುಣ, ಪ್ರಾಮಾಣಿಕತೆ, ಮೋಸ, ವಂಚನೆ, ಮಾನವೀಯತೆ ಮೊದಲಾದ ಸ್ವಭಾವಗಳನ್ನೇ ಬಳಸಿಕೊಂಡಿದ್ದಾರೆ. ಈ ಎಲ್ಲ ಕತೆಗಳಲ್ಲೂ ಅವರು ‘ಪ್ರಾಮಾಣಿಕತೆಯು ಮನುಷ್ಯನ ಧರ್ಮವಾಗಿರಬೇಕು’ ಎಂಬ ಸಂದೇಶ ವನ್ನು ಸಾರುವ ಪ್ರಯತ್ನ ಮಾಡಿದ್ದಾರೆ. ಆದಾಗ್ಯೂ ಇಂದಿನ ಕಾಲದಲ್ಲಿ ಪ್ರಾಮಾಣಿಕನಾಗಿರುವುದು ಅತ್ಯಂತ ಕಷ್ಟಸಾಧ್ಯವೆಂಬುದನ್ನು ಕತೆಯಲ್ಲಿ ತೋರ್ಪಡಿಸಲಾಗಿದೆ. ಕಥೆಯ ಸ್ವರೂಪವು ಪಂಚಭೌತಿಕಗಳಿಂದ ವ್ಯಕ್ತವಾಗುತ್ತದೆ. ಅವುಗಳನ್ನು ಕಥನಕ್ರಮದ ಜೈವಿಕತೆಯೆಂದೂ ಗ್ರಹಿಸುವುದುಂಟು. ಒಂದು ಕತೆಯನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಈ ಪಂಚಭೌತಿಕಗಳನ್ನು ಪೃಥಕ್ಕರಿಸಿ ನೋಡಲಾಗುತ್ತದೆ. ಇವುಗಳನ್ನು ಮುಖ್ಯವಾಗಿ ಪಾತ್ರಗಳು (Character) ಕಥಾವಸ್ತು (Plot), ನಿರೂಪಣಾ ಶೈಲಿ (Narration), ಸಂದರ್ಭ (Setting) ಮತ್ತು ಮುಖ್ಯ ಕಲ್ಪನೆ (Theme) ಎಂಬುದಾಗಿ ವಿಶದೀಕರಿಸಲಾಗಿದೆ.
ಶ್ರೀ ವಿವೇಕ ಹೆಗಡೆಯವರ ಕತೆಯಲ್ಲಿ ‘ಅಧಿಕಾರಿ ಮತ್ತು ಸಿಬ್ಬಂದಿ, ಅಧಿಕಾರಿ ಮತ್ತು ಜನಸಾಮಾನ್ಯರು, ಯಜಮಾನ ಹಾಗೂ ಕುಟುಂಬದ ಸದಸ್ಯರು’ ಹೀಗೆ ಓದುಗನ ನಿತ್ಯ ವ್ಯವಹಾರದಲ್ಲಿ ಮುಖಾಮುಖಿಯಾಗುವ ಮನುಷ್ಯರೇ ಪಾತ್ರಗಳಾಗಿರುವುದರಿಂದ ಲೇಖಕನ ಮತ್ತು ಓದುಗನ ಅನುಭವಗಳು ಭಾವನಾತ್ಮಕ ಸಂವೇದನೆಗಳಾಗಿ ಮಾರ್ಪಾಡಾಗುತ್ತವೆ. ಅದರಿಂದ ಅವರ ಕತೆಗಳು ಯಶಸ್ಸನ್ನು ಕಾಣುವುದರಲ್ಲಿ ಸಂಶಯವಿಲ್ಲ.
ಶ್ರೀ ವಿವೇಕ ಹೆಗಡೆಯವರು ಆಯ್ದುಕೊಂಡಿರುವ ಕಥಾವಸ್ತು ಕೂಡಾ ಯಾವುದೇ ಪುರಾಣದ, ಅತೀಂದ್ರಿಯದ, ಅತಿಮಾನುಷದ, ಮನೋ ವೈಜ್ಞಾನಿಕತೆಯನ್ನೊಳಗೊಂಡವುಗಳಲ್ಲ, ಬದಲಾಗಿ ಜನಸಾಮಾನ್ಯರು ನಿತ್ಯ ಜೀವನದಲ್ಲಿ ಅನುಭವಿಸುವಂಥವುಗಳೇ ಆಗಿವೆ. ಇದರಿಂದಾಗಿ ಕತೆಗಳು ಬಹುಬೇಗ ಓದುಗನ ಅಥವಾ ಸಹೃದಯನ ಆಪ್ತ ವಲಯಕ್ಕೆ ತೆರೆದುಕೊಂಡು ಬಿಡುತ್ತವೆ. ಅಲ್ಲದೇ ಅವು ಧ್ವನ್ಯಾರ್ಥವನ್ನಾಗಲೀ, ವಿಶೇಷಾರ್ಥವನ್ನಾಗಲೀ, ವಿಪರೀತಾರ್ಥವನ್ನಾಗಲೀ ಪಡೆದುಕೊಳ್ಳದೇ ಸರಳವಾಗಿ ಮನೋಜ್ಞವೆನಿಸುತ್ತವೆ.
ಈ ಕೃತಿಯಲ್ಲಿನ ಕತೆಗಳ ನಿರೂಪಣಾ ಶೈಲಿಯು ಮೃದುವಾಗಿದೆ. ಲೇಖಕನು ಪಾತ್ರಗಳ ಜೊತೆ ಸಂಭಾಷಣೆಯ ರೂಪದಲ್ಲಿ, ಸ್ವಗತದ ಮಾದರಿಯಲ್ಲಿ, ಪರ್ಯಾಯೋಕ್ತಿಯಲ್ಲಿ ವ್ಯವಹರಿಸಿರುವುದರಿಂದ ನಿಗೂಢತೆಯಿಲ್ಲದೇ ಘಟನೆ ಗಳಿಂದ ಘಟನೆಗಳಿಗೆ ಕುತೂಹಲವುಳಿಸಿಕೊಳ್ಳುತ್ತಾ ಸಾಗಿ, ಕೆಲವೊಮ್ಮೆ ಹೀಗೆ ಆಗಬಹುದೆಂಬ ಗ್ರಹಿಕೆಗೆ ಸ್ವಲ್ಪ ತಿರುವು ನೀಡಿ ಕತೆಗಳ ಸ್ವಾರಸ್ಯವನ್ನು ಹೆಚ್ಚಿಸಿ ಕಥನಗಾರಿಕೆಯ ಸಾಫಲ್ಯವನ್ನು ಕಾಣುತ್ತಾನೆ.
ಕತೆಗಳೊಳಗಿನ ಸಂದರ್ಭಗಳೆಲ್ಲವೂ ಅನುಭವದ ನೆಲೆಯಲ್ಲಿ ಮಡು ಗಟ್ಟಿದವುಗಳೇ ಆಗಿವೆ. ಅವುಗಳು ಲೇಖಕನ ನಿರೂಪಣೆಯ ಕೌಶಲ್ಯದಲ್ಲಿ ಓದುಗನ ಭಾವಕೋಶದ ಭಾಗವಾಗಿ ತನ್ನ ಅನುಭವವೇ ಕತೆಯಾಗಿದೆ ಎಂದೆನಿಸಿ ಬಿಡುತ್ತವೆ. ಆದ್ದರಿಂದ ಅವು ಕತೆಯ ಯಶೋಮಾಲಿಕೆಗೆ ಸೇರಿಬಿಡುತ್ತವೆ.
ಕತೆಯು ಆರಂಭಗೊಂಡು ವಿವಿಧ ಸಂದರ್ಭ, ಸನ್ನಿವೇಶಗಳಲ್ಲಿ ಅನಿವಾರ್ಯ ತಿರುವು ಪಡೆದು ಮುಕ್ತಾಯಗೊಳ್ಳುವ ಹೊತ್ತಿಗೆ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲಾಗುವುದಿಲ್ಲ, ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ, ಶುದ್ಧಹಸ್ತದ ಅಧಿಕಾರಿ-ಸಿಬ್ಬಂದಿಗಳಿಗೆ ಇಂದಿನ ವ್ಯವಸ್ಥೆಯಲ್ಲಿ ಉದ್ಯೋಗದಲ್ಲಿರುವುದು ಕಷ್ಟಸಾಧ್ಯ. ಆದಾಗ್ಯೂ ತನ್ನ ಪ್ರಾಮಾಣಿಕತೆ ಬಿಡದೇ ಮುಂದುವರಿದರೆ ಏನಾಗುತ್ತದೆ? ಭ್ರಷ್ಟನಾದರೆ ಏನಾಗುತ್ತದೆ? ಎಂಬುದಕ್ಕೆ ಲೇಖಕರು ಕತೆಗಳ ಮೂಲಕವೇ ಉತ್ತರವನ್ನೂ, ಸಮಾಧಾನವನ್ನೂ ಕಂಡುಕೊಳ್ಳುತ್ತಾರೆ. ಶ್ರೀ ವಿವೇಕ ಹೆಗಡೆಯವರು ಎಲ್ಲಿಯೂ ಕತೆಗಾರನ (ತಮ್ಮ) ಅಭಿಪ್ರಾಯವನ್ನು ಓದುಗನ ಮೇಲೆ ಹೇರುವುದನ್ನಾಗಲೀ, ನೀತಿ ಬೋಧಕರಂತೆ ತೋರಿಸಿಕೊಳ್ಳುವುದಾಗಲೀ, ಕತೆಯ ಸಹಜ ಓಘಕ್ಕೆ ತಮ್ಮ ನಿಲುವನ್ನು ಲೇಪಿಸುವುದನ್ನಾಗಲೀ ಮಾಡಲಿಲ್ಲ; ಆದರೆ ಸ್ವಗತದಲ್ಲಿ ವ್ಯವಸ್ಥೆಯೊಳಗಿನ ದುಷ್ಟತನಕ್ಕೆ ತಮ್ಮ ಪ್ರತಿಭಟನೆಯ ಧೋರಣೆಯನ್ನು ತೋರ್ಪಡಿಸಿದ್ದಿದೆ. ಮಾತ್ರವಲ್ಲ ಅದು ಅನೌಚಿತ್ಯವೆನಿಸದೇ ಜನಸಾಮಾನ್ಯನ ಮನೋಧರ್ಮವಾಗಿ ಪರಿವರ್ತನೆಗೊಂಡು ಕತೆಗಳ ಯಶೋ ಮಾರ್ಗಕ್ಕೆ ಸಹಕಾರಿಯಾಗುತ್ತದೆ. ಹೀಗಾಗಿ ಸಾಹಿತ್ಯದ ಅಂತಿಮ ಸುಖವೆಂದರೆ ಸಹೃದಯನು ಹೇಳಿಕೊಳ್ಳಲಾಗದ, ಹೇಳದೇ ಉಳಿಯಲಾಗದ ಸಂದಿಗ್ಧತೆಗೆ ಪರಿಹಾರವಾಗುವುದಾಗಿದೆ. ಅಂತಹ ಸುಖದ ಮಾರ್ಗದರ್ಶಿಯಾಗಿ ಇಲ್ಲಿನ ಕತೆಗಳಿವೆ.
ನಾನು ಬೇಕೆಂತಲೇ ಇಲ್ಲಿ ಶ್ರೀ ವಿವೇಕ ಹೆಗಡೆಯವರ ಯಾವೊಂದೂ, ಮುಖ್ಯತಃ ಶೀರ್ಷಿಕೆಯ ಕತೆಯನ್ನೂ ಉದಾಹರಣೆಯಾಗಿ ಎತ್ತಿಕೊಂಡು ವಿಶ್ಲೇಷಿಸಿಲ್ಲ, ಕಾರಣ ಅವರ ಕತೆಗಳಲ್ಲಿ ಸಂದಿಗ್ಧತೆಗಳಿಲ್ಲ, ಗೋಜಲುಗಳಿಲ್ಲ, ಅನ್ಯರ್ಥಗಳನ್ನು ದರ್ಶಿಸುವುದಿಲ್ಲ. ಅವುಗಳು ಸಹೃದಯರಿಗೆ ನಿರಾಯಾಸದ ಓದಿನಿಂದ ಆನಂದದಾಯಕವೆನಿಸುತ್ತವೆ. ನಾನು ಯಾವುದೇ ಕತೆಯನ್ನು ಉದಾಹೃತಗೊಳಿಸಿದರೂ ಅದರ ಮೇಲಿನ ಕುತೂಹಲ ಅಳಿದು ಹೋಗಿಬಿಡುತ್ತದೆ ಎನ್ನುವ ವಿವೇಕದಿಂದ ಸಹೃದಯರಿಗೆ ಓದಿನ ರುಚಿಯನ್ನುಳಿಸುವ ಪ್ರಯತ್ನ ಮಾಡಿದ್ದೇನೆ.
ಶ್ರೀ ವಿವೇಕ ಹೆಗಡೆಯವರಿಗೆ ಕತೆ ಹೇಳುವ ಕಲೆ ಗೊತ್ತಿದೆ. ಇಲ್ಲಿನ ಬಹುತೇಕ ಕತೆಗಳು ಅವರ ಅನುಭವದ ಪರಿಣಾಮಗಳಂತಿವೆ. ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕ ಅಧಿಕಾರಿಯಾಗಿ, ಕೆಲಸಗಳ್ಳ ಸಿಬ್ಬಂದಿಗಳಿಗೆ ಸ್ಟ್ರಿಕ್ಟ್ ಆಫೀಸರ್ ಆಗಿ, ಸಾರ್ವಜನಿಕರಿಗೆ ಅತ್ಯುತ್ತಮ ಅಧಿಕಾರಿಯೆಂದೂ, ಭ್ರಷ್ಟ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಕೊಳ್ಳುವವರಲ್ಲವೆಂದೂ ಹೆಸರು ಗಳಿಸಿದವರಾಗಿದ್ದಾರೆ. ತಮ್ಮ ಅನುಭವವನ್ನು ಕಥನಗಾರಿಕೆಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಸಂಕಲನದಲ್ಲಿನ ಬಹುತೇಕ ಕತೆಗಳು ಅವರ ಆತ್ಮಕತೆಯ ಭಾಗದಂತಿವೆ. ಆದ್ದರಿಂದ ‘ತನ್ನದಲ್ಲದ ತಪ್ಪಿಗೆ’ ಕೃತಿಯ ಮೂಲಕ ಶ್ರೀ ವಿವೇಕ ಹೆಗಡೆಯವರು ಅನುಭವಿ ಕತೆಗಾರರಂತೆಯೇ ಓದುಗರಿಗೆ ಪ್ರಿಯರಾಗುವುದರಲ್ಲಿ ಸಂಶಯವಿಲ್ಲ, ಅವರಿಗೆ ಅಭಿನಂದನೆಗಳು.
ಅಶೋಕ ಹಾಸ್ಯಗಾರ ನಾಭಿಪುರಂ, (ಹಿರಿಯ ವಿಶ್ರಾಂತ ಪತ್ರಿಕಾ ಸಂಪಾದಕರು)
ಕಥಾಸೂಚಿ
ಸವಿನುಡಿ / iii
ಮುನ್ನುಡಿಯೆಂಬ ಮುಕುರ / v
ಕಥೆಯ ಶುರುವಿಗೆ ಮುನ್ನ… / ix
1. ಕನ್ನಡಿಯೊಳಗಿನ ಗಂಟು / 1
2. ಅಣ್ಣ / 10
3. ಪ್ರಾಮಾಣಿಕತೆಗೆ ಸಂದ ಬೆಲೆ / 23
4. ಆತಂಕ / 40
5. ಅದೇ ಕೊಡಲಿ / 44
6. ತನ್ನದಲ್ಲದ ತಪ್ಪಿಗೆ / 56
7. ವಿಧಿಯಾಟ / 65
8. ಭ್ರಷ್ಟ ವ್ಯವಸ್ಥೆ ಬದಲಾಗುವುದಿಲ್ಲ / 86
9. ಹೃದಯಹೀನ / 98
1ಂ. ಆಘಾತ / 1ಂ4
11. ಯಾರದೋ ದುಡ್ಡು… / 124
12. ಗುರಪ್ಪನ ಸಾಲಕಾಂಡ / 132
13. ಮರೆತ ಮನುಷ್ಯತ್ವ / 142
14. ವಂಚನೆ / 145
15. ರಸ್ತೆ ಭಾಗ್ಯ / 154
16. ಸಂಸ್ಕಾರ / 167
Our Books

Reviews
There are no reviews yet.